ಉದ್ಘಾಟನೆ
ಉದ್ಘಾಟನೆಯು ಒಂದು ವಿಧ್ಯುಕ್ತ ಸಮಾರಂಭ ಅಥವಾ ವಿಶೇಷ ಕಾರ್ಯಕ್ರಮ. ಇದು ಈ ಮುಂದಿನವುಗಳನ್ನು ಗುರುತಿಸುತ್ತದೆ: ಒಬ್ಬ ಪ್ರಮುಖ ಸಾರ್ವಜನಿಕ ನಾಯಕನ ಅಧಿಕಾರದ ಅವಧಿಯ ಆರಂಭ, ಅಥವಾ ಒಂದು ಹೊಸ ಸಾರ್ವಜನಿಕ ಪ್ರದೇಶ, ಸಂಸ್ಥೆ ಅಥವಾ ಯೋಜನೆಯ ತೆರೆಯುವಿಕೆ ಅಥವಾ ಮೊದಲ ಸಾರ್ವಜನಿಕ ಬಳಕೆ. ಉದಾಹರಣೆಗೆ ವಸ್ತು ಸಂಗ್ರಹಾಲಯ, ಆಸ್ಪತ್ರೆ, ಅಥವಾ ಚಲನಚಿತ್ರ ನಿರ್ಮಾಣಶಾಲೆ.
ಕಡಿಮೆ ವಿಧ್ಯುಕ್ತ ಅರ್ಥದಲ್ಲಿ ಈ ಪದವನ್ನು ಈ ಮುಂದಿನವುಗಳನ್ನು ಸೂಚಿಸಲು ಕೂಡ ಬಳಸಬಹುದು: ಒಂದು ಹೊಸ ವ್ಯವಸ್ಥೆ, ಕಾರ್ಯನೀತಿ, ಅಥವಾ ಅವಧಿಯ ಆರಂಭ ಅಥವಾ ಪರಿಚಯಿಸುವಿಕೆ; ಅಥವಾ ಯಾವುದರದ್ದಾದರೂ ಮೊದಲ ಅಥವಾ ಆರಂಭಿಕ ಬಳಕೆ; ಉದಾಹರಣೆಗೆ, ಒಂದು ಹಡಗು, ರೈಲು ಅಥವಾ ಯಾವುದೋ ಬಗೆಯ ಗಣಕ ಸೇವೆ ಕೂಡ.
ಸಾರ್ವಜನಿಕ ವ್ಯಕ್ತಿಗಳ, ವಿಶೇಷವಾಗಿ ರಾಜಕೀಯ ನಾಯಕರ ಉದ್ಘಾಟನೆಗಳು ಅದ್ದೂರಿ ಸಮಾರಂಭಗಳನ್ನು ಹೊಂದಿರುತ್ತವೆ. ಇದರಲ್ಲಿ ಆ ವ್ಯಕ್ತಿಯು ಸಾರ್ವಜನಿಕವಾಗಿ ತನ್ನ ಅಧಿಕಾರಸ್ಥಾನದ ಪ್ರಮಾಣ ವಚನ ಸ್ವೀಕರಿಸುತ್ತಾನೆ/ಳೆ, ಹಲವುವೇಳೆ ವೀಕ್ಷಕರ ದೊಡ್ಡ ಸಮೂಹದ ಮುಂದೆ. ರಾಜರುಗಳ ಉದ್ಘಾಟನೆಯು ರಾಷ್ಟ್ರವನ್ನು ಆಧರಿಸಿ ಭಿನ್ನ ರೂಪಗಳನ್ನು ತೆಗೆದುಕೊಳ್ಳಬಹುದು: ಅವರು ಪಟ್ಟಾಭಿಷೇಕ ವಿಧಿಗೆ ಒಳಗಾಗಬಹುದು ಅಥವಾ ದೇಶದ ಶಾಸನ ಸಭೆಯ ಉಪಸ್ಥಿತಿಯಲ್ಲಿ ಕೇವಲ ಪ್ರಮಾಣ ವಚನ ಸ್ವೀಕರಿಸುವ ಅಗತ್ಯವಿರಬಹುದು. ಉದ್ಘಾಟನಾ ಭಾಷಣವೆಂದರೆ ಈ ಸಮಾರಂಭದ ಅವಧಿಯಲ್ಲಿ ನೀಡಲಾದ ಭಾಷಣ. ಇದು ಒಬ್ಬ ನಾಯಕನಾಗಿ ತನ್ನ ಉದ್ದೇಶಗಳನ್ನು ಜನರಿಗೆ ತಿಳಿಸುತ್ತದೆ.
ವೈಯಕ್ತಿಕ ಉದ್ಘಾಟನೆಗಳಲ್ಲದೇ, ಈ ಪದವು ಒಂದು ಸಂಸ್ಥೆ ಅಥವಾ ಕಟ್ಟಡದ ಅಧಿಕೃತ ತೆರೆಯುವಿಕೆ ಅಥವಾ ಆರಂಭವನ್ನು ಕೂಡ ಸೂಚಿಸಬಹುದು, ಉದಾಹರಣೆಗೆ ಒಂದು ಹೊಸ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿಯ) ಉದ್ಘಾಟನೆ.