ಇಂಡೋ - ಚೀನದ ಇತಿಹಾಸ
ಫ್ರೆಂಚ್ ಸಂರಕ್ಷಿತ ರಾಜ್ಯಗಳಾಗಿದ್ದ ಟಾಂಕಿನ್, ಅನ್ನಾಂ, ಕಾಂಬೋಡಿಯ, ಲಾವೋಸ್‍ಗಳನ್ನೂ ಫ್ರೆಂಚ್ ವಸಾಹತಾದ ಕೊಚಿನ್-ಚೀನಾವನ್ನೂ ಒಳಗೊಂಡ ಪ್ರದೇಶ. ಉತ್ತರಕ್ಕೆ ಚೀನಾದ ಯುನ್ನಾನ್ ಮತ್ತು ಕ್ವಾಂಗ್ಸಿ ಪ್ರಾಂತ್ಯಗಳು; ಪೂರ್ವಕ್ಕೂ ದಕ್ಷಿಣಕ್ಕೂ ದಕ್ಷಿಣಚೀನಾ ಕಡಲು; ಪಶ್ಚಿಮಕ್ಕೆ ಥೈಲೆಂಡ್ ಮತ್ತು ಬರ್ಮಾ-ಇದು ಈ ಪ್ರದೇಶದ ಚೌತರ್ಫು. ಇಪ್ಪತ್ತನೆಯ ಶತಮಾನದ ನಡುಗಾಲದ ವೇಳೆಗೆ ಈ ಪ್ರದೇಶ ಒಡೆಯಿತು. ವಿಯೆಟ್ನಾಂ, ಕಾಂಬೋಡಿಯ ಮತ್ತು ಲಾವೋಸ್ ಎಂಬ ಮೂರು ಪ್ರತ್ಯೇಕ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಟಾಂಕಿನ್, ಅನ್ನಾಂ ಮತ್ತು ಕೊಚಿನ್-ಚೀನಾ ಎಂಬ ಹೆಸರುಗಳು ಈಗ ಕ್ರಮವಾಗಿ ವಿಯೆಟ್ನಾಮಿನ ಉತ್ತರ, ಮಧ್ಯ ಹಾಗೂ ದಕ್ಷಿಣ ಭಾಗಗಳಿಗೆ ಭೌಗೋಲಿಕವಾಗಿ ಅನ್ವಯವಾಗುತ್ತವೆ. ಹಿಂದಿನ ಅನ್ನಾಂ ಚಕ್ರಾಧಿಪತ್ಯದ ಮಧ್ಯಪ್ರದೇಶಕ್ಕೆ ಸಂಬಂಧಿಸಿದಂತೆ ಮಾತ್ರವೇ ಈಗ ಅನ್ನಾಂ ಎಂಬ ಹೆಸರು ಬಳಕೆಯಲ್ಲಿದೆ.[೧]
ಪ್ರಾಕೃತಿಕ ಭೂವಿವರಣೆ
ಬದಲಾಯಿಸಿಇಂಡೋ-ಚೀನಾ ಪ್ರದೇಶದಲ್ಲಿ ಆಚೀಚೆಗೆ ಎರಡು ತಗ್ಗಿನ ಬಯಲುಗಳಿವೆ. ಉತ್ತರದಲ್ಲಿ ಕೆಂಪು ನದೀ ಕಣಿವೆಯೂ ದಕ್ಷಿಣದಲ್ಲಿ ಮೆಕಾಂಗ್ ಕಣಿವೆಯೂ ಇವೆರಡರ ನಡುವೆ ಪರ್ವತದ ಸಾಲೂ ಇದೆ. ಈ ಪರ್ವತಶ್ರೇಣಿಯ ಉತ್ತರ ಪಾಶ್ರ್ವದಲ್ಲಿ ಎತ್ತರದ ಪ್ರಸ್ಥಭೂಮಿಯುಂಟು. ಕರಾವಳಿಯಲ್ಲಿ ಮೆಕ್ಕಲು ಮಣ್ಣಿನ ನೆಲವೂ, ಉಪ್ಪುನೀರಿನಕೊಳ್ಳಗಳೂ, ಮರಳಗುಪ್ಪೆಗಳೂ ಇವೆ. ಮಧ್ಯವಿಯೆಟ್ನಾಮಿನ ದಕ್ಷಿಣ ಭಾಗದಲ್ಲಿ ಸುರಕ್ಷಿತವಾದ ಹಾಗೂ ಆಳವಾದ ಕೊಲ್ಲಿಗಳಿವೆ. ಉತ್ತರದ ಕಡಲ ಅಂಚಿನಲ್ಲಿ ಬೆಣಚು ಕಲ್ಲುಬಂಡೆ ತುಂಬಿದ ದ್ವೀಪಮಾಲೆ ಹಬ್ಬಿಕೊಂಡಿದೆ.ಇಂಡೋ-ಚೀನಾದ್ದು ಉಷ್ಣವಲಯದ ಮಾನ್ಸೂನ್ ವಾಯುಗುಣ. ಚಳಿಗಾಲದಲ್ಲಿ ಈಶಾನ್ಯಮಾರುತಗಳೂ ಬೇಸಗೆಯಲ್ಲಿ ನೈಋತ್ಯಮಾರುತಗಳೂ ಬೀಸುತ್ತವೆ. ಇಡೀ ಪರ್ಯಾಯದ್ವೀಪದಲ್ಲಿ ಜುಲೈ ತಿಂಗಳಲ್ಲಿ 8ಂ ಡಿಗ್ರಿ ಫ್ಯಾ.ನ ಸುತ್ತಲೇ ಉಷ್ಣತೆಯಿರುತ್ತದೆ. ಆದರೆ ಚಳಿಗಾಲದಲ್ಲಿ ದಕ್ಷಿಣಕ್ಕಿಂತ ಉತ್ತರದಲ್ಲಿ ಚಳಿ ಹೆಚ್ಚು. ಜನವರಿ ತಿಂಗಳಿನಲ್ಲಿ ಉತ್ತರ ಹ್ಯಾನಾಯ್‍ನಲ್ಲಿ 63 ಡಿಗ್ರಿ ಫ್ಯಾ. ಉಷ್ಣತೆಯಿದ್ದರೆ ಸೈಗಾನಿನಲ್ಲಿ 79 ಡಿಗ್ರಿ ಫ್ಯಾ. ಇರುತ್ತದೆ. ಇದು ಬೇಸಗೆಯ ಮಳೆಯ ಪ್ರದೇಶ. ಆದರೆ ಮಧ್ಯ ವಿಯೆಟ್ನಾಮಿನ ಕಡಲಂಚಿನಲ್ಲಿ ಚಳಿಗಾಲದಲ್ಲಿ ಮಳೆ ಹೆಚ್ಚು. ನೈಋತ್ಯ ಮಾರುತವೇ ಇದಕ್ಕೆ ಕಾರಣ. ಜುಲೈನಿಂದ ನವೆಂಬರ್ ತಿಂಗಳವರೆಗೆ ಸಾಮಾನ್ಯವಾಗಿ ತುಫಾನುಗಳೆದ್ದು ಮಳೆ ಸುರಿಯುತ್ತದೆ.ಈ ಪ್ರದೇಶದ ಮೂರನೆಯ ಎರಡು ಭಾಗ ಕಾಡು. ತಗ್ಗಿನ ನೆಲದಲ್ಲಿ ಸವನ್ನ ಹುಲ್ಲುಗಾವಲುಗಳೂ ಬೇಸಾಯದ ನೆಲವೂ ಇವೆ. ಹೆಚ್ಚು ಮಳೆ ಸುರಿಯುವ ಎಡೆಯಲ್ಲಿ ನಿತ್ಯಹಸುರಿನ ಕಾಡುಗಳು ಹಬ್ಬಿವೆ. ವರ್ಷವೆಲ್ಲ ಮಳೆ ಸುರಿಯುವ ಪ್ರದೇಶಗಳಲ್ಲಿ ಪರ್ಣಪಾತೀ (ಡೆಸಿಡ್ಯುಯಸ್) ವನಗಳಿವೆ. ಕಾಡು ಕಡಿದುಬಿಟ್ಟ ಸ್ಥಳಗಳಲ್ಲಿ ಬಿದಿರುಮೆಳೆ ಧಾರಾಳ. ಕೆಂಪು ನದಿಯ ಹಾಗೂ ಮೆಕಾಂಗ್ ನದಿಯ ಮುಖಜಭೂಮಿಗಳ ಸೆರಗಿನಲ್ಲಿ ಗುಲ್ಮವೃಕ್ಷಗಳು ಹಬ್ಬಿವೆ. ಹೆಚ್ಚು ಒತ್ತಾದ ಮರಗಳಿಲ್ಲದ ಕಾಡುಗಳಲ್ಲೂ ಸವನ್ನ ಹುಲ್ಲುಗಾವಲುಗಳಲ್ಲೂ ಆನೆ, ಹುಲಿ, ಕಾಡು ದನ, ಜಿಂಕೆ ಮುಂತಾದ ವಿಧವಿಧ ಪ್ರಾಣಿ ಸಮೂಹಗಳಿವೆ.[೨]
ವ್ಯವಸಾಯ
ಬದಲಾಯಿಸಿವ್ಯವಸಾಯವೇ ಇಲ್ಲಿನ ಮುಖ್ಯ ಕಸುಬು. ಆದರೆ ಕಾಡು ತುಂಬಿದ ಪರ್ವತ ಪ್ರದೇಶಗಳು ಹೆಚ್ಚಾಗಿರುವುದರಿಂದ ಒಟ್ಟು ನೆಲದ ಹನ್ನೆರಡನೆಯ ಒಂದು ಭಾಗಕ್ಕಿಂತ ಸ್ವಲ್ಪ ಹೆಚ್ಚು ನೆಲದಲ್ಲಿ (1,50,00,000 ಎಕರೆ) ಮಾತ್ರ ಸಾಗುವಳಿಯಾಗುತ್ತಿದೆ. ಭತ್ತ ಮುಖ್ಯ ಬೆಳೆ. ಬೇಸಾಯದ ನೆಲದ ಹತ್ತರಲ್ಲೊಂಬತ್ತು ಪಾಲು ಭತ್ತಕ್ಕೆ ಮೀಸಲು. ಕೆಂಪು ನದೀಮುಖಜಭೂಮಿಯಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಾರೆ. ಆದರೆ ಮೆಕಾಂಗ್ ನದಿಯ ಕುದುರಿನಲ್ಲೇ ಹೆಚ್ಚು ಫಸಲು. ಇಲ್ಲಿ ಉಪಯೋಗಿಸಿ ಮಿಕ್ಕಿದ್ದು ನಿರ್ಯಾತಕ್ಕೆ ಒದಗುತ್ತದೆ. ಈ ಎರಡು ಪ್ರದೇಶಗಳಲ್ಲೂ ನೀರಾವರಿಯ ಸೌಲಭ್ಯಗಳಿವೆ. ಮುಸುಕಿನ ಜೋಳ, ಕಡಲೆಕಾಯಿ (ಸೇಂಗ), ಕಬ್ಬು, ಹೊಗೆಸೊಪ್ಪು, ಮೆಣಸು ಇವು ಇತರ ಫಸಲುಗಳು. ದನಕರು ಕಡಿಮೆ. ಏಕೆಂದರೆ ಜನಸಂಖ್ಯೆಯ ಒತ್ತಡದ ದೆಸೆಯಿಂದ ಫಲವತ್ತಾದ ಹುಲ್ಲು ನೆಲವೆಲ್ಲ ಆಹಾರಬೆಳೆಗೆ ಬೇಕು. ಪ್ಲಾಂಟೇಷನ್ ವ್ಯವಸಾಯವೂ ತಕ್ಕಮಟ್ಟಿಗೆ ಬೆಳೆದಿದೆ. ರಬ್ಬರ್ ಮುಖ್ಯ ಬೆಳೆ. ಕಾಫಿ, ಚಹ ಇವು ಇನ್ನೆರಡು ಉತ್ಪನ್ನಗಳು. ಮತ್ಸ್ಯೋದ್ಯಮವೂ ಸರ್ವೇಸಾಮಾನ್ಯ. ಅರಣ್ಯೋದ್ಯಮವೂ ಬೆಳೆಯುತ್ತಿದೆ. ಮರಕ್ಕೆ ಕ್ಷಾಮವೊದಗದಂತೆ ಅರಣ್ಯ ಸಂರಕ್ಷಣೆಯ ಕಾರ್ಯವೂ ಮುಂದುವರಿಯುತ್ತಿದೆ. ಮರದ ದಿಮ್ಮಿಗಳನ್ನು ತೆಪ್ಪಗಳಂತೆ ಕಟ್ಟಿ ಅವನ್ನು ನದಿಗಳಲ್ಲಿ ತೇಲಿಬಿಟ್ಟು ಉದ್ದಿಷ್ಟ ಪ್ರದೇಶಗಳಿಗೆ ತಲಪಿಸುತ್ತಾರೆ.
ಗಣಿಗಾರಿಕೆ, ಕೈಗಾರಿಕೆ, ವ್ಯಾಪಾರ, ಸಂಚಾರ ಮಾರ್ಗ
ಬದಲಾಯಿಸಿಕಲ್ಲಿದ್ದಲು, ಸತು, ತವರ, ಕಬ್ಬಿಣ, ಚಿನ್ನ ಮತ್ತು ಫಾಸ್ಫೇಟು ಮುಖ್ಯ ಖನಿಜಗಳು. ಮೊದಲ ಮೂರು ಖನಿಜಗಳು ಹೆಚ್ಚು ಮುಖ್ಯ. ಕೆಂಪು ನದೀಮುಖಜಭೂಮಿಯ ಬಳಿಯಲ್ಲೇ ಕಲ್ಲಿದ್ದಲು ದೊರಕುತ್ತದೆ. ಇಲ್ಲಿ ಕಾರ್ಮಿಕರು ಧಾರಾಳವಾಗಿ ವಾಸಿಸುವುದರಿಂದ ಈ ಪ್ರದೇಶದಲ್ಲಿ ಹತ್ತಿ, ಜವಳಿ, ಸಿಮೆಂಟು, ಮದ್ಯಸಾರ, ಕಾಗದ ಮುಂತಾದ ಕೈಗಾರಿಕೆಗಳು ಬೆಳೆದಿವೆ. ದಕ್ಷಿಣ ವಿಯೆಟ್ನಾಮಿನ ಜೊಲಾನ್ ಎಂಬುದು ಇನ್ನೊಂದು ಮುಖ್ಯ ಕೈಗಾರಿಕಾಕೇಂದ್ರ. ಅಕ್ಕಿಯ ಗಿರಣಿಗಳೂ, ಸಕ್ಕರೆ ಕಾರ್ಖಾನೆಗಳೂ, ಹೊಗೆಸೊಪ್ಪಿನ ಕೈಗಾರಿಕೆಗಳೂ, ಮದ್ಯೋದ್ಯಮಗಳೂ ಇಲ್ಲಿ ಬೆಳೆದಿವೆ. ಯುದ್ಧಕಾಲದಲ್ಲಿ ಜಪಾನೀಯರ ಆಕ್ರಮಣದಿಂದಲೂ ಅನಂತರದ ರಾಜಕೀಯ ಅಸ್ಥಿರತೆಯಿಂದಲೂ ಈ ಪ್ರದೇಶದ ಕೈಗಾರಿಕೆ ಹಾಗೂ ವ್ಯಾಪಾರಕ್ಕೆ ತುಂಬ ಅಡಚಣೆಯೊದಗಿತ್ತ್ತು. ಈಚೆಗೆ ಪರಿಸ್ಥಿತಿ ಬಹಳ ಮಟ್ಟಿಗೆ ಸುಧಾರಿಸಿದೆ. ಅಸಿದ್ಧವಸ್ತು ಅಕ್ಕಿ, ರಬ್ಬರ್, ಕಲ್ಲಿದ್ದಲು ಮತ್ತು ಸಿಮೆಂಟು ಮುಖ್ಯ ನಿರ್ಯಾತಗಳು. ಅನ್ಯದೇಶಗಳಿಂದ ಸಿದ್ಧವಸ್ತುಗಳನ್ನು ತರಿಸಿಕೊಳ್ಳಲಾಗುತ್ತಿದೆ. ವಿದೇಶೀ ವ್ಯಾಪಾರದಲ್ಲಿ ಫ್ರಾನ್ಸಿನದೇ ಸಿಂಹಪಾಲು, ಅಮೆರಿಕ ಸಂಯುಕ್ತಸಂಸ್ಧಾನ, ಚೀನಾ, ಹಾಂಗ್‍ಕಾಂಗ್, ಸಯಾಂ, ಬ್ರಿಟನ್, ಜಪಾನ್, ಮಲಯ ದೇಶಗಳು ಈ ಪ್ರದೇಶದೊಂದಿಗೆ ವ್ಯಾಪಾರ ಮಾಡುವ ಇತರ ರಾಷ್ಟ್ರಗಳು. ನದಿಗಳೇ ಒಳನಾಡಿನ ಮುಖ್ಯ ಸಂಪರ್ಕಸಾಧನ. ಮೆಕಾಂಗ್ ಹಾಗೂ ಕೆಂಪು ನದಿಗಳೂ ಅದರ ಉಪನದಿಗಳೂ ನೌಕಾಸಂಚಾರಕ್ಕೆ ತಕ್ಕಮಟ್ಟಿಗೆ ಅನುಕೂಲಕರ. ಕರಾವಳಿಯ ಉದ್ದಕ್ಕೂ ಅಡ್ಡಕ್ಕೂ ಅನೇಕ ಸರ್ವಋತು ರಸ್ತೆಗಳಿವೆ. ಈ ರಸ್ತೆ ವ್ಯವಸ್ಥೆಯಲ್ಲಿ ಹ್ಯಾನಾಯ್-ಸೈಗಾನಗಳು ಎರಡು ಮುಖ್ಯ ಬಿಂದುಗಳು. ಸೈಗಾನಿನಿಂದ ಹೊರಟು, ಮೆಕಾಂಗ್ ಕಣಿವೆಯನ್ನು ಹಾದು, ಲುವಾಂಗ್ ಪ್ರಬಾಂಗ್ ತಲುಪುವ ಇನ್ನೊಂದು ಭೂಮಾರ್ಗ ವ್ಯವಸ್ಥೆಯಿದೆ. ರೈಲುಮಾರ್ಗವೂ ಸ್ಥೂಲವಾಗಿ ರಸ್ತೆಗಳನ್ನೇ ಅನುಸರಿಸುತ್ತದೆ. ಸೈಗಾನಿನಿಂದ ಚೀನೀ ಸರಹದ್ದಿನವರೆಗೂ ನಾಂಪೆನ್ಹ್‍ನಿಂದ ಸಯಾಮಿನವರೆಗೂ ಇರುವ ಎರಡು ರೈಲುಮಾರ್ಗಗಳು ಮುಖ್ಯ. ರೇವುಪಟ್ಟಣಗಳಲ್ಲಿ ಸೈಗಾನ್ ಮುಖ್ಯ. ಹೈಫಾಂಗ್, ನಾಂಪೆನ್ಹ್ ಇನ್ನೆರಡು ರೇವು ಪಟ್ಟಣಗಳು. ಸೈಗಾನ್, ಹೆನಾಯ್, ಹೈಫಾಂಗ್, ನಾಂ ಫೆನ್ಹ್ ಮುಖ್ಯ ವಿಮಾನ ನಿಲ್ದಾಣಗಳು.
ಜನಸಾಂದ್ರತೆ, ಮತಪದ್ಧತಿ== ಹೆಚ್ಚಿನ ಪ್ರಮಾಣದಲ್ಲಿ ಜೀವನಾಧಾರದ ಬೆಳೆ ತೆಗೆಯುವುದು ಸಾಧ್ಯವಾದ ತಗ್ಗು ನೆಲಪ್ರದೇಶದಲ್ಲಿ ಜನಸಾಂದ್ರತೆ ಅತೀವವಾಗಿದೆ. ಇಡೀ ಜಗತ್ತಿನಲ್ಲೇ ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ ಕೆಂಪುನದೀ ಪ್ರದೇಶವೂ ಒಂದು. ಇಲ್ಲಿ ಜನಸಾಂದ್ರತೆ ಸರಾಸರಿ ಚ.ಮೈ.ಗೆ ಸು. 1,000. ಮಧ್ಯ ವಿಯೆಟ್ನಾಂ ತೀರಪ್ರದೇಶದಲ್ಲಿ ಮೆಕಾಂಗ್ ಮುಖಜಭೂಮಿಯಲ್ಲೂ ಜನಸಾಂದ್ರತೆ ಹೆಚ್ಚು. ಪರ್ವತ ಪ್ರದೇಶದಲ್ಲಿ ಬಹು ವಿರಳ.ಅನ್ನಾಮೀ ಜನ ಹೆಚ್ಚುಸಂಖ್ಯೆಯಲ್ಲಿದ್ದಾರೆ. ತೆಳು ನಿಲುವು, ಹಳದಿ ಬಿಳುಪು ಬಣ್ಣ, ಕಪಾಲದ ಉಬ್ಬು ಮೂಳೆ, ಓರೆಗಣ್ಣು-ಇವು ಈ ಜನರ ಲಕ್ಷಣ. ಇವರ ಭಾಷೆ ಸಂಸ್ಕøತಿಗಳ ಮೇಲೆ ಚೀನೀಯರ ಪ್ರಭಾವ ಹೆಚ್ಚು. ಕನ್ಫ್ಯೂಷಿಯನ್ ಧರ್ಮವನ್ನು ಇವರು ಹೆಚ್ಚಾಗಿ ಅನುಸರಿಸುತ್ತಾರೆ. ಬೌದ್ಧಧರ್ಮೀಯರೂ ಇವರಲ್ಲುಂಟು. ಕಾಂಬೋಡಿಯನ್ನರದು ಕಪ್ಪುಛಾಯೆ, ದಪ್ಪ ಮೈಕಟ್ಟು. ಇವರು ಬೌದ್ಧಧರ್ಮಾವಲಂಬಿಗಳು. ಇವರ ನೃತ್ಯನಾಟಕಗಳಲ್ಲಿ ಬೌದ್ಧಕಥೆಗಳು ಹಾಸುಹೊಕ್ಕಾಗಿವೆ. ಇವರ ಸಂಸ್ಕøತಿಯ ಮೇಲೆ ಹಿಂದೂ ಪ್ರಭಾವವೂ ಉಂಟು. ದಕ್ಷಿಣ ಮಧ್ಯ ಇಂಡೋ-ಚೀನಾದ ಎತ್ತರ ಪ್ರದೇಶದಲ್ಲಿರುವ ಮಾಯ್ ಜನರು ಕುಳ್ಳರು, ತಾಮ್ರವರ್ಣೀಯರು. ಇವರಿಗೆ ಗುಂಗುರು ಕೂದಲೂ ಅಗಲ ಮೂಗೂ ಇವೆ. ಇವರು ಪ್ರಕೃತಿಯ ಆರಾಧಕರು. ಉತ್ತರದ ಪರ್ವತಪ್ರದೇಶದಲ್ಲಿ ಥಾಯ್ ಜನರು ಹೆಚ್ಚಾಗಿದ್ದಾರೆ. ಇವರಿಗೆ ಸಯಾಮೀಯರ ಸಂಬಂಧವಿದೆ. ಇವರದು ಮಧ್ಯಸ್ಥ ನಿಲುವು, ತೆಳುಕಂದು ವರ್ಣ. ಇವರ ಸಂಸ್ಕøತಿಯ ಮೇಲೂ ಚೀನೀ ಪ್ರಭಾವ ಹೆಚ್ಚು. ಇವರಲ್ಲದೆ ಇಲ್ಲಿ ಮಿಯಾವೊ ಮತ್ತು ಲೋಲೊ ಜನಾಂಗಗಳಿಗೆ ಸೇರಿದ ಜನರೂ ಇದ್ದಾರೆ.