ಉತ್ತರ ಪ್ರದೇಶದ ವಾಸ್ತುಶಿಲ್ಪ, ಶಾಸನಗಳು, ನಾಣ್ಯಗಳು
ಈ ರಾಜ್ಯ ಬೌದ್ಧ, ಹಿಂದೂ ಮತ್ತು ಮಹಮದೀಯ ವಾಸ್ತುಶಿಲ್ಪ ಕೃತಿಗಳಿಗೆ ಹೆಸರಾದ ಪ್ರಾಂತ್ಯ. ಬುದ್ಧನ ಜೀವನಕ್ಕೆ ಸಂಬಂಧಿಸಿದ ಅನೇಕ ಸ್ಥಳಗಳು ಇಲ್ಲಿವೆ. ಬಸ್ತಿ ಜಿಲ್ಲೆಯ ಪಿಪ್ರಾವ ಎಂಬಲ್ಲಿ ಅಶೋಕನ ಕಾಲಕ್ಕಿಂತಲೂ ಹಿಂದಿನದೆಂದು ಹೇಳಬಹುದಾದ ಇಟ್ಟಿಗೆಯ ಸ್ತೂಪ ದೊರಕಿದೆ. ಇಲ್ಲಿನ ಕರಂಡಾವಶೇಷ ಒಂದರಲ್ಲಿ ಶಾಸನವೊಂದಿದೆ. ಕೌಶಾಂಬಿಯಲ್ಲಿ ನಡೆದ ಭೂಶೋಧನೆಗಳಿಂದ ಬುದ್ಧನ ನಿಕಟಸಂಪರ್ಕ ಹೊಂದಿದ್ದ ಘೋಷಿತಾರಾಮ ವಿಹಾರ ಬೆಳಕಿಗೆ ಬಂದಿದೆ. ಸಹೇತ್-ಮಹೇತ್ (ಶ್ರಾವಸ್ತಿ) ಗಳಲ್ಲಿ ಜೇತವನ ವಿಹಾರ, ಅನೇಕ ಸ್ತೂಪಗಳು ಮೊದಲಾದುವುಗಳ ಅವಶೇಷಗಳು ದೊರಕಿವೆ.
ವಾಸ್ತು ಶಿಲ್ಪದ ತುಣುಕುಗಳು
ಬದಲಾಯಿಸಿಮಹೇತ್ನಲ್ಲಿ ಮುನ್ನೂರಕ್ಕೂ ಹೆಚ್ಚು ಜೇಡಿಮಣ್ಣಿನ ಫಲಕಗಳು ಸಿಕ್ಕಿವೆ. ಇವುಗಳ ಮೇಲೆ ರಾಮಾಯಣದ ವಿವಿಧ ಕಥೆಗಳು ಚಿತ್ರಿತವಾಗಿವೆ. ಇವು ಗುಪ್ತಕಾಲದವು. ಅಲಹಾಬಾದ್ ಜಿಲ್ಲೆಯ ಭೀಟಾ ಎಂಬಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನವೆಂದು ಹೇಳಬಹುದಾದ ಇಟ್ಟಿಗೆಯ ಕಟ್ಟಡಗಳು ದೊರಕಿವೆ. ವಾರಾಣಸಿ ನಗರಕ್ಕೆ ಸೇರಿಕೊಂಡಂತೆ ಇರುವ ರಾಜಘಾಟ್ ಎಂಬಲ್ಲಿ ಇಟ್ಟಿಗೆಯ ಕಟ್ಟಡಗಳೂ ದೇವಾಲಯಗಳ ಅವಶೇಷಗಳೂ ದೊರಕಿವೆ. ಇವು ವಿವಿಧ ಕಾಲಕ್ಕೆ ಸೇರಿದವು. ಇವೆಲ್ಲಕ್ಕಿಂತ ಹೆಚ್ಚು ಪ್ರಸಿದ್ಧವಾಗಿರುವ ಸಾರಾನಾಥ ವಾರಾಣಸಿಗೆ ಬಹು ಸಮೀಪದಲ್ಲಿದೆ. ಇದು ಬುದ್ಧದೇವ ಧರ್ಮಬೋಧೆಯನ್ನು ಪ್ರಾರಂಭಿಸಿದ ಸ್ಥಳ. ಇಲ್ಲಿನ ಧರ್ಮರಾಜಿಕ ಸ್ತೂಪ ಅಶೋಕನಿಂದ ನಿರ್ಮಿತವಾದದ್ದೆಂದು ಹೇಳಬಹುದು. ಮೌರ್ಯರ ಕಾಲದ ಶಾಸನವುಳ್ಳ, ಮತ್ತು ಹೊಳಪುಳ್ಳ ಕಲ್ಲಿನ ಹರ್ಮಿಕದ ಅವಶೇಷಗಳು, ಸಿಂಹದ ಶಿಲ್ಪವಿರುವ ಸ್ತಂಭದ ಶಿರೋಭಾಗ-ಇವುಗಳು ಈ ಸ್ತೂಪದ ಸಮೀಪದಲ್ಲಿಯೇ ದೊರಕಿವೆ. 