ಉತ್ತರ ಅಮೆರಿಕದ ಭೂವಿನ್ಯಾಸ

ಉತ್ತರ ಅಮೆರಿಕದ ಭೂವಿನ್ಯಾಸ ಭೂವಿನ್ಯಾಸ, ಶಿಲೆಗಳ ರಚನೆ, ಸಂಯೋಜನೆ ಅವಿತಿರುವ ಭೂಭಾಗದ ಇತಿಹಾಸ ಮತ್ತು ಅವುಗಳ ಪ್ರಸಕ್ತಸ್ಥಿತಿ ಈ ಅಂಶಗಳನ್ನನುಸರಿಸಿ ಉತ್ತರ ಅಮೆರಿಕವನ್ನು ಐದು ವಿಭಾಗಗಳಾಗಿ ವಿಂಗಡಿಸಬಹುದು.

ಕೆನಡಿಯನ್ ಶಾಶ್ವತ ಭೂಖಂಡ ಬದಲಾಯಿಸಿ

ಈ ಭಾಗದಲ್ಲಿ ಪ್ರಪಂಚದಲ್ಲೇ ಅತ್ಯಂತ ಹಳೆಯವೆನಿಸಿದ ಶಿಲೆಗಳನ್ನು ಕಾಣಬಹುದು. ಇವುಗಳಲ್ಲಿ ಬಹುಪಾಲು ಕಣ ಶಿಲೆಗಳ ಸಮುದಾಯ, ರಚನೆಯೂ ಬಹುಕ್ಲಿಷ್ಟ. ಈ ಆಧಾರದ ಮೇಲೆ ಈ ಭೂಭಾಗ ಹಲವಾರು ಬಾರಿ ತೀವ್ರ ತೆರನಾದ ಭೂ ಚಟುವಟಿಕೆಗಳಿಗೆ ಒಳಗಾಗಿತ್ತೆಂದು ಊಹಿಸಬಹುದು. ಪ್ರಸ್ತುತ ಮೇಲ್ಮೈಲಕ್ಷಣ ಭೂಚರಿತ್ರೆಯ ಆದಿಯುಗಗಳಲ್ಲಿ ಉಂಟಾದ ಪರ್ವತಜನ್ಯಶಕ್ತಿಗಳಿಂದಲೇ ಆದುದೆಂದು ಭಾವಿಸಲು ಸಾಧ್ಯವಿಲ್ಲ. ಅದು ಇತ್ತೀಚಿನ ಯುಗಗಳಲ್ಲಿ ಕಂಡುಬಂದ ಹಿಮನದಿಗಳ ಕಾರ್ಯಾಚರಣೆಯಿಂದಾದುದು. ಪ್ಲಿಸ್ಟೋಸೀನ್ ಕಾಲದಲ್ಲಿ ಉತ್ತರ ಅಮೆರಿಕದ ಇಡೀ ಉತ್ತರ ಭಾಗಗಳನ್ನೆಲ್ಲ ಆವರಿಸಿದ್ದ ಖಂಡಾಂತರ ವರ್ಗದ ಹಿಮಗಳಿಗೆ ಈ ಭಾಗವೇ ಕೇಂದ್ರವಾಗಿತ್ತು. ಇಲ್ಲಿಂದ ಹಿಮನದಿಗಳು ದಕ್ಷಿಣದತ್ತ ಚಲಿಸಿದುವು. ಹೀಗೆ ಮಂದಗತಿಯಲ್ಲಿ ಚಲಿಸುವಾಗ ಬೀಳುಬಿದ್ದ ಭೂಮಿಯ ಹೊರಮೈಯ ಶಿಲಾವಶೇಷಗಳನ್ನು ತಮ್ಮೊಡನೆ ಹೊತ್ತು ಮುಂದುವರಿದುವು. ಕ್ರಮೇಣ ಹಿಮನದಿಗಳು ಕರಗಿದಾಗ ಅವುಗಳೊಡನೆ ಸಾಗುತ್ತಿದ್ದ ಶಿಲಾಕಳಪೆಯ ಬಹುಭಾಗ ದೂರದ ಕೇಂದ್ರದ ತಗ್ಗು ಪ್ರದೇಶಗಳಲ್ಲೂ ಅಲ್ಪಸ್ವಲ್ಪ ಭಾಗ ಕೆನಡಿಯನ್ ಭೂಖಂಡದಲ್ಲೂ ಸಂಚಿತವಾಯಿತು. ಶಾಶ್ವತ ಭೂಖಂಡದ ಬಹುಭಾಗ ಹಿಮನದಿಗಳಿಂದ ತೇಯಲ್ಪಟ್ಟು ಅಷ್ಟು ಕಡಿದಾಗಿರದ ಬೆಟ್ಟಗಳಿಂದ ಕೂಡಿದೆ. ಇವುಗಳ ಸಾಮಾನ್ಯ ಎತ್ತರ ನೂರು ಅಡಿಗಳು. ಈ ಭೂಭಾಗದಲ್ಲಿ ಅನೇಕ ಕಡೆ ಹಿಮನದಿಗಳ ಕೊರೆತದಿಂದುಂಟಾದ ಸರೋವರಗಳು, ಕಮರಿಗಳು ಮತ್ತು ಜೌಗುಪ್ರದೇಶಗಳನ್ನು ನೋಡಬಹುದು. ಹಲವು ಭಾಗಗಳಲ್ಲಿ ಬಹು ಎತ್ತರವಾದ ಮತ್ತು ಅಷ್ಟೇ ಕಡಿದಾದ ಪರ್ವತ ಸಾಲುಗಳೂ ಇವೆ. ಇವು ಅಷ್ಟಾಗಿ ಹಿಮನದಿಯ ಹಾವಳಿಗೆ ಒಳಗಾಗಿಲ್ಲ. ಅಂದರೆ ಹಿಮನದಿಗಳು ಇವುಗಳಿಗಿಂತ ಕೆಳಮಟ್ಟದಲ್ಲಿದ್ದು ಇವುಗಳನ್ನು ಸಂಪೂರ್ಣವಾಗಿ ಆವರಿಸಲು ಸಾಧ್ಯವಾಗಲಿಲ್ಲ.[೧]

ಕೇಂದ್ರದ ತಗ್ಗು ಪ್ರದೇಶ ಬದಲಾಯಿಸಿ

ಇದು ಕೆನಡಿಯನ್ ಶಾಶ್ವತ ಭೂಖಂಡದ ದಕ್ಷಿಣ ಮತ್ತು ಪಶ್ಚಿಮದತ್ತ ಹರಡಿದೆ. ಇಲ್ಲಿ ಕಣಶಿಲೆಗಳಿಂದ ಕೂಡಿದ ಅಡಿಯ ಶಿಲಾ ಸಮುದಾಯದ ಮೇಲೆ ಜಲಜಶಿಲಾ ಪ್ರಸ್ತರಗಳು ಕಂಡುಬರುತ್ತವೆ. ಪಶ್ಚಿಮ ಮತ್ತು ಪೂರ್ವ ವಲಯಗಳ ಪರ್ವತ ಶ್ರೇಣಿಗಳು ಮತ್ತು ಶಾಶ್ವತ ಭೂಖಂಡ ಪ್ರದೇಶಗಳ ಸವೆತದಿಂದ ಬಂದ ಶಿಲಾಛಿದ್ರಗಳ ಸಂಚಯನದಿಂದ ಉಂಟಾದುದೇ ಈ ಶಿಲಾಪ್ರಸ್ತರ ಸಮೂಹ. ಭೂಮಿಯ ಇತರ ಭಾಗಗಳನ್ನು ಮಡಿಸಿ ಸುಕ್ಕುಮಾಡಿದ ಭೂಚಟುವಟಿಕೆಗಳ ಪ್ರಭಾವಕ್ಕೆ ಈ ಪ್ರದೇಶ ಒಳಗಾಗಿಲ್ಲವೆಂದೇ ಹೇಳಬೇಕು. ಇಲ್ಲಿಯ ಪೇಲಿಯೋeóÉೂೀಯಿಕ್ ಯುಗದ ಜಲಜಶಿಲೆಗಳು ಬೃಹದಾಕಾರದ ಗುಮ್ಮಟಗಳಾಗಿ, ಕಮಾನುಗಳಾಗಿ, ಬಾಣಲೆಯಂತೆ ಕುಳಿಬಿದ್ದು ಕಮರಿಗಳಾಗಿ ಮಾರ್ಪಟ್ಟ್ಟಿದ್ದರೂ ಅವುಗಳ ಮಟ್ಟಸವಾದ ವಿನ್ಯಾಸ ಎಲ್ಲೆಲ್ಲೂ ಎದ್ದು ಕಾಣುತ್ತದೆ. ತಗ್ಗುಪ್ರದೇಶದ ಪಶ್ಚಿಮ ಭಾಗದಲ್ಲಿ ಮೀಸೊeóÉೂೀಯಿಕ್ ಮತ್ತು ಟರ್ಷಿಯರಿ ಯುಗಗಳ ಜಲಜಶಿಲೆಗಳ ಸಮುದಾಯವಿದೆ. ಈ ಪ್ರಸ್ತರಶಿಲೆಗಳು ರಾಕೀ ಪರ್ವತಗಳ ಭೂಸವೆತದಿಂದ ಉಂಟಾದ ಶಿಲಾಬೀಳಿನ ಶೇಖರಣೆಯಿಂದಾದುವು. ಕ್ರಮೇಣ ಈ ಭೂಭಾಗದ ನದಿಗಳ ಕಾರ್ಯಾಚರಣೆಗೂ ಒಳಗಾದಾಗ ಕಡಿದಾದ ಕಣಿವೆಗಳೂ ಕಂದರಗಳೂ ನಿರ್ಮಿತವಾದುವು.[೨]

ಪ್ಲಿಸ್ಟೊಸೀನ್ ಹಿಮನದಿಗಳು ತಾವು ಸಾಗಿಸುತ್ತಿದ್ದ ಶಿಲಾಕಣಗಳನ್ನು ಈಗಿನ ಮಿಸೂóರಿ ನದಿಯ ಪೂರ್ವ ಭಾಗದಲ್ಲೂ ಒಹಾಯೊ ನದಿಯ ಉತ್ತರ ಭಾಗದಲ್ಲೂ ಶೇಖರಿಸಿದುವು. ಅಲ್ಲದೆ ಕೆಲವು ಕಡೆ ಹಿಮನದಿಗಳು ಹೊರಚಾಚುಗಳು ಕರಗಿ ತಾವು ತರುತ್ತಿದ್ದ ಶಿಲಾ ಬೀಳನ್ನು ಹಿಂದೆ ಬಿಟ್ಟ ಕಾರಣ ಸುಮಾರು ನೂರಿನ್ನೂರು ಅಡಿ ಎತ್ತರದ ಬೆಟ್ಟಗಳ ಸಾಲು ಮತ್ತು ಶಿಲಾ ಏಣಿಗಳು ಮೈವೆತ್ತುವು; ಮತ್ತೆ ಕೆಲವು ವೇಳೆ ಹಿಮನದಿಗಳು ಸಾಗಿಸುತ್ತಿದ್ದ ಶಿಲಾ ಮುರಕಲು ಚೆಲ್ಲಾಪಿಲ್ಲಿಯಾಗಿ ಹರಡಿ ಕರಗಿದ ಹಿಮಗೆಡ್ಡೆಗಳ ನೀರಿಗೆ ಅಡ್ಡಗಟ್ಟಿದಂತಾಗಿ ಸಣ್ಣ ಪುಟ್ಟ ಸರೋವರಗಳೂ ಜೌಗು ಪ್ರದೇಶಗಳೂ ಉಂಟಾದುವು.

ಈ ಭೂಪ್ರದೇಶದ ದಕ್ಷಿಣದ ಭಾಗದಲ್ಲಿನ ಜಲಜಶಿಲಾ ಸಮುದಾಯವನ್ನು ದಾಟಿ ಹೋದಲ್ಲಿ ಅಪಲೇಷಿಯನ್ ಪ್ರಸ್ಥಭೂಮಿ ಮತ್ತು ಓeóÁರ್ಕ್ ಔಷಿಟಾ ಪ್ರಸ್ಥಭೂಮಿಗಳನ್ನು ನೋಡಬಹುದು. ಇಲ್ಲಿ ನೂರಾರು ಅಡಿ ಎತ್ತರದ ಕಡಿದಾದ ಬೆಟ್ಟಗಳೂ ಅತ್ಯಂತ ಆಳವಾದ ನದಿ ಕಣಿವೆಗಳೂ ಇವೆ.

ಅಪಲೇಷಿಯನ್ ಪ್ರಸ್ಥಭೂಮಿ ಬದಲಾಯಿಸಿ

ಪೇಲಿಯೊeóÉೂೀಯಿಕ್ ಯುಗದ ಶಿಲಾಪ್ರಸ್ತರಗಳು, ತೀವ್ರಗತಿಯ ಭೂಚಟುವಟಿಕೆಗಳಿಗೊಳಗಾದ ಕಾರಣ ಹೆಚ್ಚಿನ ರೀತಿಯಲ್ಲಿ ಮಡಿಕೆಬಿದ್ದು ಮೇಲಕ್ಕೆ ಒಯ್ಯಲ್ಪಟ್ಟು ಪರ್ವತಪಂಕ್ತಿಗಳಾಗಿವೆ. ಅನೇಕ ಕಡೆ ಸ್ತರಭಂಗಗಳನ್ನೂ ಗುರುತಿಸಬಹುದು. ಪೀಡ್‍ಮಾಂಟ್ ಮತ್ತು ಬ್ಲೂರಿಜ್ ಪರ್ವತಪ್ರದೇಶಗಳ ಶಿಲಾಸಮುದಾಯ ತೀವ್ರಗತಿಯ ಪರ್ವತಜನ್ಯ ಶಕ್ತಿಗಳಿಗೆ ಸಿಕ್ಕಿ ಕಣಶಿಲೆಗಳಾಗಿ ಮಾರ್ಪಟ್ಟಿವೆ.

