ಉತ್ಪಾದಕತೆ: ಈ ಶಬ್ದವನ್ನು (ಪ್ರೊಡಕ್ಟಿವಿಟಿ) ಮುಖ್ಯವಾಗಿ ಮೂರು ಅರ್ಥಗಳಲ್ಲಿ ಬಳಸಲಾಗಿದೆ:
ಒಂದು ಗೊತ್ತಾದ ಕಾಲಾವಧಿಯಲ್ಲಿ ಉತ್ಪಾದನಾಂಗವೊಂದರಿಂದ ಆದ ಉತ್ಪಾದನೆಯ ಮೊತ್ತ
ಉತ್ಪಾದೀಸಾಧನಗಳ ಬಳಕೆಯ ಸಮರ್ಥತೆ
ಒಂದು ಗೊತ್ತಾದಕಾಲಾವಧಿಯಲ್ಲಿ ಉತ್ಪಾದನೆಗಾಗಿ ಬಳಸಲಾದ ಭೌತ ಸಾಧನಗಳಿಗೂ ಉತ್ಪನ್ನ ಘಟಕಗಳಿಗೂ ಇರುವ ಸಂಬಂಧ, ಶ್ರಮಕ್ಕೆ (ಲೇಬರ್) ಸಂಬಂಧಿಸಿದಂತೆ ಸಾಮಾನ್ಯವಾಗಿ ಈ ಶಬ್ದ ಹೆಚ್ಚು ಬಳಕೆಯಲ್ಲಿದೆ.

ಹಿನ್ನೆಲೆಸಂಪಾದಿಸಿ

ಭೂಮಿ, ಶ್ರಮ, ಬಂಡವಾಳ ಮತ್ತು ಸಂಘಟನೆ ಇವು ಉತ್ಪಾದನೆಯ ಅಂಗಗಳು. ಒಂದು ದೇಶದ ಉತ್ಪನ್ನಕ್ಕೆ ಈ ಉತ್ಪಾದನಾಂಗಗಳ ಉತ್ಪಾದನ ಶಕ್ತಿಯೇ ಆಧಾರ. ಭೂಮಿಯ ಉತ್ಪಾದಕತೆಗೆ ಮಣ್ಣಿನ ಗುಣ, ಯಂತ್ರೋಪಕರಣಗಳ ಉಪಯೋಗ, ರಾಸಾಯನಿಕ ಗೊಬ್ಬರ, ಉತ್ತಮ ಬೀಜ ಮತ್ತು ಸಾಲದ ಪೂರೈಕೆ, ತಾಂತ್ರಿಕ ನೆರವು-ಮೊದಲಾದವು ಮುಖ್ಯ. ಸರಿಯಾದ ಪ್ರಮಾಣದಲ್ಲಿ ಈ ವಸ್ತುಗಳ ಪೂರೈಕೆಯಾಗದಿದ್ದರೆ ಭೂಮಿಯ ಉತ್ಪಾದಕತೆ ಕಡಿಮೆಯಾಗುತ್ತದೆ. ಕಾರ್ಮಿಕರ ಉತ್ಪಾದನೆಯ ಕಾರ್ಯಕ್ಷಮತೆಗೆ ಅವರು ಸೇವಿಸುವ ದೈನಂದಿನ ಆಹಾರ, ಕೂಲಿಯ ಪ್ರಮಾಣ, ದುಡಿತದ ಅವಧಿ, ವಿಶ್ರಾಂತಿ, ಯಂತ್ರಸಾಮಗ್ರಿಯ ಗುಣ, ಕಾರ್ಖಾನೆಯ ವಾತಾವರಣ, ಮಾಲೀಕ-ಕಾರ್ಮಿಕ ಸಂಬಂಧ ಮೊದಲಾದುವು ನೇರಸಂಬಂಧ ಹೊಂದಿವೆ. ಬಂಡವಾಳದ ಗಾತ್ರ ಹಾಗೂ ಗುಣಗಳು ಒಂದು ಉದ್ಯಮದ ಉತ್ಪಾದನೆಯ ಮೊತ್ತ ನಿರ್ಧಾರಕ. ಆಧುನಿಕ ಉಪಕರಣಗಳ ಸಂಗ್ರಹ ಹೆಚ್ಚಿದಾಗ ಉತ್ಪಾದನೆಯ ಮಟ್ಟ ಹೆಚ್ಚಬಹುದು. ಈ ಮೂರು ಉತ್ಪಾದನಾಂಗಗಳನ್ನೂ ಸರಿಯಾದ ಪ್ರಮಾಣದಲ್ಲಿ ಸಂಘಟಿಸಿ ಉತ್ಪಾದಕತೆ ಯನ್ನು ಹೆಚ್ಚಿಸಲು ಉದ್ಯಮಿಗಳು ಯಾವಾಗಲೂ ಪ್ರಯತ್ನಿಸುತ್ತಾರೆ.[೧]

ಶ್ರಮ ಮತ್ತು ಉತ್ಪಾದಕತೆಸಂಪಾದಿಸಿ

18ನೆಯ ಶತಮಾನದ ಫ್ರೆಂಚ್ ಅರ್ಥಶಾಸ್ತ್ರಜ್ಞರೂ ಆಡಮ್ ಸ್ಮಿತ್, ರಿಕಾರ್ಡೋ ಮುಂತಾದವರೂ ಕೃಷಿ ಕ್ಷೇತ್ರದಲ್ಲಿ ದುಡಿಯುವವರು ಮಾತ್ರ ಉತ್ಪಾದೀಶ್ರಮಿಗಳೆಂದೂ ಉಳಿದವರು ಅನುತ್ಪಾದಿಗಳೆಂದೂ ಭಾವಿಸಿದ್ದರು. (ನೋಡಿ-ಉತ್ಪಾದೀ-ಶ್ರಮ) ಈಗ ಈ ತೆರದ ಅಂತರವಿಲ್ಲ. ಬೇಡಿಕೆಯನ್ನು ಪುರೈಸುವ ದೃಷ್ಟಿಯಿಂದ ವಿನಿಯೋಗಿಸಿದ ಎಲ್ಲ ತೆರದ ಶ್ರಮವೂ ಉತ್ಪಾದಿಯೆ.

ಉತ್ಪಾದನಾಂಗಗಳ ಬೇಡಿಕೆಯ ಪ್ರಮಾಣ ಆಯಾ ಅಂಗಗಳ ಉತ್ಪಾದಕತೆಯನ್ನ ವಲಂಬಿಸಿದೆ. ಶ್ರಮದ ಉತ್ಪಾದಕತೆಗಿಂತ ಬಂಡವಾಳದ ಉತ್ಪಾದಕತೆ ಹೆಚ್ಚಿದ್ದಾಗ, ಉದ್ಯಮಿಗಳು ಹೆಚ್ಚು ಲಾಭ ದೃಷ್ಟಿಯಿಂದ ಬಂಡವಾಳದ ಪ್ರಮಾಣ ಹೆಚ್ಚಿಸಬಹುದು. ಉತ್ಪಾದನಾಂಗಗಳ ಬೆಲೆಗಳನ್ನು ನಿರ್ಧರಿಸುವಾಗ ಅವುಗಳ ಉತ್ಪಾದಕತೆಯನ್ನು ಕಂಡುಹಿಡಿಯಬೇಕಾಗುತ್ತದೆ. ಕಾರ್ಮಿಕರ ಕೂಲಿಯ ಪ್ರಮಾಣ ಅವರ ಉತ್ಪಾದಕತೆಯನ್ನೂ ನಿರ್ಣಯಿಸಬಲ್ಲುದು. ಉತ್ಪಾದಕತೆ ಮತ್ತು ವೇತನ ಪ್ರಮಾಣಗಳಿಗೆ ನಿಕಟ ಸಂಬಂಧ ಉಂಟು. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಲ್ಲಿ ಕಡಿಮೆ ಕೂಲಿಯ ಪ್ರಮಾಣ ಕಡಿಮೆ ಉತ್ಪಾದಕತೆಯ ಪರಿಣಾಮ ದಿಂದಿರಬಹುದು, ಇಲ್ಲವೆ ಅದು ಕಡಿಮೆ ಪ್ರಮಾಣದ ಉತ್ಪಾದಕತೆಗೆ ಕಾರಣವೂ ಆಗಿರಬಹುದು. ಉತ್ಪಾದನೆಯ ನಾನಾ ಅಂಗಗಳ ಸೇವೆಗಳನ್ನು ಕೊಳ್ಳುವ ಉದ್ಯಮಿಯ ಗುರಿ ಲಾಭವಾದ್ದರಿಂದ ಆತ ಅವಕ್ಕೆ ಉಚಿತವಾದ ಬೆಲೆಯನ್ನಷ್ಟೇ ಕೊಡಲು ಸಿದ್ಧನಾಗಿರುತ್ತಾನೆ. ಒಂದು ಉತ್ಪಾದ ನಾಂಗದ ಅಂಚಿನ ಘಟಕದ (ಕೊನೆಯ ಘಟಕದ) ಉತ್ಪಾದಕತೆ ಎಷ್ಟೊ ಅದಕ್ಕಿಂತ ಹೆಚ್ಚಾಗಿ ಆತ ಕೊಡುವುದಿಲ್ಲ. ಆದ್ದರಿಂದ ಆಯಾ ಅಂಗಗಳ ಅಂಚಿನ ಘಟಕಗಳ ಉತ್ಪಾದ ಕತೆಯ ಮೌಲ್ಯವೇ ಆಯಾ ಅಂಗಗಳ ಬೆಲೆಯೆನ್ನಬಹುದು. ವಾನ್ ಥ್ಯುನೆನ್, ವಿಕ್ಟಿಸ್ಪೀಡ್, ಹಿಕ್ಸ್‌ ಮೊದಲಾದ ಅರ್ಥಶಾಸ್ತ್ರಜ್ಞರು ಈ ಅಂಚಿನ ಉತ್ಪಾದಕತೆಯ ಸೂತ್ರವನ್ನು ಪ್ರತಿಪಾದಿಸಿ ದ್ದಾರೆ. ಚೇಂಬರಲಿನ್ ಮತ್ತು ಜೋನ್ ರಾಬಿನ್ಸನ್ನರ ಪ್ರಕಾರ ಉತ್ಪಾದನಾಂಗದ ಬೆಲೆ, ಅಂಚಿನ ಉತ್ಪನ್ನದಿಂದ ಒಟ್ಟು ಉತ್ಪನ್ನದ ಮಾರಾಟದ ಹುಟ್ಟುವಳಿಯಲ್ಲಾಗುವ ಹೆಚ್ಚಳಕ್ಕೆ ಸಮನಾಗಿರುತ್ತದೆ. ಒಂದು ಉತ್ಪಾದನಾಂಗದ ಉತ್ಪಾದಕತೆಯನ್ನು ನಿರ್ಣಯಿಸುವಾಗ ಸಹಾಯಕ ಅಂಗಗಳ ಪ್ರಮಾಣವನ್ನು ಸ್ಥಿರವಾಗಿಟ್ಟುಕೊಳ್ಳಬೇಕು. ಆ ಅಂಗದ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಆದಾಗ ಒಟ್ಟು ಉತ್ಪಾದನೆಯೂ ಹೆಚ್ಚೋ ಕಡಿಮೆಯೋ ಆಗುತ್ತದೆ. ಅಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಉತ್ಪಾದನಾಂಗದ ಬೆಲೆ ಅದರ ಅಂಚಿನ ಉತ್ಪಾದನೆಯ ಮೌಲ್ಯಕ್ಕಿಂತ ಕಡಿಮೆ ಇರುತ್ತದೆ. ಉತ್ಪಾದನಾಂಗಗಳಲ್ಲೊಂದಾದ ಶ್ರಮದ ಅಂಚಿನ ಉತ್ಪಾದಕತೆಗೆ ಅನುಗುಣವಾಗಿ ಕಾರ್ಮಿಕರಿಗೆ ಕೂಲಿ ಸಲ್ಲದೆ ಹೋದಾಗ ಕಾರ್ಮಿಕರು ಸಂಘಟಿತರಾಗಿ ತಮ್ಮ ಕೂಲಿಯ ಮಟ್ಟವನ್ನು ಉತ್ಪಾದಕತೆಯ ಮಟ್ಟಕ್ಕೆ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಾರೆ. ಸಂಧಾನದ ಮೂಲಕ ಇದು ಸಾಧ್ಯವಾಗದಿದ್ದಾಗ ಅವರು ಇತರ ಕ್ರಮಗಳನ್ನುನುಸರಿಸಬಹುದು.[೨]

ಉತ್ಪಾದನ ಸೂಚ್ಯಂಕಸಂಪಾದಿಸಿ

ಒಂದು ದೇಶದ ಇಲ್ಲವೆ ಉತ್ಪಾದನಾಂಗದ ಉತ್ಪಾದನ ಮಟ್ಟದ ಬದಲಾವಣೆಯನ್ನು ಕಾಲ ಅಥವಾ ಪ್ರದೇಶಾನುಗುಣವಾಗಿ ಅಳೆಯಲು ಬಳಸುವ ಸಲಕರಣೆ (ಪ್ರೊಡಕ್ಷನ್ ಇಂಡೆಕ್ಸ್‌). ಉತ್ಪಾದನೆಯ ಏರಿಳಿತಗಳನ್ನಳೆಯಲು ಉಪಯೋಗಿಸುವ ಈ ಸಲಕರಣೆಯ ತಯಾರಿಕೆ ಸುಲಭವಲ್ಲದಿದ್ದರೂ ಇದರ ಹಿಂದಿರುವ ತಾತ್ತ್ವಿಕ ಸರಣಿ ಸರಳವಾದದ್ದು. ಒಂದು ಕಾರ್ಖಾನೆಯಲ್ಲಿ ಮೊದಲನೆಯ ವರ್ಷದಲ್ಲಿ ಒಂದು ಪದಾರ್ಥದ ಉತ್ಪತ್ತಿ 150 ಘಟಕಗಳಷ್ಟಿದ್ದು ಮರುವರ್ಷ 225 ಘಟಕಗಳಿಗೆ ಏರಿದರೆ ಆಗ ಮೊದಲನೆಯ ವರ್ಷದ್ದಕ್ಕಿಂತ ಎರಡನೆಯ ವರ್ಷದ ಉತ್ಪತ್ತಿ ಶೇಕಡಾ 50ರಷ್ಟು ಹೆಚ್ಚಿದ ಹಾಗಾಯಿತು.[೩] ಇಲ್ಲಿ ಮೊದಲನೆಯ ವರ್ಷದ ಉತ್ಪತ್ತಿ 100 ಎಂದು ಭಾವಿಸಿದರೆ ಎರಡನೆಯದರದು 150 (50% ಹೆಚ್ಚು) ಎಂದಾಗುತ್ತದೆ. ಇದೇ ರೀತಿಯಾಗಿ ಎರಡು ಕಾರ್ಖಾನೆಗಳ ಅಥವಾ ಪ್ರದೇಶಗಳ ಉತ್ಪಾದನೆಯನ್ನು ತೌಲನಿಕವಾಗಿ ಪರಿಶೀಲಿಸುವುದು ಸಾಧ್ಯ. ಇಂಥ ಪರಿಶೀಲನೆ ಗಳಿಗೆ ಒದಗಿ ಬರುವ ಶೇಕಡಾ ವಿಧಾನವೇ ಉತ್ಪಾದನ ಸೂಚ್ಯಂಕದ ವಿಧಾನ. ಪ್ರದೇಶಾನುಗುಣ ಸೂಚ್ಯಂಕಕ್ಕಿಂತ ಕಾಲಾನುಗುಣ ಸೂಚ್ಯಂಕವೇ ಹೆಚ್ಚಾಗಿ ಬಳಕೆಯಲ್ಲಿದೆ.[೪]

ಉತ್ಪಾದೀ ಶ್ರಮಸಂಪಾದಿಸಿ

ಆಧುನಿಕ ಅರ್ಥಶಾಸ್ತ್ರಜ್ಞರು ಉತ್ಪಾದೀ ಶ್ರಮ ಮತ್ತು ಅನುತ್ಪಾದೀ ಶ್ರಮಗಳಲ್ಲಿನ ವ್ಯತ್ಯಾಸವನ್ನು ತೆಗೆದುಹಾಕಿ ಮೂರ್ತವಸ್ತುಗಳನ್ನು ಹಾಗೂ ಅಮೂರ್ತ ಸೇವೆಗಳನ್ನು ಉತ್ಪಾದಿಸುವ ಶ್ರಮಗಳೆರಡನ್ನೂ ಉತ್ಪಾದೀ ಶ್ರಮವೆಂದೇ ಪರಿಗಣಿಸಿದ್ದಾರೆ. ಸಾರಿಗೆ ಕೆಲಸಗಾರರು, ವ್ಯಾಪಾರೋದ್ಯಮಿಗಳ ಪ್ರತಿನಿಧಿಗಳು, ಬ್ಯಾಂಕ್ ನೌಕರರು ಮೊದಲಾದ ಶ್ರಮಜೀವಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿನಿಯೋಗಿಸುವ ಶ್ರಮವೂ ಕೈಗಾರಿಕೋದ್ಯಮಗಳಲ್ಲಿ ಬುದ್ಧಿ ಶಕ್ತಿಯನ್ನೊದಗಿಸುವ ಉದ್ಯಮ ಚಾಲಕರ, ಯಂತ್ರ ನಿರ್ಮಾಪಕರ, ವ್ಯವಸ್ಥಾಪಕರ ಹಾಗೂ ಆಡಳಿತಗಾರರ ಶ್ರಮವೂ ಕಚ್ಚಾ ಸಾಮಗ್ರಿಗಳನ್ನು ಬೆಳೆಯುವವರ ಮತ್ತು ಕೈಗಾರಿಕಾ ಉಪಕರಣ ತಯಾರಕರ ಶ್ರಮದಷ್ಟೇ ಮುಖ್ಯವಾದದ್ದೆಂದು ತೋರಿಸಿದ್ದಾರೆ. [೫]ಉಲ್ಲೇಖಗಳುಸಂಪಾದಿಸಿ

  1. http://www.employment.gov.sc/what-is-productivity
  2. https://www.tonyrobbins.com/productivity-performance/what-is-productivity-really/
  3. https://www.brookings.edu/blog/up-front/2016/09/20/four-ways-to-speed-up-productivity-growth/
  4. https://www.outlookindia.com/outlookmoney/talking-money/raising-labour-productivity-crucial-for-gdp-growth-india-ratings-4165
  5. https://www.tutor2u.net/economics/reference/policies-to-improve-labour-productivity