ಸಂಘಟನೆ
ಸಂಘಟನೆ ಎಂದರೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಹಲವರು ಕೂಡಿ ರೂಪಿಸಿಕೊಳ್ಳುವ ವ್ಯವಸ್ಥೆ (ಆರ್ಗನೈಸೇಷನ್). ಇತಿಹಾಸಕಾಲದಿಂದಲೂ ಮಾನವ ಸಂಘ ಜೀವಿಯಾಗಿದ್ದು; ಒಂದಲ್ಲ ಒಂದು ಬಗೆಯ ಸಂಘಟನೆಯನ್ನು ಹೊಂದಿರುವುದು ಕಂಡುಬರುತ್ತದೆ. ಸಂಘಟನೆ ಆಡಳಿತಕ್ಕಿಂತಲೂ ಮೊದಲಿನದು. ಇದು ಆಡಳಿತದ ಪ್ರಮುಖ ಮತ್ತು ಅತ್ಯವಶ್ಯಕ ಅಂಶವಾಗಿದೆ. ಇದು ಅಂತಿಮವಾದುದಲ್ಲ, ಗುರಿಯನ್ನು ಸಾಧಿಸುವ ಒಂದು ಸಾಧನ. ರಚನಾತ್ಮಕ ಸಂಬಂಧ ಏರ್ಪಡಿಸಲು ಕಾರ್ಯ ಮತ್ತು ವ್ಯಕ್ತಿಗಳ ಪರಸ್ಪರ ಸಂಬಂಧವನ್ನು ಇದು ಬೇಡುತ್ತದೆ.
ರಚನೆ, ಗಾತ್ರ ಮತ್ತು ಧ್ಯೇಯೋದ್ದೇಶಗಳನ್ನು ಅವಲಂಬಿಸಿ ಇದು ಅನೇಕ ರೀತಿಗಳಲ್ಲಿ ಕಂಡುಬರಬಹುದು. ಎರಡು ತೆರನಾದ ಸಂಘಟನೆ ಗಳನ್ನು ಗುರುತಿಸಬಹುದು. ಔಪಚಾರಿಕ ಸಂಘಟನೆ: ಉದ್ದೇಶ ಪೂರ್ವಕವಾಗಿ ಯೋಜಿಸಿದ ಹಾಗೂ ಅರ್ಹ ಅಧಿಕಾರಸ್ಥಾನದಿಂದ ಮಂಜೂರು ಮಾಡಲ್ಪಟ್ಟ ಸಂಘಟನೆ. ಇದು ಅಧಿಕೃತವಾಗಿದ್ದು, ನಿಯಮ ಬದ್ಧ ವಿಧಾನಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಅನೌಪಚಾರಿಕ ಸಂಘಟನೆ: ನೌಕರರ ವೈಯಕ್ತಿಕ ಮತ್ತು ಗುಂಪುಗಳ ಪರಸ್ಪರ ಸಂಬಂಧಗಳನ್ನು ಅವಲಂಬಿಸಿದೆ. ಇಲ್ಲಿ ನೌಕರರ ನಡವಳಿಕೆ ಯನ್ನು ಅಭ್ಯಸಿಸಲಾಗುತ್ತದೆ.
ಸಂಘಟನೆಯ ಆಧಾರ ತತ್ತ್ವಗಳು
ಬದಲಾಯಿಸಿಸಂಘಟನೆಯನ್ನು ರೂಪಿಸುವಾಗ ಕೆಲವು ತತ್ತ್ವಗಳನ್ನು ಅವಶ್ಯವಾಗಿ ಪಾಲಿಸಬೇಕಾಗುತ್ತದೆ.
ಕಾರ್ಯ ಅಥವಾ ಉದ್ದೇಶ ತತ್ತ್ವ: ಕಾರ್ಯವೆಂದರೆ ಒಂದು ಮುಖ್ಯವಾದ ಉದ್ದೇಶವನ್ನು ಸಾಧಿಸುವುದು ಎಂದರ್ಥ. ಒಂದು ನಿರ್ದಿಷ್ಟ ಉದ್ದೇಶವನ್ನು ಸಾಧಿಸುವುದಕ್ಕೋಸ್ಕರ ಇಲಾಖೆಯನ್ನು ಸ್ಥಾಪಿಸಿದರೆ ಅದು ಉದ್ದೇಶ ತತ್ತ್ವದ ಮೇಲೆ ಸ್ಥಾಪಿಸಲ್ಪಟ್ಟ ಇಲಾಖೆಯಾಗುವುದು. ಸರ್ಕಾರದ ಎಲ್ಲ ಇಲಾಖೆಗಳು ಅವು ನಿರ್ವಹಿಸುವ ಕಾರ್ಯಗಳ ಆಧಾರದ ಮೇಲೆ ಸ್ಥಾಪಿತವಾಗುತ್ತವೆ. ಉದಾಹರಣೆಗೆ ಶಿಕ್ಷಣ ಕೊಡುವುದು ಶಿಕ್ಷಣ ಇಲಾಖೆ, ಆರೋಗ್ಯ ಕಾಪಾಡುವುದು ಆರೋಗ್ಯ ಇಲಾಖೆ.
ಉದ್ದೇಶ ತತ್ತ್ವದ ಗುಣಗಳು: ಈ ತತ್ತ್ವದ ಮೇಲೆ ಇಲಾಖೆಗಳನ್ನು ಸ್ಥಾಪಿಸುವುದರಿಂದ ಇಲಾಖೆಯ ವ್ಯಕ್ತಿಗಳು ಆ ಕಾರ್ಯದಲ್ಲಿ ಕೌಶಲ ಪಡೆದಿರುವುದರಿಂದ ಕಾರ್ಯದಲ್ಲಿ ದಕ್ಷತೆ ಸಾಧ್ಯವಾಗುತ್ತದೆ; ಒಂದು ಇಲಾಖೆ ಒಂದು ನಿರ್ದಿಷ್ಟ ಕಾರ್ಯಮಾಡುವುದರಿಂದ ಕೆಲಸದ ಪುನರಾವರ್ತನೆಗೆ ಅವಕಾಶವಿರುವುದಿಲ್ಲ; ವೇಳೆ, ಹಣ ಹಾಗೂ ಶ್ರಮದ ಅಪವ್ಯಯವಾಗುವುದಿಲ್ಲ; ಜವಾಬ್ದಾರಿಯನ್ನು ಸುಲಭವಾಗಿ ಗುರುತಿಸಬಹುದು; ಆಡಳಿತ ಸುಲಭವಾಗುತ್ತದೆ.
ಕಕ್ಷೀದಾರ ತತ್ತ್ವ: ಕಕ್ಷೀದಾರರು ಎಂದರೆ ಸೇವೆಯನ್ನು ಪಡೆಯುವ ಜನ. ಸಮಾಜದ ವಿಭಿನ್ನ ವರ್ಗದ ಜನರಿಗೆ ತಮ್ಮದೇ ಆದ ಸಮಸ್ಯೆಗಳಿರುತ್ತವೆ. ಆಧುನಿಕ ಕಲ್ಯಾಣ ರಾಷ್ಟ್ರ ಆಯಾ ವರ್ಗದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಅನುಗುಣವಾಗಿ ಇಲಾಖೆಗಳನ್ನು ಸ್ಥಾಪಿಸುತ್ತದೆ. ಹೀಗೆ ಜನತೆಯ ಸೇವೆಯನ್ನು ಗಮನದಲ್ಲಿಟ್ಟುಕೊಂಡು ರಚಿತವಾದ ಸಂಘಟನೆ ಕಕ್ಷೀದಾರ ತತ್ತ್ವದ ಮೇಲೆ ರಚಿತವಾದ ಸಂಘಟನೆ ಎನಿಸಿಕೊಳ್ಳುತ್ತದೆ. ಉದಾಹರಣೆಗೆ: ಮಕ್ಕಳ ಕಲ್ಯಾಣ ಇಲಾಖೆ, ಆದಿವಾಸಿ ಕಲ್ಯಾಣ ಇಲಾಖೆ ಇತ್ಯಾದಿ. ಕೆಲವೊಮ್ಮೆ ವ್ಯಕ್ತಿಗಳ ಬದಲಾಗಿ ವಸ್ತುಗಳನ್ನು ಆಧರಿಸಿ ಇಲಾಖೆಯನ್ನು ಸ್ಥಾಪಿಸಲಾಗುತ್ತದೆ. ಉದಾಹರಣೆಗೆ: ಆಹಾರ ಇಲಾಖೆ, ಉಕ್ಕು ಇಲಾಖೆ, ಪೆಟ್ರೋಲಿಯಂ ಇಲಾಖೆ ಇತ್ಯಾದಿ.
ಗುಣಗಳು: ಇದು ಇಲಾಖೆಗೂ ಮತ್ತು ಕಕ್ಷೀದಾರರಿಗೂ ಇರುವ ಸಂಬಂಧವನ್ನು ಸರಳಗೊಳಿಸುತ್ತದೆ; ಈ ಇಲಾಖೆ ಹಲವಾರು ಕಾರ್ಯಮಾಡುವುದರಿಂದ ಸಂಯೋಜನೆಯನ್ನು ಕಾಣಬಹುದು; ಇದು ಆಯಾ ವರ್ಗದ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕ; ಇದರ ಲಾಭ ಪಡೆಯುವ ವರ್ಗ ಪ್ರಭಾವಿ ಗುಂಪುಗಳಾಗಿ ಬೆಳೆಯಬಹುದು; ಇದು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿದೆ.
ಪ್ರಾದೇಶಿಕ ಅಥವಾ ಭೌಗೋಳಿಕ ತತ್ತ್ವ: ಒಂದು ಇಲಾಖೆಯನ್ನು ಸ್ಥಾಪಿಸುವಾಗ ಭೂ ಪ್ರದೇಶವನ್ನು ಆಧಾರವಾಗಿಟ್ಟುಕೊಂಡು ಸ್ಥಾಪಿಸಿದರೆ ಆದನ್ನು ಭೂ ಪ್ರದೇಶದ ಆಧಾರದ ಮೇಲೆ ಸ್ಥಾಪಿಸಲ್ಪಟ್ಟ ಸಂಘಟನೆ ಎಂದು ಕರೆಯಲಾಗುವುದು. ಈ ರೀತಿಯ ಸಂಘಟನೆಗೆ ಭೂ ಪ್ರದೇಶವೇ ಮೂಲಾಧಾರವಾಗಿರುತ್ತದೆ. ಅಂದರೆ ಕಾರ್ಯನಿರ್ವಹಿಸುವ ಸ್ಥಳ, ಇಲಾಖಾ ಸ್ಥಾಪನೆಗೆ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ಎಲ್ಲ ದೇಶಗಳ ವಿದೇಶಾಂಗ ವ್ಯವಹಾರಗಳ ಇಲಾಖೆ ಈ ತತ್ತ್ವದ ಮೇಲೆ ಸ್ಥಾಪಿತವಾಗಿ ರುತ್ತದೆ. ಕೆಲವೊಮ್ಮೆ ಕೆಲವು ಪ್ರದೇಶಗಳ ಸಮಸ್ಯೆಗಳ ನಿವಾರಣೆಗಾಗಿ ಇಲಾಖೆಯನ್ನು ಸ್ಥಾಪಿಸಲಾಗುತ್ತದೆ. ಉದಾಹರಣೆಗೆ: ದಾಮೋದರ್ ಕಣಿವೆ ಕಾರ್ಪೊರೇಷನ್, ಈಶಾನ್ಯ ಗಡಿನಾಡು ಅಭಿವೃದ್ಧಿ ಇಲಾಖೆ ಇತ್ಯಾದಿ. ಕೆಲವೊಮ್ಮೆ ರಾಷ್ಟ್ರವನ್ನು ಕೆಲವು ವಲಯಗಳಾಗಿ ವಿಂಗಡಿಸಿ ಇಲಾಖೆಗಳನ್ನು ಸ್ಥಾಪಿಸಲಾಗುತ್ತದೆ. ಉದಾಹರಣೆಗೆ: ಭಾರತದ ರೈಲ್ವೆ ಆಡಳಿತವನ್ನು ಈಶಾನ್ಯ, ಆಗ್ನೇಯ, ಉತ್ತರ, ಪಶ್ಚಿಮ ಮತ್ತು ಕೇಂದ್ರ ವಲಯಗಳೆಂದು ವಿಂಗಡಿಸಲಾಗಿದೆ.
ಗುಣಗಳು: ಆಯಾ ಪ್ರದೇಶಕ್ಕೆ ತಕ್ಕಂತೆ ಧೋರಣೆಗಳನ್ನು ರೂಪಿಸಿ ಕಾರ್ಯಗತಗೊಳಿಸಬಹುದು; ಬೃಹತ್ ರಾಷ್ಟ್ರಗಳಲ್ಲಿ ಆಡಳಿತ ಸುಲಭ ಸಾಧ್ಯವಾಗುತ್ತದೆ; ಆಯಾ ಪ್ರದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ; ಇದು ಸಿಬ್ಬಂದಿಗಳಲ್ಲಿ ನಿಯಂತ್ರಣ ಮತ್ತು ಸಂಯೋಜನೆಯನ್ನು ಸಾಧಿಸುತ್ತದೆ; ಇದರಿಂದ ದಕ್ಷ ಆಡಳಿತ ನೀಡಲು ಸಾಧ್ಯವಾಗುತ್ತದೆ.
ಕೌಶಲ ಅಥವಾ ವಿಧಾನ ತತ್ತ್ವ (ಪ್ರೊಸೆಸ್ ಪ್ರಿನ್ಸಿಪಲ್): ಕಾರ್ಯ ವಿಧಾನವೆಂದರೆ ಕೌಶಲ, ಕಾರ್ಯಪರಿಣತಿ ಹಾಗೂ ನೈಪುಣ್ಯ ಎಂದರ್ಥ. ಯಾವುದೇ ಒಂದು ಕಾರ್ಯವನ್ನು ಮಾಡಲು ಕುಶಲತೆ ಅಥವಾ ನೈಪುಣ್ಯ ಬೇಕಾದಾಗ ಅದನ್ನೇ ಆಧಾರವಾಗಿ ಇಟ್ಟುಕೊಂಡು ಇಲಾಖೆಯನ್ನು ಸ್ಥಾಪಿಸಿದರೆ ಅದನ್ನು ಕೌಶಲ ತತ್ತ್ವದ ಆಧಾರದ ಮೇಲೆ ಸ್ಥಾಪಿಸಲ್ಪಟ್ಟ ಇಲಾಖೆ ಎನ್ನುವರು. ಈ ತತ್ತ್ವದ ಮೇಲೆ ಸ್ಥಾಪಿಸಲ್ಪಟ್ಟ ಇಲಾಖೆಗಳು ತಾಂತ್ರಿಕತೆಯನ್ನು ಅಂದರೆ ವಿಶೇಷ ಕಾರ್ಯ ಕೌಶಲವನ್ನು ಹೊಂದಿದ ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ. ಹೀಗೆ ನಿರ್ದಿಷ್ಟ ಕೌಶಲ ಅಥವಾ ಕಾರ್ಯವಿಧಾನವನ್ನು ಆಧಾರವಾಗಿ ಇಟ್ಟುಕೊಂಡು ಇಲಾಖೆಗಳನ್ನು ಸ್ಥಾಪಿಸಲಾಗುತ್ತದೆ. ಉದಾಹರಣೆಗೆ: ಕಾನೂನು ಇಲಾಖೆ, ಎಂಜಿನಿಯರಿಂಗ್ ಇಲಾಖೆ, ಲೆಕ್ಕಪತ್ರ ಇಲಾಖೆ ಇತ್ಯಾದಿ.
ಗುಣಗಳು: ಈ ಸಂಘಟನೆಯಲ್ಲಿ ವಿಶೇಷ ಜ್ಞಾನದ ಅಧಿಕ ಬಳಕೆಯಾ ಗುತ್ತದೆ; ಆಡಳಿತದಲ್ಲಿ ಮಿತವ್ಯಯವನ್ನು ಸಾಧಿಸಬಹುದು; ಈ ಪದ್ಧತಿ ಯಿಂದ ಕೆಲಸದಲ್ಲಿ ಏಕತೆ ಮತ್ತು ಸಂಯೋಜನೆ ಸಾಧ್ಯವಾಗುತ್ತದೆ; ಇದು ಸೇವಾ ಸಿಬ್ಬಂದಿ ವರ್ಗಕ್ಕೆ ಹೆಚ್ಚು ಅನುಕೂಲಕರವಾಗಿದೆ; ಈ ಪದ್ಧತಿ ಯಲ್ಲಿ ಘಟಕದ ಆಯವ್ಯಯವನ್ನು ಸುಲಭವಾಗಿ ಗುರುತಿಸಬಹುದು.
ಈ ಎಲ್ಲ ತತ್ತ್ವಗಳನ್ನೂ ಸಂಯೋಜಿಸಿ ಅಳವಡಿಸಿಕೊಂಡಾಗ ಒಂದು ಸಂಘಟನೆ ಯಶಸ್ವಿಯಾಗುತ್ತದೆ.
ಸರ್ಕಾರೇತರ ಸಂಘಟನೆಗಳೂ ತಮ್ಮ ಉದ್ದೇಶ ಈಡೇರಿಕೆಗಾಗಿ ಸ್ಥಾಪಿತವಾಗಬಹುದು. ಇದಕ್ಕಾಗಿ ಸರ್ಕಾರಗಳು ಕೆಲವು ನಿಯಮಾವಳಿಗಳನ್ನೂ ರಚಿಸಿವೆ.
ಉಲ್ಲೇಖಗಳು
ಬದಲಾಯಿಸಿ- Coase, Ronald (1937). "The Nature of the Firm" Economica, 4(16), pp. 386–405.
- Handy, Charles (1990). Inside Organizations: 21 Ideas for Managers. London: BBC Books. ISBN 978-0-563-20830-3.
- Handy, Charles (2005). Understanding Organizations (4th ed.). London: Penguin Books. ISBN 978-0-14-015603-4.
- Hewlett, Roderic. (2006). The Cognitive leader. Rowman & Littlefield Pub Inc.
- Johnson, Richard Arvid (1976). Management, systems, and society : an introduction. Pacific Palisades, Calif.: Goodyear Pub. Co. ISBN 0-87620-540-6. OCLC 2299496.
- Katz, Daniel; Kahn, Robert Louis (1966). The social psychology of organizations. New York: Wiley. OCLC 255184.
- March, James G.; Simon, Herbert A. (1958). Organizations. New York: Wiley. ISBN 0-471-56793-0. OCLC 1329335.
- Marshak, Thomas (1987). "organization theory," The New Palgrave: A Dictionary of Economics, v. 3, pp. 757–60.
- Mintzberg, Henry (1981). "Organization Design: Fashion or Fit" Harvard Business Review (January February)
- Morgenstern, Julie (1998). Organizing from the Inside Out. Owl Books ISBN 0-8050-5649-1
- Peter, Laurence J. and Raymond Hull. The Peter Principle Pan Books 1970 ISBN 0-330-02519-8
- Rogers, Carl R.; Roethlisberger, Fritz Jules (1990). Barriers and gateways to communication. Boston, Mass.: Harvard Business Review. OCLC 154085959.
- Samson, D., Daft, R. (2005). Management: second Pacific Rim edition. Melbourne, Victoria: Thomson
- Satir, Virginia (1967). Conjoint family therapy; a guide to theory and technique. Palo Alto, Calif: Science and Behavior Books. OCLC 187068.
- Scott, William Richard (2008). Institutions and Organizations (3rd ed.). London: Sage Publications Ltd. ISBN 978-1-4129-5090-9.