ಇಂಗ್ಲೆಂಡಿನ ವಾಸ್ತುಶಿಲ್
(19ನೆಯ ಶತಮಾನದವರೆಗೆ) : ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಿಸಿದ ಸ್ಟೋನ್‍ಹೆಂಜ್ ಮುಂತಾದವುಗಳನ್ನು ಬಿಟ್ಟರೆ, ಇಂಗ್ಲೆಂಡಿನ ಮುಖ್ಯ ವಾಸ್ತುಕೃತಿಗಳು ಆ ದೇಶ ರೋಮ್ ಸಾಮ್ರಾಜ್ಯದ ಅಧೀನದಲ್ಲಿದ್ದ (ಕ್ರಿ. ಪೂ. 54-ಕ್ರಿ. ಶ. 410) ಕಾಲಕ್ಕೆ ಸೇರಿದವುಗಳಾಗಿವೆ. ಈ ಕಾಲದ ಕೆಲವು ಸ್ನಾನದ ಕೊಳಗಳ ಉಳಿಕೆಗಳು ಬಾತ್, ಲೀಸ್ಟರ್, ರಾಚೆಸ್ಟರ್ ಮುಂತಾದ ಕಡೆಗಳಲ್ಲಿ ಅನೇಕ ಕೋಟೆಗಳೂ ಬಿಡಿ ಮನೆಗಳ (ವಿಲ) ಅವಶೇಷಗಳೂ ಲಂಡನ್, ಬಿನ್ನೋರ್, ಸಸಿಕ್ಸ್, ಬ್ರೇಡಿಂಗ್, ವುಡ್‍ಚೆಸ್ಟರ್ ಮುಂತಾದೆಡೆಗಳಲ್ಲೂ ಬೆಳಕಿಗೆ ಬಂದಿವೆ. ಈ ಕಾಲದ ಬಿಡಿಮನೆಗಳು ವಿಶೇಷವಾಗಿ ದಕ್ಷಿಣಕ್ಕೆ ತೆರೆದಂತೆ "U" ಆಕೃತಿಯಲ್ಲಿದ್ದು ಐವತ್ತಕ್ಕೂ ಹೆಚ್ಚು ಕೋಣೆಗಳನ್ನು ಒಳಗೊಂಡಿರುತ್ತಿದ್ದವು.
ಅಲಂಕರನಾ ವಿಧಾನ
ಬದಲಾಯಿಸಿನೆಲವನ್ನು ಸಾಮಾನ್ಯವಾಗಿ ಹಾಸುಹೆಂಚುಗಳಿಂದ ಅಲಂಕರಿಸಲಾಗುತ್ತಿತ್ತು. ಸ್ನಾನದ ಕೊಳ ಮುಂತಾದ ಉಪಯುಕ್ತ ಭಾಗಗಳೂ ಮನೆಯನ್ನು ಶಾಖವಾಗಿಟ್ಟಿರಲು ಮಧ್ಯದಲ್ಲಿ ಒಂದು ಅಗ್ನಿಸ್ಥಾನವೂ ಈ ಕೋಣೆಗಳಲ್ಲಿರುತ್ತಿದ್ದುವು. ರೋಮನ್ ಪಟ್ಟಣಗಳಲ್ಲಿ ವಿಶೇಷವಾಗಿ ಕಂಡುಬರುವ ವರ್ತುಲ ನಾಟಕ ಶಾಲೆ (ಆಂಫಿಥಿಯೇಟರ್) ಮತ್ತು ಸಾಮಾನ್ಯ ನಾಟಕಶಾಲೆಗಳ ಮಾದರಿಯ ಕಟ್ಟಡಗಳ ಅವಶೇಷಗಳು ಕಾಯೆರ್ ವೆಂಟ್, ವೆರುಲೇಮಿಯಮ್ ಮುಂತಾದೆಡೆಗಳಲ್ಲಿವೆ. ಇತ್ತೀಚೆಗೆ ವೆರುಲೇಮಿಯಮ್‍ನಲ್ಲಿ ನಡೆಸಿದ ಉತ್ಖನನದಿಂದ ಸಮಕಾಲೀನ ನಗರ ವಿನ್ಯಾಸವನ್ನು ತಿಳಿಯಬಹುದು. ಆ ಕಾಲದ ಸಾಮಾನ್ಯ ಗೃಹಗಳು ಚದುರಂಗ ಮನೆಗಳಂತೆ ಅಚ್ಚುಕಟ್ಟಾಗಿ ವಿಂಗಡವಾಗಿದ್ದುವು. ಅಲ್ಲದೇ ಅವುಗಳಲ್ಲಿ ಚಳಿಗಾಲದಲ್ಲಿ ಉಪಯುಕ್ತವಾಗುವಂತೆ ಬಿಸಿಗಾಳಿಯನ್ನು ಮನೆಯಲ್ಲೆಲ್ಲ ತುಂಬುವ ವ್ಯವಸ್ಥೆಯೂ ಸ್ನಾನಗೃಹಗಳೂ ಇದ್ದುವು. ನೆಲವೆಲ್ಲ ಚಿತ್ರಿತ ಹಾಸುಹೆಂಚುಗಳಿಂದ ಅಲಂಕೃತವಾಗಿತ್ತು. ಮನೆಗಳು ಸುಂದರವಾಗಿದ್ದುವು. ಕೋಲ್ಚಿಸ್ಟರ್, ಲಂಡನ್ನಿನ ವಾಲ್ ಬ್ರೂಸ್ ಮುಂತಾದೆಡೆಗಳಲ್ಲಿ ಮಿಥ್ರ ದೇವತೆಯ ಗುಡಿಗಳ ಮತ್ತು ಸೆಲ್ಟೆಸ್ಟರ್ ಎಂಬಲ್ಲಿ ಒಂದು ಕ್ರೈಸ್ತ ಇಗರ್ಜಿಯ ಅವಶೇಷಗಳೂ ಉಳಿದಿವೆ. ವಾಸ್ತುವಿನ್ಯಾಸ ಮತ್ತು ಅಲಂಕರಣದಲ್ಲಿ ಈ ಕಾಲದ ಇಂಗ್ಲೆಂಡಿನ ಕಟ್ಟಡಗಳೆಲ್ಲವೂ ಸಮಕಾಲೀನ ರೋಮನ್ ಶೈಲಿಯ ಅನುಕರಣೆಗಳೆಂದೇ ಹೇಳಬಹುದು.
ರೋಮನ್ ಆಳ್ವಿಕೆ
ಬದಲಾಯಿಸಿರೋಮನ್ ಆಳ್ವಿಕೆ ಕೊನೆಗೊಂಡ ಮೇಲೆ ಆಂಗ್ಲೊ-ಸ್ಯಾಕ್ಸನ್ ವಲಸೆಗಾರರ ಆಳ್ವಿಕೆಯ ಕಾಲದಲ್ಲಿ ಕ್ರಿ.ಶ. 597ರ ವರೆಗೆ ಇಲ್ಲಿ ಕಟ್ಟಿರಬಹುದಾದ ಕಟ್ಟಡಗಳ ಬಗ್ಗೆ ಯಾವ ಮಾಹಿತಿಗಳೂ ದೊರಕುವುದಿಲ್ಲ. ಕ್ರಿ.ಶ. 597ರಲ್ಲಿ ಸೇಂಟ್ ಆಗಸ್ಟೀನ್ ಇಂಗ್ಲೆಂಡ್ ಗೆ ಬಂದು ಕೆಂಟ್ ದೊರೆಯನ್ನು ಕ್ರೈಸ್ತಧರ್ಮಕ್ಕೆ ಮತಾಂತರಿಸಿದ ಮೇಲೆ ಕ್ಯಾಂಟರ್‍ಬರಿ (ಸೇಂಟ್ ಪೀಟರ್) ಮತ್ತು ಸೇಂಟ್ ಪಾಲ್, ಕ್ರಿ.ಶ. 597; ಸೇಂಟ್ ಪಾನ್ಕ್ರಾಸ್ ಕ್ರಿ.ಶ.ಸು. 600: ಸೇಂಟ್ ಮೇರಿ, ಕ್ರಿ.ಶ. ಸು. 620, ರಾಚೆಸ್ಟರ್ (ಸೇಂಟ್ ಆಂಡ್ರೂ ಕ್ರಿ.ಶ. 604) ಮುಂತಾದೆಡೆಗಳಲ್ಲಿ ಅನೇಕ ಇಗರ್ಜಿಗಳು ಎದ್ದವು. ನಾರ್ಥಾಂಟ್ಸ್‍ನ ಬ್ರಿಕ್ಸ್‍ವರ್ತ್ ಎಂಬಲ್ಲಿ ಸು. 670ರಲ್ಲಿ ಕಟ್ಟಲಾದ ಒಂದು ದೊಡ್ಡ ಇಗರ್ಜಿ ಇನ್ನೂ ಉಳಿದಿದ್ದು, ಇದು ಆಲ್ಟ್ಸ್‍ನ ಉತ್ತರ ಭಾಗದಲ್ಲಿ ಉಳಿದು ಬಂದಿರುವ, 7ನೆಯ ಶತಮಾನದ ಸ್ಮಾರಕಗಳಲ್ಲಿ ಅತಿ ಭವ್ಯವಾದದ್ದು ಎಂದು ಪ್ರಸಿದ್ಧವಾಗಿದೆ. ಇದು ತಳವಿನ್ಯಾಸದಲ್ಲಿ ಉದ್ದನೆಯ ಚತುರಸ್ರವಾಗಿದ್ದು, ಒಳಭಾಗ ಎರಡು ಸಾಲು ಕಂಬಗಳಿಂದ ಉದ್ದುದ್ದಕ್ಕೆ ಮೂರು ಭಾಗಗಳಾಗಿ ಬೇರ್ಪಟ್ಟಿದೆ. ಇಗರ್ಜಿಯ ಹಿಂಭಾಗ ಅರ್ಧವರ್ತುಲಾಕಾರದಲ್ಲಿದೆ. ಮುಂಭಾಗದಲ್ಲಿ ಮಧ್ಯ ಹಜಾರದ ಮೂರು ವಿಭಾಗಗಳಿಗೆ ಸರಿಯಾಗಿ ಮೂರು ಕಮಾನುಗಳಿವೆ. ಚಾವಣಿಯನ್ನು ಮರದಲ್ಲಿ ಮಾಡಿದೆ. 7ನೆಯ ಶತಮಾನದ ಉತ್ತರಾರ್ಧದಲ್ಲಿ ಬೆನೆಡಿಕ್ಟ್ ಇಸ್ಕೋಪ್ ಎಂಬುವನು ಕಟ್ಟಿಸಿದ ಇಗರ್ಜಿಗಳು ನಾರ್ಥಾಂಬ್ರಿಯದ ಮಾಂಕ್ ವಿಯರ್ ಮೌತ್, ಜಾರೊ ಮತ್ತು ಎಸ್ಕಾಂಬ್‍ಗಳಲ್ಲಿದೆ. ಈ ಕಾಲದ ಕಟ್ಟಡಗಳೆಲ್ಲ ವಿನ್ಯಾಸದಲ್ಲಿ ಬ್ರಿಕ್ಸ್‍ವರ್ತ್ ಇಗರ್ಜಿಯ ರೀತಿಯಲ್ಲಿ ಸರಳವಾಗಿಯೇ ಇವೆ. ತ್ರಿಕೋನ, ವಜ್ರ, ಪಟ್ಟಿ, ಚದುರಂಗ ಮನೆ ಮುಂತಾದ ಜ್ಯಾಮಿತಿಕ ಆಕೃತಿಗಳು, ನಡುನಡುವೆ ಏರುವ ಬಳ್ಳಿ, ಭಯಂಕರ ಪ್ರಾಣಿಗಳ ಚಿತ್ರಗಳು- ಇವಿಷ್ಟಕ್ಕೇ ಇವುಗಳ ಅಲಂಕರಣ ಸೀಮಿತ, ಕ್ರಿ. ಶ. 8-9ನೆಯ ಶತಮಾನಗಳಲ್ಲಿ ಡೇನ್ ಜನರ ಆಕ್ರಮಣಗಳಿಂದಾಗಿ ಇಂಗ್ಲೆಂಡಿನಲ್ಲಿ ಇಗರ್ಜಿಗಳ ನಿರ್ಮಾಣ ಸ್ಥಗಿತವಾಗಿತ್ತು.[೧]
ರೋಮನೆಸ್ಕ್ ಶೈಲಿ
ಬದಲಾಯಿಸಿಯೂರೋಪಿನಲ್ಲಿ ಪ್ರಚಲಿತವಾಗಿದ್ದ ರೋಮನೆಸ್ಕ್ ಶೈಲಿಯನ್ನೇ ಆಧರಿಸಿದ ಅನೇಕ ಇಗರ್ಜಿಗಳು ಕ್ರಿ.ಶ. 10ನೆಯ ಶತಮಾನದ ಆರಂಭದಿಂದ ಇಂಗ್ಲೆಂಡಿನಲ್ಲಿ ನಿರ್ಮಾಣವಾದುವು. ಈ ಇಗರ್ಜಿಗಳ ತಳವಿನ್ಯಾಸ ಸಾಮಾನ್ಯವಾಗಿ ಉದ್ದನೆಯ ಚತುರಸ್ರವಾಗಿದ್ದು ಎರಡು ಕಂಬಸಾಲುಗಳಿಂದ ಉದ್ದುದ್ದವಾಗಿ ಮೂರು ಭಾಗಗಳಾಗಿದೆ. ಇದರ ಹಿಂಭಾಗ ಅರ್ಧವೃತ್ತಾಕಾರದಲ್ಲಿದೆ. ಪೂಜ್ಯವಸ್ತುವನ್ನು ಸ್ಥಾಪಿಸಲು ಇದು ಪ್ರಶಸ್ತವಾದ ಭಾಗ. ಮುಂಭಾಗದಲ್ಲಿ ಮೂರು ಕಮಾನು ಬಾಗಿಲುಗಳಿರುತ್ತವೆ. ಕೆಲವು ಕಡೆಗಳಲ್ಲಿ ಉದ್ದನೆಯ ಹಜಾರವನ್ನು ಮಧ್ಯದಲ್ಲಿ ಕತ್ತರಿಸುವಂತೆ ಇನ್ನೊಂದು ಉದ್ದ ಚತುರಸ್ರಾಕಾರದ ಅಡ್ಡ ಹಜಾರವಿದೆ. ಒಟ್ಟು ತಳವಿನ್ಯಾಸವೇ ಶಿಲುಬೆಯಾಕೃತಿಯಲ್ಲಿರುತ್ತದೆ. ಬಾಗಿಲುಗಳು ಮತ್ತು ಕಿಟಕಿಗಳ ಮೇಲೆ ಅರ್ಧವೃತ್ತದ ಮೇಲು ಕಮಾನುಗಳಿವೆ. ಕೆಲವು ಇಗರ್ಜಿಗಳಲ್ಲಿ ಎತ್ತರದ ಗೋಪುರಗಳೂ ಇರುತ್ತವೆ. ಮೇಲ್ಛಾವಣಿ ಬಹುಮಟ್ಟಿಗೆ ಪೀಪಾಯಿಯಾಕೃತಿಯದು. ಅನೇಕ ಜ್ಯಾಮಿತಿಕ ವಿನ್ಯಾಸಗಳಿರುವ ಪಟ್ಟಿಕೆಗಳು, ಒಂದಕ್ಕೊಂದು ಹೆಣೆದುಕೊಂಡಂತಿರುವ ಕಮಾನು ನಮೂನೆಗಳ ಸಾಲು ಈ ಕಾಲದ ಮುಖ್ಯ ಅಲಂಕರಣ ರೂಪಗಳು. ಕಂಬ, ದ್ವಾರ ಮುಂತಾದವುಗಳ ಮೇಲೆ ಈ ಕಮಾನುಗಳು ವಿಶೇಷವಾಗಿ ಇರುತ್ತವೆ. ಇಂಗ್ಲೆಂಡಿನಲ್ಲಿ ಕ್ರಿ.ಶ 1066ರ ನಾರ್ಮನ್ ಆಕ್ರಮಣದ ವರೆಗಿನ ವಾಸ್ತುಕೃತಿಗಳನ್ನು ಒಂದು ಘಟ್ಟದವೆಂದೂ ಅನಂತರ ಕ್ರಿ.ಶ. ಸು. 1200ರ ವರೆಗಿನ ಕೃತಿಗಳನ್ನು ಇನ್ನೊಂದು ಘಟ್ಟದವೆಂದೂ ಪರಿಗಣಿಸುವ ರೂಢಿಯಿದೆ. ಮುಂದೆ ಸ್ಯಾಕ್ಸನ್ ಮತ್ತು ನಾರ್ಮನ್ ಎಂದು ಕರೆಯಲಾಗುತ್ತಿದ್ದ ಈ ಎರಡು ಘಟ್ಟಗಳನ್ನೂ ಇತ್ತೀಚೆಗೆ ಆಕ್ರಮಣ ಪೂರ್ವ ರೋಮನೆಸ್ಕ್ ಮತ್ತು ಆಕ್ರಮಣಾ ನಂತರದ ರೋಮನೆಸ್ಕ್ ಶೈಲಿಗಳೆಂದು ವಿಂಗಡಿಸಿದ್ದಾರೆ. ಆಕ್ರಮಣಪೂರ್ವ ರೋಮನೆಸ್ಕ್ ಶೈಲಿಯ ಒಳ್ಳೆಯ ಉದಾಹರಣೆಗಳು ಗ್ಲಾಸ್ಟರ್ಷೈರ್ ಪ್ರಾಂತ್ಯದ ಡೀರ್ ಹರ್ಸ್ಟ್. ವಿಲ್ಟ್ ಪ್ರಾಂತ್ಯದ ಬ್ರಾಡ್ ಫರ್ಡ್-ಆನ್-ಏವನ್, ಬಕಿಂಗ್ ಹ್ಯಾಮ್‍ಷೈರ್ ಪ್ರಾಂತ್ಯದ ವಿಂಗ್, ಸಸಿಕ್ಸ್ ಪ್ರಾಂತ್ಯದ ವರ್ಥ್, ಬೊಶಾಮ್, ಸೋಂಪ್ಟಿಂಗ್, ನಾರ್ಥಾಂಟ್ಸ್ ಪ್ರಾಂತ್ಯದ ವಿಟರಿಂಗ್, ಆಲ್ರ್ಸ್ ಬಾರ್ಟನ್ ಮುಂತಾದ ಊರುಗಳಲ್ಲಿವೆ. ವೆಸ್ಟ್ ಮಿನ್ಸ್ಟರ್‍ನ ಮೊದಲ ಇಗರ್ಜಿ (ಕ್ರಿ.ಶ. 1050-1065) ಸಹ ಇದೇ ಶೈಲಿಯದೇ. ಕ್ಯಾಂಟರ್‍ಬರಿ ಇಗರ್ಜಿಯಲ್ಲಿ ಉಳಿದಿರುವ ಸುಂದರ ನಮೂನೆಯ ಕಲೆ ಗಾಜು ಮತ್ತು ಹಿಲ್ಡೆಶೀಮ್ ಇಗರ್ಜಿಯಲ್ಲಿರುವ ಕಂಚಿನ ದ್ವಾರ ಈ ಕಾಲದ ವಸ್ತುಶಿಲ್ಪ ಸಂಬಂಧದ ಇತರ ಕಲಾಕೃತಿಗಳು. ನಾರ್ಮನ್ನರ ಕಾಲದ (1060-1200) ಆಕ್ರಮಣಾನಂತರದ ರೋಮನೆಸ್ಕ್ ಶೈಲಿಯ ಇಗರ್ಜಿಗಳು ಚಚೆಸ್ಟರ್, ಡರ್ಹಾಮ್, ಎಲಿ, ಮೆಲ್ಬೋರ್ನ್, ಆಡೆಲ್ ಮುಂತಾದೆಡೆಗಳಲ್ಲಿವೆ. ಫಾದರ್ ಆಫ್ ಲಂಡನ್ನಿನಲ್ಲಿರುವ ಒಂದು ಚಿಕ್ಕ ಇಗರ್ಜಿ ಸಹ ಇದೇ ಗುಂಪಿನದು. ಇಗರ್ಜಿಗಳ ಜೊತೆಗೆ ಈ ಕಾಲದ ಹಲವು ಕೋಟೆಮನೆಗಳು (ಕ್ಯಾಸಲ್) ಸಹ ಉಳಿದುಬಂದಿವೆ. ಈ ಕಾಲದಲ್ಲಿ ಅನೇಕ ಮಾಗಣೆಗಳಿದ್ದು ಒಂದೊಂದು ಮಾಗಣೆಯ ಸರದಾರನೂ ಒಂದೊಂದು ಕೋಟೆಮನೆಯನ್ನು ಕಟ್ಟಿಕೊಳ್ಳುತ್ತಿದ್ದನು. ಇವೆಲ್ಲ ಸಾಮಾನ್ಯವಾಗಿ ಕಲ್ಲುಕಟ್ಟಡಗಳಾಗಿದ್ದು, ಕೋಟೆ ಗೋಡೆ ಮತ್ತು ಕಂದಕದಿಂದ ಆವೃತವಾಗಿರುತ್ತಿದ್ದುವು. ಒಳಭಾಗದಲ್ಲಿ ಸೈನಿಕರ ನೆಲೆಗಳೂ ಸರದಾರನ ವಾಸಗೃಹವೂ ಇರುತ್ತಿದ್ದುವು. ಈ ಕೋಟೆಮನೆಗಳು ಅನೇಕ ತರಹವಾಗಿದ್ದು, ಇವುಗಳ ಕಟ್ಟುವಿಕೆಯಲ್ಲಿ ಸಮಕಾಲೀನ ಕಟ್ಟಡಗಳ ಅನುಕರಣೆ ಕಂಡುಬರುತ್ತದೆ. (ನೋಡಿ- ಕೋಟೆ). ಇವುಗಳ ಮುಖ್ಯ ವಿಧಗಳನ್ನು ತೆಟ್‍ಫರ್ಡ್ (ದಿಬ್ಬದ ರೀತಿ-ಮಾಲ್ವಿ ಟೈಪ್), ಆರ್ಫರ್ಡ್ (ದ್ವಾದಶಭುಜರೀತಿ-ಟ್ವ್ವೆಲ್ವ್ ಡೆಡ್ ಕೀಪ್ ಟೈಪ್), ಕ್ಯಾನಿಸ್‍ಬರೋ, ಪೆಂಬ್ರೋಕ್ಗಳಲ್ಲಿ (ವರ್ತುಲರೀತಿ -ರೌಂಡ್ ಟೈಪ್) ಕಾಣಬಹುದು.[೨]
ಗಾಥಿಕ್ ಶೈಲಿ
ಬದಲಾಯಿಸಿಈ ಕಾಲದ ಕೊನೆಯ ಭಾಗದಲ್ಲಿ, ರೋಮನೆಸ್ಕ್ ಶೈಲಿಯಲ್ಲಿ ಸಾಮಾನ್ಯವಾಗಿದ್ದ ಅರ್ಧವೃತ್ತದ ಕಮಾನಿನ ಬದಲು ಚೂಪು ಕಮಾನುಗಳು ಬಳಕೆಗೆ ಬಂದು ಗಾಥಿಕ್ ಎಂಬ ಹೊಸ ವಾಸ್ತುಶೈಲಿಗೆ ಎಡೆ ಮಾಡಿಕೊಟ್ಟಿತು. ಈ ಕಾಲದವರೆಗೆ ಹೆಚ್ಚು ಕಡಿಮೆ ಜೊತೆಜೊತೆಯಾಗಿ ಬೆಳೆದ ಇಂಗ್ಲಿಷ್ ಮತ್ತು ಫ್ರೆಂಚ್ ವಾಸ್ತು ಶೈಲಿಗಳು ಇಲ್ಲಿಂದ ಕ್ರಮೇಣ ವ್ಯತ್ಯಸ್ತಗೊಳ್ಳಲಾರಂಭಿಸುತ್ತವೆ. ಇಂಗ್ಲಿಷ್ ಗಾಥಿಕ್ ಶೈಲಿಯಲ್ಲಿ ಮೂರು ಘಟ್ಟಗಳಿವೆ : 1 ಪ್ರಾಚೀನ ಇಂಗ್ಲಿಷ್ ಅಥವಾ ಮೊದಲ ಚೂಪು ಶೈಲಿ (ಸು. 1220-1300), 2 ಅಲಂಕೃತ ಅಥವಾ ಮಧ್ಯಸ್ಥ ಚೂಪು ಶೈಲಿ (ಸು. 1300-1370). 3 ಲಂಬ ಅಥವಾ ಅನಂತರದ ಚೂಪು ಶೈಲಿ (ಸು. 1370-1540). ಈ ಘಟ್ಟಗಳತ್ತ ಬದಲಾವಣೆಗಳು ಕ್ರಮ ಕ್ರಮವಾಗಿ ಜರುಗುವುದರಿಂದ, ಕೆಲವು ವಾಸ್ತುಕೃತಿಗಳಲ್ಲಿ ಹಳೆಯ ಮತ್ತು ಹೊಸ ಶೈಲಿಯ ಅಂಶಗಳು ಜೊತೆಗೂಡಿದ್ದು ಇವು ಗಾಥಿಕ್ ಶೈಲಿಯ ಇಂಥ ವಿಭಾಗಕ್ಕೇ ಸೇರಿದ್ದೆಂದು ನಿಖರವಾಗಿ ಹೇಳಲು ಕಷ್ಟವಾಗುತ್ತದೆ. ಇಂಗ್ಲಿಷ್ ಗಾಥಿಕ್ ಶೈಲಿಯಲ್ಲಿ ಇಗರ್ಜಿಗಳು ಬಹಳ ಉದ್ದವಾಗಿರುತ್ತವೆ. (ಮಧ್ಯ ಗಾಥಿಕ್ ಚರ್ಚುಗಳಲ್ಲಿ ಅತ್ಯಂತ ದೊಡ್ಡದಾದ ವಿಂಚೆಸ್ಟರ್ ಇಗರ್ಜಿ 556' ಉದ್ದವಿದೆ.) ಅವುಗಳ ಅಗಲ ಆ ಉದ್ದದ ಪ್ರಮಾಣಕ್ಕೆ ಬಹಳ ಕಿರಿದು. ಈ ಇಗರ್ಜಿಗಳು ಸಾಮಾನ್ಯವಾಗಿ ಪೂರ್ವಮುಖವಾಗಿದ್ದು ಹಿಂಭಾಗದ ಕೊನೆ ಫ್ರಂಚ್ ಗಾಥಿಕ್‍ನಂತೆ ವರ್ತುಲವಾಗಿರದೆ, ಸಾಮಾನ್ಯವಾಗಿ ಚಚ್ಚೌಕವಾಗಿರುತ್ತದೆ. ಉದ್ದನೆಯ ಹಜಾರ ಎರಡು ಕಮಾನುಸಾಲುಗಳಿಂದ ಮೂರು ಭಾಗಗಳಾಗಿ ನೇರ ನೇರವಾಗಿ ವಿಭಜಿಸಲ್ಪಟ್ಟಿರುತ್ತದೆ. ಈ ಉದ್ದ ಭಾಗವನ್ನು ಸುಮಾರು ಸಮಾರ್ಧಕ್ಕೆ ಕತ್ತರಿಸುವಂತೆ, ಉದ್ದನೆಯ ಅಡ್ಡ ಕಟ್ಟಡವೊಂದಿದ್ದು ತಳವಿನ್ಯಾಸ ಮುಖ್ಯವಾಗಿ ಶಿಲುಬೆಯಾಕೃತಿ ತಾಳಿರುತ್ತದೆ. ಇಂಥದೇ ಚಿಕ್ಕ ಚಿಕ್ಕ ಅಡ್ಡಕಟ್ಟಡಗಳು ಅದರ ಮುಂಭಾಗದಲ್ಲಿ ಇರುವುದೂ ಉಂಟು (ನೋಡಿ- ಗಾತಿಕ್-ವಾಸ್ತು-ಶೈಲಿ). ಗಾಥಿಕ್ ಕಾಲದ ಕೊನೆಯ ವರೆಗೂ ಕಟ್ಟಡಗಳ ತಳವಿನ್ಯಾಸ ಅಷ್ಟಾಗಿ ಬದಲಾಯಿಸದಿದ್ದರೂ ಮೇಲೆ ಕಾಣಿಸಿದ ಶೈಲಿಯ ವಿಭಾಗಗಳನ್ನು ಇತರ ಅಂಶಗಳಿಂದ ಗಮಿನಿಸಬಹುದು. ದಪ್ಪಗೋಡೆಗಳು, ಪೀಪಾಯಿಯಾಕಾರದಲ್ಲಿ ಹೆಚ್ಚು ಬಾಗಿದ ದಪ್ಪ ಛಾವಣಿ, ಚಿಕ್ಕ ಮಟ್ಟಸ ಒದೆಗಂಬಗಳು ಮತ್ತು ಕಿರಿದಾದ ಕಿಟಕಿಗಳು ಗಾಥಿಕ್‍ನ ಮೊದಲ ಹಂತದ ಕೃತಿಗಳಲ್ಲಿದ್ದರೆ, ಮುಂದಿನ ಘಟ್ಟದಲ್ಲಿ ಒದೆಗಂಬಗಳು ದಪ್ಪವಾಗಿ ಗೋಡೆಗಳು ತೆಳುವಾಗಿರುವುದಲ್ಲದೆ ಮೇಲ್ಛಾವಣಿಯೂ ತೆಳುವಾಗಿ ಶಿಲೆಯ ಅಡ್ಡ ಪಟ್ಟಿಗಳ ಮೇಲೆ ಎತ್ತಲಾಗಿರುತ್ತದೆ. ಈ ಕಾಲದ ಕಿಟಕಿಗಳೂ ಅಗಲವಾಗಿ ಸುಂದರವಾಗಿ ಅಲಂಕೃತವಾಗಿರುತ್ತವೆ. ಕೊನೆಕೊನೆಯ ಹೊತ್ತಿಗೆ ಚಾವಣಿ ಬಹಳ ತೆಳುವಾಗಿ ಅದರ ಭಾರವೆಲ್ಲ ಶಿಲೆಯ ದಪ್ಪ ತೊಲೆಗಳ ಮೇಲಿದ್ದು. ಅವುಗಳನ್ನು ದಪ್ಪ ಒದೆಗಂಬಗಳು ಹೊತ್ತಿರುತ್ತವೆ. ಗೋಡೆ ಬಹಳ ತೆಳುವಾಗಿ, ಬಹಳಮಟ್ಟಿಗೆ ಅನೇಕ ಗಾಜಿನ ಫಲಕಗಳಿಂದ ಅಲಂಕೃತವಾದ ತೆಳು ತೆರೆಯಂತೆ ಕಾಣುತ್ತವೆ. ಒದೆಗಂಬಗಳ ಮೇಲೆ ಶಿಖರಗಳನ್ನು ಎತ್ತಿರುವುದು ಈ ಶೈಲಿಯ ಒಂದು ವೈಶಿಷ್ಟ್ಯ. ಸ್ಯಾಲಿಸ್ಟರಿ, ಲಿಂಕನ್, ಸೌತ್‍ವರ್ಕ್, ಸೌತ್‍ವೆಲ್, ವೋರ್ಸೆಸ್ಟರ್ನ ಇಗರ್ಜಿಗಳು. ಡರ್ಹಾಮ್‍ನ ಚಾಪಲ್ ಆಫ್ ನೈನ್ ಆಲ್ಟಾರ್ಸ್. ಲಂಡನ್ನಿನ ವೆಸ್ಟ್ ಮಿನ್ಸ್ಟರ್ ಅಬೆ ಮತ್ತು ಟೆಂಪಲ್ ಚರ್ಚ್‍ನ ಕೆಲವು ಭಾಗಗಳು ಇಂಗ್ಲಿಷ್ ಗಾಥಿಕ್ ಶೈಲಿಯ ಮೊದಲ ಘಟ್ಟಕ್ಕೆ ಒಳ್ಳೆಯ ಉದಾಹರಣೆಗಳು. ಎಕ್ಸೆಟರ್, ಲಿಚ್ ಫೀಲ್ಡ್, ಬ್ರಿಸ್ಟಲ್, ಲಿಂಕನ್, ಸ್ಯಾಲಿಸ್ಟರಿ, ಮುಂತಾದೆಡೆಗಳಲ್ಲಿರುವ ಇಗರ್ಜಿಗಳ ಅನೇಕ ಭಾಗಗಳು ಗಾಥಿಕ್‍ನ ಎರಡನೆಯ ಘಟ್ಟದ ಶೈಲಿಯಲ್ಲಿವೆ. ಕ್ಯಾಂಟರ್ಬರಿ, ಮ್ಯಾಂಚೆಸ್ಟರ್ ಮತ್ತು ವಿಂಚೆಸ್ಟರ್ ಇಗರ್ಜಿಗಳ ಮುಖ್ಯ ಭಾಗಗಳೂ ಷರ್ಬಾರ್ನ್‍ನ ಇಗರ್ಜಿ, ವಿಂಡ್ಸರ್‍ನ ಸೇಂಟ್ ಜಾರ್ಜ್ ಚಾಪೆಲ್, ಕೇಂಬ್ರಿಜ್ನ ಕಿಂಗ್ಸ್ ಕಾಲೇಜ್ ಚಾಪೆಲ್, ವೆಸ್ಟೆ ಮಿನ್ಸ್ಟರ್ ಹಾಲ್‍ನ ಚಾವಣಿ. ಆಕ್ಸ್‍ಫರ್ಡ್ ಮತ್ತು ಕೇಂಬ್ರಿಜ್‍ಗಳಲ್ಲಿನ ಹಳೆಯ ಕಾಲೇಜು ಕಟ್ಟಡಗಳು ಗಾಥಿಕ್‍ನ ಮೂರನೆಯ ಘಟ್ಟದ ಶೈಲಿಯಲ್ಲಿವೆ.
ಇಟಲಿಯ ಪ್ರಭಾವ
ಬದಲಾಯಿಸಿಕ್ರಿ.ಶ. 16ನೆಯ ಶತಮಾನದ ಆದಿಭಾಗದಲ್ಲಿ ಇಟಲಿಯ ಪುನರುಜ್ಜೀವನ ಕಾಲದ ಕಲೆ ಇಂಗ್ಲೆಂಡಿನ ಮೇಲೆ ಪ್ರಭಾವ ಬೀರಲಾರಂಭಿಸಿತು. ಇಲ್ಲಿನ ವಾಸ್ತುಕೃತಿಗಳಲ್ಲಿ ಇದರ ಪ್ರಭಾವ ಮೊದಮೊದಲು ಅಲಂಕರಣಕ್ಕಷ್ಟೇ ಸೀಮಿತವಾಗಿದ್ದು, ಕ್ರಮೇಣ ಇತರ ಅಂಶಗಳಲ್ಲೂ ಹೆಚ್ಚಾಗಿ ಕಂಡುಬರುತ್ತದೆ. ಇಂಗ್ಲೆಂಡಿನ 16ನೆಯ ಶತಮಾನದ ವಾಸ್ತುಕಲೆಯನ್ನು ಟ್ಯೂಡರ್ ಶೈಲಿ (16ನೆಯ ಶತಮಾನದ ಆದಿಯಿಂದ ಸು. 1558ರ ವರೆಗೆ). ಎಲಿಜಬೀತನ್ ಶೈಲಿ (1158-1603) ಮತ್ತು ಜಾಕೋಬಿಯನ್ ಶೈಲಿಯೆಂದು (1603-1630) ಮೂರು ಭಾಗಗಳಾಗಿ ವಿಭಜಿಸಲಾಗಿದೆ. ಆದರೆ ಈ ರೀತಿಯ ವಿಭಾಗ ಬಹಳ ನಿಖರವಾದದ್ದೇನೂ ಅಲ್ಲ. ಹಲಕೆಲವು ಕಟ್ಟಡಗಳಲ್ಲಿ ಬೇರೆ ಬೇರೆ ಉಪಶೈಲಿಗಳ ಅಂಶಗಳು ಒಂದೇ ಕಡೆ ಕಾಣಸಿಗುವುದು ವಿರಳವೇನಲ್ಲ. ಕ್ರಿ.ಶ. 1540-1600ರವರೆಗಿನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಧಾರ್ಮಿಕ ಆಂದೋಲನಗಳು ತಲೆಯೆತ್ತಿದ್ದರಿಂದಲೂ ಮಧ್ಯಕಾಲೀನ ಇಗರ್ಜಿಗಳು ಬಹು ಸಂಖ್ಯೆಯಲ್ಲಿದ್ದುದರಿಂದಲೂ ಆಗ ಇಗರ್ಜಿಗಳ ನಿರ್ಮಾಣ ಬಹುವಾಗಿ ನಿಂತು ಹೋಗಿತ್ತೆಂದೇ ಹೇಳಬಹುದು. (ಆದರೆ ಲೀಪ್ಸ್ ಎಂಬಲ್ಲಿ ಈ ಹೇಳಿಕೆಗೆ ಅಪವಾದವೆಂಬಂತೆ ಆ ಕಾಲದ ಇಗರ್ಜಿಯೊಂದಿಗೆ) ವಿಶಿಷ್ಟ ರೀತಿಯ ಮನೆಗಳ ಶಾಲೆಗಳ ಮತ್ತು ಕಾಲೇಜುಗಳ ಕಟ್ಟಡಗಳು ಬಹುವಾಗಿ ಬೆಳೆದದ್ದು ಈ ಕಾಲದ ವೈಶಿಷ್ಟ್ಯ.
ಟ್ಯೂಡರ್ ಶೈಲಿ
ಬದಲಾಯಿಸಿಟ್ಯೂಡರ್ ಶೈಲಿಯ ಕಟ್ಟಡಗಳು ಗಾಥಿಕ್ ಮಾದರಿಯಲ್ಲೇ ಇದ್ದರೂ ಅಲಂಕರಣೇತ್ಯಾದಿಗಳಲ್ಲಿ ಇಟಾಲಿಯನ್ ಕಲೆಯ ಅಂಶಗಳು ಸ್ವಲ್ಪಮಟ್ಟಿಗೆ ಅನುಸರಿಸಿವೆ. ಹ್ಯಾಂಪ್ಟನ್ ಕೋರ್ಟಿನಲ್ಲಿರುವ ಅರಮನೆ (ಸು. 1520). ವೆಸ್ಟ್‍ಮಿನ್‍ಸ್ಟರ್ ಅಬೆಯಲ್ಲಿರುವ ಏಳನೆಯ ಹೆನ್ರಿಯ ಗೋರಿ (1512), ಹ್ಯಾಂಪ್‍ಷೈರಿನಲ್ಲಿರುವ ಟಿಚ್‍ಫೀಲ್ಡ್ ಅರಮನೆ ಈ ಶೈಲಿಯ ಕಟ್ಟಡಗಳು.ಮೊದಲನೆಯ ಎಲಿಜಬೆತ್ ರಾಣಿಯ ಕಾಲದಲ್ಲಿ ಇಟಲಿಯ ವಾಸ್ತುಶಿಲ್ಪದ ಅಂಶÀಗಳನ್ನು ಹೆಚ್ಚು ಹೆಚ್ಚಾಗಿ ಅನುಸರಿಸಿರುವುದಲ್ಲದೆ, ಕಟ್ಟಡಗಳ ವಿನ್ಯಾಸದಲ್ಲಿ ಉತ್ತಮ ಪ್ರಮಾಣ ಮತ್ತು ಅಚ್ಚು ಕಟ್ಟುತನ ಎದ್ದು ಕಾಣುತ್ತದೆ. ಕೇಂಬ್ರಿಜ್‍ನ ಗೋನ್ವಿಲ್ ಕಾಲೇಜಿನ ಪ್ರಾಂಗಣ ಈ ಘಟ್ಟದ ವಾಸ್ತುಕೃತಿಗೆ ಒಳ್ಳೆಯ ಉದಾಹರಣೆ. ಈ ಕಾಲದ ಸರ್ ಜಾನ್ ಥೈನ್ ರಾಬರ್ಟ್ ಸ್ಮಿತ್ಸನ್ ಮುಂತಾದ ಪ್ರಸಿದ್ಧ ಶಿಲ್ಪಿಗಳು ರೂಪಿಸಿದ ಅನೇಕ ಮನೆಗಳು ಉಳಿದುಬಂದಿವೆ. ಲಾಂಗ್ಲಿಯೆಟ್ ಎಂಬಲ್ಲಿರುವ ಥೈನ್‍ನ ಸ್ವಂತ ಮನೆ ಬಹು ಉತ್ತಮ ಕೃತಿ. ಸ್ಮಿತ್ಸನ್ ರೂಪಿಸಿದ ವೋರ್ಲ್‍ಟನ್‍ನ ಮನೆ. ಇಟಲಿಯ ಸೆರ್ಲಿಯೋ ಎಂಬ ಶಿಲ್ಪಿ ತನ್ನ ಪುಸ್ತಕವೊಂದರಲ್ಲಿ ರೂಪಿಸಿದ್ದ ಒಂದು ವಿನ್ಯಾಸದಲ್ಲೇ ಇದೆ. ಇದು ಇಂಗ್ಲೆಂಡಿನ ಶಿಲ್ಪಿಗಳು ಇಟಲಿ ವಾಸ್ತುಶೈಲಿಗೆ ಎಷ್ಟರ ಮಟ್ಟಿಗೆ ಋಣಿಗಳಾಗಿದ್ದರೆಂಬ ಅಂಶವನ್ನು ಸ್ಪಷ್ಟಪಡಿಸುತ್ತದೆ. ಡರ್ಬಿಷೈರ್‍ನಲ್ಲಿರುವ ಹಾರ್ಡ್‍ವಿಕ್ ಹಾಲ್ (1590-97), ನಾರ್ಥಾಂಪ್ಪನ್ನಿನಲ್ಲಿರುವ ಕಿರ್ಬಿಹಾಲ್, ಸಾಮರ್ಸೆಟ್‍ನಲ್ಲಿರುವ ಮೊಂಟಾಕೊಟ್ ಮನೆ ಈ ಶೈಲಿಯ ಇತರ ಗಮನಾರ್ಹ ಕೃತಿಗಳು.ಜಾಕೋಬಿಯನ್ ಶೈಲಿ ಬಹುಮಟ್ಟಿಗೆ ಒಂದನೆಯ ಜೇಮ್ಸನ ಕಾಲದಲ್ಲಿ ಪ್ರಚಲಿತವಾಗಿತ್ತು. ಇದೂ ಸಹ ಬಹಳವಾಗಿ ಟ್ಯೂಡರ್ ರೀತಿಗೆ ಸೇರಿದ್ದಾದರೂ ಇದರ ಅಲಂಕರಣದಲ್ಲಿ ರೋಮನ್ ಶೈಲಿಯ ಅರ್ಥವಿಲ್ಲದ ಅನುಕರಣೆಗಳು ವಿಶೇಷವಾಗಿ ಕಾಣುತ್ತದೆ. ಆಕ್ಸ್‍ಫರ್ಡ್ ಕೇಂಬ್ರಿಜ್‍ಗಳ ಅನೇಕ ಕಾಲೇಜುಗಳು ಈ ಶೈಲಿಯಲ್ಲಿವೆ.[೩]
ಪುನರುಜ್ಜೀವನ ಶೈಲಿ
ಬದಲಾಯಿಸಿಇಂಗ್ಲೆಂಡಿನ ವಾಸ್ತುಕಲೆಯ ನಿಜವಾದ ಪುನರುಜ್ಜೀವನ ಶೈಲಿ 1615ರಿಂದ ಪ್ರಾರಂಭವಾಗುತ್ತದೆ. ಆ ವರ್ಷದಲ್ಲಿ ಇನಿಗೊ ಜೋನ್ಸ್ ಎಂಬುವನು ಅರಮನೆಯ ಶಿಲ್ಪಿಯಾಗಿ ನೇಮಿತನಾದ. ಇವರನ್ನು ತನ್ನ ಅಧಿಕಾರ ಕಾಲದಲ್ಲಿ ರೂಪಿಸಿದ ಕಟ್ಟಡಗಳೆಲ್ಲ್ಲವೂ ಪೂರ್ಣವಾಗಿ ಇಟಲಿಯ ಸುಂದರ ಪುನರುಜ್ಜೀವನ ಶೈಲಿಯಲ್ಲೇ ಇದ್ದು ಮುಂದಿನ ಇಂಗ್ಲೆಂಡ್ ವಾಸ್ತುಕೃತಿಗಳಿಗೆ ಮಾದರಿಗಳಾದವು. ಗ್ರಿನಿಜೆನಲ್ಲಿರುವ ರಾಣಿಯ ಮನೆ (1617-1635), ಲಂಡನ್ನಿನ ವೈಟ್‍ಹಾಲ್‍ನಲ್ಲಿರುವ ಭೋಜನಗೃಹ (1611-1622) ಇವನ ಅಮೋಘ ನಿರ್ಮಾಣಗಳು. ಇವು ಇಂಗ್ಲೆಂಡಿನ ವಾಸ್ತುಶಿಲ್ಪ ಬೆಳವಣಿಗೆಯ ಗತಿಯನ್ನೇ ಬದಲಾಯಿಸಿದುವು. ಇಂಗ್ಲೆಂಡಿನ ಹಳೆಯ ಗಾಥಿಕ್ ಶೈಲಿ ನಿಧಾನವಾಗಿ ಮರೆಯಾಗಿ ಕ್ರಿ.ಶ. 19ನೆಯ ಶತಮಾನದ ವರೆಗೂ ಇನಿಗೊ ಜೋನ್ಸ್ ನಿಂದ ಉದ್ಘಾಟಿತವಾದ ಹೊಸ ರೀತಿ ಅನೇಕ ಆವಿಷ್ಕಾರಗಳೊಡನೆ ಬೆಳೆದು ನಡೆಯಿತು. ಇನಿಗೊ ಜೋನ್ಸ್ ತನ್ನ ಕಟ್ಟಡಗಳಲ್ಲಿ ಇಟಲಿಯ ಪಾಲ್ಲಾಡಿಯೋ ಎಂಬ ಶಿಲ್ಪಿಯ ಕೃತಿಗಳನ್ನೇ ಹೆಚ್ಚು ಅನುಸರಿಸಿದ್ದರಿಂದ ಈ ಒಂದು ವಾಸ್ತುರೀತಿ ಪಾಲಾಡಿಯೋ ಶೈಲಿ ಎಂದೂ ಪ್ರಸಿದ್ಧವಾಗಿದೆ.
ಇಟಾಲಿಯನ್ ಶೈಲಿ
ಬದಲಾಯಿಸಿಆದರೆ ಇತರ ಸಮಕಾಲೀನ ಶಿಲ್ಪಗಳಂತೆ ಇಟಾಲಿಯನ್ ಶೈಲಿಯನ್ನೇ ಪೂರ್ತಿ ಅನುಕರಿಸದೆ ಡಚ್, ಫ್ರೆಂಚ್ ಮುಂತಾದ ಶೈಲಿಗಳ ಅಂಶಗಳನ್ನು ಅಳವಡಿಸಿಕೊಂಡು ಹೊಸ ಹೊಸ ರೀತಿಯ ವಿನ್ಯಾಸಗಳನ್ನು ಆವಿಷ್ಕರಿಸಿ, ಇಂಗ್ಲೆಂಡಿನ ವಾಸ್ತುಕಲೆಗೆ ಒಂದು ನೂತನಮುಖ ನೀಡಿದ ಕೀತಿರ್À ಸರ್ ಕ್ರಿಸ್ಟೋಫರ್ ರೆನ್ (1632-1723) ಎಂಬ ಶಿಲ್ಪಿಗೆ ಸಲ್ಲುತ್ತದೆ. ಇನಿಗೊ ಜೋನ್ಸ್‍ನಂತೆ ಈತ ಸಹ ಇಂಗ್ಲೆಂಡಿನ ವಾಸ್ತುಶಿಲ್ಪದ ಇತಿಹಾಸದಲ್ಲಿ ಒಂದು ಅಪೂರ್ವ ಸ್ಥಾನ ಪಡೆದಿದ್ದಾನೆ. ಲಂಡನ್ನಿನ ಸೇಂಟ್ ಪಾಲ್ ಕೆಥೆಡ್ರಲ್‍ನಂಥ ಮಹೋನ್ನತ ಕೃತಿಯನ್ನಲ್ಲದೆ, ವಾಲ್‍ಬ್ರೂಕನ ಸೇಂಟ್ ಸ್ಟೀಫನ್ ಇಗರ್ಜಿ, ಫ್ಲೀಟ್‍ಸ್ಟ್ರೀಟ್‍ನಲ್ಲಿರುವ ಸೇಂಟ್ ಬ್ರೈಡ್ ಇಗರ್ಜಿ ಮುಂತಾದ ಉತ್ತಮ ಕಟ್ಟಡಗಳನ್ನು ಈತ ರೂಪಿಸಿದ್ದಾನೆ. ಹದಿನೆಂಟನೆಯ ಶತಮಾನದ ಶಿಲ್ಪಗಳು ರೆನ್ನನ ಶೈಲಿಗಿಂತಲೂ ಹೆಚ್ಚಾಗಿ ಇನಿಗೊ ಜೋನ್ಸ್‍ನಿಂದ ಆರಂಭವಾದ ಪಲಾಡಿಯೋ ಶೈಲಿಯನ್ನೇ ಅನುಕರಿಸಿದ್ದಾರೆ. ಬ್ಲೆನ್‍ಹೀಮ್, ಹೇರ್‍ವುಡ್, ಹೋಲ್ಕಾಮ್ ಮುಂತಾದ ಕೋಠಿಗಳೂ ಗ್ರೀನ್‍ವಿಚ್, ಚೆಲ್ಸಿಯ ಮುಂತಾದೆಡೆಗಳ ಆಸ್ಪತ್ರೆಯ ಕಟ್ಟಡಗಳೂ ಈ ಕಾಲದ ಮುಖ್ಯ ಕಟ್ಟಡಗಳು. ಆಡಮ್, ಆರ್ಚರ್, ಬರ್ಟನ್, ನ್ಯಾಶ್, ವೆಬ್ ಮುಂತಾದ ಪ್ರಸಿದ್ಧ ಶಿಲ್ಪಿಗಳು ಈ ಕಾಲದವರು.ಇಂಗ್ಲೆಂಡಿನ ಈ ಹಲವು ವಾಸ್ತುಶೈಲಿಗಳಲ್ಲಿರುವ ಕಟ್ಟಡಗಳು ಬ್ರಿಟಿಷರು ಹರಡಿದ್ದ ಎಲ್ಲ ದೇಶಗಳಲ್ಲೂ ಕಾಣಸಿಗುತ್ತದೆ. ಅದರಲ್ಲೂ ವಿಶೇಷವಾಗಿ ಅಮೆರಿಕ, ಆಸ್ಟ್ರೇಲಿಯ ಮತ್ತು ಭಾರತ ದೇಶಗಳಲ್ಲಿ ಗಾಥಿಕ್, ಟ್ಯೂಡರ್, ಎಲಿಜಬೀತನ್ ರಿನೆಸಾನ್ಸ್ ಇತ್ಯಾದಿ ಶೈಲಿಗಳ ಅನೇಕ ಕಟ್ಟಡಗಳು ಕಾಣಸಿಗುತ್ತವೆ. ಕರ್ಣಾಟಕದಲ್ಲಿಯೇ ಗಾಥಿಕ್ ಶೈಲಿಗಳ ಅನುಕರಣೆಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಮತ್ತು ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚಗಳಲ್ಲಿಯೂ ರಿನೆಸಾನ್ಸ್ ಶೈಲಿಯ ಪ್ರಭಾವವನ್ನು, ಬೆಂಗಳೂರಿನ ಸರ್ಕಾರೀ ವಸ್ತು ಸಂಗ್ರಹಾಲಯ, ಸಂಶೋಧನಾಲಯ, ನ್ಯಾಯಾಲಯಗಳು ಮುಂತಾದೆಡೆಯಲ್ಲೂ ನೋಡಬಹುದು. ಬೆಂಗಳೂರಿನ ಅರಮನೆ ಟ್ಯೂಡರ್ ಶೈಲಿಯ ಕಟ್ಟಡ.
ಉಲ್ಲೇಖಗಳು
ಬದಲಾಯಿಸಿ- ↑ http://www.britainexpress.com/architecture/index.htm
- ↑ "ಆರ್ಕೈವ್ ನಕಲು". Archived from the original on 2017-01-10. Retrieved 2016-10-21.
- ↑ http://www.bbc.co.uk/history/british/architecture_01.shtml