ಉಚ್ಚಂಗಿ ಪಾಂಡ್ಯರು

ಉಚ್ಚಂಗಿ ಪಾಂಡ್ಯರು: 11, 12ನೆಯ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರ ಅಧೀನದಲ್ಲಿ ಸಣ್ಣಪುಟ್ಟ ನಾಡುಗಳನ್ನಾಳುತ್ತಿದ್ದ ಹನ್ನೆರಡು ಸಾಮಂತ ಮನೆತನಗಳಲ್ಲಿ ಒಂದರ ವಂಶಜರು. ಈ ಕಾಲದಲ್ಲಿ ಕನ್ನಡ ನಾಡಿನಲ್ಲಿ ಆಳುತ್ತಿದ್ದ ಇತರ ರಾಜಮನೆತನಗಳವರಂತೆ ಉಚ್ಚಂಗಿ ಪಾಂಡ್ಯರಿಗೂ ತಾವು ಯದುವಂಶದವರೆಂಬ ನಂಬಿಕೆಯಿತ್ತು. ಇಂದಿನ ಚಿತ್ರದುರ್ಗ ಜಿಲ್ಲೆಯನ್ನೂ ಅದರ ಸುತ್ತಣ ಪ್ರದೇಶಗಳನ್ನೂ ಒಳಗೊಂಡ ರಾಜ್ಯಕ್ಕೆ ನೊಳಂಬವಾಡಿ 32,000 ಎಂಬುದು ಆಗಿದ್ದ ಹೆಸರು. ನೊಳಂಬವಾಡಿಯ ಮಹಾ ಸಾಮಂತರೆಂದು ಈ ಕನ್ನಡ ಅರಸರ ರಾಜಧಾನಿ ಪ್ರಾರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ಬೆಳ್ತೂರು ಗ್ರಾಮ ; ಮುಂದೆ ಬಳ್ಳಾರಿಯ ಉಚ್ಚಂಗಿ. ಇಲ್ಲಿ ಅವರು ಬಲವಾದ ಕೋಟೆ ಕಟ್ಟಿಕೊಂಡರಲ್ಲದೆ ಅನೇಕ ದೇವಾಲಯಗಳನ್ನೂ ನಿರ್ಮಿಸಿದರು. ಆ ಕಾಲದ ಅನೇಕ ಶಾಸನಗಳಲ್ಲಿ ಉಚ್ಚಂಗಿಯ ಪಾಂಡ್ಯರ ವಂಶಾವಳಿಯ ಕಥನವಿದೆ. ಮರಿಗಯ್ಯ (ಮಂಗರಸ) ಈ ಸಂತತಿಯ ಸ್ಥಾಪಕ. ಇವನ ಮಗ ಚೇದಿ ರಾಜ. ಅನಂತರ ಅನುಕ್ರಮವಾಗಿ ಆಳಿದವರು ಪಲಮಂಡ, ಇರುಕ್ಕವೇಲ, ಇರುಕ್ಕವೇಲನ ಮಗ ರಾಜಪಾಂಡ್ಯ; ಮಗಳು ಮಹಾದೇವಿ. ಇವಳನ್ನು ಹೊಯ್ಸಳ ರಾಜಕುಮಾರ ಎರಯಂಗನಿಗೆ ಕೊಟ್ಟು ವಿವಾಹ ಬೆಳೆಸಿದ್ದರಿಂದ ಈ ಎರಡು ಮನೆತನಗಳ ಸ್ನೇಹವೇರ್ಪಟ್ಟಿತು. ಕಲ್ಯಾಣಿ ಚಾಳುಕ್ಯ ಸಾರ್ವಭೌಮ 6ನೆಯ ವಿಕ್ರಮಾದಿತ್ಯನ (1075-1127) ರಾಜ್ಯ ವಿಸ್ತರಣೆಯ ಕಾರ್ಯದಲ್ಲಿ ಇರುಕ್ಕವೇಲ ಅವನಿಗೆ ಬಹಳ ಸಹಕಾರ ನೀಡಿದ. ಈತನಿಗೆ ತ್ರಿಭುವನಮಲ್ಲನೆಂಬ ಬಿರುದಿತ್ತು. ವಿಕ್ರಮಾದಿತ್ಯನ ಬಲಭುಜವೆಂದು ಶಾಸನಗಳಲ್ಲಿ ಈತ ವರ್ಣಿತನಾಗಿದ್ದಾನೆ. ಇರುಕ್ಕವೇಲ ಪಾಂಡ್ಯ 1124ರವರೆಗೂ ಆಳಿದ. ಅನಂತರ ರಾಜಪಾಂಡ್ಯ ಉಚ್ಚಂಗಿಯ ಸಿಂಹಾಸನಕ್ಕೆ ಬಂದ. ರಾಜಪಾಂಡ್ಯ ದಕ್ಷ, ಸಾಹಸಿ. ಈತನ ರಾಣಿ ಸೋಮಲದೇವಿ. ಕಲೆ ಸಾಹಿತ್ಯಗಳಿಗೆ ಇವಳಿಂದ ಸಾಕಷ್ಟು ಪ್ರೋತ್ಸಾಹ ದೊರೆಯಿತು. ಇವರಿಗೆ ಪಂಡಿತಪಾಂಡ್ಯ, ವೀರಪಾಂಡ್ಯ, ವಿಜಯಪಾಂಡ್ಯ ಮತ್ತು ಪಲಂತ (ಒಡೆಯ) ಎಂದು ನಾಲ್ವರು ಗಂಡು ಮಕ್ಕಳು. ಪಂಡಿತಪಾಂಡ್ಯ ಹೆಸರಿಗೆ ತಕ್ಕಂತೆ ವಿಶೇಷ ಜ್ಞಾನಿ. 1140ರಲ್ಲಿ ರಾಜಪಾಂಡ್ಯ ಸತ್ತಾಗ ಸಿಂಹಾಸನವನ್ನೇರಲು ಪಂಡಿತಪಾಂಡ್ಯ ಒಪ್ಪಲಿಲ್ಲವಾದ್ದರಿಂದ ವೀರಪಾಂಡ್ಯ ರಾಜನಾದ. ಆ ವೇಳೆಗೆ ಕಲ್ಯಾಣಿಯ ಚಾಲುಕ್ಯರ ಸಾಮ್ರಾಜ್ಯ ವಿಪ್ಲವಕ್ಕೆ ಬಲಿಯಾಯಿತು. ಕಳಚೂರಿ ಬಿಜ್ಜಳ ಆ ಸಿಂಹಾಸನವನ್ನಾಕ್ರಮಿಸಿಕೊಂಡು ಚಾಲುಕ್ಯರ ಸಾಮಂತ ರಾಜರನ್ನೆಲ್ಲ ಸೋಲಿಸಿದ. ಆದರೆ ವೀರಪಾಂಡ್ಯ ಮಾತ್ರ ತಾನು ಬದುಕಿರುವವರೆಗೂ ಬಿಜ್ಜಳನ ಸಾರ್ವಭೌಮತ್ವವ ನ್ನೊಪ್ಪಲಿಲ್ಲ. ಈತನ ಮರಣಾನಂತರ ಇವನ ತಮ್ಮ ವಿಜಯಪಾಂಡ್ಯ(ಕಾಮದೇವ) ಉಚ್ಚಂಗಿಯ ರಾಜನಾದ (1160). 1162ರಲ್ಲಿ ವಿಜಯಪಾಂಡ್ಯನನ್ನು ಬಿಜ್ಜಳ ಸೋಲಿಸಿದ. ಆದರೂ ವಿಜಯಪಾಂಡ್ಯ ತನ್ನ ಪುರ್ವಿಕರಂತೆ ಚಾಳುಕ್ಯರಲ್ಲಿ ನಿಷ್ಠೆ ಹೊಂದಿದ್ದು ಆ ಮನೆತನವನ್ನು ಪುನಃ ಸ್ಥಾಪಿಸಲು ಪ್ರಯತ್ನಿಸಿದ. 1173ರಲ್ಲಿ 2ನೆಯ ವೀರಬಲ್ಲಾಳನ ಕಾಲದಲ್ಲಿ ಹೊಯ್ಸಳರು ಪ್ರಬಲರಾದರು. ಈತ 1177ರಲ್ಲಿ ಪಾಂಡ್ಯರ ಮೇಲೆ ದಂಡೆತ್ತಿ ಹೋಗಿ ವಿಜಯಪಾಂಡ್ಯನನ್ನು ಸೋಲಿಸಿ ಉಚ್ಚಂಗಿ ದುರ್ಗವನ್ನಾಕ್ರಮಿಸಿಕೊಂಡ. ಶರಣಾಗತ ನಾದ ವಿಜಯಪಾಂಡ್ಯನ ರಾಜ್ಯವನ್ನು ಹಿಂದಕ್ಕೆ ಕೊಟ್ಟು ಅವನಿಂದ ಕಪ್ಪಕಾಣಿಕೆ ಪಡೆದು ತನ್ನ ರಾಜಧಾನಿಯಾದ ದೋರಸಮುದ್ರಕ್ಕೆ ಹಿಂತಿರುಗಿದ. ಆದರೆ ವಿಜಯಪಾಂಡ್ಯ ಮತ್ತೆ ಕುದುರಿಕೊಂಡು ಹೊಯ್ಸಳರ ಅಧಿಕಾರದಿಂದ ಹೊರಬಂದು, ಆ ವೇಳೆಗೆ ಚಾಳುಕ್ಯರ ಅಧಿಕಾರವನ್ನು ಪುನಃ ಸ್ಥಾಪಿಸುವ ಯತ್ನದಲ್ಲಿ ಯಶಸ್ಸು ಹೊಂದುತ್ತಿದ್ದ. ನಾಲ್ಮಡಿ ವೀರಸೋಮೇಶ್ವರನ ಪಕ್ಷವನ್ನು ವಹಿಸಿದಾಗ ವೀರಬಲ್ಲಾಳ ದೊರೆ ಕೋಪಗೊಂಡು 1187ರಲ್ಲಿ ಪುನಃ ಉಚ್ಚಂಗಿಯನ್ನು ಮುತ್ತಿ ಕಾಮದೇವ ಪಾಂಡ್ಯನನ್ನು ಸೋಲಿಸಿ ಕೊಂದ. ಉಚ್ಚಂಗಿ ಪಾಂಡ್ಯರ ಮನೆತನ ಇತಿಹಾಸದಿಂದ ಕಣ್ಮರೆಯಾಗಿ, ನೊಳಂಬವಾಡಿ ಹೊಯ್ಸಳ ಸಾಮ್ರಾಜ್ಯದ ಭಾಗವಾಯಿತು. ಉಚ್ಚಂಗಿ ಪಾಂಡ್ಯರು ಎರಡು ನೂರು ವರ್ಷಕಾಲ ಜನಪ್ರಿಯರಾಗಿ ಆಡಳಿತ ನಡೆಸಿ ಕಲೆ ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡಿದ್ದರು. ಪಾಂಡ್ಯರ ಆಸ್ಥಾನದಲ್ಲಿದ್ದ ಮಧುಸೂದನದೇವ ಕವಿಯೂ ಜ್ಞಾನಿಯೂ ಆಗಿದ್ದ. ಜಗನ್ನಾಥವಿಜಯದ ಕರ್ತೃವಾದ ರುದ್ರಭಟ್ಟನೂ ಪಾಂಡ್ಯರ ಆಸ್ಥಾನದಲ್ಲಿದ್ದಂತೆ ತೋರುತ್ತದೆ. ವೀರಬಲ್ಲಾಳ ಉಚ್ಚಂಗಿಯನ್ನು ಮುತ್ತಿ ಕಾಮದೇವನನ್ನು ಸೋಲಿಸಿದ್ದನ್ನು ಈತ ತನ್ನ ಕಾವ್ಯದಲ್ಲಿ ಪ್ರಸ್ತಾಪಿಸಿದ್ದಾನೆ. ಪಾಂಡ್ಯರಾಜರು ತಮ್ಮ ನಾಡಿನಲ್ಲಿ ಅನೇಕ ದೇವಾಲಯಗಳನ್ನೂ ಕೆರೆಗಳನ್ನೂ ಕಟ್ಟಿಸಿದ್ದರು. ಆಗ ಪ್ರಬಲವಾಗಿದ್ದ ಪಾಶುಪತ ಶೈವಮತಕ್ಕೆ ಇವರಿಂದ ವಿಶೇಷ ಪ್ರೋತ್ಸಾಹ ದೊರಕಿತ್ತು. (ಜಿ.ಆರ್.ಆರ್.)