ಈಥೈಲ್ ಅಮೀನುಗಳು ಅಮೋನಿಯ ಅಣುವಿನಲ್ಲಿರುವ ಹೈಡ್ರೊಜನ್ ಪರಮಾಣುಗಳು ಈಥೈಲ್ ಗುಂಪುಗಳಿಂದ ಪಲ್ಲಟಿತವಾಗಿ ಹುಟ್ಟಿದ ಸಾವಯವ ಸಂಯುಕ್ತಗಳು.

ಗುಣಗಳು

ಬದಲಾಯಿಸಿ

ಬಣ್ಣವಿಲ್ಲದ ದ್ರವಗಳು; ವಾಸನೆ ಅಮೋನಿಯಾದಂತೆ; ದಹ್ಯ ಗುಣವಿದೆ – ಉರಿಯುವಾಗ ಜ್ವಾಲೆಯ ಬಣ್ಣ ಹಳದಿ.

ಈಥೈಲ್ ಅಮೀನುಗಳಿಗೆ ಪ್ರತ್ಯಾಮ್ಲೀಯ ಗುಣವೂ ಆಲಿಫ್ಯಾಟಿಕ್ ಅಮೀನುಗಳ ಸಕಲ ಗುಣಲಕ್ಷಣಗಳೂ ಇವೆ. ನೀರು, ಆಲ್ಕೊಹಾಲ್ ಮತ್ತು ಈಥರಿನೊಡನೆ ಸರಾಗವಾಗಿ ಬೆರೆಯುವವು. ಚಿನ್ನ, ಪ್ಲಾಟಿನಂ ಮೊದಲಾದ ಲೋಹಗಳ ಕ್ಲೋರೈಡುಗಳೊಡನೆ ಕೂಡಿ ಸ್ಫಟಿಕ ರೂಪದ ವಸ್ತುಗಳನ್ನು ಕೊಡುವುವು. ಇತರ ಭೌತ ಗುಣಗಳನ್ನು ಕೆಳಗಿನ ಕೋಷ್ಟಕದಲ್ಲಿ ಕಾಣಬಹುದು.

ಹೆಸರು ಅಣುಸೂತ್ರ ಸಾಂದ್ರತೆ ಕುದಿಯುವ ಬಿಂದು

ಸೆಂ. ಗ್ರೇ.

ಮಾನೊ ಈಥೈಲ್ ಅಮೀನ್[] CH3.CH2.NH2 0.6892,15° ಸೆಂ. ಗ್ರೇ. ಉಷ್ಣತೆಯಲ್ಲಿ ೧೮.೭
ಡೈ ಈಥೈಲ್ ಅಮೀನ್[] (CH3.CH2)2.NH 0.7108,18° ಸೆಂ. ಗ್ರೇ. ಉಷ್ಣತೆಯಲ್ಲಿ ೫೫.೫
ಟ್ರೈ ಈಥೈಲ್ ಅಮೀನ್ (CH3.CH2)3.N 0.7255,25° ಸೆಂ. ಗ್ರೇ. ಉಷ್ಣತೆಯಲ್ಲಿ ೮೯.೪

ತಯಾರಿಕೆ ಮತ್ತು ಉಪಯೋಗಗಳು

ಬದಲಾಯಿಸಿ

ಕಾಯಿಸಿದ ವೇಗವರ್ಧಕಗಳ ಮೇಲೆ ಎಥಿಲೀನನ್ನಾಗಲೀ ಅಥವಾ ಈಥೈಲ್ ಆಲ್ಕೊಹಾಲಿನ ಆವಿಯನ್ನಾಗಲೀ ಅಮೋನಿಯದೊಂದಿಗೆ ಒತ್ತಡದಲ್ಲಿ ಹಾಯಿಸಿದಾಗ ಈಥೈಲ್ ಅಮೀನುಗಳ ಮಿಶ್ರಣ ಉತ್ಪತ್ತಿಯಾಗುವುದು.[] ಪರಿವರ್ತಕ ವಸ್ತುಗಳ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡುವುದರ ಮೂಲಕ ನಮಗೆ ಬೇಕಾದ ಈಥೈಲ್ ಅಮೀನಿನ ಅಂಶ ಹೆಚ್ಚಾಗಿರುವಂತೆ ಮಾಡಿಕೊಳ್ಳಬಹುದು.

