ಉಡುಪಿ ಶ್ರೀನಿವಾಸ
ಡಾ. ಶ್ರೀನಿವಾಸ (೧೯೪೮) ಅವರು ಉಡುಪಿಯ ಮೀನುಗಾರ ಕುಟುಂಬವೊಂದರಲ್ಲಿ ಜನಿಸಿದರು. ಇವರು ದೇವಿಬಾಯಿ-ರಾಮ ಮೊಗವೀರರ ಮಗ.[೧]
ಶಿಕ್ಷಣ
ಬದಲಾಯಿಸಿಶ್ರೀನಿವಾಸ ಅವರು ಉಡುಪಿಯಲ್ಲಿ ಪಿ.ಯು.ಸಿ.ವರೆಗೆ ಓದಿ ಬೆಂಗಳೂರಿನಲ್ಲಿ ವ್ಯಾಸಂಗ ಮುಂದುವರೆಸಿದರು. ಮದರಾಸಿನ ಐ.ಐ.ಟಿ ಯ ಏರೋನಾಟಿಕಲ್‍ನಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಗಳನ್ನು ಮುಗಿಸಿದ ಶ್ರೀನಿವಾಸ್ ೧೯೭೬ ರಲ್ಲಿ ಪ್ರೊ. ಜಗದೀಶ್‍ರವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಮುಗಿಸಿ ಮೂರು ವರ್ಷಗಳ ಅವಧಿಗೆ ಸೀನಿಯರ್ ರೀಸರ್ಚ್ ಫೆಲೋ ಆಗಿ ಭಾರತೀಯ ವಿಜ್ಞಾನ ಮಂದಿರದಲ್ಲಿದ್ದರು. ಮುಂದಿನ ೩೦ ವರ್ಷ ಬೆಂಗಳೂರಿನ ವಿಜ್ಞಾನ ಮಂದಿರದಲ್ಲೇ ಮೆಕ್ಯಾನಿಕಲ್ ವೈಬ್ರೇಶನ್ಸ್ ಮತ್ತು ಸ್ಟ್ರಕ್ಚರಲ್ ಮೆಕ್ಯಾನಿಕಲ್ ವಿಷಯವನ್ನು ಬೋಧಿಸಿದ ಶ್ರೀನಿವಾಸರು ೩೧ ಜುಲೈ ೨೦೧೨ ರಂದು ಸೇವೆಯಿಂದ ನಿವೃತ್ತರಾದರು.
ಕಾರ್ಯಗಳು
ಬದಲಾಯಿಸಿಭಾರತ ಸರ್ಕಾರದ ಜೈವಿಕ ಇಂಧನ ನೀತಿ ನಿರೂಪಣೆಯಲ್ಲಿ ಶ್ರೀನಿವಾಸರ ಪಾತ್ರವಿದೆ [೨]. ೧೯೭೪ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ನಿತ್ಯಜೀವನಕ್ಕೆ ಉಪಯುಕ್ತವಾದ ವೈಜ್ಞಾನಿಕ ಸಾಧನೆಗಳನ್ನು ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ತರಲು ಯೋಜನೆಗಳನ್ನು ಹಮ್ಮಿಕೊಳ್ಳಲು ಯೋಚಿಸತೊಡಗಿದ್ದರು. ಪ್ರೊ. ಸತೀಶ್ ಧವನ್ ನಿರ್ದೇಕರಾಗಿದ್ದ ಆ ಅವಧಿಯಲ್ಲಿ ಎ.ಕೆ.ಎನ್.ರೆಡ್ಡಿ, ಮಾಧವ ಗಾಡಿಗೀಳ್, ರೊದ್ದಂ ನರಸಿಂಹ ಮೊದಲಾದವರು ಹಳ್ಳಿಗರಿಗೆ ಪ್ರಯೋಜನವಾಗುವಂತಹ ಯಾವುದಾದರೂ ಉಪಯುಕ್ತ ಕಾರ್ಯಗಳನ್ನು ಆಯಾ ಹಳ್ಳಿಗಳಲ್ಲೇ ಜಾರಿಗೆ ತರುವ ಚಿಂತನೆಯಿಂದ ‘ಅಸ್ತ್ರ’ಎಂಬ ಕೇಂದ್ರವನ್ನು ಪ್ರಾರಂಭಿಸಿದ್ದರು. ಈ ಕೇಂದ್ರವು ಹಳ್ಳಿಗಳಲ್ಲಿ ವಿದ್ಯುಚ್ಛಕ್ತಿಯ ಪೂರೈಕೆ ಮತ್ತು ಕಟ್ಟಡ ನಿರ್ಮಾಣ ತಂತ್ರಜ್ಞಾನಗಳನ್ನು ಒದಗಿಸುವ ಉದ್ದೇಶ ಹೊಂದಿತ್ತು . ಅದರಂತೆ ಗಾಳಿಯಂತ್ರ ಯೋಜನೆಯ ಸಂಯೋಜಕರಾಗಿ ಡಾ.ಉಡುಪಿ ಶ್ರೀನಿವಾಸ್ ಅವರು ಪ್ರೊ. ರೊದ್ದಂ ನರಸಿಂಹ ಅವರೊಡನೆ ಅಸ್ತ್ರ ಕೇಂದ್ರದಲ್ಲಿ ಕೆಲಸ ಮಾಡಿದ್ದರು.
೧೯೭೬ ರ ವೇಳೆಗೆ ವಿದ್ಯುಚ್ಛಕ್ತಿಯ ಕೊರತೆ ತೀವ್ರವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಪಂಪುಗಳು ಸ್ಥಗಿತಗೊಳ್ಳುವಂತಾಗಿತ್ತು. ಆ ಸಮಯದಲ್ಲಿ ೨೦೦ ವರ್ಷಗಳಷ್ಟು ಪ್ರಾಚೀನವಾದ ಗ್ಯಾಸಿಫೈಯರ್ ತಂತ್ರಜ್ಞಾನವನ್ನು ಪರಿಷ್ಕರಿಸಿ ಅಳವಡಿಸುವ ಬಗೆಗೆ ಶ್ರೀನಿವಾಸರ ತಂಡ ಆಲೋಚನೆ ನಡೆಸಿತು. ಜೈವಿಕ ತ್ಯಾಜ್ಯಗಳನ್ನು (ಬಯೋಮಾಸ್) ಬಳಸಿ ಗ್ಯಾಸಿಫೈಯರ್ ವಿಧಾನದ ಮೂಲಕ ಐದು ಅಶ್ವ ಶಕ್ತಿಯ ಡೀಸೆಲ್ ಇಂಜಿನ್ ಅನ್ನು ನಡೆಸುವ ಈ ಪ್ರಯೋಗ ಬಹಳ ಯಶಸ್ವಿಯಾಯಿತು. ಈ ಯಂತ್ರದ ಪರಿಷ್ಕ್ರತರೂಪ ಇಂದು ಜಗತ್ಪ್ರಸಿದ್ಧವಾಗಿದೆ. ಸ್ವಿಡ್ಜಲ್ರ್ಯಾಂಡ್, ಮೆಕ್ಸಿಕೋ ಮೊದಲಾದ ದೇಶಗಳಲ್ಲಿ ಬಳಕೆಯಲ್ಲಿದೆ. ಆಗ್ರೋ ಬಯೋಮಾಸ್ ಎನರ್ಜಿ ಟೆಕ್ನಾಲಜಿ ಸೊಸೈಟಿ ಎಂಬ ವಾಣಿಜ್ಯ ಸಂಸ್ಥೆಯೇ ಹುಟ್ಟಿಕೊಂಡಿದೆ. ಜನರಲ್ ಎಲೆಕ್ಟ್ರಿಕಲ್ ಕಂಪೆನಿಯ ಸಹಯೋಗದೊಡನೆ ೧೦೦ ಕಿಲೋ ವ್ಯಾಟ್ಸ್ , ೧.೫ ಮೆಗಾವ್ಯಾಟ್ ಸಾಮರ್ಥ್ಯವಿರುವ ದೊಡ್ಡಪ್ರಮಾಣದ ಗ್ಯಾಸಿಫೈಯರ್ ತಯಾರಿಕೆಗಾಗಿ ಪ್ರಯೋಗಗಳೂ ನಡೆದಿವೆ.
ಭಾರತೀಯ ವಿಜ್ಞಾನ ಮಂದಿರದ ಆಶ್ರಯದಲ್ಲಿ ಉತ್ತಮ ಗುಣ,ಮಟ್ಟದ ಅಡುಗೆ ಒಲೆಯನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ ಶ್ರೀನಿವಾಸರ ತಂಡ ಈ ಪ್ರಯತ್ನದಲ್ಲೂ ಯಶಸ್ಸು ಸಾಧಿಸಿತು. ಸ್ವಸ್ತಿ ಎಂಬ ಹೆಸರಿನ ಈ ಒಲೆ ಕಡಿಮೆ ಸೌದೆ ಚೂರುಗಳನ್ನು ಇಂಧನವಾಗಿ ಉರಿಸಿ ಹೆಚ್ಚು ಶಾಖ ಉತ್ಪಾದಿಸುವ ಸಾಮರ್ಥ್ಯ ಪಡೆದಿತ್ತು. ಇದರ ಗುಣಮಟ್ಟವನ್ನೂ ಅಭಿವೃದ್ಧಿಪಡಿಸಲಾಗುತ್ತಿದ್ದು ಡಚ್ ಮೂಲದ ಷೆಲ್ ಕಂಪನಿ ಅಪಾರ ಪ್ರಮಾಣದ ಒಲೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.
೧೯೮೯ ರಲ್ಲಿ ಅಸ್ತ್ರ ಕೇಂದ್ರದ ಮುಖ್ಯಸ್ಥರಾಗಿ ನೇಮಕ
ಬದಲಾಯಿಸಿ೧೯೯೬ ರಲ್ಲಿ ಗ್ರಾಮಾಭಿವೃದ್ದಿ ಇಲಾಖೆ ಮತ್ತು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮಗಳಲ್ಲಿ ಬಳಕೆಯಲ್ಲಿರುವ ಇಂಧನ ಮೂಲಗಳಿಂದಲೇ ಕಡಿಮೆ ವೆಚ್ಚದ ಪರಿಣಾಮಕಾರಿ ಶಕ್ತಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾರಂಭಿಸಲು ಭಾರತೀಯ ವಿಜ್ಞಾನ ಮಂದಿರ ಉದ್ದೇಶಿಸಿತು. ಈ ಯೋಜನೆಯನ್ನು ಡಾ.ಉಡುಪಿ ಶ್ರೀನಿವಾಸರು ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿದರು. ಗ್ರಾಮಗಳಲ್ಲಿ ಬಳಕೆಯಲ್ಲಿರುವ ಸಾಂಪ್ರದಾಯಿಕ ಇಂಧನ ಮೂಲಗಳನ್ನೇ ಬಳಸಿಕೊಳ್ಳುವುದು, ಆಸುಪಾಸಿನ ಗ್ರಾಮಗಳಲ್ಲಿ ಕಡಿಮೆ ವೆಚ್ಚದಲ್ಲಿ ಪುನರಾವರ್ತಿಸಬಹುದಾದ ಶಕ್ತಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿಸುವುದು, ಇದರಿಂದ ಹಳ್ಳಿಗರಿಗೆ ಅನುಕೂಲ ದೊರಕುವುದರ ಜೊತೆಗೆ ಅವರ ಆದಾಯವೂ ಹೆಚ್ಚುವಂತಿರಬೇಕು ಇವು ಯೋಜನೆಯ ಮುಖ್ಯ ಅಂಶಗಳಾಗಿದ್ದವು.
ಜೈವಿಕ ಇಂಧನ
ಬದಲಾಯಿಸಿಹೊಂಗೆ, ಹಿಪ್ಪೆ, ಬೇವು ಮೊದಲಾದ ಸಸ್ಯಜನ್ಯ ತೈಲಗಳನ್ನು ಜೈವಿಕ ಇಂಧನ ಎಂದು ಕರೆಯುತ್ತೇವೆ. ಇವೇ ಎಣ್ಣೆಗಳನ್ನು ಬಳಸಿ ಜನರೇಟರ್ ಇಂಜಿನ್ ನಡೆಸುವುದು, ಜೈವಿಕ ತ್ಯಾಜ್ಯಗಳನ್ನು ಉಪಯೋಗಿಸಿ ಗ್ಯಾಸಿಫೈಯರ್ ತಂತ್ರಜ್ಞಾನದ ಮೂಲಕ ವಿದ್ಯುಚ್ಛಕ್ತಿ ತಯಾರಿಸುವುದು , ಕುಡಿಯುವ ನೀರು ಒದಗಿಸಲು , ರಾತ್ರಿಯ ವೇಳೆ ಗ್ರಾಮಗಳಿಗೆ ವಿದ್ಯುಚ್ಚಕ್ತಿ ಒದಗಿಸುವುದು ಶ್ರೀನಿವಾಸರ ತಂಡದ ಗುರಿಯಾಗಿತ್ತು. ಇದಕ್ಕಾಗಿ ಅವರು ಆರಿಸಿಕೊಂಡ ಪ್ರದೇಶ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನರಸಾಪುರ, ಸಜ್ಜನಹಳ್ಳಿ, ಸುಗ್ಗೇನಹಳ್ಳಿ, ಉಂಗ್ರ ಮತ್ತಿತ್ತರ ಐದಾರು ಹಳ್ಳಿಗಳು. ಈ ಗ್ರಾಮಾಂತರ ಪ್ರದೇಶದಲ್ಲಿ ಮೊದಲು ೬೦ ಎಕರೆಗಳಷ್ಟು ಪ್ರದೇಶದಲ್ಲಿ ಕ್ಷೇತ್ರ ಕಾರ್ಯ ನಡೆದಿತ್ತು. ೧೯೭೪ ರಲ್ಲೇ ಸಮುದಾಯ ಜೈವಿಕ ಅನಿಲ ಘಟಕವನ್ನು ಸ್ಥಾಪಿಸಲಾಗಿತ್ತು. ಗ್ರಾಮಗಳಿಂದ ಸಂಗ್ರಹಿಸಿದ ಸಗಣಿಯಿಂದ ಇಲ್ಲಿ ವಿದ್ಯುಚ್ಛಕ್ತಿ ತಯಾರಿಸಲಾಗುತ್ತಿತ್ತು. ಈ ಪ್ರದೇಶದಲ್ಲಿ ಬೇಕಾದಷ್ಟು ಹೊಂಗೆ ಮರಗಳಿದ್ದುದರಿಂದ ಶ್ರೀನಿವಾಸರ ತಂಡಕ್ಕೆ ಗ್ರಾಮಸ್ಥರಿಂದ ಹೊಂಗೆ ಬೀಜಗಳನ್ನು ಸಂಗ್ರಹಿಸುವುದೇನೂ ಕಷ್ಟವಾಗಿರಲಿಲ್ಲ. ಮೂರು-ನಾಲ್ಕು ವರ್ಷಗಳ ಕಾಲ ಈ ಯೋಜನೆ ಚೆನ್ನಾಗಿ ನಡೆಯಿತು.[೩]
ಕರ್ನಾಟಕದ ಬಿಜಾಪುರ ಮತ್ತಿತರ ಜಿಲ್ಲೆಗಳಲ್ಲಿ ಹೇರಳವಾಗಿರುವ ಬೇವಿನ ಮರಗಳಿಂದ ಉಪ ಉತ್ಪನ್ನಗಳ ಲಾಭವನ್ನು ಅಲ್ಲಿನ ಕೃಷಿಕರಿಗೆ ದೊರಕಿಸುವ ಸಲುವಾಗಿ ಕವಾಸ್ ( ಕರ್ನಾಟಕ ವಾಟರ್ ಷೆಡ್ ಡೆವೆಲಪ್‍ಮೆಂಟ್ ಸೊಸೈಟಿ ) ಯೋಜನೆಯಡಿ ಐದು ಕಡೆಗಳಲ್ಲಿ ಪ್ರಾತ್ಯಕ್ಷಿಕೆಗಾಗಿ ಎಣ್ಣೆ ತೆಗೆಯುವ ಯಂತ್ರಗಳನ್ನು ಸ್ಥಾಪಿಸಲು ಶ್ರೀನಿವಾಸರ ಮಾರ್ಗದರ್ಶನ ಪಡೆಯಲಾಯಿತು. ಇದರಿಂದ ಬೀಜಸಂಗ್ರಹಣೆ , ಹಿಂಡಿಯ ಉಪಯೋಗ, ತೈಲಮಾರಾಟ ಮೊದಲಾದ ಚಟುವಟಿಕೆಗಳಿಗೆ ಆಸ್ಪದವೊದಗಿತು. ಶ್ರೀನಿವಾಸರ ಪ್ರಯತ್ನಗಳಿಂದ ಉತ್ತೇಜಿತರಾದ ಅವರ ಹಲವಾರು ಬಿ.ಟೆಕ್ ಸಹಪಾಠಿಗಳು ಗ್ರಾಮೀಣ ಮಹಿಳೆಯರ ಸ್ವಯಂಸೇವಾ ಗುಂಪುಗಳಿಗೆ ನೆರವು ಕಲ್ಪಿಸುವ ಸಲುವಾಗಿ ಶ್ರೀನಿವಾಸರ ಮಾರ್ಗದರ್ಶನದಲ್ಲೇ ಕರ್ನಾಟಕ ಗಡಿಭಾಗದ ಹಳ್ಳಿ ಮತ್ತು ಆಂಧ್ರದ ಖಾದ್ರಿ ಗ್ರಾಮಗಳಲ್ಲಿ ಎಣ್ಣೆ ತೆಗೆಯುವ ಯಂತ್ರಗಳನ್ನು ಸ್ಥಾಪಿಸಲು ಮುಂದಾದರು. ಅಪಾರ ಆರ್ಥಿಕ ಒತ್ತಡಕ್ಕೆ ಎಡೆಗೊಟ್ಟಿರುವ ಪೆಟ್ರೋಲಿಯಂ ಉತ್ಪನ್ನಗಳ ಅತಿಯಾದ ಬಳಕೆಯ ಇಂದಿನ ದಿನಗಳಲ್ಲಿ ಬದಲಿ ಇಂಧನ ಮೂಲಗಳನ್ನು ಅನ್ವೇಷಿಸುವ ಪ್ರಯತ್ನದಲ್ಲಿ ಶ್ರೀನಿವಾಸರ ಸೂತ್ರ ಹಾಗೂ ಸಮಗ್ರ ವಿಕಾಸ ಸಂಘಟನೆಗಳು ಒಗ್ಗೂಡಿ ಅನೇಕ ವಿಚಾರ ಸಂಕಿರ್ಣಗಳನ್ನು ನಡೆಸಿದವು. ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೂ ಈ ಸಂಕಿರ್ಣಗಳನ್ನು ಬೆಂಬಲಿಸಿದವು. ಜೈವಿಕ ಇಂಧನ ಕೃಷಿಯ ಪ್ರಯೋಜನವನ್ನು ಪ್ರಚುರ ಪಡಿಸುವುದು ಹಾಗೂ ರಾಷ್ಟ್ರೀಯ ಇಂಧನ ನೀತಿಯ ಕರಡನ್ನು ತಯಾರಿಸುವುದು ಈ ಸಂಕೀರ್ಣಗಳ ಮುಖ್ಯ ವಿಷಯಗಳಾಗಿದ್ದವು. ಡಾ. ಶ್ರೀನಿವಾಸರು ಮಾರ್ಗದರ್ಶಕರಾಗಿ ಭಾಗವಹಿಸಿದ್ದ ಈ ನೀತಿಯ ಕರಡನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸ್ವೀಕರಿಸಿದವು. ಕರಡು ಪ್ರತಿಯ ನೀತಿ ನಿರೂಪಣೆಯ ಬಹಳಷ್ಟು ಅಂಶಗಳನ್ನು ಅಂತಿಮ ದಾಖಲೆಯಲ್ಲಿ ಉಳಿಸಿಕೊಳ್ಳಲಾಗಿರುವುದೊಂದು ವಿಶೇಷ. ನೀತಿಯನ್ನು ಅಂತಿಮವಾಗಿ ಸಿದ್ದಪಡಿಸುವ ಸಮಿತಿಯಲ್ಲೂ ಶ್ರೀನಿವಾಸರು ಭಾಗವಹಿಸಿದ್ದರು. ಜೈವಿಕ ಇಂಧನ ನೀತಿಯನ್ನು ನಿರೂಪಿಸಿ ಅನುಷ್ಠಾನಕ್ಕೆ ತರುವ ಸಲುವಾಗಿ ಕರ್ನಾಟಕ ಸರ್ಕಾರ ಜೈವಿಕ ಇಂಧನ ಕಾರ್ಯಪಡೆಯನ್ನು ರಚಿಸಿತು. ಶ್ರೀ ವೈ.ಬಿ. ರಾಮಕೃಷ್ಣರ ನೇತೃತ್ವದ ಈ ಪಡೆಯಲ್ಲಿ ಉಡುಪಿ ಶ್ರೀನಿವಾಸರೂ ಇದ್ದು ಮಾರ್ಗದರ್ಶನ ನೀಡಿದರು. ೨೦೧೦ ರಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರಚನೆಯಾದ ಮೇಲೆ ಅದರ ಸದಸ್ಯರಾಗಿಯೂ ಶ್ರೀನಿವಾಸರು ಕಾರ್ಯನಿರ್ವಹಿಸುತ್ತಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ https://www.sallapa.com/2021/04/blog-post_221.html?q=%E0%B2%A1%E0%B2%BE.%E0%B2%89%E0%B2%A1%E0%B3%81%E0%B2%AA%E0%B2%BF+%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8
- ↑ https://www.sallapa.com/2013/09/blog-post_9845.html
- ↑ https://www.prajavani.net/district/mandya/%E0%B2%A4%E0%B2%82%E0%B2%A4%E0%B3%8D%E0%B2%B0%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%A6%E0%B2%BF%E0%B2%82%E0%B2%A6-%E0%B2%97%E0%B3%8D%E0%B2%B0%E0%B2%BE%E0%B2%AE%E0%B2%97%E0%B2%B3-%E0%B2%85%E0%B2%AD%E0%B2%BF%E0%B2%B5%E0%B3%83%E0%B2%A6%E0%B3%8D%E0%B2%A7%E0%B2%BF-%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8%E0%B3%8D%E2%80%8C-1948024