ಉತ್ಕಾಂಕ್ಷೆ: ಬಾಳನ್ನು ಇನ್ನಷ್ಟು ಹಸನಾಗಿ ಮಾಡಿಕೊಳ್ಳಬೇಕೆಂಬ ತೀವ್ರ ಅಭಿಲಾಷೆ ಉತ್ಕೃಷ್ಟಾಕಾಂಕ್ಷೆ, ಮೇಲ್ಬಯಕೆ, ಹೆಗ್ಗುರಿ (ಆಸ್ಪಿರೇಷನ್).

ನಾವಿರುವ ಸ್ಥಿತಿಗೂ ನಾವಿರಬೇಕಾದ ಸ್ಥಿತಿಗೂ ಮಧ್ಯೆ ಇರುವ ಅಂತರವನ್ನು ನಾವರಿಯುವುದು ಈ ಭವದ ಪೂರ್ವ ಪೀಠಿಕೆ. ಅರಿತಮೇಲೆ ಲೌಕಿಕವಾಗಿಯೂ ಪಾರಮಾರ್ಥಿಕವಾಗಿಯೂ ಅದನ್ನು ಉತ್ತಮಪಡಿಸಲು ಪ್ರಯತ್ನಿಸುವ ಕೆಲಸ ಪ್ರಾರಂಭವಾಗುತ್ತದೆ. ಇಲ್ಲಿ ನಾವು ಸಂಪಾದಿಸಲಿಚ್ಛಿಸುವ ಉನ್ನತಸ್ಥಿತಿ ಆತ್ಮವಿಕಾಸಕ್ಕೆ ಸಂಬಂಧಪಟ್ಟದ್ದು. ಈ ಉನ್ನತಸ್ಥಿತಿಯನ್ನು ಮುಟ್ಟಲು ಇದಕ್ಕಾಗಿ ತೀವ್ರ ಬಯಕೆ ನಮ್ಮಲ್ಲಿ ಮೂಡಬೇಕು. ಈ ಬಯಕೆ ನಮ್ಮ ಉನ್ನತಿಗಾಗಿ ನಾವು ಮಾಡುವ ಪರಿಶ್ರಮಕ್ಕೆ ಹಾದಿಮಾಡಿಕೊಡುತ್ತದೆ. ನಾವಿನ್ನೂ ಉತ್ತಮ ಸ್ಥಿತಿಯನ್ನು ಮುಟ್ಟಬೇಕೆಂದು ತೀವ್ರವಾಗಿ ಬಯಸಿ ನಮ್ಮ ಆತ್ಮಶಕ್ತಿಯನ್ನು ಅದಕ್ಕಾಗಿ ಬೆಳೆಸಿಕೊಳ್ಳಬೇಕೆಂಬ ಉತ್ಕಟ ವಾಂಛೆ ನಮ್ಮ ಪ್ರಾರ್ಥನೆಗೂ ಕಾರಣವಾಗುತ್ತದೆ. ಪ್ರಾರ್ಥನೆಯಲ್ಲಿ ಎರಡು ವಿಧ ಉಂಟು. ಒಂದು ‘ದೇಹಿಮೇ ದದಾಮಿತೇ’ ನನಗೆ ಕೊಡು ನಿನಗೆ ಕೊಡುತ್ತೇನೆ ಎಂದು ದೇವ ದೇವತೆಗಳೊಡನೆ ನಾವು ನಡೆಸುವ ವ್ಯವಹಾರ. ಇದು ಅರ್ಥಾರ್ಥಿಯಾದವ ದೇವರಲ್ಲಿ ಮಾಡುವ ಪ್ರಾರ್ಥನೆ. ಜ್ಞಾನಿ ಮಾಡುವ ಪ್ರಾರ್ಥನೆ ಈ ರೀತಿಯದಲ್ಲ. ತನ್ನಲ್ಲಿ ಜ್ಞಾನಭಕ್ತಿವೈ ರಾಗ್ಯಗಳು ಬೆಳೆಯಲಿ ಎಂದು ಅಂತರಂಗದಿಂದ ಮಾಡಿಕೊಳ್ಳುವ ಪ್ರಾರ್ಥನೆ ಉತ್ಕೃಷ್ಟಾಕಾಂಕ್ಷೆಯ ಪ್ರಾರ್ಥನೆ ಎನಿಸಿಕೊಳ್ಳುತ್ತದೆ. ಇದರ ವಿವರಗಳನ್ನು ಮತಧರ್ಮದರ್ಶನ ಗಳಲ್ಲಿ ಕಾಣುತ್ತೇವೆ. ಜಗತ್ತಿನ ಸಾಧುಸಂತರೆಲ್ಲರೂ ಉತ್ಕಾಂಕ್ಷೆಯ ಮಹತ್ತನ್ನು ತಿಳಿದವರು; ತಮ್ಮ ಜೀವನದ ಮೇಲ್ಮೆಗಾಗಿ ಸತತ ಪ್ರಾರ್ಥನೆಯಲ್ಲಿ ತೊಡಗಿದವರು. ಆತ್ಮೋತ್ಕರ್ಷದ ಬಯಕೆ ಪ್ರತಿ ಮಾನವನಿಗೂ ಇರಬೇಕೆಂದು ಜಗತ್ತಿನ ಧರ್ಮಗಳೆಲ್ಲವೂ ಬೋಧಿಸಿವೆ