ಅಸಿಟೊ ನೈಟ್ರೀಲ್ (CH3.CN) ಅಥವಾ ಈಥೈಲ್ ಕ್ಲೋರೈಡನ್ನು (CH3.CH2.CI) ಅಮೋನಿಯ ಲೀನ ಮಾಡಿಕೊಂಡಿರುವ ಆಲ್ಕೊಹಾಲಿನೊಡನೆ ಒತ್ತಡದಲ್ಲಿ ಕಾಯಿಸಿದರೆ ಮಾನೊ ಈಥೈಲ್ ಅಮೀನ್ ದೊರೆಯುವುದು. ಇದು ಪ್ರಬಲ ಪ್ರತ್ಯಾಮ್ಲಗಳಂತೆ ಅಮೋನಿಯಾ ಲವಣಗಳಿಂದ ಅಮೋನಿಯಾ ಅನಿಲವನ್ನು ಹೊರಡಿಸಬಲ್ಲದು. ನೈಟ್ರೊಸೊ ಡೈ ಈಥೈಲ್ ಅನಿಲಿನ್ ಮತ್ತು ಸೋಡಿಯಂ ಹೈಡ್ರಾಕ್ಸೈಡ್ ಮಿಶ್ರಣವನ್ನು ಕುದಿಸಿ ಡೈಈಥೈಲ್ ಅಮೀನನ್ನು ಪಡೆಯಬಹುದು. ಸಂಯೋಜಿತ ಜಲವಿರುವ [(C2H5)2.NH]2H2O ಎಂಬ ಹರಳುರೂಪದ ವಸ್ತುವನ್ನು ಕೊಡುವುದು ಇದರ ವೈಶಿಷ್ಟ್ಯ. ಟ್ರೈ ಈಥೈಲ್ ಅಮೀನ್ ಎಣ್ಣೆಯಂಥ ದ್ರವ. ಮಾನೊ ಈಥೈಲ್ ಅಮೀನನ್ನು ಈಥೈಲ್ ಕ್ಲೋರೈಡಿನ ಆಲ್ಕೊಹಾಲ್ ದ್ರಾವಣದೊಡನೆ ಒತ್ತಡದಲ್ಲಿ ಕಾಯಿಸಿದಾಗ ಇದು ಉಂಟಾಗುವುದು. ಪೊಟ್ಯಾಸಿಯಂ ಪರ್ಮ್ಯಾಂಗನೇಟಿನಿಂದ ಸುಲಭವಾಗಿ ಉತ್ಕರ್ಷಿತವಾಗುತ್ತದೆ. ಇದಕ್ಕೆ ಕೀಟಗಳನ್ನು ಆಕರ್ಷಿಸುವ ಗುಣವಿರುವುದರಿಂದ ಕೀಟನಾಶಕವಾಗಿ ಉಪಯೋಗವಾಗುತ್ತಿದೆ. ಒತ್ತಡದಲ್ಲಿ ಕೂಡಿಟ್ಟಿರುವ ಅನಿಲಗಳಲ್ಲಿ ಅಪಾಯ ಮುನ್ಸೂಚಕವಾಗಿ (ವಾರ್ನಿಂಗ್ ಏಜೆಂಟ್) ಬಳಸುವುದುಂಟು.

ಉಲ್ಲೇಖಗಳು

ಬದಲಾಯಿಸಿ
  1. Merck Index, 12th Edition, 3808.
  2. Merck Index, 12th Edition, 3160
  3. Eller, Karsten; Henkes, Erhard; Rossbacher, Roland; Höke, Hartmut (2000). Amines, Aliphatic. doi:10.1002/14356007.a02_001. ISBN 3527306730.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: