ಅಸಾದಿಗಳು ಎಂದರೆ ಧಾರ್ಮಿಕ ವೃತ್ತಿಗಾಯಕ ಪರಂಪರೆಗೆ ಸೇರಿದ ಮಾರಮ್ಮನ ಆರಾಧಕರು. ಮಾರಮ್ಮನಿಗೆ ಸಂಬಂಧಿಸಿದ ಹಾಡುಗಳನ್ನೇ ಹೆಚ್ಚಾಗಿ ಹಾಡುವರು. ಆಕೆ ಮೆರೆದ ಪವಾಡ ಹಾಗೂ ಮಹಿಮೆಗಳನ್ನು ಭಕ್ತ ಸಮೂಹಕ್ಕೆ ತಿಳಿಸುತ್ತ ಅವರಲ್ಲಿ ಭಯ ಭಕ್ತಿ, ಧರ್ಮ ಶ್ರದ್ಧೆಗಳನ್ನು ಮೂಡಿಸುವುದೇ ಇವರ ಕಾಯಕ.

ಭೌಗೋಳಿಕ ಹರಡುವಿಕೆ

ಬದಲಾಯಿಸಿ

ಕರ್ನಾಟಕದಲ್ಲಿ ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಭಾಗಗಳಲ್ಲಿ ವಿಶೇಷತಃ ಕಂಡುಬರುತ್ತಾರೆ. ಇವರು ಪರಿಶಿಷ್ಟ ಮಾದಿಗ ಜಾತಿಗೆ ಸೇರಿದವರು. ಮಾರಮ್ಮನ ಎದುರಿನಲ್ಲಿಯೇ ಇವರ ದೀಕ್ಷೆ ನಡೆಯುವುದು. ದೇವಿಯ ಮುದ್ರೆ ಬಿದ್ದಂದಿನಿಂದ ತಮ್ಮ ಕುಲಕಸಬಾದ ಚಮ್ಮಾರಿಕೆಯನ್ನು ಮಾಡುವಂತಿಲ್ಲ. ಅಲ್ಲದೆ ಊರಿನ ಯಾವುದೇ ಕೀಳು ಕೆಲಸಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ದೇವಿ ಪ್ರಾರ್ಥನೆಗೆ ಮಂಗಳವಾರ ಮತ್ತು ಶುಕ್ರವಾರ ಇವರಿಗೆ ಪ್ರಶಸ್ತ ದಿನಗಳು. ಇವರ ಉಡುಗೆ ತೊಡುಗೆಗಳಲ್ಲಿ ವಿಶೇಷತೆ ಕಾಣಬಹುದು. ಕೆಂಪುಸೀರೆಯ ರುಮಾಲು, ಬಿಳಿಯ ಕಾಸೆಪಂಚೆ, ನಿಲುವಂಗಿ, ಅದರ ಮೇಲೆ ಕೋಟು, ಕೊರಳಲ್ಲಿ ಕರಿಮಣಿಸರ, ಹಣೆಗೆ ಕುಂಕುಮ ಧರಿಸುವರು. ದೇವತೆಯನ್ನು ಕೊಂಡಾಡಲು ಕೈಯಲ್ಲಿರುವುದು ರಣಹಲಗೆ ಎಂಬ ವಾದ್ಯ. ಹಬ್ಬ ಹರಿದಿನಗಳಲ್ಲದೆ ಜಾತ್ರೆಯಂತಹ ಸಾಂಸ್ಕೃತಿಕ ಸಂದರ್ಭಗಳಲ್ಲೂ ಆಸಾದಿ ಪಾತ್ರ ಬಹುಮುಖ್ಯ. ಇವನಿಲ್ಲದೆ ಜಾತ್ರೆಯ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಮಾರಮ್ಮನ ಮೆರವಣಿಗೆಯ ನಿಗದಿ, ಕೋಣ ಕುರಿಗಳ ಬಲಿ ಇತ್ಯಾದಿ ವಿಚಾರಗಳನ್ನು ತಿಳಿಸುವವನೇ ಈತ. ಇವರು ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಹಲಗೆ ಹಿಡಿದು ದೇವತೆಯ ಬಗ್ಗೆ ಹೊಗಳಿ ಕೊಂಡಾಡುವುದುಂಟು. ಈ ಕೊಂಡಾಟದಲ್ಲಿ ಬಯ್ಗಳಗಳೂ ಇರುತ್ತವೆ. ಹೀಗೆ ಬೈಯ್ಯುವುದೂ ಇವರಿಗೆ ಈ ಸಂದರ್ಭದಲ್ಲಿರುವ ವಿಶೇಷ ಹಕ್ಕು; ಇದು ಈ ವೃತ್ತಿ ಗಾಯಕ ಪರಂಪರೆಯವರಿಗೆ ಮಾತ್ರ ಸೀಮಿತವಾದದ್ದು.

ಇವರು ತಮ್ಮ ಜೀವನದ ಬಹುಪಾಲು ಕಾಲವನ್ನು ಮಾರಿಗುಡಿಗಳಿರುವ ಊರುಗಳನ್ನು ಸುತ್ತುತ್ತ, ಹಾಡುಗಳನ್ನು ಹೇಳುತ್ತ ಕಳೆಯುವರು. ಇವರ ಹಾಡುಗಳಲ್ಲಿ ಮುಖ್ಯವಾಗಿ ಮಾರಿದೇವತೆ ಕುರಿತ ಹಾಡುಗಳು ಕೊಣಬಿಗೌಡನ ಹಾಡುಗಳು, ವಿನೋದ ಸಂಬಂಧದ ಹಾಡುಗಳನ್ನು ಕಾಣಬಹುದು. ಮಾರಮ್ಮನ ಜಾತ್ರೆಯ ಸಂದರ್ಭದಲ್ಲಿ ಭಕ್ತ ಸಮೂಹದ ಒತ್ತಾಸೆ, ಒತ್ತಾಯಗಳಿಗೆ ಮಣಿದು ಅಶ್ಲೀಲ ಪದಗಳನ್ನೂ ಹಾಡುವರು. ಒಂದು ರೀತಿಯ ವಿಶಿಷ್ಟ ನಿಂದಾಸ್ತುತಿಯ ಮೂಲಕ ತಮ್ಮ ದೈವಾರಾಧನೆಯನ್ನು ಕೈಗೊಳ್ಳುವರು. ಇಂಥ ರಚನೆಗಳಲ್ಲಿ ಕೆಲವು ಕಡೆ ಮೇಲುವರ್ಗದವರನ್ನು ಕುರಿತು ಅವಾಚ್ಯವಾಗಿ, ತುಚ್ಚವಾಗಿ ಬಯ್ಯುವ ರಚನೆಗಳೂ ಕಂಡುಬರುತ್ತವೆ. ಒಂದು ಆಸಾದಿ ಪದ ಹೀಗಿದೆ. ಗೌಡ ಗಂಭೀರನಲ್ಲಿ ತೌಡು ಬುಕ್ಕಿಟ್ಟಲ್ಲ ಔಡಲ ಕಾಯಿ ಬೆಳಿಸಲ್ಲ ಈ ಊರ ಗೌಡನ ಹೆಣ್ತಿ ಗರ್ತ್ಯಲ್ಲ.

"https://kn.wikipedia.org/w/index.php?title=ಆಸಾದಿ&oldid=1157390" ಇಂದ ಪಡೆಯಲ್ಪಟ್ಟಿದೆ