ಬಟ್ಟೆ ಅಥವಾ ಇತರ ಸಾಮಗ್ರಿಗಳಿಂದ ಉಡುಪಿನ ರಚನೆ, ರಚನೆಯ ವಿಧಾನ, ಕೈಗಾರಿಕೆ (ಕ್ಲೋದಿಂಗ್ ಮ್ಯಾನುಫ್ಯಾಕ್ಚರ್). ಚರ್ಮಗಳಲ್ಲಿ ರಂಧ್ರಮಾಡಿ, ಕೊಕ್ಕೆ ಮೊನೆಗಳ ಸಹಾಯದಿಂದ ಚರ್ಮದ ಮಿಣಿಗಳನ್ನು ಅವುಗಳಲ್ಲಿ ಹೊಗಿಸಿ ಉಡುಪು ಹೊಲಿಯುವ ವಿಧಾನ ಪ್ರಾಚೀನ ಶಿಲಾಯುಗದಲ್ಲಿ ಉತ್ತರ ಯೂರೋಪಿನ ಜನಕ್ಕೆ ಗೊತ್ತಿತ್ತು. ಅದೇ ಕಾಲಕ್ಕೆ ಸಂಬಂಧಿಸಿದ ಅಸ್ಥಿ ಸೂಜಿಗಳು ದಕ್ಷಿಣ ಯೂರೋಪಿನಲ್ಲೂ ಭಾರತದಲ್ಲೂ ಸಿಕ್ಕಿವೆ. ಆದ್ದರಿಂದ ಆ ವೇಳೆಗೆ ದಾರದಿಂದ ನೇಯ್ದ ಬಟ್ಟೆ ಉಡಲು ಜನ ಉಪಕ್ರಮಿಸಿದ್ದರೆನ್ನಬಹುದು. ಪುರಾತನ ನಾಗರಿಕತೆಗಳ ಕಾಲದಲ್ಲಿ ನೇಯ್ಗೆ ಕಸೂತಿಗಳು ಬೆಳೆದುವಾದರೂ ಉಡುಪು ತಯಾರಿಕೆ ಉಪಕರಣಗಳು ಮಾತ್ರ ಸರಳವಾಗಿಯೇ ಇದ್ದುವು. ನೂಲ್ಗೆ, ನೇಯ್ಗೆಗಳ ಬೆಳೆವಣಿಗೆಗೆ ಹೋಲಿಸಿದರೆ ಹೊಲಿಗೆ ಯಂತ್ರದ ಬೆಳೆವಣಿಗೆ ಯಾವಾಗಲೂ ಹಿಂದೆಯೇ ಉಳಿದಿದೆ.[]

ಮಧ್ಯಯುಗ

ಬದಲಾಯಿಸಿ

ಮಧ್ಯಯುಗದಲ್ಲಿ ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಗತಿಯಾಯಿತು. ಕಬ್ಬಿಣದ ಸೂಜಿಗಳು ಬಂದುವು. 18ನೆಯ ಶತಮಾನದಲ್ಲಿ ನೂಲುವ ಗಿರಣಿಗಳು ಬಂದಾಗ ಜವಳಿ ಉತ್ಪಾದನೆ ಹೆಚ್ಚಿತು. ಉಡುಪಿಗೆ ಬೇಡಿಕೆಯೂ ಹೆಚ್ಚಿತು. ಅದುವರೆಗೂ ಕೈಯಿಂದಲೇ ನಡೆಯುತ್ತಿದ್ದ ಹೊಲಿಗೆ ಕೆಲಸಕ್ಕೆ ಯಂತ್ರದ ನೆರವು ಅನಿವಾರ್ಯವಾಯಿತು. ಸಂಶೋಧನೆ ಸಾಗಿತು.[]

ಹೊಲಿಗೆ ಯಂತ್ರ

ಬದಲಾಯಿಸಿ

ಹೊಲಿಗೆ ಯಂತ್ರ ನಿರ್ಮಿಸುವ ಪ್ರಯತ್ನ ಆರಂಭವಾದದ್ದು 18ನೆಯ ಶತಮಾನದಲ್ಲಿ. ಇದನ್ನು ಕಂಡುಹಿಡಿದು, ವಾಣಿಜ್ಯಕ್ಷೇತ್ರದಲ್ಲಿ ಮೊಟ್ಟಮೊದಲು ತೊಡಗಿಸಿದವನೊಬ್ಬ ಫ್ರೆಂಚ್ ಪ್ರಜೆ: ಪ್ಯಾರಿಸಿನಲ್ಲಿ ಸೈನಿಕ ಸಮವಸ್ತ್ರ ತಯಾರಿಕೆಯಲ್ಲಿ ನಿರತನಾಗಿದ್ದ ಬಾರ್ಟೇಲ್‍ಮೀ ಟೀಮಾನ್ಯೆ. ಆದರೆ ಆ ವೇಳೆಗೆ ತೀವ್ರವಾಗಿದ್ದ ಸಮಸ್ಯೆ ಈ ಯಂತ್ರಗಳ ಆಗಮನದಿಂದ ಇನ್ನೂ ಉಲ್ಬಣಿಸುವುದೆಂದು ಕಳವಳಗೊಂಡ ಉದ್ರಿಕ್ತ ಜನರ ಗುಂಪು ಇವನ್ನಲ್ಲ ನಾಶಗೊಳಿಸಿತು. ಯಂತ್ರ ಪ್ರಯೋಗ ಅಷ್ಟಕ್ಕೇ ನಿಂತಿತು. ಮುಂದೆ ಸೂಜಿ, ಹಿಡಿಕೆಗಳಿರುವ (ಷಟ್ಲ್) ಎರಡು ಎಳೆ ದಾರಗಳ ಹೊಲಿಗೆ ಯಂತ್ರವೊಂದು ಬಂತು. ಇದನ್ನು ಕಂಡುಹಿಡಿದ ಎಲಿಯಾಸ್ ಹೌ ಅಮೆರಿಕನ್ ಪ್ರಜೆ. ಈತ ಅಮೆರಿಕದಲ್ಲಿ ಈ ಯಂತ್ರದ ಏಕಸ್ವ (ಪೇಟೆಂಟ್) ಪಡೆದ. ಆದರೆ ಇದಕ್ಕೆ ಅಲ್ಲಿ ಮಾನ್ಯತೆ ದೊರಕಲಿಲ್ಲವಾದ್ದರಿಂದ ಇಂಗ್ಲೆಂಡಿಗೆ ಹೋಗಿ ತನ್ನ ಏಕಸ್ವಾಧಿಕಾರದಲ್ಲಿ ಒಂದು ಭಾಗವನ್ನು ಅಲ್ಲಿ ಮಾರಿದ. ಮುಂದೆ ಐಸಾಕ್ ಎಂ. ಸಿಂಗರ್ 1851ರಲ್ಲಿ ಸುಧಾರಿತ ಯಂತ್ರವೊಂದರ ವಿನ್ಯಾಸ (ಡಿಸೈನ್) ರಚಿಸಿ ಅದನ್ನು ಚಾಲ್ತಿಗೆ ತಂದಾಗ ಅಮೆರಿಕನ್ ಚಿಪ್ಪಿಗರ ಪ್ರತಿಭಟನೆ ಕ್ರಮೇಣ ಅಡಗಿಹೋಯಿತು.ಹೊಲಿಗೆ ಯಂತ್ರ ಬಂದ ಮೇಲೆ ದೀರ್ಘಕಾಲ ಈ ಕ್ಷೇತ್ರದಲ್ಲಿ ಹೆಚ್ಚು ಮುನ್ನಡೆಯೇನೂ ಆಗಲಿಲ್ಲ. ಬಟ್ಟೆ ಕತ್ತರಿಸುವ ಯಂತ್ರವಿಲ್ಲದ್ದರಿಂದ ಹೊಲಿಯುವವನ ಕೆಲಸ ನಿಧಾನವಾಗಿತ್ತು. 1860ರಲ್ಲಿ ಪಟ್ಟಿ ಅಲಗಿನ (ಬ್ಯಾಂಡ್ ನೈಫ್) ಯಂತ್ರ ಬಂತು. ಹಲವು ಮಡಿಕೆ ಬಟ್ಟೆಯನ್ನು ಒಮ್ಮೆಗೇ ಕತ್ತರಿಸುವ ಈ ಯಂತ್ರವನ್ನು ಇಂಗ್ಲೆಂಡಿನ ಲೀಡ್ಸ್ ನಗರದ ಜಾನ್ ಬಾರಾನ್ ಕಂಡುಹಿಡಿದ. ಈ ಯಂತ್ರಕ್ಕೆ ಅಮೆರಿಕದಲ್ಲಿ ನಾನಾ ಬಗೆಯ ಪರಿಷ್ಕಾರಗಳಾದುವು. ಕಾಜ ಮಾಡುವುದಕ್ಕೂ ಗುಂಡಿ ಹೊಲಿಯುವುದಕ್ಕೂ ಇಸ್ತ್ರಿ ಮಾಡುವುದಕ್ಕೂ ಯಂತ್ರಗಳು ಬಂದಾಗ ಉಡುಪು ತಯಾರಿಕೆಯಲ್ಲಿ ಕ್ರಾಂತಿ ಸಂಭವಿಸಿತೆನ್ನಬಹುದು. ಮೊದಮೊದಲು ಬಂದ ಸಿದ್ಧಪಡಿಸಿದ ಉಡುಪುಗಳು ಅಷ್ಟೇನೂ ಅಚ್ಚುಕಟ್ಟಾಗಿರಲಿಲ್ಲ. ಆದರೆ ತಮ್ಮ ಬಟ್ಟೆ ತಾವೇ ಹೊಲಿದುಕೊಳ್ಳಬೇಕಾಗಿದ್ದ ಬಡ ಜನ ಇವನ್ನು ಸ್ವಾಗತಿಸಿದರು. ಕ್ರಮೇಣ ಇವುಗಳ ಗುಣಮಟ್ಟ ಹೆಚ್ಚಿದಂತೆ ಹೆಚ್ಚು ಅನುಕೂಲಸ್ಥರೂ ಇದನ್ನು ಕೊಂಡುಧರಿಸುವ ಅಭ್ಯಾಸ ಬೆಳೆಯಿತು.

ಕೈ ಹೊಲಿಗೆ ಕೈಗಾರಿಕೆ

ಬದಲಾಯಿಸಿ

ಮಧ್ಯಯುಗದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಕೈ ಹೊಲಿಗೆ ಕೈಗಾರಿಕೆಯಿತ್ತಾದರೂ ಮುಖ್ಯವಾಗಿ ಶ್ರೀಮಂತ ಪುರುಷಗ್ರಾಹಕರ ಬೇಡಿಕೆಯ ಪೂರೈಕೆಯೇ ಇದರ ಉದ್ದೇಶ. ಶ್ರೀಮಂತ ಮಹಿಳೆಯರು ತಮ್ಮ ಉಡುಪು ತಯಾರಿಕೆಗಾಗಿ ಸ್ತ್ರೀ ದರ್ಜಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದದ್ದುಂಟು. ಹದಿನೇಳನೆಯ ಶತಮಾನದ ನಡುಗಾಲದವರೆಗೂ ದರ್ಜಿಗಳಿಗೆ ಬಟ್ಟೆ ಕತ್ತರಿಸುವ ಹಾಗೂ ಹೊಲಿಯುವ ವಿದ್ಯೆಗಳೆರಡೂ ಬರುತ್ತಿದ್ದುವು. ಮುಂದೆ ಈ ಹೊಲಿಗೆ ಕಸುಬಿನ ಯಜಮಾನರು ತಮ್ಮ ಕೈಕೆಳಗಿನ ಅಭ್ಯಾಸಿಗಳಿಗೂ ಕಾರೇಗಾರರಿಗೂ ಹೊಲಿಯುವ ಕೆಲಸ ಮಾತ್ರ ಕೊಡತೊಡಗಿದರು. ಇದರಿಂದ ಮುಂದೆ ಹೊಲಿಯುವ ವಿದ್ಯೆಯನ್ನು ಮಾತ್ರ ಬಲ್ಲ ಕಾರ್ಮಿಕರ ಸಂಖ್ಯೆ ಬೆಳೆಯಿತು. ಇವರ ಹಿತರಕ್ಷಣೆಗಾಗಿ ನಾನಾ ಕಾಯಿದೆಗಳು ಬಂದುವು. ಯಂತ್ರಗಳ ಆಗಮನದಿಂದ ಸಿದ್ಧಪಡಿಸಿದ ಉಡುಪು ಕೈಗಾರಿಕೆ ಹಾಗೂ ವ್ಯಾಪಾರ ಈಚೆಗೆ ಅಭಿವೃದ್ಧಿ ಹೊಂದುತ್ತಿವೆ.

ಭಾರತದಲ್ಲಿ ಉಡುಪು ತಯಾರಿಕೆ

ಬದಲಾಯಿಸಿ

ಭಾರತದಲ್ಲಿ ಉಡುಪು ತಯಾರಿಕೆ ಈಚೆಗೆ ಶೀಘ್ರವಾಗಿ ಬೆಳೆಯುತ್ತಿದೆ. ದೇಶದ ನಾನಾ ಗಿರಿಣಿಗಳಲ್ಲಿ ತಯಾರಾಗುವ ವಿಧ ವಿಧ ಬಟ್ಟೆಗಳಲ್ಲಿ ಹೆಚ್ಚು ಭಾಗ ಉಡುಪಿಗಾಗಿ ಮೀಸಲು. ಉಡುಪು ತಯಾರಕರು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಉಡುಪಿನಲ್ಲಿ ತೀವ್ರವಾಗಿ ಸಂಭವಿಸುತ್ತಿರುವ ಮಾರ್ಪಾಟು. ಪಾಶ್ಚಾತ್ಯ ದೇಶಗಳಲ್ಲಿ ಈ ಮಾರ್ಪಾಟಿನ ವೇಗ ಹೆಚ್ಚು. ಭಾರತದಲ್ಲೂ ಈಚೆಗೆ ಈ ಪ್ರವೃತ್ತಿ ಬೆಳೆಯುತ್ತಿದೆ. ಅಲ್ಲದೆ ಈಗಿನ ದಿನಗಳಲ್ಲಿ ಷರಟು, ಬುಷ್ ಷರಟು, ಷರಾಯಿಗಳಲ್ಲಿ ಬಗೆಬಗೆಯ ನಮೂನೆಗಳು ಬಂದು ಹೋಗುತ್ತಿವೆ. ಹೆಂಗಸರ ರವಿಕೆಗಳಲ್ಲಿ ನಮೂನೆಗಳು ಅಧಿಕ. ಆದ್ದರಿಂದ ಅವನ್ನು ಅಧಿಕ ಸಂಖ್ಯೆಯಲ್ಲಿ ಒಟ್ಟೊಟ್ಟಿಗೆ ತಯಾರಿಸುವ ಪದ್ಧತಿ ಬೆಳೆದಿಲ್ಲ. ಆದರೆ ಮಕ್ಕಳ ಉಡುಪುಗಳನ್ನು ಹೆಚ್ಚು ಹೆಚ್ಚಾಗಿ ತಯಾರಿಸುವ ಅವಕಾಶವಿದೆ. ಈ ಎಲ್ಲ ಅಂಶಗಳ ಜೊತೆಗೆ ಉಡುಪು ತಯಾರಕರು ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಬೇರೆ ಬೇರೆ ದೇಶಗಳಲ್ಲಿನ ಮತ್ತು ಒಂದೇ ದೇಶದ ಬೇರೆ ಬೇರೆ ಭಾಗಗಳಲ್ಲಿನ ಜನ ಬೇರೆ ಬೇರೆಬಗೆಯ ಉಡುಪು ಧರಿಸುತ್ತಾರೆಂಬ ಅಂಶ. ಈ ಭಿನ್ನತೆಗಳನ್ನೂ ಬದಲಾವಣೆಗಳನ್ನೂ ಉಡುಪು ತಯಾರಕರು ಸದಾ ಗಮನಿಸುತ್ತಿರಬೇಕಾದ್ದು ಅನಿವಾರ್ಯ. ಉಡುಪು ತಯಾರಿಕೆ ಕಾರ್ಖಾನೆಗಳಲ್ಲಿ ಷರಟು, ಬುಷ್ ಷರಟು, ನಿಕ್ಕರ್, ಷರಾಯಿ, ಪಾಯ್ಜಾಮ, ಕೋಟು, ನಾನಾ ಬಗೆಯ ಲಂಗ ಮತ್ತು ಮಕ್ಕಳ ಉಡುಪುಗಳು ತಯಾರಾಗುತ್ತದೆ.

ಉಡುಪು ತಯಾರಿಕೆಯಲ್ಲಿ ಸಾಧಾರಣವಾಗಿ ಮೂರು ಮುಖ್ಯ ಘಟ್ಟಗಳುಂಟು

ಬದಲಾಯಿಸಿ

1 ಬಟ್ಟೆಯ ಕತ್ತರಿಸುವಿಕೆ 2. ಹೊಲಿಗೆ 3. ಸಂಸ್ಕರಣ ಗೊತ್ತಾದ ಅಳತೆಗನುಗುಣವಾಗಿ ಬಟ್ಟೆ ಪೋಲಾಗದಂತೆ ಅದರ ಮೇಲೆ ಗುರುತು ಮಾಡುವುದು ಮೊದಲನೆಯ ಕೆಲಸ. ಕಾರ್ಖಾನೆಗಳಲ್ಲಿ ದೊಡ್ಡ ಉಡುಪುಗಳಿಗಾಗಿ ಕತ್ತರಿಸಿ ಉಳಿದ ದೊಡ್ಡ ಚೂರುಗಳನ್ನು ಚಿಕ್ಕ ಉಡುಪುಗಳ ಭಾಗಗಳಿಗೆ ಉಪಯೋಗಿಸುತ್ತಾರೆ. ಚಿಕ್ಕ ಬಟ್ಟೆಗಳಿಂದ ಉಳಿದ ಅತಿ ಚಿಕ್ಕ ಚೂರುಗಳಿಂದಲೂ ಜಮಖಾನೆ ಮುಂತಾದವನ್ನು ತಯಾರಿಸುವುದರಿಂದ ಬಟ್ಟೆ ವ್ಯರ್ಥವಾಗುವುದಿಲ್ಲ. 500-700 ಪದರಗಳಷ್ಟು ಬಟ್ಟೆಯನ್ನು ಒಂದರ ಮೇಲೊಂದರಂತೆ ಪೇರಿ, ತೀರ ಮೇಲ್ಗಡೆ ಇರುವ ಪದರದ ಮೇಲೆ ಸೂಕ್ತವಾದ ರೀತಿ ಗೆರೆ ಎಳೆದು ಗುರುತಿಸಿದ ಮೇಲೆ ಈಸ್ಟ್‍ಮನ್ ಕತ್ತರಿಸುವ ಯಂತ್ರದಿಂದ ಎಲ್ಲ ಪದರಗಳನ್ನೂ ಒಂದೇ ಬಾರಿಗೆ ಕತ್ತರಿಸಲಾಗುತ್ತದೆ. ಈ ಯಂತ್ರದಲ್ಲಿನ ಅಲಗು ಬಲು ವೇಗವಾಗಿ ಮೇಲೆ-ಕೆಳಗೆ ಚಲಿಸುವುದರಿಂದ ಸಡಿಲವಾದ ಕೆಲವು ದಾರದ ಎಳೆಗಳು ಬಟ್ಟೆಯಿಂದ ಬಿಟ್ಟುಕೊಳ್ಳುತ್ತವೆ. ಕೆಲವು ಯಂತ್ರಗಳಲ್ಲಿ ಸತತವಾಗಿ ಕೊಯ್ಯುವ ಚಕ್ರಾಕಾರದ ಗುಂಡನೆಯ ಅಲಗುಗಳಿವೆ. ಇವು ಬಟ್ಟೆಯ ಪದರಗಳನ್ನು ಏಕಪ್ರಕಾರವಾಗಿ ಕತ್ತರಿಸುತ್ತವೆ. ಆದರೆ ಹೆಚ್ಚು ತಿರುವುಗಳಿರುವ ಗುರುತುಗಳಿದ್ದರೆ ಈ ಬಗೆಯ ಯಂತ್ರ ಸರಿಯಾಗಿ ಕತ್ತರಿಸಲಾರದು. ಈ ಎರಡು ಬಗೆಯ ಕತ್ತರಿಸುವಿಕೆಯಲ್ಲೂ ಯಂತ್ರವನ್ನೇ ಬೇಕಾದ ರೀತಿ ಚಲಿಸಬೇಕು. ಹೆಚ್ಚು ಅಂಕುಡೊಂಕು ಗುರುತುಗಳಿಗನುಸಾರವಾಗಿ ಬಟ್ಟೆ ಕತ್ತರಿಸುವುದಕ್ಕೆ ವಿಶಿಷ್ಟವಾದ ಯಂತ್ರವುಂಟು. ಇಲ್ಲಿ ಬಟ್ಟೆಯನ್ನೇ ತಿರುಗಿಸಬೇಕು.ಈ ರೀತಿ ಅಂಗಿಯ ವಿವಿಧ ಅಂಗಗಳಾದ ಬೆನ್ನು, ಮುಂಭಾಗ, ತೋಳು, ಜೇಬುಗಳನ್ನು ಕತ್ತರಿಸಿಯಾದ ಮೇಲೆ, ಇವುಗಳನ್ನೆಲ್ಲ ಬೇರೆ ಬೇರೆ ಕಟ್ಟುಗಳಾಗಿ ಕಟ್ಟಿ ಹೊಲಿಯುವ ಇಲಾಖೆಗೆ ರವಾನಿಸಲಾಗುತ್ತದೆ.

ಇಲಾಖೆಯಲ್ಲಿ ಆವಶ್ಯಕತೆಗೆ ತಕ್ಕಂತೆ ಬೇರೆ ಬೇರೆ ಬಗೆಯ ಹೊಲಿಗೆ ಯಂತ್ರ

ಬದಲಾಯಿಸಿ

ಈ ಇಲಾಖೆಯಲ್ಲಿ ಆವಶ್ಯಕತೆಗೆ ತಕ್ಕಂತೆ ಬೇರೆ ಬೇರೆ ಬಗೆಯ ಹೊಲಿಗೆ ಯಂತ್ರಗಳಿವೆ. ಉದಾ: ಸಾದಾ ಹೊಲಿಗೆ, ಸರಪಳಿ ಹೊಲಿಗೆ, ಕಸೂತಿ ಹೊಲಿಗೆ, ಟಿಬ್ಬಿ (ಹೆಮಿಂಗ್) ಇತ್ಯಾದಿ.ಸಾದಾ ಹೊಲಿಗೆ ಯಂತ್ರ ಅತಿ ವೇಗವಾಗಿ ಕೆಲಸ ಮಾಡುತ್ತದೆ. ಅದು ಮಿನಿಟಿಗೆ ಸುಮಾರು 6000-7000 ಹೊಲಿಗೆ ಹಾಕಬಲ್ಲದು. ಬಟ್ಟೆಯ ಹೆಚ್ಚುಭಾಗ ಹೊಲಿಯಲು ಉಪಯೋಗಕ್ಕೆ ಬರುವ ಯಂತ್ರ ಇದೇ. ಕೆಲವು ಯಂತ್ರಗಳಲ್ಲಿ ಮಡಿಸುವ ಸಾಧನವೂ ಎರಡು ಸೂಜಿಗಳೂ ಇರುವುದರಿಂದ, ಸೇರಿಸಬೇಕಾದ ಎರಡು ಭಾಗಗಳಲ್ಲಿ ಯಂತ್ರವೇ ಮಡಿಸಿ, ಒಂದೇ ಕಾಲಕ್ಕೆ ಸಮಾನಾಂತರವಾಗಿ ಪಕ್ಕಪಕ್ಕದಲ್ಲಿ ಎರಡು ಹೊಲಿಗೆ ಹಾಕುತ್ತದೆ.ಷರಾಯಿಯಂಥ ಕೊಳವೆ ಉಡುಪು ಹೊಲಿಯಲು ಸರಪಳಿ ಹೊಲಿಗೆ ಯಂತ್ರ ಉಪಯೋಗಕ್ಕೆ ಬರುತ್ತದೆ. ಇದರಲ್ಲಿ ಎರಡು ಸೂಜಿಗಳಿವೆ; ಉರುಳೆ (ಬಾಬಿನ್) ಇಲ್ಲ. ಅದರ ಬದಲು ಏಕಪ್ರಕಾರವಾಗಿ ನಾಲ್ಕು ದಾರ ತುಂಬುತ್ತಿರುತ್ತದೆ. ಇದರಿಂದ ಎಂಥ ದಪ್ಪ ಬಟ್ಟೆಯನ್ನಾದರೂ ಹೊಲಿಯಬಹುದು.ರಖಂವಾರು ಹೊಲಿಗೆಗಳಿಗೆ ಕಸೂತಿ ಯಂತ್ರಗಳಿವೆ. ಮಣಿ ಹೊಲಿಗೆ (ಬೀಡಿಂಗ್), ವಂಕಿ ಹೊಲಿಗೆ (ಜಿಗ್‍ಜ್ಯಾಗ್), ಮಳಿಚಿಪ್ಪಿನ ಕರೆ ಹೊಲಿಗೆ (ಸ್ಕ್ಯಾಲಪಿಂಗ್). ಕೂಡಿಕೆ (ಗ್ಯಾದರಿಂಗ್) ಇವೆಲ್ಲಕ್ಕೂ ಪ್ರತ್ಯೇಕ ಯಂತ್ರಗಳುಂಟು. ಮಕ್ಕಳ ಉಡುಪು ತಯಾರಿಕೆಯಲ್ಲಿ ಇವು ಹೆಚ್ಚು ಉಪಯುಕ್ತ.ಷರಟು ಹೊಲಿಯುವಾಗ ಮುಖ್ಯವಾಗಿ ಅದರ ಕತ್ತುಪಟ್ಟಿ (ಕಾಲರ್) ಮತ್ತು ಮಣಿಕಟ್ಟುಗಳಿಗೆ (ಕಫ್) ಹೆಚ್ಚು ಗಮನ ಕೊಡಲಾಗುತ್ತದೆ. ಏಕೆಂದರೆ ಷರಟಿನ ಅಂದಕ್ಕೆ ಇವು ಮುಖ್ಯ ಕಾರಣ. ಇದಕ್ಕಾಗಿಯೇ ಪ್ರತ್ಯೇಕ ಯಂತ್ರಗಳಿವೆ. ಪಟ್ಟಿ ಹೊಲಿಯುವಾಗಲೇ ಹೆಚ್ಚು ಬಟ್ಟೆ ಕತ್ತರಿಸಿ ಹಾಕಿ, ಅನಂತರ ಪಟ್ಟಿಯನ್ನು ತಿರುಗಿಸಿ ಹೊಲಿದು ಒತ್ತುವ ಯಂತ್ರದಿಂದ ಪರಿಷ್ಕರಿಸಲಾಗುತ್ತದೆ.ಉಡುಪಿನ ದೇಹಭಾಗ ಹೊಲಿಯಲು ಮುಂಡಾ ಯಂತ್ರವೂ ಭುಜ ಭಾಗದ ಹೊಲಿಗೆಗೆ ಸ್ಕಂಧ (ಷೋಲ್ಡರ್) ಯಂತ್ರವೂ ಸಹಾಯಕ. ಷರಾಯಿಯನ್ನು ಟಿಬ್ಬಿ (ಹೆಮಿಂಗ್) ಯಂತ್ರದಿಂದ ಹೊಲಿದು ಕೊನೆಗೆ ಎಳೆಗಳು ಜಾರದಂತೆ ಬಟ್ಟೆಯ ಪಕ್ಕಗಳನ್ನು ಮೇಲ್ಸೇರಿಕೆ (ಓವರ್ ಲಾಕಿಂಗ್) ಯಂತ್ರದಿಂದ ಹೊಲಿಯುತ್ತಾರೆ.ಈ ರೀತಿ ಸಿದ್ಧಪಡಿಸಿದ ಉಡುಪುಗಳನ್ನು ಮುಂದೆ ಕಾಜ-ಗುಂಡಿ ಇಲಾಖೆಗೆ ಕಳುಹಿಸಲಾಗುತ್ತದೆ. ಕೈಯಿಂದ ಗುಂಡಿ ಇಟ್ಟಾಗ ಅದನ್ನು ಹೊಲಿಯುವ ಯಂತ್ರ 71/2 ಗಂಟೆಗಳ ಒಂದು ದಿನಕ್ಕೆ ಸುಮಾರು 5,000 ಗುಂಡಿ ಹೊಲಿಯಬಲ್ಲದು. ಸ್ವಯಂಚಾಲಿತ ಯಂತ್ರವಾದರೆ ಅದೇ ಕಾಲದಲ್ಲಿ 12,000 ಗುಂಡಿ ಹಾಕುತ್ತದೆ. ಈ ಕಾಲದಲ್ಲಿ ಕಾಜ ಯಂತ್ರ 4,000 ಕಾಜ ತಯಾರಿಸುತ್ತದೆ.

ಟ್ರಿಮಿಂಗ್ ಇಲಾಖೆ

ಬದಲಾಯಿಸಿ

ಒಪ್ಪ ಮಾಡುವ (ಟ್ರಿಮಿಂಗ್) ಇಲಾಖೆಯಲ್ಲಿ ಉಡುಪಿನ ಮುಂದಿನ ಅವಸ್ಥೆ. ಉಡುಪಿನ ಹೊಲಿಗೆಗಳಿಂದ ಹೊರಬಂದಿರುವ ದಾರದ ಎಳೆಗಳನ್ನು ಕತ್ತರಿಸಿ ಹಾಕಿ ದೂಳು, ಎಣ್ಣೆಯ ಕರೆ ಮುಂತಾದುವುವನ್ನು ತೆಗೆದು ಹಾಕುವುದು ಈ ಘಟ್ಟದಲ್ಲಿನ ಕೆಲಸ.ಹೀಗೆ ತಯಾರಾಗಿ ಬಂದ ಉಡುಪನ್ನು ಮಡಿಸಿ ಇಸ್ತ್ರಿ ಮಾಡುವುದಕ್ಕೂ ಒಂದು ಪತ್ಯೇಕ ಇಲಾಖೆಯೇ ಉಂಟು. ಭಾರತದಲ್ಲಿ ಕೈಯಿಂದ ಇಸ್ತ್ರಿ ಮಾಡುವುದೇ ಹೆಚ್ಚು ವಾಡಿಕೆ. ವೇಗವಾಗಿ ಇಸ್ತ್ರಿ ಮಾಡಬಲ್ಲ ಸ್ವಯಂಚಾಲಿತ ಇಸ್ತ್ರಿ ಪೆಟ್ಟಿಗೆ ಬಳಸುವುದರಿಂದ ಶ್ರಮವೆಷ್ಟೋ ನಿವಾರಣೆಯಾಗುವುದು ಸಾಧ್ಯ.ಷರಟಿಗೆ ಕತ್ತುಪಟ್ಟಿ, ತಗಲುಪಟ್ಟಿಗಳನ್ನು (ಟ್ಯಾಗ್) ಷರಾಯಿಗಳಿಗೆ ಸೊಂಟಪಟ್ಟಿಯನ್ನೂ ಹಿಡಿಕೆ (ಕ್ಲಿಪ್), ಗುಂಡಿಪಟ್ಟಿ ಮುಂತಾದವುಗಳನ್ನೂ ಲಗತ್ತಿಸಿದ ಮೇಲೆ ಈ ಉಡುಪುಗಳು ಗ್ರಾಹಕನ ಬಳಿಗೆ ಪ್ರಯಾಣ ಹೊರಡಲು ಸುಸಜ್ಜಿತವಾದುವೆಂದು ಅರ್ಥ. ಇವನ್ನು ಪಾಲಿಥೀನ್ ಚೀಲಗಳಲ್ಲಿ ಇಟ್ಟು, ಪೆಟ್ಟಿಗೆಗಳಲ್ಲಿ ತುಂಬಿ ಮಾರಾಟಗಾರರಿಗೆ ರವಾನಿಸಲು ಸಿದ್ಧವಾದಾಗ ಅವು ಹೊಲಿದು ಸಿದ್ಧಪಡಿಸಿದ ಉಡುಪುಗಳೆಂದು ಹೇಳಿಸಿಕೊಳ್ಳಲು ಅರ್ಹ.

ಉಲ್ಲೇಖಗಳು

ಬದಲಾಯಿಸಿ