ಮಲ್ಲಿಕಾರ್ಜುನ ನಿಂಗಪ್ಪ ವಾಲಿಯವರು ಸಾಹಿತ್ಯ ಕ್ಷೇತ್ರದಲ್ಲಿ ಎಂ.ಎನ್.ವಾಲಿ ಎಂದೇ ಪ್ರಸಿದ್ಧಿ ಪಡೆದವರು

ಮಲ್ಲಿಕಾರ್ಜುನ ನಿಂಗಪ್ಪ ವಾಲಿಯವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿಯಲ್ಲಿ ೧೦.೦೬.೧೯೩೫ ರಲ್ಲಿ ಜನಿಸಿದರು. ತಂದೆ ನಿಂಗಪ್ಪ ವಾಲಿ, ತಾಯಿ ಸಂಗನ ಬಸವ್ವ.

ವಿದ್ಯಾಭ್ಯಾಸ, ವೃತ್ತಿ

ಬದಲಾಯಿಸಿ

ಸಾಲೋಟಗಿ ಹಾಗೂ ಇಂಡಿಯಲ್ಲಿ ಪ್ರೌಢಶಾಲೆಯ ವರೆಗೆ ವಿದ್ಯಾಭ್ಯಾಸ. ಜಮಖಂಡಿಯ ಕಲಾ ಹಾಗೂ ವಿಜ್ಞಾನ ಕಾಲೇಜಿನಿಂದ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಶಾಸನದಲ್ಲಿ ಡಿಪ್ಲೊಮ ಹಾಗೂ ಎಂ.ಎ ಪದವಿ,‘ಸಿಂಪಿ ಲಿಂಗಣ್ಣನವರ ಜೀವನ ಹಾಗೂ ಸಾಹಿತ್ಯ, ಮಹಾಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ ಪದವಿ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದ ವಾಲಿಯವರು ಕಾಗವಾಡದ ಶಿವಾನಂದ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಹಾರೂಗೇರಿ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ‍್ಯನಿರ್ವಹಿಸಿ ನಿವೃತ್ತಿ.

ಸಾಹಿತ್ಯ

ಬದಲಾಯಿಸಿ

‘ಸಾಹಿತ್ಯ ಕ್ಷೇತ್ರದಲ್ಲಿ ಎಂ. ಎನ್. ವಾಲಿ ಎಂದೇ ಪ್ರಸಿದ್ಧಿ ಪಡೆದವರು. ಜನಪದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಜನಪದ ಸಾಹಿತ್ಯದಲ್ಲಿ ನೀತಿ (೧೯೭೮) ಜನಪದ ಜೀವನ ತರಂಗಗಳು (೧೯೮೨ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು) ಜನಪದ ಗೀತೆಗೆ ಸಂಬಂಧಿಸಿದೆ. ಇದು ವಿಜಾಪುರ ಬೆಳಗಾಂವಿ ಜಿಲ್ಲೆಗಳಲ್ಲಿ ಕಲೆ ಹಾಕಿದ ಹಾಡಾಗಿದೆ. ಜನಪದ ಜೀವನದಲ್ಲಿ ಕಂಡು ಬರುವ ಬಂಧು ಬಳಗಗಳ ಸಂಬಂಧ, ಕಾಯಕ ಪಶು ಸಂಪತ್ತು, ಅನುರಾಗ, ಸಂವಾದ, ಚಾತುರ್ಯ ಅನುಭವ, ಹಾಸ್ಯ, ನೀತಿ, ಪುರಾಣ, ಇತಿಹಾಸ ಇತ್ಯಾದಿಗಳ ವಿಚಾರ ಈ ಗೀತೆಗಳಲ್ಲಿದೆ. ಸಿರಿಗನ್ನಡ ಒಡಪು (೧೯೮೫) ಜಾನಪದ ಒಗಟುಗಳು (೧೯೮೯) ಹಬ್ಬಗಳ ಜನಪದ ಹಾಡುಗಳು (೧೯೮೬ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಹಬ್ಬಗಳಿಗೆ ಸಂಬಂಧಿಸಿದ ಜಾನಪದ ಹಾಡುಗಳನ್ನು ಒಳಗೊಂಡಿದೆ.

ಜನಪದ ಸಾಹಿತ್ಯದ ನೀತಿ (೧೯೭೮ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಉಪನ್ಯಾಸ ಮಾಲೆಯಲ್ಲಿ ಪ್ರಕಟವಾದ ಜನಪದ ಸಾಹಿತ್ಯದಲ್ಲಿ ನೀತಿಯ ಅಂಶಗಳನ್ನು ಒಳಗೊಂಡ ಕೃತಿ. ಲಾವಣಿ ಸಂಗ್ರಹ ಶರಣ ಸ್ಮೃತಿ (೧೯೮೮) ಜಾನಪದ ಜೀವಾಳ (೧೯೯೩) ‘ದುಂಡು ಮಲ್ಲಿಗೆ ಹೂವ ಬುಟ್ಟಿಲಿ ಬಂದಾವ (೧೯೯೫)’ ಸಿಂಪಿ ಲಿಂಗಣ್ಣನವರ ಜೀವನ ಹಾಗೂ ಸಾಹಿತ್ಯ ಕುರಿತು ಮಹಾಪ್ರಬಂಧ ಬರೆದಿದ್ದಾರೆ. (೧೯೯೦ ಭುವನೇಶ್ವರಿ ಪ್ರಕಾಶನ ವಿಜಾಪುರ)

ಡಾ. ಸಿಂಪಿ ಲಿಂಗಣ್ಣ ಜೀವನ ಸಾಧನೆ (೧೯೯೪ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು) ಸಿಂಪಿ ಲಿಂಗಣ್ಣ ಅವರ ಜನನ, ಬಾಲ್ಯ, ಅವರ ಬದುಕು, ಸಾಧನೆ ಸಿದ್ಧಿಯನ್ನು ಕುರಿತು ಪುಸ್ತಿಕೆ ‘ದುಂಡು ಮಲ್ಲಿಗೆ ಹೂವ ಬುಟ್ಟಿಲಿ ಬಂದಾವ’ (ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ೧೯೯೫) ‘ನಮ್ಮ ಒಕ್ಕಲಿಗರ ನಂಬಿಕೆಗಳು’ (ಕ. ವಿ. ವಿ. ಉಪನ್ಯಾಸ ಗ್ರಂಥ ೧೯೯೬) ತಮ್ಮ ಸ್ವಂತ ಭುವನೇಶ್ವರಿ ಪ್ರಕಾಶನದಿಂದ ಇಲ್ಲಿಯವರೆಗೆ ೧೫ ಕೃತಿಗಳನ್ನು ಪ್ರಕಟಿಸಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಬಂಧಗಳು ಪ್ರಕಟಗೊಂಡಿವೆ. ವಿವಿಧ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ವಿದ್ವತ್ ಪೂರ್ಣವಾದ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಶಿಕ್ಷಕರಾಗಿದ್ದಾಗಿನಿಂದಲೂ ಹಲವಾರು ಸಾಹಿತ್ಯ, ಸಾಂಸ್ಕ್ರತಿಕ ಕಾರ‍್ಯಕ್ರಮಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭಾಷಣ ಹಾಗೂ ಪ್ರಬಂಧಗಳನ್ನು ಮಂಡಿಸಿದ್ದಲ್ಲದೆ ಹಲವಾರು ಜಾನಪದ ಕೃತಿಗಳು, ವ್ಯಕ್ತಿ ಚಿತ್ರಗಳು, ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಜನಪದ ಸಾಹಿತ್ಯ ಕೃತಿಗಳಾದ ‘ಜನಪದ ಸಾಹಿತ್ಯದಲ್ಲಿ ನೀತಿ’, ‘ಜನಪದ ಜೀವನ ತರಂಗಗಳು’, ‘ಜನಪದ ಹಬ್ಬದ ಹಾಡುಗಳು’, ‘ಜಾನಪದ ಒಗಟುಗಳು’, ‘ಸಾವಿರದ ಜನಪದ ಗೀತೆಗಳು’, ‘ವಿಜಾಪುರ ಜಿಲ್ಲೆಯ ಜನಪದ ಕಲೆಗಳು’, ಮತ್ತು ’ಜನಪದ ಕಲಾವಿದರು’ ‘ಕನ್ನಡ ಜಾನಪದ ಕಥಾಗುಚ್ಛ’, ‘ದುಂಡುಮಲ್ಲಿಗೆ ಹೂವ ಬುಟ್ಟಿಲಿ’ ಮುಂತಾದವುಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಕವನ ಸಂಕಲನಗಳಾದ ಶುಭೋದಯ, ಹೊಂಬಿಸಿಲು, ಶಿವಶರಣರು ಮತ್ತು ಇತರ ವ್ಯಕ್ತಿ ಚಿತ್ರ ಕೃತಿಗಳಾದ ಶ್ರೀ ಮರಿ ಮಹಾರಾಜರು, ಶರಣ ಅಜಗಣ್ಣ, ನಾಟ್ಯಾನಂದ ನೀಳು ಮಾಸ್ತರರು, ಡಾ.ಸಿಂಪಿ ಲಿಂಗಣ್ಣ, ಕರ್ಮಯೋಗಿ ಆರ್. ಎಸ. ನಾವದಗಿ, ವಾಲಿ ಬಸಪ್ಪ ಮಾಸ್ತರು, ಹುಟ್ಟು ಹೋರಾಟಗಾರರು, ತೆಲಸಂಗದ ಶ್ರೀ ಬಸವಲಿಂಗ ಸ್ವಾಮಿಗಳು, ಶರಣೆ ಶಾಂತಕ್ಕ, ಕನ್ನಡದ ಕಣ್ಮಣಿ ಗಂಗಾಧರ ಕೋರಳ್ಳಿ ಮುಂತಾದವುಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ನಾಟಕ ಮತ್ತು ರೇಡಿಯೋ ನಾಟಕಗಳಾದ ನನ್ನ ಭೂಮಿ, ಚಂದ್ರಹಾಸ ಮತ್ತು ಇತರ ನಾಟಕಗಳು, ಷೇಕ್ಸಪಿಯರನ ಮೂರು ಕೃತಿಗಳು ಮುಂತಾದ ನಾಟಕಗಳು; ‘ಚಿಂತನ ಪ್ರಭೆ’, – ರೇಡಿಯೋ ಚಿಂತನೆಗಳು, ಸಾರಂಗ ಮಠದ ಹಂಪಯ್ಯನವರ ಅಭಿನಂದನ ಗ್ರಂಥ ‘ಸಂತೃಪ್ತಿ’, ಎಂ.ಎ. ಹುಂಡೇಕಾರ ಅಭಿನಂದನ ಗ್ರಂಥ ‘ಮಹಾಂತ’, ಜಿ.ಎಂ.ವಾರದ ಅಭಿನಂದನ ಗ್ರಂಥ ‘ಹಿತಚಿಂತಕ’ ಮುಂತಾದ ಅಭಿನಂದನ ಗ್ರಂಥಗಳನ್ನು ಸಂಪಾದಿಸಿದ್ದಾರೆ.

೧೯೮೦ ರಲ್ಲಿ ಭುವನೇಶ್ವರಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿದ್ದು ಹೆಸರಾಂತ ಬರಹಗಾರರ ಗ್ರಂಥಗಳಲ್ಲದೆ ಉದಯೋನ್ಮುಖ ಲೇಖಕರ ಹಲವಾರು ಗ್ರಂಥಗಳನ್ನು ಪ್ರಕಟಿಸಿ ಉತ್ತೇಜನ ನೀಡಿದ್ದಾರೆ. ಇವರ ಪುಸ್ತಕ ಪ್ರಕಟಣೆಯ ಹಲವಾರು ಕೃತಿಗಳು ೨ – ೩ ಮುದ್ರಣಗಳನ್ನು ಕಂಡಿರುವುದು ವಿಶೇಷ. ಕಾವ್ಯ, ಪ್ರವಾಸ ಕಥನ, ಅಧ್ಯಾತ್ಮ, ವೈದ್ಯಕೀಯ ಮುಂತಾದ ಹಲವಾರು ಪ್ರಕಾರಗಳ ಕೃತಿಗಳಾದ ದೇಹವೆಂಬ ವಿಶ್ವ, ವೈದ್ಯ ತಜ್ಞನ ಹೃದಯ ಬಿಚ್ಚಿದಾಗ, ಕಾವ್ಯ ಸೌರಭ, ಹಣತೆಗಳು, ಅಧ್ಯಾತ್ಮ ಸಾರ, ಇಂಗ್ಲೆಂಡ್ ಪ್ರವಾಸ ಕಥನ, ಜಾನಪದ ತೋರಣ, ಗೋಳಸಾರ ಕ್ಷೇತ್ರ ದರ್ಶನ ಮುಂತಾದ ೨೦ಕ್ಕು ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಸದಾ ಸಾಹಿತ್ಯ ಚಟುವಟಿಕೆಗಳು, ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದರು.

ಧಾರವಾಡದ ಆಕಾಶವಾಣಿ ಕೇಂದ್ರದ ಜಾನಪದ ಸಂಗೀತ ವಿಭಾಗದ ಕಲಾವಿದರ ಆಯ್ಕೆ ಸಮಿತಿ ಸದಸ್ಯರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿಯ ಸದಸ್ಯರಾಗಿ, ಅಖಿಲ ಭಾರತ ವೀರಶೈವ ಮಹಾ ಸಭೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ‍್ಯ ನಿರ್ವಹಿಸಿದ್ದಾರೆ. ಇಂಡಿ ತಾಲ್ಲೂಕಿನ ನಿವರಗಿಯಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಗುಡ್ಡಪುರದಲ್ಲಿ ನಡೆದ ಗಡಿನಾಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಬಸವನ ಬಾಗೇವಾಡಿಯಲ್ಲಿ ಜರುಗಿದ ವಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಮುಂತಾದವುಗಳ ಅಧ್ಯಕ್ಷತೆ.

ಪ್ರಶಸ್ತಿ

ಬದಲಾಯಿಸಿ

ಆದರ್ಶ ಶಿಕ್ಷಕ ಪ್ರಶಸ್ತಿ, ವಚನ ದರ್ಪಣ ಕೃತಿಗೆ ದ.ರಾ. ಬೇಂದ್ರೆ ಪಶಸ್ತಿ, ಜಾನಪದ ಅಕಾಡಮಿಯಿಂದ ಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಾನಪದ ಜಂಗಮ ಎಸ್.ಕೆ. ಕರೀಂಖಾನ್ ಪ್ರಶಸ್ತಿ, ಚಿತ್ರದುರ್ಗದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ವಿಶ್ವ ಚೇತನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ.

೧೯೯೯ ರಲ್ಲಿ ಜಾನಪದ ತಜ್ಞ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.