ಉತ್ಕಾಂಕ್ಷೆಯ ಮಟ್ಟ ಬದಲಾಯಿಸಿ

ಒಬ್ಬ ವ್ಯಕ್ತಿ ಯಾವ ವಿಧವಾಗಿ ಒಂದು ಗುರಿಯನ್ನು ಸ್ಥಾಪಿಸಿ ಕೊಂಡು ಅದನ್ನು ಸಿದ್ಧಗೊಳಿಸಲು ಹೇಗೆ ವರ್ತಿಸುತ್ತಾನೆ. ಎಂಬುದನ್ನು ಕಂಡುಹಿಡಿಯುವುದು ಬಹಳ ಮುಖ್ಯವಾದ ಅಂಶ. ಉತ್ಕಾಂಕ್ಷೆಯ ಮಟ್ಟವನ್ನು ಅಳೆಯುವ ಬಗ್ಗೆ ನಡೆಸಿರುವ ಮನಶ್ಶಾಸ್ತ್ರೀಯ ಪ್ರಯೋಗಗಳು ಅನೇಕವಿಷಯಗಳನ್ನು ವಿಶದಮಾಡಿವೆ.

ಗುರಿಗೂ ಸಾಧಿಸುವವನ ಮಟ್ಟಕ್ಕೂ ಆವರಣದ (ಪ್ರಾಕೃತಿಕ ಮತ್ತು ಸಾಮಾಜಿಕ) ಲಕ್ಷಣಗಳಿಗೂ ನಿಕಟ ಸಂಬಂಧವಿದೆ. ಸಾಧಾರಣವಾಗಿ ಗುರಿಗೆ ಸಂಬಂಧಪಟ್ಟ ಕೆಲಸ ಅತಿ ಕಷ್ಟವಾಗಿರಬಹುದು ಅಥವಾ ಅತಿ ಸುಲಭವಾಗಿರಬಹುದು ಅಥವಾ ಮಧ್ಯವರ್ತಿಯಾಗಿರ ಬಹುದು. ಸಾಮಾನ್ಯವಾಗಿ ವ್ಯಕ್ತಿ ತನ್ನ ಶಕ್ತ್ಯಾನುಸಾರ ಕುಟುಂಬ ಮತ್ತು ನೆರೆಹೊರೆಯ ಆವರಣಕ್ಕನುಸಾರವಾಗಿ ತನ್ನ ಉದ್ದೇಶ ಸಾಧನೆಗೆ ಯತ್ನಿಸುತ್ತಾನೆ. ಉದ್ದೇಶ ತೀರ ಸಣ್ಣದಾದರೆ ಅದರ ಸಾಧನೆ ಏನೂ ಕಷ್ಟದ್ದಾಗುವುದಿಲ್ಲ. ಸಾಧಿಸದಿದ್ದರೆ ಆಶಾಭಂಗವಾಗುತ್ತದೆಂಬ ಹೆದರಿಕೆ ಇರುವುದು ಸಹಜವಾದ್ದರಿಂದ ತೀರ ಹಿರಿಯ ಉದ್ದೇಶವನ್ನು ಸಾಧಿಸಲೂ ಆತ ಪ್ರಯತ್ನಿಸುವುದಿಲ್ಲ; ಅವನ ಗುರಿ ಸಾಮಾನ್ಯವಾಗಿ ಕಷ್ಟಸಾಧ್ಯವಾದುದಾಗಿರುತ್ತದೆ.

ಈ ಬಗ್ಗೆ ನಡೆದ ಪ್ರಯೋಗಗಳು ಒಂದು ಕೆಲಸದ ಕಷ್ಟದ ಮಟ್ಟಕ್ಕೂ ಆ ವ್ಯಕ್ತಿಯ ಜಯ, ಅಪಜಯಗಳ ಮನೋಭಾವಕ್ಕೂ ಸಂಬಂಧವಿರುವುದನ್ನು ತೋರಿಸಿಕೊಟ್ಟಿದೆ. ಒಂದು ಕೆಲಸವನ್ನು ಸಾಧಿಸಿದರೆ ಅದರಿಂದ ಒದಗುವ ಸಂತೋಷ ಆತನ ಉತ್ಕಾಂಕ್ಷೆಯ ಅಂತಸ್ತನ್ನು ಏರಿಸಿ ಇನ್ನೂ ಹೆಚ್ಚು ಕೆಲಸಗಳನ್ನು ಸಾಧಿಸಲು ಉತ್ಸಾಹವನ್ನು ಕೊಡುವುದು. ಆದರೆ ತಾನು ಮಾಡುವ ಕೆಲಸಗಳಲ್ಲೆ ಪದೇ ಪದೇ ಅಪಜಯಗಳನ್ನು ಹೊಂದಿದರೆ ಮನಸ್ಸು ಕುಗ್ಗಿ ಉತ್ಕಾಂಕ್ಷೆಯ ಅಂತಸ್ತು ಕಡಿಮೆಯಾಗುವುದು. ಅಂದರೆ ನಿರಾಸೆ ಕಷ್ಟವಾದ ಕೆಲಸಗಳನ್ನು ದೂರಮಾಡುವ ಹಾಗೆ ಮಾಡುವುದು. ಅದಕ್ಕೇ ವ್ಯಕ್ತಿ ತನ್ನ ಶಕ್ತಿಯ ಮಟ್ಟಕ್ಕೆ ಅನುಗುಣವಾದ ತೂಕದ ಕೆಲಸವನ್ನು ಆರಿಸುವಲ್ಲಿ ಹಿಂದೇಟು ಹಾಕುತ್ತಾನೆ. ಅಷ್ಟೇ ಅಲ್ಲ, ತಾನು ಅಪ್ರಯೋಜಕನೆಂದೂ ತನ್ನ ಕೈಯಲ್ಲಿ ಯಾವ ವಿಧವಾದ ಕೆಲಸವೂ ಆಗುವುದಿಲ್ಲ ವೆಂದೂ ವಿಫಲ ಮನೋಭಾವವನ್ನು ಹೊಂದಿದರೂ ಆಶ್ಚರ್ಯಪಡ ಬೇಕಾದುದಿಲ್ಲ. ಇದನ್ನು ಮಕ್ಕಳಲ್ಲೂ ವಯಸ್ಕರಲ್ಲೂ ಕಾಣಬಹುದು. ಸಾಧಾರಣ ಬುದ್ಧಿ ಶಕ್ತಿಯುಳ್ಳ ಒಬ್ಬ ಹುಡುಗನನ್ನು ತಂದೆತಾಯಿಗಳು ಕಷ್ಟಪಟ್ಟು ಕೆಲಸಮಾಡಿ ಮೊದಲನೆಯ ದರ್ಜೆಯಲ್ಲಿ ತೇರ್ಗಡೆಯಾಗಲು ಪ್ರೋತ್ಸಾಹಿಸಬಹುದು. ಆದರೆ ಆ ಹುಡುಗನಿಗೆ ಅದು ಅಸಾಧ್ಯವಾದ ಕೆಲಸ. ಆದ್ದರಿಂದ ಹುಡುಗ ತಾನು ಅಪ್ರಯೋಜಕನೆಂದು ಭಾವಿಸಿ ತನ್ನ ಕೈಯಲ್ಲಿ ಆಗುವ ಕೆಲಸಗಳನ್ನೂ ಮಾಡದೆ ಹಿಂದುಳಿಯಬಹುದು.

ಆದರೆ ಹೆಚ್ಚು ಬುದ್ಧಿ ಶಕ್ತಿಯನ್ನು ಪಡೆದಿರುವ ಹುಡುಗ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಲು ಯತ್ನಿಸಿ ಸಫಲನಾಗಿ, ಉತ್ಸಾಹದಿಂದ ಮತ್ತಷ್ಟು ಕಷ್ಟವಾದ ಕೆಲಸಗಳನ್ನು ಸಾಧಿಸಲು ಪ್ರಯತ್ನಿಸುತ್ತಾನೆ.

ಆದ್ದರಿಂದ ತಂದೆತಾಯಿಗಳು, ಶಾಲೆಯ ಉಪಾಧ್ಯಾಯರು, ಕಾರ್ಖಾನೆ ಕಚೇರಿಗಳಲ್ಲಿ ರುವ ಅಧಿಕಾರಿಗಳು, ವ್ಯಕ್ತಿಗೆ ಸಾಧ್ಯವಾಗುವ ಕೆಲಸಗಳನ್ನು ಮೊದಲು ಕೊಟ್ಟು ಅವುಗಳಲ್ಲಿ ಉತ್ತೀರ್ಣನಾಗಿ ಉತ್ಸಾಹಭರಿತನಾಗಿ ಇರುವ ಹಾಗೆ ಮಾಡಿದರೆ ಆ ವ್ಯಕ್ತಿ ತನ್ನ ಶಕ್ತಿಯ ಮಟ್ಟಕ್ಕೆ ಸರಿಯಾಗಿ ಬೆಳೆಯುವುದು ಮಾತ್ರವಲ್ಲ ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಲ್ಲ. ಅದಕ್ಕೆ ಬದಲು ಶಕ್ತಿಗೆ ಮೀರಿದ ಕೆಲಸಗಳನ್ನು ಕೊಟ್ಟರೆ ನಿರಾಸೆ ಹೊಂದಿ ತಾನು ಕೀಳೆಂಬ ಮನೋಭಾವವನ್ನು ಹೊಂದುತ್ತಾನೆ.

ಮಾನವ ಇತಿಹಾಸವನ್ನು ಪರಿಶೀಲಿಸಿದರೆ ಕಾಲಕಾಲಕ್ಕೆ ಉದಿಸಿ ಬಂದ ವಿಭೂತಿ ಪುರುಷರು ತಮ್ಮ ಜೀವಿತಕಾಲದಲ್ಲಿ ಸಾಧಾರಣವಾದ ಮಹತ್ಕಾಂಕ್ಷೆಗಳನ್ನು ಮುಂದಿಟ್ಟುಕೊಂಡು ಶಕ್ತಿಮೀರಿ ದುಡಿದು ತಮ್ಮ ಮತ್ತು ತಮ್ಮ ನಾಡಿನ ಉತ್ಕರ್ಷಕ್ಕೆ ಕಾರಣರಾಗಿದ್ದಾರೆ. ಗಾಂಧೀಜಿ, ಪಂಡಿತ ಜವಾಹರಲಾಲ್ ನೆಹರು, ಐಸ್ಯಾಕ್ ನ್ಯೂಟನ್, ಐನ್ಸ್ಟೀನ್, ತೇನ್ಸಿಂಗ್-ಈ ಮುಂತಾದ ಪ್ರಭೃತಿಗಳ ಜೀವನಾದರ್ಶಗಳ ವ್ಯಾಪ್ತಿಯನ್ನೂ ಸಾಧಿಸಿದ ಅವರ ಶಕ್ತಿಸಾಮರ್ಥ್ಯಗಳ ತೂಕವನ್ನೂ ಹೋಲಿಸಿ ನೋಡುವುದು ಉತ್ತಮ. ಆದ್ದರಿಂದ ಉತ್ಕಾಂಕ್ಷೆ ಕೈಗೆ ಎಟುಕುವಂತಿರಬೇಕಾದ್ದು ಬಹುತೇಕ ಸರಿಯಾದರೂ ಅದು ಎಟುಕದಂತೆ ಸ್ವಲ್ಪ ಎತ್ತರವಾಗಿರಬೇಕಾದುದರ ಅಗತ್ಯವನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಉತ್ಕಾಂಕ್ಷೆಯ ಆದರ್ಶಗಳೆಲ್ಲ ಅಂಥವೇ ಆಗಿರುತ್ತವೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: