ಉಪಯುಕ್ತತಾವಾದ

ಯುಟ್ಟೋಲಿಟ್ಟೆರಿಯನಿಸಂ

ಉಪಯುಕ್ತತಾವಾದ: ಯಾವ ಕಾರ್ಯದಿಂದ ಗರಿಷ್ಠ ಸಂಖ್ಯೆಯ ಜನಕ್ಕೆ ಗರಿಷ್ಠ ಕ್ಷೇಮ ಲಭಿಸುವುದೋ ಅಂಥ ಕಾರ್ಯವೇ ಸೂಕ್ತ ಕಾರ್ಯ ಎಂಬ ನೀತಿಸೂತ್ರ (ಯುಟಿಲಿಟೇರಿಯನಿಸಂ).

ಪ್ರಯೋಜಕತೆಯೇ ಧರ್ಮಕ್ಕೆ ನಿರ್ಣಾಯಕ-ಎಂಬ ಈ ವಾದ ಪಾಶ್ಚಾತ್ಯ ರಾಜಕೀಯ ನೈತಿಕ ಇತಿಹಾಸದಲ್ಲಿ ಕಾಲದಿಂದ ಕಾಲಕ್ಕೆ ಬಗೆಬಗೆಯ ಬಣ್ಣ ತಳೆದಿದೆ. ಯಾವುದು ಐಹಿಕ ಗುರಿ ಸಾಧಕವೋ ಅದು ಉಪಯುಕ್ತ. ಬೇಕೆನಿಸುವ ಎಲ್ಲ ವಸ್ತುವೂ, ಬಾಳಬಹುದಾದ ಎಲ್ಲ ಜೀವನವೂ ಇಲ್ಲಿ ಉದ್ಬವಿಸುವುದಿಲ್ಲ. ಆದ್ದರಿಂದ ಈ ವಾದ ಅಷ್ಟೇನೂ ಸ್ತುತ್ಯಾರ್ಹವಲ್ಲ. ಇದೊಂದು ನೀತಿಸೂತ್ರವಾಗಲಿ ಧರ್ಮದೃಷ್ಟಿಯಾಗಲಿ ಆಗಲಾರದು-ಎಂದು ಈ ಬಗ್ಗೆ ವಾದಿಸುವವರೂ ಉಂಟು.

ಇತಿಹಾಸ

ಬದಲಾಯಿಸಿ

ಉಪಯುಕ್ತತಾವಾದವನ್ನು ಮೊಟ್ಟಮೊದಲಿಗೆ ಮಂಡಿಸಿದ ರಿಚರ್ಡ್ ಕಂಬರ್ಲ್ಯಾಂಡ್ (1670). ಪರಮಸುಖ ಸಾಧನೆಯೇ ಮೂಲಭೂತ ನೀತಿಸೂತ್ರವೆಂದು ಆತ ಪ್ರತಿಪಾದಿಸಿದ. ಈ ಸೂತ್ರ ದೈವದತ್ತ: ಇದು ದೇವರ ಮೂಲ ನಿಯವi. ಮುಂದೆ ಜೆರೆಮಿ ಬೆಂಥಾಮ್ ಎಂಬ ಆಂಗ್ಲ ದಾರ್ಶನಿಕ ಈ ಬಗ್ಗೆ ಹೆಚ್ಚು ವಿಚಾರ ಮಾಡಿದ. ಈ ವಾದಕ್ಕೆ ಕೀರ್ತಿಯೂ ಪ್ರಭಾವವೂ ದೊರಕಿದ್ದು ಆತನಿಂದಲೇ. ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಸುಖವನ್ನು ಬಯಸಿ ದುಃಖವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಮನುಷ್ಯನ ಜೇವನದಲ್ಲಿ ಇತರ ಬೇರೆ ಬೇರೆ ಪ್ರವರ್ತಕೋದ್ದೇಶಗಳು ತಮ್ಮವೇ ಆದ ಪಾತ್ರವಹಿಸುತ್ತವೆ ಎಂಬುದು ನಿಜ. ಆದರೆ ನಮ್ಮ ಜೀವನದ ಮುಖ್ಯವಾದ ಪ್ರವರ್ತಕಗಳು ಸುಖ ಮತ್ತು ದುಃಖ, ಪ್ರತಿಯೊಬ್ಬ ಮನುಷ್ಯನನ್ನೂ ಪ್ರಕೃತಿ ಎರಡು ಪ್ರಮುಖ ವಿಷಯಗಳ ಅಧೀನಕ್ಕೆ ಒಳಪಡಿಸಿವೆ. ಅವು ಸುಖ ಮತ್ತು ದುಃಖ. ನಾವು ಏನು ಮಾಡುತ್ತಿದ್ದೇವೆ ಮತ್ತು ಏನು ಮಾಡಬೇಕು ಎಂಬುದನ್ನು ನಿರ್ಧರಿಸುವುದು ಅವುಗಳಿಗೆ ಸೇರಿದ್ದು, ನಮ್ಮೆಲ್ಲ ಭಾವನೆಗಳೂ ಅದಕ್ಕೆ ಬದ್ಧವಾಗಿರುತ್ತವೆ; ನಮ್ಮೆಲ್ಲ ತೀರ್ಮಾನಗಳೂ ಮತ್ತು ನಮ್ಮ ಜೀವಿತದ ನಿರ್ಧಾರಗಳೆಲ್ಲವೂ ಅವಕ್ಕೆ ಅಂತಿಮವಾಗಿ ಒಪ್ಪಿಸಲ್ಪಡುತ್ತವೆ ಎಂದು ಬೆಂಥಾಮ್ ಬರೆದಿದ್ದಾನೆ. ಯಾವುದು ಒಳ್ಳಯ ಸೂತ್ರ, ಯಾವುದು ಕೆಟ್ಟದ್ದು ಎಂಬ ವಿಮರ್ಶಗೆ ಉಪಯುಕ್ತತೆಯೇ ಆಧಾರ-ಎಂದು ವಾದಿಸಿದ. ಆದರೆ ಆತ ಇದನ್ನು ಸಿದ್ಧಾಂತದ ಸೀಮೆಗೆ ಕೊಂಡೊಯ್ಯಲಿಲ್ಲ. ಇದು ವಾಸ್ತವಿಕ ಹಾಗೂ ರಾಜಕೀಯ ಕ್ಷೇತ್ರಗಳಿಗಷ್ಟೇ ಮೀಸಲಾಗಿತ್ತು. ಅವನ ದೃಷ್ಟಿಯಲ್ಲಿ ಇದೊಂದು ನೀತಿಸೂತ್ರ. ಮನುಷ್ಯನ ಎಲ್ಲಕಾರ್ಯಗಳ ಅಂತಿಮಗುರಿಯೇ ಸುಖ; ಅರ್ಥಾತ್ ದುಃಖ ನಿವಾರಣೆ, ಸಂತೋಷಪ್ರಾಪ್ತ. ಆದರೆ ಪ್ರತಿ ಯೊಬ್ಬನೂ ತನ್ನ ಸುಖವನ್ನೇ ಪ್ರಧಾನವಾಗಿ ಪರಿಗಣಿಸಿದರೆ ಸಮಷ್ಟಿಯ ಸುಖ ಸಾಧಿಸುವುದು ಹೇಗೆಂಬ ಪ್ರಶ್ನೆ ಉದ್ಭವಿಸಬಹುದು. ಇತರರ ಸಂತೋಷ ದುಃಖಗಳನ್ನು ಕಡೆಗಣಿಸಿದ ವ್ಯಕ್ತಿ ಬಂಧನಕ್ಕೊಳಗಾಗಬಹುದು. ಇದು ರಾಜಕೀಯ ಕಟ್ಟಳೆ, ಅಥವಾ ಆತ ಬಹಿಷ್ಕಾರವನ್ನೆದು ರಿಸಬೇಕಾಗಬಹುದು. ಇದು ನೈತಿಕ ಅಥವಾ ಸಾಮಾಜಿಕ ಕಟ್ಟಳೆ, ಅಥವಾ ಈ ಜನ್ಮ ಮುಗಿದ ಮೇಲೆ ಆತ ಶಿಕ್ಷೆಗೆ ಒಳಗಾಗಬಹುದು. ಇದು ಮತೀಯ ಕಟ್ಟಳೆ. ಆದ್ದರಿಂದ ಸ್ವಂತ ಸುಖದೃಷ್ಟಿಗೂ ಸಮಾಜ ಹಿತದ ಗುರಿಗೂ ವಿರೋಧಾಭಾಸವೇನೂ ಇಲ್ಲ. ಒಂದು ಉದ್ದೇಶ ಒಳ್ಳೆಯದು ಎಂದು ಹೇಳಿದರೆ ಅದರ ಫಲಿತಾಂಶ ಒಳ್ಳೆಯದೆಂದು ಅರ್ಥ, ಇದೊಂದು ಸಾಧನ, ಇದೇ ಸಾಧನೀಯವಲ್ಲ. ಹೀಗೆಂದು ಬೆಂಥಾಮ್ ಹೇಳಿದ್ದಾನೆ.

ಆದರೂ ಬೆಂಥಾಮ್ ಈ ತರ್ಕದ ಕೊನೆ ಮುಟ್ಟಲಿಲ್ಲ. ಆತನ ಅನಂತರ ಬಂದವರನೇ ಕರು ಬೆಂಥಾಮ್ ಬರೆದದ್ದನ್ನು ಸಂಪೂರ್ಣ ಮರೆತರು. ಮುಂದೆ ಇದಕ್ಕೆ ಸಿದ್ಧಾಂತದ ಒಪ್ಪ ನೀಡಿದ ಜೆ.ಎಸ್.ಮಿಲ್ ಕೂಡ ಗಿಲ್ಟನ ಕಾದಂಬರಿಯೊಂದರಿಂದ (ಅನಾಲ್ಸ್‌ ಆಫ್ ದಿ ಪ್ಯಾರಿಷ್) ಈ ಪದವನ್ನು ಪಡೆದುದಾಗಿ ಹೇಳಿದ್ದಾನೆ. ಅಂತೂ ಈ ಸೂತ್ರಕ್ಕೆ ಅಭಿಜಾತ ಸಿದ್ಧಾಂತದ ಸ್ಥಾನ ದೊರಕಿಸಿಕೊಟ್ಟವನು ಜೆ. ಎಸ್. ಮಿಲ್. ಸುಖಾನ್ವೇಷಣೆ. ದುಃಖಾಭಾವ ಎಂಬ ಸೂತ್ರ ಹೊಂದಿರುವ ಹೀಡನಿಸಂ ಅಥವಾ ಸೌಖ್ಯ ಪುರುಷಾರ್ಥವಾದಕ್ಕಿಂತ ಉಪಯುಕ್ತತಾವಾದಕ್ಕೆ ಹೆಚ್ಚಿನ ವ್ಯಾಪ್ತಿಯನ್ನು ಮಿಲ್ ದೊರಕಿಸಿಕೊಟ್ಟ. ಕೆಲವು ಸುಖಗಳು ಇತರ ಕೆಲವಕ್ಕಿಂತ ಉತ್ತಮ; ಹೆಚ್ಚು ಉದಾತ್ತ ಸುಖಪ್ರಾಪ್ತಿಯೇ ಅಲ್ಲದ ಕೆಲವು ಗುರಿಗಳೂ ಉಂಟು. ಶ್ರೇಷ್ಠಗುಣ, ಜ್ಞಾನಸಂಪಾದನೆ ಇವು ಎಂಥ ಗುರಿಗಳು. ಇವುಗಳನ್ನು ಇವಕ್ಕಾಗಿಯೇ ಸಾಧಿಸಬೇಕು ಎಂದು ಆತ ವಾದಿಸಿದ.

ಒಳಿತು-ಕೆಡಕುಗಳ ಭಾವನಾತ್ಮಕ ವಿವೇಚನೆ ನಡೆಸಿದ್ದ ಬೆಂಥಾಮ್, ಮಿಲ್ಗಳ ವಾದವನ್ನು ಸಂಪೂರ್ಣ ತಳ್ಳಿ ಹಾಕಿ ಅದಕ್ಕೆ ಬೇರೆ ರೂಪು ಕೊಟ್ಟವನು ಹೆನ್ರಿ ಸಿಜ್ವಿಕ್ (1874), ಗರಿಷ್ಠ ಕ್ಷೇಮಸೂತ್ರ ರಚಯಕನೀತನೇ. ಇದೊಂದೇ ಈತನ ದೃಷ್ಟಿಯಲ್ಲಿ ಮೂಲಭೂತ ನೀತಿಸೂತ್ರ .ಸುಖಪ್ರಾಪ್ತಿಯೊಂದೇ ಸಾಧನೀಯವೆಂಬ ಸೂತ್ರವನ್ನು ಜಿ.ಇ. ಮೂರನೂ (1903) ತಳ್ಳಿ ಹಾಕಿದ. ಜ್ಞಾನ, ರಸಾಭಿಜ್ಞತೆ, ಪ್ರೀತಿ, ಸ್ನೇಹ-ಇವೆಲ್ಲವೂ ಪರಮ ಪುರುಷಾರ್ಥಗಳೇ ಎಂದು ಈತ ಬರೆದ. ಗರಿಷ್ಠ ಸಂಖ್ಯೆಯ ಗರಿಷ್ಠ ಕ್ಷೇಮ-ಎಂಬ ಸೂತ್ರವನ್ನೂ ಈತ ಮುಂದೆ (1912) ಸಮರ್ಥಿಸಿದ. ಆದ್ದರಿಂದ ಈತನ ಉಪಯುಕ್ತತಾವಾದ ವನ್ನು ಆದರ್ಶ ಉಪಯುಕ್ತತಾವಾದವೆಂದು ಕರೆಯಲಾಗಿದೆ. ಸೌಖ್ಯ ಪುರುಷಾರ್ಥೀ ಉಪಯುಕ್ತತಾವಾದಕ್ಕಿಂತ ಇದು ಭಿನ್ನ, ಒಂದು ಕೆಲಸ ಒಳ್ಳೆಯದೇ, ಕೆಟ್ಟದ್ದೇ ಎಂಬುದನ್ನು ಪರಿಗಣಿಸಬೇಕು-ಎಂದು ಈತ ವಾದಿಸಿದ್ದಾನೆ. ಆದ್ದರಿಂದ ಈತನ ದೃಷ್ಟಿಯಲ್ಲಿ ಉದ್ದೇಶಗಳು ಕೇವಲ ಗುರಿಸಾಧಕಗಳಲ್ಲ. ಹೀಗೆ ಉಪಯುಕ್ತತಾವಾದದ ಹಲವಾರು ಲೇಖಕರು ಎರಡು ವಿರುದ್ಧ ನಿಲವುಗಳ ನಡುವೆ ಸಾಮರಸ್ಯ ತರಲು ಯತ್ನಿಸಿರುವುದು ಕಂಡುಬರುತ್ತದೆ. ಸ್ವಂತ ಸುಖವೇ ಅನ್ವೇಷಣಾರ್ಹವೆಂಬುದು ಒಂದು ನಿಲವು. ಮಾನವಹಿತವೇ ಅಂತಿಮ ಲಕ್ಷ್ಯವೆನ್ನುವುದಾದರೆ ಸ್ವಂತಸುಖವೇ ಏಕೈಕ ಲಕ್ಷ್ಯವೆಂಬುದು ಸರಿಯಲ್ಲ-ಎಂಬುದು ಇನ್ನೊಂದು ನಿಲುವು. ಈ ವಿರುದ್ಧ ನಿಲವುಗಳ ಸಾಮರಸ್ಯ ಯತ್ನದಿಂದಾಗಿಯೇ ಈ ವಾದ ಅನೇಕರ ಆಸಕ್ತಿ ಕೆರಳಿಸಿದೆ.

ಒಟ್ಟಿನಲ್ಲಿ ಹೆಚ್ಚು ಜನರಿಗೆ ಹೆಚ್ಚು ಸುಖವನ್ನೊದಗಿಸುವುದೇ ಉಪಯುಕ್ತತಾವಾದದ ಒರೆಗಲ್ಲು. ಮನುಷ್ಯನ ಜೀವನದಲ್ಲಿ ಅಂತಿಮವಾದ ಗುರಿಯೇ ಸುಖ. ಆದ್ದರಿಂದ ಎಲ್ಲ ಪ್ರಜೆಗಳಿಗೂ ನಾನಾ ವಿಧಗಳಲ್ಲಿ ಹೆಚ್ಚು ಸುಖ ಸಂವರ್ಧನೆಗೆ ಅವಕಾಶ ಕೊಟ್ಟು, ಆದಷ್ಟೂ ದುಃಖದ ಉಗಮವನ್ನು ತಪ್ಪಿಸುವಂತೆ ದೇಶ ಮತ್ತು ಸರ್ಕಾರ ತನ್ನ ಕೆಲಸಕಾರ್ಯಗಳನ್ನು ನಿಭಾಯಿಸಬೇಕು. ಪ್ರಜೆಗಳ ಕಷ್ಟಕಾರ್ಪಣ್ಯ ಕಡಿಮೆಮಾಡಿ ಅವರ ಸುಖಸಂತೋಷ ಹೆಚ್ಚಿಸುವುದೇ ದೇಶದ ಶಾಸಕರ ಹಾಗೂ ರಾಜಕಾರಣಿಗಳ ಆದ್ಯ ಕರ್ತವ್ಯ. ಪ್ರಜೆಗಳ ಸುಖಸಂತೋಷವನ್ನು ಹೆಚ್ಚಿಸಿ, ತನ್ಮೂಲಕ ಅವರ ನೈತಿಕ ಬೆಳವಣಿಗೆಯನ್ನು ರೂಪಿಸುವುದು ಸರ್ಕಾರದ ಕರ್ತವ್ಯ. ದೇಶದ ಯಾವ ಕಾಯಿದೆಯೇ ಆಗಲಿ ಅದರ ಮಹತ್ತ್ವ ಮತ್ತು ಉಪಯುಕ್ತತೆಯು ಅದು ನೀಡುವ ಒಳ್ಳೆಯ ಫಲಿತಾಂಶವನ್ನೇ ಅವಲಂಬಿಸುತ್ತದೆ. ಒಟ್ಟಿನಲ್ಲಿ ಪ್ರಜೆಗಳ ಸುಖ, ಸಂತೋಷ, ಕಲ್ಯಾಣ-ಇವೇ ದೇಶದ ಎಲ್ಲ ಕಾಯಿದೆಗಳ ಪರಮ ಗುರಿಯಾಗಿರಬೇಕು. ಅಂದರೆ ಪ್ರಜೆಗಳ ಏಳಿಗೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಬರಬಹುದಾದ ಅಡ್ಡ ಆತಂಕಗಳ ನ್ನೆಲ್ಲ ನಿವಾರಿಸಲು ಸಾಧ್ಯವಾದ ಕಾರ್ಯಗಳೆಲ್ಲವನ್ನೂ ದೇಶ, ಸರ್ಕಾರ, ರಾಜಕಾರಣಿಗಳು ಮತ್ತು ಶಾಸಕರು ಕೈಗೊಳ್ಳಬೇಕು.

ಈ ರೀತಿಯಾಗಿ ಉಪಯುಕ್ತತಾವಾದಿಗಳು ವ್ಯಕ್ತಿಯ ಸುಖ ಸಂತೋಷ ಸ್ವಾತಂತ್ರ್ಯಗಳಿಗೆ ಹೆಚ್ಚು ಪ್ರಾಮುಖ್ಯ ಕೊಟ್ಟರು; ಅನ್ಯಾಯ ಅನೀತಿ ಪ್ರಜಾಪೀಡೆಗಳಲ್ಲಿ ಪರ್ಯವಸಾನವಾಗುವ ಕ್ರೂರ ಶಾಸನಗಳಿಗೆ ಅವರು ಯಾವಾಗಲೂ ವಿರುದ್ಧ. ಯಾವ ಕಾಯಿದೆಯನ್ನೇ ಆಗಲಿ, ಯಾವ ರಾಜಕೀಯ ಸಂಸ್ಥೆಯನ್ನೇ ಆಗಲಿ ಅವು ಇರುವ ಹಾಗೆಯೇ ಒಪ್ಪಲು ಅವರು ತಯಾರಿಲ್ಲ. ಆದರೆ ಸಮಾಜದ ಕಲ್ಯಾಣಕ್ಕಾಗಿ ಅವುಗಳನ್ನು ಬದಲಾಯಿಸಲು ಅವರು ಬದ್ಧಕಂಕಣರು. ಯಾವ ರಾಜಕೀಯ ಸಂಸ್ಥೆಯನ್ನಾದರೂ ಅದು ಎಷ್ಟೇ ಶತಮಾನಗಳಿಂ ದಿರಲಿ, ಅದರ ಯೋಗ್ಯತೆಯನ್ನು ಅದರ ಉಪಯುಕ್ತತೆಯಿಂದಲ್ಲದೆ ಮತ್ತಾವುದರಿಂದಲೂ ನಿರ್ಧರಿಸಲಾಗದು, ಜನಕ್ಕೆ ಉಪಯೋಗವಿಲ್ಲದ ಸಂಸ್ಥೆ ಅಥವಾ ವ್ಯವಸ್ಥೆಯನ್ನು ಅದು ಎಷ್ಟೇ ಶತಮಾನಗಳಿಂದಿದ್ದರೂ ಬದಲಾಯಿಸಬೇಕು. ಈ ರೀತಿ ದೇಶದ ಮತ್ತು ಸರ್ಕಾರದ ಎಲ್ಲ ಕೆಲಸಕಾರ್ಯಗಳನ್ನೂ ಈವಾದ ಉಪಯುಕ್ತತೆಯ ದೃಷ್ಟಿಯಿಂದಲೇ ನೋಡುತ್ತದೆ. ಒಟ್ಟಿನಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧಿಸಿ ಜನಜೀವನವನ್ನು ಉತ್ತಮಪಡಿಸು ವುದೇ ಉಪಯುಕ್ತತಾವಾದದ ಪರಮಗುರಿ.

ಟೀಕೆಗಳು

ಬದಲಾಯಿಸಿ

ಈ ಸಿದ್ಧಾಂತ ಕೆಲವು ಟೀಕೆಗಳಿಗೂ ಗುರಿಯಾಗಿದೆ. ಸುಖ, ಸಂತೋಷ ಮುಂತಾದ ಸ್ವಾರ್ಥನಿಷ್ಟ ಗುಣಗಳೇ ಮನುಷ್ಯನ ಜೀವನದಲ್ಲಿ ಮುಖ್ಯವಲ್ಲ; ಜ್ಞಾನ, ಅನುಕಂಪ ಮುಂತಾದ ಪರಹಿತನಿಷ್ಠ ಗುಣಗಳೂ ಅವನ ಜೀವನದಲ್ಲಿ ತಮ್ಮವೇ ಆದ ಪಾತ್ರ ವಹಿಸಬೇಕು-ಎಂಬ ಟೀಕೆಗೆ ಉತ್ತರವಾಗಿ ಹಲವು ಲೇಖಕರು ಈ ಗುರಿಗಳನ್ನೂ ಉಪಯುಕ್ತತಾವಾದದ ವ್ಯಾಪ್ತಿಯಲ್ಲಿ ಸೇರಿಸಿದ್ದಾರಾದರೂ ಸುಖ ದುಃಖಗಳನ್ನು ಯಾವ ಮಾನದಿಂದಲೂ ಅಳೆಯಲು ಸಾಧ್ಯವಿಲ್ಲ ವೆಂಬುದು ಗಮನಿಸಬೇಕಾದ ವಿಚಾರ. ಇದು ಮಾನಸಿಕವಾದದ್ದು. ವ್ಯಕ್ತಿವ್ಯಕ್ತಿಗಳ ನಡುವೆ ಈ ಬಗ್ಗೆ ವ್ಯತ್ಯಾಸವಿರುತ್ತದೆ. ಒಂದು ವಿಷಯದಲ್ಲಿ ಒಬ್ಬ ವ್ಯಕ್ತಿಗೆ ಸುಖ ಸಿಕ್ಕಿದರೆ ಅದೇ ವಿಷಯದಲ್ಲಿ ಮತ್ತೊಬ್ಬ ವ್ಯಕ್ತಿಗೆ ಅಷ್ಟೇ ಸುಖ ಸಿಕ್ಕದೆ ಹೋಗಬಹುದು. ಆದ್ದರಿಂದ ಸಾಮೂಹಿಕ ಅಥವಾ ಸಾಮಾನ್ಯ ಸುಖಸಂತೋಷವನ್ನು ದೇಶದ ಕಾನೂನುಗಳ ಮೂಲಕ ಉತ್ಪಾದಿಸಲಾಗು ವುದಿಲ್ಲ. ಅಲ್ಲದೆ ಉಪಯುಕ್ತತಾವಾದ ಐಶ್ವರ್ಯ ಮತ್ತು ಪ್ರಾಪಂಚಿಕ ಸುಖದ ಕಡೆ ಮಾತ್ರ ಗಮನ ಕೊಡುವ ಸೌಕರ್ಯವಾದದ ಸಿದ್ಧಾಂತವೆಂದೂ ಇದು ಆಧಿಬೌತಿಕವಾದವೆಂದೂ ಹೇಳಲಾಗಿದೆ.

ಉಪಯುಕ್ತತಾವಾದದ ಪರಿಣಾಮ

ಬದಲಾಯಿಸಿ

ಉಪಯುಕ್ತತಾವಾದದ ಲೋಪದೋಷಗಳೇನೇ ಇರಲಿ, ಇದು ಸಾಧಿಸಿದ ಒಳ್ಳೆಯ ಕಾರ್ಯಗಳನ್ನು ಅಲ್ಲಗಳೆಯಲಾಗುವುದಿಲ್ಲ. ಇಡೀ 19ನೆಯ ಶತಮಾನದಲ್ಲಿ ಇಂಗ್ಲೆಂಡಿನ ರಾಜಕಾರಣ ಮತ್ತು ಶಾಸನಗಳಲ್ಲಿ ಅದರ ಪ್ರಬಲ ಪ್ರಭಾವವನ್ನು ಕಾಣಬಹುದು. ಈ ಸಿದ್ಧಾಂತದ ಪ್ರಭಾವದಿಂದ ಅನೇಕ ಸುಧಾರಣೆಗಳು 19ನೆಯ ಶತಮಾನದಲ್ಲಿ ಜಾರಿಗೆ ಬಂದವು. ಜನಗಳ ಕಾಲ್ಪನಿಕ ದೃಷ್ಟಿಯನ್ನು ಕಳಚಿ ಅವರು ವಾಸ್ತವಿಕವಾಗಿ ಯೋಚಿಸುವಂತೆ ಮಾಡಲು ಇದರಿಂದ ಸಾಧ್ಯವಾಯಿತು. ಜನರ ಹಿತಸಾಧನೆಗಳ ಬಗ್ಗೆ ರಾಜಕಾರಣಿಗಳ ಮುಂದೆ ಇದು ಒಂದು ನಿರ್ದಿಷ್ಟ ಗುರಿಯನ್ನಿಟ್ಟಿತು. ಇಡೀ ಇಂಗ್ಲೆಂಡಿನ ನ್ಯಾಯವ್ಯವಸ್ಥೆಗೆ ಮೊನೆಯೂ ಕ್ರಮವೂ ಲಭಿಸಿದ್ದು ಇದರಿಂದ. ರೈತ ಮತ್ತು ಕಾರ್ಮಿಕ ವರ್ಗದವರ ಏಳಿಗೆಗಾಗಿ ಅನೇಕ ಸುಧಾರಣೆಗಳು ಹೊರಬಂದುವು. ನ್ಯಾಯಾಂಗ, ಆಡಳಿತಾಂಗ ಮುಂತಾದ ಎಲ್ಲವನ್ನೂ ಶುದ್ಧೀಕರಿಸಿ, ಕ್ರಮಗೊಳಿಸಿ, ಸಮಾಜದ ಸರ್ವತೋಮುಖ ಏಳಿಗೆಗೆ ಈ ಸಿದ್ಧಾಂತ ಬಹುಮಟ್ಟಿಗೆ ಕಾರಣವಾಯಿತು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: