ಆಸ್ ಇಫ್ (As if) ತತ್ತ್ವ

ಇದನ್ನು ತನ್ನ ತತ್ತ್ವದ ಹೆಸರಾಗಿ ಏರ್ಪಡಿಸಿಕೊಂಡವ ಹಾನ್ಸ್ ವೈಹಿಂಗರ್ ಎಂಬ ಪಾಶ್ಚಾತ್ಯ ತಾತ್ತ್ವಿಕ.

ಆ್ಯಸ್ ಇಫ್ ತತ್ತ್ವವಾದ ಬದಲಾಯಿಸಿ

ಆ್ಯಸ್ ಇಫ್ ಎಂದರೆ ಎಂಬಂತೆ ಎಂದು ಅರ್ಥ. ಎಂಬಂತೆ ಎಂಬುದು ಇರುವಂತೆ ಎಂಬುದಕ್ಕಿಂತ ಭಿನ್ನವಾದುದು. ಇರುವಂತೆ ಎಂದರೆ ವಾಸ್ತವವಾಗಿ ಇರುವಂತೆ ಎಂದು ಅರ್ಥ. ವಾಸ್ತವವಾದಿಗಳು ಇರುವುದು ಇರುವಂತೆಯೇ ತಿಳಿಯುತ್ತದೆ ಎಂದು ವಾದಿಸುತ್ತಾರೆ. ಇವರಿಗೆ ಪ್ರತಿಯಾಗಿ ಆ್ಯಸ್ ಇಫ್ ತತ್ತ್ವವಾದಿಗಳು ಹೀಗೆ ಹೇಳುತ್ತಾರೆ; ನಮಗೆ ವಸ್ತುಗಳು ಅವು ಇದ್ದಹಾಗೆ ತಿಳಿಯುವುದಿಲ್ಲ. ಏಕೆಂದರೆ ಮಾನವನ ಸ್ವಭಾವಕ್ಕನುಗುಣವಾಗಿ ಅವು ತೋರುತ್ತವೆಯೇ ಹೊರತು ಇದ್ದಹಾಗೆಯೇ ಅಲ್ಲ. ಅವು ಹಾಗೆ ಇರುವಂತೆ ಭಾವಿಸಿಕೊಂಡರೆ ನಮ್ಮ ತಿಳಿವು ಹೆಚ್ಚು ಸಮರ್ಪಕವಾಗುತ್ತದೆ. ನಾವು ಈ ವಿಶ್ವದಲ್ಲಿ ಬದುಕಿ ಬಾಳಲು ಆ ತಿಳಿವು ಸಹಾಯಮಾಡುತ್ತದೆ. ಭೌತವಿಜ್ಞಾನದಲ್ಲಿ ವಿದ್ಯುದಣು ಎಂಬ ಭಾವನೆಯನ್ನು ಕಲ್ಪಿಸಿಕೊಳ್ಳುತ್ತೇವೆ. ಏಕೆಂದರೆ ಆ ಕಲ್ಪನೆಯ ಮೂಲಕ ನಮ್ಮ ಭೌತಜ್ಞಾನ ಹೆಚ್ಚು ಸಮಂಜಸವಾಗುತ್ತದೆ, ಉಪಯೋಗ ಕಾರಿಯಾಗುತ್ತದೆ. ಹಾಗೆಯೇ ವ್ಯಾಪಾರ, ವ್ಯವಹಾರಗಳ ಕಾನೂನಿನಲ್ಲಿ ಒಂದು ಕಂಪನಿಯನ್ನು ಕೆಲವು ಹಕ್ಕುಗಳುಳ್ಳ ವ್ಯಕ್ತಿಯಾಗಿ ಭಾವಿಸುತ್ತೇವೆ. ನೀತಿ ಧರ್ಮಗಳ ಸಲುವಾಗಿ, ಪಾಪ, ಪುಣ್ಯ, ಪರಲೋಕ, ದೇವರು ಇತ್ಯಾದಿಗಳು ಇರುತ್ತವೆ ಎಂಬಂತೆ ಭಾವಿಸಿಕೊಳ್ಳುತ್ತೇವೆ. ಕ್ಯಾಂಟ್ ಎಂಬ ತಾತ್ತ್ವಿಕ ‘ನಾವು ತಿಳಿದಿರುವುದು ತೋರಿಕೆಗಳನ್ನು ಮಾತ್ರ, ವಸ್ತು ಅದು ಇದ್ದಂತೆ ನಮಗೆ ತಿಳಿಯುವುದಿಲ್ಲ’ ಎಂದು ಹೇಳಿದ್ದಾನೆ. ಇದು ‘ಎಂಬಂತೆ’ ತತ್ತ್ವಕ್ಕೆ ಪ್ರೇರಕ;

ಕ್ಯಾಂಟ್ ನ ಅಜ್ಞೇಯತಾವಾದದ ಮತ್ತು ಫಲವಾದ(ಪ್ರಾಗ್ಮ್ಯಾಟಿಸಂ) ದ ಒಂದು ಪರಿಣಾಮ. ಒಂದು ಭಾವನೆ--ಅದು ತೋರಿಕೆಯಾದರೂ--ಅದು ನಮ್ಮ ಜೀವನಕ್ಕೆ ಅಗತ್ಯವಾದುದರಿಂದ ಅದನ್ನು ನಾವು ನಂಬುತ್ತೇವೆ. ಹಾಗೆ ‘ಎಂಬಂತೆ’ ತತ್ತ್ವಕ್ಕೂ ಫಲವಾದಕ್ಕೂ (ಪ್ರಾಗ್ಮ್ಯಾಟಿಸಂ) ನಿಕಟ ಸಂಬಂಧವಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: