ಉಸ್ತಾದ ಬಾಲೇಖಾನರು[ಜನನ: ೨೮ಅಗಸ್ಟ್ ೧೯೪೨ ಮರಣ: ೦೨ಡಿಸೆಂಬರ ೨೦೦೭] ಹಿಂದುಸ್ತಾನಿ ಸಂಗೀತದ ಶ್ರೇಷ್ಠ ಸಿತಾರವಾದಕರು.ಇವರು ಖ್ಯಾತವೆತ್ತ ಸಿತಾರ ವಾದಕ, ಸಿತಾರರತ್ನ ರೆಹಮತ್ ಖಾನರ ಮೊಮ್ಮಗ ಹಾಗು ಪ್ರೊ.ಕರೀಮಖಾನರ ಮಗ. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಬಾಲೇಖಾನರು ಪ್ರಥಮ ದರ್ಜೆಯ ಕಲಾವಿದರಾಗಿದ್ದರು. ಭಾರತ ಹಾಗು ವಿದೇಶಗಳಲ್ಲಿ ಕಚೇರಿ ನಡೆಯಿಸಿದ ಬಾಲೇಖಾನರಿಗೆ ೧೯೮೭ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಬಾಲೇಖಾನರಿಗೆ ಅವರ ೬೦ನೆಯ ಜನ್ಮದಿನದಂದು 'ಸಿತಾರ ನವಾಜ'ಎನ್ನುವ ಬಿರುದು ನೀಡಲಾಗಿದೆ.ಮಾರ್ಚ ೨೦೦೬ ರಲ್ಲಿ ಬಾಲೇಖಾನರಿಗೆ ೨೦೦೬ನೆಯ ಇಸವಿಯ ಪುಟ್ಟರಾಜ ಗವಯಿ ಪ್ರಶಸ್ತಿ ನೀಡಲಾಯಿತು.

ಜೀವನ ಯಾತ್ರೆಸಂಪಾದಿಸಿ

  • ೧೯೬೮ರಲ್ಲಿ ಆಕಾಶವಾಣಿ ಕಲಾವಿದರಾದರು.
  • ೧೯೭೧ರಲ್ಲಿ ಆಕಾಶವಾಣಿ ನಿಲಯ ಕಲಾವಿದರಾಗಿ ನಿಯುಕ್ತಿ
  • ೧೯೭೧ರಲ್ಲಿ ಮೊದಲ ವಿದೇಶ ಯಾತ್ರೆ
  • ೧೯೮೭ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  • ೨೦೦೩ರಲ್ಲಿ ೬೦ ವರ್ಷ ತುಂಬಿದಾಗ 'ಸಿತಾರ ನವಾಜ' ಬಿರುದು.
  • ೨೦೦೫ರಲ್ಲಿ 'ಪುಟ್ಟರಾಜ ಗವಾಯಿ ಸನ್ಮಾನ'.

ಬಾಲ್ಯಸಂಪಾದಿಸಿ

ಬಾಲೇಖಾನರ ಮೂಲ ಹೆಸರು ಬಾಬು ಖಾನ್. ಅವರ ಅಜ್ಜ ಸಿತಾರ ರತ್ನ ರಹೀಮತ್ ಖಾನರು ಇವರನ್ನು ಬಾಲೆ(ಪುಟ್ಟ) ಎಂದು ಕರೆಯುತ್ತಿದ್ದರು. ಅದೇ ಅವರ ಜನಪ್ರಿಯ ಹೆಸರಾಗಿ ಚಾಲ್ತಿಯಲ್ಲಿ ಬಂದುಬಿಟ್ಟಿತು. ಬಾಲೇಖಾನರನ್ನು ಉತ್ತಮ ಗಾಯಕನಾಗಿಸಬೇಕೆಂದು ಅವರ ತಂದೆ ಪ್ರೊ. ಎ. ಕರೀಮಖಾನರ ಆಸೆಯಾಗಿತ್ತು. ಬಾಲೇಖಾನರು ಸಿತಾರಕ್ಕೆ ಆಕರ್ಷಿತರಾದಾಗ ತಂದೆ ಸಿಟ್ಟಿಗೆದ್ದಿದ್ದರು. ಒಂದು ವರ್ಷ ಸಿತಾರದಿಂದ ದೂರ ಇಟ್ಟಿದ್ದರು. ಆದರೂ ಮಗ ಛಲ ಬಿಡಲಿಲ್ಲ, ಮಗನ ಹಟಕ್ಕೆ ಮಣಿದು ಅಪ್ಪ ಸಿತಾರ ಕಲಿಸಲು ಆರಂಭಿಸಿದರು.

ಸಂಗೀತ ಮನೆತನಸಂಪಾದಿಸಿ

ಬಾಲೇಖಾನರ ವಂಶದ ರಕ್ತದಲ್ಲೇ ಸಂಗೀತ ಹರಿಯುತ್ತಿತ್ತು. ಇವರ ಅಜ್ಜ, ಮುತ್ತಜ್ಜರು ಸಿತಾರ ವಾದನದಲ್ಲಿ ಉತ್ತರ ಭಾರತದಲ್ಲಿ ಪುಣೆಯಲ್ಲಿ ಹೆಸರು ಮಾಡಿದ್ದರು. ಇವರು ಏಳನೇಯ ತಲೆಮಾರಿನವರು. ತಮ್ಮ ಒಂಬತ್ತು ಮಕ್ಕಳ ಪೈಕಿ ಒಬ್ಬರನ್ನಾದರೂ ಗಾಯಕರನ್ನಾಗಿಸಬೇಕೆಂಬ ಅಪ್ಪ ಕರೀಮಖಾನರ ಆಸೆ ಪೂರೈಸಲಿಲ್ಲ. ೯ ಮಕ್ಕಳ ಪೈಕಿ ೭ ಜನರು ಸಿತಾರ ಕಲಿತು, ವೃತ್ತಿಯನ್ನಾಗಿ ಆರಿಸಿಕೊಂಡರು, ಇಬ್ಬರು ಮಾತ್ರ ಬೇರೆ ಉದ್ಯೋಗಗಳನ್ನು ಆರಿಸಿಕೊಂಡರು.

ಶಿಕ್ಷಣಸಂಪಾದಿಸಿ

ಸಂಗೀತದಲ್ಲಿ ಮುಳುಗಿದ ಬಾಲೇಖಾನರು ಶಿಕ್ಷಣದಲ್ಲಿ ಹಿಂದುಳಿದರು. ೭ನೇಯ ತರಗತಿಯ ಉತ್ತರ ಪತ್ರಿಕೆಯಲ್ಲಿ, 'ನಾನು ಅಭ್ಯಾಸ ಮಾಡಿಲ್ಲ. ನನಗೇನೂ ಬರುವದಿಲ್ಲ. ಮುಂದಿನ ಇಯತ್ತೆಗೆ ಎತ್ತಿ ಹಾಕಿ, ಮುಂದಿನ ವರ್ಷ ಓದುವೆ' ಎಂದು ಬರೆದಿದ್ದರು. ಅಷ್ಟರಲ್ಲಾಗಲೇ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದರಿಂದ ಶಿಕ್ಷಕರು ಪ್ರೀತಿಯಿಂದಲೇ ಪಾಸು ಮಾಡಿದರು. ಎಸ್ಸೆಸ್ಸೆಲ್ಸಿವರೆಗೂ ಈ ಪ್ರೀತಿಯೇ ಅವರನ್ನು ಮುನ್ನಡೆಸಿಕೊಂಡು ಹೋಯಿತು. ೭ನೇಯ ತರಗತಿಯನ್ನು ಧಾರವಾಡದ ಬಾಸೆಲ್ ಮಿಷನ್ ಶಾಲೆಯಲ್ಲಿ, ೮ ಮತ್ತು ೯ನೆಯ ತರಗತಿಗಳನ್ನು ಪುಣೆಯಲ್ಲಿ ಮತ್ತು ೧೦ನೇಯ ತರಗತಿಯನ್ನು ಮತ್ತೆ ಧಾರವಾಡದಲ್ಲಿ ನಡೆಸಿದರು.

ಸಂಗೀತ ಯಾತ್ರೆಸಂಪಾದಿಸಿ

ಬಾಲೇಖಾನರಿಗೆ ೧೩ವರ್ಷ ವಯಸ್ಸಾಗಿದ್ದಾಗ ಬೆಳಗವಿಯ ಆರ್ಟ್ಸ ಸರ್ಕಲ್ ನಡೆಸಿದ ಸಿತಾರ ವಾದನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದರು, ಅಲ್ಲಿ ಆರಂಭವಾದ ವಿಜಯ ಯಾತ್ರೆ ಅವರನ್ನು ಈವರೆಗೂ ಮುಂಚುಣಿಯಲ್ಲಿಯೇ ನಡೆಸಿತು.

ಸಂಗೀತ ಶೈಲಿಸಂಪಾದಿಸಿ

ಅಜ್ಜನಂತೆ ನಿಧಾನಗತಿಯ ಅಲಾಪ, ಲಯಭದ್ಧ ಜೋಡ್, ರಭಸದ ಝಾಲಾದಲ್ಲಿ ಚರಮಗತಿ ಬಾಲೇಖಾನರ ಶೈಲಿಯ ಗುಣಗಳು. ಬಾಲೇಖಾನರದು, ಅಜ್ಜ ಸಿತಾರ ರತ್ನ ರಹೀಮತ್ ಖಾನರ ಪರಿಪೂರ್ಣಗೊಳಿಸಿದ ಗಾಯಕಿ ಅಂಗ ಶೈಲಿ. ಅಜ್ಜನ ವಿಶೇಷತೆಗಳನ್ನು ಕರಗತ ಮಾಡಿಕೊಂಡಿದ್ದರು ಎಂದು ಅವರ ಗೆಳೆಯ, ವಿಮರ್ಶಕ ಸದಾನಂದ ಕನವಳ್ಳಿ ಸ್ಮರಿಸುತ್ತಾರೆ.

ಶಿಷ್ಯರುಸಂಪಾದಿಸಿ

ಕರ್ನಾಟಕದಾದ್ಯಂತ ೧೬೨ ಜನ ಶಿಷ್ಯರು ಬಾಲೇಖಾನರಿಗಿದ್ದಾರೆ. ಅವರಲ್ಲಿ ವಿ. ಜಿ. ಮಹಾಪುರುಷ, ರಫೀಕ ನದಾಫ್ ಸಾಂಗ್ಲಿ, ಎನ್ ರಾಘವನ್, ಮಕ್ಕಳಾದ ರಫೀಕ್ ಖಾನ ಮತ್ತು ಶಫೀಕ್ ಖಾನ್, ಶ್ರೀನಿವಾಸ್ ಜೋಶಿ ಪ್ರಮುಖರು.

ಉಸ್ತಾದ ಬಾಲೇಖಾನರು ಧಾರವಾಡದಲ್ಲಿ ನೆಲೆಸಿದ್ದಾರೆ.