ಉಷಾ ಸುಂದರರಾಜ್(ಮಾರ್ಚ್ ೧,೧೯೪೨-). ಪ್ರಸಿದ್ಧ ಟೇಬಲ್ ಟೆನ್ನಿಸ್ ಆಟಗಾರ್ತಿ. ಅರ್ಜುನ ಪ್ರಶಸ್ತಿ ವಿಜೇತೆ.

1942 ಮಾರ್ಚ್ 1ರಂದು ಬೆಂಗಳೂರಿನಲ್ಲಿ ಜನಿಸಿದರು. ಮಲ್ಲೇಶ್ವರಂ ಹೆಣ್ಣು ಮಕ್ಕಳ ಪ್ರೌಢಶಾಲೆ, ಮೌಂಟ್ ಕಾರ್ಮಲ್ ಕಾಲೇಜು ಹಾಗೂ ಸೆಂಟ್ರಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದರು. ಇಂಗ್ಲಿಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಟೇಬಲ್ ಟೆನ್ನಿಸ್ ಆಟಗಾರ್ತಿ

ಬದಲಾಯಿಸಿ

1961ರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ರೂಪುಗೊಂಡು[] ಸತತ 7 ವರ್ಷಗಳ ತನಕ ರಾಷ್ಟ್ರೀಯ ಅಗ್ರ ಶ್ರೇಯಾಂಕ ಪಟ್ಟಿಯಲ್ಲಿ ತಮ್ಮ ಹೆಸರನ್ನು ಉಳಿಸಿಕೊಂಡಿದ್ದರು. ಇದರಲ್ಲಿ ಸತತ 4 ಬಾರಿ ರಾಷ್ಟ್ರೀಯ ಅಗ್ರ ಶ್ರೇಯಾಂಕ ಪಟ್ಟಿಯಲ್ಲಿ 2ನೆಯ ಸ್ಥಾನವನ್ನು ಪಡೆದಿದ್ದರು. 5 ಬಾರಿ ಅಗ್ರ ಶ್ರೇಯಾಂಕ ಪಟ್ಟಿಯಲ್ಲಿ ಮೊದಲಿಗರಾಗಿದ್ದರು. ಕರ್ನಾಟಕ ರಾಜ್ಯದ ಚಾಂಪಿಯನ್ನಾಗಿ ರಾಜ್ಯ ರ್ಯಾಂಕಿಂಗ್ ಪ್ರಶಸ್ತಿಯನ್ನು ಸತತ 21 ವರ್ಷಗಳ ಕಾಲ ತಮ್ಮ ಹೆಸರಿನಲ್ಲಿ ಉಳಿಸಿಕೊಂಡಿದ್ದು ದಾಖಲೆಯಾಗಿದೆ. ಇವರ ಈ ಸಾಧನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇವರು ಕರ್ನಾಟಕ ರಾಜ್ಯದ ಮಹಿಳಾ ತಂಡದ ನಾಯಕಿಯಾಗಿ ರಾಷ್ಟ್ರೀಯ ಚಾಂಪಿಯನ್‍ಷಿಪ್‍ಗಳಲ್ಲಿ ಭಾಗವಹಿಸಿದ್ದಾರೆ.

ಅಂತರಾಷ್ಟ್ರೀಯ ಆಟಗಾರ್ತಿ

ಬದಲಾಯಿಸಿ

ಇವರು ಅನೇಕ ಬಾರಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಆಟಗಾರರಾಗಿ ಮತ್ತು ತಂಡದ ನಾಯಕರಾಗಿ ಭಾರತವನ್ನು ಮುನ್ನಡೆಸಿದ್ದಾರೆ. ಏಷ್ಯನ್ ಚಾಂಪಿಯನ್ ಷಿಪ್, ವಲ್ರ್ಡ್ ಚಾಂಪಿಯನ್‍ಷಿಪ್, ಕಾಮನ್‍ವೆಲ್ತ್ ಚಾಂಪಿಯನ್ ಷಿಪ್ - ಇವು ಕೆಲವು ಮುಖ್ಯ ಕ್ರೀಡಾಕೂಟಗಳು. ಕೀನ್ಯ ಹಾಗೂ ಉಗಾಂಡಗಳಿಗೆ ಭಾರತ ತಂಡ ಪ್ರವಾಸ ಕೈಗೊಂಡಾಗ ಇವರು ನಾಯಕಿಯಾಗಿದ್ದರು. ಇವರು ತರಬೇತುದಾರರಾಗಿಯೂ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಭಾರತೀಯ ಹೆಣ್ಣು ಮಕ್ಕಳ ತಂಡ ಜಪಾನ್ ಪ್ರವಾಸ ಕೈಗೊಂಡಾಗ ಮತ್ತು ಭಾರತೀಯ ಮಹಿಳೆಯರ ತಂಡ ಸಿಯೋಲ್ ಏಷ್ಯನ್ ಗೇಮ್ಸ್ ಹಾಗೂ ಚೀನದ ಏಷ್ಯನ್ ಚಾಂಪಿಯನ್‍ಷಿಪ್ ಪಂದ್ಯಾಟಗಳಲ್ಲಿ ಭಾಗವಹಿಸಿದ ಸಂದರ್ಭಗಳು ಪ್ರಮುಖವಾದವು.

ಮನ್ನಣೆಗಳು

ಬದಲಾಯಿಸಿ

ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಷನ್ ಅನೇಕ ಸಂದರ್ಭಗಳಲ್ಲಿ ಇವರ ತಾಂತ್ರಿಕ ಪರಿಣತಿಯ ಅನುಭವದ ಪ್ರಯೋಜನ ಪಡೆದು ಕೊಂಡಿದೆ. ಇವರು ಭಾರತದ ಪ್ರತಿನಿಧಿಯಾಗಿ ಹಿರೋಷಿಮ ಮತ್ತು ನಾಗಸಾಕಿ ಹಾಗೂ ಒಸಾಕದಲ್ಲಿ ನಡೆದ ಮಹಿಳೆಯರ ಟೇಬಲ್ ಟೆನ್ನಿಸ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಇವರು ಕರ್ನಾಟಕದ ಪ್ರತಿಷ್ಠಿತ ಕ್ರೀಡಾಪುರಸ್ಕಾರವಾದ ಏಕಲವ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. 1996ರ ಅಟ್ಲಾಂಟಾ ಒಲಿಂಪಿಕ್ಸ್‍ಗೆ ಕರ್ನಾಟಕದ ಪ್ರತಿನಿಧಿಯಾಗಿ ಹೋಗಿದ್ದರು. ಇವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ. 1966ರಲ್ಲಿ ಕರ್ನಾಟಕದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ದೊರೆತಿದೆ. ಇದೇ ವರ್ಷ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪಡೆದ ಮಹಿಳೆಯರಲ್ಲಿ ಇವರೇ ಮೊದಲಿಗರು.

ಉಲ್ಲೇಖಗಳು

ಬದಲಾಯಿಸಿ
  1. "ROLL OF HONOUR : NATIONAL (SENIOR) CHAMPIONS" (PDF). Archived from the original (PDF) on 28 ಮಾರ್ಚ್ 2018. Retrieved 12 May 2016.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: