ಉತ್ತರ ಕೆರೊಲೀನ ಅಮೆರಿಕ ಸಂಯುಕ್ತಸಂಸ್ಥಾನದ ಆಗ್ನೇಯ ಭಾಗದಲ್ಲಿರುವ ಒಂದು ರಾಜ್ಯ. ಮೊಟ್ಟಮೊದಲು ಆ ಒಕ್ಕೂಟ ಸೇರಿದ 13 ರಾಜ್ಯಗಳಲ್ಲಿ ಇದೂ ಒಂದು; ಒಕ್ಕೂಟ ಸಂವಿಧಾನವನ್ನು ಸ್ಥಿರೀಕರಿಸಿದವುಗಳಲ್ಲಿ ಹನ್ನೆರಡನೆಯದು. ಉತ್ತರದಲ್ಲಿ ವರ್ಜೀನಿಯ, ಪೂರ್ವ ಆಗ್ನೇಯಗಳಲ್ಲಿ ಅಟ್ಲಾಂಟಿಕ್ ಸಾಗರ, ದಕ್ಷಿಣದಲ್ಲಿ ದಕ್ಷಿಣ ಕೆರೊಲೀನ ಮತ್ತು ಜಾರ್ಜಿಯ, ಪಶ್ಚಿಮ ವಾಯವ್ಯಗಳಲ್ಲಿ ಟೆನಿಸಿ ಇವೆ. ಉ.ಅ. 33° 50′ ಮತ್ತು 36° 35′ ಹಾಗೂ ಪ.ರೇ. 75° 28′ ಮತ್ತು 84° 19′ ನಡುವೆ ಇರುವ ಈ ರಾಜ್ಯದ ಪೂರ್ವ ಪಶ್ಚಿಮ ಪರಮಾವಧಿ ಉದ್ದ 805 ಕಿಮೀ. ವಿಸ್ತೀರ್ಣ 136420 ಚ.ಕಿಮೀ. ಜನಸಂಖ್ಯೆ : 8,049,313 (2000) ವಿಸ್ತಾರದಲ್ಲಿ ಇದು ಸಂಯುಕ್ತ ಸಂಸ್ಥಾನದಲ್ಲಿ 28ನೆಯದು. ಕೆರೊಲೀನ ಎಂದರೆ ಚಾರ್ಲ್ಸ್ ನ ದೇಶ. ಇಂಗ್ಲೆಂಡಿನ ದೊರೆ ಒಂದನೆಯ ಚಾರ್ಲ್ಸ್‍ನ ಗೌರವಾರ್ಥವಾಗಿ ಈ ಹೆಸರನ್ನು 1629ರಲ್ಲಿ ಮೊದಲು ಬಳಸಲಾಯಿತು, ರಾಜಧಾನಿಯ ಹೆಸರು ರ್ಯಾಲಿ-ಸರ್ ವಾಲ್ಟರ್ ರ್ಯಾಲಿಯ ಜ್ಞಾಪಕಾರ್ಥ.

