ಈಡಿಪಸ್ ಕಾಂಪ್ಲೆಕ್ಸ್
ಈಡಿಪಸ್ ಕಾಂಪ್ಲೆಕ್ಸ್ಮ ಇದು ಮನೋವಿಶ್ಲೇಷಣಶಾಸ್ತ್ರದ ಸಂಸ್ಥಾಪಕ ವಿಯೆನ್ನದ ಮನೋವೈದ್ಯ ಸಿಗ್ಮಂಡ್ ಫ್ರಾಯ್ಡನ ಕಲ್ಪನೆಗಳಲ್ಲಿ ಒಂದು.
ಹಿನ್ನೆಲೆ
ಬದಲಾಯಿಸಿತಂದೆಯನ್ನು ಕೊಂದು, ತಾಯಿಯನ್ನು ಮದುವೆಯಾಗಿ, ಆಕೆಯಲ್ಲಿ ಮಕ್ಕಳನ್ನು ಪಡೆದ ಈಡಿಪಸ್ ದೊರೆಯ ಕಥೆ ಇಡೀ ಮನುಷ್ಯವರ್ಗದ ಮೂಲಭೂತವಾದ ಪಾಪವನ್ನು ಮತ್ತು ಮನುಷ್ಯನ ಬೆಳವಣಿಗೆಯಲ್ಲಿನ ಒಂದು ಸಾರ್ವತ್ರಿಕವಾದ ಅವಸ್ಥೆಯನ್ನು ಸೂಚಿಸುತ್ತದೆಯೆಂದು ಫ್ರಾಯ್ಡನ ವಾದ. ಈಡಿಪಸ್ ದೊರೆ ತನಗೆ ತಿಳಿಯದೇ ಈ ಪಾಪವನ್ನು ಮಾಡಿದ, ಆಮೇಲೆ ನಿಜಾಂಶ ಗೊತ್ತಾದಾಗ ಅಪಾರವಾದ ದುಃಖ, ಪಶ್ಚಾತ್ತಾಪಗಳಲ್ಲಿ ತನ್ನ ಕಣ್ಣುಗಳನ್ನೇ ಕಿತ್ತುಕೊಂಡ-ಎಂಬುದು ಮುಖ್ಯವಲ್ಲ. ತಾಯಿಯೊಡನೆ ಆತ ಲೈಂಗಿಕ ಸಂಬಂಧ ಬೆಳೆಸಿದ ಎಂಬುದು ಸಾಂಕೇತಿಕವಾಗಿ ಮನುಷ್ಯನ ಸುಪ್ತಬಯಕೆಯನ್ನು ಅಭಿವ್ಯಕ್ತಗೊಳಿಸುತ್ತದೆ-ಎಂಬುದು ಫ್ರಾಯ್ಡನ ಅಭಿಮತ.
ಲಿಬಿಡೋ
ಬದಲಾಯಿಸಿಈಡಿಪಸ್ ಕಾಂಪ್ಲೆಕ್ಸ್ ಎಂಬುದು ಎಲ್ಲ ಮಾನವರಿಗೂ ಸರ್ವ ಸಾಮಾನ್ಯವಾದ ಬಾಲ್ಯಾವಸ್ಥೆಯ ಮಾನಸಿಕ ಬೆಳವಣಿಗೆಯ ಹಂತಗಳ ಪೈಕಿ ಒಂದು. ಫ್ರಾಯ್ಡನ ಪ್ರಕಾರ, ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಮಾನಸಿಕ ಬೆಳವಣಿಗೆ ಎಂದರೆ ವಾಸ್ತವವಾಗಿ, ಲಿಬಿಡೊ ಅಥವಾ ಆದಿಕಾಮದ ಬೆಳವಣಿಗೆ-ಆಗುತ್ತಲೇ ಇರುತ್ತದೆ. ಕಾಮವೆಂಬುದು ಬೆಳೆದ ಗಂಡು ಹೆಣ್ಣುಗಳ ನಡುವಿನ ಲೈಂಗಿಕ ವ್ಯಾಪಾರ ಮಾತ್ರವಲ್ಲ. ಜೀವನದ ಹುಟ್ಟು, ಬೆಳವಣಿಗೆ, ಪೋಷಣೆ, ಅಭಿವೃದ್ಧಿ, ಸುಖ, ಸಂತೋಷ, ಔನ್ನತ್ಯ ಇವೆಲ್ಲಕ್ಕೂ ಅನುವಾಗುವ ಎಲ್ಲ ಬಗೆಯ ಮಾನಸಿಕ, ದೈಹಿಕ ಚಟುವಟಿಕೆಗಳನ್ನೂ ಫ್ರಾಯ್ಡ್ ಲಿಬಿಡೊ ಎಂಬ ಕಲ್ಪನೆಗೆ ಒಗ್ಗಿಸುತ್ತಾನೆ. ಅಲ್ಲದೆ, ಕಾಮವೆಂಬುದು ತಾರುಣ್ಯದ ಹೊತ್ತಿಗೆ ಮಾತ್ರ ತಲೆದೋರುವಂಥದಲ್ಲ; ಅದು ಹುಟ್ಟಿದಂದಿನಿಂದಲೇ ಜಾಗೃತವಾಗಿ ಬೇರೆ ಬೇರೆ ಹಂತಗಳನ್ನು ದಾಟಿ ಬೆಳೆದು ಕೊನೆಗಾಣುವ ಪ್ರವೃತ್ತಿ. ಆದ್ದರಿಂದ, ಸಾಮಾನ್ಯವಾಗಿ ಭಾವಿಸಲಾಗುವಂತೆ ಮಕ್ಕಳು ಲೈಂಗಿಕದೃಷ್ಟಿಯಿಂದ ಮುಗ್ಧರಲ್ಲ; ಅವರಲ್ಲೂ ಲೈಂಗಿಕ ಚಟುವಟಿಕೆಗಳು (ಜನನೇಂದ್ರಿಯಗಳೊಡನೆ ಅವರು ಆಡಿಕೊಳ್ಳುವ ಆಟ ಇತ್ಯಾದಿ) ಇದ್ದೇ ಇರುತ್ತವೆ. ಲಿಬಿಡೊ ಈ ರೀತಿ ಹುಟ್ಟಿದಂದಿನಿಂದ ಬೆಳೆದು ಬದಲಾಗುವ ಅನೇಕ ಹಂತಗಳ ಪೈಕಿ ಈಡಿಪಸ್ ಕಾಂಪ್ಲೆಕ್ಸ್ ಒಂದು. ಕೆಲವರಲ್ಲಿ ಇದು ಮುಂದೆ ಮಾನಸಿಕ ಅಸ್ವಾಸ್ಥ್ಯಕ್ಕೆ ಎಡೆಗೊಡಬಹುದಾದರೂ ಸಾಮಾನ್ಯವಾಗಿ ಇದು ಅನಾರೋಗ್ಯವಾದ ಸೂಚನೆಯಲ್ಲ, ತೀರ ಸ್ವಾಭಾವಿಕವಾದದ್ದು, ಪ್ರಾಣಿಗಳಲ್ಲಿ ಇದು ಸಹಜ. ಗಂಡುಕರು ತಾಯ ಮೇಲೆ ಹಾರಿಹೋಗುವುದು ಸಾಮಾನ್ಯ.ಉಲ್ಲೇಖ ದೋಷ: Closing </ref>
missing for <ref>
tag</ref>
ಶರೀರ
ಬದಲಾಯಿಸಿಲಿಬಿಡೊದ ಬೆಳವಣಿಗೆ ಮೊದಲಾಗುವುದು ಮಗುವಿನ ತುಟಿ ಮತ್ತು ನಾಲಗೆಯ ಭಾಗಗಳಲ್ಲಿ, ಏಕೆಂದರೆ ಮಗು ಮೊಟ್ಟಮೊದಲು ತನ್ನಿಂದ ಹೊರತಾದ ವಸ್ತುವೊಂದರೊಡನೆ ಬೆಳೆಸುವ ಸಂಪರ್ಕವೆಂದರೆ ತಾಯಿಯ ಮೊಲೆಯೊಡನೆ. ಲಿಬಿಡೊ ಬೆಳವಣಿಗೆಯ ಎರಡನೆಯ ಹಂತವೆಂದರೆ ಗುದಸ್ಥಿತಿ. ಅಂದರೆ ಕಾಮಪ್ರವೃತ್ತಿ ಈ ಅವಸ್ಥೆಯಲ್ಲಿ ದೇಹದ ಆ ಭಾಗದಲ್ಲಿ ಆವರಿಸಿಕೊಂಡಿರುತ್ತದೆ. ಮೂತ್ರಾಂಗದಿಂದ ಮೊದಲಾಗಿ ಜನನಾಂಗದಲ್ಲಿ ಲಿಬಿಡೊ ಕೇಂದ್ರೀಕೃತವಾಗುವುದೇ ಮೂರನೆಯ ಈಡಿಪಸ್ ಅವಸ್ಥೆ. ಗಂಡುಮಕ್ಕಳಲ್ಲಿ ಈಡಿಪಸ್ ಅವಸ್ಥೆ ಸುಮಾರು ನಾಲ್ಕನೆಯ ವರ್ಷದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಅವಸ್ಥೆಯಲ್ಲಿ ಗಂಡುಮಗು ತನ್ನ ತಂದೆಯನ್ನು ಆಚೆ ತಳ್ಳಿ, ಆತನ ಸ್ಥಾನವನ್ನು ಆಕ್ರಮಿಸಿ, ತಾಯಿಯೊಡನೆ ಲೈಂಗಿಕ ಸಂಬಂಧ ಬೆಳೆಸಬೇಕೆಂಬ ತೀವ್ರವಾದ ಬಯಕೆ ತೋರುವುದೇ ಈಡಿಪಸ್ ಕಾಂಪ್ಲೆಕ್ಸ್. ಮಗುವಿನ ದೃಷ್ಟಿಯಲ್ಲಿ ಅದರ ಬಯಕೆಯ ಪೂರೈಕೆಗೆ ಅಡ್ಡ ನಿಂತಿರುವವ ತಂದೆ; ಆದ್ದರಿಂದ, ಮತ್ತು ತಾಯಿಯೊಡನೆ ಆತ ವಹಿಸುವ ಸ್ವಾತಂತ್ರ್ಯದಿಂದ ಮಗುವಿಗೆ ತಂದೆಯ ಮೇಲೆ ವಿಪರೀತವಾದ ದ್ವೇಷಭಾವವಿರುತ್ತದೆ. ಹೀಗಾಗಿ, ತಂದೆಯನ್ನು ನಾಶಮಾಡಿಬಿಡಬೇಕೆಂಬ ಆಸೆ ಹುಟ್ಟಿದರೂ ಅಚ್ಚರಿಯಲ್ಲ. ಇದೇ ಅವಸ್ಥೆಯಲ್ಲಿ ಮಕ್ಕಳು ತಮ್ಮ ಜನನಾಂಗಗಳೊಡನೆ ಆಡುವುದರ ಮೂಲಕ ಸಾಕಷ್ಟು ಸುಖವನ್ನು ಅನುಭವಿಸುತ್ತಾರೆ; ಅನೇಕ ವೇಳೆ ಅವರು ಬಾಲ್ಯ ಮುಷ್ಟಿ ಮೈಥುನದಲ್ಲೂ ತೊಡಗುತ್ತಾರೆ.
ತಾರುಣ್ಯ ಪೂರ್ವ ಭೀತಿ
ಬದಲಾಯಿಸಿಆದರೆ, ಅದೇ ವೇಳೆ, ತಾಯಿಯೊಡನೆ ಸಂಪರ್ಕ ಬೆಳೆಸಬೇಕೆಂಬ ತನ್ನ ಬಯಕೆ ಕೆಟ್ಟದೆಂಬುದೂ ತಂದೆಗೆ ಇದು ಗೊತ್ತಾದರೆ ಆತ ತನ್ನ ಜನನಾಂಗವನ್ನು ಕತ್ತರಿಸಿ ಹಾಕಬಹುದು, ಇಲ್ಲವೆ ಹೇಗಾದರೂ ತನ್ನ ಪುಂಸತ್ವವನ್ನು ನಾಶಮಾಡಬಹುದು ಎಂಬ ಅತಿಯಾದ ಭೀತಿಗೂ ಹುಡುಗ ಒಳಗಾಗಿರುತ್ತಾನೆ. ಕೊನೆಗೆ ಈ ಭೀತಿಯೇ ಅವನನ್ನು ಅನೈತಿಕ ಬಯಕೆಯಿಂದ ಮುಕ್ತನನ್ನಾಗಿ ಮಾಡುತ್ತದೆ. ವಾಸ್ತವವಾಗಿ, ಈ ಭೀತಿ ಅವನ ಈಡಿಪಸ್ ಕಾಂಪ್ಲೆಕ್ಸನ್ನು ಅಚೇತನಕ್ಕೆ ತಳ್ಳುತ್ತದೆ. ಪರಿಣಾಮವಾಗಿ ಅದು ಪ್ರಜ್ಞೆಯಿಂದ ಪೂರ್ತಿಯಾಗಿ ಮರೆಯಾಗುತ್ತದೆ. ಹಾಗಾದ ಮೇಲೆ ಮಗುವಿನಲ್ಲಿ ತಂದೆಯ ಸ್ಥಾನವನ್ನು ಆಕ್ರಮಿಸಬೇಕೆಂಬ ಬಯಕೆಯ ಬದಲು ತಂದೆಯಂತೆಯೇ ತಾನು ಬೆಳೆದು ದೊಡ್ಡವನಾಗಬೇಕೆಂಬ ಬಯಕೆ ಹುಟ್ಟಿಕೊಳ್ಳುತ್ತದೆ. ಆಗ ಲಿಬಿಡೊ ಈಡಿಪಸ್ ಅವಸ್ಥೆಯನ್ನು ಬಿಟ್ಟು ಮುಂದಿನ ಅವಸ್ಥೆಗೆ ಹೋಗುತ್ತದೆ. ಲಿಬಿಡೊದ ಬೆಳವಣಿಗೆ ಸುಗಮವಾಗುತ್ತದೆ. ಬೆಳವಣಿಗೆಯ ಮುಂದಿನ ಅವಸ್ಥೆಯೆಂದರೆ ಸುಪ್ತಕಾಮಸ್ಥಿತಿ. ಆರು ವರ್ಷದಿಂದ ತಾರುಣ್ಯದವರೆಗೆ ಇದರ ಅವಧಿ. ಆಮೇಲಿನದು ಪ್ರಬುದ್ಧ ಲೈಂಗಿಕಜೀವನಸ್ಥಿತಿ.[೧]
ಈಡಿಪಸ್ ಕಾಂಪ್ಲೆಕ್ಸ್ ಗಂಡುಮಕ್ಕಳಲ್ಲಿ ಕಾಣಿಸಿಕೊಳ್ಳುವ ಪ್ರತಿಕ್ರಿಯೆಯಾದರೂ ಇದೇ ರೀತಿಯ ಪ್ರತಿಕ್ರಿಯೆ ಹೆಣ್ಣುಮಕ್ಕಳ ಬೆಳವಣಿಗೆಯಲ್ಲೂ ಉಂಟಾಗುತ್ತದೆ. ಎಲೆಕ್ಟ್ರಕಾಂಪ್ಲೆಕ್ಸ್ ಎಂದು ಕರೆಸಿಕೊಳ್ಳುವ ಈ ಪ್ರತಿಕ್ರಿಯೆಯ ಮುಖ್ಯ ಅಂಶವೆಂದರೆ, ತಾಯಿಯನ್ನು ಆಚೆ ತಳ್ಳಿ, ಆಕೆಯ ಸ್ಥಾನವನ್ನು ಆಕ್ರಮಿಸಿ, ತಂದೆಯೊಡನೆ ಲೈಂಗಿಕ ಸಂಬಂಧ ಬೆಳೆಸಬೇಕೆಂಬ ಬಯಕೆ.
ಹಿಮ್ಮರಳಿದ ಲಿಬಿಡೊ
ಬದಲಾಯಿಸಿಫ್ರಾಯ್ಡನ ಪ್ರಕಾರ ಈಡಿಪಸ್ ಕಾಂಪ್ಲೆಕ್ಸ್ ಸರಿಯಾಗಿ ಬಗೆಹರಿಯದಿರುವುದೇ ಆ ಮೇಲಿನ ಮನೋರೋಗಗಳಿಗೆ ಮೂಲ ಕಾರಣ. ಈಡಿಪಸ್ ಅವಸ್ಥೆಯಲ್ಲಿ ಮಗು ಅನುಭವಿಸುವ ಅತಿಯಾದ ಆನಂದ ಅಥವಾ ಅತಿಸ್ವಲ್ಪ ಆನಂದ ಮತ್ತು ಇನ್ನಿತರ ಕಾರಣಗಳಿಂದಾಗಿ ಲಿಬಿಡೊ ಪೂರ್ತಿಯಾಗಿ ಬೆಳವಣಿಗೆಯ ಮುಂದಿನ ಅವಸ್ಥೆಗೆ ದಾಟದೆ, ಅದರ ಕೊಂಚಭಾಗ ಅಲ್ಲೇ ಉಳಿದುಕೊಳ್ಳುತ್ತದೆ. ಮುಂದೆ ಜೀವನದಲ್ಲಿ ವ್ಯಕ್ತಿ ತಾಪದಾಯಕವಾದ ಅನುಭವಗಳನ್ನು, ಆಶಾಭಂಗವನ್ನು ಎದುರಿಸಿದಾಗ ಇವುಗಳ ಆಘಾತದಿಂದಾಗಿ ಒಟ್ಟು ಲಿಬಿಡೊ ಹಿಮ್ಮರಳಬಹುದು. ಚಿಕ್ಕಂದಿನಲ್ಲಿ ಈಡಿಪಸ್ ಭಾವ ಸರಿಯಾಗಿ ನಿವಾರಣೆಯಾಗದೆ ಲಿಬಿಡೊದ ಒಂದು ಅಂಶ ಅದಕ್ಕೇ ಅಂಟಿಕೊಂಡಿದ್ದರೆ ಆಗ ಲಿಬಿಡೊ ಆ ಅವಸ್ಥೆಗೆ ಮರಳುತ್ತದೆ. ಹಾಗಾದಾಗ, ಆ ವಯಸ್ಸಿಗೆ ತಕ್ಕ ವರ್ತನೆ, ಅಂದರೆ ನಾಲ್ಕೈದು ವರ್ಷಕ್ಕೆ ತಕ್ಕ ವರ್ತನೆ ಕಾಣಿಸಿಕೊಳ್ಳುತ್ತದೆ. ಈ ರೀತಿ ಹಿಮ್ಮರಳಿದ ಲಿಬಿಡೊ ಬೇರೆ ರೂಪದಲ್ಲಿ ವ್ಯಕ್ತವಾಗುವುದೇ ಮನೋರೋಗದ ಚಿಹ್ನೆಗಳು.[೨]
ವಿರೋಧ
ಬದಲಾಯಿಸಿಸಾಹಿತ್ಯ, ಕಲೆ, ವೈದ್ಯಕೀಯ ಮತ್ತು ಸಾಮಾಜಿಕ ವಿಜ್ಞಾನವ ವಿಭಾಗಗಳ ಮೇಲೆ ತಕ್ಕಮಟ್ಟಿಗೆ ಪ್ರಭಾವ ಬೀರಿದ ಫ್ರಾಯ್ಡನ ಕಲ್ಪನೆಗಳ ಪೈಕಿ ಈಡಿಪಸ್ ಕಾಂಪ್ಲೆಕ್ಸ್ ಮುಖ್ಯವಾದದ್ದು. ಆದರೆ ಫ್ರಾಯ್ಡನ ಸಿದ್ಧಾಂತಗಳಿಗೆ ವೈಜ್ಞಾನಿಕ ಆಧಾರವಿಲ್ಲವೆಂಬ ಆಕ್ಷೇಪಣೆ ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗುತ್ತಿದೆ. ಈ ಕಾರಣಕ್ಕಾಗಿ ಇಂದಿನ ಪ್ರಾಯೋಗಿಕ ಮನೋವಿಜ್ಞಾನಿಗಳು ಈಡಿಪಸ್ ಕಾಂಪ್ಲೆಕ್ಸ್ ಕಲ್ಪನೆಯನ್ನು ಅಷ್ಟಾಗಿ ಪುರಸ್ಕರಿಸುವುದಿಲ್ಲ.[೩]
ಉಲ್ಲೇಖಗಳು
ಬದಲಾಯಿಸಿ