ಎಚ್.ಎಲ್. ನಾಗೇಗೌಡ

ಎಚ್.ಎಲ್. ನಾಗೇಗೌಡ (ಫೆಬ್ರವರಿ ೧೧,೧೯೧೫- ಸೆಪ್ಟೆಂಬರ್೨೨,೨೦೦೫) ಕರ್ನಾಟಕದ ಮಂಡ್ಯ ಜಿಲ್ಲೆಯ ಹೆರಗನಹಳ್ಲಿಯಲ್ಲಿ ಜನಿಸಿದರು.ಇವರು ೧೯೬೦ ರಲ್ಲಿ ಭಾರತೀಯ ಆಡಳಿತಾತ್ಮಕ ಸೇವಾ(ಐ.ಎ.ಎಸ್) ಅಧಿಕಾರಿಯಾದರು. ಇವರು ಕನ್ನಡದಲ್ಲಿ ಸಾಹಿತ್ಯ ಕೃತಿಗಳು ಬರೆದಿದ್ದಾರೆ ಹಾಗು ಇವರು ಇತರ ಕಾದಂಬರಿಗಳು, ಕವನ, ಸಣ್ಣ ಕಥೆಗಳು, ಪ್ರಬಂಧಗಳು ಮತ್ತು ಪ್ರವಾಸಕಥನಗಳು ಬರೆದಿದ್ದಾರೆ. ೧೯೭೯ರಲ್ಲಿ ,ನಾಗೇಗೌಡರು ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕಲೆಗಳ ಅಧ್ಯಯನ ಮತ್ತು ಪ್ರಸರಣ ಮೀಸಲಾದ ಕರ್ನಾಟಕ ಜಾನಪದ ಪರಿಷತ್ತನ್ನು ಸ್ತಾಪಿಸಿದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ , ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿಗಳು ದೊರಕಿವೆ.

ಹುಟ್ಟಿದ್ದು , ವಿದ್ಯಾಭ್ಯಾಸಸಂಪಾದಿಸಿ

ಜಾನಪದ ತಜ್ಞ, ಸಾಹಿತಿ, ಆಡಳಿತಗಾರರೆನಿಸಿದ್ದ ನಾಗೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯ ‘ದೊಡ್ಡಮನೆ’ ಕುಟುಂಬದಲ್ಲಿ ೧೯೧೫ರ ಫೆಬ್ರವರಿ ೧೧ರಂದು. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಳೀಸಂದ್ರ ಹಾಗೂ ನಾಗತಿಹಳ್ಳಿಯಲ್ಲಿ. ಮಾಧ್ಯಮಿಕ ಮತ್ತು ಪ್ರೌಢಶಾಲೆ ಚನ್ನರಾಯಪಟ್ಟಣದಲ್ಲಿ. ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್‌, ಮೈಸೂರಿನಲ್ಲಿ ಬಿ.ಎಸ್ಸಿ, ಮತ್ತು ಪೂನದಲ್ಲಿ ಪಡೆದ ಎಲ್‌.ಎಲ್‌.ಬಿ ಪದವಿಗಳು. ಮುನ್ಸೀಫ್‌ ಕೋರ್ಟಿನಲ್ಲಿ ಹೆಡ್‌ಮುನ್ಷಿಯಾಗಿ ವೃತ್ತಿ ಆರಂಭಿಸಿದ್ದು ನರಸಿಂಹರಾಜ ಪುರದಲ್ಲಿ. ಮೈಸೂರು ಸಿವಿಲ್‌ ಸರ್ವೀಸ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆ. ರಾಜ್ಯದ ನಾನಾ ಕಡೆ ವಹಿಸಿಕೊಂಡ ಜವಾಬ್ದಾರಿಗಳು. ೧೯೬೦ರಲ್ಲಿ ಐ.ಎ.ಎಸ್‌. ಅಧಿಕಾರಿಯಾಗಿ ಆಯ್ಕೆಯಾಗಿ ಶಿವಮೊಗ್ಗ, ಚಿಕ್ಕಮಗಳೂರು, ಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ೧೯೬೯ರಲ್ಲಿ ಆಯುಕ್ತರಾಗಿ ನೇಮಕಗೊಂಡರು. ೧೯೭೩ರಲ್ಲಿ ರಾಜ್ಯದ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡು ೧೯೭೯ ನಿವೃತ್ತಿ.

ಜಾನಪದಸಂಪಾದಿಸಿ

ಅಧಿಕಾರಿಯಾಗಿ ಬೇರೆ ಬೇರೆ ಸ್ಥಳಗಳಲ್ಲಿ ಉದ್ಯೋಗದಲ್ಲಿ ನಿರತರಾಗಿದ್ದರೂ ತಮ್ಮ ತುಡಿತವೆಲ್ಲ ಇದ್ದುದು ಗ್ರಾಮೀಣ ಬದುಕಿನ ವಸ್ತುಗಳ ಸಂಗ್ರಹ ಹಾಗೂ ಜಾನಪದ ಕಲೆಯ ಬಗ್ಗೆ ಇದ್ದ ಆಳವಾದ ಪ್ರೀತಿ, ಕಾಪಾಡುವ ಕಾಳಜಿ. ಹೋದೆಡೆಯಲ್ಲೆಲ್ಲಾ ತಾವು ಸಂಗ್ರಹಿಸಿದ ವಸ್ತುಗಳ ಪ್ರದರ್ಶನಕ್ಕೊಂದು ಸ್ಥಳ ಕಲ್ಪಿಸಿಕೊಂಡು ಮಾರ್ಚ್ ೨೧ರಂದು ೧೯೭೯ರಲ್ಲಿ ಸ್ಥಾಪಿಸಿದ್ದು ‘ಕರ್ನಾಟಕ ಜಾನಪದ ಟ್ರಸ್ಟ್‌’. ಇವರು ನಿವೃತ್ತರಾದಾಗ ಬೆಂಗಳೂರಿನಲ್ಲಿ ಇವರ ಅಭಿಮಾನಿಗಳು ಅಭಿನಂದನ ಸಮಾರಂಭವನ್ನೇರ್ಪಡಿಸಿ ಅರ್ಪಿಸಿದ ಒಂದು ಲಕ್ಷದ ಹದಿನೈದು ಸಾವಿರ ರೂಪಾಯಿಗಳನ್ನು ಮೂಲಧನವನ್ನಾಗಿಸಿಕೊಂಡು ರಾಮನಗರದ ಬಳಿ ೧೫ ಎಕರೆ ಪ್ರದೇಶದಲ್ಲಿ ಸ್ಥಾಪಿಸಿದ್ದೇ ‘ಜಾನಪದ ಟ್ರಸ್ಟ್‌’. ಈಗ ಅದು ಕರ್ನಾಟಕ ಜಾನಪದ ಪರಿಷತ್‌ ಎನಿಸಿ ಇದೊಂದು ಜಾನಪದ ಲೋಕವೆನಿಸಿದೆ. ಜನಪದ ಗೀತೆಗಳ ಧ್ವನಿಮುದ್ರಣ, ವರ್ಣಪಾರದರ್ಶಿಕೆಗಳ ತಯಾರಿಕೆ, ಮೂಲಗಾಯಕರ ಧ್ವನಿ ಶೇಖರಣೆ, ಜಾನಪದ ಮಹಾವಿದ್ಯಾಲಯ ಸ್ಥಾಪಿಸಿ, ಡಿಪ್ಲೊಮ, ಸರ್ಟಿಫಿಕೇಟ್‌ ಕೋರ್ಸ್‌‌ಗಳು, ಯಕ್ಷಗಾನ ತರಬೇತಿ, ವಸ್ತು ಸಂಗ್ರಹಣೆ, ಸಾಕ್ಷ್ಯಚಿತ್ರ ನಿರ್ಮಾಣ ಮುಂತಾದ ಜಾನಪದ ಸಂಬಂಧಿ ಕಾರ್ಯಕ್ರಮಗಳಿಗೊಂದು ಕೇಂದ್ರಸ್ಥಾನ ಜಾನಪದಲೋಕ. ಅವರಿಗಿದ್ದ ಒಲವು ಬರೇ ಜಾನಪದ ಲೋಕವೊಂದೇ ಅಲ್ಲದೆ ಪ್ರವಾಸ ಸಾಹಿತ್ಯ, ಕಥೆ, ಕಾದಂಬರಿ, ಜೀವನ ಚರಿತ್ರೆ ಮುಂತಾದ ವಿವಿಧ ಕ್ಷೇತ್ರಗಳು. ಕ್ರಿ.ಪೂ. ಐದನೆಯ ಶತಮಾನದಿಂದ ಹದಿನೆಂಟನೆಯ ಶತಮಾನದವರೆವಿಗೂ ಮತ ಪ್ರಚಾರ, ವ್ಯಾಪಾರ ವಾಣಿಜ್ಯೋದ್ಯಮ ಅಥವಾ ಪ್ರವಾಸಾನಂದಕ್ಕಾಗಿ ಭಾರತಕ್ಕೆ ಭೇಟಿನೀಡಿದ ಪ್ರವಾಸಿಗಳ ಬಗ್ಗೆ ಮಾಹಿತಿ ಶೇಖರಿಸಿ ಇವರು ಬರೆದ ‘ಪ್ರವಾಸಿ ಕಂಡ ಇಂಡಿಯಾ’ ಎಂಟು ಸಂಪುಟಗಳಲ್ಲಿ ಪ್ರಕಟಗೊಂಡಿದ್ದು ನಾಗೇಗೌಡರಿಗೆ ಕೀರ್ತಿ-ಪ್ರಶಸ್ತಿ ತಂದುಕೊಟ್ಟ ಕೃತಿಗಳು. ಇದಲ್ಲದೆ ‘ಮಾರ್ಕೊಪೋಲೋ ಪ್ರವಾಸ ಕಥನ’, ‘ನಾ ಕಂಡ ಪ್ರಪಂಚ’, ಮುಂತಾದ ಪ್ರವಾಸ ಕಥನಗಳೂ ಪ್ರಕಟಗೊಂಡಿವೆ.

ಕೃತಿಗಳುಸಂಪಾದಿಸಿ

ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿಕೊಟ್ಟ ಕೃತಿ ಎಂದರೆ ‘ದೊಡ್ಡಮನೆ’ ಕಾದಂಬರಿ. ಇವರ ಮತ್ತೆರಡು ಕಾದಂಬರಿಗಳು ‘ಸೊನ್ನೆಯಿಂದ ಸೊನ್ನೆಗೆ’ ಮತ್ತು ‘ಭೂಮಿಗೆ ಬಂದ ಗಂಧರ್ವ’. ಅವರ ಹಳ್ಳಿಯ ಚಿತ್ರಗಳ ಕೃತಿ ‘ನನ್ನೂರು’, ‘ಬೆಟ್ಟದಿಂದ ಬಟ್ಟಲಿಗೆ’ – ಕಾಫಿಯ ಕಥೆ, ವಿಶಿಷ್ಟ ಕೃತಿ ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ‘ಸೋಬಾನೆ ಚಿಕ್ಕಮ್ಮನ ಪದಗಳು’, ‘ಕರ್ನಾಟಕದ ಜಾನಪದ ಕಥೆಗಳು’, ‘ಪದವವೆ ನಮ್ಮ ಎದೆಯಲ್ಲಿ’, ‘ಮೈಲಾರ ಲಿಂಗನ ಕಾವ್ಯ’, ‘ಹೆಳವರು ಮತ್ತು ಅವರ ಕಾವ್ಯಗಳು’, ‘ಹಾಡಾನಬನ್ನಿ ದನಿಎತ್ತಿ’, ಕನ್ನಡ ಜಾನಪದಕೋಶ ಮುಂತಾದ ೧೫ ಕೃತಿಗಳು ಪ್ರಕಟಿತ. ಇವಲ್ಲದೆ ಸರೋಜಿನಿ ದೇವಿ ಮತ್ತು ಮಲೆನಾಡ ವಾಲ್ಮೀಕಿ (ಕುವೆಂಪು) ಅವರ ಜೀವನ ಚರಿತ್ರೆಯಲ್ಲದೆ ತಮ್ಮದೇ ಆತ್ಮಕಥೆ ‘ಜೀವನಯಾತ್ರೆ’, ‘ವಿದೇಶಯಾತ್ರೆ’, ‘ಚುನಾವಣಾಯಾತ್ರೆ’, ‘ಜಾನಪದಯಾತ್ರೆ’ ಎಂಬ ನಾಲ್ಕು ಭಾಗಗಳಲ್ಲಿ ಬರೆದ ಕೃತಿಗಳೂ ಸೇರಿ ಒಟ್ಟು ಮೂವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟತಿ. ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥ ‘ನಾಗವಲ್ಲಿ’ (೧೯೭೯).