ಮೇಲ್ಮೈ ಲಕ್ಷಣಸಂಪಾದಿಸಿ

ಈ ರಾಜ್ಯದ ಪೂರ್ವಾರ್ಧ ಭಾಗ ಕರಾವಳಿಯ ಬಯಲು. ಮಧ್ಯದಲ್ಲಿ ಪೀಡ್ಮಾಂಟ್ ಪ್ರಸ್ಥಭೂಮಿ. ಪಶ್ಚಿಮದಲ್ಲಿ ಅಪಲೇಷಿಯನ್ ಪರ್ವತ. ಸಮುದ್ರತೀರದ ಬಳಿಯ ನೆಲ ತಗ್ಗು, ಜೌಗು; ಮೈದಾನದ ಪಶ್ಚಿಮ ಭಾಗ ಫಲವತ್ತು; ಇಲ್ಲಿನ ಕೊಳೆತ ಸಸ್ಯಪದಾರ್ಥ ಮಿಶ್ರಿತವಾದ ಮರಳುಜೇಡಿಮಣ್ಣು ಹೊಗೆಸೊಪ್ಪಿನ ಬೆಳೆಗೆ ಪ್ರಶಸ್ತ. ಇದು ರಾಜ್ಯದ ಮುಖ್ಯ ಕೃಷಿ ಪ್ರದೇಶ, ಬಯಲಿನ ಮುಖ್ಯ ನದಿಗಳೆಂದರೆ ರೋವನೋಕ್, ಚೌವಾನ್, ಟಾರ್-ಪಾಮ್ಲೀಕೊ, ನೂಸ್-ಟ್ರೆಂಟ್ ಮತ್ತು ಕೇಪ್ ಫೀರ್. ಇವುಗಳ ಪೈಕಿ ಕೇಪ್ ಫೀರ್ ಒಂದೇ ಹಡಗು ಸಂಚಾರಕ್ಕೆ ಯೋಗ್ಯ. ಈ ನದಿಯ ಮುಖದ ಮೇಲಿರುವ ವಿಲ್ಮಿಂಗ್ಟನ್ ರಾಜ್ಯದ ಮುಖ್ಯ ಆಳನೀರಿನ ಬಂದರು. ಪೀಡ್ಮಾಂಟ್ ಪ್ರಸ್ಥಭೂಮಿಯ ಪರಮಾವಧಿ ಎತ್ತರ 457 ಮೀ, ಕನಿಷ್ಠ 122ಮೀ. ಆಗ್ನೇಯಾಭಿಮುಖವಾಗಿ ಇಳಿಜಾರಾಗಿರುವ ಈ ಪ್ರಸ್ಥಭೂಮಿಯ ಮುಖ್ಯ ನದಿಗಳು ಯಾಡ್ಕಿನ್, ಕೆಟಾಬ ಮತ್ತು ಬ್ರಾಡ್. ಇವುಗಳ ಆಳ ಕಡಿಮೆ, ವೇಗ ಹೆಚ್ಚು; ಅಬ್ಬಿಗಳು ಅನೇಕ. ಆದ್ದರಿಂದ ಹಡಗು ಸಂಚಾರಕ್ಕೆ ಯೋಗ್ಯವಲ್ಲ. ರಾಜ್ಯದ ಜವಳಿ, ಹೊಗೆಸೊಪ್ಪು, ಅಣೆಕಟ್ಟು ಕೈಗಾರಿಕೆಗಳು ಬೆಳೆದಿರುವುದು ಈ ಪ್ರದೇಶದಲ್ಲಿ.

 
ಉತ್ತರ ಕೆರೊಲಿನದ ಮೇಲ್ಮೈಲಕ್ಷಣದ ನಕ್ಷೆ

ಪಶ್ಚಿಮದ ಅಪಲೇಷಿಯನ್ ಪರ್ವತ ಪ್ರದೇಶದಲ್ಲಿ ಎರಡು ದೊಡ್ಡ ಶ್ರೇಣಿಗಳಿವೆ. ಇವುಗಳಲ್ಲಿ ಪೂರ್ವದ್ದು ಬ್ಲೂರಿಜ್; ಪಶ್ಚಿಮದ್ದು ಗ್ರೇಟ್ ಸ್ಮೋಕಿ. ಇವೆರಡನ್ನೂ ಕೂಡಿಸುವ ಅಡ್ಡ ಶ್ರೇಣಿಗಳು ಅನೇಕ. ಅವುಗಳ ಪೈಕಿ ಬ್ಲ್ಯಾಕ್ ಪರ್ವತದಲ್ಲಿರುವ ಮಿಚೆಲ್. 2035ಮೀ. ಅಮೆರಿಕ ಸಂಯುಕ್ತ ಸಂಸ್ಥಾನದ ಪೂರ್ವದಲ್ಲೇ ಅತ್ಯಂತ ಎತ್ತರದ ಶಿಖರ. ಪೂರ್ವ ಅಮೆರಿಕದಲ್ಲಿ ಅತ್ಯಂತ ಹೆಚ್ಚಿನ ಪರ್ವತ ಪ್ರದೇಶ ಇರುವುದು ಈ ರಾಜ್ಯದಲ್ಲೇ. ಆಕಾಶರಾಜ್ಯ ವೆಂದು ವರ್ಣಿತವಾಗಿರುವ ಈ ಸುಂದರ ಪ್ರದೇಶದಲ್ಲಿ 1827ಮೀ.ಗಳಿಗಿಂತ ಹೆಚ್ಚಿನ ಎತ್ತರದ 43 ಶಿಖರಗಳೂ 1525-1830 ಮೀ. ಗಳ ವರೆಗಿನ ಎತ್ತರದ 125 ಶಿಖರಗಳೂ ಇವೆ. ಪರ್ವತ ಕಣಿವೆಗಳು ಇಕ್ಕಟ್ಟಾಗಿ, ಕಡಿದಾಗಿವೆ. ಇಲ್ಲಿನ ನಿಸರ್ಗ ಸೌಂದರ್ಯ, ಆಹ್ಲಾದಕರ ವಾಯುಗುಣಗಳ ಜೊತೆಗೆ ಮಾನವನಿರ್ಮಿತವಾದ ಒಳ್ಳೆಯ ರಸ್ತೆಗಳೂ ಇರುವುದರಿಂದ ಇದು ಈ ರಾಷ್ಟ್ರದ ಪ್ರಮುಖ ಬೇಸಿಗೆತಾಣಗಳಲ್ಲೊಂದು. ಬ್ಲ್ಯಾಕ್ ಪರ್ವತಗಳ ತಲೆಯ ಮೇಲಿಂದ ಹಲವಾರು ತೊರೆಗಳು ಜಿಗಿದು ಹೊಳೆಗಳಾಗಿ ಸಂಭವಿಸಿ, ಕೆಲವು ಮಿಸಿಸಿಪಿಯನ್ನೂ ಕೆಲವು ಅಟ್ಲಾಂಟಿಕ್ ಸಾಗರವನ್ನೂ ಸೇರುತ್ತವೆ. ಬ್ಲೂರಿಜ್ನ ಪಶ್ಚಿಮದಲ್ಲಿ ಹಿವಾಸಿ, ಲಿಟ್ಲ್‌ ಟೆನಿಸಿ ಮತ್ತು ಫ್ರೆಂಚ್ ಬ್ರಾಡ್ ನದಿಗಳು ಹುಟ್ಟಿ ಟೆನಿಸಿಯನ್ನು ಸೇರುತ್ತವೆ. ಇನ್ನೂ ಉತ್ತರಕ್ಕೆ ನ್ಯೂ ನದಿ ಉದ್ಭವಿಸಿ ಒಹಾಯೊವಿನತ್ತ ಸಾಗುತ್ತದೆ. ಬ್ಲೂ ರಿಜ್ನ ಆಗ್ನೇಯ ಭಾಗದಲ್ಲಿ ಉಗಮಿಸುವ ಬ್ರಾಡ್, ಕೆಟಾಬ, ಯಾಡ್ಕಿನ್ ಸ್ವಲ್ಪದೂರ ಈಶಾನ್ಯಾಭಿಮುಖ ವಾಗಿ ಹರಿದು, ಪೀಡ್ ಮಾಂಟ್ ಪ್ರಸ್ಥಭೂಮಿಯ ಬೆನ್ನೇಣಿನ ಸಂದಿಯಿಂದ ಆಗ್ನೇಯ ದಿಕ್ಕಿಗೆ ತಿರುಗಿ, ರಾಜ್ಯದ ಗಡಿ ದಾಟಿ ದಕ್ಷಿಣ ಕೆರೊಲೀನದಲ್ಲಿ ಧಾವಿಸಿ ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ.

ವಾಯುಗುಣಸಂಪಾದಿಸಿ

ರಾಜ್ಯದ ಆಗ್ನೇಯದಂಚಿನಲ್ಲಿ ಉಪೋಷ್ಣ (ಸಬ್ಟ್ರಾಪಿಕಲ್) ವಾಯುಗುಣವಿದೆ. ಪರ್ವತ ಪ್ರದೇಶದಲ್ಲಿ ಸ್ಥೂಲವಾಗಿ ಮಧ್ಯಮ ಖಂಡಾಂತರ ವಾಯುಗುಣ. ರಾಜ್ಯದ ಸರಾಸರಿ ವಾರ್ಷಿಕ ಮಳೆ 130 ಸೆಂಮೀ. ಪರ್ವತದ ಮೇಲೆ ಹೆಚ್ಚು (140 ಸೆಂಮೀ).

