ಆಶಾವಾದ
ಈ ಜಗತ್ತು ಸುವ್ಯವಸ್ಥಿತವೂ ನಿಯಮಬದ್ಧವೂ ಪ್ರಗತಿಪರವೂ ಆಗಿದ್ದು ಮಾನವನ ಪ್ರಗತಿಗೆ ಸಹಕಾರಿಯಾಗಿದೆ ಅಲ್ಲದೆ ಇದರಲ್ಲಿ ದುಃಖದ ಪಾಲಿಗಿಂತಲೂ ಸುಖದ ಪಾಲೇ ಹೆಚ್ಚು ಎಂಬುದೇ ಆಶಾವಾದದ ಕಲ್ಪನೆ.
ಸ್ವರೂಪ
ಬದಲಾಯಿಸಿಬಾಳು ಸುಖಶಾಂತಿಯ ಸಾಧನ. ದುಃಖದ ಹಿಂದೆ ಸುಖ ಸುಪ್ತವಾಗಿದೆ. ಶುಭದ ಅಪೂರ್ಣ ಗ್ರಹಿಕೆಯೇ ಅಶುಭ. ಅಖಂಡತೆಯನ್ನು ಖಂಡಗೊಳಿಸು ವುದರಿಂದುದಿಸುವುದೇ ದುಃಖ, ಇಲ್ಲವೆ ನಿರಾಶೆ. ಆದರೆ ಈ ನಿರಾಶೆ ಬಾಳಿನ ನೈಜಸ್ವರೂಪವಲ್ಲ. ಸುಖಸಂತೋಷ ಮತ್ತು ಶ್ರದ್ಧೆಯೇ ಬಾಳಿನ ಸಹಜಧರ್ಮ. ಅತ್ಯಂತ ಶ್ರೇಷ್ಠವಾದ ಈ ಜಗತ್ತಿನಲ್ಲಿ ಕಾಣುವುದೆಲ್ಲವೂ ಶ್ರೇಷ್ಠವೇ. ಆದರೆ ಅದನ್ನು ಗ್ರಹಿಸಲು ಬೇಕಾದ ವ್ಯಾಪಕದೃಷ್ಟಿ ನಮ್ಮಲ್ಲಿ ನಿಚ್ಚಳಗೊಳ್ಳಬೇಕು. ಇದೇ ಆಶಾವಾದದ ಪೂರ್ಣಸ್ವರೂಪ.
ಆಶಾವಾದ ಮತ್ತು ನಿರಾಶಾವಾದ
ಬದಲಾಯಿಸಿಮಾನವನ ಬಾಳನ್ನು ಸಮಗ್ರವಾಗಿ ವೀಕ್ಷಿಸಲು ನಮಗಿರುವ ಎರಡು ಅತಿರೇಕದ ಹಾಗೂ ಪರಸ್ಪರ ವಿರುದ್ಧವಾದ ಮಾರ್ಗಗಳೆಂದರೆ ಆಶಾವಾದ (ಆಪ್ಪಿಮಿಸಂ) ಮತ್ತು ನಿರಾಶಾವಾದ (ಪೆಸಿಮಿಸಂ). ಒಂದರ ಪೂರ್ಣ ಪರಿಚಯವಾಗಬೇಕಾದರೆ ಮತ್ತೊಂದರ ಅರಿವು ಅನಿವಾರ್ಯ. ಈ ಮಾರ್ಗಗಳು ಬಹುವ್ಯಕ್ತಿಗತ ಸ್ವಭಾವ ಸಂಸ್ಕೃತಿ ಮತ್ತು ಮೌಲ್ಯಮಾಪನ ಕ್ರಮದಿಂದ ಬಹುಮಟ್ಟಿಗೆ ಪ್ರಭಾವಗೊಳ್ಳುತ್ತವೆ.
ಮಾನವರು ತಮ್ಮ ಬಾಳಿನಲ್ಲಿ ಕಾಣುವ ಶುಭಾಶುಭಗಳನ್ನು ಗ್ರಹಿಸಲು ಸಹಕಾರಿಯಾಗಿ ತಮ್ಮವೇ ಆದ ಕೆಲವು ಶ್ರದ್ಧೆ ಅಥವಾ ನಂಬಿಕೆಗಳನ್ನು ಆಶ್ರಯಿಸುವುದರಿಂದ ಆಶಾವಾದದ ಕಲ್ಪನೆ ತತ್ತ್ವಶಾಸ್ತ್ರಕ್ಕಿಂತಲೂ ಹೆಚ್ಚಾಗಿ ಧರ್ಮದ ವ್ಯಾಪ್ತಿಗೆ ಸೇರಿದೆ. ಈ ಕಲ್ಪನೆ ತಾತ್ತ್ವಿಕ ಚಿಂತನೆಗೊಳಪಡಲು ಅರ್ಹವೆನಿಸುವಷ್ಟು ನಿಖರತೆಯನ್ನು ಪಡೆದಿದೆಯೇ ಎಂದು ಅನುಮಾನಿಸುವವರೂ ಇದ್ದಾರೆ. ಇದನ್ನು ಕುರಿತು ಆಳವಾಗಿ ಪರಿಶೀಲಿಸುವ ಮುನ್ನ ಆಶೆಗೆ ಪ್ರೇರಕವಾದ ಸುಖದ ಸ್ವರೂಪವೇನೆಂಬುದನ್ನು ತಿಳಿಯುವುದು ಅವಶ್ಯ. ವಾಸ್ತವಿಕ ಅನುಭವವನ್ನೇ ಆಧಾರವಾಗಿ ಉಳ್ಳ ವಾಸ್ತವವಾದಿಗಳು, ಐಹಿಕ ಭೋಗವನ್ನು ಸುಖವೆಂದು ಗಣಿಸಿ, ಈ ಭೋಗವನ್ನು ಪಡೆಯಲು ಜಗತ್ತಿನಲ್ಲಿ ಅನೇಕ ಅಡಚಣೆಗಳಿರುವುದರಿಂದ ಜಗತ್ತಿನ ವಿಚಾರದಲ್ಲಿ ನಿರಾಶೆಯನ್ನು ತಳೆಯುತ್ತಾರೆ. ವಿವೇಚನೆ ಮತ್ತು ಚಿಂತನಾಶೀಲರಾದ ಆದರ್ಶವಾದಿಗಳು ಮತ್ತು ಧ್ಯೇಯವಾದಿಗಳು ಈ ಜಗತ್ತನ್ನು ವಿಕಾಸದ ಸೋಪಾನವೆಂದು ಪರಿಗಣಿಸಿ ಆಶಾವಾದಿಗಳಾಗಿ ನಿಲ್ಲುತ್ತಾರೆ. ಇನ್ನು ಮಾನವನನ್ನು ಸುಖದಿಂದ ಪಾರುಗೊಳಿಸಿ ನಿತ್ಯ ಸುಖದತ್ತ ಕೊಂಡೊಯ್ಯುವ ಸಾಧನವೆನಿಸಿದ ಧರ್ಮ ಜಗತ್ತನ್ನು ದುಃಖಮಯವೆಂದು ಕರೆದರೂ ಸರಿ ಅದಕ್ಕೆ ಪರಿಹಾರರೂಪವಾಗಿ ಮುಕ್ತಿಮಾರ್ಗವನ್ನು ಸೂಚಿಸುವುದರಿಂದ ಆಶಾವಾದ ಮತ್ತು ನಿರಾಶಾವಾದಗಳೆರಡೂ ಇದರಲ್ಲಿ ಕಾಣಬರುತ್ತವೆ. ಜಗತ್ತು ಮಾಯೆ, ಇಲ್ಲವೇ ನಶ್ವರವೆಂದು ಹೇಳಿದ ಹಿಂದೂಧರ್ಮ ಈ ಜಗತ್ತಿನಲ್ಲೇ ಇದ್ದು ಇದನ್ನು ಜಯಿಸಬೇಕೆಂದು ಸಾರಿತು. ಮೂಲರೂಪವಾದ ಪಾಪವನ್ನು ಒಪ್ಪಿದ ಕ್ರೈಸ್ತಧರ್ಮ ಸಹ ಮುಕ್ತಿಯ ಆಕರ್ಷಣೆಯನ್ನು ಮಾನವನ ಮುಂದೆ ಇಟ್ಟಿದೆ. ಹೀಗೆ ದುಃಖದಿಂದ ಸುಖದ ಕಡೆ ಇಲ್ಲವೇ ನಿರಾಶೆಯಿಂದ ಆಶೆಯ ಕಡೆ ಸಾಗಲು ಧರ್ಮ ತೋರಿದ ದಾರಿಯಲ್ಲಿ ನೀತಿಯ ಪಾತ್ರ ಬಹು ಹೆಚ್ಚೇನೋ ಎನಿಸುವಷ್ಟಿದೆ.
ಇತಿಹಾಸ
ಬದಲಾಯಿಸಿಆಶಾವಾದದ ಇತಿಹಾಸವನ್ನು ನೋಡಬೇಕಾದರೆ ಇದು ಬೆಳೆದು ಬಂದ ದಾರಿ ಹಾಗೂ ಇದರಿಂದ ಪ್ರಭಾವಿತರಾದ ದಾರ್ಶನಿಕರು ಕೆಲವರ ವಿಚಾರಧಾರೆಯ ಪರಿಚಯ ಅಗತ್ಯ. ಸಾಕ್ರಟೀಸ್ ಮತ್ತು ಪ್ಲೇಟೋಗಳ ಕಾಲದಿಂದಲೇ ಮೊದಲಾದ ಈ ವಿಚಾರದೃಷ್ಟಿ 17, 18 ಶತಮಾನದ ಕಾಲಕ್ಕೆ ಐರೋಪ್ಯ ದಾರ್ಶನಿಕನಾದ ಲೈಬ್ನಿಟ್ಸ್ನಿದ ಒಂದು ಸ್ಪಷ್ಟರೂಪವನ್ನು ಪಡೆಯಿತು. ನಮ್ಮ ಈ ಜಗತ್ತು ಸರ್ವೋತ್ಕೃಷ್ಟವಾದದ್ದು ಎಂಬುದೇ ಇವನ ಸಿದ್ಧಾಂತ. ಈ ಜಗತ್ತು ಒಂದು ಶ್ರೇಷ್ಠ ಧ್ಯೇಯದ ಕಡೆಗೆ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಆದರೆ ಈ ಉದ್ದೇಶ ಮಾನವನ ಕಲ್ಪನೆಯನ್ನವಲಂಬಿಸಿ ನಿಂತಿಲ್ಲ. ವಿಶ್ವದ ವಿವಿಧ ಮೂಲ ಘಟಕಗಳನ್ನೆಲ್ಲ (ಚಿದಣು; ಮೊನ್ಯಾಡ್) ನಿಯಂತ್ರಿಸಬಲ್ಲ ಪುರ್ವನಿಶ್ಚಿತ ವ್ಯವಸ್ಥೆಯೊಂದು ಜಗತ್ತಿನ ರಚನೆಯಲ್ಲಿ ಹಾಸುಹೊಕ್ಕಾಗಿದೆ. ತನ್ನ ಈ ಚಿಂತನೆಗೆ ಇಂಬುಗೊಡಲೋಸುಗ ಲೈಬ್ನಿಟ್ಸ್ ದೇವರು ಮತ್ತು ಅವನ ಸರ್ವಜ್ಞತೆ ಹಾಗೂ ಸರ್ವಶಕ್ತತೆಯನ್ನು ಆಧರಿಸಿ ಪುರ್ವನಿಶ್ಚಿತ ವ್ಯವಸ್ಥೆಯ ತತ್ತ್ವವನ್ನು ಸ್ಥಾಪಿಸುತ್ತಾನೆ. ಇವನ ಪ್ರಕಾರ ಕೆಟ್ಟದ್ದು ಇಲ್ಲವೆ ದುಃಖ ಎಂಬುದು ಕತ್ತಲು ಅಥವಾ ಶೈತ್ಯದಂತೆ ಸ್ವತಂತ್ರ ಅಸ್ತಿತ್ವವಿಲ್ಲದ ಅವಲಂಬನ ತತ್ತ್ವಮಾತ್ರ. ಒಳ್ಳೆಯದರ ಕ್ಷೀಣ ಸ್ವರೂಪವನ್ನೇ ಕೆಟ್ಟದೆಂದು ಹೆಸರಿಸಲಾಗುವುದು. ಪ್ರಕೃತಿಯಲ್ಲಿ ಕಾಣಬರುವ ವಿಪತ್ತು ಮಾನವನೆಸಗಿದ ಧರ್ಮೋಲ್ಲಂಘನೆಯ ಫಲ. ಅದು ಪ್ರಕೃತಿಯ ವಿಕೋಪವಷ್ಟೆ. ಇದು ನ್ಯಾಯಸಮ್ಮತವೆಂದೇ ಲೈಬ್ನಿಟ್ಸ್ನ ಅಭಿಮತ. ಸರಿಯಾದ ಕಾರಣದಿಂದಾದ ವಿಪತ್ತುಗಳು ಮೂಲತಃ ಶುಭದಾಯಕವಾದ ದೈವಶಾಸನದ ರಕ್ಷೆಗೆ ಒಳಪಟ್ಟೇ ಇರುತ್ತದೆ. ಈ ಶಾಸನದ ಆಶ್ರಯದಲ್ಲಿಯೇ ಸರ್ವವ್ಯಾಪಾರಗಳೂ ನಡೆಯುತ್ತವೆಂದ ಮೇಲೆ ಇನ್ನು ನಿರಾಶೆಗೆ ಕಾರಣವೇ ಇಲ್ಲ.
ಇವನಾದಮೇಲೆ ಆಶಾವಾದದ ಬಗ್ಗೆ ಆಲೋಚನೆ ಮಾಡಿದ ದಾರ್ಶನಿಕರಲ್ಲಿ ಪ್ರಮುಖವಾಗಿ ಡೇವಿಡ್ ಹ್ಯೂಮ್, ಇಮ್ಯಾನ್ಯುಯಲ್ ಕಾಂಟ್, ಷೋಪೆನ್ಹೌರ್ ಮತ್ತು ಹಾರ್ಟ್ಮನ್ಗಳ ಹೆಸರನ್ನು ಹೇಳಬೇಕು. ಜಗತ್ತಿನಲ್ಲಿ ನಡೆಯುವ ವಿಪತ್ತು ಮತ್ತು ನೈತಿಕ ಪಾಪಗಳನ್ನು ಕೂಲಂಕಷವಾಗಿ ವಿಚಾರ ಮಾಡಿದ ಹ್ಯೂಮ್ ವಿಶ್ವದಲ್ಲಿ ಕಾಣಬರುವ ದುಃಖದ ಧಾರಣೆ ಮಾನವನ ವಿವೇಕಕ್ಕೆ ಮೀರಿದೆ ಎಂದೂ ಇದನ್ನು ತಾತ್ತ್ವಿಕವಾಗಿ ನಿರ್ಧರಿಸುವುದು ಕಷ್ಟವೆಂದೂ ಮನಗಂಡ. ಕಾಂಟ್ ಜಗತ್ತಿನ ನೈತಿಕ ವ್ಯವಸ್ಥೆಯನ್ನು ಒಪ್ಪಿದರೂ ಮಾನವನಲ್ಲಿ ಮೂಲಭೂತವಾಗಿ ನೆಲೆಸಿರುವ ದುಷ್ಟತನದ ಫಲವಾಗಿ ಈ ಆಶಾಜಗತ್ತಿನಲ್ಲಿ ನಿರಾಶೆಯ ಒಡಕು ಧ್ವನಿ ಮೂಡುವುದು ಅನಿವಾರ್ಯ ಎಂದು ನಿರ್ಣಯಿಸಿದ. ಈ ವಾದವನ್ನೇ ಇನ್ನೂ ಹೆಚ್ಚು ಮುಂದುವರಿಸಿದ ಷೋಪೆನ್ ಹೌರ್ ಮಾನವ ಶಾಶ್ವತವಾಗಿ ದುಃಖದಲ್ಲಿ ತೊಳಲತಕ್ಕವನೆಂದೂ ಅವನಿಗೆ ಸುಖವೆಂಬುದು ಕನಸಿನ ಗಂಟೆಂದೂ ಹೇಳಿ, ಈ ದುಃಖದಿಂದ ಪಾರಾಗಲು ಆತ ಆಶೆಯನ್ನು ಗೆದ್ದು ಪ್ರೇಮವನ್ನು ವೃದ್ಧಿಸಿಕೊಳ್ಳ ಬೇಕೆಂದು ಹೇಳಿದ. 19ನೆಯ ಶತಮಾನದಲ್ಲೇ ಬಹು ವ್ಯವಸ್ಥಿತ ರೀತಿಯಲ್ಲಿ ನಿರಾಶಾವಾದ ಮತ್ತು ಆಶಾವಾದದ ವಿಚಾರದಲ್ಲಿ ಚಿಂತನೆ ಮಾಡಿದ ಹಾರ್ಟ್ಮನ್ ಈ ಜಗತ್ತು ಸರ್ವೋತ್ಕೃಷ್ಟವಾಗಿರುವುದು ನಿಜವಾದರೂ ಇದರಲ್ಲಿ ದುಃಖದ ಪಾಲು ಸುಖಕ್ಕಿಂತಲೂ ಮಿಗಿಲಾದ್ದರಿಂದ ಈ ವಿಶ್ವವೇ ನಾಶವಾದರೆ ಒಳ್ಳೆಯದೆಂದು ಅಭಿಪ್ರಾಯಪಡುತ್ತಾನೆ.
20ನೆಯ ಶತಮಾನದಲ್ಲಾದ ವೈಜ್ಞಾನಿಕ ಪ್ರಗತಿ, ವಿಚಾರಕ್ರಾಂತಿ ಹಾಗೂ ಯುದ್ಧಗಳಿಂದಾದ ಮಹತ್ತರ ವಿನಾಶದಿಂದಾಗಿ ಆಶಾವಾದ ಅಥವಾ ನಿರಾಶಾವಾದವನ್ನು ಕುರಿತು ತಾತ್ತ್ವಿಕ ಚಿಂತನೆಗೆ ಬದಲಾಗಿ ಜೀವನದಲ್ಲಿ ಸುಖವನ್ನು ವರ್ಧಿಸುವ ಹಾಗೂ ದುಃಖವನ್ನು ಕಡಿಮೆಮಾಡುವಂಥ ಪ್ರಗತಿಪರ ಮಾರ್ಗದಲ್ಲಿ ವಾಸ್ತವಿಕ ರೀತಿಯಲ್ಲಿ ಕಾರ್ಯಪ್ರವೃತ್ತನಾಗಬೇಕೆಂದು ಮಾನವ ಎಂದಿಗಿಂತಲೂ ಹೆಚ್ಚಾಗಿ ಮನಗಂಡಿದ್ದಾನೆ.
ಇದನ್ನೂ ನೋಡಿ
ಬದಲಾಯಿಸಿನಿರಾಶಾವಾದ