93' ಅಡ್ಡ ಮತ್ತು 143' ಎತ್ತರದ ಧಮೇಚ್ ಸ್ತೂಪ ಗುಪ್ತರ ಕಾಲಕ್ಕೆ ಸೇರಿದ್ದು. ಇದು ಕಲ್ಲು ಮತ್ತು ಇಟ್ಟಿಗೆಗಳಿಂದಾದದ್ದು. ಹುಯೆನ್‍ತ್ಸಾಂಗನ ಕಾಲದಲ್ಲಿ ಉಚ್ಚ್ರಾಯಸ್ಥಿತಿಯಲ್ಲಿದ್ದ ಮೂಲಗಂಧಕುಟೀರ ಮತ್ತು ಇತರ ವಿಹಾರಗಳೂ ಸ್ತೂಪಗಳೂ ದೊರಕಿವೆ. ಮೌರ್ಯರ ಕಾಲದಿಂದ ಗುಪ್ತರ ಕಾಲದವರೆಗಿನ ಶಿಲ್ಪಗಳು ಸಾರಾನಾಥದಲ್ಲಿ ದೊರಕಿವೆ. ಬುದ್ಧ ಧರ್ಮಬೋಧೆ ಮಾಡುತ್ತಿರುವುದು, ಸಿಂಹಗಳ ಶಿಲ್ಪವಿರುವ ಅಶೋಕ ಸ್ತಂಭದ ಶಿರೋಭಾಗಗಳು ಬಹು ಪ್ರಖ್ಯಾತವಾಗಿವೆ. ಸಾರಾನಾಥದಲ್ಲಿರುವ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಗಮನಾರ್ಹವಾದ ಶಿಲ್ಪಗಳಿವೆ.[೧]ಭೀತರ್‍ಗಾಂವ್‍ನಲ್ಲಿರುವ ಇಟ್ಟಿಗೆಯ ದೇವಾಲಯ ಗುಪ್ತರ ಕಾಲಕ್ಕೆ ಸೇರಿದುದು. ಇದು ಈಗ ಬಹುಪಾಲು ಹಾಳಾಗಿಹೋಗಿದ್ದರೂ ಆ ಕಾಲದ ಶಿಖರವಿನ್ಯಾಸಕ್ಕೆ ಇದೊಂದು ಉತ್ತಮ ನಿದರ್ಶನವಾಗಿ ಉಳಿದಿದೆ. ಆದ್ದರಿಂದ ಇದಕ್ಕೆ ವಿಶಿಷ್ಟ ಸ್ಥಾನವಿದೆ.
ಭಾರತೀಯ ಶಿಲ್ಪ
ಬದಲಾಯಿಸಿಭಾರತೀಯ ಶಿಲ್ಪದಲ್ಲಿ ಮಥುರಾ ಬಹು ಪ್ರಾಮುಖ್ಯವಾದುದು. ಮಥುರಾದಲ್ಲಿ ಒಂದು ಶಿಲ್ಪಕಲೆಯ ಕೇಂದ್ರವೇ ಇತ್ತು. ಇಲ್ಲಿಂದ ಶ್ರಾವಸ್ತಿ, ಪ್ರಯಾಗ, ಸಾರಾನಾಥ ಮುಂತಾದ ಕಡೆಗಳಿಗೆ ಬುದ್ಧನ ಶಿಲ್ಪಗಳು ಹೋದುವು. ಕುಶಾನರ ಕಾಲದಿಂದ ಗುಪ್ತರ ಕಾಲದವರೆಗೆ ಉಚ್ಛ್ರಾಯಸ್ಥಿತಿಯಲ್ಲಿದ್ದ ಮಥುರಾ ಶಿಲ್ಪಶೈಲಿ ವಿಶೇಷವಾಗಿ ಭಾರತೀಯ ಸಂಪ್ರದಾಯಗಳನ್ನೇ ಅಳವಡಿಸಿಕೊಂಡಿತ್ತು. ಇದಕ್ಕೆ ವಿರುದ್ಧವಾದ ಗಾಂಧಾರಶೈಲಿಯಲ್ಲಿ ಹೊರದೇಶದ ಪ್ರಭಾವಗಳೇ ಹೆಚ್ಚಾಗಿದ್ದುವು. ಗುಪ್ತರ ಕಾಲದಲ್ಲಿ ಮಥುರಾ ಶೈಲಿ ಪರಿಪೂರ್ಣತೆಯನ್ನು ಪಡೆಯಿತು. ಮಥುರಾದ ಬುದ್ಧನ ಶಿಲ್ಪಗಳು ವಿಶ್ವವಿಖ್ಯಾತವಾಗಿವೆ.ಮಥುರಾಕ್ಕೆ ಸಮೀಪದಲ್ಲಿರುವ ಬೃಂದಾವನದಲ್ಲಿ ಕ್ರಿ.ಶ. 1590ರಲ್ಲಿ ಗೋವಿಂದದೇವ ನಿರ್ಮಿಸಿದ ದೇವಾಲಯವಿದೆ. ಇದೊಂದು ಬಹು ವಿಸ್ತಾರವಾದ ಕೆಂಪು ಕಲ್ಲಿನ ದೇವಾಲಯ. ಮಥುರಾದಲ್ಲಿರುದ ದ್ವಾರಕಾಧೀಶ ದೇವಾಲಯ 1814ರಲ್ಲಿ ನಿರ್ಮಿತವಾದದ್ದು. ಅಲ್ಲಿ ಕೆಲವು ಸಮಕಾಲೀನ ವರ್ಣಚಿತ್ರಗಳಿವೆ.
ಭಾರತೀಯರ ಧಾರ್ಮಿಕ ಜೀವನ
ಬದಲಾಯಿಸಿಭಾರತೀಯರ ಧಾರ್ಮಿಕ ಜೀವನದಲ್ಲಿ ಉನ್ನತಸ್ಥಾನ ಪಡೆದಿರುವ ಕಾಶಿಯ ವಿಶ್ವೇಶ್ವರ ದೇವಾಲಯ ವಾಸ್ತುಶಿಲ್ಪದೃಷ್ಟಿಯಿಂದ ಅಷ್ಟೇನೂ ಮಹತ್ತರವಾದುದಲ್ಲ. ವಿಶ್ವೇಶ್ವರನ ದೇವಾಲಯ ಕ್ರಿ.ಶ. 7ನೆಯ ಶತಮಾನದಲ್ಲಿಯೇ ಇತ್ತೆಂದು ಹುಯೆನ್‍ತ್ಸಾಂಗನ ಬರೆವಣಿಗೆಯಿಂದ ತಿಳಿದರೂ ಮಹಮದೀಯರ ದಾಳಿಗಳಿಂದ ಅದು ನಾಶವಾಗಿ ಹೋಯಿತು. ಅಕ್ಬರನ ಕಾಲದಲ್ಲಿ ಅದು ಪುನರುದ್ಧಾರವಾದರೂ ಔರಂಗeóÉೀಬ ಅದನ್ನು ಪೂರ್ಣವಾಗಿ ನಾಶಗೊಳಿಸಿದ. ಕೊನೆಗೆ 1777ರಲ್ಲಿ ಅಹಲ್ಯಾಬಾಯಿಯ ದಾನದಿಂದಾಗಿ ಈಗಿರುವ ವಿಶ್ವೇಶ್ವರ ದೇವಾಲಯ ನಿರ್ಮಾಣವಾಯಿತು. ಇಲ್ಲಿಯ ಗರ್ಭಗೃಹ ಕೇವಲ ಹತ್ತು ಅಡಿಗಳ ಚಚ್ಚೌಕವಾಗಿಯೂ ಶಿಖರ ಕೇವಲ 30' ಎತ್ತರವಾಗಿಯೂ ಇವೆ. ರಣಜಿತ್‍ಸಿಂಗನ ಕಾಲದಲ್ಲಿ ದೇವಾಲಯದ ಶಿಖರಕ್ಕೆ ಚಿನ್ನದ ತಗಡುಗಳನ್ನು ಹಾಕಿಸಲಾಯಿತು. ಕಾಶಿಯಲ್ಲಿರುವ ಇತರ ದೇವಾಲಯಗಳೂ ಪ್ರಸಿದ್ಧವಾಗಿರುವ, ಹರಿದ್ವಾರ, ಹೃಷೀಕೇಶ, ಕೇದಾರನಾಥ ದೇವಾಲಯಗಳೂ ವಾಸ್ತುಶಿಲ್ಪದೃಷ್ಟಿಯಿಂದ ಗಮನಾರ್ಹವಾದುವೇನೂ ಅಲ್ಲ.
ಉತ್ತರ ಪ್ರದೇಶದ ಮುಸ್ಲಿಂ ವಾಸ್ತುಶಿಲ್ಪ
ಬದಲಾಯಿಸಿಉತ್ತರ ಪ್ರದೇಶದ ಮುಸ್ಲಿಂ ವಾಸ್ತುಶಿಲ್ಪಗಳನ್ನು ಮುಖ್ಯವಾಗಿ ಫತೇಪುರ್ ಸಿಕ್ರಿ ಸಿಕಂದರ ಮತ್ತು ಆಗ್ರಗಳಲ್ಲಿ ಕಾಣುತ್ತೇವೆ. ಅಕ್ಬರನ ಕಾಲದಲ್ಲಿ ರಾಜಧಾನಿಯಾಗಿದ್ದ ಫತೇಪುರ್ ಸಿಕ್ರಿ ಈಗ ಹಾಳುಬಿದ್ದಿದ್ದರೂ ಮೊಗಲರ ಕಾಲದ ಕಟ್ಟಡಗಳು ಇಂದಿಗೂ ಅಚ್ಚಳಿಯದೆ ನಿಂತಿವೆ. ಜಾಮಿ ಮಸೀದಿ, ಬುಲಂದ್ ದರ್ವಾಜû, ಷೇಕ್ ಸಲೀಂ ಚಿಸ್ಟಿಯ ಸಮಾಧಿ, ದಿವಾನ್-ಇ-ಖಾಸ್, ದಿವಾನ್-ಇ-ಆಮ್, ಜೋಧಬಾಯಿಯ ಅರಮನೆ, ಬೀರಬಲ್ಲನ ಮನೆ, ಪಂಚಮಹಲ್ ಮೊದಲಾದ ಅನೇಕ ಕಟ್ಟಡಗಳಿವೆ. ಇವೆಲ್ಲವೂ ವಿವಿಧ ವಾಸ್ತುಶೈಲಿಗಳಲ್ಲಿವೆ. ದಿವಾನ್-ಇ-ಖಾಸ್ ಒಂದು ವಿಶಿಷ್ಟರೂಪದ ಕಟ್ಟಡ. ಹೊರಗಡೆಯಿಂದ ಮಹಡಿಯನ್ನುಳ್ಳ ಕಟ್ಟಡದಂತೆ ಕಾಣುವ ಇದು ಅನೇಕ ಸ್ತಂಭಗಳಿಂದ ಕೂಡಿದೆ. ಪ್ರತಿಯೊಂದು ಕಂಬದಲ್ಲೂ ಉತ್ತಮ ಕೆತ್ತನೆಯ ಕೆಲಸವನ್ನು ಕಾಣಬಹುದು. ಒಳಗಿರುವ ವೃತ್ತಾಕಾರದ ಜಗಲಿಯ ಮೇಲೆ ಅಕ್ಬರ್ ಕುಳಿತುಕೊಂಡು ಧಾರ್ಮಿಕ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ. ಇದರ ಸಮೀಪದಲ್ಲಿ ಜ್ಯೋತಿಷಿಯ ಪೀಠ ಎಂದು ಪ್ರಸಿದ್ಧವಾಗಿರುವ ಕಟ್ಟಡ ಜೈನದೇವಾಲಯದ ಮಾದರಿಯಲ್ಲಿ ನಿರ್ಮಿತವಾಗಿದೆ. ಪಂಚಮಹಲ್ ಕಟ್ಟಡ ಪಿರಮಿಡ್ ಆಕಾರದ ಐದು ಅಂತಸ್ತುಗಳ ಸೌಧ. ಇದು ಬೌದ್ಧವಿಹಾರವನ್ನು ಹೋಲುತ್ತದೆ. ಈ ಕಟ್ಟಡದ ಒಳಭಾಗ ಉತ್ತಮ ಶಿಲ್ಪಗಳಿಂದ ಕೂಡಿದೆ. ಜೋಧಬಾಯಿಯ ಅರಮನೆಯಲ್ಲಿ ಹಿಂದೂ ಮತ್ತು ಮುಸ್ಲಿಂ ವಾಸ್ತುಶೈಲಿಗಳು ಮಿಳಿತವಾಗಿವೆ. ಇದೇ ರೀತಿಯಲ್ಲಿರುವ ಇನ್ನೊಂದು ಕಟ್ಟಡವೆಂದರೆ ಎರಡು ಅಂತಸ್ತಿನ ಬೀರಬಲನ ಮನೆ. ಜಾಮಿ ಮಸೀದಿ ಫತೇಪುರ್ ಸಿಕ್ರಿಯ ಮನೋಹರ ಕಟ್ಟಡಗಳಲ್ಲೊಂದು. ಜನಗಳು ಸಭೆ ಸೇರುವ ಅವಕಾಶವುಳ್ಳ ಮಸೀದಿಗಳಲ್ಲಿ ಮೊಟ್ಟಮೊದಲನೆಯದಾಗಿ ನಿರ್ಮಿತವಾದ ಇದು ಮುಂದೆ ಮಾದರಿಯಾಗಿ ಪರಿಣಮಿಸಿತು. ಉತ್ತರದ ಪಕ್ಕದಲ್ಲಿಯೇ ಇರುವ ಸಾಧು ಷೇಕ್ ಸಲೀಂ ಚಿಸ್ಟಿಯ ಗೋರಿ ಸಾತ್ತ್ವಿಕ ಪ್ರತೀಕಗಳೇ ಮೂರ್ತಿವೆತ್ತಂತೆ ಇದೆ. ಇದು ಅಮೃತಶಿಲೆಯ ಕಟ್ಟಡ. ಮಧ್ಯದಲ್ಲಿ ಒಂದು ವಿಶಾಲವಾದ ಗುಮ್ಮಟವೂ ಕೆಳಭಾಗದಲ್ಲಿ ಸುತ್ತಲೂ ಚಾವಣಿಯ ಎತ್ತರದಲ್ಲಿ ಹೊರಚಾಚಿರುವ ಚಜ್ಚವೂ ಈ ಕಟ್ಟಡಕ್ಕೆ ಒಂದು ಮನೋಹರತೆಯನ್ನು ತಂದುಕೊಟ್ಟಿವೆ. ಕಟ್ಟಡದ ಜಗಲಿಗಳು ಬಣ್ಣದ ಕಲ್ಲುಗಳಿಂದ ಮಾಡಲಾದ ಲತಾಲಂಕಾರಗಳಿಂದ ಕೂಡಿವೆ. ಇನ್ನೊಂದು ಪಕ್ಕದಲ್ಲಿರುವ ಬುಲಂದ್ ದರ್ವಾಜû ಕೆಂಪುಕಲ್ಲಿನಿಂದ ಕಟ್ಟಲಾದ ವಿಜಯದ್ವಾರ. ತನ್ನ ದಕ್ಷಿಣಾಪಥದ ವಿಜಯಗಳ ಜ್ಞಾಪಕಾರ್ಥವಾಗಿ ಅಕ್ಬರ್ ಇದನ್ನು ಕಟ್ಟಿಸಿದ. ಇದು 176' ಎತ್ತರದ ಕಟ್ಟಡ. ಮೆಟ್ಟಲಿನಿಂದ ಜಗತಿಯ ಮೇಲ್ಭಾಗದ ವರೆಗೆ 42' ಎತ್ತರವಿದೆ. ಇದು ಅಕ್ಬರನ ಶಕ್ತಿ, ಸಾಮಥ್ರ್ಯ ಮತ್ತು ವೈಭವಗಳ ಪ್ರತೀಕವಾಗಿದೆ. ತಾಜ್‍ಮಹಲಿನ ನಗರ ಎಂದು ಹೆಸರಾಗಿರುವ ಆಗ್ರ ನಗರ ಅಕ್ಬರನ ಕಾಲದಿಂದ ಪ್ರಾರಂಭವಾಗಿ ಷಾಜಹಾನನ ಕಟ್ಟಡಗಳಿಗೆ ಪ್ರಸಿದ್ಧ (ನೋಡಿ- ಆಗ್ರ). ಆಗ್ರಕ್ಕೆ ಸೇರಿಕೊಂಡಂತೆ ಇರುವ ಸಿಕಂದರದಲ್ಲಿರುವ ಅಕ್ಬರನ ಸಮಾಧಿ ಒಂದು ಉತ್ತಮ ಕಟ್ಟಡ. ಅಕ್ಬರನ ಕಾಲದಲ್ಲಿ ಯೋಜಿತವಾದ ಇದನ್ನು ಜಹಾಂಗೀರನ ಕಾಲದಲ್ಲಿ ಕಟ್ಟಲಾಯಿತು (1605-1613). ಇದರಲ್ಲಿ ಬೌದ್ಧವಿಹಾರಗಳ ಮತ್ತು ಕಾಂಬೋಡಿಯದ ವಾಸ್ತುಶಿಲ್ಪಗಳ ಪ್ರಭಾವ ಕಾಣಬಹುದು. ಲಖನೌ ನಗರದಲ್ಲಿ ಇರುವ ಕಟ್ಟಡಗಳಲ್ಲಿ ಛೋಟಾ ಇಮಾಮ್‍ಬಾರಾ, ಬಡಾ ಇಮಾಮ್‍ಬಾರಾ ಮತ್ತು ರೂಮಿ ದರ್ವಾಜûಗಳು ಮುಖ್ಯವಾದುವು. ಇವು ನವಾಬನಾಗಿದ್ದ ಆಸಫ್-ಉದ್-ದೌಲನಿಂದ ಕ್ರಿ. ಶ. 1784ರಲ್ಲಿ ನಿರ್ಮಿತವಾದುವು. ಛೋಟಾ ಇಮಾಮ್‍ಬಾರಾದ ಗೋಡೆಯ ಒಳ ಭಾಗಗಳಲ್ಲಿ ಅರಬ್ಬೀ ಭಾಷೆಯಲ್ಲಿ ಬರೆದ ಪದ್ಯಗಳನ್ನು ಕೆತ್ತಿದೆ. ರೂಮಿ ದರ್ವಾಜû ಎತ್ತರದ ಗೋಪುರ. ನೋಡಲು ಬಹಳ ಸುಂದರವಾಗಿರುವ ಈ ಗೋಪುರದಲ್ಲಿ ಗಾರೆಯ ಕೆಲಸ ಬಹಳ ನಾಜೂಕಾಗಿದೆ.
ಉತ್ತರ ಪ್ರದೇಶ ಪ್ರಾಚೀನ ಮತ್ತು ಮಧ್ಯಯುಗೀನ ಕಾಲ
ಬದಲಾಯಿಸಿಅಲಹಾಬಾದಿನಲ್ಲಿ ಯಮುನಾನದಿಯ ತೀರದಲ್ಲಿರುವ ಅಕ್ಬರನ ಕಾಲದ ಕೋಟೆಯ ಕಟ್ಟಡಗಳು ಶಿಥಿಲವಾಗಿದ್ದರೂ ಕೆಲಭಾಗಗಳು ಹಾಗೆಯೇ ಉಳಿದುಕೊಂಡಿವೆ. ನಗರ ಮಧ್ಯದಲ್ಲಿ ಖುಸ್ರುಬಾಗ್ ಎಂದು ಪ್ರಸಿದ್ಧವಾಗಿರುವ ತೋಟದಲ್ಲಿ ಜಹಾಂಗೀರನ ಮಗನಾದ ಖುಸ್ರುವಿನ ಗೋರಿಯಿದೆ. ಎರಡು ಅಂತಸ್ತಿನ ಚಚ್ಚೌಕ ಕಟ್ಟಡದ ಮೇಲೆ ಎತ್ತರವಾದ ಗುಮ್ಮಟವಿದೆ. ಇದರ ಪಕ್ಕಗಳಲ್ಲಿ ಅವನ ತಾಯಿ ಮತ್ತು ತಂಗಿಯ ಗೋರಿಗಳೂ ಇವೆ. ಈ ರೀತಿ ಉತ್ತರ ಪ್ರದೇಶ ಹಿಂದೂ ಬೌದ್ಧ ಮತ್ತು ಮುಸ್ಲಿಂ ಶೈಲಿಗಳ ವಾಸ್ತುಶಿಲ್ಪಗಳ ಕಲಾಕೌಶಲ್ಯಕ್ಕೆ ಹೆಸರಾದ ಪ್ರಾಂತ್ಯ.ಉತ್ತರ ಪ್ರದೇಶ ಪ್ರಾಚೀನ ಮತ್ತು ಮಧ್ಯಯುಗೀನ ಕಾಲಗಳಲ್ಲಿ ಆಳಿದ ಉತ್ತರ ಭಾರತದ ಪ್ರಮುಖ ರಾಜ್ಯಗಳ ಭಾಗವಾಗಿತ್ತು. ಆದ್ದರಿಂದ ಇಲ್ಲಿ ಸಾಮಾನ್ಯವಾಗಿ ಆಳಿದ ಎಲ್ಲ ರಾಜಮನೆತನಗಳ ಶಾಸನಗಳೂ ದೊರಕಿವೆ. ಅವುಗಳಲ್ಲಿ ಮುಖ್ಯವಾದವನ್ನು ಮಾತ್ರ ಇಲ್ಲಿ ಗಮನಿಸಲಾಗಿದೆ. ಇಲ್ಲಿ ದೊರಕಿರುವ ಮುಖ್ಯ ಶಾಸನಗಳೆಂದರೆ ಅಶೋಕನ ಧರ್ಮಲಿಪಿಗಳು. ಇವಕ್ಕಿಂತಲೂ ಪ್ರಾಚೀನವಾದ ಶಾಸನ ಪಿಪ್ರಾವದ ಕರಂಡದ ಮೇಲಿದೆ. ಇದು ಅಶೋಕನ ಕಾಲಕ್ಕಿಂತಲೂ ಹಿಂದಿನದೆಂದು ಹೇಳಬಹುದು. ಮಿeóರ್Áಪುರ ಜಿಲ್ಲೆಯ ಅಹ್ರೌರ ಎಂಬಲ್ಲಿ ಲಘು ಪ್ರಸ್ತರ ಲೇಖವೂ ಡೆಹರಾಡೂನ್ ಜಿಲ್ಲೆಯ ಕಲ್ಸಿ ಎಂಬಲ್ಲಿ ಪ್ರಸ್ತರಲೇಖವೂ ಅಲಹಾಬಾದ್ ಮತ್ತು ಸಾರಾನಾಥ್ ಮೀರತ್‍ಗಳಲ್ಲಿ ಸ್ತಂಭ ಶಾಸನಗಳೂ ದೊರಕಿವೆ. ಅಲಹಾಬಾದಿನ ಸ್ತಂಭಶಾಸನ ಮೊದಲು ಕೌಶಾಂಬಿಯಲ್ಲಿತ್ತು. ಉತ್ತರ ಪ್ರದೇಶದ ಸರಹದ್ದಿನಿಂದ ಬಹು ಸಮೀಪದಲ್ಲಿರುವ ರೂಮಿಂದೈ ಮತ್ತು ನಿಗ್ಲೀವ ಎಂಬಲ್ಲೂ ಅಶೋಕನ ಶಾಸನಗಳು ದೊರಕಿವೆ. ಅಶೋಕನ ಇಷ್ಟೊಂದು ಶಾಸನಗಳು ಉತ್ತರ ಪ್ರದೇಶದಲ್ಲಿ ದೊರಕಿರುವುದು ಗಮನಾರ್ಹವಾದುದು. ಅದು ಅವನ ರಾಜ್ಯದ ಮುಖ್ಯಭಾಗವಾಗಿದ್ದಿತ್ತೆಂಬುದನ್ನು ಸೂಚಿಸುತ್ತದೆ. ಈ ಶಾಸನಗಳು ಆಶೋಕನ ಧರ್ಮ, ಮಹಾಮಾತ್ರರಿಗೆ ಆತ ಕೊಟ್ಟ ಆಜ್ಞೆಗಳು, ಬೌದ್ಧಧರ್ಮದ ಪಾಲನೆಗೆ ಅನುಸರಿಸಬೇಕಾದ ನಿಯಮಗಳು-ಮುಂತಾದುವನ್ನು ತಿಳಿಸುತ್ತವೆ ಕಲ್ಸಿ ಎಂಬಲ್ಲಿ ಕಲ್ಲಿನ ಮೇಲೆ ಆನೆಯ ರೇಖಾಚಿತ್ರವೂ ಅದರ ಕೆಳಗೆ ಬ್ರಾಹ್ಮೀ ಲಿಪಿಯಲ್ಲಿ ಗಜತಮಃ (ಗಜೋತ್ತಮ) ಎಂಬ ಬರವಣಿಗೆಯೂ ಇದೆ. ಉತ್ತರ ಪ್ರದೇಶದಲ್ಲಿ ದೊರಕಿರುವ ಸಮುದ್ರಗುಪ್ತನ ಅಲಹಾಬಾದ್ ಸ್ತಂಭಶಾಸನ ಭಾರತದ ಅತಿಮುಖ್ಯ ಶಾಸನಗಳಲ್ಲೊಂದು. ಈ ಶಾಸನ ದೊರಕದೇ ಇದ್ದಿದ್ದರೆ ಸಮುದ್ರಗುಪ್ತನ ವಿಜಯಗಳ ವಿಚಾರವಾಗಿ ನಮಗೆ ಏನೂ ತಿಳಿಯುತ್ತಿರಲಿಲ್ಲ. ಈ ಶಾಸನದ ಕರ್ತೃ ಹರಿಷೇಣ. ಇದರ ಭಾಷೆ ಒಳ್ಳೆಯ ಸಂಸ್ಕøತ. ಲಿಪಿ ಬ್ರಾಹ್ಮೀ. ಇತರ ರಾಜಮನೆತನಗಳಾದ ಕುಶಾನರು, ಶುಂಗರು, ಪ್ರತೀಹಾರರು ಮತ್ತು ಮುಸ್ಲಿಂ ದೊರೆಗಳ ಶಾಸನಗಳೂ ಇಲ್ಲಿ ದೊರಕಿವೆ.
ಉತ್ತರ ಭಾರತದಲ್ಲಿ ಆಳಿದ ಅನೇಕ ರಾಜರ ನಾಣ್ಯಗಳು
ಬದಲಾಯಿಸಿಉತ್ತರ ಭಾರತದಲ್ಲಿ ಆಳಿದ ಅನೇಕ ರಾಜರ ನಾಣ್ಯಗಳು ಉತ್ತರ ಪ್ರದೇಶದಲ್ಲಿ ದೊರೆಕಿವೆ. ಕ್ರಿ.ಪೂ. ಎರಡನೆಯ ಶತಮಾನದ ಮುದ್ರಾಂಕಿತ (ಪಂಚ್‍ಮಾಕ್ರ್ಡ್) ನಾಣ್ಯಗಳಿಂದ ಪ್ರಾರಂಭವಾಗಿ ಬ್ರಿಟಿಷರ ನಾಣ್ಯಗಳೂ ಇಲ್ಲಿ ದೊರೆಕಿವೆ. ಈ ನಾಣ್ಯಗಳನ್ನು ತಯಾರಿಸುವ ಮಣ್ಣಿನ ಅಚ್ಚುಗಳು ಅಲಹಾಬಾದ್ ಜಿಲ್ಲೆಯ ಝಾನ್ಸಿ ಎಂಬಲ್ಲಿ ದೊರಕಿವೆ. ಅಹಿಚ್ಛತ್ರದಲ್ಲಿ ಪಾಂಚಾಲರಾಜರ ಕ್ರಿ.ಶ. ಒಂದನೆಯ ಶತಮಾನದ ನಾಣ್ಯಗಳು ದೊರಕಿವೆ. ಉತ್ತರ ಪ್ರದೇಶದ ಅನೇಕ ಕಡೆಗಳಲ್ಲಿ ಗುಪ್ತ ರಾಜರ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ಸಿಕ್ಕಿವೆ. ಇಲ್ಲಿ ಕುಶಾನರ ನಾಣ್ಯಗಳೂ ದೊರಕಿವೆ. ಶಿವ ಮತ್ತು ಪಾರ್ವತಿಯರ ಚಿತ್ರವಿರುವ ಚಿನ್ನದ ನಾಣ್ಯವೊಂದು ಇಲ್ಲಿ ದೊರಕಿದೆ. ಇದು ಸ್ಥಾಣೇಶ್ವರದ ರಾಜನಾದ ಹರ್ಷವರ್ಧನನ ನಾಣ್ಯವಿರಬೇಕೆಂದು ಹೇಳಲಾಗಿದೆ. ಭರತಪುರದಲ್ಲಿ ಆಳಿದ ಶೂರಸೇನ ರಾಜರ ನಾಣ್ಯಗಳೂ ದೊರಕಿವೆ. ಇಂಡೋ ಸಸ್ಸಾನಿಯನ್ ನಾಣ್ಯಗಳೂ, ಶ್ರೀ ವಿಗ್ರ ಎಂಬ ಶಾಸನವುಳ್ಳ ನಾಣ್ಯಗಳೂ ಉತ್ತರಪ್ರದೇಶದಲ್ಲಿ ವಿಶೇಷವಾಗಿ ದೊರಕಿವೆ. ಮುಸ್ಲಿಂ ದೊರೆಗಳ ನಾಣ್ಯಗಳು ಹೇರಳವಾಗಿ ಅನೇಕ ಕಡೆಗಳಲ್ಲಿ ಸಿಕ್ಕಿವೆ. ಷೇರ್‍ಷಹನ ಬೆಳ್ಳಿಯ ಮತ್ತು ತಾಮ್ರದ ನಾಣ್ಯಗಳು ಆಗ್ರದಲ್ಲಿದ್ದ ಟಂಕಸಾಲೆಯಲ್ಲಿ ಮುದ್ರಿತವಾದವು. ಅಕ್ಬರನ ಕಾಲದಲ್ಲೂ ಆಗ್ರ ಟಂಕಸಾಲೆಯಾಗಿ ಮುಂದುವರಿಯಿತು. ಅನಂತರ ಜಹಾಂಗೀರ್ ಮತ್ತು ಔರಂಗeóÉೀಬರು ಆಗ್ರದಿಂದ ನಾಣ್ಯಗಳನ್ನು ಮುದ್ರಿಸಿದರು. ಅವಧ (ಔಧ್) ಸಂಸ್ಥಾನದ ನಾಣ್ಯಗಳು ಅಲ್ಲಲ್ಲಿ ಸಿಕ್ಕಿವೆ. ಈಸ್ಟ್ ಇಂಡಿಯ ಕಂಪನಿಯ ಕಾಲದಲ್ಲಿ ಬನಾರಸ್ ನಗರದಲ್ಲಿ ಟಂಕಸಾಲೆಯಿತ್ತು. ಜೈತ್‍ಸಿಂಗನ ಆಳ್ವಿಕೆಗೆ ಈ ಟಂಕಸಾಲೆ ಸೇರಿಸಲ್ಪಟ್ಟಿತು. ಅಲಹಾಬಾದ್‍ನಲ್ಲಿ ಬ್ರಿಟಿಷರು ತಾತ್ಕಾಲಿಕವಾಗಿ ಒಂದು ಟಂಕಸಾಲೆಯನ್ನು ಸ್ಥಾಪಿಸಿದರು. ಈ ಟಂಕಸಾಲೆಗಳಲ್ಲಿ ಮುದ್ರಿತವಾದ ನಾಣ್ಯಗಳು ಉತ್ತರ ಪ್ರದೇಶದಲ್ಲೆಲ್ಲ ವಿಶೇಷವಾಗಿ ದೊರೆತಿವೆ.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-10-23. Retrieved 2016-10-21.