ಸಸ್ಯ ಪ್ರಾಣಿ ಸಂಪತ್ತುಸಂಪಾದಿಸಿ

ವೈವಿಧ್ಯಮಯ ವಾಯುಗುಣ ಹಾಗೂ ಮಣ್ಣಿನಿಂದಾಗಿ ಇಲ್ಲಿನ ಸಸ್ಯ ಸಂಪತ್ತೂ ವೈವಿಧ್ಯಪುರಿತ. ಶೀತವಲಯದ ನೆರೆಪ್ರದೇಶದ ಸಸ್ಯಗಳಿಂದ ಹಿಡಿದು ಉಪೋಷ್ಣವಲಯದ ಕಿರುತಾಳೆಯವರೆಗೆ ನಾನಾ ಜಾತಿ ಇಲ್ಲಿವೆ. ಮರದ ದಿಮ್ಮಿ ಉತ್ಪಾದನೆಯಲ್ಲಿ ಇದು ರಾಷ್ಟ್ರದಲ್ಲಿ ಐದನೆಯ ರಾಜ್ಯ. ಪೀತದಾರು ಮರ ಎಲ್ಲೆಲ್ಲೂ ಬೆಳೆಯುತ್ತದೆ. ಸಮುದ್ರತೀರದ ಬಳಿಯಲ್ಲಿ ವೀನಸ್ ಫ್ಲೈ-ಟ್ರ್ಯಾಪ್ ಎಂಬ ನೊಣಹಿಡುಕ ಮಾಂಸಾಹಾರಿ ಸಸ್ಯವೂ ಉಂಟು. ವನ್ಯಪ್ರಾಣಿಗಳಲ್ಲಿ ಕುಂದಿಲಿ, ಅಳಿಲು, ತುಪ್ಪಳುಮೈ, ಪೊದೆಬಾಲ, ಮೊನೆ ಮುಸುಡಿಯ ರ್ಯಾಕೂನ್, ಹೆಬ್ಬೆಟ್ಟುಳ್ಳ ಹಿಂಗಾಲಿರುವ ವೃಕ್ಷವಾಸಿ ಜಲವಾಸಿ ನಿಶಾಚರ ಪ್ರಾಣಿ ಒಪಾಸಮ್, ಜಿಂಕೆ, ಕರಡಿ, ನರಿ, ಕಾಡುಬೆಕ್ಕು ಸಾಮಾನ್ಯ, ಕೆಂಬಕ್ಕಿ (ಕಾರ್ಡಿನಲ್), ಮೊಂಡು ಪುಕ್ಕಿ (ರೆನ್), ಅಣಕ ಹಕ್ಕಿ (ಮಾಕಿಂಗ್ ಬರ್ಡ್), ಚಿಕಡಿ, ಮರಕುಟಿಗ, ಕೋಗಿಲೆ, ಬೆಳವ, ಲಾವಕ್ಕಿ, ಪಾರಿವಾಳ, ರಾಬಿನ್, ಬಾತು ಕೋಳಿ ಮುಂತಾದ ಹಕ್ಕಿಗಳಿವೆ. ಮೀನುಗಾರಿಕೆಯಲ್ಲೂ ಈ ಪ್ರಾಂತ್ಯ ಪ್ರಗತಿಗೊಂಡಿದೆ.

ವ್ಯವಸಾಯ, ಖನಿಜ, ಕೈಗಾರಿಕೆಸಂಪಾದಿಸಿ

ವಾಣಿಜ್ಯದೃಷ್ಟಿಯಿಂದ ಹತ್ತಿ, ಹೊಗೆಸೊಪ್ಪು ಇಲ್ಲಿನ ಮುಖ್ಯ ಬೆಳೆಗಳು. ಹತ್ತಿ ಬೆಳೆಯಲು ಹಿತಕರವಾದ ವಾಯುಗುಣ ಈ ದೇಶದ ಮೂರರಲ್ಲೆರಡು ಭಾಗದಷ್ಟು ಪ್ರದೇಶದಲ್ಲಿದೆ. ಮೆಕ್ಕೆಜೊಳ ಸರ್ವವ್ಯಾಪಿ. ಗೆಣಸು, ನೆಲಗಡಲೆ, ಸೋಯ ಬೀನ್ಸ್‌, ಪೀಚ್ ಹಣ್ಣು-ಇತರ ಬೆಳಸು. ವಾಯವ್ಯದಲ್ಲಿ ಗೋದಿಯನ್ನು ತಕ್ಕ ಮಟ್ಟಿಗೆ ಬೆಳೆಯುತ್ತಾರೆ. ರೈ, ಓಟ್ಸ್‌, ಗೋದಿ ಪರ್ವತಪ್ರದೇಶದ ಬೆಳೆಗಳು. ಹಸು, ಹಂದಿ ಮುಖ್ಯ ಸಾಕುಪ್ರಾಣಿಗಳು. ಖನಿಜಗಳಲ್ಲಿ ಫೆಲ್ಸ್ಪಾರ್ ಮತ್ತು ಅಭ್ರಕ ಮುಖ್ಯ. ಇವು ರಾಜ್ಯದ ಪಶ್ಚಿಮ ಭಾಗದಲ್ಲಿ ದೊರಕುತ್ತವೆ. ಕಲ್ನಾರು, ಬಿಳಿಯ ಜೇಡಿ ಮಣ್ಣು (ಕಾಯೊಲಿನ್) ನಿಕಲ್ ಇತರ ಖನಿಜಗಳು. ವಿಲ್ಮಿಂಗ್ಟನ್ನಿನಲ್ಲಿ ಸಮುದ್ರಜಲದಿಂದ ಬ್ರೋಮೀನ್ ತಯಾರಿಸುತ್ತಾರೆ. ಹತ್ತಿ ಜವಳಿ, ಹೊಗೆಸೊಪ್ಪು, ಅಣಿಕಟ್ಟು ತಯಾರಿಕೆ ಮುಖ್ಯ ಕೈಗಾರಿಕೆಗಳು. ಈ ರಾಜ್ಯದಲ್ಲಿ ಕಲ್ಲಿದ್ದಲಿಲ್ಲ. ಪೀಡ್ಮಾಂಟ್ ಪ್ರದೇಶದಲ್ಲಿ ಜಲವಿದ್ಯುತ್ ಉತ್ಪಾದನೆ ಆಗುತ್ತದೆ. ಷಾರ್ಲಟಿ, ಗ್ರೀನ್ಸ್‌ಬರೊ, ರ್ಯಾಲಿ ಮುಖ್ಯ ಜವಳಿ ಉತ್ಪಾದನ ಕೇಂದ್ರಗಳು. ಡರೆಂ, ವಿನ್ಸ್‌ಟನ್-ಸೇಲಂಗಳು ಹೊಗೆಸೊಪ್ಪಿನ ಕೈಗಾರಿಕೆಯಲ್ಲಿ ಮುಂದಾಗಿವೆ. (ಸಿ.ಎಂ.; ಜೆ.ಇ.ಸಿ.)

ಸಾರಿಗೆಸಂಪಾದಿಸಿ

ಸಾರಿಗೆ-ಸಂಪರ್ಕಮಾಧ್ಯಮವೂ ಉತ್ತಮವಾಗಿದೆ. ಸು. 1.45,280 ಕಿಮೀ ರಸ್ತೆಗಳು, 6600 ಕಿಮೀ ಉದ್ದದ ರೈಲುಮಾರ್ಗಗಳಿವೆ. 250ಕ್ಕಿಂತಲೂ ಹೆಚ್ಚು ವಿಮಾನ ನಿಲ್ದಾಣಗಳಿವೆ ಮತ್ತು 1500 ಕಿಮೀ ಉದ್ದದ ಕೊಳವೆ ಮಾರ್ಗಗಳಿವೆ.

ಇತಿಹಾಸಸಂಪಾದಿಸಿ

 
Ceremony of Secotan warriors in North Carolina. Watercolour painted by English colonist John White in 1585.

ಈ ರಾಜ್ಯದ ಇತಿಹಾಸವನ್ನು ಸ್ಥೂಲವಾಗಿ ನಾಲ್ಕು ಕಾಲಗಳಾಗಿ ವಿಂಗಡಿಸ ಬಹುದು. ಮೊದಲನೆಯದು ವಸಾಹತು ನಿರ್ಮಾಣಕಾಲ (1524-1663). ಖಾಸಗಿ ಮಾಲೀಕರ ಆಡಳಿತದ ಕಾಲವೇ ಎರಡನೆಯದು (1663-1729). ಮೂರನೆಯ ಕಾಲದಲ್ಲಿ ಈ ಪ್ರದೇಶದ ಆಡಳಿತ ಇಂಗ್ಲೆಂಡ್ ದೊರೆಗಳ ಕೈಯಲ್ಲಿತ್ತು (1729-76). ಅಲ್ಲಿಂದೀಚೆಗೆ ಇದು ಅಮೆರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳಲ್ಲಿ ಒಂದಾಗಿ ಮುಂದುವರಿಯುತ್ತಿದೆ. ತೀರಪ್ರದೇಶವನ್ನು ಪರಿಶೋಧಿಸಿದ ಪ್ರಥಮ ಐರೋಪ್ಯರೆಂದರೆ ಫ್ರೆಂಚರು (1524). ಎರಡು ವರ್ಷಗಳ ಅನಂತರ ಸ್ಪೇನಿಗರು ಇಲ್ಲೊಂದು ತಾತ್ಕಾಲಿಕ ವಸಾಹತು ಹೂಡಿದರು. ಆದರೆ ಇವರಿಬ್ಬರಲ್ಲಿ ಯಾರೂ ಇಲ್ಲಿ ಶಾಶ್ವತವಾಗಿ ಆಡಳಿತ ಸ್ಥಾಪಿಸಲು ಸಾಧ್ಯವಾಗಲಿಲ್ಲ.

 
1st Maryland Regiment holding the line at the Battle of Guilford

1584ರಲ್ಲಿ ಬ್ರಿಟನ್ನಿನ ರಾಣಿ ಎಲಿಜಬೆತಳಿಂದ ಏಕಸ್ವ (ಪೇಟೆಂಟ್) ಪಡೆದು ಸರ್ ವಾಲ್ಟರ್ ರ್ಯಾಲಿ ಇಲ್ಲಿಗೆ ಫಿಲಿಪ್ ಆಮಿಡಾಸನನ್ನು ಕಳಿಸಿದ. 1585ರಲ್ಲಿ ಇಲ್ಲಿ ಒಂದು ಬ್ರಿಟಿಷ್ ವಸಾಹತು ಸ್ಥಾಪಿತವಾಯಿತು. ಆದರೆ ಕ್ಷಾಮ ಹಾಗೂ ಸ್ಥಳೀಯ ಇಂಡಿಯನ್ನರ ವಿರೋಧದಿಂದ ವಲಸೆಗಾರರು ಮುಂದುವರಿಯಲಿಲ್ಲ. ಕೆಲವರು ಸತ್ತರು. ಹಲವರು ನಾಪತ್ತೆಯಾದರು. ಇದರ ವಿಚಿತ್ರ ಭೌಗೋಳಿಕ ಪರಿಸ್ಥಿತಿಯಿಂದಾಗಿ ಈ ವಸಾಹತಿನ ಬೆಳೆವಣಿಗೆ ವರ್ಜೀನಿಯದ ಮೂಲಕವಾಗಿಯೇ ಸಾಧ್ಯವಾಯಿತು. 1663ರಲ್ಲಿ ಎರಡನೆಯ ಚಾಲ್ರ್ಸ್‌ ತನ್ನ ಕಡೆಯ ಕೆಲವರಿಗೆ ಈ ಪ್ರದೇಶವನ್ನು ಧಾರೆಯೆರೆದ. ಇವರು ಇದರ ಮಾಲೀಕರಾಗಿ ಇಲ್ಲಿಗೆ ರಾಜ್ಯಪಾಲನೊಬ್ಬನನ್ನು ನೇಮಿಸಿದರು. ಆತ ಇದಕ್ಕಾಗಿ ಊಳಿಗಮಾನ್ಯ ರೀತಿಯ ಸಂವಿಧಾನವೊಂದನ್ನು ರಚಿಸಿದ. ಆದರೆ ಇದು ವ್ಯಾವಹಾರಿಕವೆನಿಸಲಿಲ್ಲ. ಅಟ್ಲಾಂಟಿಕ್ ಸಾಗರದಾಚೆಗಿನ ಮಾಲೀಕರ ಆಜ್ಞಾನುವರ್ತಿಗಳು ಇಲ್ಲಿದ್ದ ಸಾಹಸಪ್ರಿಯ ಕಷ್ಟಸಹಿಷ್ಣು ವಲಸೆಗಾರರನ್ನಾಳುವುದು ಅಷ್ಟು ಸುಲಭವಾಗಲಿಲ್ಲ. 1670ರಲ್ಲಿ ಇದು ದಕ್ಷಿಣ ಕೆರೊಲಿನದಿಂದ ಪ್ರತ್ಯೇಕವಾಯಿತು. 1729ರಲ್ಲಿ ಇಂಗ್ಲೆಂಡಿನ ದೊರೆ ಈ ವಸಾಹತಿನ ಎಂಟು ಮಂದಿ ಮಾಲೀಕರ ಪೈಕಿ ಏಳು ಮಂದಿಯ ಷೇರುಗಳನ್ನು ಕೊಂಡಾಗ ಇದರ ಆಡಳಿತ ಇಂಗ್ಲೆಂಡ್ ದೊರೆಗಳ ವಶವಾಯಿತು. 1670ರಲ್ಲಿ ಪ್ರಥಮವಾಗಿ ದಕ್ಷಿಣ ಕೆರೊಲೀನದಿಂದ ಪ್ರತ್ಯೇಕವಾಗಿ ಇದರ ಆಡಳಿತ ಆರಂಭವಾಯಿತು. ವಸಾಹತು ಕಾಲದಲ್ಲಿ ಈ ರಾಜ್ಯ ಗಳಿಸಿದ್ದ ಪ್ರಾಮುಖ್ಯಕ್ಕೆ ಹೊಗೆಸೊಪ್ಪಿನ ಉತ್ಪಾದನೆಯೇ ಕಾರಣ. ಇದರ ಅರಣ್ಯೋತ್ಪಾದನೆಯ ಮೇಲೂ ಆಳರಸರ ಕಣ್ಣಿತ್ತು. ದೇಶದ ಆಡಳಿತದಲ್ಲಿ ಹೆಚ್ಚು ಪ್ರಭಾವ ಗಳಿಸಿದ್ದ ಪೂರ್ವಪ್ರದೇಶದ ಜನರ ವಿರುದ್ಧವಾಗಿ 1760ರ ದಶಕದ ಉತ್ತರಾರ್ಧದಲ್ಲಿ ಈ ಪ್ರದೇಶದ ಜನರಲ್ಲಿ ಅಸಮಾಧಾನ ಹಬ್ಬಿ, ಇವರು ಬಂಡಾಯವೆಬ್ಬಿಸಿದರು. 1771ರಲ್ಲಿ ಈ ಬಂಡಾಯವನ್ನಡಗಿಸಲಾಯಿತು. 1860ರ ಅಮೆರಿಕನ್ ಸ್ವಾತಂತ್ರ್ಯ ಯುದ್ಧದಲ್ಲಿ ಇದೂ ಭಾಗವಹಿಸಿ ಕೊನೆಗೆ ಅದರ ಅಂಗರಾಜ್ಯವಾಗಿ ಸೇರಿತು. ಅಂತರ್ಯುದ್ಧದ ಸಮಯದಲ್ಲಿ ಇದು ಉತ್ತರ ದಕ್ಷಿಣಗಳ ನಡುವೆ ಒಪ್ಪಂದವೇರ್ಪಡಿಸಲು ಹೆಣಗಿತು. ಕೊನೆಗೆ ಇಲ್ಲೂ ಪ್ರತ್ಯೇಕತೆಯ ಭಾವನೆ ಹಬ್ಬಿದಾಗ ಸಂಯುಕ್ತಸಂಸ್ಥಾನ ಪಡೆಗಳು ಇದರ ಉತ್ತರದ ಪ್ರದೇಶವನ್ನು ಹಿಡಿದುಕೊಂಡಿದ್ದವು. ಈ ರಾಜ್ಯದ ಪ್ರದೇಶದಲ್ಲೇ ಅನೇಕ ಕದನಗಳು ನಡೆದವು. ವಿಲ್ಮಿಂಗ್ಟನ್ ಬಂದರು ಕೇಂದ್ರ ಸರ್ಕಾರದ ಪಡೆಗಳ ವಶವಾದಾಗ, ಬಾಹ್ಯ ಪ್ರಪಂಚದೊಂದಿಗೆ ದಕ್ಷಿಣ ರಾಜ್ಯಗಳವರು ಹೊಂದಿದ್ದ ಕೊನೆಯ ಕೊಂಡಿಯೂ ಮುರಿದುಬಿದ್ದು, ಅವರ ಪ್ರತ್ಯೇಕತೆಯ ಕನಸು ಕೊನೆಗೊಂಡಿತು. ಮುಂದೆ 1870ರ ವರೆಗೂ ಈ ರಾಜ್ಯ ಪುನಾರಚನೆಯ ಸಮಸ್ಯೆಗಳನ್ನೆದುರಿಸ ಬೇಕಾಗಿ ಬಂತು. ಅಲ್ಲಿಂದೀಚೆಗೆ ಇದು ಶೀಘ್ರವಾಗಿ ಮುನ್ನಡೆಯುತ್ತಿದೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ

History
Government and education
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: