ಉಫೀಜ್ಟೀ ಮತ್ತು ಪಿಟ್ಟಿ ಚಿತ್ರಶಾಲೆಗಳು
ಉಫೀಜ್ಟೀ ಮತ್ತು ಪಿಟ್ಟಿ ಚಿತ್ರಶಾಲೆಗಳು: ಫ್ಲಾರೆನ್ಸಿನ ಉಫೀಟ್ಜೀ ಮತ್ತು ಪಿಟ್ಟಿ ಎರಡು ಅರಮನೆಗಳಲ್ಲಿ ಪ್ರಪಂಚದಲ್ಲಿ ಅತ್ಯುತ್ತಮ ಎನಿಸಿರುವ ಚಿತ್ರಗಳನ್ನು ಸಂಗ್ರಹಿಸಿಡಲಾಗಿದೆ. ಇವು ಪ್ರಪಂಚದಲ್ಲೇ ಅತಿ ದೊಡ್ಡ ಸಂಗ್ರಹಾಲಯಗಳೆನಿಸಿವೆ. ಲೊರನ್ಜೊ ದಿ ಮ್ಯಾಗ್ನಿಫಿಸೆಂಟ್ ಇವುಗಳ ಸಂಸ್ಥಾಪಕ. ಒಂದನೆಯ ಫ್ರಾನ್ಸಿಸ್, ಎರಡನೆಯ ಫರ್ಡಿನೆಂಡ್, ಮೂರನೆಯ ಕೊಸಿಮೊ ಇವರೂ ಇಲ್ಲಿನ ಅನೇಕ ಉತ್ತಮ ಚಿತ್ರಗಳ ಸಂಗ್ರಹಕ್ಕೆ ಶ್ರಮಿಸಿದ್ದಾರೆ. ಈ ಚಿತ್ರ ಶಾಲೆಯ ಹೆಸರು ಫ್ಲಾರೆನ್ಸಿನ ಪುರಸಭೆಯ ಆಡಳಿತ ನಡೆಯುತ್ತಿದ್ದ ಪಾಲಜ್ಜೊ ಡೆಗ್ಲಿ ಉಫೀಟ್ಜೀ ಅಥವಾ ಕಚೇರಿಗಳ ಅರಮನೆ ಎಂಬುದರಿಂದ ಬಂದಿದೆ. ಇಲ್ಲಿಯ ವಿಶೇಷ ಆಕರ್ಷಣೆ ಎಂದರೆ ಇಟಲಿಯ ಪ್ರಾಚೀನ ಚಿತ್ರಕಲಾವೈಭವ. ಇಲ್ಲಿ ಮೈಕಲೇಂಜಲೊ, ಲಿಯೊನಾರ್ಡೊ ಡ ವಿಂಚಿ, ವೆರೋಕಿಯೊ, ರ್ಯಾಫೆಲ್, ಜೋವನಿ ಬೆಲ್ಲಿನಿ ಮೊದಲಾದ ಪ್ರಸಿದ್ಧರ ಉತ್ತಮ ಚಿತ್ರಗಳಿವೆ. ಉಫೀಟ್ಜೀಯಂತೆ ಲ್ಯೂಕ ಪಿಟ್ಟಿಯ ಅರಮನೆಯಲ್ಲಿ ಮೆಡಿಚಿ ಕುಟುಂಬದವರಿಂದ ಪಿಟ್ಟಿ ಚಿತ್ರಶಾಲೆಯ ಚಿತ್ರ ಸಂಗ್ರಹ ಮೊದಲಾಯಿತು. ಉಫೀಟ್ಜೀಯಲ್ಲಿ ಇಟಲಿಯ ಎಲ್ಲ ಕಾಲದ ಚಿತ್ರಗಳ ಸಂಗ್ರಹವಿದ್ದರೆ, ಪಿಟ್ಟಿಯಲ್ಲಿ ಇಟಲಿಯ ಒಂದು ಕಾಲಕ್ಕೇ ಸೀಮಿತವಾದ ಪ್ರಬುದ್ಧ ಚಿತ್ರಕಲೆಯ ಸಂಗ್ರಹವಿದೆ.