ಫಲವತ್ತಾದ ಯೂಫ್ರೆಟೀಸ್-ಟೈಗ್ರಿಸ್ ಕಣಿವೆಯಲ್ಲಿ ಕ್ರಿ.ಪೂ. 4000ದಲ್ಲಿಯೇ ಪ್ರಾಚೀನ ಉರುಕ್ ಮತ್ತು ಅರ್ ಪಟ್ಟಣಗಳಲ್ಲಿ ಇಟ್ಟಿಗೆಯಿಂದ ಕಟ್ಟಿದ ಲಕ್ಷಣವಾದ ಮನೆಗಳಿದ್ದುವು. ಇದೇ ಕಣಿವೆಯಲ್ಲಿ ಕ್ರಿ.ಪೂ. 3200ರಲ್ಲಿ ಕಟ್ಟಿದ ಇಟ್ಟಿಗೆಯ ಕಟ್ಟಡ ಪ್ರಾಕ್ತನ ಸಂಶೋಧಕರ ಸಾಹಸದಿಂದ ಈಚೆಗೆ ಕಣ್ಣಿಗೆ ಬಿದ್ದಿದೆ. ಸಾಧಾರಣವಾಗಿ ಅವರು ಎಸೆಗಳಲ್ಲಿ ಮಣ್ಣನ್ನೇ ಉಪಯೋಗಿಸಿದರೂ ಅರಮನೆಗಳಲ್ಲಿ ಗಾರೆಯನ್ನು ಬಳಸುತ್ತಿದ್ದರು. ಆ ಪ್ರದೇಶದಲ್ಲಿ ಕಲ್ಲೇ ಸಿಕ್ಕುತ್ತಿರಲಿಲ್ಲ. ಇಟ್ಟಿಗೆಯ ಗೋಡೆಗಳು 3.03 ಮೀಗಳವರೆಗೂ ದಪ್ಪವಾಗಿರುತ್ತಿದ್ದುವು. ಕ್ರಿ.ಪೂ. 8ನೆಯ ಶತಮಾನದಲ್ಲಿ ಬ್ಯಾಬಿಲೋನಿಯದವರು ಚರಂಡಿಗಳ ಮೇಲೆ ಇಟ್ಟಿಗೆಯ ಕಮಾನುಗಳನ್ನು ಕಟ್ಟುತ್ತಿದ್ದರು. ಈಜಿಪ್ಟಿನಲ್ಲಿ ನೈಲ್ ನದಿಯ ಮಣ್ಣಿಗೆ ಮರಳನ್ನೂ ಹುಲ್ಲನ್ನೂ ಬೆರೆಸಿ ಇಟ್ಟಿಗೆಗಳನ್ನು ಮಾಡಿ ಬಿಸಿಲಿನಲ್ಲಿ ಒಣಗಿಸುತ್ತಿದ್ದರು. ಇವರು ಕಟ್ಟಡದಲ್ಲಿ ಬಂಧವನ್ನು (ಬಾಂಡ್) ಉಪಯೋಗಿಸುತ್ತಿದ್ದರು.[]

ಚೀನಾದ ಒಂದು ಕಟ್ಟಡ

ಸಿಂಧೂದೇಶದ ಹರಪ್ಪ ಮತ್ತು ಮೊಹೆಂಜೊದಾರೊ ನಗರ

ಬದಲಾಯಿಸಿ

ಸಿಂಧೂದೇಶದ ಹರಪ್ಪ ಮತ್ತು ಮೊಹೆಂಜೊದಾರೊ ನಗರಗಳಲ್ಲಿ ಬೆಳಕಿಗೆ ಬಂದ ಸಿಂಧೂ ಕಣಿವೆಯ ನಾಗರಿಕತೆಯಲ್ಲಿ ಸುಟ್ಟ ಇಟ್ಟಿಗೆಗಳಿಂದ ಸಾರ್ವಜನಿಕ ಕಟ್ಟಡಗಳನ್ನೂ ಕೆಲಸಗಾರರ ಮನೆಗಳನ್ನೂ ಕಟ್ಟಿದ್ದಾರೆ. ಅನಂತರ ಬಂದ ವಿಖ್ಯಾತ ಇಂಜಿನಿಯರುಗಳಾದ ರೋಮನ್ನರು ಇಟ್ಟಿಗೆಗಳಿಂದ ಕಟ್ಟಿ ಒಳಗಡೆ ಕಾಂಕ್ರೀಟನ್ನು ತುಂಬುತ್ತಿದ್ದರು. ಜ್ವಾಲಾಮುಖಿಗಳಿಂದ ಬಂದ ಪಸೊರೋಲೆನಾ ಸಿಮೆಂಟನ್ನು ಮರಳಿಗೆ ಬೆರೆಸಿ ಬಲಿಷ್ಠವಾದ ಗಾರೆಯನ್ನು ತಯಾರಿಸುತ್ತಿದ್ದರು. ಇವರು ಇಟ್ಟಿಗೆಯಿಂದಲೇ ಕಮಾನುಗಳ ಶ್ರೇಣಿ (ವಾಲ್ಟ್) ಮತ್ತು ಗುಮ್ಮಟಗಳನ್ನು (ಡೋಮ್) ಕಟ್ಟುವುದರಲ್ಲಿ ನಿಪುಣರು. ಇಟ್ಟಿಗೆ ಬೆನ್ನುಪಟ್ಟಗಳಿಂದಲೂ ಕಾಂಕ್ರೀಟಿನಿಂದಲೂ ಕಟ್ಟಿದ 43.2ಮೀ ವ್ಯಾಸದ ಪಾಂಥಿಯನ್, ಪುರಾತನ ಗುಮ್ಮಟಗಳಲ್ಲೆಲ್ಲ ಅತ್ಯಂತ ಅಗಲವಾದದ್ದು. ಕ್ರಿ.ಶ. 6ನೆಯ ಶತಮಾನದಲ್ಲಿ ಕಾನ್‍ಸ್ಟಾನ್‍ಟಿನೋಪಲಿನಲ್ಲಿ ಕಟ್ಟಿದ ಹಾಜಿ ಸೋಫಿಯ ಗುಮ್ಮಟದ ವ್ಯಾಸ 32.46 ಮೀ, ನೆಲದಿಂದ ಅದರ ನೆತ್ತಿಯ ಎತ್ತರ 54 ಮೀ. 11ನೆಯ ಶತಮಾನದಲ್ಲಿ ಸ್ಪೇನಿನಲ್ಲಿ ಮೂರರು ರೋಮನರ ಕಲೆಯನ್ನು ರೂಢಿಗೆ ತಂದರು. 12ನೆಯ ಶತಮಾನದಿಂದ ಈಚೆಗೆ ಯೂರೂಪಿನಲ್ಲೆಲ್ಲ ಅನೇಕ ಕೋಟೆಗಳನ್ನೂ ಭವ್ಯವಾದ ಚರ್ಚುಗಳನ್ನೂ ಇಟ್ಟಿಗೆಯಿಂದ ಕಟ್ಟಿದ್ದಾರೆ.

ಕಟ್ಟುವ ಕ್ರಮ

ಬದಲಾಯಿಸಿ

ಇಟ್ಟಿಗೆಗಳನ್ನು ಒಂದರ ಮೇಲೊಂದು ವ್ಯಾಪಿಸುವ ಹಾಗೂ ಒಂದಕ್ಕೊಂದು ತೊಡರಿ ಬಂಧನವನ್ನು ಕಲ್ಪಿಸುವ ಹಾಗೂ ಗಾರೆಯನ್ನು ಸೇರಿಸಿ ಕಟ್ಟಡಗಳನ್ನು ಕಟ್ಟುತ್ತಾರೆ. ಎಲ್ಲ ಸಾಂಪ್ರದಾಯಿಕ ಕೆಲಸಗಳ ಹಾಗೆ ಈ ಕೆಲಸವೂ ಕೈಯಿಂದಲೇ ನಡೆಯುತ್ತದೆ. ಇಟ್ಟಿಗೆ, ಗಾರೆ ಮೊದಲಾದ ಸಾಮಗ್ರಿಗಳನ್ನು ಯಂತ್ರಗಳ ಮೂಲಕ ಕೈಯ ಹತ್ತಿರಕ್ಕೆ ತರಬಹುದು. ಆದರೆ ಇಟ್ಟಿಗೆಗಳನ್ನು ಕೂರಿಸುವುದು ಮಾತ್ರ ಕೈಯಿಂದಲೆ. ಸುಣ್ಣದ ಗಾರೆಯಿಂದ ಕಟ್ಟಿದ ಇಟ್ಟಿಗೆಯ ಗೋಡೆ ಚದರಡಿಗೆ 4 ಟನ್ನುಗಳ ಭಾರವನ್ನೂ ಭಾರವಾದ ಇಟ್ಟಿಗೆಯಿಂದ ಸಿಮೆಂಟಿನ ಗಾರೆಯಲ್ಲಿ ಕಟ್ಟಿದ ಕಟ್ಟಡ 15020 ಟನ್ನುಗಳ ಭಾರವನ್ನೂ ಹೊರಬಲ್ಲುದು. ಇಟ್ಟಿಗೆ ಕಟ್ಟಡವನ್ನು ತುಯ್ತದ ತ್ರಾಸಕ್ಕೆ (ಟೆನ್‍ಸೈಲ್ ಸ್ಟ್ರೆಸ್) ಗುರಿಪಡಿಸುವುದಿಲ್ಲ. ಭಾರವನ್ನು ಹೊರುವ ಸಾಮಥ್ರ್ಯ ಇಟ್ಟಿಗೆಯ ದಾಢ್ರ್ಯವನ್ನು ಅವಲಂಬಿಸಿರುವುದರಿಂದ ಅದಕ್ಕಿಂತ ಬಲವಾದ ಗಾರೆಯನ್ನು ಉಪಯೋಗಿಸುವುದರಿಂದ ಅನುಕೂಲವೇನೂ ಇಲ್ಲ. ಆದರೆ ಗಾರೆ ಇಟ್ಟಿಗೆಗೆ ಗಟ್ಟಿಯಾಗಿ ಅಂಟಿಕೊಳ್ಳುವಂತಿರಬೇಕು. ಕರಣೆಯಿಂದ ಹರಡುವ ಹಾಗಿರಬೇಕು, ಬೇಗ ಗಟ್ಟಿಯಾಗಬೇಕು.ಮಣ್ಣಿನ ಗುಣಕ್ಕೂ ತಯಾರಿಕಾ ಕ್ರಮಕ್ಕೂ ಅನುಸಾರವಾಗಿ ಇಟ್ಟಿಗೆಗಳು ಹೆಚ್ಚೋ ಕಡಿಮೆಯೋ ನೀರನ್ನು ಹೀರುತ್ತವೆ. ಇಟ್ಟಿಗೆಯ ಈ ಗುಣ ಗಾರೆಗೆ ಹೊಂದಿಕೊಂಡಿರಬೇಕು. ಜಿಗುಟಾದ ಗಾರೆಯನ್ನು ಉಪಯೋಗಿಸುವಾಗ ನೀರನ್ನು ಹೀರುವಂಥ ಗಾರೆಯಿದ್ದರೆ ಅನುಕೂಲ. ಇಟ್ಟಿಗೆಯ ಕಟ್ಟಡದ ಮೇಲೆ ಬೀಳುವ ಭಾರ ಹೆಚ್ಚಾಗಿದ್ದರೆ ದಾಢ್ರ್ಯವಿರುವ ಮತ್ತು ಭಾರವಾದ ಇಟ್ಟಿಗೆಯನ್ನು ಆಯ್ಕೆಮಾಡಿ ಬಲಿಷ್ಠವಾದ ಗಾರೆಯನ್ನು ಸೇರಿಸಬೇಕು. ಮನೆಗಳನ್ನು ಕಟ್ಟುವಾಗ ತೇವ ಒಳಗೆ ಇಳಿಯದ ಹಾಗೆ ಸಾಮಾನ್ಯವಾಗಿ ತಡೆಯಿರಬೇಕು. ಸಾಧಾರಣವಾದ ತೂಕ ಮತ್ತು ಬಲವುಳ್ಳ ಇಟ್ಟಿಗೆಯ ಜೊತೆಗೆ ಅದು ಹೊರಬೇಕಾದ ಭಾರಕ್ಕೆ ಅನುಗುಣವಾಗಿ ಸುಣ್ಣದ ಗಾರೆಯನ್ನೋ ಸಿಮೆಂಟಿನ ಗಾರೆಯನ್ನೋ ಉಪಯೋಗಿಸಬಹುದು.

ಇಟ್ಟಿಗೆ ಕೆಲಸದಲ್ಲಿ ಬಂಧಗಳು (ಬಾಂಡ್)

ಬದಲಾಯಿಸಿ

ಗೋಡೆಗೆ ಗಿಲಾವು ಮಾಡದೆ ಇದ್ದಾಗ ಕಟ್ಟಡದ ಅಂದವನ್ನೂ ಬಲವನ್ನೂ ಹೆಚ್ಚಿಸುವುದಕ್ಕಾಗಿ ಇಟ್ಟಿಗೆಗಳನ್ನು ಮುಖ್ಯವಾಗಿ ಮೂರು ಬಂಧಗಳಲ್ಲಿ ಜೋಡಿಸುತ್ತಾರೆ ; 1. ಇಂಗ್ಲಿಷ್ ಬಂಧ, 2. ಫ್ಲೆಮಿಷ್ ಬಂಧ, 3. ಡಚ್ ಬಂಧ.ಗೋಡೆಯ ಉದ್ದದಲ್ಲಿ ಇಟ್ಟಿಗೆಯ ಉದ್ದ ಬರುವ ಹಾಗೆ ಇಟ್ಟರೆ ಅದಕ್ಕೆ ಸ್ಟ್ರೆಚರ್ ಎಂದೂ ಅಗಲದಲ್ಲಿ ಇಟ್ಟಿಗೆಯ ಉದ್ದ ಬರುವ ಹಾಗೆ ಇಟ್ಟರೆ ಅದಕ್ಕೆ ಹೆಡರ್ ಎಂದೂ ಹೆಸರು. ಬಂಧದಲ್ಲಿ ಒಂದು ವರಸೆಯಲ್ಲಿ ಬರೀ ಹೆಡರುಗಳನ್ನು ಮೇಲಿನ ವರಸೆಯಲ್ಲಿ ಬರೀ ಸ್ಟ್ರೆಚರುಗಳನ್ನು ಮೂರನೆಯದರಲ್ಲಿ ಮತ್ತೆ ಹೆಡರುಗಳನ್ನು ನಾಲ್ಕನೆಯದರಲ್ಲಿ ತಿರುಗಿ ಸ್ಟ್ರೆಚರುಗಳನ್ನು ಉಪಯೋಗಿಸುತ್ತ ಹೋಗುತ್ತಾರೆ. ಒಂದು ವರಸೆಯ ಹೆಡರುಗಳು ಮೇಲಿನ ಮತ್ತು ಕೆಳಗಿನ ವರಸೆಗಳ ಸ್ಟ್ರೆಚರುಗಳ ಮಧ್ಯದಲ್ಲಿ ಬರುತ್ತವೆ. ಡಚ್ ಬಂದ, ಇಂಗ್ಲಿಷ್ ಬಂಧಗಳಲ್ಲಿ ಒಂದೇ ವರಸೆಯಲ್ಲಿ ಒಂದು ಹೆಡರ್, ಒಂದು ಸ್ಟ್ರೆಚರ್-ಹೀಗೆ ಪರ್ಯಾಯವಾಗಿ ಇಡುತ್ತ ಹೋಗುತ್ತಾರೆ. ಒಂದು ವರಸೆಯ ಹೆಡರುಗಳು ಮೇಲಿನ ಮತ್ತು ಕೆಳಗಿನ ವರಸೆಗಳ ಸ್ಟ್ರೆಚರುಗಳ ಮಧ್ಯದಲ್ಲಿ ಬರುತ್ತವೆ. ಡಚ್ ಬಂಧ ಇಂಗ್ಲಿಷ್ ಬಂಧದಂತೆಯೇ ಇದೆ. ಆದರೆ ಒಂದು ಬಿಟ್ಟು ಒಂದು ವರಸೆಯಲ್ಲಿ ಸ್ಟ್ರೆಚರುಗಳನ್ನು 113 ಮಿ.ಮೀ. ನಷ್ಟು ಮುಂದಕ್ಕೆ ತಳ್ಳಿರುತ್ತಾರೆ.ಉಳಿದ ಬಂಧಗಳು ಈ ನಮೂನೆಗಳ ರೂಪಾಂತರಗಳು. ಇಂಗ್ಲಿಷ್ ಬಂಧದಲ್ಲಿ 1. ಒಂದು ಹೆಡರ್ ವರಸೆ, 2. ಮೇಲೆ ಮೂರು ಸ್ಟ್ರೆಚರ್ ವರಸೆಗಳು, 3. ಮತ್ತೆ ಒಂದು ಹೆಡರ್ ವರಸೆ - ಹೀಗೆ ಪರ್ಯಾಯವಾಗಿ ಇಡುವುದುಂಟು. ಫ್ಲೆಮಿಷ್ ಬಂಧದಲ್ಲೂ ಇದೇ ಕ್ರಮವನ್ನನುಸರಿಸಿ ಹೊಸದೊಂದು ರೀತಿಯನ್ನು ಕಲ್ಪಿಸುತ್ತಾರೆ. ಎಲ್ಲ ವರಸೆಗಳಲ್ಲೂ ಸ್ಟ್ರೆಚರುಗಳನ್ನಿಡುವುದು ಇನ್ನೊಂದು ರೀತಿ. ಹಾಗೆಯೇ ಎಲ್ಲ ವರಸೆಗಳಲ್ಲು ಹೆಡರುಗಳನ್ನೇ ಇಟ್ಟು ಎಸೆಗಳು ಒಟ್ಟಿಗೆ ಬಂದ ಹಾಗೆ ಕೊನೆಗಳಲ್ಲಿ ಕ್ರಮಪಡಿಸುತ್ತಾರೆ.

ಹತ್ಯಾರುಗಳು

ಬದಲಾಯಿಸಿ

ಗಾರೆಯನ್ನು ಬಾಣಲೆಯಿಂದ ತೆಗೆದುಕೊಂಡು ಕಟ್ಟಿದ ಇಟ್ಟಿಗೆಯ ಮೇಲೆ ಹರಡುವುದಕ್ಕೂ ಅರ್ಧ ಇಟ್ಟಿಗೆಯನ್ನು ಕತ್ತರಿಸಿ ಮೇಲಿನ ಇಟ್ಟಿಗೆಯನ್ನು ಅದರ ಜಾಗದಲ್ಲಿಟ್ಟು ಕಟ್ಟುವುದಕ್ಕೂ ಹೆಚ್ಚಾದ ಗಾರೆಯನ್ನು ಪಕ್ಕಗಳಿಂದ ತೆಗೆಯುವುದಕ್ಕೂ ಕರಣೆಯನ್ನು ಉಪಯೋಗಿಸುತ್ತಾರೆ. ತೂಗು ಗುಂಡನ್ನು ಉಪಯೋಗಿಸಿ ಗೋಡೆ ಲಂಬವಾಗಿರುವ ಹಾಗೆ ಕಟ್ಟುತ್ತಾರೆ. 1ಮೀ ಉದ್ದ ಮರದ ತುಂಡಿನಿಂದ ಇಟ್ಟಿಗೆಗಳ ಮುಖಗಳು ಲಂಬವಾದ ಮೇಲ್ಮೈಯ ಮೇಲಿವೆಯೇ ಎಂದು ನೋಡುತ್ತಾರೆ. ಜಲಮಟ್ಟದಿಂದ ಮೇಲಿನ ಮಟ್ಟವನ್ನು ಪರೀಕ್ಷಿಸುತ್ತಾರೆ. ನಾಲ್ಕು ಮಡಿಕೆಗಳುಳ್ಳ 0.22 ಮೀ ಉದ್ದ ಅಳತೆಪಟ್ಟಿ ಮತ್ತು ಸಣ್ಣ ಉಕ್ಕಿನ ಮೂಲೆಕೋಲು-ಇವು ಯಾವಾಗಲೂ ಇಟ್ಟಿಗೆಯ ಕೆಲಸಗಾರನ ಬಳಿ ಇರಬೇಕಾದ ಇತರ ಹತ್ಯಾರುಗಳು ಕಟ್ಟಡದ ಇಟ್ಟಿಗೆಗಳನ್ನು ಉಪಯೋಗಿಸುವುದಕ್ಕೆ ಅವನ್ನು ಮುಂಚೆ ಚೆನ್ನಾಗಿ ನೀರಿನಲ್ಲಿ ನೆನೆಸಿರಬೇಕು. ಆಗ ಅರೆಕಾವಿನ ಇಟ್ಟಿಗೆಗಳು ಕರಗಿಹೋಗುತ್ತವೆ. ಗೋಡೆಯನ್ನು ಕಟ್ಟುವಾಗ ಮೊದಲು ಅದರ ಎರಡು ಕೊನೆಗಳಿಂದ ಪ್ರಾರಂಭಮಾಡುತ್ತಾರೆ. ಈ ಎರಡು ಕೊನೆಗಳು ಮಧ್ಯದ ಗೋಡೆಯೊಂದಿಗೆ ಹೊಂದಿಕೊಳ್ಳುವ ಹಾಗೆ ಒಂದು ಬಿಟ್ಟು ಒಂದು ವರಸೆಯಲ್ಲಿ ಸ್ಟ್ರೆಚರುಗಳನ್ನು 57 ಮಿ.ಮೀ ಮುಂದಕ್ಕೆ ಚಾಚಿ ಹಲ್ಲುಗಳನ್ನು ಬಿಡುತ್ತಾರೆ. ಇನ್ನೊಂದು ಕ್ರಮದಲ್ಲಿ ಒಂದೊಂದು ವರಸೆಯನ್ನು ಮೆಟ್ಟಿಲಾಗಿ ಬಿಡುತ್ತಾರೆ. ಈ ಕ್ರಮದಲ್ಲಿ ನಡುವಿನ ಗೋಡೆ ಕೊನೆಗಳೊಂದಿಗೆ ಬೆರೆದು ಎಸೆಗಳಲ್ಲಿ ಗಾರೆ ಪೂರ್ತಿಯಾಗಿ ತುಂಬುತ್ತದೆ. ಕೆಲವು ವೇಳೆ ದೊಡ್ಡ ಗೋಡೆಗಳಲ್ಲಿ ಒಂದು ಮಟ್ಟದಲ್ಲಿ ಒಂದು ಕ್ರಮವನ್ನು ಇನ್ನೊಂದು ಮಟ್ಟದಲ್ಲಿ ಇನ್ನೊಂದನ್ನು ಉಪಯೋಗಿಸುವುದುಂಟು. ಗೋಡೆಯ ಕೊನೆಗಳು ಕೊಂಚ ಎತ್ತರಕ್ಕೆ ಎದ್ದಮೇಲೆ ನಡುವಿನ ಗೋಡೆಯನ್ನು ಒಂದೊಂದು ವರಸೆಯಾಗಿ ಎತ್ತುತ್ತಾರೆ. ಇಟ್ಟಿಗೆಯ ಮಟ್ಟಕ್ಕೆ ಒಂದು ನೂಲಿನ ದಾರವನ್ನು ಬಿಗಿಯಾಗಿ ಎಳೆದು ದಾರದ ಸಾಲಿನಲ್ಲಿ ಇಟ್ಟಿಗೆಗಳನ್ನು ಒಂದೊಂದಾಗಿ ಜೋಡಿಸುತ್ತಾರೆ.ಇಟ್ಟಿಗೆಯ ಗೋಡೆಯ ಎಡೆಗಳಲ್ಲಿ ಗಾರೆಯನ್ನು ಕೆರೆದು ಹೊಸಗಾರೆಯನ್ನು ಸರಿಯಾಗಿ ತುಂಬುವುದಕ್ಕೆ (ಪಾಯಿಂಟಿಂಗ್) ಪ್ರತ್ಯೇಕವಾದ ಕರಣೆಯನ್ನು ಉಪಯೋಗಿಸುತ್ತಾರೆ. ಗೋಡೆಗೆ ಗಿಲಾವು (ಪ್ಲಾಸ್ಟರಿಂಗ್) ಮಾಡದೆ ಇರುವ ಕಡೆಗಳಲ್ಲಿ ಮಳೆಯ ನೀರು ಒಳಕ್ಕೆ ಬರದ ಹಾಗೆ ಸಿಮೆಂಟುಗಾರೆಯನ್ನು ಎಸೆಗಳಲ್ಲಿ ತೂರಿ ತುಂಬುತ್ತಾರೆ.ಭಾರತದಲ್ಲಿ ಇಟ್ಟಿಗೆಯ ಗೋಡೆಗಳಿಗೆ ಹೊರಗೂ ಒಳಗೂ ನಯಗಾರೆಯಿಂದ ಗಿಲಾವು ಮಾಡುವುದೇ ರೂಢಿ. ಮರಳಿನ ಗಾರೆಯನ್ನು ಅರೆದ ಮೇಲೆ ರಾಶಿಹಾಕಿ ಮೇಲುಗಡೆ ನೀರನ್ನು ನಿಲ್ಲಿಸಿ ಮಾಗುವಂತೆ ಮಾಡುತ್ತಾರೆ. ಈ ಗಾರೆಯನ್ನು ಕರಣೆಯಿಂದ ಇಟ್ಟಿಗೆಯ ಗೋಡೆಗಳಿಗೆ ಗಿಲಾವು ಮಾಡುವುದಕ್ಕೆ ಉಪಯೋಗಿಸುತ್ತಾರೆ. ಹೊರಭಾಗದಲ್ಲಿ ಸಿಮೆಂಟ್ ಗಾರೆಯನ್ನು ಗಿಲಾವಿಗೆ ಉಪಯೋಗಿಸುವುದು ರೂಢಿ.

ತಯಾರಿಕೆ=

ಬದಲಾಯಿಸಿ

ಗೋಡೆಗಳಿಗೆ ಹೊರಗಡೆ ಗಿಲಾವು ಮಾಡದೆ ಇದ್ದಾಗ ಒಂದೇ ಬಣ್ಣದ ಇಟ್ಟಿಗೆಗಳನ್ನು ಆರಿಸಿ ಹೊರಮುಖದಲ್ಲಿ ಉಪಯೋಗಿಸಬೇಕು. ಕೆಲವು ಗೋಡೆಗಳ ಮುಖದಲ್ಲಿ ವಿಶಿಷ್ಟವಾದ 51 ಮಿ.ಮೀ ದಪ್ಪದ ಒಳ್ಳೆಯ ಇಟ್ಟಿಗೆಳನ್ನು ಉಪಯೋಗಿಸಿ 5 ವರಸೆಗಳ ಎತ್ತರ ಎಸೆಗಳೂ ಸೇರಿ ಸುಮಾರು 330 ಮಿ.ಮೀ. ಬರುವಂತೆ ಕಟ್ಟಿ ಹಿಂದುಗಡೆ ಮೂರು ಅಂಗುಲದ ಇಟ್ಟಿಗೆಗಳನ್ನು ಜೋಡಿಸಿ ಕಟ್ಟಿ ಹೊರಗಡೆ ಅಂದವಾಗಿಕಾಣುವಂತೆ ಮಾಡುತ್ತಾರೆ. ಕೆಲವು ಮನೆಗಳ ಹೊರಭಾಗದಲ್ಲಿ ಬೇರೆ ಬೇರೆ ಆಕಾರದ ಟೆರಕಾಟ ಇಟ್ಟಿಗೆಗಳನ್ನು ಅಲಂಕಾರಕ್ಕಾಗಿ ಉಪಯೋಗಿಸುವುದು ಉಂಟು.ಸೇತುವೆಗಳ ಕಂಬಗಳನ್ನು ಇಟ್ಟಿಗೆಗಳನ್ನು ಆರಿಸಿಕೊಂಡು ಯಾವುದಾದರೂ ಬಂಧಕ್ಕೆ ಅನುಸಾರವಾಗಿ ಸಿಮೆಂಟ್ ಗಾರೆಯಿಂದ ಕಟ್ಟಬೇಕು. ಸೇತುವೆಗಳ ಕಮಾನುಗಳನ್ನು ಇಟ್ಟಿಗೆಗಳಿಂದ ಕಟ್ಟುವಾಗಲೂ ಗೋಲು ಕೆಲಸದಲ್ಲೂ (ಮೌಲ್ಡಿಂಗ್) ಸರಿಯಾದ ಆಕಾರ ಬರುವ ಹಾಗೆ ಜಾಗರೂಕತೆಯಿಂದ ಕಟ್ಟಬೇಕು. ಕಾರ್ಖಾನೆಗಳಲ್ಲಿ ಹೊಗೆಗೂಡುಗಳನ್ನು ಕಟ್ಟುವಾಗ ಬೇಕಾದ ಆಕಾರಕ್ಕೆ ಅಚ್ಚು ಹೊಯ್ದ ಇಟ್ಟಿಗೆಗಳನ್ನು ಉಪಯೋಗಿಸುತ್ತಾರೆ.ಬೆಂಕಿಯ ಕಾವನ್ನು ತಡೆಯುವ ವಿಶಿಷ್ಟವಾದ ಇಟ್ಟಿಗೆಗಳಿಂದ ಕುಲುಮೆಗಳನ್ನು ಕಟ್ಟಬೇಕು. ಇಂಥವುಗಳಲ್ಲಿ ಹಲವು ನಮೂನೆಗಳಿವೆ. ಅವನ್ನು ಸಿಮೆಂಟ್ ಗಾರೆಯಲ್ಲಿ ಇಲ್ಲವೆ ಬೆಂಕಿಯನ್ನು ತಡೆಯುವ ಮಣ್ಣಿನಲ್ಲಿ ಕೂರಿಸಬೇಕು. ಈ ಮಣ್ಣನ್ನು ಗೋಡೆಯ ಮುಖಕ್ಕೂ ಬಳಿಯುತ್ತಾರೆ.ಮರದ ಚೌಕಟ್ಟಿನಲ್ಲಿ ಇಟ್ಟಿಗೆಗಳನ್ನು ತುಂಬಿ ಗೋಡೆಗಳನ್ನು ಕಟ್ಟಿ ಗಿಲಾವು ಮಾಡದೆ ಬಿಡುತ್ತಾರೆ. ಲಂಬವಾಗಿ ಸ್ನಾನದ ಮನೆಗಳಲ್ಲಿ ಕೂರಿಸುವ ಸ್ಯಾನಿಟರಿ ಹಂಚುಗಳ ಹಿಂದೆಯೂ ಹೀಗೆ ಇಟ್ಟಿಗೆಗಳನ್ನು ತುಂಬುತ್ತಾರೆ. ಎರಡು ಕೊಠಡಿಗಳ ಮಧ್ಯೆ ಕಟ್ಟುವ ತಡಿಕೆಗಳಿಗೂ ಈ ನಮೂನೆಯನ್ನು (ಬ್ರಿಕ್ ನಾಗ್ಗಿಂಗ್) ಉಪಯೋಗಿಸಬಹುದು.

ಚತುರಸ್ರಾಕಾರ

ಬದಲಾಯಿಸಿ

ಚಾವಣಿಗಳಲ್ಲಿ ಪ್ರಬಲಿತ ಕಾಂಕ್ರೀಟಿನ ತೊಲೆಗಳ ನಡುವೆ ವಿಷಮ ಚತುರಸ್ರಾಕಾರವಾಗಿ ತಯಾರಿಸಿದ ಇಟ್ಟಿಗೆಗಳನ್ನು ತುಂಬಿ (ಬ್ರಿಕ್ ನಾಗ್ಗಿಂಗ್ ಟೆರೆಸ್) ಹಾಳತೆಯನ್ನು ಸಾಧಿಸಿ ತಳದಲ್ಲಿ ಮಟ್ಟವಾದ ಚಾವಣಿಯನ್ನು ಕಟ್ಟಬಹುದು. ಈ ನಮೂನೆಯನ್ನು 2.43-3.34 ಮೀ ಅಂಕಣಗಳಲ್ಲಿ ಉಪಯೋಗಿಸಬಹುದು. ಹಜಾರದ ಅಗಲ ಹೆಚ್ಚಾಗಿದ್ದರೆ ಸೂಕ್ತವಾಗಿ ಪ್ರಬಲಿತ ಕಾಂಕ್ರೀಟಿನ ತೊಲೆಗಳನ್ನು ಕಟ್ಟಿ ಅಂಕಣಗಳನ್ನು ಈ ಅವಧಿಗೆ ತರಬೇಕು. ಗೋಡೆಗಳ ಮೇಲೆ ಹೊತ್ತುಕೊಳ್ಳುವ ಭಾಗವನ್ನು ಸೇರಿಸಿ ಆಯಾ ಅಂಕಣದಲ್ಲಿ ಬರುವ ಪ್ರಬಲಿತ ಕಾಂಕ್ರಿಟಿನ ತೊಲೆಗಳನ್ನು ತಕ್ಕಷ್ಟು ಉಕ್ಕನ್ನು ಹುದುಗಿಸಿ ಪೂರ್ವಭಾವಿಯಾಗಿ ತಯಾರಿಸಿ ನೀರಿನಲ್ಲಿ ಮುಳುಗಿಸಿಟ್ಟು ಮುಗಿಸಬಹುದು. ಈ ತೊಲೆಗಳನ್ನು ಮಾಡಲು ಚಾವಣಿಯ ಮೇಲೆ ಸರಿಯಾದ ಅಂತರದಲ್ಲಿಟ್ಟು ನಡುವೆ ವಿಷಮ ಚತುರಸ್ರಾಕಾರವಾಗಿ ತಯಾರಿಸಿದ ವಿಶಿಷ್ಟ ಇಟ್ಟಿಗೆಗಳನ್ನು ಜೋಡಿಸಿ ತಳದಲ್ಲಿ ಚಪ್ಪಟೆಯಾದ ಮಾಡನ್ನು ತಯಾರಿಸಬಹುದು. ಉಕ್ಕಿಗೆ ಅಭಾವವಿರುವ ಸಮಯಗಳಲ್ಲಿ ಪ್ರಬಲಿತ ಕಾಂಕ್ರೀಟಿಗೆ ಬದಲಾಗಿ ಅರೆವಾಸಿ ಇಟ್ಟಿಗೆಯನ್ನು ಉಪಯೋಗಿಸುವುದು ಉಚಿತ. ಇದರಿಂದ ಕೊಂಚ ಉಳಿತಾಯವೂ ಆಗುತ್ತದೆ.ಕೆಲವು ವೇಳೆ ಗೋಡೆಗಳಲ್ಲಿ 203.2 ಮಿ.ಮೀ. ಇಲ್ಲವೆ 304.8 ಮಿ.ಮೀ ದಪ್ಪದ ಒರಟು ಇಟ್ಟಿಗೆಯ ಕಟ್ಟಡಕ್ಕೆ 101.6 ಮಿ.ಮೀ. ನಯವಾದ ಇಟ್ಟಿಗೆಯ ಹೊದಿಕೆಯನ್ನು ಕೊಡುವುದುಂಟು. ಖರ್ಚಿನಲ್ಲಿ ಉಳಿತಾಯ ಮಾಡುವುದಕ್ಕಾಗಿ ಈ ತೆಳು ಹೊದಿಕೆಯನ್ನು ಹಿಂದೆ ಇಟ್ಟಿಗೆಯ ಕಟ್ಟಡವೇ ಇಲ್ಲದೆ ಮರದ ಚೌಕಟ್ಟಿಗೆ ಲೋಹದ ಕ್ಲಿಪ್ಪುಗಳಿಂದ ಪ್ರಬಲಿತ ಮಾಡುತ್ತಾರೆ. ಈ ಕಟ್ಟಡದಲ್ಲಿ ಭಾರವೆಲ್ಲ ಮರದ ಚೌಕಟ್ಟಿನ ಮೇಲೆ ಬೀಳುತ್ತದೆ. ಮರದ ಬೆಲೆ ಹೆಚ್ಚಾದ ಮೇಲೆ ಈ ನಮೂನೆಯನ್ನು ಅಷ್ಟಾಗಿ ಉಪಯೋಗಿಸುತ್ತಿಲ್ಲ.

ಪ್ರಬಲಿತ ಇಟ್ಟಿಗೆಯ ಕಟ್ಟಡ (ರೀ ಇನ್‍ಫೋಸ್ರ್ಡ್‍ಬ್ರಿಕ್‍ವರ್ಕ್)

ಬದಲಾಯಿಸಿ

ಈ ಕ್ರಮವನ್ನು 1813ರಲ್ಲಿ ಸುರಂಗದ ಇಂಜಿನಿಯರ್ ಬ್ರುಸೆಲ್ ಹೊಗೆಗೂಡುಗಳನ್ನು ಬಲಪಡಿಸುವುದಕ್ಕಾಗಿ ಉಪಯೋಗಿಸಿದ್ದ. ಆಮೇಲೆ 1825ರಲ್ಲಿ ಥೇಮ್ಸ್ ನದಿಯ ಕೆಳಗೆ ಸುರಂಗವನ್ನು ಕೊರೆಯುತ್ತಿದ್ದಾಗಲೂ ವಿಶೇಷವಾಗಿ ಬಳಸಿದ. ಈ ಕ್ರಮದಲ್ಲಿ ಇಟ್ಟಿಗೆಯ ಎಸೆಗಳಲ್ಲಿ ಉಕ್ಕಿನ ಕಂಬಿಗಳನ್ನು ಇಟ್ಟು ಬಲಪಡಿಸುತ್ತಾರೆ. ಪ್ರಬಲಿತ ಕಾಂಕ್ರೀಟಿನಲ್ಲೂ ಇದೇ ತತ್ತ್ವವನ್ನು ಉಪಯೋಗಿಸಿದ್ದಾರೆ. ಇಟ್ಟಿಗೆಯ ಕಟ್ಟಡದ ಒತ್ತು ಬಲ ಹೆಚ್ಚು. ತುಯ್ತ ಉಪಯೋಗವಿಲ್ಲ. ಗಾರೆಯಲ್ಲಿ ಉಕ್ಕಿನ ಕಂಬಿಗಳು ಚಪ್ಪಡಿ, ತೊಲೆ ಇಲ್ಲವೆ ಕಂಬದ ಹಾಗೆ, ಕಟ್ಟಡ ಕೆಲಸಮಾಡುವ ಹಾಗೆ ತುಯ್ತತದ ಬಲವನ್ನು, ಒದಗಿಸುತ್ತವೆ. ಸಾದಾ ಇಟ್ಟಿಗೆಗಳನ್ನು ಗೋಡೆಯ ಮೇಲೆ (ಆನ್ ಎಡ್ಜ್) ಜೋಡಿಸಿ ಒಂದೊಂದೂ ಎಸೆಯಲ್ಲಿಯೂ 6.35 ಮಿ.ಮೀ ಉಕ್ಕಿನ ಕಂಬಿಗಳನ್ನಿಟ್ಟರೆ 2.43ಮೀ ಅಗಲದ ಕಣ್ಣಿನ ಮೇಲೆ ಬರುವ ತ್ರಾಸವನ್ನು ತೊಲೆಯ ಹಾಗೆ ತಡೆದು ಮೇಲುಗಡೆ ಚದರ ಅಡಿಗೆ 30 ಕೆ.ಜಿ.ಗಳ ತೂಕವನ್ನು ಹೊರುತ್ತದೆ. 203.2 ಮಿ.ಮೀ. ಅಗಲವೂ 482.6 ಮಿ.ಮೀ. ಆಳವೂ ಆದ ಇಟ್ಟಿಗೆಯ ಕಟ್ಟಡದ ತೊಲೆಯಲ್ಲಿ ಕೆಳಗಡೆಯ ಗಾರೆಯ ಎಸೆಯಲ್ಲಿ ಐದು 12 ಮಿ.ಮೀ ಗುಂಡು ಕಂಬಿಗಳನ್ನು ಕೂರಿಸಿದರೆ ಆ ತೊಲೆ 3.64 ಮೀ. ಅಗಲದ ಕಟ್ಟೆಯ ಮೇಲೆ 5 ಟನ್ನುಗಳ ಭಾರವನ್ನು ಹೊರಬಲ್ಲದು.

ಕಾಂಕ್ರೀಟಿನ ಕಂಬಿ

ಬದಲಾಯಿಸಿ

ಈ ಕೆಲಸದಲ್ಲಿ ಪ್ರಬಲಿತ ಕಾಂಕ್ರೀಟಿನ ಕಂಬಿಗಳಿಗೆ ಬೇಕಾಗುವ ಹಾಗೆ ಊರೆಕಟ್ಟು (ಸೆಂಟರಿಂಗ್) ಬೇಕಾಗುವುದಿಲ್ಲ. ಚಪ್ಪಡಿಗಳಿಗೆ ಬೇಕಾಗುವ ಸಾರವೆ ನೀರು ಸೋರದಷ್ಟು ಭದ್ರವಾಗಿರಬೇಕಾಗಿಲ್ಲ. ತೊಲೆಗಳಿಗೆ ತಳದಲ್ಲಿ ಒಂದು ಹಲಗೆಯೂ ಅದನ್ನು ಹಿಡಿದಿರುವುದಕ್ಕೆ ಕೆಲವು ಕಂಬಿಗಳೂ ಸಾಕು. ಇಟ್ಟಿಗೆಗಳನ್ನು ಮರದ ಹಲಗೆಯ ಮೇಲೆ ಇಡುತ್ತ ಹೋಗಬಹುದು. ಎಸೆಗಳಲ್ಲಿ ಗಾರೆಯನ್ನು ತುಂಬಿ ಅದರಲ್ಲಿ ಉಕ್ಕಿನ ಕಂಬಿಗಳನ್ನು ಹೂಳಿ ಗಾರೆ ಗಟ್ಟಿಯಾಗುವವರೆಗೂ ಬಿಟ್ಟು ಆಮೇಲೆ ಸಾರವೆಯನ್ನು ತೆಗೆಯಬಹುದು. ಗಾರೆಯನ್ನು ಮೂರುಪಾಲು ಮರಳಿನೊಂದಿಗೆ ಒಂದು ಪಾಲು ಸಿಮೆಂಟನ್ನು ನೀರಿನೊಂದಿಗೆ ಬೆರೆಸಿ ತಯಾರಿಸುತ್ತಾರೆ.ಇಟ್ಟಿಗೆಯ ಗೋಡೆಗಳನ್ನು ಕೆಲವು ವರಸೆಗಳ ಅಂತರದಲ್ಲಿ ಮಧ್ಯೆ ಉಕ್ಕಿನ ತೆಳುಪಟ್ಟಿ, ಹಿಗ್ಗಿಸಿದ ತಂತಿಬಲೆ (ಎಕ್ಸ್ಪಾಂಡೆಂಡ್ ಮೆಟಲ್, ವೈರ್ ಮೆಷ್) ಇಲ್ಲವೆ ಬಿ.ಆರ್.ಸಿ. ಫೇಬ್ರಿಕ್ಕುಗಳನ್ನು ಮಟ್ಟವಾಗಿ ಇಟ್ಟುಗೋಡೆಯ ದಪ್ಪವನ್ನು ಕಡಿಮೆ ಮಾಡಿ ಹೆಚ್ಚು ಭಾರವನ್ನು ಹೊರುವಂತೆ ಮಾಡುತ್ತಾರೆ.ಉದ್ದದಲ್ಲೂ ಅಗಲದಲ್ಲೂ ಉಕ್ಕಿನ ಕಂಬಿಗಳನ್ನು ಎಸೆಗಳಲ್ಲಿಟ್ಟು ಭದ್ರೀಕರಿಸಿದ ಇಟ್ಟಿಗೆಯ ಕಟ್ಟಡದಿಂದಲೆ 3.64 ಮೀ ಉದ್ದ 1.82 ಮೀ. ಅಗಲದ ಕ್ಯಾಂಟಿಲಿವರ್ ಕ್ಯಾನೋಪಿಯನ್ನು ಪೋರ್ಟಿಕೋವಿನ ಹಾಗೆ ಕಟ್ಟಿದ್ದಾರೆ.

ಉಕ್ಕಿನ ಕಂಬಿ

ಬದಲಾಯಿಸಿ

ಲಂಬವಾಗಿ ಉಕ್ಕಿನ ಕಂಬಿಗಳನ್ನು ನಿಲ್ಲಿಸಿ ಅಲ್ಲಲ್ಲಿ ಅವನ್ನು ಮಟ್ಟವಾದ ಸುತ್ತು ಕಂಬಿಗಳಿಂದ ಬಿಗಿದು ಸುತ್ತಲೂ ಒಳ್ಳೆಯ ಇಟ್ಟಿಗೆಯಿಂದ ತೆಳುವಾಗಿ ಕಂಬಗಳನ್ನು ಕಟ್ಟುವುದು ಸಾಮಾನ್ಯವಾಗಿದೆ. ಕೇವಲ ಇಟ್ಟಿಗೆಯಿಂದಲೇ ಕಟ್ಟಿದ ಕಂಬಗಳ ಮೇಲೆ ಮಹಡಿಗಳನ್ನು ಕಟ್ಟುವುದು ಸಾಧ್ಯವಾಗಲಾರದು. ಪೊಳ್ಳಾದ ಗೋಡೆಗಳು (ಕ್ಯಾವಿಟಿ ವಾಲ್ಸ್) : ವಾಸ್ತವವಾಗಿ ಇವು 50.8-101 ಮಿ.ಮೀ. ಅಂತರವುಳ್ಳ ಎರಡು ಗೋಡೆಗಳು. ಈ ಖಾಲಿ ಜಾಗ ಹೊರಗಿನಿಂದ ತೇವವಾಗಲಿ ಶಾಖವಾಗಲಿ ಒಳಗೆ ಬರುವುದನ್ನೂ ಒಳಗಿನಿಂದ ಹೊರಗೆ ಹೋಗುವುದನ್ನೂ ತಡೆಯುತ್ತದೆ. ಸಾಮಾನ್ಯವಾಗಿ ಮಧ್ಯೆ ಎರಡು ಕಡೆಗಳಲ್ಲೂ ಒಂದು ಇಟ್ಟಿಗೆಯ ಅಗಲದ ಗೋಡೆಗಳನ್ನು ಕಟ್ಟುತ್ತಾರೆ. ನಡುವಣ ಅಂತರದಲ್ಲಿ ಶಾಖದ ಅವಾಹಕವಾದ (ನಾನ್‍ಕಂಡಕ್ಟರ್) ಗಾಜಿನ ನೂಲನ್ನೋ ತೆಳುವಾದ ಹಲಗೆಯನ್ನೋ ತುಂಬುತ್ತಾರೆ. ಮನೆಗಳ ಹೊರಗಿನ ಗೋಡೆಗಳನ್ನು ಮಾತ್ರ ಹೀಗೆ ಕಟ್ಟುತ್ತಾರೆ. ಶೀತ ದೇಶಗಳಲ್ಲಿ ಮನೆಯೊಳಗಿನ ತೇವ ಈ ಖಾಲಿ ಜಾಗದಲ್ಲಿ ನೀರಿನ ರೂಪಕ್ಕೆ ಬರದ ಹಾಗೆ ಒಳಭಾಗದಲ್ಲಿ ಒಂದು ನೂಲು ದಪ್ಪದ ಆಸ್ಫಾಲ್ಟಿನ ಹಾಳೆಗಳನ್ನಿಡಬೇಕು. ಮಳೆಯ ನೀರು ಒಳಕ್ಕೆ ಬರದ ಹಾಗೆ ಹೊರಗಡೆಯಿಂದ ಅದನ್ನು ಸಾಗಿಸಬೇಕು. ಗೋಡೆಯ ಎರಡು ಭಾಗಗಳನ್ನು ಬಿಗಿದು ಕಟ್ಟುವ ಹಾಗೆ 0.45 ಮೀ. ಅಂತರದಲ್ಲಿ ಒಂದೂವರೆ ನೂಲಿನ ತುಕ್ಕು ಹಿಡಿಯದ ಕಂಬಿಗಳನ್ನು ಇಡಬೇಕು. ಇಂಥ ಗೋಡೆಗಳ ಮೇಲೆ ಅಮೆರಿಕದಲ್ಲಿ ಒಂದು ಮಹಡಿಯನ್ನು ಕಟ್ಟುತ್ತಾರೆ. ಆದರೆ ವಿಶೇಷವಾಗಿ ಅನೇಕ ಮಹಡಿಗಳಿರುವ ಸೌಧಗಳಲ್ಲಿ ಭಾರವನ್ನು ಹೊರುವ ಉಕ್ಕಿನ ಚೌಕಟ್ಟಿನ ಮುಂದುಗಡೆ ಯಾವ ಭಾರವನ್ನೂ ಹೊರದ ಹಾಗೆ ಈ ಪೊಳ್ಳುಗೋಡೆಗಳನ್ನು ಕಟ್ಟುವುದೇ ಹೆಚ್ಚು. ಇಂಥ ಗೋಡೆಗಳನ್ನು ಕೈಗಾರಿಕೆಯ ಮತ್ತು ವಾಣಿಜ್ಯದ ಕಟ್ಟಡಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಆಧುನಿಕ ಕಟ್ಟಡಗಳಲ್ಲಿ ಇಟ್ಟಿಗೆಯ ಸ್ಥಾನ

ಬದಲಾಯಿಸಿ

ಈ ಶತಮಾನದಲ್ಲಿ ಉಕ್ಕು, ಪ್ರಬಲಿತ ಕಾಂಕ್ರೀಟು ಬಂದ ಮೇಲೆ ಇಂಜಿನಿಯರಿಂಗ್‍ನಲ್ಲಿ ಪ್ರಾಮುಖ್ಯ ಕಡಿಮೆಯಾಗುತ್ತಿದೆ. ದೊಡ್ಡ ಸೇತುವೆಗಳಲ್ಲಿ ಇಟ್ಟಿಗೆಯ ಕಮಾನುಗಳನ್ನು ಕಟ್ಟುವುದನ್ನು ಬಿಟ್ಟು 60 ವರ್ಷಗಳಿಗಿಂತಲೂ ಹೆಚ್ಚು ಕಾಲವಾಗಿದೆ. ಮನೆಗಳಲ್ಲಿ ಕಂಬಗಳನ್ನು ಬಳಸುವುದೂ ಇತ್ತೀಚೆಗೆ ನಿಂತುಹೋಗಿದೆ. ಗೋಡೆಗಳಿಗೆ ಮಾತ್ರ ಇನ್ನೂ ಬಳಸುತ್ತಿದ್ದಾರೆ. ಆದರೆ ಹೊರಗೋಡೆಗಳನ್ನು ಕಲ್ಲಿನಿಂದ ಕಟ್ಟುವುದು ಸಾಮಾನ್ಯವಾಗುತ್ತಿದೆ. ತಾರಸಿಗಳನ್ನಂತೂ ಇಟ್ಟಿಗೆಯಿಂದ ಕಟ್ಟುತ್ತಲೇ ಇಲ್ಲ.1891ರಲ್ಲಿ ಚಿಕಾಗೋ ನಗರದಲ್ಲಿ ಕಟ್ಟಿದ 16 ಅಂತಸ್ತಿನ ಮೊನಾಡ್‍ನಾಕ್ ಕಟ್ಟಡವೇ ಭಾರವನ್ನು ಹೊರುವ ಇಟ್ಟಿಗೆಯ ಕೊನೆಯ ಗಗನ ಚುಂಬಿ. ಎತ್ತರವಾದ ಕಟ್ಟಡಗಳನ್ನು ಕಟ್ಟಬೇಕಾದರೆ ಗೋಡೆಯ ದಪ್ಪ ಹೆಚ್ಚಾಗುತ್ತದೆ. ಎರಡು ಕಿಟಕಿಗಳ ನಡುವೆ ದಪ್ಪವಾದ ಇಟ್ಟಿಗೆಯ ಕಟ್ಟಡ ಬೇಕಾಗುವುದರಿಂದ ಕಿಟಕಿಗಳನ್ನು ಚಿಕ್ಕದಾಗಿ ಮಾಡಬೇಕಾಗುತ್ತದೆ. ಈ ಕಾರಣಗಳಿಂದ ಮಹಾಸೌಧಗಳಲ್ಲಿ ಭಾರವನ್ನು ಹೊರುವ ಭಾಗವನ್ನು ಉಕ್ಕಿನಿಂದಲೋ ಪ್ರಬಲಿತ ಕಾಂಕ್ರೀಟಿನಿಂದಲೋ ಕಟ್ಟುವುದು ಅನಿವಾರ್ಯವಾಯಿತು. ಆಗ ಕಂಬಗಳು ತೆಳುವಾದುವು. ಕಿಟಕಿಯನ್ನು ಈ ಕಂಬದಿಂದ ಆ ಕಂಬದವರೆಗೂ ಹರಡಿದ್ದಾಯಿತು. ಆದರೂ ಕಿಟಕಿಗಳ ಎತ್ತರವನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಇಳಿಸಿದರು. ಈ ನಮೂನೆಯಲ್ಲಿ ಇಟ್ಟಿಗೆಯ ಗೋಡೆ ಭಾರವನ್ನು ಹೊರುವುದಿಲ್ಲ. ಅಲ್ಲದೆ ಭಾರವನ್ನು ಹೊರುವ ಚಿಪ್ಪನ್ನು ಮುಚ್ಚಿಹೊರಗಡೆಗೆ ಲಕ್ಷಣವಾಗಿ ಕಾಣಿಸುತ್ತದೆ. ಹೀಗೆ ಈಗಲೂ ಇಟ್ಟಿಗೆ ದೊಡ್ಡ ಕಟ್ಟಡಗಳಲ್ಲಿ ಹೊಸ ರೀತಿಯಲ್ಲಿ ಉಪಯೋಗವಾಗುತ್ತಿದೆ. ಸಣ್ಣ ಕಟ್ಟಡಗಳಲ್ಲಿ ಗೋಡೆಗಳನ್ನು ಕಟ್ಟುವುದಕ್ಕೆ ವಿಶೇಷವಾಗಿ ಬಳಕೆಯಲ್ಲಿದೆ.

ಉಲ್ಲೇಖಗಳು

ಬದಲಾಯಿಸಿ