ಇಮ್ಮಡಿ ಬಿಜ್ಜಳ
ಇಮ್ಮಡಿ ಬಿಜ್ಜಳ ತರಿಕಾಡ ಬಿಜ್ಜಳ ಕಲಚುರಿ ಸಾಮ್ರಾಜ್ಯದ ರಾಜ ಮತ್ತು ಚಾಳುಕ್ಯ ಸಾಮಂತನಾಗಿದ್ದ ಮಹಾ ಮಂಡಲೇಶ್ವರ ಪೆರ್ಮಾಡಿ ಇವನ ತಂದೆ. ಮೊದಲು ಚಾಳುಕ್ಯ 6ನೆಯ ವಿಕ್ರಮಾದಿತ್ಯ, ಅನಂತರ ಭೂಲೋಕಮಲ್ಲ ಇಮ್ಮಡಿ ಜಗದೇಕಮಲ್ಲ ಮತ್ತು ಮುಮ್ಮಡಿ ತೈಲರ ಸಾಮಂತನಾಗಿದ್ದ ಈತ ಕೊನೆಗೆ ಸ್ವತಂತ್ರನಾದ. ಪ್ರಾಯಶಃ 1127ರ ಹೊತ್ತಿಗೆ ತನ್ನ ತಂದೆಯ ಜೀವಿತ ಕಾಲದಲ್ಲೇ ಇವನು ವಿಕ್ರಮಾದಿತ್ಯನ ಅಧೀನದಲ್ಲಿ ಅಧಿಕಾರಿಯಾಗಿದ್ದಂತೆ ತೋರುತ್ತದೆ. 1136ರ ಹೊತ್ತಿಗೆ ಮಹಾಮಂಡಲೇಶ್ವರ ಪದವಿ ಗಳಿಸಿದ್ದ. 1142ರಲ್ಲಿ ಕರಹಾಡ 4000 ಪ್ರಾಂತ್ಯದ ಅಧಿಪತಿಯಾಗಿದ್ದ. ಭೂಲೋಕಮಲ್ಲನ ಸೋದರಳಿಯನಾದ ಈತ ಚಾಳುಕ್ಯ ರಾಜಕುಮಾರರಂತೆ ಮಹಾಮಂಡಲೇಶ್ವರ ಕುಮಾರ ಬಿಜ್ಜಳ ದೇವರಸ ಎಂದು 1147ರ ಒಂದು ಶಾಸನದಲ್ಲಿ ಕರೆದುಕೊಂಡಿದ್ದಾನೆ.ಆಗ ತರ್ದವಾಡಿ 1000 ಪ್ರ್ರಾಂತ್ಯವೂ ಇವನ ಅಧೀನದಲ್ಲಿತ್ತು.[೧]
ಇಮ್ಮಡಿ ಬಿಜ್ಜಳ | |
---|---|
Samrat
| |
southern Kalachuris of Kalyani | |
ಆಳ್ವಿಕೆ | c. 1130 – c. 1167 CE |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
1149ರ ಹೊತ್ತಿಗೆ ಚಾಳುಕ್ಯ ಸಾಮ್ರಾಟ ಜಗದೇಕಮಲ್ಲ ಮೃತನಾಗಿ ಮುಮ್ಮಡಿ ತೈಲ ಪಟ್ಟಕ್ಕೆ ಬಂದಿದ್ದ. ಈ ವೇಳೆಗಾಗಲೇ ಬಲಿಷ್ಠನಾಗಿದ್ದ ಬಿಜ್ಜಳ ಸ್ವತಂತ್ರನಾಗುವ ಪ್ರಯತ್ನ ನಡೆಸಿದ. ಮೊದಲು ಚಕ್ರವರ್ತಿಗೂ ಇವನಿಗೂ ನೇರ ಘರ್ಷಣೆಯೇನೂ ನಡೆಯಲಿಲ್ಲ. ಆದರೆ ಬಿಜ್ಜಳ ಸಾಮಂತತ್ವದ ಸೂಚಕವಾದ ಮಹಾಮಂಡಲೇಶ್ವರ ಪದವನ್ನು ತನ್ನ ಪ್ರಶಸ್ತಿಯಿಂದ ಕೈಬಿಟ್ಟ. ಕ್ರಮೇಣ ಸಾಮ್ರಾಟತ್ವವನ್ನು ಮೆರೆಯುವ ಭುಜಬಲಮಲ್ಲ, ತ್ರಿಭುವನಮಲ್ಲ, ಭುವನೈಕವೀರ, ಭುಜಬಲ ಚಕ್ರವರ್ತಿ ಎಂಬ ಬಿರುದುಗಳನ್ನು ಧರಿಸಿದ. ಅನಂತರ ತನ್ನ ರಾಜಕೀಯ ದಾಖಲೆಗಳಲ್ಲಿ ತನ್ನ ಆಳ್ವಿಕೆಯ ಸಂವತ್ಸರಗಳನ್ನೇ ಕಾಲಸೂಚಕವಾಗಿ ಬಳಸಲಾರಂಭಿಸಿದ. 1153ರ ಹೊತ್ತಿಗೆ ಮುಮ್ಮಡಿ ತೈಲ ಚಾಳುಕ್ಯ ಸಾಮ್ರಾಟನಾಗಿದ್ದರೂ ಬಿಜ್ಜಳ ಸ್ವತಂತ್ರನಾಗಿದ್ದ. ಕೆಲದಿನಗಳಲ್ಲಿ ಅನೇಕ ಚಾಳುಕ್ಯ ಸಾಮಂತರನ್ನು ತನ್ನ ಕಡೆ ಸೇರಿಸಿಕೊಂಡು ತನ್ನ ಪ್ರಭಾವ ವಿಸ್ತರಿಸಿದ. ಎದುರುಬಿದ್ದ ಇತರ ಸಾಮಂತರನ್ನು ಸೋಲಿಸಿಯೇ ತನ್ನ ಆಳ್ವಿಕೆಯನ್ನು ಭದ್ರಪಡಿಸಿಕೊಂಡ. 1162ರ ಹೊತ್ತಿಗೆ ಚಾಳುಕ್ಯ ಸಾಮ್ರಾಜ್ಯದ ಬಹುಭಾಗ ಇವರ ಅಧೀನಕ್ಕೆ ಬಂತು.
ಹಲವು ತಂತ್ರಗಳಿಂದ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರೂ ಇವನ ಆಳ್ವಿಕೆ ಸುಗಮವಾಗಿರಲ್ಲಿಲ್ಲ. ಅದು ಕೇವಲ ಆರು ವರ್ಷಗಳಷ್ಟು ಶೈಶವವಾಗಿತ್ತು. ಸಾಮ್ರಾಟತ್ವದ ಕಾಲದಲ್ಲಿ ಅಧಿಕಾರ ಕಳೆದುಕೊಂಡು ಹಲವು ಚಾಳುಕ್ಯ ವಂಶೀಯರು ಮತ್ತು ಸಾಮಂತರು ತಮ್ಮ ಬಲವರ್ಧನೆಯಲ್ಲಿ ತೊಡಗಿದರು. ಇದೇ ಕಾಲದಲ್ಲಿ ವೀರಶೈವ ಧರ್ಮವನ್ನು ಪ್ರತಿಪಾದಿಸಿದ ಬಸವಣ್ಣನವರ ಪ್ರಭಾವವೂ ಬೆಳೆಯಿತು. ಹಲವು ಕಾರಣಗಳಿಂದ ಬಿಜ್ಜಳನಿಗೂ ಬಸವಣ್ಣನವರ ಅಸಂಖ್ಯ ಅನುಯಾಯಿಗಳಿಗೂ ವಿರಸ ಉಂಟಾಗಿ ಬಿಜ್ಜಳ ಇಕ್ಕಟ್ಟಿನ ಸ್ಥಿತಿಗೆ ಸಿಕ್ಕಿದ್ದ. ಮುಂದೆ ಸುಮಾರು 1167ರ ಹೊತ್ತಿಗೆ ರಾಜ್ಯಾಧಿಕಾರವನ್ನು ತನ್ನ ಮಗ ರಾಯಮುರಾರಿ ಸೋವಿದೇವನಿಗೆ ವಹಿಸಿದ. ಈತ ಸುಮಾರು 1168ರಲ್ಲಿ ಮೃತನಾದನೆಂದು ತೋರುತ್ತದೆ. ಬಿಜ್ಜಳನಿಗೆ ಏಚಲದೇವಿ ಎಂಬ ಹೆಂಡತಿಯೂ ಎಂಟು ಜನ ಮಕ್ಕಳೂ ಇದ್ದರು.
ಕೊನೆ
ಬದಲಾಯಿಸಿಬಿಜ್ಜಳನ ಬಗ್ಗೆ ಅನಂತರಕಾಲದ ವೀರಶೈವ ಮತ್ತು ಜೈನಸಾಹಿತ್ಯ ಕೃತಿಗಳಲ್ಲಿ ದೊರಕುವ ಹಲವು ಮಾಹಿತಿಗಳು ಚರಿತ್ರಕಾರರಲ್ಲಿ ಚರ್ಚಾಸ್ಪದ ವಿಷಯಗಳಾಗಿವೆ. ಇವನು ಜೈನ. ಹೊಸದಾಗಿ ಬೆಳೆಯುತ್ತಿದ್ದ ವೀರಶೈವ ಅನುಯಾಯಿಗಳು ಇವನ ಕೊಲೆಗೈದರು ಎಂದು ಒಂದು ಹೇಳಿಕೆಯಾದರೆ, ವೀರಶೈವ ಅನುಯಾಯಿಗಳಲ್ಲಿ ಹಲವರನ್ನು ಕೊಂದು ಆಮತವನ್ನು ತುಳಿಯಲು ಪ್ರಯತ್ನಿಸಿದ ಎಂಬುದು ಇನ್ನೊಂದು ಹೇಳಿಕೆ. ಈ ಎರಡು ಹೇಳಿಕೆಗಳೂ ಬಿಜ್ಜಳ ವೀರಶೈವ ಧರ್ಮದ ವಿರೋಧಿಯಾಗಿದ್ದ ಎಂಬುದಷ್ಟನ್ನು ಮಾತ್ರ ಸ್ಥಿರಪಡಿಸುತ್ತವೆ.
ಉಲ್ಲೇಖಗಳು
ಬದಲಾಯಿಸಿ- ↑ Sen, Sailendra (2013). A Textbook of Medieval Indian History. Primus Books. pp. 52–53. ISBN 978-9-38060-734-4.
Dr. Suryanath U. Kamat (2001). Concise History of Karnataka, MCC, Bangalore (Reprinted 2002)