ಈ ಕಣಶಿಲಾ ಸಮುದಾಯದ ಪಶ್ಚಿಮಕ್ಕೆ ಬೆಟ್ಟಗಳೂ ಕಣಿವೆಗಳೂ ಹರಡಿವೆ. ಭೂಶಕ್ತಿಗಳೂ ಪೂರ್ವದ ಕಡೆಯಿಂದ ಉದ್ಭವವಾದುವೆಂದು ಇವುಗಳ ಹರವು ಸೂಚಿಸುತ್ತದೆ. ಮುಂದೆ ತಲೆದೋರಿದ ಭೂ ಉತ್ಕರ್ಷ, ಮಡಿಕೆ ಬೀಳುವಿಕೆ, ಸ್ತರಭಂಗ ಮತ್ತು ಭೂಸವೆತಗಳೂ ಈ ಶಿಲೆಗಳ ರಚನೆಯನ್ನು ಕ್ಲಿಷ್ಟಗೊಳಿಸಿವೆ. ಇದನ್ನನುಸರಿಸಿಯೇ ಈ ಭೂಭಾಗದ ಇಂದಿನ ಮೈಲ್ಮೈಲಕ್ಷಣ ರೂಪುಗೊಂಡಿದೆ. ಭೂಶಕ್ತಿಗಳು ಪಶ್ಚಿಮದತ್ತ ಸರಿದು ಕ್ರಮೇಣ ಶಕ್ತಿಹೀನಗೊಂಡು ಕಟ್ಟಕಡೆಗೆ ಹೇಳಹೆಸರಿಲ್ಲದಂತಾದುವು. ಹೀಗಾಗಿ ಪಶ್ಚಿಮ ಪ್ರದೇಶದ ಭೂಭಾಗಗಳ ಮೇಲ್ಮೈಲಕ್ಷಣ ನಿಖರವಾಗಿ ರೂಪುಗೊಂಡಿದ್ದರೂ ಶಿಲಾರಚನೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಗುರುತಿಸಲು ಬಹು ಕಷ್ಟ. ಇವುಗಳ ಮತ್ತು ಪೂರ್ವ ಭಾಗಗಳ ಶಿಲಾಸಮುದಾಯಗಳ ರಚನೆಯಲ್ಲಿ ಸಾಮ್ಯತೆ ಕಂಡುಬಂದಿದೆ. ಇಲ್ಲಿಯೂ ಬೆಟ್ಟ, ಏಣಿ (ರಿಜ್) ಮತ್ತು ಕಣಿವೆಗಳಿವೆ. ಇವು ಸಮುದ್ರಮಟ್ಟದಿಂದ ಬಹುತೇಕ 300'-1500' ಗಳಷ್ಟು ಎತ್ತರವಾಗಿದೆ.[೩]

ತೀರ ಪ್ರದೇಶ ಬದಲಾಯಿಸಿ

ಈ ಭಾಗದ ಶಿಲೆಗಳ ರಚನೆ ಬಹು ಸರಳ. ಇಡೀ ಉತ್ತರ ಅಮೆರಿಕದ ಬೇರೆಲ್ಲೂ ಇಷ್ಟು ಸರಳವಾದ ರಚನೆಯನ್ನು ನೋಡಲಾರೆವು. ಪೂರ್ವಕ್ಕೆ ಪೀಡ್‍ಮಾಂಟ್ ಕಣಶಿಲೆಗಳು. ಪಶ್ಚಿಮದತ್ತ ಕೇಂದ್ರ ತಗ್ಗುಪ್ರದೇಶ. ದಕ್ಷಿಣದ ಕಡೆ ಯಕಟಾನ್ ಪರ್ಯಾಯದ್ವೀಪ-ಈ ಭೂಭಾಗದ ಮೇಲೆ ಅಚ್ಟು ಗಡುಸಲ್ಲದ ಮೀಸೋeóÉೂೀಯಿಕ್ ಮತ್ತು ಟರ್ಷಿಯರಿ ಜಲಜಶಿಲಾನಿಕ್ಷೇಪಗಳನ್ನು ಗುರುತಿಸಬಹುದು. ಪ್ರಸ್ತರಗಳೂ ಸಾಮಾನ್ಯವಾಗಿ ಸಮುದ್ರದತ್ತ ವಾಲಿವೆ. ಸಮುದ್ರದ ಕರೆಯುದ್ದಕ್ಕೂ ಜೌಗುಪ್ರದೇಶವಿದ್ದು ಅದು ಈಚಿನ ವರ್ಷಗಳಲ್ಲಿ ಉಂಟಾದ ಭೂಭಾಗವೆಂದು ಮನಗಾಣಬಹುದು. ಅಲ್ಲಲ್ಲಿ ಭೂ ಸವೆತದಿಂದಾಗಿ ಸಣ್ಣಪುಟ್ಟ ಗುಡ್ಡಗಳೂ ಅಷ್ಟು ಕಡಿದಾಗಿರದ ಅಗಲವಾದ ಕಣಿವೆಗಳೂ ಇವೆ.[೪]

ಪಶ್ಚಿಮ ಪರ್ವತಶ್ರೇಣಿ (ಕಾರ್ಡಿಲೆರ) ಬದಲಾಯಿಸಿ

ಇವು ಕೆನಡಿಯನ್ ಶಾಶ್ವತ ಭೂಖಂಡದ ಮತ್ತು ಅಪಲೇಷಿಯನ್ ಪರ್ವತಗಳಿಗಿಂತಲೂ ವಯಸ್ಸಿನಲ್ಲಿ ಕಿರಿಯವು. ಬಹು ಎತ್ತರವಾಗಿಯೂ ಕಡಿದಾಗಿಯೂ ಇದ್ದು ಇಡೀ ಉತ್ತರ ಅಮೆರಿಕದ ಮೇಲ್ಮೈ ಲಕ್ಷಣದಲ್ಲಿ ಪ್ರಮುಖ ಸ್ಥಾನವನ್ನಾಕ್ರಮಿಸಿವೆ. ಶಿಲೆಗಳ ಹರವು ಉತ್ತರ-ದಕ್ಷಿಣಾಭಿಮುಖವಾಗಿದ್ದು ಅದನ್ನನುಸರಿಸಿ ಕಣಿವೆಗಳೂ ಕಂದರಗಳೂ ಮೈದೋರಿವೆ. ಈ ಶ್ರೇಣಿಯ ಉತ್ತರದ ಮತ್ತು ದಕ್ಷಿಣದ ಅತ್ಯುನ್ನತ ಶಿಖರಗಳು ಹಿಮನದಿಗಳಿಂದ ತೇಯಲ್ಪಟ್ಟು ಬಹು ಮೊನಚಾಗಿವೆ. ಈ ಕಾರ್ಯಾಚರಣೆಯಲ್ಲಿ ಬೀಳುಬಿದ್ದ ಶಿಲಾವಶೇಷಗಳು ಕಣಿವೆಗಳಲ್ಲಿ ಶೇಖರವಾಗಿವೆ. ಹಲವು ಶಿಖರಗಳ ತುದಿಯಲ್ಲಿ ಲುಪ್ತ ಮತ್ತು ಜಾಗೃತ ಜ್ವಾಲಾಮುಖಿಗಳಿವೆ. ಇವುಗಳಿಂದ ಹೊರಹೊಮ್ಮಿದ ಲಾವಾ ಪ್ರವಾಹಗಳು ಪ್ರಸ್ತರಗಳೋಪಾದಿಯಲ್ಲಿ ಶೇಖರಗೊಂಡಿವೆ. ಅಲ್ಲದೆ ಇವುಗಳೊಡನಿರುವ ಜಲಜ ಶಿಲೆಗಳು ಮಡಿಕೆ ಬೀಳದೆ, ತಮ್ಮ ಪ್ರಸ್ತರೀ ಸ್ವರೂಪವನ್ನು ಕಳೆದುಕೊಳ್ಳದೆ, ಭೂ ಉತ್ಕರ್ಷಗಳಿಗೊಳಗಾಗಿ ಸಹಸ್ರಾರು ಅಡಿಗಳ ಎತ್ತರಕ್ಕೆ ಒಯ್ಯಲ್ಪಟ್ಟು ವಿಶಾಲವಾದ ಪ್ರಸ್ಥಭೂಮಿಗಳಾಗಿ ಕಂಗೊಳಿಸುತ್ತವೆ.

ಉಲ್ಲೇಖಗಳು ಬದಲಾಯಿಸಿ

  1. https://www.britannica.com/place/North-America
  2. https://www.livescience.com/31910-north-america-geology-through-time.html
  3. https://www.britannica.com/place/Appalachian-Mountains/Geology
  4. https://www.britannica.com/place/Appalachian-Mountains/Geology