ಉತ್ಪಾದನಾಂಗಗಳು
ಶ್ರಮದ ಲಕ್ಷಣಗಳು
ಹಿನ್ನೆಲೆ
ಬದಲಾಯಿಸಿಮೂಲ ಉತ್ಪಾದನ ಸಾಧನಗಳ ಒಂದು ಗುಂಪು ಅಥವಾ ವರ್ಗವೇ ಉತ್ಪಾದನಾಂಗವೆಂಬುದು ಫ್ರೇಸರನ ವ್ಯಾಖ್ಯೆ. ಈ ಒಂದೊಂದು ಗುಂಪು ಅಥವಾ ವರ್ಗಗಳಲ್ಲಿನ ಬಿಡಿ ಸಾಧನಗಳಿಗೆ ಅಂಶಗಳೆಂದು ಹೆಸರು. ಅಭಿಜಾತ ಸಂಪ್ರದಾಯಾನುಸಾರವಾಗಿ ಉತ್ಪಾದನೆಯ ನಾನಾ ಸಾಧನೆಗಳನ್ನು ವಿಂಗಡಿಸುವ ಬದಲು ಅವಕ್ಕೆ ಯಾವ ಹಣೆಚೀಟಿಗಳನ್ನೂ ಅಂಟಿಸದೆ ಕೇವಲ ಉತ್ಪಾದಕ ಸೇವೆಗಳೆಂದು ಕರೆಯಬೇಕೆಂದು ಆಧುನಿಕ ಅರ್ಥಶಾಸ್ತ್ರಜ್ಞರ ಅಭಿಲಾಷೆ. ಉತ್ಪಾದನಾಂಗಗಳನ್ನು ಗ್ರಾಸ ಅಥವಾ ಆದಾನವೆಂದೂ (ಇನ್‍ಪುಟ್) ಉತ್ಪಾದಿಸಿದ ಪದಾರ್ಥವನ್ನು ಉತ್ಪತ್ತಿ (ಔಟ್‍ಪುಟ್) ಎಂದೂ ಕರೆಯುವ ಪರಿಪಾಟವುಂಟು. ಉತ್ಪಾದನೆಗೆ ಸಹಾಯವಾಗುವಂಥದು ಏನೇ ಇರಲಿ, ಅದು ಉತ್ಪಾದನೆಯ ಅಂಗ ಎಂಬುದು ಬೆನ್‍ಹ್ಯಾಮನ ಮಾತು. ಉತ್ಪಾದನೆಯ ಅಂಗಗಳನ್ನು ಸಾಮಾನ್ಯವಾಗಿ ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಅವೆಂದರೆ 1. ಭೂಮಿ, 2. ಶ್ರಮ, 3. ಬಂಡವಾಳ, 4. ಸಂಘಟನೆ.[೧]
ಭೂಮಿ
ಬದಲಾಯಿಸಿಭೂಮಿಯೆಂಬ ಪದಕ್ಕೆ ಅರ್ಥಶಾಸ್ತ್ರದಲ್ಲಿ ವಿಶಿಷ್ಟವಾದ ಅರ್ಥವುಂಟು. ಇದು ಕೇವಲ ನೆಲವಲ್ಲ, ಮಣ್ಣಲ್ಲ. ನೆಲ ಜಲ ವಾಯು ಬೆಳಕು ಬೆಂಕಿಗಳ ರೂಪದಲ್ಲಿ ಪ್ರಕೃತಿ ಮಾನವನಿಗೆ ನೀಡುವ ವಸ್ತು ಶಕ್ತಿಗಳಿಗೆಲ್ಲ ಭೂಮಿ ಸಂಕೇತವೆಂಬುದು ಮಾರ್ಷಲನ ಮಾತು. ಮಾನವ ಏನು ಮಾಡಬೇಕಾದರೂ ನೆಲದ ಮೇಲ್ಮೈಯೇ ಅವನಿಗೆ ಮೂಲಾಧಾರ. ಆತನ ಕೃತಿಗಳಿಗೆಲ್ಲ ಅದು ಅನುವು ಮಾಡಿಕೊಡುತ್ತದೆ. ಮನುಷ್ಯನ ನಾಗರಿಕತೆಯ ನಾನಾ ಹಂತಗಳಲ್ಲಿ ಪ್ರಕೃತಿಯೇ ಆತನ ಪ್ರಧಾನ ಮಿತ್ರ; ಕೆಣಕಿ, ಸೆಣೆಸಿ, ಸೋಲಿಸಿ, ಒಲಿದು ಆತನ ಆರ್ಥಿಕ ಬೆಳವಣಿಗೆಗೆ ಎಡೆ ಮಾಡಿಕೊಟ್ಟಿರುವ ಶಕ್ತಿ. ಮನುಷ್ಯ ಬೇಟೆಯ ಜೀವನ ನಡೆಸುತ್ತಿದ್ದಾಗ ಪ್ರಾಣಿ ಸಂಪತ್ತನ್ನೂ ಪಶು ಪಾಲಕನಾಗಿದ್ದಾಗ ಹುಲ್ಲುಗಾವಲನ್ನೂ ಬೇಸಾಯಕ್ಕೆ ಫಲವತ್ತಾದ ನೆಲವನ್ನೂ ಇನ್ನೂ ಹೆಚ್ಚು ಮುಂದುವರಿದಾಗ ಕೈಗಾರಿಕೆಗೆ ಕಚ್ಚಾ ಸಾಮಗ್ರಿಯನ್ನೂ ಸರ್ವಕಾಲದಲ್ಲೂ ನೆಲೆಯನ್ನೂ ಒದಗಿಸಿಕೊಟ್ಟಿರುವುದು ಭೂಮಿಯೇ. ಮಾನವ ಬಳಸುವ ಎಲ್ಲ ಪದಾರ್ಥಗಳ ಮೂಲವೂ ಇದೇ.
ಈ ಭೂಮಿ ಎನ್ನುವುದು ಮಾನವನಿಗೆ ಪ್ರಕೃತಿ ನೀಡಿರುವ ಕಾಣಿಕೆ. ಒಮ್ಮೆ ಅನುಪಯುಕ್ತವಾಗಿದ್ದ ಪ್ರದೇಶಗಳನ್ನು ಮಾನವನಿಂದು ಪರಿವರ್ತಿಸಿಕೊಂಡಿದ್ದಾನೆ, ನಿಜ. ಆದರೂ ಪ್ರಕೃತಿಯಿಂದ ಮಾನವನಿಗೆ ಸಂದಿರುವ ಕೊಡುಗೆಯೊಂದಿಗೆ ಹೋಲಿಸಿದಲ್ಲಿ ಮಾನವ ಅದಕ್ಕೆ ಪ್ರತಿಯಾಗಿ ಮಾಡಿರುವುದು ಅತ್ಯಲ್ಪವೆಂಬುದು ನಿರ್ವಿವಾದ.
ಭೂಮಿಗೆ ಕೆಲವು ವಿಶಿಷ್ಟ ಲಕ್ಷಣಗಳುಂಟು
ಬದಲಾಯಿಸಿಭೂಮಿಯ ಪರಿಮಾಣ ಮಿತವಾದುದ್ದು. ಇದರ ಸರಬರಾಜನ್ನು ಮನುಷ್ಯ ತನಗಿಷ್ಟ ಬಂದಂತೆ ಹಿಗ್ಗಿಸುವುದಾಗಲಿ ಕುಗ್ಗಿಸುವುದಾಗಲಿ ಸಾಧ್ಯವಿಲ್ಲ. ಭೂಮಿಗೆ ಸರಬರಾಜು ಬೆಲೆಯಿಲ್ಲವೆಂದು ಹೇಳಲಾಗಿದೆ. ಹೆಚ್ಚು ಬೆಲೆಗೆ ತಕ್ಕಂತೆ ಅದರ ಸರಬರಾಜನ್ನು ಹೆಚ್ಚಿಸುವುದು ಸಾಧ್ಯವಿಲ್ಲ. ಬೆಲೆ ಇಳಿದಾಗ ಅದರ ಪ್ರಮಾಣ ತಗ್ಗುವುದಿಲ್ಲ. ನೆಲದ ಪರಿಮಾಣ ಸ್ಥಿರವಾದ್ದರಿಂದ ಜನಸಂಖ್ಯೆ ಹೆಚ್ಚಿದಂತೆ ಅದಕ್ಕೆ ಅಭಾವ ಗೇಣಿ ಉದಿಸುತ್ತದೆ. ಭೂಮಿ ಸ್ಥಿರವಾದದ್ದು. ಬಾಂಬು ದಾಳಿಯಿಂದ ನೆಲದ ಉತ್ಪಾದಕತೆ ತಾತ್ಕಾಲಿಕವಾಗಿ ನಾಶವಾದರೂ ಅದನ್ನು ಪುನಃ ನೆಲೆಗೊಳಿಸುವುದು ಸಾಧ್ಯ. ರಿಕಾರ್ಡೋ ಮಾತಿನಲ್ಲಿ ಭೂಮಿಯ ಗುಣಧರ್ಮಗಳು ಮೂಲಭೂತ, ಅವಿನಾಶಿ. ಭೂಮಿ ಅಚಲ. ಭೌಗೋಳಿಕವಾಗಿ ಅದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಅಸಾಧ್ಯ. ಸ್ಥಳದಿಂದ ಸ್ಥಳಕ್ಕೆ ಭೂಮಿಯ ಗೇಣಿ ಬದಲಾಗುವುದಕ್ಕೆ ಅದರ ಈ ಗುಣವೇ ಕಾರಣ. ಭೂಮಿಯ ಫಲವತ್ತು ತಾಕಿನಿಂದ ತಾಕಿಗೆ ವ್ಯತ್ಯಾಸವಾಗುತ್ತದೆ. ಒಂದೇ ತೆರನಾದ ಎರಡು ತುಣುಕು ಭೂಮಿ ಇರುವುದು ಅಸಾಧ್ಯ. ಅಂಚಿನ ಬೇಸಾಯದ ಭಾವನೆ ಬೆಳೆದಿರುವುದು ಈ ಕಾರಣದಿಂದ. (ನೋಡಿ- ಗೇಣಿ,-ಗೇಣಿ-ಸಿದ್ಧಾಂತ).[೨]
ಶ್ರಮ
ಬದಲಾಯಿಸಿಸಾಮಾನ್ಯರಲ್ಲಿ ರೂಢಿಯಲ್ಲಿರುವುದಕ್ಕಿಂತ ಅರ್ಥಶಾಸ್ತ್ರದಲ್ಲಿ ಶ್ರಮದ ಅರ್ಥ ಹೆಚ್ಚು ವಿಶಿಷ್ಟ.. ಆರೋಗ್ಯಪಾಲನೆಗಾಗಿ ಮಾಡುವ ವ್ಯಾಯಾಮ, ತಾಯಿಯಿಂದ ಶಿಶುಪೋಷಣೆ, ತಂದೆ ಮಗನಿಗೆ ಹೇಳಿಕೊಡುವ ಪಾಠ, ಮನೆಯ ಮುಂದಿನ ತೋಟದಲ್ಲಿ ನಾವು ಮಾಡುವ ಕೆಲಸ-ಇವೆಲ್ಲ ಸಾಮಾನ್ಯ ಅರ್ಥದಲ್ಲಿ ಶ್ರಮವೇ. ಆದರೆ ಅರ್ಥಶಾಸ್ತ್ರದ ದೃಷ್ಟಿಯಲ್ಲಿ ಇವೆಲ್ಲ ಶ್ರಮವಲ್ಲ. ಏಕೆಂದರೆ ಇವೆಲ್ಲವೂ ಸ್ವಸಂತೋಷಕ್ಕಾಗಿ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದ್ದು.
ದುಡಿಮೆಯಿಂದ ದೊರಕುವ ಸಂತೋಷಕ್ಕಿಂತಲೂ ಬೇರೆಯಾದ ಫಲವನ್ನೇ ಕ್ವಚಿತ್ತಾಗಿಯೋ ಪ್ರಧಾನವಾಗಿಯೋ ನಿರೀಕ್ಷಿಸಿ ವಿನಿಯೋಗಿಸಿದ ದೈಹಿಕ ಮಾನಸಿಕ ಪ್ರಯಾಸವೆಲ್ಲ ದುಡಿಮೆ-ಎಂಬುದು ಮಾರ್ಷಲನ ವ್ಯಾಖ್ಯೆ. ಈ ಅರ್ಥದಲ್ಲಿ ಶ್ರಮಿಕ ಕೂಲಿಕಾರನಿರಲಿ, ಕೃಷಿಕನಿರಲಿ, ಶಿಕ್ಷಕನಿರಲಿ, ಗುಮಾಸ್ತನಿರಲಿ, ಪೊಲೀಸನಾಗಿರಲಿ, ವೈದ್ಯನಿರಲಿ, ತಂತ್ರಜ್ಞನಾಗಿರಲಿ ಇವರೆಲ್ಲರೂ ಪ್ರತಿಫಲಾಪೇಕ್ಷೆಯಿಂದ ತಮ್ಮ ಕಾರ್ಯ ಮಾಡಿದರೆ ಆ ಕಾರ್ಯ ಶ್ರಮವೆನಿಸಿಕೊಳ್ಳುತ್ತದೆ.
ಶ್ರಮಕ್ಕೂ ಇತರ ಉತ್ಪಾದನಾಂಗಗಳಿಗೂ ವ್ಯತ್ಯಾಸಗಳುಂಟು. ಇತರ ಉತ್ಪಾದನಾಂಗಗಳು ಉತ್ಪಾದನೆಯ ಗುರಿಯ ಸಾಧನಗಳು ಮಾತ್ರ. ಆದರೆ ಶ್ರಮ ಹೀಗಲ್ಲ. ಇದು ಗುರಿಯ ಸಾಧನವೂ ಹೌದು, ಇದೇ ಗುರಿಯೂ ಹೌದು. ಕಾರ್ಮಿಕರು ದುಡಿಯುವುದು ಅಂತಿಮವಾಗಿ ತಮ್ಮ ಬಯಕೆಗಳ ತೃಪ್ತಿಗಾಗಿಯೇ. ಆದ್ದರಿಂದ ಒಂದು ಕಡೆ ಇವರು ಉತ್ಪಾದಕರಾದರೆ ಇನ್ನೊಂದು ಕಡೆ ಇವರೇ ಅನುಭೋಗಿಗಳು.
ಶ್ರಮವನ್ನೂ ಶ್ರಮಿಕನನ್ನೂ ಬೇರ್ಪಡಿಸಲಾಗದ್ದು ಇದರ ಇನ್ನೊಂದು ಮುಖ್ಯ ಲಕ್ಷಣ. ಅವನ ಪದಾರ್ಥವನ್ನು ಅವನೇ ಖುದ್ದಾಗಿ ಬಂದು ಒಪ್ಪಿಸಬೇಕಾದ್ದು ಅನಿವಾರ್ಯ. ಆತ ಮಾಡುವುದು ತನ್ನ ಶ್ರಮವನ್ನೇ ಹೊರತು ತನ್ನನ್ನಲ್ಲ.
ಶ್ರಮ ಅವಿನಾಶಿಯಲ್ಲ. ಅದು ನಶ್ವರ. ಕೆಲಸ ಮಾಡದೆ ಕಳೆದ ಒಂದೊಂದು ದಿನವೂ ಶಾಶ್ವತವಾಗಿ ನಷ್ಟವಾದಂತೆಯೇ. ಸಂಚಿತವಾದ ಶ್ರಮಕ್ಕೆ ಇರುವುದು ಒಂದೇ ಮಾರ್ಗ ಅದರ ವಿನಿಯೋಗ. ಒಳ್ಳೆಯ ಬೆಲೆ ಬಂದಾಗ ಮಾರೋಣವೆಂದು ಶ್ರಮವನ್ನು ದಾಸ್ತಾನು ಮಾಡಿಡುವುದು ಕಾರ್ಮಿಕನಿಗೆ ಸಾಧ್ಯವಿಲ್ಲ. ಆದ್ದರಿಂದ ದೊರಕುವ ಕೂಲಿ ಪಡೆದು ಕೆಲಸ ಮಾಡಬೇಕಾದ್ದು ಹಲವು ವೇಳೆ ಆತನಿಗೆ ಅನಿವಾರ್ಯ. ಆದ್ದರಿಂದ ದುಡಿಮೆಗಾರನಿಗೆ ಚೌಕಾಶಿಯ ಶಕ್ತಿಯಿಲ್ಲವೆಂಬುದು ಸ್ವಯಂವೇದ್ಯ. ಉದ್ಯಮದೊಡೆಯರು ಈ ದೌರ್ಬಲ್ಯದ ದುರುಪಯೋಗ ಪಡೆಯದಿರಲೆಂದೇ ಅನೇಕ ಸರ್ಕಾರಗಳು ಕಾರ್ಮಿಕರ ಹಿತ ರಕ್ಷಿಸುವ ಕಾಯಿದೆಗಳನ್ನು ಜಾರಿಗೆ ತಂದಿವೆ. ಕಾರ್ಮಿಕ ಸಂಘಗಳು ಹುಟ್ಟಿ ಬೆಳೆದಿರುವುದೂ ಈ ಉದ್ದೇಶದಿಂದಲೇ.
ಕಾರ್ಮಿಕರ ಶ್ರಮದ ಬೆಲೆಯಲ್ಲಿ ಆಗುವ ಏರಿಳಿತಗಳಿಂದ ಅದರ ಸರಬರಾಜಿನಲ್ಲಿ ಅನೇಕ ವೇಳೆ ವ್ಯತ್ಯಾಸಗಳಾಗುತ್ತವೆ. ಬೆಲೆ ಕಡಿಮೆಯಾದಾಗ ಸರಬರಾಜು ಕಡಿಮೆಯಾಗುವುದು ಇತರ ಪದಾರ್ಥಗಳ ಧರ್ಮ. ಆದರೆ ಕೂಲಿ ಕಡಿಮೆಯಾದಾಗ ಕಾರ್ಮಿಕನ ಸಂಸಾರದಲ್ಲಿ ಕಡಿಮೆಯಾದ ವರಮಾನವನ್ನು ತುಂಬಲು ಅವನ ಕುಟುಂಬದಲ್ಲಿ ಇತರರೂ ಕೆಲಸಕ್ಕೆ ಬರಬಹುದು. ಇದರಿಂದ ಸರಬರಾಜು ಕಡಿಮೆಯಾಗುವ ಬದಲು ಹೆಚ್ಚೇ ಆಗುತ್ತದೆ. ಆದರೆ ಕೂಲಿ ಒಂದು ಮಟ್ಟವನ್ನು ಮೀರಿ ಹೆಚ್ಚಾದಾಗ ಕಾರ್ಮಿಕರ ವರಮಾನ ಹೆಚ್ಚಿ, ಅತಿಯಾಗಿ ದುಡಿಯುವ ಆವಶ್ಯಕತೆ ತಗ್ಗಿ, ಅವರ ಸರಬರಾಜೂ ತಗ್ಗಬಹುದು.
ಬೇಡಿಕೆಗೆ ತಕ್ಕಂತೆ ಕಾರ್ಮಿಕರ ಸಂಖ್ಯೆಯನ್ನು ಶೀಘ್ರವಾಗಿ ಏರಿಸಲಾಗಲಿ ತಗ್ಗಿಸಲಾಗಲಿ ಸಾಧ್ಯವಿಲ್ಲ. ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಪದಾರ್ಥಗಳಿಗೆ ಗಿರಾಕಿ ತಗ್ಗಿ ಬೆಲೆಯೂ ಇಳಿದಾಗ ಉತ್ಪಾದನೆಯನ್ನೂ ತಗ್ಗಿಸುವುದು ಅನಿವಾರ್ಯವಾಗಬಹುದು. ಆಗ ಕಾರ್ಮಿಕರಿಗೆ ಬೇಡಿಕೆ ತಗ್ಗಿ ಕೂಲಿಯೂ ಇಳಿಯುತ್ತದೆ. ಅದಕ್ಕೆ ತಕ್ಕಂತೆ ಕಾರ್ಮಿಕರ ಸರಬರಾಜನ್ನೂ ತಗ್ಗಿಸುವುದು ಸಾಧ್ಯವಾಗುವುದಿಲ್ಲ.
ಪ್ರತಿಯೊಬ್ಬ ಶ್ರಮಿಕನ ಕಾರ್ಯಸಾಮಥ್ರ್ಯವೂ ಬೇರೆ ಬೇರೆಯಾಗಿರುತ್ತದೆ. ಯಂತ್ರೋಪಕರಣಗಳಂತೆ ಕಾರ್ಮಿಕ ಎಲ್ಲ ವೇಳೆಯಲ್ಲೂ ಒಂದೇ ತೆರನಾಗಿ ಅಷ್ಟೇ ನೈಪುಣ್ಯದಿಂದ ಕಾರ್ಯಮಾಡಲು ಸಾಧ್ಯವಿಲ್ಲ.
=ಬಂಡವಾಳ
ಬದಲಾಯಿಸಿಉತ್ಪಾದನೆಯ ಮೂರನೆಯ ಅಂಗವಾದ ಬಂಡವಾಳ ಮೂಲಭೂತವಾಗಿ ಇದ್ದದ್ದಲ್ಲ. ಪ್ರಕೃತಿಯ (ಭೂಮಿ) ಶ್ರಮದ ಪ್ರಯೋಗದ ಫಲವಾಗಿ ಲಭಿಸಿದ ಉತ್ಪನ್ನವನ್ನು ಅನುಭೋಗಿಸದೆ ಅಷ್ಟನ್ನೂ, ಅಥವಾ ಅದರ ಒಂದು ಭಾಗವನ್ನು, ಉತ್ಪಾದನೆಯ ಕಾರ್ಯದಲ್ಲಿ ವಿನಿಯೋಗಿಸಿದ್ದೇ ಬಂಡವಾಳ.
ಸಾಮಾನ್ಯವಾಗಿ ಬಂಡವಾಳವೆಂದರೆ ಉದ್ಯಮದಲ್ಲಿ ಹೂಡಿದ ಹಣವೆಂಬ ಭಾವನೆಯಿದ್ದರೂ ಅರ್ಥಶಾಸ್ತ್ರ ದೃಷ್ಟಿಯಲ್ಲಿ ಹಣವೇ ಬಂಡವಾಳವಲ್ಲ. ಇದರಿಂದ ಕೊಂಡ ಯಂತ್ರ, ಸ್ಥಾವರ, ಉಪಕರಣ, ಕಚ್ಚಾ ಸಾಮಗ್ರಿ ಮುಂತಾದ ಎಲ್ಲವೂ ಬಂಡವಾಳ. ಬಂಡವಾಳವೆಂದರೆ ಉತ್ಪಾದನೆಗಾಗಿ ಉತ್ಪಾದಿಸಿದ ಸಾಧನ ಎಂಬುದು ಬಂಬಾವರ್ಕನ ವ್ಯಾಖ್ಯೆ. ಭೂಮಿ ನಿಸರ್ಗನಿಮಿತ್ತ; ಬಂಡವಾಳ ಮಾನವೋತ್ಪಾದಿತ ಉತ್ಪಾದೀ ಸಾಧನ.[೩]
ಸಂಘಟನೆ
ಬದಲಾಯಿಸಿಉತ್ಪಾದನೆಯ ಅಂಗಗಳಾದ ಭೂಮಿ, ಶ್ರಮ ಹಾಗೂ ಬಂಡವಾಳಗಳ ಜೊತೆಗೆ ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ ಸೇರಿಕೊಂಡ ಇನ್ನೊಂದು ಅಂಗವೇ ಸಂಘಟನೆ. ಸಂಘಟನೆಯೂ ಉತ್ಪಾದನೆಯ ಅಂಗವಾಗುವಷ್ಟು ಪ್ರಮುಖ್ಯವುಳ್ಳದ್ದೆಂದು ಮಾರ್ಷಲ್ ವಾದಿಸಿದ್ದಾನೆ. ಭೂಮಿ, ಶ್ರಮ ಹಾಗೂ ಬಂಡವಾಳಗಳು ತಮ್ಮಕ್ಕಷ್ಟೇ ತಾವೇ ಏನನ್ನೂ ಉತ್ಪಾದಿಸಲಾರವು. ಅವುಗಳನ್ನು ಸಂಘಟಿಸಿ ಉತ್ಪಾದನೆಗೆ ಸಹಾಯಕವಾಗುವ ರೀತಿಯಲ್ಲಿ ಚಾಲನೆಗೊಳಿಸುವುದೇ ಉದ್ಯಮಿಯ ಮುಖ್ಯ ಕರ್ತವ್ಯ. ಆತನ ಸಾಹಸ ನಿರ್ದೇಶನಗಳಿಲ್ಲದೆ ಉತ್ಪಾದನೆ ಚಲಿಸದು. ಉದ್ಯಮವನ್ನು ಯೋಜಿಸುವುದೇ ಅಲ್ಲದೆ ಅದನ್ನು ಆರಂಭಿಸಿ ನಡೆಸಿಕೊಂಡು ಹೋಗುವುದೂ; ಏನು, ಎಲ್ಲಿ ಹಾಗೂ ಎಷ್ಟು ಉತ್ಪಾದಿಸಬೇಕೆಂಬ ಮಹತ್ವದ ಆರ್ಥಿಕ ನಿರ್ಣಯ ತೆಗೆದುಕೊಳ್ಳುವುದೂ; ಇದಕ್ಕಾಗಿ ಉಳಿದ ಮೂರು ಉತ್ಪಾದನೆಯ ಸಾಧನೆಗಳನ್ನು ಒಂದೆಡೆ ಸೇರಿಸಿ ಅವುಗಳಿಗೆ ಯೋಗ್ಯ ಕಾರ್ಯಗಳನ್ನು ನಿಯೋಜಿಸಿ ಅವು ಮಾಡಿದ ಕೆಲಸಕ್ಕೆ ತಕ್ಕಂತೆ ಯೋಗ್ಯ ಸಂಭಾವನೆ ಕೊಡುವುದೂ; ಇವೆಲ್ಲದರ ಜೊತೆಗೆ ವ್ಯವಹಾರದಲ್ಲಿ ತಲೆದೂರಬಹುದಾದ ನಷ್ಟಸಂಭವಗಳನ್ನು ಧೈರ್ಯವಾಗಿ ಎದುರಿಸುವುದೂ ಉದ್ಯಮಿಯ ಚಾಲಕನ ವಿಶಿಷ್ಟ ಕಾರ್ಯಭಾರ. ಧೈರ್ಯಶಾಲಿ ವ್ಯವಹಾರ ಚತುರನೇ ಸಾಹಸಿ ಉದ್ಯಮಿ, ಚಾಲಕ. ಕಾಲಕಾಲಕ್ಕೆ ಲಭ್ಯವಾಗುವ ಸಂಶೋಧನೆಗಳನ್ನು ಉತ್ಪಾದನೆಯಲ್ಲಿ ಅಳವಡಿಸಿಕೊಂಡು ಉತ್ಪಾದನೆಯ ವೆಚ್ಚ ತಗ್ಗಿಸಿ ತನ್ನ ಲಾಭ ಹೆಚ್ಚಿಸಿ, ಉಳಿದ ಉತ್ಪಾದನಾಂಗಗಳೊಡನೆ ಸಹಕರಿಸಿ ಸಮರ್ಥ ಉತ್ಪಾದನೆಯನ್ನು ಕೈಕೊಳ್ಳುವವನೇ ನಿಜವಾದ ಉದ್ಯಮಿ.[೪]
ವಿಭಜನೆ
ಬದಲಾಯಿಸಿಉತ್ಪಾದನೆಯ ಕ್ಷೇತ್ರದಲ್ಲಿ ಉದ್ಯಮಿಯ ವಿಶಿಷ್ಟ ಸ್ಥಾನವನ್ನು ಕುರಿತು ಮಾರ್ಷಲ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಇಂದು ಬಹುತೇಕ ಅರ್ಥಶಾಸ್ತ್ರಜ್ಞರು ಒಪ್ಪಿದ್ದಾರಾದರೂ ಕೆಲವರು ಆ ರೀತಿ ಭಾವಿಸುವುದಿಲ್ಲ. ಸಂಘಟನೆಯೂ ಒಂದು ವಿಶಿಷ್ಟ ರೀತಿಯ ಶ್ರಮವೇ ಎಂಬುದು ಇವರ ಮತ. ಇವರಲ್ಲಿ ಕೆಲವರ ದೃಷ್ಟಿಯಲ್ಲಿ ಉತ್ಪಾದನೆಯ ಅಂಗಗಳು ಕೇವಲ ಎರಡು ಬಗೆ : ಒಂದು ಮಾನವೀಯ (ಶ್ರಮ, ಸಂಘಟನೆ); ಇನ್ನೊಂದು ಮಾನವೇತರ (ಭೂಮಿ, ಬಂಡವಾಳ). ಆದರೆ ಈ ಕುರಿತ ಸ್ಪಷ್ಟ ವಿಚಾರದೃಷ್ಟಿಯಿಂದ ಇವನ್ನು ನಿಷ್ಕøಷ್ಟವಾಗಿ ವಿಭಜಿಸುವುದು ಅವಶ್ಯ. ಭೂಮಿಗೂ ಬಂಡವಾಳಕ್ಕೂ ವ್ಯತ್ಯಾಸವಿರುವಂತೆಯೇ ಶ್ರಮಕ್ಕೂ ಸಂಘಟನೆಗೂ ವ್ಯತ್ಯಾಸವಿದ್ದೇ ಇದೆಯೆಂಬುದು ನಿರ್ವಿವಾದ. ಆದರೆ ಈ ಅಂಗಗಳ ಕೂಡುಗೆರೆಗಳ ಬಳಿ ಒಂದನ್ನಿನ್ನೊಂದರಿಂದ ಪ್ರತ್ಯೇಕಿಸಿ ತೋರಿಸುವುದೂ ಕಷ್ಟವೆಂಬುದು ನಿಜವೇ. ಕಾರ್ಮಿಕನನ್ನೂ ಉದ್ಯಮಿಯನ್ನೂ ಪ್ರತ್ಯೇಕವಾಗಿ ಪರಿಗಣಿಸುವುದು ಅನುಚಿತವೆಂದು ವಾದಿಸುವವರು ಇವರಿಬ್ಬರ ಕ್ರಿಯೆಗಳಿಗೂ ಇರುವ ಮೂಲಲಕ್ಷಣಗಳ ಕಡೆಗೆ ಬೆರಳು ತೋರಿಸುತ್ತಾರೆ. ಈ ಎಲ್ಲ ಬಗೆಯ ಮಾನವೀಯ ಶ್ರಮದ ಹಿಂದೆಯೂ ಸಂಘಟನೆ ಇದ್ದೇ ಇದೆಯೆಂಬುದು ಅವರ ವಾದ. ಉದ್ಯಮಿಯ ಕಾರ್ಯದಲ್ಲಿ ಇದರ ಭಾಗ ಹೆಚ್ಚಿರಬಹುದು, ಅಷ್ಟೇ. ಶ್ರಮ, ಸಂಘಟನೆಗಳೆರಡೂ ಪ್ರತ್ಯೇಕಾಂಗಗಳೆಂದು ವಾದಿಸುವವರು ಈ ಅಂಶವನ್ನೇ ಪ್ರಧಾನವಾಗಿ ಪರಿಗಣಿಸುತ್ತಾರೆ. ಕಾರ್ಮಿಕನ ವಿಚಾರದಲ್ಲಿ ಶ್ರಮದ ಭಾಗ ಹೆಚ್ಚು; ಸಂಘಟನೆಯ ಭಾಗ ಇಲ್ಲವೆನ್ನುವಷ್ಟು ಅಲ್ಪ. ಉದ್ಯಮಿಯ ಕಾರ್ಯದಲ್ಲಿ ಸಂಘಟನೆಯ ಅಂಶವೇ ಅಧಿಕ. ಅದೇ ಎಲ್ಲವೂ ಎಂದರೂ ಸಂದೀತು. ಕಾರ್ಮಿಕ ತನ್ನ ದುಡಿಮೆಯನ್ನಷ್ಟೇ ಸಂಘಟಿಸುತ್ತಾನೆ. ಉದ್ಯಮಿ ಇತರರ ಕೆಲಸವನ್ನು ಸಂಘಟಿಸುತ್ತಾನೆ. ಉದ್ಯಮದ ಬಗ್ಗೆ ಎಲ್ಲ ಹೊಣೆಗಾರಿಕೆಯೂ ಆತನದು; ತೀರ್ಮಾನ ಕೈಕೊಳ್ಳುವವನೂ ಅದನ್ನು ಕಾರ್ಯರೂಪಕ್ಕೆ ತರುವವನೂ ಆತನೇ. ಉದ್ಯಮಿಯ ದೃಷ್ಟಿಯಲ್ಲಿ ಉಳಿದ ಮೂರು ಅಂಗಗಳೂ ಅವನ ವಶದಲ್ಲಿರುವ ಉತ್ಪಾದನ ಸಾಧನಗಳು. ಆತ ಸ್ವಲ್ಪಮಟ್ಟಿಗೆ ಅವುಗಳಲ್ಲಿ ಒಂದನ್ನು ಇನ್ನೊಂದರ ಬದಲು ಬಳಸಬಲ್ಲ. ಆದರೆ ಈ ಮೂರು ಅಂಗಗಳಲ್ಲಿ ಯಾವುದನ್ನೂ ಉದ್ಯಮಿಯ ಬದಲು ಬಳಸಲಾಗುವುದಿಲ್ಲ.[೫]
ಭೂಮಿ, ಶ್ರಮ ಹಾಗೂ ಬಂಡವಾಳಗಳನ್ನು ನಿರ್ದಿಷ್ಟ ಹಾಗೂ ಅನಿರ್ದಿಷ್ಟ ಅಂಗಗಳೆಂದೂ ವಿಂಗಡಿಸಬಹುದು. ಇವುಗಳ ಪರಸ್ಪರ ಸಾಮ್ಯದ ಪ್ರಾಮುಖ್ಯವನ್ನು ಈ ವಿಧಾನ ಒತ್ತಿ ಹೇಳುತ್ತದೆ. ಅಲ್ಲದೆ ಸಂಘಟನೆ ಇದರಿಂದ ಭಿನ್ನವಾದದ್ದು. ಒಂದೇ ಬಗೆಯಲ್ಲಿ ನಿಯೋಜಿಸಬಹುದಾದ ಅಂಗಗಳು ನಿರ್ದಿಷ್ಟ ಅಂಗಗಳು; ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಬದಲಾಯಿಸಬಹುದಾದವು ಅನಿರ್ದಿಷ್ಟವೆನಿಸಿಕೊಳ್ಳುತ್ತವೆ. ಒಂದು ಬಗೆಯ ಬಂಡವಾಳದ ಬದಲು ಒಂದು ಬಗೆಯ ಶ್ರಮವನ್ನು ಬಳಸುವುದು ಸಾಧ್ಯ. ಆದರೆ ಒಂದು ಬಗೆಯ ಶ್ರಮದ ಬದಲು ಇನ್ನೊಂದು ಬಗೆಯ ಶ್ರಮವನ್ನಾಗಲಿ, ಒಂದು ಬಗೆಯ ಬಂಡವಾಳದ ಬದಲು ಇನ್ನೊಂದು ಬಗೆಯ ಬಂಡವಾಳವನ್ನಾಗಲಿ ಬಳಸುವುದು ಸಾಧ್ಯವಾಗಲಾರದು. ಇಂಥ ಪ್ರತಿ ನಿಧಾನದ ಬಗ್ಗೆ ತೀರ್ಮಾನ ಕೈಕೊಳ್ಳುವುದು ಉದ್ಯಮಿಯ ಕೆಲಸ.
ಉಲ್ಲೇಖಗಳು
ಬದಲಾಯಿಸಿ- ↑ https://www.stlouisfed.org/education/economic-lowdown-podcast-series/episode-2-factors-of-production
- ↑ "ಆರ್ಕೈವ್ ನಕಲು". Archived from the original on 2020-01-12. Retrieved 2020-01-12.
- ↑ "ಆರ್ಕೈವ್ ನಕಲು". Archived from the original on 2020-01-12. Retrieved 2020-01-12.
- ↑ https://www.intelligenteconomist.com/factors-of-production/
- ↑ https://www.economicsonline.co.uk/Definitions/Factors_of_production.html