ಉತ್ತರಮೇರು ದರ್ಶನ: ಉತ್ತರಮೇರುವನ್ನು ಮೊದಲು ಸಂದರ್ಶಿಸಬೇಕೆಂಬ ಉತ್ಸಾಹ ದಿಂದ ಕಾರ್ಯಪ್ರವೃತ್ತವಾದ ತಂಡಗಳಿಂದ ಮೇರುವಿನ ಇತರ ಪ್ರದೇಶಗಳು ಪತ್ತೆಯಾದುವು, ಉತ್ತರದ ಗುರಿ ಹಿಡಿದ ಅನೇಕ ಸಾಹಸಿಗಳು ನಾನಾ ಬಗೆಯ ವಿಘ್ನಪರಂಪರೆಗಳನ್ನೆದುರಿಸಿ ದರು. 19ನೆಯ ಶತಮಾನದ ಕೊನೆಯಲ್ಲಿ ಬ್ರಿಟಿಷ್ ಹಾಗೂ ಅಮೆರಿಕನ್ ಅಭಿಯಾನಗಳು ಗ್ರೀನ್ಲ್ಯೆಂಡ್ ಮತ್ತು ಎಲ್ಸ್‌ಮೀರ್ ದ್ವೀಪದ ಕಿರು ಮಾರ್ಗದಲ್ಲಿ ಮುನ್ನುಗ್ಗಿದ್ದುವು (1875-84). ವಿಶೇಷ ರೀತಿಯಲ್ಲಿ ರಚಿಸಲಾದ ಹಡಗೊಂದನ್ನು ನಾನ್ಸನ್ 1893ರಲ್ಲಿ ತೊಡಗಿಸಿ ನೀರ್ಗಲ್ಲಿನ ಖಂಡದೊಂದಿಗೆ ಪಶ್ಚಿಮಾಭಿಮುಖವಾಗಿ ಸಾಗಿ ಉ.ಅ. 84ºರಲ್ಲಿ ಹಡಗು ತ್ಯಜಿಸಿ ಪಾದಯಾತ್ರಿಯಾಗಿ ಮುನ್ನಡೆದು ಆ ವರ್ಷದ ಏಪ್ರಿಲ್ 8 ರಂದು ತನ್ನ ಜೊತೆಗಾರ ಜಾನ್ಸನ್ನನೊಂದಿಗೆ ಉ.ಅ.86º 14' ತಲುಪಿ ಹಿಂದಿರುಗಿದ. ಆ ಕಾಲದಲ್ಲಿ ಅದೊಂದು ವಿಕ್ರಮ. ಮುಂದೆ ಅನೇಕ ಪ್ರಯತ್ನಗಳಾದ ಮೇಲೆ ಎಲ್ಸ್‌ಮೀರ್ದ್ವೀಪದ ಉತ್ತರದಿಂದ ಅಡ್ಮಿರಲ್ ಪೀರಿ ಮುನ್ನೆಡೆದು, 1909ರ ಏಪ್ರಿಲ್ 6ರಂದು ಉತ್ತರಮೇರು ತಲುಪಿ ಹಿಂತಿರುಗಿದ. 1897ರಲ್ಲಿ ಅಂಡ್ರೀ ಮತ್ತು ಆತನ ಇಬ್ಬರು ಜೊತೆಗಾರರು ಬೆಲೂನಿನಲ್ಲಿ ಅಲ್ಲಿಗೆ ಹೊರಟು ಕಾಣೆಯಾದರು. ಇವರ ದೇಹಗಳೂ ಇವರು ಬಿಟ್ಟ ಟಿಪ್ಪಣಿಗಳೂ ಚಿತ್ರಗಳೂ ಪತ್ತೆಯಾದದ್ದು 1930ರಲ್ಲಿ. ಉತ್ತರಮೇರುವಿಗೆ ಸ್ವಿಟ್ಸ್‌ಬರ್ಗನಿನಿಂದ ಮೊಟ್ಟಮೊದಲು ಹಾರಿಹೋಗಿ ಬಂದವ ಅಡ್ಮಿರಲ್ ಬರ್ಡ್ (1926). ಉಂಬರ್ಟೊನೊಬೀಲೆ ಸ್ವಿಟ್ಸ್‌ಬರ್ಗನ್ನಿನಿಂದ ಹೊರಟು ಉತ್ತರಮೇರುವನ್ನು ದಾಟಿ ಅಲಾಸ್ಕ ತಲಪಿದ. ಈತನಿಗೆ ವಿರುದ್ಧ ದಿಕ್ಕಿನಲ್ಲಿ ಹಾರಿ ಉತ್ತರಮೇರು ದಾಟಿದವ ಜಿ. ಎಚ್. ವಿಲ್ಕಿನ್ಸ್‌. ಈತನೇ 1932ರಲ್ಲಿ ಜಲಾಂತರ್ಗಾಮಿ ನೌಕೆಯಲ್ಲಿ ಪ್ರಯಾಣ ಮಾಡಬೇಕೆಂದು ಯೋಚಿಸಿದ್ದ. ಆದರೆ ಯಾಂತ್ರಿಕ ತೊಂದರೆಯಿಂದ ಈ ಯತ್ನವನ್ನು ಕೈಬಿಡಬೇಕಾಯಿತು. ಉತ್ತರ ಮೇರುವಿನ ತೇಲು ನೀರ್ಗಲ್ಲಿನ ಮೇಲೆ ವಿಮಾನದ ಮೂಲಕ ಸೋವಿಯತರು ವಿಜ್ಞಾನ ಪರಿಶೋಧನ ಕೇಂದ್ರ ಸ್ಥಾಪಿಸಿದ್ದು 1937ರಲ್ಲಿ. ತೇಲುವ ನೀರ್ಗಲ್ಲ ಖಂಡದೊಂದಿಗೆ ದಕ್ಷಿಣಾಭಿಮುಖವಾಗಿ ಸಾಗಿದ ಈ ವಿಜ್ಞಾನಿಗಳನ್ನು ನೀರ್ಗಲ್ಲೊಡೆಯುವ ದೋಣಿಯೊಂದು ಗ್ರೀನ್ಲ್ಯೆಂಡಿನ ಪೂರ್ವತೀರದ ಬಳಿ ರಕ್ಷಿಸಿತು. (ಕೆ.ಆರ್.ಆರ್.)