ಪ್ರಶಸ್ತಿ ಗೌರವಗಳುಸಂಪಾದಿಸಿ

ಸಂದ ಪ್ರಶಸ್ತಿ ಗೌರವಗಳು ಹಲವಾರು. ಜಾನಪದ ಕ್ಷೇತ್ರದಲ್ಲಿ ಇವರಿಗಿದ್ದ ಆಳವಾದ ಅನುಭವಕ್ಕೆ ಸಿಕ್ಕ ಗೌರವ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯು ಪ್ರಾರಂಭವಾದಾಗ ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡದ್ದು (೧೯೮೦-೮೩) ಮತ್ತು ೧೯೯೫ರಲ್ಲಿ ಮುಧೋಳದಲ್ಲಿ ನಡೆದ ೬೪ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ. ‘ನನ್ನೂರು’ (೧೯೬೫), ವೆರಿಯರ್ ಎಲ್ವಿನ್‌ರ ‘ಗಿರಿಜನ ಪ್ರಪಂಚ’ (೧೯೬೬), ‘ಸೋಬಾನೆ ಚಿಕ್ಕಮ್ಮನ ಪದಗಳು’ (೧೯೭೨), ‘ಪದವವೆನಮ್ಮ ಎದೆಯಲ್ಲಿ’ (೧೯೭೬), ‘ನಾ ಕಂಡ ಪ್ರಪಂಚ’ (ಪ್ರವಾಸ-೧೯೮೬), ‘ಭೂಮಿಗೆ ಬಂದ ಗಂಧರ್ವ’ (ಕಾದಂಬರಿ), ‘ಬೆಟ್ಟದಿಂದ ಬಟ್ಟಲಿಗೆ’ (ಕಾಫಿಯಕಥೆ) ಈ ಏಳು ಕೃತಿಗಳಿಗೂ ಸಾಹಿತ್ಯ ಅಕಾಡಮಿ ಬಹುಮಾನ ದೊರೆಯುವುದರ ಜೊತೆಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ (೧೯೭೫), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೮), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ (೧೯೯೦), ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್‌ (೧೯೯೨), ನಾಡೋಜ ಪ್ರಶಸ್ತಿ (೨೦೦೨), ಪಂಪ ಪ್ರಶಸ್ತಿ (೨೦೦೪) ಮುಂತಾದ ಪ್ರಮುಖ ಪ್ರಶಸ್ತಿಗಳು. ಜಾನಪದದ ಬಗ್ಗೆ ದೂರದರ್ಶನದಲ್ಲಿ ಪ್ರಸಾರವಾದ ‘ಸಿರಿಗಂಧ’ ಧಾರಾವಾಹಿಯ ರೂವಾರಿಗಳು. [೧]

ಮರೆಯಾದದ್ದುಸಂಪಾದಿಸಿ

ಬಹುದಿನದ ಬಯಕೆಯಾಗಿದ್ದ ಜಾನಪದ ಅಕಾಡಮಿಯ ಸ್ಥಾಪನೆಗೆ ಹಗಲಿರುಳೂ ದುಡಿದು ಕರ್ನಾಟಕದ ಪರಂಪರೆಯಲ್ಲಿ ಜಾನಪದಕ್ಕೊಂದು ವಿಶಿಷ್ಟ ಸ್ಥಾನ ಗಳಿಸಿಕೊಟ್ಟ ನಾಗೇಗೌಡರು ಜಾನಪದಲೋಕದೊಂದ ಮರೆಯಾದದ್ದು ೨೦೦೫ ರ ಸೆಪ್ಟೆಂಬರ್ ೨೨ ರಂದು

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗೇಗೌಡ, ಹೆಚ್ ಎಲ್