ಜಲಾಂತರ್ಗಾಮಿ ನೌಕೆ
ಜಲಾಂತರ್ಗಾಮಿ - ನೀರಿನ ಮೇಲೂ ನೀರಿನೊಳಗೂ ಓಡಾಡುವ ಯುದ್ಧ ಹಡಗು(ಸಬ್‍ಮರೀನ್). ಇದು ನೀರಿನೊಳಗೆ ದೀರ್ಘಕಾಲ ನಿಲ್ಲಬಲ್ಲದು; ಆಳ ವಿಪರೀತವಾಗಿಲ್ಲದಿದ್ದರೆ ಸಮುದ್ರತಳದಲ್ಲಿ ನಿಲ್ಲಬಲ್ಲದು. ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳಲ್ಲಿ ಜರ್ಮನರ-ದೋಣಿಗಳೆಂಬ ಜಲಾಂತರ್ಗಾಮಿಗಳೂ ಮಿತ್ರಪಕ್ಷದ ಜಲಾಂತರ್ಗಾಮಿಗಳೂ ಅಸಂಖ್ಯಾತ ಯುದ್ಧನೌಕೆಗಳನ್ನೂ ಪ್ರಯಾಣಿಕರ ಮತ್ತು ದವಸ, ಧಾನ್ಯ ವ್ಯಾಪಾರಿಗಳ ಹಡಗುಗಳನ್ನೂ ದಾಳಿಮಾಡಿ ಮುಳುಗಿಸಿದವು.
ರಚನೆ ಮತ್ತು ಕಾರ್ಯನಿರ್ವಹಣೆ
ಬದಲಾಯಿಸಿಜಲಾಂತರ್ಗಾಮಿಯ ಆಕಾರ ಸಾಮಾನ್ಯ ಹಡಗಿನದಕ್ಕಿಂತ ಬೇರೇಯೇ ಆಗಿದೆ; ಗುಂಡಾದ ಕಾಯ; ಚೂಪಾದ ಕೊನೆಗಳು; ಬಲುಮಟ್ಟಿಗೆ ಚುಟ್ಟದ ಆಕಾರ. ಅಮೆರಿಕದ ನೌಕಾ ಇಲಾಖೆ ಹೊಸ ಆಕಾರವನ್ನು ಕೊಟ್ಟಿದೆ.-ಗುಂಡಾದ ಮೀನಿನ ಆಕಾರದ ಕಾಯ ಮತ್ತು ದುಂಡಾದ ಮೊಂಡ ಮೂಗು. ಇದರಿಂದ ನೀರಿನ ರೋಧತೆ ಕಡಿಮೆಯಾಗುತ್ತದೆ ಮತ್ತು ಹಡಗು ನೀರೊಳಗೆ ಹೆಚ್ಚು ವೇಗದಲ್ಲಿ ಹೋಗಬಲ್ಲದು. ಜಲಾಂತರ್ಗಾಮಿಗೆ ಸಾಧಾರಣವಾಗಿ ಎರಡು ಒಡಲುಗಳಿವೆ(ಹಲ್ಸ್)- ಒಂದು ಒಳಗಿನದು, ಮತ್ತೊಂದು ಹೊರಗಿನದು. ಇವೆರಡರ ಮಧ್ಯದಲ್ಲಿ ವಾಯು ಮತ್ತು ನೀರಿಗೆ ಜಾಗವಿದೆ. ಸಮುದ್ರದ ಆಳಗಳ ಅಗಾಧವಾದ ನೀರೊತ್ತಡವನ್ನು (200ಗಳ ಆಳದಲ್ಲಿ ಒತ್ತಡ ಚದರ ಅಂಗುಲಕ್ಕೆ 89.9 ಪೌಂಡ್ ಇದೆ.) ತಡೆಯಲು ಒಳಗಿನ ಉಕ್ಕಿನ ಒಡಲು ಬಹಳ ಬಲವಾಗಿರಬೇಕು. ಹೊರಗಿನ ಒಡಲು ಒಳಗಿನದನ್ನು ಸುತ್ತುಗಟ್ಟಿರುತ್ತದೆ. ಅದರ ಸುತ್ತಲೂ ನೀರಿರುವುದರಿಂದ ಅದು ಹೆಚ್ಚು ಒತ್ತಡದಲ್ಲಿರುವುದಿಲ್ಲ. ಹಡಗಿನ ಒಂದು ಕೊನೆಯಲ್ಲಿ ಹಡಗನ್ನು ಮುಂದೆ ಹೋಗುವಂತೆ ಮಾಡಲು ಚಾಲಕ ದಂಡವೂ ಹಡಗು ನಡೆಸುವ ಸಲಕರಣೆಗಳೂ ಇವೆ. ಮುಳುಗು ಹಡಗು ನೀರಿನ ಮೇಲಕ್ಕೆ ಏಳುವುದಕ್ಕೂ ನೀರಿನೊಳಕ್ಕೆ ಮುಳುಗುವುದಕ್ಕೂ ನೆರವಾಗಲು ಹೈಡ್ರೋಪ್ಲೇನ್ ಎಂಬ ಎರಡು ಈಜುರೆಕ್ಕೆಗಳಿವೆ. ಒಂದು ಹಡಗಿನ ಮುಂಭಾಗದಲ್ಲಿ, ಇನ್ನೊಂದು ಹಿಂಭಾಗದಲ್ಲಿದೆ. ಹಡಗಿನ ವೇಗ, ಹಡಗು ಮೇಲೇಳಬೇಕಾಗುವ ಕೋನ ಮುಂತಾದವನ್ನು ನಿಯಂತ್ರಿಸಲು ತಕ್ಕ ವ್ಯವಸ್ಥೆಗಳುಂಟು. ಒಳ ಒಡಲಿನೊಳಗೆ ನಾವಿಕರ ವಾಸಸ್ಥಳ ಹಡಗಿನ ಚಾಲಕ ಯಂತ್ರ ಮುಂತಾದ ಸಲಕರಣೆಗಳು, ಆಹಾರ ಸಾಮಗ್ರಿಗಳು ಮತ್ತು ಇತರ ಯುದ್ಧಸರಕುಗಳು ಇವೆ. ಒಡಲಿನ ಮೇಲೆ ಹಡಗಿನ ಅಂತಸ್ತು ಉಂಟು. ಅದರ ಮಧ್ಯಭಾಗದಲ್ಲಿ ಹಡಗನ್ನು ಹತೋಟಿಯಲ್ಲಿಡುವ ಎತ್ತರವಾದ ಕಾನಿಂಗ್ ಟವರ್ ಎಂಬ ಕೊಠಡಿ ಇದೆ. ಇಲ್ಲಿಂದ ಸಮುದ್ರದ ಮೇಲಿನವರೆಗೂ ಹೋಗಿರುವ ಪರಿದರ್ಶಕ (ಪೆರಿಸ್ಕೋಪ್) ಎಂಬ ನಳಿಗೆ ಜಲಾಂತರ್ಗಾಮಿಯ ಕಣ್ಣು. ಅದರಲ್ಲಿ ಮಸೂರ(ಪ್ರಿಸ್ಮ್) ಮತ್ತು ಪ್ರತಿಫಲಿಸುವ ಕನ್ನಡಿಗಳಿವೆ. ಪರಿದರ್ಶಕದ ನೆರವಿನಿಂದ ಸಮುದ್ರದ ಮೇಲಿನ ದೃಶ್ಯಗಳನ್ನೂ ಶತ್ರುನೌಕೆಗಳನ್ನೂ ಸ್ಪಷ್ಟವಾಗಿ ಕಾಣಬಹುದು. ಶತ್ರುಹಡಗನ್ನು ನಾಶಮಾಡಲು ಜಲಾಂತರ್ಗಾಮಿಯ ಮುಖ್ಯ ಆಯುಧ ನೂರಾರು ಪೌಂಡುಗಳಷ್ಟು ಟಿಎನ್‍ಟಿ ಸಿಡಿಮದ್ದನ್ನೊಳಗೊಂಡ ಟಾರ್ಪೀಡೋ ಎಂಬ ಸ್ವಯಂಚಲಿತ ಅಸ್ತ್ರ. ಇದು ವಿದ್ಯುತ್ ಬ್ಯಾಟರಿಯಿಂದ ಮತ್ತು ಅಥವಾ ಸಂಮರ್ದಿತ ವಾಯುವಿನಿಂದ ಕೆಲಸಮಾಡುತ್ತದೆ. ಇದನ್ನು ನೀರಿನೊಳಗಡೆಯಿಂದ ಶತ್ರು ಹಡಗಿಗೆ ಗುರಿಯಿಟ್ಟು ಹಾರಿಸಿದರೆ ಇದು ಸ್ಫೋಟಿಸಿ ಹಡಗನ್ನು ನಾಶಮಾಡುತ್ತದೆ. ಇತ್ತೀಚಿನ ಜಲಾಂತರ್ಗಾಮಿಗಳಿಗೆ ಕಾನಿಂಗ್ ಟವರಿನ ಬದಲು ಎತ್ತರವಾದ ಹಾಯಿ ಉಂಟು. ಪರಮಾಣುಶಕ್ತಿಯ ಪ್ರಯೋಗ ಬರುವುದಕ್ಕೆ ಮೊದಲು ಜಲಾಂತರ್ಗಾಮಿಗಳನ್ನು ನಡೆಸಲು ಗ್ಯಾಸೊಲಿನ್ ಅಥವಾ ಡೀಸೆಲ್ ಎಂಜಿನ್ನುಗಳನ್ನು ಬಳಸಲಾಗುತ್ತಿತ್ತು. ಡೀಸೆಲ್ ಎಂಜಿನ್ನು ಹಡಗನ್ನು ಸಮುದ್ರದ ಮೇಲೆ ನಡೆಸಬಲ್ಲದೇ ಹೊರತು ಸಮುದ್ರದೊಳಗೆ ಅಲ್ಲ. ಏಕೆಂದರೆ ಡೀಸೆಲ್ ಉರಿಯಲು ವಾಯು ಬೇಕು ಮತ್ತು ಅದು ಉರಿಯುವಾಗ ಹೊಲಸು ಹೊಗೆಯನ್ನು ಉಗುಳುತ್ತದೆ. ಆದ್ದರಿಂದ ಜಲಾಂತರ್ಗಾಮಿಯನ್ನು ನೀರಿನೊಳಗೆ ನಡೆಸಲು ವಿದ್ಯುತ್ ಬ್ಯಾಟರಿಗಳಿಂದ ತಿರುಗುವ ವಿದ್ಯುತ್ ಮೋಟಾರುಗಳನ್ನು ಬಳಸಲಾಗುತಿತ್ತು. ಜಲಾಂತರ್ಗಾಮಿ ನೀರಿನ ಮೇಲಿರುವಾಗ ಡೀಸೆಲ್ ಎಂಜಿನ್ನು ವಿದ್ಯುಜ್ಜನಕವನ್ನು ತಿರುಗಿಸುತ್ತ ಬ್ಯಾಟರಿಗಳನ್ನು ಆವೇಶಿಸಲು (ಚಾರ್ಜ್) ವಿದ್ಯುತ್ ಪ್ರವಾಹವನ್ನು ಒದಗಿಸುತ್ತದೆ. ಬ್ಯಾಟರಿಗಳು ವಿದ್ಯುತ್ ಮೋಟಾರುಗಳನ್ನು ತಿರುಗಿಸುತ್ತ ಹಡಗಿನ ಚಾಲಕದಂಡಗಳು ತಿರುಗಿ ಹಡಗನ್ನು ನಡೆಸುವಂತೆ ಮಾಡುತ್ತವೆ. ಇದರಲ್ಲಿ ತೊಂದರೆ ಏನೆಂದರೆ ಬ್ಯಾಟರಿಗಳು ಬರಿದಾದ ಬಳಿಕ ಜಲಾಂತರ್ಗಾಮಿಯನ್ನು ಪದೇ ಪದೇ ನೀರಿನ ಮೇಲಕ್ಕೆ ತರಬೇಕಾಗುತ್ತದೆ. ಆಗ ಅದು ಶತ್ರುಗಳ ದೃಷ್ಟಿಗೆ ಬಿದ್ದು ಅವರ ತಾಡನಕ್ಕೆ ಈಡಾಗುವ ಗಂಡಾಂತರ ಉಂಟು. ಜಲಾಂತರ್ಗಾಮಿಗಳ ವೇಗ ನೀರಿನ ಮೇಲೆ 20 ನಾಟ್; ನೀರಿನೊಳಗೆ 10 ನಾಟ್; ಜಲಾಂತರ್ಗಾಮಿ ನೀರಿನೊಳಗಿರುವಾಗ ಅದರ ಎಂಜಿನ್ನಿಗೆ ವಾಯುವನ್ನು ಒದಗಿಸಲು ಸ್ನೋರ್‍ಕೆಲ್ ಎಂಬ ಸಾಧನದ ಆವಿಷ್ಕಾರವಾಯಿತು. ಇದು ಹಡಗಿನಿಂದ ಸಮುದ್ರದ ಮೇಲ್ಮೈವರೆಗೂ ಹೋಗುವಷ್ಟು ಉದ್ದವಾದ ನಳಿಗೆ, ಇದರ ಮೂಲಕ ಹೊರಗಿನ ಸ್ವಚ್ಛವಾಯು ಜಲಾಂತರ್ಗಾಮಿಯ ಎಂಜಿನ್ನಿಗೆ ಬರಲು ಮತ್ತು ಕೆಳಗಿನ ವಿಷವಾಯು ಮೇಲಕ್ಕೆ ಹೊರಟುಹೋಗಲು ಸಾಧ್ಯತೆ ಇರುವುದರಿಂದ ಜಲಾಂತರ್ಗಾಮಿಯನ್ನು ಸಮುದ್ರದೊಳಗೂ ಡೀಸೆಲ್ ಎಂಜಿನ್ ನಡೆಸಬಲ್ಲದು. ಹೀಗಾಗಿ ಜಲಾಂತರ್ಗಾಮಿಗಳು ಹೆಚ್ಚು ಹೊತ್ತು ನೀರಿನೊಳಗಿರುವುದೂ ಹೆಚ್ಚು ವೇಗದಲ್ಲಿ ಚಲಿಸುವುದೂ ಸಾಧ್ಯವಾಯಿತು. ಜಲಾಂತರ್ಗಾಮಿಯ ಒಡಲ ಸುತ್ತಲೂ ಬ್ಯಾಲಿಸ್ಟಿಕ್ ಟ್ಯಾಂಕ್ ಎಂಬ ನೀರು ತೊಟ್ಟಿ ಉಂಟು. ಇದರ ಕೆಳಭಾಗದಲ್ಲಿ ಸಮುದ್ರದ ನೀರು ಪ್ರವೇಶಿಸಲೂ ಮೇಲ್ಬಾಗದಲ್ಲಿ ಒತ್ತಡದ ವಾಯು ಪ್ರವೇಶಿಸಲೂ ನಳಿಗೆಗಳಿವೆ. ಜಲಾಂತರ್ಗಾಮಿ ನೀರಿನ ಮೇಲಿರುವಾಗ ಅದನ್ನು ಆಳಕ್ಕೆ ಮುಳುಗಿಸಲು ಸಮುದ್ರದ ನೀರನ್ನು ನಳಿಗೆಯ ಮೂಲಕ ತೊಟ್ಟಿಗೆ ತುಂಬಿದರೆ ಹಡಗು ತೂಕವಾಗಿ ಕಂತುತ್ತದೆ. ಅದು ಇನ್ನೂ ಹೆಚ್ಚು ಆಳಗಳಿಗೆ ಶೀಘ್ರವಾಗಿ ಕಂತಬೇಕಾದರೆ, ಟ್ರಿಮ್‍ಟ್ಯಾಂಕುಗಳೆಂಬ ತೊಟ್ಟಿಗಳಿಗೆ ಸಮುದ್ರದ ನೀರನ್ನು ಕ್ರಮಶಃ ತುಂಬಿ ತೂಕವನ್ನು ಹೆಚ್ಚಿಸುತ್ತ ಹೋಗಬೇಕು, ಇಂಥ ಒಂದು ಜಲಾಂತರ್ಗಾಮಿ 30 ಸೆಕೆಂಡುಗಳಲ್ಲಿ 60 ಆಳಕ್ಕೆ ಮುಳುಗಬಲ್ಲದು. ಹಡಗು ಸಮುದ್ರದ ಮೇಲಕ್ಕೆ ಬರಬೇಕಾದರೆ ಒತ್ತಡದ ವಾಯುವನ್ನು ತೊಟ್ಟಿಯೊಳಗೆ ನಳಿಗೆಯಿಂದ ಬಿಡಬೇಕು. ಅದು ನೀರನ್ನು ದಬ್ಬಿ ಹೊರದೂಡಿ ತೊಟ್ಟಿಯನ್ನು ಬರಿದುಮಾಡುತ್ತದೆ. ಹಡಗು ಹಗುರವಾಗಿ ಮೇಲೆಕ್ಕೇಳುವುದು.
ಇತ್ತೀಚಿನ ಜಲಾಂತರ್ಗಾಮಿಗಳು ಹಿಂದಿನವುಗಳಿಗಿಂತ ದೊಡ್ಡವು; ಹೆಚ್ಚು ಬೆಲೆಯವು. ಅವುಗಳಲ್ಲಿ ಹೆಚ್ಚಿನ ಸುಧಾರಣೆಗಳಾಗಿವೆ. ಆಧುನಿಕ ಜಲಾಂತರ್ಗಾಮಿಯೊಂದರ ಉದ್ದ 400 ಗಳಿಗಿಂತಲೂ ಹೆಚ್ಚು; ತೂಕ ಸುಮಾರು 7,000 ಟನ್; ಬೆಲೆ ಸುಮಾರು 1,000,000,000 ಡಾಲರುಗಳು. ಅಮೆರಿಕದ ನೌಕಾ ಇಲಾಖೆಗಾಗಿ ಮೊದಲು ನಿರ್ಮಿಸಿದ ಜಲಾಂತರ್ಗಾಮಿಯ ಉದ್ದ 54, ತೂಕ 75 ಟನ್ ಇದ್ದುವು. ಅದರ ಬೆಲೆ ಸುಮಾರು 1,50,000 ಡಾಲರುಗಳು.
ಜಲಾಂತರ್ಗಾಮಿ ಆಳದಲ್ಲಿರುವಾಗ ಅದು ಎಲ್ಲಿ ಹೋಗುತ್ತಿದೆ ಎಂಬುದನ್ನು ಚಾಲಕ ನೋಡಲಾರ. ಅಲ್ಲಿ ಎಲೆಕ್ಟ್ರಾನಿಕ್ ಸಲಕರಣೆಗಳು ಅವನ ಕಣ್ಣಿನಂತೆ ವರ್ತಿಸುತ್ತವೆ. ಹಡಗು ಹೋಗಬೇಕಾದ ಹಾದಿಯ ವಿವರಗಳನ್ನು ಸ್ವಯಂ ಚಾಲಿತ ಯಂತ್ರವ್ಯೂಹಕ್ಕೆ ಉಣಿಸಲಾಗುತ್ತದೆ. ಹಡಗಿನ ಪಥದಲ್ಲಿ ಏನಾದರೂ ವ್ಯತ್ಯಾಸಗಳಾಗಿದ್ದರೆ ಅವನ್ನು ಶೀಘ್ರವೇದಿಗಳಾದ ಭ್ರಮಣದರ್ಶಕ (ಜಿರೋಸ್ಕೋಪ್) ಎಂಬ ಯಂತ್ರಗಳು ಪತ್ತೆಮಾಡಿ ವಿದ್ಯುತ್ ಗಣಕಕ್ಕೆ ತಿಳಿಸುತ್ತದೆ. ಆಗ ಚಾಲಕನಿಗೆ ಹಡಗಿನ ಪಥವನ್ನು ಹೇಗೆ ಕ್ರಮಪಡಿಸಬೇಕೆಂಬುದರ ಅರಿವಾಗುತ್ತದೆ. ಅದರ ಹಾದಿಯಲ್ಲಿ ಬೇರೆ ಹಡಗು, ಸಿಡಿಮದ್ದು ಮುಂತಾದ ಅಡ್ಡಿ ಅಡಚಣೆಗಳಿದ್ದರೆ ಸೋನಾರ್ ಎಂಬ ಸಲಕರಣೆ ಅವುಗಳ ಗಾತ್ರ, ಆಕಾರ, ದೂರಗಳನ್ನು ಸೂಚಿಸುತ್ತದೆ.
ಜಲಾಂತರ್ಗಾಮಿಯ ಮುಕ್ಕಾಲು ಪಾಲು ಜಾಗ ಯಂತ್ರಗಳು, ಟಾರ್ಪೀಡೋಗಳನ್ನು ಉಡಾಯಿಸುವ ಅಸ್ತ್ರಗಳು. ಸೋನಾರ್ ಉಪಕರಣಗಳು ಮತ್ತು ಇತರ ಪರಿಕರಗಳಿಂದ ಆವರಿಸಲ್ಪಟ್ಟಿದೆ. ಉಳಿದ ಜಾಗದಲ್ಲಿ ಸುಮಾರು 125 ಜನ ಕೆಲಸಮಾಡಬಹುದು ಮತ್ತು ವಿಶ್ರಮಿಸಬಹುದು. ತೊಡಕಾದ ನವೀನ ಸಾಧನಗಳು ಮತ್ತು ನೀರಿನೊಳಗೆ ದೀರ್ಘಪ್ರಯಾಣಗಳು ಕಷ್ಟವನ್ನು ಹೆಚ್ಚಿಸಿವೆ. ಆಮ್ಲಜನಕ ವಾಯುವನ್ನು ಉಳಿಸಬೇಕಾಗಿ ಬಂದಾಗ ಜನರು ಬೆನ್ನಿನ ಮೇಲೆ ಮಲಗುತ್ತಾರೆ. ನಿದ್ರಿಸುತ್ತಾರೆ. ಆದಷ್ಟು ಸ್ವಲ್ಪ ಓಡಾಡುತ್ತಾರೆ. ಯುದ್ಧಕಾಲದಲ್ಲಿ ಜಲಾಂತರ್ಗಾಮಿಯಲ್ಲಿನ ಕೆಲಸ ಬಲು ಕಠಿಣ ಮತ್ತು ಅಪಾಯಕಾರಿ. ನಾವಿಕರು ಸದಾ ಇತರ ಹಡಗುಗಳ ಚಲನ ವಲನಗಳನ್ನು ಗಮನಿಸುತ್ತಿರಬೇಕು ಮತ್ತು ಅವ್ಯಕ್ತ ಶತ್ರುಗಳು ಸಮೀಪಿಸುತ್ತಿರುವುದನ್ನು ಸೋನಾರಿನಿಂದ ಪದೇ ಪದೇ ಕೇಳುತ್ತಿರಬೇಕು. ಅಂಥ ಕಠಿಣ ಜೀವನವನ್ನು ಸಹಿಸಲು ಜನರು ಶಕ್ತರಾಗಿರಬೇಕು. ಅಮೇರಿಕದ ಜಲಾಂತರ್ಗಾಮಿಗಳಲ್ಲಿ ದುಡಿಯುವವರೆಲ್ಲರೂ ಸ್ವಯಂಸೇವಕರು. ಈ ಶಿಕ್ಷಣವನ್ನು ಪಡೆಯುವವರು ಮೊದಲು ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಆಧುನಿಕ ಪರಮಾಣು ಶಕ್ತಿಚಾಲಿತ ಜಲಾಂತರ್ಗಾಮಿಗಳಲ್ಲಿ ನಾವಿಕರ ಜೀವನ ಆದಷ್ಟು ಸುಖಕರವಾಗಿರುವಂತೆ ಮಾಡಲು ವ್ಯವಸ್ಥೆಗಳಿವೆ. ಮಲಗಲು ಒಳ್ಳೆ ಹಾಸಿಗೆ, ಬಲು ಒಳ್ಳೆ ಊಟ, ಚಲನಚಿತ್ರ, ದೂರದರ್ಶನ (ಟೆಲಿವಿಜನ್) ಮತ್ತು ಗ್ರಂಥಾಲಯಗಳಿವೆ. ಎರಡು ತಂಡಗಳ ಕಲಾಸಿಗಳು ಪಾಳಿ ಪ್ರಕಾರ ಕೆಲಸಮಾಡುತ್ತಾರೆ. ಒಂದು ತಂಡ ಕೆಲಸದಲ್ಲಿರುವಾಗ ಇನ್ನೊಂದು ತಂಡ ದಂಡೆಯಲ್ಲಿ ವಿಶ್ರಮಿಸುತ್ತದೆ.
ಜಲಾಂತರ್ಗಾಮಿಗಳು ಪರಮಾಣುಶಕ್ತಿಯಿಂದ ದೂಡಲ್ಪಡುವ ಅಸ್ತ್ರಗಳನ್ನು ಪ್ರಯೋಗಿಸಬಲ್ಲವು. ನ್ಯೂಕ್ಲಿಯರ್ ಅಸ್ತ್ವ್ರವೊಂದು 1,400 ಮೈಲುಗಳ ದೂರದಲ್ಲಿರುವ ಗುರಿಯನ್ನು ಹೊಡೆಯಬಲ್ಲದು.
ಬಳಕೆ
ಬದಲಾಯಿಸಿಜಲಾಂತರ್ಗಾಮಿಗಳು ನಾನಾ ಕಾರ್ಯಗಳಿಗೆ ನೆರವಾಗಿವೆ. ವಿಜ್ಞಾನಿಗಳು ಸಮುದ್ರದೊಳಗಿಳಿದು ಸಾಗರದ ವನಸ್ಪತಿ, ಪ್ರಾಣಿಗಳನ್ನು ಅನ್ವೇಷಿಸಬಹುದು. ಗತವರ್ಷಗಳಲ್ಲಿ ಮುಳುಗಿ, ಸಾಗರದ ತಳಗಳನ್ನು ಸೇರಿದ ಹಡಗುಗಳನ್ನು ಇತಿಹಾಸಕಾರರು ಶೋಧಿಸಬಹುದು. ಸಾಗರ ಶಾಸ್ತ್ರಜ್ಞರು ಸಮುದ್ರಪ್ರವಾಹದ ವೇಗ, ದಿಕ್ಕುಗಳನ್ನು ತಪಾಸಣೆ ಮಾಡಬಹುದು ಮತ್ತು ಸಮುದ್ರತಳವನ್ನು ಪರಿಶೋಧಿಸಿ ನಕ್ಷೆ ಬರೆಯಬಹುದು. ಸಮುದ್ರದ ಕೆಳಗಿರುವ ಎಣ್ಣೆಬಾವಿಗಳ ಮತ್ತು ಗಣಿಗಳ ಕೆಲಸಕ್ಕೆ ಕಾರೆಗಾರರನ್ನೂ ಸರಕುಗಳನ್ನೂ ಒಯ್ಯುವುದು; ಸಮುದ್ರದಲ್ಲಿ ಸಿಡಿಮದ್ದುಗಳನ್ನು ನೆಡುವುದು; ಯುದ್ಧಕಾಲದಲ್ಲಿ ಸರಕುಗಳನ್ನು ಸಮುದ್ರದೊಳಗಿನಿಂದ ಸಾಗಿಸುವುದು ಇವಕ್ಕೆಲ್ಲ ಜಲಾಂತರ್ಗಾಮಿ ಪ್ರಯೋಜನಕಾರಿ. ಜರ್ಮನರು ಮಾಲನ್ನು ಅಟ್ಲಾಂಟಿಕ್ ಸಾಗರದೊಳಗಿನಿಂದ ಬಾಲ್ಟಿಮೋರಿಗೆ ಕಳಿಸಿದ್ದರು. ಬ್ರಿಟಿಷರು ಸರಕುಗಳನ್ನು ಮಾಲ್ಟಾಕ್ಕೂ ಇಟಲಿಯವರು ಉತ್ತರ ಆಫ್ರಿಕಕ್ಕೂ ಜಲಾಂತರ್ಗಾಮಿಗಳಲ್ಲಿ ಸಮುದ್ರದೊಳಗೆ ಸಾಗಿಸಿದ್ದರು.
-
ಒಂದು ಸ್ವಿಟ್ಜರ್ಲ್ಯಾಂಡಿನ ಜಲಾಂತರ್ಗಾಮಿ
-
ಪ್ರವಾಸಿ ಜಲಾಂತರ್ಗಾಮಿಯೊಂದು ನೀರಿನಡಿ ಇದ್ದಾಗ ಒಳಗಿನಿಂದ ನೋಟ
-
ಅಟ್ಲಾಂಟಿಸ್ ಹೆಸರಿನ ಪ್ರವಾಸಿ ಜಲಾಂತರ್ಗಾಮಿ'
ಪರಮಾಣುಶಕ್ತಿಚಾಲಿತ ಜಲಾಂತರ್ಗಾಮಿಗಳು
ಬದಲಾಯಿಸಿಇತ್ತೀಚೆಗೆ ಪರಮಾಣುಶಕ್ತಿಚಾಲಿತ ಜಲಾಂತರ್ಗಾಮಿಗಳು ಬಂದಿವೆ. ಅವನ್ನು ನಡೆಸಲು ವಾಯು ಬೇಕಿಲ್ಲ; ತೂಕವಾದ ಇಂಧನವನ್ನು ತುಂಬಿಡಬೇಕಾಗಿಲ್ಲ. ಹಡಗು ನೀರಿನೊಳಗೆ ಬಲು ದೀರ್ಘಕಾಲ ಇರಲು ಸಾಧ್ಯ. ಅನೇಕ ತಿಂಗಳುಗಳ ಕಾಲ ಅದು ಮೇಲಕ್ಕೆ ಬರಬೇಕಾಗಿಯೇ ಇಲ್ಲ. ನಾವಿಕರ ಶ್ವಸನಕ್ಕೆ ಶುದ್ಧ ಆಮ್ಲಜನಕ ವಾಯು ದೊರೆಯುವಂತೆ ವ್ಯವಸ್ಥೆ ಉಂಟು. ಸಮುದ್ರದ ನೀರನ್ನು ವಿದ್ಯುದ್ರಾಸಾಯನಿಕ ಕ್ರಮದಿಂದ ವಿಚ್ಛೇದಿಸಿ ಆಕ್ಸಿಜನ್ನನ್ನು ಜಲಾಂತರ್ಗಾಮಿಗೆ ರೇಚಿಸಲಾಗುತ್ತದೆ. ಈ ಹಡಗು ನೀರಿನೊಳಗೆ ಬಲು ವೇಗವಾಗಿ ಹೋಗುತ್ತದೆ. ಇದರ ರಿಯಾಕ್ಟರಿನಿಂದ ಉತ್ಪತ್ತಿಯಾಗುವ ಶಾಖವು ತಿರುಬಾನಿಗಳನ್ನು ತಿರುಗಿಸಲು ಹಬೆಯನ್ನು ಒದಗಿಸುತ್ತದೆ.
ಪರಮಾಣುಶಕ್ತಿಚಾಲಿತ ಜಲಾಂತರ್ಗಾಮಿಗಳ ನಿರ್ಮಾಣದಲ್ಲಿ ಅಮೇರಿಕ ಅಗ್ರಗಾಮಿ. ಅಮೇರಿಕದ ನಾಟಿಲಸ್ ಎಂಬುದು ಪ್ರಪ್ರಥಮ ಪರಮಾಣುಶಕ್ತಿಚಾಲಿತ ಜಲಾಂತರ್ಗಾಮಿ. 1958ರಲ್ಲಿ ಅದು ಪೆಸಿಫಿಕ್ ಸಾಗರದಿಂದ ಅಟ್ಲಾಂಟಿಕ್ ಸಾಗರಕ್ಕೆ ಉತ್ತರ ಮೇರುವಿನ ಒಂದು ಮೈಲಿಯಷ್ಟು ದಪ್ಪವಾಗಿದ್ದ ಬರ್ಫರಾಶಿಗಳ ಕೆಳಗೆ ತೂರಿಕೊಂಡು ಹೊಸ ವಾಯುವ್ಯ ಮಾರ್ಗದಲ್ಲಿ ಹೋಯಿತು. ಅನೇಕ ತಿಂಗಳಕಾಲ ಒಂದು ಸಾರೊಯೂ ಸಮುದ್ರದ ಮೇಲಕ್ಕೇ ಬಾರದೆ 60,000ಮೈಲು ದೂರ ಪ್ರಯಾಣ ಮಾಡಿತು. ಅಷ್ಟೇ ದೂರ ಹೋಗಲು ಡೀಸೆಲ್ ಎಂಜಿನ್ನಿನ ಜಲಾಂತರ್ಗಾಮಿಗೆ 3,000,000 ಗ್ಯಾಲನ್ ಡೀಸೆಲ್ ಬೇಕಾಗುತ್ತದೆ. ಇದೊಂದು ದಾಖಲೆಯೇ ಸರಿ. ಸಾಧಾರಣ ಜಲಾಂತರ್ಗಾಮಿಗೆ ಈ ಪ್ರಯಾಣಕ್ಕೆ ಬೇಕಾಗುವಷ್ಟು ದೀರ್ಘಕಾಲ ಸಮುದ್ರದೊಳಗಿರಲೂ ಸಾಕಾದಷ್ಟು ಆಹಾರವನ್ನು ಒಯ್ಯಲೂ ಅಸಾಧ್ಯ. ನಾಟಿಲಸ್‍ನ ಉದ್ದ 323, ವೇಗ20 ನಾಟುಗಳಿಗಿಂತಲೂ ಹೆಚ್ಚು. ಅದು ಮುಳುಗಿದ ಆಳ 700. ಅದರ ಆಕಾರ ಸಾಧಾರಣ ಜಲಾಂತರ್ಗಾಮಿಯದಕ್ಕಿಂತ ವ್ಯತ್ಯಾಸ, ಸಾಮಾನ್ಯ ಜಲಾಂತರ್ಗಾಮಿಯ ಮುಂಭಾಗ ಚಾಕುವಿನ ಅಲಗಿನಂತಿರುತ್ತದೆ; ನಾಟಿಲಸಿನ ಮುಂಭಾಗ ಗಡ್ಡೆಬುರುಡೆಯಂತಿದೆ.
ಅಮೆರಿಕದ ಟ್ರಿಟನ್ ಎಂಬ ಪರಮಾಣುಶಕ್ತಿಚಾಲಿತ ಜಲಾಂತರ್ಗಾಮಿಯ ಉದ್ದ 447 ವೇಗ 40 ನಾಟುಗಳಿಗಿಂತಲೂ ಹೆಚ್ಚು. 1960ರಲ್ಲಿ ಅದು 84 ದಿನಗಳ ಕಾಲ ನೀರಿನೊಳಗೇ ಪೃಥ್ವಿಯ ಸುತ್ತಲೂ 41,500 ಮೈಲು ದೂರ ಪ್ರಯಾಣ ಮಾಡಿತು. ಅದೇ ದೇಶದ ಇನ್ನೊಂದು ಪರಮಾಣುಶಕ್ತಿಚಾಲಿತ ಜಲಾಂತರ್ಗಾಮಿ ಸ್ಕೇಟ್ ಅಟ್ಲಾಂಟಿಕ್ ಸಾಗರವನ್ನು 8 ದಿವಸ 11 ಗಂಟೆಗಳಲ್ಲಿ ದಾಟಿತು. ಬರ್ಫ ರಾಶಿಗಳ ಕೆಳಗೆ 3,090 ಮೈಲು ದೂರ ಪ್ರಯಾಣಮಾಡಿತು. ಹಿಂದೆ ಮತ್ತಾವ ಜಲಾಂತರ್ಗಾಮಿಯೂ ನೀರಿನೊಳಗೆ ಇಷ್ಟು ಕಾಲ ಇದ್ದು, ಇಷ್ಟು ದೂರ ಹೋಗಿರಲಿಲ್ಲ.
ಸೀ ವುಲ್ಫ್ (ಕಡಲತೋಳ ಎಂದರ್ಥ) ಎಂಬ ಜಲಾಂತರ್ಗಾಮಿ 1958ರಲ್ಲಿ ನೀರಿನೊಳಗೆ 60 ದಿವಸಗಳು ನಿರಂತರವಾಗಿ ಇದ್ದು 14,500 ಮೈಲು ದೂರ ಪ್ರಯಾಣ ಮಾಡಿತು. ಎರಡು ಮೂರು ತಿಂಗಳುಗಳ ಕಾಲ ನೀರಿನೊಳಗೇ ಚಲಿಸುವ ಅಮೆರಿಕದ ಜಲಾಂತರ್ಗಾಮಿಗಳು ಈಗ ಸಾಮಾನ್ಯವಾಗಿವೆ. ಡ್ರೆಡ್‍ನಾಟ್, ವೇಲಿಯೆಂಟ್ ಎಂಬುವು ಬ್ರಿಟಿಷರ ಪರಮಾಣುಶಕ್ತಿಚಾಲಿತ ಜಲಾಂತರ್ಗಾಮಿಗಳು. ಬ್ರಿಟಿಷರ ಎಕ್ಸ್‍ಪೆÇ್ಲೀರರ್ ಮತ್ತು ಎಕ್ಸ್‍ಕ್ಯಾಲಿಬರ್ ಎಂಬ ಜಲಾಂತರ್ಗಾಮಿಗಳನ್ನು ಹೈಡ್ರೋಜನ್ ಪೆರಾಕ್ಸೈಡ್ ಎಂಬ ದ್ರಾವಣವನ್ನು ಪ್ರತ್ಯೇಕಿಸುವುದರಿಂದ ಉಂಟಾಗುವ ಆವಿ, ಆಮ್ಲಜನಕ ವಾಯುವಿನ ವಾತಾವರಣದಲ್ಲಿ ಡೀಸೆಲ್ ಎಣ್ಣೆಯನ್ನು ಉರಿಸುವುದರಿಂದ ಬರುವ ಆವಿ ಮತ್ತು ಇಂಗಾಲಾಮ್ಲವನ್ನು ತಿರುಬಾನಿಗೆ ಒದಗಿಸಿ ನಡೆಸಲಾಗುತ್ತದೆ. ಇವುಗಳ ವೇಗ 23 ನಾಟುಗಳಿಗಿಂತಲೂ ಹೆಚ್ಚು.
'