ಇಂಗ್ಲೆಂಡಿನ ರಾಜಕೀಯ ಬೆಳೆವಣಿಗೆ

ವೇಲ್ಸ್, ಸ್ಕಾಟ್ಲೆಂಡ್, ಉತ್ತರ ಐರ್ಲೆಂಡುಗಳೊಡಗೂಡಿ ಸಾಂಕುಶ ರಾಜಪ್ರಭುತ್ವ ಹೊಂದಿರುವ ಇಂಗ್ಲೆಂಡು ಪ್ರಪಂಚದ ನಾಗರಿಕತೆಗೆ ನೀಡಿರುವ ಅನೇಕ ಕೊಡುಗೆಗಳ ಪೈಕಿ ಇದರ ಪ್ರಜಾತಾಂತ್ರಿಕ ಸಂಸ್ಥೆಗಳು ಪ್ರಮುಖವಾಗಿವೆ. ಈ ಸಂಸ್ಥೆಗಳ ಹಾಗೂ ಸಂಸದೀಯ ಪಾರ್ಲಿಮೆಂಟರಿ) ಪದ್ಧತಿಯ ಬೆಳೆವಣಿಗೆಯ ಇತಿಹಾಸವೇ ಇಂಗ್ಲೆಂಡಿನ ಇತಿಹಾಸ.

ಪಾರ್ಲಿಮೆಂಟರಿ ಸಂಸ್ಥೆ

ಬದಲಾಯಿಸಿ

ಪಾರ್ಲಿಮೆಂಟರಿ ಸಂಸ್ಥೆಗಳಿಗೆ ಜನ್ಮ ನೀಡಿ ಅವನ್ನು ವಿಕಾಸಗೊಳಿಸಿ ಬೇರೆ ದೇಶಗಳ ರಾಜಕೀಯ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರಿದ ಇಂಗ್ಲೆಂಡ್ ಪಾರ್ಲಿಮೆಂಟುಗಳ ಜನನಿ ಎಂದು ಪ್ರಸಿದ್ಧವಾಗಿದೆ. ರೋಮ್ ಸಾಮ್ರಾಜ್ಯದ ಪತನವಾದಂದಿನಿಂದ ಇಲ್ಲಿ ಕ್ರಮವಾಗಿ ಆಧುನಿಕ ರಾಜಕೀಯ ವ್ಯವಸ್ಥೆ ವಿಕಾಸಗೊಳ್ಳುತ್ತ ಬಂದಿದೆ. ಇತರ ರಾಷ್ಟ್ರಗಳು ಅದೆಷ್ಟೋ ಸಲ ತಮ್ಮ ರಾಜಕೀಯ ವ್ಯವಸ್ಥೆಗಳನ್ನು ಬದಲಾಯಿಸಿಕೊಂಡಿವೆ. ಆದರೆ, ಇದು ಕಳೆದ ಒಂಬತ್ತು ಶತಮಾನಗಳಿಂದ ಪಾರ್ಲಿಮೆಂಟರಿ ಸಂಸ್ಥೆಗಳನ್ನು ವಿಕಾಸಗೊಳಿಸುತ್ತ. ಸಮಯಕ್ಕೆ ತಕ್ಕ ಬದಲಾವಣೆಗಳನ್ನು ಹೊಂದುತ್ತ ಬಂದಿದೆ. ಒಂದು ಕಾಲದಲ್ಲಿ ಸರ್ವಾಧಿಕಾರ ಹೊಂದಿದ್ದ ಅರಸುತನ ಇಂದು ಸಾಂಕೇತಿಕ ಸಂಸ್ಥೆ ಮಾತ್ರ. ಪರಮಾಧಿಕಾರ ಅರಸನಿಂದ ಶ್ರೀಮಂತವರ್ಗದವರ ಮೂಲಕವಾಗಿ ಪ್ರಜೆಗಳ ಕೈಸೇರಿದೆ; ಇಂದು ಅದು ಪ್ರಜಾ ಪ್ರತಿನಿಧಿಗಳ ಸಭೆಯಲ್ಲಿ ವ್ಯಾವಹಾರಿಕವಾಗಿ ನೆಲೆಗೊಂಡಿದೆ. ಅರಸನ್ನೊಳಗೊಂಡ ದ್ವಿಸದನಗಳುಳ್ಳ ಪಾರ್ಲಿಮೆಂಟು ಪರಮಾಧಿಕಾರ ಹೊಂದಿದ್ದರೂ ತತ್ತ್ವಶಃ ಅದು ಪ್ರಜೆಗಳಿಗೆ ಸೇರಿದ್ದಾಗಿದೆ. ಈ ರಾಜ್ಯಾಧಿಕಾರ ಪಡೆಯುವ ಸಲುವಾಗಿ ಪ್ರಜೆಗಳು ಅರಸನೊಂದಿಗೆ ಅವಿರತ ಹೋರಾಟ ನಡೆಸಬೇಕಾಯಿತು. 1215ರಲ್ಲಿ ಮ್ಯಾಗ್ನಕಾರ್ಟವೆಂಬ ಮಹಾಸನ್ನದಿಗೆ ಜಾನ್ ದೊರೆಯ ಅಂಕಿತ ಬಿದ್ದಂದಿನಿಂದ ಆರಂಭವಾದ ಈ ಕ್ರಮ ಸಾಂಕುಶ ರಾಜಪ್ರಭುತ್ವ ಹಾಗು ಪಾರ್ಲಿಮೆಂಟಿನ ಸಾರ್ವಭೌಮತ್ವ ಸ್ಥಾಪಿಸುವಲ್ಲಿ ಯಶಸ್ವಿಯಾಗಿ ಮುಂದುವರಿದಿದೆ.[]

ರಾಜಕೀಯ ವ್ಯವಸ್ಥೆಯ ವಿಕಾಸ

ಬದಲಾಯಿಸಿ

ಇಂಗ್ಲೆಂಡನ್ನೊಳಗೊಂಡ ಬ್ರಿಟನ್ನಿನ ಇಂದಿನ ರಾಜಕೀಯ ಹಾಗು ಸಾಮಾಜಿಕ ಸಂಸ್ಥೆಗಳು ಆನೇಕ ಶತಮಾನಗಳಿಂದ ಸುಧಾರಣೆಗೊಳ್ಳುತ್ತ, ವಿಕಾಸಗೊಳ್ಳುತ್ತ ಬಂದವುಗಳಾಗಿವೆ. ಇವುಗಳಲ್ಲಿ ಪ್ರಮುಖವಾದವುಗಳಾದ ಪ್ರಜಾತಾಂತ್ರಿಕ ರಾಜಕೀಯ ಸಂಸ್ಥೆ-ಸಂಘಟನೆಗಳು, ಅರಸರ, ಶ್ರೀಮಂತರ ಮತ್ತು ಸಾಮಾನ್ಯ ಪ್ರಜೆಗಳ ನಡುವೆ ಅಧಿಕಾರಕ್ಕಾಗಿ ನಡೆದ ಹೋರಾಟದ ಪರಿಣಾಮವಾಗಿ ಬೆಳೆದುಬಂದಿವೆ. ಇವುಗಳ ವಿಕಾಸಕ್ರಮವನ್ನು ಅರಿಯಲು ಬ್ರಿಟಿನ್ನಿನ ರಾಜಮನೆತನಗಳ ಇತಿಹಾಸವನ್ನೂ ಅರಸರ ದಬ್ಬಾಳಿಕೆಯನ್ನು ತಡೆಗಟ್ಟಲು ಶ್ರೀಮಂತವರ್ಗವೂ ತದನಂತರದಲ್ಲಿ ಜನಸಾಮನ್ಯರೂ ನಡೆಸಿದ ಹೋರಾಟದ ಇತಿಹಾಸವನ್ನೂ ಅರಿತುಕೊಳ್ಳಬೇಕಾದ್ದು ಅಗತ್ಯ.ಕ್ರಿ. ಶ. ಹನ್ನೊಂದನೆಯ ಶತಮಾನದಿಂದ ಈ ದೇಶದ ಕ್ರಮವಾದ ಇತಿಹಾಸಯುಗ ಆರಂಭವಾಯಿತಾದರೂ ಇದಕ್ಕೆ ಮೊದಲೇ ಇಲ್ಲಿ ಮುಂಬರಲಿದ್ದ ರಾಜಕೀಯ ಸಂಸ್ಥೆಗಳ ರೂಪರೇಷೆಗಳು. ವಿಚಾರಧಾರೆಗಳು ಮೂಡಿದ್ದುವು. ಶಿಲಾಯುಗದಲ್ಲಿ ಐಬೀರಿಯನ್ಸ್ ಎಂಬ ಜನಾಂಗದವರು ನೆಲೆಸಿದ್ದ ಈ ದೇಶದಲ್ಲಿ ಕ್ರಿ. ಪೂ. 6ನೆಯ ಶತಮಾನಕ್ಕೆ ಸ್ವಲ್ಪ ಮುಂಚೆ ಯೂರೋಪಿನ ಉತ್ತರಭಾಗದ ಕೆಲ್ಟಿಕ್ ಜನಾಂಗಕ್ಕೆ ಸೇರಿದ ಜನ ಈ ದ್ವೀಪದ ಮೇಲೆ ಹಂತ ಹಂತವಾಗಿ ದಾಳಿಯಿಟ್ಟು ಇಂದಿನ ಇಂಗ್ಲೆಂಡ್ ಹಾಗು ವೇಲ್ಸ್ ಪ್ರದೇಶಗಳಲ್ಲಿ ನೆಲೆಗೊಂಡರು. ಕ್ರಿ.ಪೂ. 55ರಲ್ಲಿ ರೋಮಿನ ಜ್ಯೂಲಿಯಸ್ ಸೀಸ್ಸರ್ ತನ್ನ ಸೈನ್ಯದೊಂದಿಗೆ ಬ್ರಿಟನ್ನಿನ ದಕ್ಷಿಣ ಭಾಗದಲ್ಲಿ ಕಾಲಿರಿಸಿದ್ದ. ಒಂದು ಶತಮಾನದ ಅನಂತರ ರೋಮನ್ ವಸಾಹತು ಕಾರ್ಯ ಆರಂಭವಾಗಿ ಕ್ರಿ. ಶ. 85ರ ವೇಳೆಗೆ ಸ್ಕಾಟ್ಲೆಂಡ್ ಪ್ರದೇಶವನ್ನುಳಿದು ಬ್ರಿಟನ್ನಿನ ಇತರ ಭಾಗ ರೋಮ್ ಸಾಮ್ರಾಜ್ಯದ ಅಧೀನವಾಯಿತು. ಪಟ್ಟಣಗಳೂ ಹೆದ್ದಾರಿಗಳೂ ನಿರ್ಮಿತವಾದುವು. ರೋಮ್ ಸಾಮ್ರಾಜ್ಯದಲ್ಲಿ ಸ್ಥಾನೀಯ ಸ್ವಯಂ ಆಡಳಿತಕ್ಕೆ ಅವಕಾಶವಿತ್ತಿದ್ದರಿಂದ ಪಟ್ಟಣಗಳ ಆಡಳಿತ ವ್ಯವಸ್ಥೆ ಪ್ರಾಮುಖ್ಯ ಹೊಂದಿತು.[]

ಲಂಡನ್ ಕೇಂದ್ರ

ಬದಲಾಯಿಸಿ

ಇದೇ ಕಾಲಕ್ಕೆ ಲಂಡನ್ ಕೇಂದ್ರ ಪಟ್ಟಣವಾಯಿತು. ಆದರೆ ರೋಮ್ ಸಾಮ್ರಾಜ್ಯದ ಪತನದೊಂದಿಗೆ ಬ್ರಿಟನ್ನಿನ ಸ್ಥಿತಿ ಬದಲಾಗುತ್ತ ಬಂತು. ಕ್ರಿ.ಶ. 5ನೆಯ ಶತಮಾನದ ಆರಂಭದಲ್ಲಿ ಉತ್ತರ ಯೂರೋಪಿನಿಂದ ಆಂಗ್ಲ, ಸ್ಯಾಕ್ಸನ್ ಹಾಗು ಜ್ಯೂಟ್ ಜನಾಂಗದವರೂ ಅನಂತರ ಡೇನಿಸ್ ಜನರೂ ಇಲ್ಲಿ ಬಂದು ನೆಲೆಸಿ ಪ್ರಬಲಗೊಂಡು 500-800ರ ವರೆಗೆ ಕೆಂಟ್, ಎಸಿಕ್ಸ್. ವೆಸಿಕ್ಸ್, ಸಸಿಕ್ಸ್, ಪೂರ್ವ ಆಂಗ್ಲಿಯ, ಮರ್ಸಿಯ ಹಾಗೂ ನಾರ್ಥಾಂಬ್ರಿಯ ರಾಜ್ಯಗಳನ್ನು ಕಟ್ಟಿಕೊಂಡರು. ಈ ಮಧ್ಯೆ ಕ್ರ್ರಿ.ಶ. 597ರಲ್ಲಿ ಪೋಪ್ ಪ್ರಥಮ ಗ್ರಿಗೊರಿ ಕಳಿಸಿದ ಧರ್ಮ ಪ್ರಚಾರದ ಮಂಡಲಿ ಇಲ್ಲಿ ಕ್ರೈಸ್ತಮತ ಪ್ರಚಾರ ಮಾಡಿ ಜನರನ್ನು ಆ ಮತಕ್ಕೆ ಪರಿವರ್ತಿಸಿ ದೇಶದ ಸಾಂಸ್ಕøತಿಕ ಏಕತೆ ಸಾಧಿಸಿತು. ಮುಂದೆ 9ನೆಯ ಶತಮಾನದ ಆರಂಭದಲ್ಲಿ ಬ್ರಿಟನ್ನಿನ ಚಿಕ್ಕ ಚಿಕ್ಕ ರಾಜ್ಯಗಳು ವೆಸಿಕ್ಸ್ ರಾಜ್ಯದ ನೇತೃತ್ವದಲ್ಲಿ ಒಂದುಗೂಡಿದವು. ಎಗ್ಬರ್ಟ್ ಎಂಬುವನು ಹೀಗೆ ಒಂದುಗೂಡಿದ ರಾಜ್ಯದ ಪ್ರಥಮ ಪ್ರಭುವಾದ. ಆಂಗ್ಲೊ-ಸ್ಯಾಕ್ಸನರಿಂದ ಸ್ಥಾಪಿಸಲ್ಪಟ್ಟ ಈ ರಾಜ ಪ್ರಭುತ್ವ ಸಂಸ್ಥೆ ಅಷ್ಟೊಂದು ಬಲಯುತವಾಗಿರಲಿಲ್ಲ. ಟ್ಯೂಟಾನಿಕ್ ಜನರ ಸಂಪ್ರದಾಯದ ಪ್ರಕಾರ ರಾಜಯೋಗ್ಯ ಮನೆತನದಿಂದ ಅರಸರ ಆಯ್ಕೆಯಾಗುತ್ತಿತ್ತು. ಜನಾಂಗದ ಮುಖ್ಯಸ್ಥ ಹಾಗು ಸೇನಾನಾಯಕನಾಗಿ, ಶ್ರೀಮಂತವರ್ಗದ ಸೇನಾಧಿಪತಿಗಳಿಂದಲೂ, ಬುದ್ಧಿವಂತರಿಂದಲೂ ಪ್ರತಿಷ್ಠಿತ ವ್ಯಕ್ತಿಗಳಿಂದಲೂ ಕೂಡಿದ ಒಂದು ಮಂಡಲಿಯ ಸಲಹೆಯ ಮೇರೆಗೆ ಆತ ರಾಜ್ಯವಾಳುತ್ತಿದ್ದ. ಸರ್ಕಾರದ ಸಕಲಾಧಿಕಾರಗಳು ಅರಸನಲ್ಲಿಯೇ ಕೇಂದ್ರೀಕೃತವಾಗಿದ್ದುವು. ಜನಾಂಗದ ಸಂಪ್ರದಾಯಗಳನ್ನು ಅರಸ ಮೀರುವಂತಿರಲಿಲ್ಲ. ಶಾಸನ ಹಾಗು ಆಡಳಿತ ಕಾರ್ಯಗಳಲ್ಲಿ ಈ ಮಂಡಲಿ ಮಹತ್ತ್ವದ ಪಾತ್ರ ವಹಿಸುತ್ತಿತ್ತು. ಆಡಳಿತ ಕಾರ್ಯದಲ್ಲಿ ಚರ್ಚಿನ ಹಾಗೂ ಪಾದ್ರಿಗಳ ಪಾತ್ರವಿತ್ತು. ಷ್ಯೆರ್-ಮೂಟ್ ಎಂಬ ಇನ್ನೊಂದು ಸಭೆ ಸ್ಥಳೀಯ ಆಡಳಿತ ವ್ಯವಹಾರಗಳನ್ನು ಕುರಿತು ಚರ್ಚಿಸುತ್ತಿತ್ತು. ಅರಸನಾದವ ಸ್ಥಳೀಯ ಆಡಳಿತದಲ್ಲಿ ಹೆಚ್ಚಾಗಿ ಕೈಹಾಕುತ್ತಿರಲಿಲ್ಲ. ಇದೇ ಕಾಲದಿಂದ ಸಮಾಜದಲ್ಲಿ ವರ್ಗಗಳು ಏರ್ಪಡಲಾರಂಭಿಸಿದುವು.ನ್ಯಾಯವಿಧಾನ ಅರಸನಲ್ಲಿ ನಿಹಿತವಾಗಿತ್ತು. ಲಿಖಿತ ಕಾಯಿದೆಗಳಿರಲಿಲ್ಲ. ರೂಢಿ ಸಂಪ್ರದಾಯಗಳೂ ಒಮ್ಮೊಮ್ಮೆ ಅರಸನ ಇಚ್ಛೆಗಳೂ ನ್ಯಾಯದಾನಕ್ಕೆ ಆಧಾರವಾಗಿರುತ್ತಿದ್ದವು. ಬ್ರಿಟನ್ನಿನ ಇತಿಹಾಸದಲ್ಲಿಯೇ ಪ್ರಥಮವಾಗಿ ಕೆಂಟ್ ರಾಜ್ಯದ ಅರಸ ಎಥೆಲ್‍ಬರ್ಟ್ 600ರಲ್ಲಿ 90 ದಂಡಾಜ್ಞೆಗಳನ್ನು ಹೊರಡಿಸಿದ. ಅನಂತರ ಬೇರೆ ಬೇರೆ ಅರಸರು ಕಾನೂನುಗಳನ್ನು ಕ್ರೋಡೀಕರಿಸಲೆತ್ನಿಸಿದರು. ನ್ಯಾಯ ತೀರ್ಪು ಕೊಡಲು ಸ್ಥಳೀಯ ಸಂಸ್ಥೆಗಳು ಇದ್ದುವಲ್ಲದೆ ಕ್ರೈಸ್ತ ಪಾದ್ರಿಗಳು ತಮ್ಮದೇ ಆದ ಖಾಸಗಿ ನ್ಯಾಯಾಲಯಗಳನ್ನು ಹೊಂದಿದ್ದರು.[]

ನಾರ್ಮನ್ನರ ಆಳ್ವಿಕೆ (1066-1154): ಕೇಂದ್ರೀಕೃತ ರಾಜಪ್ರಭುತ್ವ

ಬದಲಾಯಿಸಿ

ಈ ನಾಡಿನ ಆಕ್ರಮಣಕಾರರಲ್ಲಿ ಕೊನೆಯವರಾದ ನಾರ್ಮನ್ನರು ಹೇಸ್ಟಿಂಗ್ಸ್‍ಯುದ್ಧದಲ್ಲಿ ಜಯಹೊಂದಿ ಇಂಗ್ಲೆಂಡಿನ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಯುಗವನ್ನಾರಂಭಿಸಿದರು. ಇಲ್ಲಿನ ಮಂಡಲಿ ಪ್ರಥಮ ವಿಲಿಯಂಗೆ ಪ್ರಭುತ್ವವನ್ನೊಪ್ಪಿಸಿತು. ಯಾರ್ಕ್‍ನ ಕ್ರೈಸ್ತರ ಪ್ರಧಾನ ಗುರುವಿನಿಂದ 1066ರ ಕ್ರಿಸ್‍ಮಸ್ ದಿನದಂದು ವೆಸ್ಟ್‍ಮಿನ್ಸ್ಟರಿನಲ್ಲಿ ಕಿರೀಟ ಧರಿಸಿಕೊಂಡ ವಿಲಿಯಂ ನಾರ್ಮಂಡಿ (1066-87) ಶೀಘ್ರದಲ್ಲಿಯೆ ಸಶಕ್ತ ಕೇಂದ್ರೀಕೃತ ಸರ್ಕಾರ ಸ್ಥಾಪಿಸುವಲ್ಲಿ ಯಶಸ್ಸು ಪಡೆದ. ಇಂಗ್ಲೆಂಡಿನ ಪ್ರಜೆಗಳ ನಂಬುಗೆ ಗಳಿಸಿಕೊಳ್ಳುವುದಕ್ಕಾಗಿ ಆತ ಬಹುವಾಗಿ ಶ್ರಮಿಸಿದ. ಅವನು ಅವರ ಸಂಪ್ರದಾಯ ರೀತಿನೀತಿಗಳಲ್ಲಿ ಕೈಹಾಕುತ್ತಿರಲಿಲ್ಲ. ಆದ್ದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಅಷ್ಟೊಂದು ಹೆಚ್ಚಿನ ಬದಲಾವಣೆಗಳಾಗಲಿಲ್ಲ. ಆತನ ಕಾಲದಲ್ಲಿ ಸೈನಿಕ ಉಂಬಳಿ ಹಾಗು ಸಾಮಂತ ಪದ್ಧತಿಗಳು ಬಲಗೊಂಡು ಅರಸನಿಗೆ ಬೆಂಬಲವನ್ನೊದಗಿಸುತ್ತಿದ್ದುವು. ಇದರಲ್ಲಿ ಚರ್ಚಿನ ಅಧಿಕಾರಿಗಳೂ ಸೇರಿದ್ದರು. ಹೀಗಾಗಿ ಒಂದು ರೀತಿಯ ಜಹಗೀರಿ ಸಾಮಂತ ಪದ್ಧತಿ ಸ್ಥಾಪಿತವಾಗಿ ಶ್ರೀಮಂತ ವರ್ಗವೊಂದು ಬೆಳೆದು ಬಲಗೊಂಡಿತು. ಆದರೆ ರಾಜ್ಯದ ಭೂಮಿ ಅರಸನ ಒಡೆತನಕ್ಕೆ ಸೇರಿತು. ಮುಂದೆ ಪ್ರಥಮ ಹೆನ್ರಿಯಂಥ (1100-35) ಅರಸರು ಈ ಪದ್ಧತಿಯನ್ನು ಮತ್ತಷ್ಟೂ ಬಲಪಡಿಸಿದರು. ಈ ಕಾಲದಲ್ಲಿ ಬ್ರಿಟಿನ್ನಿನ ರಾಜಕೀಯ ಪದ್ಧತಿ ಹೊಸ ರೂಪತಳೆದು ಸ್ಥಿರಗೊಂಡಿತು. ಅರಸನ ಪ್ರಾಬಲ್ಯ ಹೆಚ್ಚಿತು. ಇಂಗ್ಲೆಂಡಿನಲ್ಲಿ ಊಳಿಗಮಾನ್ಯ ಪದ್ಧತಿಯ ಸಮಾಜ ರೂಪುಗೊಂಡಿತು. ಚರ್ಚ್ ಹಾಗು ಇತರ ಸಂಸ್ಥೆಗಳಲ್ಲೂ ಸುಧಾರಣೆ ಜಾರಿಗೆ ಬಂತು. ಸೈನಿಕ ಉಂಬಳಿಯ ಪದ್ಧತಿಯಿಂದ ದೇಶದಲ್ಲಿ ರಾಜಕೀಯ ಸ್ಥಿರತೆಯುಂಟಾಗಿ ಶಾಂತಿ ನೆಲೆಗೊಂಡಿತು. ಅನಂತರ ಅರಸನಾದ ದ್ವಿತೀಯ ಹೆನ್ರಿ (1154-89) ರಾಜ್ಯ ನಿರ್ಮಾಣ ಕಾರ್ಯದಲ್ಲಿ ತೊಡಗಿ ಅರಸನ ನ್ಯಾಯಾಲಯಗಳ ಅಧಿಕಾರ ಕ್ಷೇತ್ರ ವಿಸ್ತಾರ ಮಾಡಿದ್ದಲ್ಲದೆ ಸಾಮಾನ್ಯ ನ್ಯಾಯವನ್ನು ಜಾರಿಗೆ ತಂದ. ಇದು ಮುಂದೆ ಇಂಗ್ಲೆಂಡಿನ ಪ್ರಜಾಸಂಸ್ಥೆಗಳ ನಿರ್ಮಾಣದಲ್ಲಿ ಮಹತ್ತ್ವದ ಪಾತ್ರ ವಹಿಸಿತು. ದೇಶದಲ್ಲಿ ಸೈನಿಕ ಸಹಾಯ ಪದ್ಧತಿಯಿಂದ ಶಾಂತಿ ನೆಲೆಸಿದ್ದರ ಪರಿಣಾಮವಾಗಿ ಮುಂದಿನ ಪ್ರಜೆಗಳು ವ್ಯಾಪಾರ ಮುಂತಾದ ವೃತ್ತಿಗಳಲ್ಲಿ ತೊಡಗಲು ಅವಕಾಶ ದೊರಕಿತು. ಸ್ವತಂತ್ರ ಸಮಾಜದ ಬೆಳೆವಣಿಗೆಯ ಕ್ರಮದ ಆರಂಭವಾಯಿತು. ಶ್ರೀಮಂತ ವರ್ಗದವರು ಪ್ರಬಲರಾಗತೊಡಗಿ, ಸರ್ಕಾರದ ಕಾರ್ಯವಿಧಾನಗಳಲ್ಲಿ ಭಾಗಿಗಳಾಗಲು ಪ್ರಯತ್ನ ನಡೆಸಿದರು. ಸಮಯ ಒದಗಿದಾಗ ಅವರು ಅರಸನ ವಿರುದ್ಧ ಸಾಮಾನ್ಯ ಪ್ರಜೆಗಳೊಂದಿಗೆ ಕೂಡಿಕೊಳ್ಳಲೂ ಸಿದ್ಧರಿದ್ದರು. ಆದರೆ ಅರಸ ತನ್ನ ಸರ್ವಾಧಿಕಾರವನ್ನುಳಿಸಿಕೊಳ್ಳಲು ಕಾನೂನಿನ ಆಶ್ರಯವನ್ನೂ ನ್ಯಾಯಾಲಯಗಳ ಹಾಗು ಅಧಿಕಾರಿಗಳ ನೆರವನ್ನೂ ಪಡೆದ. ಸ್ಥಳೀಯ ಸಂಸ್ಥೆಗಳ ನಿಯಂತ್ರಣದ ಕ್ರಮಗಳು ಜಾರಿಗೆ ಬಂದುವು. ಕೇಂದ್ರದಲ್ಲಿ ವರಮಾನ ಇಲಾಖೆ ರೂಪಿತವಾಯಿತು. ನ್ಯಾಯ ಇಲಾಖೆ ಖಚಿತಗೊಂಡಿತು. ಪ್ರಧಾನ ನ್ಯಾಯಾಧೀಶರ ನೇಮಕವಾಯಿತು.

ನಾರ್ಮನ್ ಅರಸರ ಆಳ್ವಿಕೆ

ಬದಲಾಯಿಸಿ

ನಾರ್ಮನ್ ಅರಸರ ಆಳ್ವಿಕೆಯ ಕಾಲದಲ್ಲಿ ಮ್ಯಾಗ್ನಮ್ ಕನ್‍ಸೀಲಿಯಂ ಹಾಗು ಕ್ಯೂರಿಯ ರೀಜಿಸ್ ಎಂಬ ಎರಡು ಪ್ರಮುಖ ರಾಜಕೀಯ ಸಂಸ್ಥೆಗಳು ಬೆಳೆದು ಬಂದವು. ಮ್ಯಾಗ್ನಮ್ ಕನ್‍ಸೀಲಿಯಂ ಅಥವಾ ಮಹಾಸಭೆ ಆಂಗ್ಲೊ-ಸ್ಯಾಕ್ಸನ್ ಕಾಲದ ಶ್ರೀಮಂತ ಮಂಡಲಿಯಂತಿತ್ತು. ಆದರೆ ಇದು ಅದರಷ್ಟು ಅಧಿಕಾರ ಹೊಂದಿರಲಿಲ್ಲ. ಅರಸನಿಂದ ನೇಮಿಸಲ್ಪಟ್ಟ ಅಧಿಕಾರವರ್ಗದವರೂ ಶ್ರೀಮಂತರೂ ಕ್ರೈಸ್ತಪಾದ್ರಿಗಳೂ ಸಾಮಂತರೂ ಈ ಸಭೆಯ ಸದಸ್ಯರಾಗಿದ್ದರು. ಆಡಳಿತ, ಶಾಸನ ಹಾಗೂ ನ್ಯಾಯ ಸಂಬಂಧವಾದ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಅರಸನಿಗೆ ಈ ಸಭೆ ನೆರವಾಗುತ್ತಿತ್ತು. ಈ ಸಭೆಯ ಸಲಹೆಗಳನ್ನು ಅರಸ ಪಡೆಯುತ್ತಿದ್ದನಾದರೂ ಇದರ ನಿಬಂಧನೆಗೊಳಪಟ್ಟಿರಲಿಲ್ಲ. ಅರಸನ ನಿರ್ಣಯವೇ ಅಂತಿಮ ನಿರ್ಣಯ. ಕ್ಯೂರಿಯ ರೀಜಿಸ್ ಎಂಬ ಮತ್ತೊಂದು ಮಹತ್ತ್ವದ ಸಭೆ ಮ್ಯಾಗ್ನಮ್ ಕನ್‍ಸೀಲಿಯಂಗಿಂತ ಚಿಕ್ಕದಾಗಿತ್ತು. ಪ್ರಮುಖ ಅಧಿಕಾರಿಗಳ ಈ ಸಭೆ ಅರಸನ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಈ ಸಭೆಯೂ ಅರಸನಿಗೆ ಮಹತ್ತ್ವದ ಸಲಹೆ ಹಾಗು ಸಹಕಾರ ಒದಗಿಸುತ್ತಿತ್ತು. ಅರಸನಿಗೆ ಹೊಣೆಯಾದ ಮಂತ್ರಿಮಂಡಲದ ರೀತಿಯಲ್ಲಿ ಇದರ ರಚನೆಯಾಗಿತ್ತು.

ಚಾರ್ಟರ್ ಆಫ ಲಿಬರ್ಟಿಸ್

ಬದಲಾಯಿಸಿ

ಶ್ರೀಮಂತವರ್ಗದವರ ಸಹೃದಯತೆ ಸಂಪಾದಿಸುವ ಉದ್ದೇಶದಿಂದ ಪ್ರಥಮ ಹೆನ್ರಿ ದೊರೆ ಅನುಗ್ರಹಿಸಿದ ಸ್ವಾತಂತ್ರ್ಯಗಳ ಸನ್ನದು (ಚಾರ್ಟರ್ ಆಫ ಲಿಬರ್ಟಿಸ್) ಒಂದು ಹೊಸ ಪಥವನ್ನೇ ಆರಂಭಿಸಿತೆನ್ನಬಹುದು. ಅದು ಪ್ರಜೆಗಳ ಸ್ವಾತಂತ್ರ್ಯ ಪಾಲನೆ ಮಾಡುವುದಾಗಿ ಆಶ್ವಾಸನೆ ನೀಡಿತ್ತು. ಈತನ ಆಳ್ವಿಕೆಯ ಕಾಲದಲ್ಲಿಯೇ ರಾಜ್ಯಾದ್ಯಂತ ನಿಯತ ಕೇಂದ್ರಗಳಲ್ಲಿ ನ್ಯಾಯಾಲಯಗಳು ಸ್ಥಾಪಿತವಾದುವು. ಕ್ಯೂರಿಯ ರೀಜಿಸ್ ಎಂಬ ಸಭೆಯೇ ಶ್ರೀಮಂತವರ್ಗದ ತಪ್ಪಿತಸ್ಥರ ವಿಚಾರಣೆ ನಡೆಸುತ್ತಿತ್ತು. ಕಂದಾಯ ಸಂಬಂಧವಾದ ವಿವಾದಗಳಲ್ಲಿ ತೀರ್ಪುಗಳನ್ನು ವರಮಾನ ಇಲಾಖೆ ನೀಡುತ್ತಿತ್ತು. ಬ್ರಿಟನ್ನಿನ ಇಂದಿನ ಪ್ರಮುಖ ರಾಜಕೀಯ ಸಂಸ್ಥೆಗಳ ಉಗಮ ಇಲ್ಲಿಂದ ಆರಂಭವಾಯಿತೆಂದು ಹೇಳಬಹುದು. ದ್ವಿತೀಯ ಹೆನ್ರಿ ದೊರೆ ನಿರ್ಮಿಸಿದ ಪ್ರಬಲ ಕೇಂದ್ರೀಕೃತ ಶಾಸನ ಈ ದೇಶದ ರಾಷ್ಟ್ರೀಯತಾಭಾವನೆಯನ್ನು ಹುಟ್ಟಿಸುವಲ್ಲಿ ಸಹಾಯ ಒದಗಿಸಿತಾದರೂ ಮುಂದೆ ಜಾನ್‍ನಂಥ ದೊರೆಗಳು ಅಧಿಕಾರ ದುರುಪಯೋಗಪಡೆಸಿಕೊಳ್ಳುವಂತಾಯಿತು. ಆದರೆ ಶ್ರೀಮಂತ ಸಾಮಂತರ ವಿರುದ್ಧ ಅರಸನಿಗೆ ಯಶಸ್ಸು ದೊರೆಯಲಿಲ್ಲ.

ಮ್ಯಾಗ್ನ ಕಾರ್ಟ (1215)

ಬದಲಾಯಿಸಿ

ದ್ವಿತೀಯ ಹೆನ್ರಿಯ ಅನಂತರ ಪಟ್ಟಕ್ಕೆ ಬಂದ ಆತನ ಮಗ ಜಾನ್ ದೊರೆಯ ನಿರಂಕುಶ ಆಡಳಿತವನ್ನು ಹತೋಟಿಗೆ ಒಳಪಡಿಸಲು ಶ್ರೀಮಂತ ಹಾಗೂ ಸಾಮಂತ ವರ್ಗದವರು ಮಾಡಿದ ಪ್ರಯತ್ನದ ಪರಿಣಾಮವೇ ಮ್ಯಾಗ್ನ ಕಾರ್ಟ ಎಂಬ ಮಹಾಸನ್ನದು. ಅರಸನ ಕ್ರೌರ್ಯ ಎಲ್ಲೆ ಮೀರಿದಾಗ ಕ್ಯಾಂಟರ್‍ಬರಿಯ ಧರ್ಮಗುರು ಸ್ಟೀಫನ್ ಲ್ಯಾಂಗ್ಟನ್ನನ ನಾಯಕತ್ವದಲ್ಲಿ ಅರಸನ ನಿರಂಕುಶ ಪ್ರಭುತ್ವದ ವಿರುದ್ಧ ಸಂಘಟಿತಗೊಂಡಿದ್ದ ಶ್ರೀಮಂತರು ಹಾಗು ಪಟ್ಟಣಿಗರು ಸ್ವಾತಂತ್ರ್ಯ ಹಾಗೂ ಸ್ವಯಂ ಶಾಸನ ತತ್ತ್ವಗಳನ್ನೊಳಗೊಂಡಿದ್ದ ಸನ್ನದಿಗೆ ಅಂಕಿತ ಹಾಕಲು ಜಾನ್ ದೊರೆಯನ್ನು ಒತ್ತಾಯ ಪಡಿಸಿದರು. ಅರಸನನ್ನು ಎದುರಿಸಲು ಸಿದ್ಧರಾಗಿದ್ದ ಶ್ರೀಮಂತ ಸಾಮಂತರೊಂದಿಗೆ ಒಪ್ಪಂದವೋ ಎಂಬಂತೆ ಜಾನ್ ದೊರೆ 1215ರ ಜೂನ್ 15ರಂದು ಈ ಮಹಾಸನ್ನದಿಗೆ ಅಂಕಿತ ಹಾಕಿದ. ಈ ಸನ್ನದು ಇಂಗ್ಲೆಂಡಿನ ರಾಜಕೀಯ ಹಾಗೂ ಸಂವಿಧಾನದ ಇತಿಹಾಸದಲ್ಲಿ ಪ್ರಜೆಗಳ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಮೈಲಿಗಲ್ಲಿನಂತಿದೆ. ಅರಸನ ನಿರಂಕುಶಾಧಿಕಾರವನ್ನು ಹತೋಟಿಗೊಳಪಡಿಸುವುದೇ ಇದರ ಪ್ರಥಮ ಗುರಿ. ಅರಸನಾದವ ಪ್ರಜೆಗಳಿಂದ ಹಣ ಹೀರದಂತೆ ಆತನ ಅಧಿಕಾರವನ್ನು ಈ ಸನ್ನದು ಮೊಟಕುಗೊಳಿಸಿತು. ಜಮೀನುದಾರರು ಹಾಗೂ ಕ್ರೈಸ್ತ ಗುರುಗಳಿಂದ ಕೂಡಿದ ಸಾಮಾನ್ಯ ಸಮಿತಿಯೊಂದರ ರಚನೆಯ ಅಗತ್ಯ ಇದರಲ್ಲಿ ಪ್ರಕಟವಾಗಿತ್ತು. ಯಾವ ವ್ಯಕ್ತಿಯನ್ನೇ ಆಗಲಿ ಕಾನೂನಿನನ್ವಯವಾಗಲ್ಲದೆ ಅನ್ಯರೀತಿಯಿಂದ ಜೈಲಿನಲ್ಲಿ ಇಡಕೂಡದೆಂದೂ ಆತನ ಆಸ್ತಿಯನ್ನು ನಷ್ಟಪಡಿಸಬಾರದೆಂದೂ ಇದರಲ್ಲಿ ಸೂಚಿಸಲಾಗಿತ್ತು. ಇದು ಪ್ರಜಾಸ್ವಾತಂತ್ರ್ಯ ಹಾಗು ಕಾನೂನಿನ ಆಡಳಿತ ಸ್ಥಾಪಿಸುವಲ್ಲಿ ಪ್ರಥಮ ಮಹಾಯತ್ನವಾಗಿತ್ತು. ಮ್ಯಾಗ್ನ ಕಾರ್ಟ ನೇರವಾಗಿ ಪಾರ್ಲಿಮೆಂಟರಿ ಪ್ರಭುತ್ವ ಪದ್ಧತಿಯನ್ನು ಪ್ರಾರಂಭಿಸಲಿಲ್ಲವಾದರೂ ಪ್ರಜಾಸ್ವಾತಂತ್ರ್ಯಕ್ಕೆ ನಾಂದಿಯಾಯಿತು. ಮುಂದೆ ಹಣಕ್ಕಾಗಿ ಅರಸ ಬೇಡಿಕೆಯನ್ನಿಟ್ಟಾಗಲೆಲ್ಲ ಪ್ರಾತಿನಿಧ್ಯಕ್ಕೆ ಮರುಬೇಡಿಕೆಯನ್ನಿಡಲಾಯಿತು. ಹೀಗಾಗಿ ಮ್ಯಾಗ್ನ ಕಾರ್ಟ ಪಾರ್ಲಿಮೆಂಟಿನ ಶೀಘ್ರಗತಿಯ ಬೆಳೆವಣಿಗೆ ಹಾಗೂ ಪ್ರಜೆಗಳ ಸ್ವಾತಂತ್ರ್ಯಕ್ಕೆ ಕಾರಣವಾಯಿತು. ಪ್ರಜೆಗಳಿಗೆ ಅವರ ಹಕ್ಕುಗಳ ಅರಿವನ್ನುಂಟುಮಾಡಿಕೊಟ್ಟಿತು.

ಪಾರ್ಲಿಮೆಂಟಿನ ಉದಯ

ಬದಲಾಯಿಸಿ

ಜಾನ್ ದೊರೆ ಹಣದ ಅಭಾವ ನೀಗಿಸಿಕೊಳ್ಳುವುದಕ್ಕಾಗಿ ಪದೇ ಪದೇ ಕರೆಯಲಾರಂಭಿಸಿದ ಪಾರ್ಲಿಮೆಂಟಿನ ಕ್ರಮ ಮುಂದೆ ತೃತೀಯ ಹೆನ್ರಿಯ (1216-72) ಕಾಲದಲ್ಲಿ ಸ್ಥಿರವಾಯಿತು. ಅರಸನ ಸಮಿತಿಯೊಂದು ನಿರ್ಮಿತವಾಯಿತು. ಮಹಾಸಮಿತಿಯ ಸದಸ್ಯತ್ವವನ್ನು ಪಟ್ಟಣಗಳ ಪ್ರತಿನಿಧಿಗಳ ನೇಮಕದಿಂದ ವಿಸ್ತರಿಸಲಾಯಿತು. ಮ್ಯಾಗ್ನ ಕಾರ್ಟದ ಮೂಲಕ ಅರಸನ ಅಧಿಕಾರವನ್ನು ಸಂವಿಧಾನದ ಇತಿಮಿತಿಗೆ ಒಳಪಡಿಸಿದ್ದರಿಂದ ಹಾಗೂ ಅರಸರಿಗೆ ಹಣದ ಅಭಾವವಿದ್ದರಿಂದ ಮಹಾಸಮಿತಿಯ ಅಧಿಕಾರಿಗಳು ಹೆಚ್ಚುತ್ತ ಬಂದು ಅದು ಪ್ರಬಲವಾಗುತ್ತ ನಡೆಯಿತು. ಈ ಮಧ್ಯೆ ತೃತೀಯ ಹೆನ್ರಿ ಅಧಿಕಾರ ದುರುಪಯೋಗಪಡಿಸಲಾರಂಭಿಸಿದುದರ ಪರಿಣಾಮವಾಗಿ ಅರಸ ಹಾಗೂ ಶ್ರೀಮಂತ ವರ್ಗದವರ ನಡುವೆ ಘರ್ಷಣೆ ಆರಂಭವಾಯಿತು. ಅದರ ಅಂತಿಮ ಪರಿಣಾಮವೇ ಪಾರ್ಲಿಮೆಂಟಿನ ಉದಯ.

ಹೆನ್ರಿ ಆಳ್ವಿಕೆ

ಬದಲಾಯಿಸಿ

ಮೂರನೆಯ ಹೆನ್ರಿ ಚಿಕ್ಕವನಿದ್ದಾಗ ಶ್ರೀಮಂತ ವರ್ಗದವರು ಅರಸನ ಸಮಿತಿಯ ಮೇಲೆ ತಮ್ಮ ಪ್ರಭಾವ ಬೀರಿದರು. ಮುಂದೆ ಹೆನ್ರಿ ವಯಸ್ಕನಾದ ಮೇಲೆ ಶ್ರೀಮಂತ ವರ್ಗದವರು ಅನೇಕ ಬೇಡಿಕೆಗಳನ್ನು ಅರಸನ ಮುಂದಿಟ್ಟರು. 1258ರ ಏಪ್ರಿಲ್‍ನಲ್ಲಿ ಅರಸ ತನ್ನ ಹಣದ ಬೇಡಿಕೆಯನ್ನು ಮಹಾಸಮಿತಿಯ ಮುಂದಿಟ್ಟ. 1258ರ ಜೂನ್ 1ರಂದು ಆಕ್ಸ್‍ಫರ್ಡಿನಲ್ಲಿ ಸೇರಿದ ಮಹಾ ಸಮಿತಿಯವರು ಅನೇಕ ಸುಧಾರಣೆಗಳನ್ನು ಬಯಸಿ ತತ್ಸಂಬಂಧವಾದ ಬೇಡಿಕೆಗಳನ್ನು ಅರಸನ ಮುಂದೆ ಇರಿಸಿದರು. ಆದರೆ ಶ್ರೀಮಂತವರ್ಗದಲ್ಲಿಯೇ ಒಡಕುಂಟಾಯಿತು.ಆಂತರಿಕ ಕಲಹ ಆರಂಭವಾಯಿತು. ಯುದ್ಧವೂ ನಡೆಯಿತು. ಕೊನೆಗೆ ಕೆಳದರ್ಜೆಯ ಶ್ರೀಮಂತವರ್ಗಕ್ಕೆ ಸೇರಿದ ಸ್ಯೆಮನ್-ಡಿ-ಮಾಂಟ್ ಫರ್ಟ್ ಎಂಬುವನು ಅರಸನನ್ನು ಸೋಲಿಸಿ 1265ರಲ್ಲಿ ಪಾರ್ಲಿಮೆಂಟನ್ನು ಕರೆದ. ಇದರಲ್ಲಿ ತನ್ನ ಬೆಂಬಲಿಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಅವನು ಮಧ್ಯಮ ದರ್ಜೆಯ ಸಾಮಾನ್ಯ ಜನತೆಗೆ ಪ್ರಾತಿನಿಧ್ಯ ಹೆಚ್ಚಿಸಿದ. ಅರ್ಲ್ ದರ್ಜೆಯ ಶ್ರೀಮಂತರು. ರನ್ ದರ್ಜೆಯ ಹದಿನೆಂಟು ಶ್ರೀಮಂತರು, ಸೈಮನ್ನಿನ ಬೆಂಬಲಿಗರಾಗಿದ್ದ ಕ್ರೈಸ್ತ ಗುರುಗಳು. ಪ್ರತಿಯೊಂದು ಷೈರಿನಿಂದಲೂ ಇಬ್ಬರು ಕೆಳದರ್ಜೆಯ ಶ್ರೀಮಂತರು. ಪ್ರತಿ ಬರೋವಿನಿಂದಲೂ (ಪೌರಸಂಸ್ಥೆಯುಳ್ಳ ಊರು) ಇಬ್ಬರು ನಾಗರಿಕರಂತೆ 21 ಬರೋಗಳ ಪ್ರತಿನಿಧಿಗಳು-ಹೀಗೆ ಪಾರ್ಲಿಮೆಂಟು ವಿಸ್ತಾರಗೊಂಡಿತು. ಸೈಮನ್ನನ ಪಾರ್ಲಿಮೆಂಟು ಎಂದು ಇದು ಪ್ರಸಿದ್ಧವಾಯಿತು. ಪಾರ್ಲಿಮೆಂಟಿನ ಬೆಳೆವಣಿಗೆಯಲ್ಲಿ ಮಹತ್ತ್ವದ ಮೈಲಿಗಲ್ಲಾಯಿತು. ಇದರ ನೆನಪಿಗಾಗಿ 700 ವರ್ಷಗಳ ಅನಂತರ 1965 ರಲ್ಲಿ ಬ್ರಿಟನ್ನು ತನ್ನ ಪಾರ್ಲಿಮೆಂಟಿನ ಸಪ್ತಮ ಶತಮಾನೋತ್ಸವವನ್ನಾಚರಿಸಿತು.

ಪಾರ್ಲಿಮೆಂಟ್ ಸಂಸ್ಥೆಯ ವಿಕಾಸ

ಬದಲಾಯಿಸಿ

1272ರಲ್ಲಿ ಪಟ್ಟಕ್ಕೆ ಬಂದ ಪ್ರಥಮ ಎಡ್ವರ್ಡ್ (1272-1307) ದೊರೆಯ ಆಳ್ವಿಕೆಯ ಕಾಲ ಇಲ್ಲಿನ ಪಾರ್ಲಿಮೆಂಟಿನ ಇತಿಹಾಸದಲ್ಲಿ ಮಹತ್ತ್ವವಾದದ್ದು. ಈತನ ಕಾಲದಲ್ಲಿ ಸಂವಿಧಾನದ ಸುಧಾರಣೆಯಾಗಿ ಪಾರ್ಲಿಮೆಂಟ್ ಸಂಸ್ಥೆ ವಿಕಾಸಗೊಂಡು ಸ್ಥಿರತೆ ಪಡೆಯಿತು. 1295ರಲ್ಲಿ ಸೈಮನ್ ಯೋಜನೆಯ ಮೇರೆಗೆ ಪ್ರಥಮ ಎಡ್ವರ್ಡ್ ದೊರೆಯಿಂದ ಸಮಾವೇಶಗೊಂಡ ಪಾರ್ಲಿಮೆಂಟು ಮಾದರಿ ಪಾರ್ಲಿಮೆಂಟ್ ಎನಿಸಿಕೊಂಡಿತು. 400ಕ್ಕೂ ಹೆಚ್ಚಿನ ಪ್ರತಿನಿಧಿಗಳನ್ನೊಳಗೊಂಡಿದ್ದ ಈ ಪಾರ್ಲಿಮೆಂಟಿನಲ್ಲಿ ಪ್ರಥಮವಾಗಿ ಸಮಾಜದ ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸಿಕೊಡಲು ಯತ್ನಿಸಲಾಗಿತ್ತು. ಸಾಮಾನ್ಯ ಸಮಿತಿಯೊಂದನ್ನು ರಚಿಸುವುದೇ ಇದರ ಉದ್ದೇಶವಾಗಿತ್ತು.ಇದಲ್ಲದೆ ಪ್ರಥಮ ಎಡ್ವರ್ಡ್ ದೊರೆ ಅನೇಕ ಮಹತ್ತ್ವದ ಶಾಸನಗಳನ್ನು ಘೋಷಿಸಿದ. ಅವುಗಳಲ್ಲಿ 1275, 1285 ಹಾಗು 1290ರ ವೆಸ್ಟಮಿನ್ಸ್ಟರ್ ಶಾಸನಗಳು. ಸಂವಿಧಾನದ ದೃಷ್ಟಿಯಿಂದ ಅತ್ಯಂತ ಮಹತ್ತ್ವದವುಗಳಾಗಿವೆ. ಈತನ ಆಳ್ವಿಕೆಯ ಕಾಲದಲ್ಲಿ ಕ್ಯೂರಿಯ ರೀಜಿಸ್ ಎಂಬ ಸಭೆ ನ್ಯಾಯಾಂಗ ಸಭೆಯಾಗಿ ಪರಿವರ್ತನೆಗೊಂಡಿತು. ಪಾರ್ಲಿಮೆಂಟು ಸಂವಿಧಾನದ ಅಂಗವಾಯಿತು. ಚರ್ಚುಗಳಲ್ಲಿ ಸುಧಾರಣೆ ತರಲಾಯಿತು. ಕಾಯಿದೆ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳಾಗಿ, ಪ್ರತ್ಯೇಕ ನ್ಯಾಯಾಲಯಗಳು ರಚಿತಗೊಂಡುವು. ನ್ಯಾಯದರ್ಶಿ ಪದ್ಧತಿಯನ್ನು ಜಾರಿಗೆ ತರಲಾಯಿತು. ಈ ರೀತಿಯಾಗಿ 13ನೆಯ ಶತಮಾನದ ಇಂಗ್ಲೆಂಡಿನ ರಾಜಕೀಯ ಇತಿಹಾಸ ಪಾರ್ಲಿಮೆಂಟಿನ ಸ್ಥಾಪನೆಯಲ್ಲಿ ಕೊನೆಗೊಂಡು, 14ನೆಯ ಶತಮಾನ ಪಾರ್ಲಿಮೆಂಟಿನ ಬೆಳೆವಣಿಗೆಯೊಂದಿಗೆ ಆರಂಭವಾಯಿತು.ಹದಿನಾಲ್ಕನೆಯ ಶತಮಾನದಿಂದ ಪಾರ್ಲಿಮೆಂಟು ಪ್ರಬಲಗೊಳ್ಳುತ್ತ ಅರಸನಿಂದ ಕ್ರಮವಾಗಿ ಹಕ್ಕುಗಳನ್ನು ಪಡೆಯಲಾರಂಭಿಸಿತು. ಇಲ್ಲಿಂದ ಮುಂದೆ ಊಳಿಗಮಾನ್ಯ ಪದ್ಧತಿ ದುರ್ಬಲವಾಗಲಾರಂಭಿಸಿ, ಸಾಮಾನ್ಯ, ಮಧ್ಯಮ ದರ್ಜೆಯ ಪ್ರಜೆಗಳು ಬಲಗೊಂಡರು. ಆರಂಭದಲ್ಲಿ ವೈಯಕ್ತಿಕ ಹಕ್ಕುಗಳ ಬೇಡಿಕೆ ಹಾಗು ಅನಾನುಕೂಲಗಳನ್ನು ಅರಸನೆದುರಿಗೆ ಇರಿಸುವ, ಅರಸನ ಹಣದ ಬೇಡಿಕೆಯನ್ನು ಮನ್ನಿಸುವ ಸಭೆಯಂತೆ ಇದ್ದ ಪಾರ್ಲಿಮೆಂಟು ಕ್ರಮೇಣ 1327ರಿಂದ ಮುಂದೆ ಸಾಮಾನ್ಯ ಆಡಳಿತ ಮೇಲ್ವಿಚಾರಣೆ ಹಾಗೂ ಶಾಸನ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಲಾರಂಭಿಸಿತು. ತೃತೀಯ ವಿಲಿಯಂನ ಆಳ್ವಿಕೆಯ ಕಾಲದಲ್ಲಿ ಪಾರ್ಲಿಮೆಂಟು ಪ್ರಮುಖವಾದ ಹಣಕಾಸಿನ ಹಾಗೂ ಅಡಳಿತ ಪರಿಶೀಲನೆಯ ಹಕ್ಕು ಪಡೆದುಕೊಂಡಿತು. ದೊರೆಯಾದವ ಪಾರ್ಲಿಮೆಂಟಿನ ಸಮ್ಮತಿ ಇಲ್ಲದೆ ಪ್ರಜೆಗಳ ಮೇಲೆ ಕರ ಹೇರುವಂತಿರಲಿಲ್ಲ. ಅರಸನ ಮಂತ್ರಿಗಳು, ಪಾರ್ಲಿಮೆಂಟಿಗೆ ಹೊಣೆಯಾಗಿರಬೇಕಾಗಿತ್ತು. ದೇಶದಲ್ಲಿಯ ರಾಜಕೀಯ ಏರಿಳಿತಗಳು, ನೂರು ವರ್ಷಗಳ ಯುದ್ಧ ಹಾಗೂ ಸ್ಕಾಟಿಷ್ ಯುದ್ಧಗಳು ಅರಸನನ್ನು ಪಾರ್ಲಿಮೆಂಟಿಗೆ ಹೊಂದಿಕೊಂಡು ಹೋಗುವಂತೆ ಮಾಡಿದುವು. (ನೋಡಿ- ಇಂಗ್ಲೆಂಡಿನ-ಚರಿತ್ರೆ)

ಲಾಡ್ರ್ಸ್ ಸಭೆ ಹಾಗೂ ಕಾಮನ್ಸ್ ಸಭೆಗಳ ಉಗಮ

ಬದಲಾಯಿಸಿ

ಹದಿನಾಲ್ಕನೆಯ ಶತಮಾನದ ಮಧ್ಯಭಾಗದಲ್ಲಿ ಪಾರ್ಲಿಮೆಂಟ್ ಸಂಸ್ಥೆಯಲ್ಲಿ ಮತ್ತೊಂದು ಗಮನಾರ್ಹ ಬದಲಾವಣೆಯಾಯಿತು. ಈ ಮೊದಲು ಪಾರ್ಲಿಮೆಂಟು ಅರಮನೆಯ ಸಭಾ ಮಂದಿರದಲ್ಲಿ ಸೇರುತ್ತಿತ್ತು. ಆರಂಭದಲ್ಲಿ ಶ್ರೀಮಂತ ಪ್ರತಿನಿಧಿಗಳು ಕೌನ್ಸಿಲ್ ಮೇಜಿನ ಬಳಿ ಕುಳಿತಿರುತ್ತಿದ್ದರು. ಸಾಮಾನ್ಯ ಪ್ರತಿನಿಧಿಗಳು ಸಭಾವಲಯದ ಹೊರಗೆ ನಿಂತೇ ತಮ್ಮ ಬೇಡಿಕೆಗಳನ್ನು ಸಲ್ಲಿಸುತ್ತಿದ್ದರು. ಆದರೆ 1341ರ ವೇಳೆಗೆ ಸಾಮಾನ್ಯ ಪ್ರತಿನಿಧಿಗಳು ಬೇರೆಡೆ ಸಭೆ ಸೇರಲಾರಂಭಿಸಿದರು. ಪ್ರಮುಖ ಶ್ರೀಮಂತರು. ಪ್ರಮುಖ ಧರ್ಮಗುರುಗಳು ಹಾಗೂ ಅರಸನಿಂದ ಮನ್ನಿಸಲ್ಪಟ್ಟ ಶ್ರೀಮಂತರು ಶ್ರೀಮಂತಸಭೆಯಲ್ಲೂ ಮಧ್ಯಮ ದರ್ಜೆಯ ಶ್ರೀಮಂತರು. ಷೈರ್ ಪ್ರತಿನಿಧಿಗಳು, ನಗರ ಹಾಗೂ ಬರೋ ಪ್ರತಿನಿಧಿಗಳು ಮತ್ತು ಕೆಳದರ್ಜೆಯ ಪಾದ್ರಿಗಳು ಸಾಮಾನ್ಯ ಪ್ರತಿನಿಧಿಗಳ ಸಭೆಯಲ್ಲೂ ಭಾಗವಹಿಸಲಾರಂಭಿಸಿದರು. ಇವುಗಳೇ ಮುಂದೆ ಲಾಡ್ರ್ಸ್ ಸಭೆ (ಹೌಸ್ ಆಫ್ ಲಾಡ್ಸ್ ್) ಮತ್ತು ಕಾಮನ್ಸ್ ಸಭೆ (ಹೌಸ್ ಆಫ್ ಕಾಮನ್ಸ್) ಎಂದು ಹೆಸರು ತಳೆದುವು.ಕಾಮನ್ಸ್ ಸಭೆ ಕ್ರಮೇಣ ಹೆಚ್ಚು ಹೆಚ್ಚು ಅಧಿಕಾರ ಪಡೆದುಕೊಳ್ಳಲಾರಂಭಿಸಿತು. ಹಣಕಾಸಿನ ಸಂಬಂಧದಲ್ಲಿ ಕಾಮನ್ಸ್ ಸಭೆಯ ಹಕ್ಕುಗಳು ಬೆಳೆದು ಬಂದಂದಿನಿಂದ ಆ ಸಭೆಯ ಮಹತ್ತ್ವ ಬೆಳೆಯಲಾರಂಭಿಸಿತು. ದ್ವಿತೀಯ ರಿಚರ್ಡನ ಆಳ್ವಿಕೆಯ (1377-1399) ಆರಂಭ ಕಾಲದಲ್ಲಿ ಪಾರ್ಲಿಮೆಂಟು ಪ್ರಮುಖ ಅಧಿಕಾರಿಗಳನ್ನು ನೇಮಿಸುವ ಹಾಗೂ ಹಣಕಾಸಿನ ಆಡಳಿತ ನಿಯಂತ್ರಿಸುವ ಅಧಿಕಾರ ಪಡೆದುಕೊಂಡಿತು. ಮುಂದೆ ಶ್ರೀಮಂತ ವರ್ಗದವರಲ್ಲಿ ಭೇದ ಹುಟ್ಟಿದ್ದರಿಂದ ಅರಸ ಹಾಗೂ ಕಾಮನ್ಸ್‍ಸಭೆ ದೇಶದ ಆಡಳಿತ ನಿರ್ವಹಿಸುವಂತಾಯಿತು. ಆದರೆ ದ್ವಿತೀಯ ರಿಚರ್ಡ್ ದೊರೆ ತನ್ನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಪ್ರಬಲನಾಗ ಬಯಸಿದ್ದರಿಂದ ಕಾಮನ್ಸ್ ಸಭೆ ಆತನನ್ನು 1399ರಲ್ಲಿ ಅಧಿಕಾರದಿಂದ ತೆಗೆದು ಹಾಕಿ ಲ್ಯಾಂಕಾಸ್ಟರ್‍ನ ಹೆನ್ರಿಯನ್ನು ನಾಲ್ಕನೆಯ ಹೆನ್ರಿ ಎಂಬ ಹೆಸರಿನಲ್ಲಿ ಪಟ್ಟಗಟ್ಟಿತು. 1399ರ ರಕ್ತರಹಿತ ಕ್ರಾಂತಿ ಎಂದು ಹೆಸರಾಗಿರುವ ಈ ಘಟನೆ ಅರಸನ ನಿರಂಕುಶ ಪ್ರಭುತ್ವಕ್ಕೆ ಪ್ರತಿಭಟನೆಯಾಗಿತ್ತು. ಸಂವಿಧಾನವನ್ನು ರಕ್ಷಿಸಿಕೊಳ್ಳಲು ಪ್ರಜೆಗಳು ನಡೆಸಿದ ಪ್ರಯತ್ನವಾಗಿತ್ತು. ಈ ಎಲ್ಲಾ ಘಟನೆಗಳ ಪರಿಣಾಮವಾಗಿ 15ನೆಯ ಶತಮಾನದ ಆರಂಭದ ವೇಳೆಗೆ ಬ್ರಿಟನ್ನು ಒಂದು ರಾಷ್ಟ್ರವಾಯಿತು. ರಾಜಕೀಯ ಸಾಮಾನ್ಯರ ಸೊತ್ತಾಯಿತು. ಇದುವರೆಗೆ ಅರಸ ಹಾಗೂ ಪ್ರಮುಖ ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತಗೊಂಡಿದ್ದ ರಾಜ್ಯಾಧಿಕಾರ ಮಧ್ಯಮ ದರ್ಜೆಯ ಶ್ರೀಮಂತರ ವಶವಾಯಿತು. ಇದರಿಂದಾಗಿ ಕಾಮನ್ಸ್ ಸಭೆ ಪ್ರಬಲಗೊಳ್ಳಲಾರಂಭಿಸಿತು.

ನಾಲ್ಕನೆಯ ಹೆನ್ರಿ ಆಳ್ವಿಕೆ

ಬದಲಾಯಿಸಿ

ಪಾರ್ಲಿಮೆಂಟಿನ ಬೆಂಬಲದಿಂದಾಗಿ ಪಟ್ಟಕ್ಕೆ ಬಂದ ನಾಲ್ಕನೆಯ ಹೆನ್ರಿ ಅದನ್ನು ಎದುರಿಸುವ ಸಾಹಸ ಮಾಡಲಿಲ್ಲ. ಅನಂತರ ಪಟ್ಟಕ್ಕೆ ಬಂದ ಆತನ ಮಗ ಐದನೆಯ ಹೆನ್ರಿ ಯುದ್ಧಕಾರ್ಯಗಳಲ್ಲಿ ತೊಡಗಿರುತ್ತಿದ್ದನಾದ್ದರಿಂದ ಪಾರ್ಲಿಮೆಂಟೇ ಆಡಳಿತ ನಿರ್ವಹಣೆಯ ಕಾರ್ಯವಹಿಸಿತ್ತು. ಮುಂದೆ ಆರನೆಯ ಹೆನ್ರಿ ಚಿಕ್ಕವನಾಗಿದ್ದರಿಂದ ಈ ಕ್ರಮ ಮುಂದುವರಿಯಿತು. ಹೀಗೆ ಲ್ಯಾಂಕಾಸ್ಟರ್ ಅರಸರ 60 ವರ್ಷಗಳ ಆಳ್ವಿಕೆಯ ಕಾಲದಲ್ಲಿ ಪಾರ್ಲಿಮೆಂಟಿನ ಅವಿರೋಧ ಆಧಿಕಾರ ಅನೇಕ ಉತ್ತಮ ಬೆಳೆವಣಿಗೆಗಳಿಗೆ ಕಾರಣವಾಯಿತು. ಅರಸನ ಸಮಿತಿ ಕಾರ್ಯನಿರ್ವಾಹಕ ಸಮಿತಿಯಾಗಿ ಪರಿವರ್ತನೆಗೊಂಡು ಮುಂದಿನ ಕ್ಯಾಬಿನೆಟ್ ಪದ್ಧತಿಯ ಸ್ಥಾಪನೆಗೆ ಎಡೆ ಮಾಡಿಕೊಟ್ಟಿತು. ಅನೇಕ ಒಳ್ಳೆಯ ರೂಢಿ ಸಂಪ್ರದಾಯಗಳು ಸ್ಥಾಪಿತವಾದವು. ಪಾರ್ಲಿಮೆಂಟಿನ ಸದಸ್ಯರ ವಾಕ್‍ಸ್ವಾತಂತ್ರ್ಯ ಬಂಧನಕ್ಕೊಳಗಾಗದಿರುವ ಸ್ವಾತಂತ್ರ್ಯ. ಅರಸ ಹಾಗೂ ಕಾರ್ಯಸಮಿತಿಯ ಮಧ್ಯಪ್ರವೇಶದಿಂದ ಸ್ವಾತಂತ್ರ್ಯ, ಹಣಕಾಸಿನ ಮಸೂದೆಗಳ ಮೇಲೆ ಸಂಪೂರ್ಣ ಹಕ್ಕು, ಆಸಾಮಿ ಹಾಜರಿ ಮುಂತಾದ ಸಂಪ್ರದಾಯಗಳು ಸ್ಥಾಪಿತವಾದವು. ಸಭಾಧ್ಯಕ್ಷನ ಸ್ಥಾನದ ಉಗಮವಾಗಿ ಸಭೆಯ ಸದಸ್ಯರ ವಿಶೇಷ ಹಕ್ಕುಗಳನ್ನು ಸಂರಕ್ಷಿಸುವುದು ಆತನ ಪ್ರಮುಖ ಕರ್ತವ್ಯಗಳಲ್ಲೊಂದಾಯಿತು. ಕಾಮನ್ಸ್ ಸಭೆಯ ಸದಸ್ಯರು ಶಾಸನ ಕಾರ್ಯದಲ್ಲಿ ಲಾಡ್ರ್ಸ್ ಸಭೆಗೆ ಸಮನಾದ ಹಕ್ಕುಗಳನ್ನು ಪಡೆದುಕೊಂಡರು. 1439ರ ಕಾಯಿದೆಯ ಪ್ರಕಾರ ಜಮೀನುಳ್ಳವರಿಗೆ ಷೈರಿನ ಪ್ರತಿನಿಧಿಗಳನ್ನು ಆರಿಸುವ ಹಕ್ಕು ಕೊಡಲಾಯಿತು. ಪ್ರೊ. ಆಡಮ್ಸ್ ಹೇಳುವಂತೆ 1399-1460ರ ವರೆಗಿನ ಪಾರ್ಲಿಮೆಂಟು ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳುವಲ್ಲಿ ಹಾಗೂ ವಿಶೇಷ ಹಕ್ಕುಗಳನ್ನು ಗಳಿಸಿಕೊಳ್ಳುವಲ್ಲಿ ನಿರತವಾಗಿತ್ತು. ಆಡಳಿತದ ರೀತಿ-ನೀತಿಗಳು ಕ್ರಮಬದ್ಧಗೊಂಡವು.

ಟ್ಯೂಡರ್ ಅರಸರ ಕಾಲ

ಬದಲಾಯಿಸಿ

ಆಧುನಿಕ ಯುಗದ ಆರಂಭ: ಟ್ಯೂಡರ್ ಅರಸರ ಆಳ್ವಿಕೆಯ ಕಾಲ (1485-1603) ನಿರಂಕುಶದ್ದಾದರೂ ರಾಜವೈಭವದ ಘನ ಪ್ರಭುತ್ವದ ಕಾಲವೂ ಆಗಿತ್ತು. ಅದು ಬ್ರಿಟಿಷ್ ಇತಿಹಾಸದಲ್ಲಿ ಒಂದು ಪರ್ವಕಾಲ. ಮಧ್ಯಯುಗದ ಊಳಿಗಮಾನ್ಯಪದ್ಧತಿ ಆಧುನಿಕ ಸಮಾಜವಾಗಿ ಬದಲಾವಣೆ ಹೊಂದುತ್ತಿತ್ತು. ಮಧ್ಯಮ ವರ್ಗದ ಸಾಮಾನ್ಯ ಪ್ರಜೆಗಳು ವಾಣಿಜ್ಯ ಮುಂತಾದ ವೃತ್ತಿಗಳ ಮೂಲಕ ಮುಂದೆ ಬರುತ್ತಿದ್ದರು. ಇದು ಅರಸರ ನಿರಂಕುಶತ್ವಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ ಪ್ರಜೆಗಳು ತಮ್ಮ ಹಕ್ಕುಬಾಧ್ಯತೆಗಳ ಬಗ್ಗೆ ಜಾಗೃತಿ ತಳೆದಿದ್ದರು. ಈ ಕಾಲದಲ್ಲಿ ಪರದೇಶಗಳೊಡನೆ ಯುದ್ಧಗಳಾವುವೂ ನಡೆಯಲಿಲ್ಲವಾದ್ದರಿಂದ ಅರಸರಿಗೆ ಪದೇ ಪದೇ ಪಾರ್ಲಿಮೆಂಟನ್ನು ಕರೆಯುವ ಅಗತ್ಯ ಬೀಳುತ್ತಿರಲಿಲ್ಲ. ದೇಶದ ಆಂತರಿಕ ಅಶಾಂತಿಯನ್ನು ಹೋಗಲಾಡಿಸಲು ಅರಸೊತ್ತಿಗೆ ಶಕ್ತಿಯುತವಾಗಬೇಕಾಯಿತು. ಅರಸರು ವೈಭವಯುತವಾಗಿ ರಾಜ್ಯ ಆಳಿದರು. ಟ್ಯೂಡರ್ ಅರಸರ ಈ 120 ವರ್ಷಗಳ ಆಡಳಿತ ಕಾಲ ವೈಭವಯುತ ನಿರಂಕುಶ ಪ್ರಭುತ್ವ ಕಾಲವೆಂದು ಪ್ರಸಿದ್ಧವಾಗಿದೆ.ಟ್ಯೂಡರ್ ಅರಸರಲ್ಲಿ ಪ್ರಸಿದ್ಧರಾಗಿರುವ ಏಳನೆಯ ಹೆನ್ರಿ (1485-1509), ಎಂಟನೆಯ ಹೆನ್ರಿ (1509-1547) ಹಾಗೂ ಪ್ರಥಮ ಎಲಿಜಬೆತ್ ರಾಣಿ (1558-1603) ಇವರು ಪ್ರಬಲರೂ ಚಾಣಾಕ್ಷರೂ ಆಗಿದ್ದು ಆಡಳಿತ ಯಂತ್ರದ ಸುಧಾರಣೆ ಮಾಡಿದರು. ಕುಶಲ ನಿರಂಕುಶರಾಗಿ - ಆದರೆ ಪಾರ್ಲಿಮೆಂಟಿನ ಒಪ್ಪಿಗೆ ಪಡೆದು - ರಾಜ್ಯವಾಳಿದ ಇವರು ತಮ್ಮ ದೇಶವನ್ನು ಒಂದು ಪ್ರಬಲ ರಾಷ್ಟ್ರವನ್ನಾಗಿ ಮಾಡಿದರು. ಇವರ ಕಾಲದಲ್ಲಿ ಅರಸೊತ್ತಿಗೆ ಒಂದು ಹೊಸ ರೂಪ ತಳೆಯಿತು.

ಪ್ರಿವಿ ಕೌನ್ಸಿಲ್ ರಚನೆ

ಬದಲಾಯಿಸಿ

ಇವರ ಆಳ್ವಿಕೆಯ ಕಾಲದಲ್ಲಿ ಪ್ರಿವಿ ಕೌನ್ಸಿಲ್ ರಚಿತಗೊಂಡು ಮುಂದೆ ಅದು ಹೆಚ್ಚಿನ ಪಾತ್ರ ನಿರ್ವಹಿಸುವಂತಾಯಿತು. ಮಧ್ಯಮ ವರ್ಗದ ಶ್ರೀಮಂತರು, ಧರ್ಮಗುರುಗಳು, ನ್ಯಾಯವಾದಿಗಳು ಹಾಗೂ ಸಾಮಾನ್ಯ ಜನರ ಪ್ರತಿನಿಧಿಗಳಿಂದ ಕೂಡಿದ ಈ ಕೌನ್ಸಿಲ್ ಸ್ವಲ್ಪ ಮಟ್ಟಿಗೆ ಪ್ರತ್ಯೇಕವಾಗಿರುತ್ತಿದ್ದು ದೇಶದ ದೈನಂದಿನ ಆಡಳಿತಕಾರ್ಯನಿರ್ವಹಣೆ ಮಾಡುತ್ತಿತ್ತು. ಇದು ಅರಸರ ನಿರಂಕುಶತ್ವದ ಮೇಲೆ ಹತೋಟಿ ಇಡಲು ಪ್ರಯತ್ನಿಸುತ್ತಿತ್ತು; ಅಲ್ಲದೆ ಶಾಸನಕಾರ್ಯದಲ್ಲಿ ನಿರತವಾಗಿತ್ತು; ನಿರ್ವಹಣೆಯ ಮೇಲ್ವಿಚಾರಣೆಯನ್ನು ನಡೆಸುತ್ತಿತ್ತು. ಈ ಕೌನ್ಸಿಲ್‍ನ ಪ್ರಮುಖ ಅಂಗವಾಗಿದ್ದ ಸ್ಟಾರ್ ಚೇಂಬರ್ ಸದಸ್ಯರೂ ಇದರ ಕಾರ್ಯಕಲಾಪಗಳಲ್ಲಿ ಭಾಗವಹಿಸುತ್ತಿದ್ದರು. ಕೆಲ ಇತಿಹಾಸಕಾರರು ಟ್ಯೂಡರ್ ಅರಸರ ಕಾಲವನ್ನು ಪ್ರಿವಿ ಕೌನ್ಸಿಲ್ಲಿನ ಸುವರ್ಣಕಾಲವೆಂದು ಅಭಿಪ್ರಾಯಪಡುತ್ತಾರೆ.

ಟ್ಯೂಡರ್ ಅರಸರು

ಬದಲಾಯಿಸಿ

ಟ್ಯೂಡರ್ ಅರಸರು ಅನೇಕ ಹೊಸ ನಗರಗಳಿಗೆ ಪ್ರತಿನಿಧಿಗಳನ್ನು ಕಳಿಸುವ ಹಕ್ಕು ನೀಡುವುದರ ಮೂಲಕ ಪಾರ್ಲಿಮೆಂಟಿನಲ್ಲಿ ತಮಗೆ ಬೆಂಬಲ ನೀಡುವ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ಸಾಮಾನ್ಯ ಸದಸ್ಯರು ಟ್ಯೂಡರ್ ಅರಸರಿಗೆ ಹಾಗೂ ರಾಣಿಗೆ ಸುಧಾರಣಾಕಾರ್ಯಗಳಲ್ಲಿ ಬೆಂಬಲವಿತ್ತರು. ರೋಮ್‍ನಿಂದ ಪ್ರತ್ಯೇಕಗೊಂಡು, ಅರಸನ ನೇತೃತ್ವದಲ್ಲಿ ಇಂಗ್ಲೆಂಡಿನ ಚರ್ಚು ಸ್ಥಾಪಿತಗೊಂಡದ್ದರ ಪರಿಣಾಮವಾಗಿ ಹಾಗೂ ಇತರ ಕಾರಣಗಳಿಂದಾಗಿ ಲಾಡ್ರ್ಸ್ ಸಭೆಯ ಬಲ ಕುಗ್ಗಿತು. ಈ ಹಿಂದೆ ಪಾರ್ಲಿಮೆಂಟಿನ ಸದಸ್ಯರಿಗೆ ನೀಡಲಾಗಿದ್ದ ವಿಶೇಷ ಹಕ್ಕುಗಳು ಮುಂದುವರಿದುವು. ಅರಸರು ನಿರಂಕುಶವಾಗಿ ವರ್ತಿಸುತ್ತಿದ್ದರೂ ಪಾರ್ಲಿಮೆಂಟಿನ ಇಚ್ಛೆಯನ್ನು ಅಲ್ಲಗೆಳೆಯುತ್ತಿರಲಿಲ್ಲ. ಥಾಮಸ್ ಮೋರ್‍ನಂಥ ಸಭಾಧ್ಯಕ್ಷರು ಪಾರ್ಲಿಮೆಂಟಿನ ಹಾಗೂ ಸದಸ್ಯರ ವಿಶೇಷ ಹಕ್ಕುಗಳ ರಕ್ಷಣೆಗಾಗಿ ಪ್ರಯತ್ನಿಸಿದರು. ಪಾರ್ಲಿಮೆಂಟಿನ ಕಾರ್ಯಪದ್ಧತಿಗಳಲ್ಲಿ ಸುಧಾರಣೆಗಳನ್ನು ತರಲಾಯಿತು. ಟ್ಯೂಡರ್ ಅರಸರ ಕಾಲದಲ್ಲಿ 166 ಹೊಸ ಸದಸ್ಯರನ್ನು ಸೇರಿಸಲಾಗಿ ಪಾರ್ಲಿಮೆಂಟ್ ಒಟ್ಟು 462 ಸದಸ್ಯರನ್ನು ಹೊಂದಿತು.ಧಾರ್ಮಿಕ ಸುಧಾರಣೆಯ ಮೂಲಕವಾಗಿ ಉಂಟಾದ ನವಜಾಗೃತಿ ಇಂಗ್ಲೆಂಡಿನ ಹಾಗೂ ಯೂರೋಪ್ ಖಂಡದ ಇತಿಹಾಸದಲ್ಲಿ ಹೊಸ ಯುಗವನ್ನಾರಂಭಿಸಿತು. ಪ್ರಥಮ ಎಲಿಜಬೆತ್ ರಾಣಿಯ ಆಡಳಿತ ಕಾಲದಲ್ಲಿ ಇಂಗ್ಲೆಂಡಿನಲ್ಲಿ ನೌಕಾಬಲ ನಿರ್ಮಾಣ ಮಾಡುವುದರ ಮೂಲಕ ಪರದೇಶಗಳೊಡನೆ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಲಾಯಿತು. ಜನಸಾಮಾನ್ಯರಿಗಾಗಿ ವಿದ್ಯಾಲಯಗಳು ಸ್ಥಾಪಿತವಾಗಿ ಉತ್ತಮ ಶಿಕ್ಷಣ ಸೌಲಭ್ಯಗಳನ್ನು ಒದಗಿಸಲಾಯಿತು. ಈ ಎಲ್ಲ ಕ್ರಮಗಳ ಪರಿಣಾಮವಾಗಿ ನವಯುಗವೊಂದರ ಆರಂಭವಾಯಿತು. ಜನ ಸಾಮಾನ್ಯರು ಜಾಗೃತಗೊಂಡರಲ್ಲದೆ ಅವರಲ್ಲಿ ಸ್ವತಂತ್ರ ಪ್ರವೃತ್ತಿ ಬೆಳೆಯಲಾರಂಭಿಸಿತು. ಜನ ನಿರಂಕುಶ ಪ್ರಭುತ್ವದ ವಿರುದ್ಧ ಒಂದುಗೂಡಲಾರಂಭಿಸಿತು. ಕೋಕ್, ಪೈಮ್, ಹ್ಯಾಂಪ್ಡೆನ್, ಕ್ರಾಮ್‍ವೆಲ್‍ರಂಥ ಮಧ್ಯಮವರ್ಗದ ಮುಂದಾಳುಗಳು ಜನತೆಗೆ ಯೋಗ್ಯ ನಾಯಕತ್ವವನ್ನೊದಗಿಸಿದರು.

ಸ್ಟೂಯರ್ಟ್ ಅರಸರ ಕಾಲ

ಬದಲಾಯಿಸಿ

ಸಂಸದೀಯ ಪ್ರಭುತ್ವ ಸ್ಥಾಪನೆ : ಪ್ರಥಮ ಜೇಮ್ಸ್‍ನ (1603-1625) ಆಳ್ವಿಕೆಯೊಂದಿಗೆ ಆರಂಭಗೊಂಡ ಸ್ಟೂಯರ್ಟ್ ಅರಸರ ಆಡಳಿತ ಕಾಲ (1603-1704) ಅರಸನಿಗೂ ಪಾರ್ಲಿಮೆಂಟಿಗೂ ನಡುವೆ ಪರಮಾಧಿಕಾರಕ್ಕಾಗಿ ನಡೆದ ಘರ್ಷಣೆಯ ಇತಿಹಾಸ. ಈ ಕಾಲದಲ್ಲಿ ಎರಡು ರಾಜಕೀಯ ಕ್ರಾಂತಿಗಳು ನಡೆದು, ಪಾರ್ಲಿಮೆಂಟಿನ ಪರಮಾಧಿಕಾರ ಸ್ಥಾಪನೆಯಲ್ಲಿ ಸಾಮಾನ್ಯ ಜನತೆ ಯಶಸ್ಸು ಪಡೆಯಿತು. ಅಲ್ಲದೆ ಇಂದಿನ ಸರ್ಕಾರ ವ್ಯವಸ್ಥೆಯ ಪ್ರಮುಖ ಅಂಗಗಳಾದ ಅರಸ, ಪಾರ್ಲಿಮೆಂಟ್ ಹಾಗೂ ನ್ಯಾಯಾಂಗ ಸ್ಥಾಪಿತಗೊಂಡವು. 1603ರಲ್ಲಿ ಪಟ್ಟಕ್ಕೆ ಬಂದ ಪ್ರಥಮ ಜೇಮ್ಸ್ ದೊರೆ ದೈವದತ್ತ ಅಧಿಕಾರತತ್ತ್ವ ಪ್ರತಿಪಾದನೆ ಮಾಡಿ ನಿರಂಕುಶವಾಗಿ ರಾಜ್ಯವನ್ನಾಳಲು ಯತ್ನಿಸಿದ. ರಾಜಪ್ರಭುತ್ವಕ್ಕೆ ವಿರುದ್ಧವಾಗಿದ್ದ ಪಾರ್ಲಿಮೆಂಟ್ ಹಾಗೂ ಪ್ರಜೆಗಳ ಹಕ್ಕುಗಳನ್ನು ನಿರಾಕರಿಸಿದ. ಆದರೆ ಸ್ವತಂತ್ರ ರಾಜಕೀಯ ವಿಚಾರಗಳನ್ನು ಹೊಂದಿದ್ದ ಪ್ರಜೆಗಳು ಅರಸನನ್ನು ವಿರೋಧಿಸಿದರು. ಪಾರ್ಲಿಮೆಂಟ್ ತನ್ನ ವಿಶೇಷ ಹಕ್ಕುಗಳನ್ನುಳಿಸಿಕೊಳ್ಳಲು ಪೂರ್ಣರೂಪದಿಂದ ಪ್ರಯತ್ನಿಸಿತು. ಜೇಮ್ಸನ ಒಟ್ಟು 22 ವರ್ಷಗಳ ಆಡಳಿತಕಾಲದಲ್ಲಿ ನಾಲ್ಕು ಬಾರಿ ಸಮಾವೇಶಗೊಂಡ ಪಾರ್ಲಿಮೆಂಟು ಪ್ರತಿಸಲವೂ ದೊರೆಯ ನಿರಂಕುಶತ್ವವನ್ನು ವಿರೋಧಿಸಿತು. ಕೊನೆಯಲ್ಲಿ ತನ್ನ ವಿಶೇಷ ಹಕ್ಕುಗಳನ್ನು ಉಳಿಸಿಕೊಳ್ಳುವುದೇ ಅಲ್ಲದೆ ಮಹಾಭಿಯೋಗದ ಅಧಿಕಾರ ಪಡೆಯುವಲ್ಲಿ ಅದು ಯಶಸ್ಸು ಪಡೆಯಿತು.

ಪ್ರಥಮ ಚಾರಲ್

ಬದಲಾಯಿಸಿ

ಅನಂತರ 1625ರಲ್ಲಿ ಪಟ್ಟಕ್ಕೆ ಬಂದ ಪ್ರಥಮ ಚಾರಲ್ಸನೂ ನಿರಂಕುಶವಾಗಿ ಆಳಲೆತ್ನಿಸಿದ. ಆದರೆ ಆಗ ಪ್ರಜೆಗಳ ಬಲ ಅಧಿಕಗೊಂಡಿದ್ದರಿಂದ ಅವರು ಅರಸನ ಪ್ರತಿಯೊಂದು ಯೋಜನೆಯನ್ನೂ ವಿರೋಧಿಸಿದರು. ಅಲ್ಲದೆ 1628ರಲ್ಲಿ ಅವರು ಹಕ್ಕುಗಳ ಬೇಡಿಕೆಯನ್ನು (ದಿ ಪಿಟಿಷನ್ ಆಫ್ ರೈಟ್ಸ್) ಅರಸನ ಮುಂದಿಟ್ಟರು. ಇದು 1215ರ ಮಹಾಸನ್ನದಿನ ಅನಂತರದ ಮಹಾಸನ್ನದು. ಅರಸನ ಅನ್ಯಾಯದ ಆಡಳಿತವನ್ನು ಅಂಕುಶಕ್ಕೊಳಪಡಿಸುವುದೇ ಇದರ ಉದ್ದೇಶ. ದೊರೆ ನಿರ್ವಾಹವಿಲ್ಲದೆ ಇದಕ್ಕೆ ಮನ್ನಣೆ ನೀಡಿದ ಆದರೆ ಮರುವರ್ಷದಿಂದಲೇ (1629) ತನ್ನ ವೈಯಕ್ತಿಕ ಆಡಳಿತವನ್ನಾರಂಭಿಸಿದ. ಥಾಮಸ್ ವೆಂಟ್ವರ್ತ್ ಹಾಗೂ ಲಾಡ್ ಇವರಿಬ್ಬರ ಸಲಹೆಯಂತೆ ಮುಂದೆ ಹನ್ನೊಂದು ವರ್ಷಗಳವರೆಗೆ ನಿರಂಕುಶ ಆಡಳಿತ ನಡೆಸಿದ. ಈ ಅವಧಿಯಲ್ಲಿ ದೊರೆ ಕಾಮನ್ಸ್ ಸಭೆಯ ನಾಯಕರನ್ನು ಬಂಧಿಸಿದ; ನ್ಯಾಯಾಲಯಗಳನ್ನು ತನ್ನ ಇಚ್ಛೆಯ ಮೇರೆಗೆ ಉಪಯೋಗಿಸಿಕೊಂಡ. ಅನ್ಯಾಯವಾದ ಹಾಗೂ ಸಂವಿಧಾನ ವಿರುದ್ಧವಾದ ಮಾರ್ಗಗಳನ್ನನುಸರಿಸಿ ಪ್ರಜೆಗಳಿಂದ ತೆರಿಗೆ ಸುಂಕಗಳನ್ನು ಗಳಿಸಿದ. ವಿರೋಧಿಸಿದವರನ್ನು ಹಿಂಸೆಗೆ ಗುರಿಪಡಿಸಿದ. ಆದರೆ ಇದು ಬಹಳ ಕಾಲ ಮುಂದುವರಿಯಲಿಲ್ಲ. 1640ರಲ್ಲಿ ಹಣದ ಅಭಾವಕ್ಕೊಳಗಾದ ದೊರೆ ಮತ್ತೆ ಪಾರ್ಲಿಮೆಂಟನ್ನು ಕರೆದ. ಲಾಂಗ್ ಪಾರ್ಲಿಮೆಂಟ್ ಎಂದು ಪ್ರಸಿದ್ದವಾಗಿರುವ ಇದು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡಿತು. ಚಾರಲ್ಸ್ ದೊರೆಯಿಂದ ಅನ್ಯಾಯವಾಗಿ ಬಂಧಿಸಲ್ಪಟ್ಟವರನ್ನು ಬಿಡುಗಡೆ ಮಾಡಿತಲ್ಲದೆ ದೊರೆಗೆ ಬೆಂಬಲವಿತ್ತವರನ್ನು ಶಿಕ್ಷಿಸಿತು. ಅನಂತರ ಇದು ಆರು ಮಹತ್ತ್ವದ ಲಿಖಿತ ಕಾಯಿದೆಗಳನ್ನು ಹೊರಡಿಸಿತು. ಅರಸನ ನಿರಂಕುಶತ್ವವನ್ನೂ ದಬ್ಬಾಳಿಕೆಯನ್ನೂ ತಡೆಗಟ್ಟುವುದೇ ಇವುಗಳ ಉದ್ದೇಶ. ಈ ಮೂಲಕ ಪಾರ್ಲಿಮೆಂಟಿನ ಅವಧಿಯನ್ನು ನಿರ್ದಿಷ್ಟಪಡಿಸಲಾಯಿತು. ಸ್ಟಾರ್ ಚೇಂಬರ್ ಮುಂತಾದ ನ್ಯಾಯಾಲಯಗಳನ್ನು ರದ್ಧುಗೊಳಿಸಲಾಯಿತು. ಹೀಗಾಗಿ ಪಾರ್ಲಿಮೆಂಟು ಆಡಳಿತದ ಒಂದು ಮುಖ್ಯವಾದ ಅಂಗವಾಯಿತು. ಹಣಕಾಸಿನ ವ್ಯವಹಾರ ಪಾರ್ಲಿಮೆಂಟಿನ ಅಧಿಕಾರಕ್ಕೆ ಒಳಪಟ್ಟಿತು. ಇದಲ್ಲದೆ ದೇಶದಲ್ಲಿ ಕಾಯಿದೆಯ ಪಾರಮ್ಯತತ್ತ್ವ ಪ್ರತಿಷ್ಠಿತಗೊಂಡಿತ್ತು. ಆದರೆ ಅನಂತರದ ಒಂದೆರಡು ವರ್ಷಗಳಲ್ಲಿಯೇ ಪಾರ್ಲಿಮೆಂಟಿನಲ್ಲಿ ಒಡಕುಂಟಾಯಿತು. ರಾಜ ಮನೆತನದವರು ಹಾಗೂ ಶ್ರೀಮಂತರು ದೊರೆಯೊಂದಿಗೆ ಸೇರಿದರು. ವ್ಯಾಪಾರಿ ಹಾಗೂ ಮಧ್ಯಮ ವರ್ಗದ ಜನತೆ ಪಾರ್ಲಿಮೆಂಟಿನೊಂದಿಗೆ ಸೇರಿದರು. 1642ರ ಜೂನ್ 1ರಂದು ದೊರೆ ಪಾರ್ಲಿಮೆಂಟಿನ ಕಲಾಪಗಳನ್ನು ಒಪ್ಪಲು ನಿರಾಕರಿಸಿದ. ಆಗ ದೇಶದಲ್ಲಿ ಅಂತರ್ಯುದ್ಧ ಆರಂಭವಾಯಿತು. ಧಾರ್ಮಿಕ ಹಾಗೂ ರಾಜಕೀಯ ಕಾರಣಗಳಿಂದ ಸಂಭವಿಸಿದ ಈ ಅಂತರ್ಯುದ್ಧ 1642ರಂದ 1649ರವರೆಗೆ ನಡೆದು ಪಾರ್ಲಿಮೆಂಟ್ ಪಕ್ಷದ ಗೆಲುವಿನಲ್ಲಿ ಮುಕ್ತಾಯಗೊಂಡಿತು. 1649ರಲ್ಲಿ ಚಾರಲ್ಸ್ ದೊರೆಗೆ ಇಂಗ್ಲೆಂಡಿನಲ್ಲಿ ಸಂವಿಧಾನಬದ್ಧ ಹಾಗೂ ನಿರಂಕುಶ ಪ್ರಭುತ್ವ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ಕಾಮನ್‍ವೆಲ್ತ್ ಹಾಗೂ ಇತರ ರಾಜಕೀಯ ಪದ್ಧತಿಗಳ ಪ್ರಯೋಗಗಳನ್ನು; ಕೈಗೊಳ್ಳಲಾಯಿತು. ಆದರೆ ಯಾವುದೂ ಫಲಕಾರಿಯಾಗಲಿಲ್ಲ. ಕೊನೆಗೆ ಆಲಿವರ್ ಕ್ರಾಮವೆಲ್ ಸರ್ವಾಧಿಕಾರಿಯಾದ; ಲಿಖಿತ ಕಾಯಿದೆಗಳ ಮೇರೆಗೆ ಆಡಳಿತ ನಡೆಸಿ ದೇಶದಲ್ಲಿ ಶಾಂತಿ ನೆಲೆಗೊಳ್ಳುವ ಹಾಗೆ ಮಾಡಿದ. ಅಲ್ಲದೆ ಸಂವಿಧಾನಬದ್ಧ ಸರ್ಕಾರ ರಚಿಸಿದ. ಈತನ ಆಡಳಿತ ಕಾಲದಲ್ಲಿ ಬ್ರಿಟಿಷ್ ವಸಾಹತು ವಿಸ್ತಾರಗೊಂಡಿತು.ಪರಮಾಧಿಕಾರವುಳ್ಳ ರಾಜಪ್ರಭುತ್ವದ ಅಗತ್ಯದ ಪ್ರತಿಪಾದನೆ ಹಾಬ್ಸ್‍ನ ಲೆವಿಯಥಾನ್ (1651) ಕೃತಿಯಲ್ಲಿದೆ.

(ನೋಡಿ- ಹಾಬ್ಸ್,-ತಾಮಸ್)

ಸಂವಿಧಾನ ಬದ್ಧ ರಾಜತ್ವ

ಬದಲಾಯಿಸಿ

ಕ್ರಾಮ್‍ವೆಲ್‍ನ ಮರಣಾನಂತರ ಅರಾಜಕತೆಯನ್ನನುಭವಿಸಿದ ಜನ ಪುನಃ ಅರಸೊತ್ತಿಗೆಯನ್ನು ಅಸ್ತಿತ್ವಕ್ಕೆ ತಂದರು. ದ್ವಿತೀಯ ಚಾರಲ್ಸ ಅರಸನಾದ. ಪಾರ್ಲಿಮೆಂಟು ಅರಸನ ಮೇಲೆ ಅನೇಕ ನಿರ್ಬಂಧಗಳನ್ನು ಹಾಕಿ ಮೊದಲಿಗಿಂತಲೂ ಹೆಚ್ಚಿನ ಅಧಿಕಾರಗಳನ್ನು ಪಡೆದುಕೊಂಡಿತು. ದ್ವಿತೀಯ ಚಾರಲ್ಸನ ಆಳ್ವಿಕೆಯ (1660-1685) ಕಾಲ ಸಂವಿಧಾನ ಬದ್ಧವಾದ ರಾಜಕೀಯ ಬೆಳವಣಿಗೆಯ ಮಹತ್ವದ ಕಾಲವಾಗಿತ್ತು. ಜಹಗೀರಿ ಹಾಗೂ ಸೈನಿಕ ಉಂಬಳಿಯ ಪದ್ಧತಿ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಅರಸೊತ್ತಿಗೆ ಪ್ರಜೆಗಳಿಂದ ನಿರ್ಮಿತಗೊಂಡದ್ದು ಎಂಬ ಭಾವನೆ ಬಲಗೊಂಡಿತು. ಇದರಿಂದಾಗಿ ಪ್ರಜೆಗಳು ಅರಸನನ್ನು ತಮ್ಮ ಇಚ್ಛೆಯ ಮೇರೆಗೆ ಬದಲಾಯಿಸಬಹುದೆಂಬ ತತ್ತ್ವ ನಿಶ್ಚಿತಗೊಂಡಿತು. ಪಾರ್ಲಿಮೆಂಟಿನ ಪ್ರಭುತ್ವ ಸ್ಥಾಪಿಸಲ್ಪಟ್ಟು ದೊರೆ ಕೇವಲ ಸಾಂಕೇತಿಕ ಆಧಿಕಾರಿ ಅಥವಾ ಸಂಸ್ಥೆಯಂತಾದ. ಆತ ಪಾರ್ಲಿಮೆಂಟಿನಲ್ಲಿ ಬಹುಮತ ಉಳ್ಳ ಪಕ್ಷದಿಂದ ಮಂತ್ರಿಗಳನ್ನು ಆರಿಸಬೇಕಾಗುತ್ತಿತ್ತು. ತೆರಿಗೆ ಹೇರುವಲ್ಲಿ ಮತ್ತು ಕಾರ್ಯಾಂಗದ ಹಾಗೂ ಸೈನ್ಯದ ಮೇಲೆ ಪಾರ್ಲಿಮೆಂಟಿನ ಅಧಿಕಾರ ಬಲಗೊಂಡಿತು. ನ್ಯಾಯಾಂಗ ಪ್ರತ್ಯೇಕಿಸಲ್ಪಟ್ಟು ಅರಸನ ವಿರುದ್ಧ ಕೂಡ (ತಪ್ಪಿದ್ದಲ್ಲಿ) ನಿರ್ಣಯ ಕೊಡುವ ಹಕ್ಕು ಪಡೆಯಿತು. ಆಸಾಮಿ ಹಾಜರಿ ಕಾಯಿದೆ (1679) ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಯ ಸಾಧನವಾಯಿತು. ಇವಲ್ಲದೆ ಪಕ್ಷ ವ್ಯವಸ್ಥೆಯ ಉದಯವಾಗಿ ವ್ಹಿಗ್ ಹಾಗೂ ಟೋರಿ ಪಕ್ಷಗಳು ಸ್ಥಾಪಿತವಾದುವು. ಮಂತ್ರಿ ಸಂಪುಟ ಪ್ರಮುಖ ಸ್ಥಾನಹೊಂದಿತು.

ದ್ವಿತೀಯ ಜೇಮ್ಸ್ (1685-88)

ಬದಲಾಯಿಸಿ

ದ್ವಿತೀಯ ಚಾರಲ್ಸ್ ದೊರೆಯ ಅನಂತರ ಆತನ ತಮ್ಮನಾದ ದ್ವಿತೀಯ ಜೇಮ್ಸ್ (1685-88) ಪಟ್ಟಕ್ಕೆ ಬಂದ. ನಿರಂಕುಶ ಪ್ರಭುತ್ವ ಸ್ಥಾಪಿಸಲು ನಡೆಸಿದ ಈತನ ಪ್ರಯತ್ನ 1688ರಲ್ಲಿ ಇಂಗ್ಲೆಂಡಿನ ಇತಿಹಾಸದಲ್ಲಿ ಕೊನೆಯ ರಾಜಕೀಯ ಕ್ರಾಂತಿಯಲ್ಲಿ ಕೊನೆಗೊಂಡಿತು. ಪರಿಣಾಮವಾಗಿ ಅರಸನ ಪರಮಾಧಿಕಾರ ಪಾರ್ಲಿಮೆಂಟಿಗೆ (ಪ್ರಜೆಗಳಿಗೆ) ಸ್ಥಳಾಂತರಗೊಂಡು ಸಂಪೂರ್ಣ ಪ್ರಜಾಪ್ರಭುತ್ವ ಸ್ಥಾಪಿಸಲ್ಪಟ್ಟಿತು. ಜಾನ್ ಲಾಕ್‍ನಂತ (1632-1704) ರಾಜಕೀಯ ತತ್ತ್ವಜ್ಞರು ಪ್ರಜೆಗಳ ಸಂಪೂರ್ಣ ಸ್ವಾತಂತ್ರ್ಯ ಪ್ರತಿಪಾದನೆ ಮಾಡಿದರು. ಜೇಮ್ಸನ ಪಲಾಯನದ ಅನಂತರ ಪಾರ್ಲಿಮೆಂಟು ಆರೆಂಜಿನ ವಿಲಿಯಂ ಹಾಗೂ ಆತನ ಪತ್ನಿ ಮೇರಿ ಇವರನ್ನು ಆಮಂತ್ರಿಸಿ, ಇಂಗ್ಲೆಂಡಿನ ರಾಜರಾಣಿಯರನ್ನಾಗಿ ಆರಿಸಿ ಪ್ರಭುತ್ವವನ್ನು ಅವರಿಗೆ ಸಂಯುಕ್ತವಾಗಿ ಒಪ್ಪಿಸಿತು. 1689ರಲ್ಲಿ ಪ್ರಭುವಿನಿಂದ ಮಾನ್ಯವಾದ ಹಕ್ಕುಗಳ ಮಸೂದೆ ಅಂತಿಮವಾಗಿ ಪಾರ್ಲಿಮೆಂಟಿನ ಪರಮಾಧಿಕಾರ ಹಾಗೂ ಪ್ರಜೆಗಳ ಸ್ವಾತಂತ್ರ್ಯ ಸ್ಥಾಪನೆ ಮಾಡಿತು. ಕಾಮನ್ಸ್ ಸಭೆಗೆ ಚುನಾಯಿಸುವ ಪದ್ಧತಿ ಜಾರಿಗೆ ಬಂತು. ಹಾಗೆಯೇ ಪ್ರಚಾರ ಸ್ವಾತಂತ್ರ್ಯವೂ ಲಭಿಸಿತು.

ಮಂತ್ರಿ ಸಂಪುಟದ ಪ್ರಾಬಲ್ಯ ಪ್ರಧಾನ ಮಂತ್ರಿ ಪದವಿಯ ಉಗಮ

ಬದಲಾಯಿಸಿ

ಹದಿನೆಂಟನೆಯ ಶತಮಾನದ ಆರಂಭದೊಂದಿಗೆ ಇಂಗ್ಲೆಂಡಿನ ರಾಜಕೀಯ ಇತಿಹಾಸದಲ್ಲಿ ಪ್ರಜಾಪ್ರಭುತ್ವ ಯುಗದ ಆರಂಭವಾಯಿತು. 1688ರ ರಕ್ತ ರಹಿತ ಕ್ರಾಂತಿಯ ಅನಂತರ ಪಾರ್ಲಿಮೆಂಟಿನ ಅಧಿಕಾರಗಳಲ್ಲಿ ಹೆಚ್ಚಳವಾಯಿತು. ಪಾರ್ಲಿಮೆಂಟು ಸ್ಥಿರಸಂಸ್ಥೆಯಾಗಿ ದೇಶದ ರಾಜಕೀಯದಲ್ಲಿ ಮಹತ್ತ್ವದ ಪಾತ್ರ ವಹಿಸಲಾರಂಭಿಸಿತು. ವ್ಯವಹಾರದ ರೀತಿ-ನೀತಿಗಳು ಬೆಳೆದುಬಂದುವು. ಪ್ರಜಾತಾಂತ್ರಿಕ ತತ್ತ್ವಗಳು ಆಚರಣೆಗೆ ಬಂದುವಲ್ಲದೆ ಹ್ಯಾನೋವರ್ ಮನೆತನದ ಅರಸರ ಕಾಲದಲ್ಲಿ ಮಂತ್ರಿಸಂಪುಟ (ಕ್ಯಾಬಿನೆಟ್) ಹಾಗೂ ರಾಜಕೀಯ ಪಕ್ಷಗಳು ಪ್ರಾಮುಖ್ಯ ಪಡೆದುವು. ದೊರೆ ಹಾಗೂ ಪಾರ್ಲಿಮೆಂಟಿನ ನಡುವಣ ಘರ್ಷಣೆಯ ಪರಿಣಾಮವಾಗಿ ಪಾರ್ಲಿಮೆಂಟು ಪಡೆದುಕೊಂಡಿದ್ದ ಪರಮಾಧಿಕಾರವನ್ನು ಸಾಮಾನ್ಯ ಪ್ರಜೆಗಳಲ್ಲಿ ಸ್ಥಾಪಿಸುವ ಪ್ರಯತ್ನ ನಡೆಯಿತು. ಈಕಾಲದಲ್ಲಿ ಬ್ರಿಟನ್ನಿನಲ್ಲಿ ಸಂಭವಿಸಿದ ಕೈಗಾರಿಕಾ ಕ್ರಾಂತಿ ಹಾಗೂ ಫ್ರಾನ್ಸಿನಲ್ಲಿ ನಡೆದ ರಾಜಕೀಯ ಕ್ರಾಂತಿಯ ಪರಿಣಾಮವಾಗಿ ಜಾಗೃತಗೊಂಡಿದ್ದ ಸಾಮಾನ್ಯ ಪ್ರಜೆಗಳು (ಮುಖ್ಯವಾಗಿ ಮಧ್ಯಮ ವರ್ಗಕ್ಕೆ ಸೇರಿದವರು) ರಾಜ್ಯ ಕಾರ್ಯಗಳಲ್ಲಿ ಭಾಗವಹಿಸಲು ಕಾತರ ಹೊಂದಿದರು.

ಪ್ರಥಮ ಜಾರ್ಜ್ (1714-27) ಹಾಗೂ ದ್ವಿತೀಯ ಜಾರ್ಜ್‍ರ (1727-60) ಆಳ್ವಿಕೆ

ಬದಲಾಯಿಸಿ

ಪ್ರಥಮ ಜಾರ್ಜ್ (1714-27) ಹಾಗೂ ದ್ವಿತೀಯ ಜಾರ್ಜ್‍ರ (1727-60) ಆಳ್ವಿಕೆಯ ಕಾಲದಲ್ಲಿ ಕ್ಯಾಬಿನೆಟ್ ಪದ್ಧತಿ ಮಹತ್ವ ಪಡೆಯಿತು. ಪ್ರಥಮ ಜಾರ್ಜನಿಗೆ ಇಂಗ್ಲಿಷ್ ಭಾಷೆ ಬರುತ್ತಿರಲಿಲ್ಲವಾದ್ದರಿಂದ ಆತ ಸಂಪುಟದ ಸಭೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರಲಿಲ್ಲ. ಹೀಗಾಗಿ ಪ್ರಮುಖ ಮಂತ್ರಿಗಳಿಂದ ಕೂಡಿದ ಕ್ಯಾಬಿನೆಟ್ (ಸಂಪುಟ) ಸಂಪೂರ್ಣವಾಗಿ ರಾಜ್ಯದ ಅಧಿಕಾರ ನಿರ್ವಹಿಸುವಂತಾಯಿತು. ಸಂಪುಟದಲ್ಲಿ ದೊರೆಯ ಸ್ಥಾನವನ್ನು ಪ್ರಮುಖ ಮಂತ್ರಿಯೊಬ್ಬ ಅಲಂಕರಿಸುತ್ತಿದ್ದ, ಮುಂದೆ ಆತನೇ ಪ್ರಧಾನಮಂತ್ರಿಯೆಂಬ ನಾಮಕರಣ ಹೊಂದಿದ. ಪ್ರಧಾನ ಮಂತ್ರಿಯ ನೇತೃತ್ವದಲ್ಲಿ ರಚಿತವಾದ ಸಂಪುಟದ ಸದಸ್ಯರು ಸಾಮಾನ್ಯವಾಗಿ ಒಂದೇ ಪಕ್ಷಕ್ಕೆ ಸೇರಿದವರಾಗಿದ್ದು, ಕಾಮನ್ಸ್ ಸಭೆಯ ಬಹುಮತ ಪಡೆದಿರುತ್ತಿದ್ದರು. ಹೀಗೆ ಪ್ರಥಮ ಜಾರ್ಜ್ ದೊರೆಯ ಕಾಲದಲ್ಲಿ ಪ್ರತ್ಯೇಕವಾಗಿ ರಚಿತವಾದ ಕ್ಯಾಬಿನೆಟ್ ಮುಂದೆ ವಿಕಾಸಗೊಂಡು ಸಂವಿಧಾನ ಹಾಗೂ ಸರ್ಕಾರದ ಪ್ರಮುಖ ಅಂಗವಾಯಿತು. 1721ರಲ್ಲಿ ಸಂಪುಟದ ಮುಖಂಡತ್ವವನ್ನು ವಹಿಸಿದ ವ್ಹಿಗ್ ಪಕ್ಷದ ವಾಲ್ ಪೋಲ್ ಇಂಗ್ಲೆಂಡಿನ ಪ್ರಥಮ ಪ್ರಧಾನಮಂತ್ರಿಯೆನಿಸಿಕೊಂಡ. ಈತ ತನಗೆ ಸರಿದೋರದ ಕೆಲ ಮಂತ್ರಿಗಳನ್ನು ಮಂತ್ರಿಮಂಡಲದಿಂದ ಬೇರ್ಪಡಿಸಿದ. ಅನಂತರ ದ್ವಿತೀಯ ಜಾರ್ಜ್ ಅರಸನ ಆಳ್ವಿಕೆಯ ಕಾಲದಲ್ಲೂ ವಾಲ್‍ಪೋಲ್ ಪ್ರಧಾನ ಮಂತ್ರಿಯಾಗಿ ಮುಂದುವರಿದು 1748ರ ವರೆಗೆ ಯಶಸ್ವಿಯಾಗಿ ಆಡಳಿತ ನಿರ್ವಹಿಸಿದ. ಈತನ ಯುದ್ಧನೀತಿ ಇಂಗ್ಲೆಂಡಿನ ಜನತೆಗೆ ಸರಿಬೀಳದ್ದರಿಂದ ಅವರು ಈತನನ್ನು ಪ್ರಧಾನಮಂತ್ರಿತ್ವ ತ್ಯಜಿಸಲು ಒತ್ತಾಯ ಪಡಿಸಿದರು. ಆದರೂ ಈತ ಸ್ಥಾಪಿಸಿದ ಅನೇಕ ಸಂಪ್ರದಾಯಗಳು ಇಂದಿಗೂ ಜಾರಿಯಲ್ಲಿವೆ. ಇಂಗ್ಲೆಂಡಿನ ಪ್ರಧಾನ ಮಂತ್ರಿ ಪದವಿಯ ಹಾಗೂ ಆ ಕಚೇರಿಯ ಮೂಲ ಪುರುಷನೇ ವಾಲ್‍ಪೋಲ್.

ತೃತೀಯ ಜಾರ್ಜ್ ಟೋರಿ

ಬದಲಾಯಿಸಿ

1760ರಲ್ಲಿ ಪಟ್ಟಕ್ಕೆ ಬಂದ ತೃತೀಯ ಜಾರ್ಜ್ ಟೋರಿ ಪಕ್ಷದ ಬೆಂಬಲದೊಂದಿಗೆ ಸಂಪುಟದ ಅಧಿಕಾರವನ್ನು ಹಿಂದಿರುಗಿ ಪಡೆದು ತಾನೇ ಅಧಿಕಾರ ನಡೆಸಬೇಕೆಂದು ಯತ್ನಿಸಿ, ಸ್ವಲ್ಪ ಮಟ್ಟಿಗೆ ಯಶಸ್ಸನ್ನೂ ಪಡೆದ. ತನ್ನ ಇಚ್ಛೆಗೆ ವಿರುದ್ಧವಾಗಿ ನಡೆದ ಮಂತ್ರಿಗಳನ್ನು ಪದಚ್ಯುತಿಗೊಳಿಸಿದ. ಅಲ್ಲದೆ ಪಾರ್ಲಿಮೆಂಟಿನ ಇಚ್ಛೆಯನ್ನು ಕಡೆಗಣಿಸಿದ. ಇದರಿಂದಾಗಿ ವಿರೋಧ ಬೆಳೆದು ಬಂದು ಅರಸ ತನ್ನ ಆಳ್ವಿಕೆಯ ಕೊನೆಯಲ್ಲಿ ಘನತೆ ಹಾಗೂ ಆಧಿಕಾರ ಕಳೆದುಕೊಂಡ. 1783ರಲ್ಲಿ ಹಿರಿಯ ಪಿಟ್ ಮಂತ್ರಿಮಂಡಲದ ರಚನೆಯೊಂದಿಗೆ ದೊರೆಯ ವೈಯಕ್ತಿಕ ಆಡಳಿತ ಕೊನೆಗೊಂಡಿತು. ಪಿಟ್ ಅನೇಕ ಸುಧಾರಣೆಗಳನ್ನು ತರಲೆತ್ನಿಸಿದ. 1785ರಲ್ಲಿ ಆತ ಪಾರ್ಲಿಮೆಂಟಿನಲ್ಲಿ ಅದರ ರಚನೆಯ ಸುಧಾರಣೆಗೆ ಸಂಬಂಧಿಸಿದ ಮಸೂದೆಯೊಂದನ್ನು ಮಂಡಿಸಿದ. ಆದರೆ ಅರಸನ ವಿರೋಧದಿಂದಾಗಿ ಅದು ಯಶಸ್ವಿಯಾಗಲಿಲ್ಲ. ಇದೇ ಕಾಲದಲ್ಲಿ ಅಬಾಧಿತ ಚುನಾವಣೆ ಹಾಗೂ ಪಾರ್ಲಿಮೆಂಟಿನ ಚರ್ಚೆಯ ವರದಿಗಳನ್ನು ಪ್ರಕಟಿಸುವ ಹಕ್ಕುಗಳು ದೊರಕಿದವು. ಮುಂದೆ ನಾಲ್ಕನೆಯ ವಿಲಿಯಂನ (1831-1837) ಆಳ್ವಿಕೆಯ ಕಾಲದಲ್ಲಿ ವ್ಹಿಗ್ ಪಕ್ಷ ಬಲಗೊಂಡಿತು. ಕೈಗಾರಿಕಾ ಕ್ರಾಂತಿ ಹಾಗೂ ಫ್ರೆಂಚ್ ರಾಜಕೀಯ ಕ್ರಾಂತಿಗಳಿಂದ ಉದಿಸಿದ್ದ ಜಾಗೃತಿಯಿಂದಾಗಿ ಕೆಲ ಸುಧಾರಣೆಗಳನ್ನು ಕೈಗೊಳ್ಳಬೇಕಾದ್ದು ಅವಶ್ಯವಾಯಿತು. ಮಧ್ಯಮವರ್ಗದ ಜನತೆ ಮತ ನೀಡುವ ಹಕ್ಕು ಪಡೆಯಲು ಸಕ್ರಿಯವಾಗಿ ಚಳವಳಿಯನ್ನಾರಂಭಿಸಿತು. ಈ ಹಿಂದೆ ಮೂರು ಸಲ ಮಂಡಿಸಲಾಗಿದ್ದ ಸುಧಾರಣಾ ಮಸೂದೆ 1832ರ ಜೂನ್ 7 ರಂದು ಕಾಯಿದೆಯಾಯಿತು. ಪ್ರಚಲಿತವಾಗಿದ್ದ ಅನೇಕ ಅನಿಯಮಿತ ರೂಢಿಗಳು ಬದಲಾಗಿ ಹೊಸ ನಿಯಮಗಳು ಜಾರಿಯಲ್ಲಿ ಬಂದುವು, 2,000 ದಿಂದ 4,000ದ ವರೆಗೆ ಜನಸಂಖ್ಯೆಯುಳ್ಳ ಊರುಗಳು ಪಾರ್ಲಿಮೆಂಟಿಗೆ ಒಬ್ಬೊಬ್ಬ ಪ್ರತಿ ನಿಧಿಯನ್ನು ಇಳಿಸುವ ಹಕ್ಕು ಪಡೆದುವು. ಚುನಾವಣೆಯ ಜಿಲ್ಲೆಗಳ ಸಂಖ್ಯೆಯನ್ನು 95 ರಿಂದ 160ಕ್ಕೆ ಹೆಚ್ಚಿಸಿ ಸದಸ್ಯರ ಸಂಖ್ಯೆಯನ್ನು 658ಕ್ಕೆ ಏರಿಸಲಾಯಿತು. ಮತ ಕೊಡುವ ಅಧಿಕಾರ ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಇದಕ್ಕೆ ವ್ಯಕ್ತಿಯ ಆದಾಯವೇ ಆಧಾರವಾಗಿತ್ತು. ಒಟ್ಟಿನಲ್ಲಿ 1832ರ ಈ ಕಾಯಿದೆ ಇಂಗ್ಲೆಂಡಿನಲ್ಲಿ ಪ್ರತಿನಿಧಿ ಸರ್ಕಾರ ಹಾಗೂ ಪ್ರಜಾಪ್ರಭುತ್ವದ ತಳಹದಿಯನ್ನು ಭದ್ರಪಡಿಸಿತು. ಪ್ರಥಮವಾಗಿ ಮಧ್ಯಮ ವರ್ಗದ ಸಾಮಾನ್ಯ ಪ್ರಜೆಗಳ ಕೈಯಲ್ಲಿ ಅಧಿಕಾರ ಬಂತು. ಕಾಮನ್ಸ್ ಸಭೆ ನಿಜವಾದ ಪ್ರಜಾಪ್ರತಿನಿಧಿ ಸಭೆಯಾಯಿತು. ಈ ಹೊಸ ಪಾರ್ಲಿಮೆಂಟು ರಚಿತಗೊಂಡ ಅನಂತರ ಆಡಳಿತವನ್ನು ವಹಿಸಿಕೊಂಡ ವ್ಹಿಗ್ ಪಕ್ಷ ಬ್ರಿಟಿಷ್ ಸಾಮ್ರಾಜ್ಯದಲ್ಲಿ ದಾಸ್ಯಪದ್ಧತಿಯನ್ನು ಕಾನೂನಿನ ಮೂಲಕ ರದ್ಧುಗೊಳಿಸಿತು. ಅಲ್ಲದೆ ಸಾಮಾನ್ಯ ಜನರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿತು. ಪೌರಸಭಾ ಕಾಯಿದೆಯ (1835) ಮೂಲಕ ನಗರಾಡಳಿತವನ್ನು ಸುಧಾರಿಸಲಾಯಿತು. ಅದನ್ನು ನೋಡಿಕೊಳ್ಳಲು ಸಮಿತಿಗಳು ಸ್ಥಾಪಿತವಾದುವು.

ವಿಕ್ಟೋರಿಯ ರಾಣಿಯ ಆಳ್ವಿಕೆ

ಬದಲಾಯಿಸಿ

ವಿಕ್ಟೋರಿಯ ರಾಣಿಯ ಆಳ್ವಿಕೆಯ ಕಾಲದಲ್ಲಿ (1837-1902) ಲಾರ್ಡ್ ಮೆಲ್ಬೋರ್ನ್, ಸರ್ ರಾಬರ್ಟ್ ಪೀಲ್, ಡಿಸ್ರೇಲಿ, ಗ್ಲಾಡ್‍ಸ್ಟನ್ ಇವರು ಪ್ರಧಾನಮಂತ್ರಿಗಳಾಗಿ ಆಡಳಿತ ನಡೆಸಿದರು. ಇವರು ಪಾರ್ಲಿಮೆಂಟರಿ ಪದ್ಧತಿಯ ಸರ್ಕಾರದಲ್ಲಿ ಅನೇಕ ಸುಧಾರಣೆಗಳನ್ನು ತಂದು ಅದನ್ನು ಭದ್ರಪಡಿಸಿದರು. 1867ರಲ್ಲಿ ಜಾರಿಗೆ ಬಂದ ದ್ವಿತೀಯ ಸುಧಾರಣಾ ಕಾಯಿದೆ ಸಾಮಾನ್ಯ ಪ್ರಜೆಗಳ ಮತಕೊಡುವ ಹಕ್ಕನ್ನು ವಿಸ್ತರಿಸಿತು. ಈಗಾಗಲೇ 1832ರ ಕಾಯಿದೆಯೊಂದರ ಪ್ರಕಾರ ಗುಪ್ತಮತದಾನ ಪದ್ಧತಿಯನ್ನು ಆರಂಭಿಸಲಾಗಿತ್ತು. 1884ರ ತೃತೀಯ ಸುಧಾರಣಾ ಕಾಯಿದೆ ವ್ಯವಸಾಯ ಕೂಲಿಕಾರರಿಗೆ ಮತ ನೀಡುವ ಹಕ್ಕು ಕೊಟ್ಟಿತ್ತು. ಈ ಎಲ್ಲ ಬದಲಾವಣೆಗಳಿಂದ ಲಾಡ್ರ್ಸ್ ಸಭೆಯ ಮಹತ್ವ ಕಡಿಮೆಯಾಗುತ್ತ ಬಂತು. ಅಲ್ಲದೆ ಏಳನೆಯ ಎಡ್ವರ್ಡ್ ಅರಸನ ಕಾಲದಲ್ಲಿ (1901-1910) ನಡೆದ ಪ್ರಮುಖ ಘಟನೆಯೊಂದರಿಂದಾಗಿ ಅದು ಹಣಕಾಸಿನ ಸಂಬಂಧದ ಮಹತ್ತ್ವದ ಅಧಿಕಾರಗಳನ್ನು ಕಳೆದುಕೊಂಡಿತು. 1909ರಲ್ಲಿ ಆಸ್ಕ್ವಿತ್ ಮಂತ್ರಿಯಾಗಿದ್ದಾಗ ಕಾಮನ್ಸ್ ಸಭೆ ಸಮ್ಮತಿಸದೆ ಬಜೆಟ್ಟನ್ನು ಲಾಡ್ರ್ಸ್ ಸಭೆ ತಡೆಹಿಡಿದಾಗ ಸಂವಿಧಾನ ಸಂಬಂಧವಾದ ಸಮಸ್ಯೆ ಉದ್ಭವಿಸಿತು. ಪಾರ್ಲಿಮೆಂಟು ವಿಸರ್ಜನೆಗೊಂಡಿತು. ಹೊಸ ಚುನಾವಣೆಗಳು ನಡೆದುವು. ಆಸ್ಕ್ವಿತ್ ಬಹುಮತದೊಂದಿಗೆ ಅಧಿಕಾರಕ್ಕೆ ಹಿಂತಿರುಗಿದ. ಕೊನೆಗೆ 1910ರಲ್ಲಿ ಬಜೆಟ್ ಮಸೂದೆಯನ್ನು ಲಾಡ್ರ್ಸ್ ಸಭೆ ಒಪ್ಪಬೇಕಾಯಿತು. ಆದರೆ ಐದನೆಯ ಜಾರ್ಜ್ ದೊರೆಯ ಆಳ್ವಿಕೆಯ (1910-1936) ಕಾಲದ ಆರಂಭದಲ್ಲಿ 1911ರ ಪಾರ್ಲಿಮೆಂಟ್ ಕಾಯಿದೆಯ ಮೂಲಕ ಲಾಡ್ರ್ಸ್ ಸಭೆಯ ಹಣಕಾಸಿನ ಅಧಿಕಾರಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತಲ್ಲದೆ ಇತರ ಸಂಬಂಧದಲ್ಲೂ ಅದರ ಅಧಿಕಾರಗಳನ್ನು ಮೊಟಕುಗೊಳಿಸಲಾಯಿತು. ಮತ್ತೆ 1949ರಲ್ಲಿ ಈ ಕಾಯಿದೆಯಲ್ಲಿ ತಿದ್ದುಪಡಿ ಮಾಡಿ ಲಾಡ್ರ್ಸ್ ಸಭೆಯ ಅಧಿಕಾರಗಳನ್ನು ಮತ್ತಷ್ಟು ಕಡಿಮೆ ಮಾಡಲಾಯಿತು.1918ರ ನಾಲ್ಕನೆಯ ಸುಧಾರಣಾ ಕಾಯಿದೆಯನ್ವಯ 21 ವರ್ಷ ವಯಸ್ಸಿನ ಪುರುಷರು ಹಾಗೂ 30 ವರ್ಷ ವಯಸ್ಸಿನ ಸ್ತ್ರೀಯರಿಗೆ ಮತ ನೀಡುವ ಹಕ್ಕು ಕೊಡಲಾಯಿತು. ಮುಂದೆ 1928ರಲ್ಲಿ 21 ವರ್ಷದ ಅಥವಾ ಅದಕ್ಕೆ ಮೇಲ್ಪಟ್ಟ ವಯಸ್ಸಿನ ಸ್ತ್ರೀಪುರುಷರಿಗೆ ಸಮಾನವಾಗಿ ಮತಕೊಡುವ ಹಕ್ಕು ನೀಡಲಾಯಿತು. ಈಗ ಈ ವಯೋಮಿತಿಯನ್ನು 18 ವರ್ಷಗಳಿಗೆ ಇಳಿಸಲಾಗಿದೆ.

ರಾಜಕೀಯ ಪಕ್ಷಗಳು

ಬದಲಾಯಿಸಿ

1642ರಲ್ಲಿ ನಡೆದ ಅಂತರ್ಯುದ್ಧದಲ್ಲಿ ದೊರೆ ಹಾಗೂ ಪಾರ್ಲಿಮೆಂಟಿಗೆ ಬೆಂಬಲವಿತ್ತ ಗುಂಪುಗಳು ಮುಂದೆ ಟೋರಿ ಹಾಗು ವ್ಹಿಗ್ ರಾಜಕೀಯ ಪಕ್ಷಗಳಾಗಿ ಬೆಳೆದುಬಂದುವು. ದೇಶದಲ್ಲಿ ಪ್ರಜಾಪ್ರಭುತ್ವ ಪದ್ಧತಿ ಬಲಗೊಂಡಂತೆ ಈ ಪಕ್ಷಗಳೇ ಕನ್ಸರ್‍ವೇಟಿವ್ (ಸಂಪ್ರದಾಯವಾದಿ) ಹಾಗೂ ಲಿಬರಲ್ (ಉದಾರವಾದಿ) ಪಕ್ಷಗಳಾದುವು. 20ನೆಯ ಶತಮಾನದ ಆರಂಭದಿಂದ ಲೇಬರ್ ಪಕ್ಷ ಬಲಗೊಳ್ಳುತ್ತ ಬಂದು ಪ್ರಥಮ ಮಹಾಯುದ್ಧದ ಅನಂತರ ಕನ್ಸರ್‍ವೇಟಿವ್ ಹಾಗೂ ಲೇಬರ್ (ಕಾರ್ಮಿಕ) ಪಕ್ಷಗಳು ಸ್ಥಿರತೆ ತಳೆದಿವೆ. ಇದರಿಂದಾಗಿ ಇಂಗ್ಲೆಂಡಿನಲ್ಲಿ ಇಂದು ದ್ವಿಪಕ್ಷ ಪದ್ಧತಿ ಸ್ಥಿರವಾಗಿದ್ದು ಇಂಗ್ಲೆಂಡಿನ ಸರ್ಕಾರಕ್ಕೆ ಸುಭದ್ರ ತಳಹದಿಯಾಗಿದೆ. ಈ ಸುಸಂಘಟಿತ ರಾಜಕೀಯ ಪಕ್ಷಗಳು ಇಂದು ಇಂಗ್ಲೆಂಡಿಗೆ ಸ್ಥಿರ ಸರ್ಕಾರಗಳನ್ನು ಒದಗಿಸುತ್ತಿವೆ. ಈ ರಾಜಕೀಯ ಪಕ್ಷಗಳು ಬ್ರಿಟನ್ನಿನ ಪ್ರಜಾಪ್ರಭುತ್ವದ ಮೂಲಾಧಾರಗಳಾಗಿ ನಿಂತಿವೆ. ಆದ್ದರಿಂದಲೇ ಆಡಳಿತ ಪಕ್ಷದಂತೆ ವಿರೋಧ ಪಕ್ಷವೂ ಮನ್ನಣೆ ಪಡೆದಿದೆ.ಹೀಗೆ ಶತಮಾನಗಳಿಂದ ತನ್ನ ಅವಶ್ಯಕತೆಗಳಿಗುಣವಾಗಿ ವಿಕಸಿತವಾಗಿರುವುದು ಇಂಗ್ಲೆಂಡಿನ ರಾಜಕೀಯ ವ್ಯವಸ್ಥೆಯ ಒಂದು ವೈಶಿಷ್ಟೈ. ತನ್ನದೇ ಆದ ಲಿಖಿತ ಸಂವಿಧಾನ ಹೊಂದಿರದಿದ್ದರೂ ಅದು ಸರ್ಕಾರ ಪದ್ಧತಿ ಹಾಗೂ ಸಂಸದೀಯ ಸಂಸ್ಥೆಗಳ ತೌರಾಗಿದೆ. ಅಲಿಖಿತವೆಂದು ಕರೆಯಲಾದ ಇಂಗ್ಲಿಷ್ ಸಂವಿಧಾನವೇ ಪ್ರಪ್ರಥಮ ಲಿಖಿತ ಸಂವಿಧಾನವೆನಿಸಿಕೊಂಡಿರುವ ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಂವಿಧಾನದ ಮೇಲೂ ಕೆನಡ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ಭಾರತ ಮತ್ತು ಪ್ರಪಂಚದ ಇನ್ನೂ ಅನೇಕ ರಾಷ್ಟ್ರಗಳ ಸಂವಿಧಾನಗಳ ಮೇಲೂ ತನ್ನ ಪ್ರಭಾವ ಬೀರಿದೆ. ಎಷ್ಟೋ ಸಂವಿಧಾನಗಳು ಇದುವರೆಗೆ ಅಸ್ತ್ತಿತ್ವಕ್ಕೆ ಬಂದು ಉರುಳಿಹೋಗಿವೆ. ಆದರೆ ಬ್ರಿಟಿಷ್ ಸಂವಿಧಾನಕ್ಕೆ ಸಾವೇ ಇಲ್ಲವೆನ್ನಬಹುದು. ಅಂತೆಯೇ ಇಂಗ್ಲೆಂಡಿನ ರಾಜಕೀಯ ವ್ಯವಸ್ಥೆಯೂ ಸುಭದ್ರತೆಗೆ ಇನ್ನೊಂದು ಹೆಸರಾಗಿದೆ.

ಉಲ್ಲೇಖಗಳು

ಬದಲಾಯಿಸಿ