ಪೀಟರ್ ಆಲ್ಟೆನ್‍ಬರ್ಗ್

(ಆಲ್ಟೆನ್ ಬರ್ಗ್ ಪೀಟರ್ ಇಂದ ಪುನರ್ನಿರ್ದೇಶಿತ)

ಪೀಟರ್ ಆಲ್ಟೆನ್‍ಬರ್ಗ್ (ಜನನ:9 ಮಾರ್ಚ್ 1859,ವಿಯೆನ್ನಾ –ಮರಣ: 8 ಜನವರಿ 1919,ವಿಯೆನ್ನಾ) ಆಸ್ಟ್ರಿಯದ ಗದ್ಯಚಿತ್ರಗಳ ಲೇಖಕ ರಿಚರ್ಡ್ ಎಂಗ್ಲಾಂಡರನ ಕಾವ್ಯನಾಮ. ಈತನ ಜನನ ಮರಣಗಳೆರಡೂ ನಡೆದುದು ವಿಯನ್ನ ನಗರದಲ್ಲಿ. ಜೀವನದ ವಿಲಕ್ಷಣ ವ್ಯಕ್ತಿಯೆನ್ನಿಸಿಕೊಂಡಿದ್ದ ಈತ ಸಮಾಜದ ಕೆಳದರ್ಜೆಯ ನಿಷ್ಕಪಟಿ ಜನರ ಸ್ವತಂತ್ರ ಮನೋವೃತ್ತಿಯ ಮಿತ್ರನೆಂದು ಖ್ಯಾತನಾಗಿದ್ದ. ದೈಹಿಕ ಸೌಂದರ್ಯ, ಆರೋಗ್ಯ, ಸಹಜಗುಣಗಳು ಮತ್ತು ಮಾನವೀಯತೆಯ ಮೌಲ್ಯವನ್ನು ಎತ್ತಿಹಿಡಿದು ತಾತ್ತ್ವಿಕನೆಂದೊ ಹೆಸರೂ ಗಳಿಸಿದ. ಬಗೆಬಗೆಯ ಪ್ರಣಯ ಪ್ರಸಂಗಗಳ ನಾಯಕನಾಗಿದ್ದ ಈತ ಅಲೆಮಾರಿಯಾಗಿ, ನ್ಯಾಯಶಾಸ್ತ್ರ ವೈದ್ಯಶಾಸ್ತ್ರಗಳ ವ್ಯಾಸಂಗದಲ್ಲಿ ಕೈಯಾಡಿಸಿ, ಅನಂತರ ತನ್ನ ಮೂವತ್ತೇಳನೆ ವರ್ಷದಲ್ಲಿ ವಿ ಇಚ್ ಎಸ್ ಸೆಹೆ (1896) ಎಂಬ ತನ್ನ ಮೊದಲ ಲೇಖನಗಳ ಸಂಕಲವನ್ನು ಪ್ರಕಟಿಸಿದ. ಇದರ ಅರ್ಥ ನಾನು ಕಂಡಂತೆ ಎಂದು. ಈ ಮಾತನ್ನು ಅವನ ಇತರ ಕೃತಿಗಳಿಗೂ ಅನ್ವಯಿಸಬಹುದು. ತಾನು ಕಂಡ ಜೀವನವನ್ನು ಇದ್ದುದಿದ್ದಂತೆಯೇ ಚಿತ್ರಿಸುವುದು, ರಸಹೀನವಾದ ಅದರ ಒಣಚೂರುಗಳ ಮಾದರಿಗಳನ್ನು ಎರಡು ಮೂರು ಪುಟಗಳಲ್ಲಿ ತುಂಬಿಟ್ಟು ಓದುಗನಿಗೆ ಒದಗಿಸುವುದು, ತನ್ನ ಉದ್ದೇಶವೆಂದು ತಾನೇ ನುಡಿದಿದ್ದಾನೆ. ಈ ಚಿತ್ರಗಳಲ್ಲೆಲ್ಲ ಕಂಡುಬರುವ ಮೂಲಸೂತ್ರ ಒಂದೇ-ತನ್ನ ಜೀವನದರ್ಶನದ ಅಭಿವ್ಯಕ್ತಿ. ಶಾರೀರಿಕ ಅನ್ಯೂನತೆ ಮಾನಸಿಕ ನೈತಿಕ ಮತ್ತು ಸೌಂದರ್ಯಾಭಿರುಚಿಯ ಅನ್ಯೂನತೆಗೆ ಆಧಾರ, ಗಂಡಸಿನಲ್ಲಿ ಬೌದ್ಧಿಕಶಕ್ತಿಯಿರುವಂತೆ ಹೆಂಗಸಿನಲ್ಲಿ ರಸಾಭಿಜ್ಞತೆಯಿದೆ. ಮನುಷ್ಯ ತನಗೆ ತಾನು ನಿಷ್ಠನಾಗಿದ್ದು ಇತರರ ವಿಷಯದಲ್ಲಿ ನಿಸ್ವಾರ್ಥದಿಂದ ವರ್ತಿಸುವುದು ಮಾನವರ ಒಳಿತನ್ನು ಸಾಧಿಸಲು ತಕ್ಕ ಮಾಧ್ಯಮ-ಎಂಬುದು ಈತನ ಅಭಿಪ್ರಾಯ. ಅದು ಇವನ ಎಲ್ಲ ಬರೆಹಗಳಲ್ಲೂ ಎದ್ದು ಕಾಣುತ್ತದೆ. ಆಧುನಿಕ ನಾಗರಿಕತೆಯಲ್ಲಿ ಕಂಡುಬರುವ ನೀರಸತೆ, ಕೃತ್ರಿಮಗಳನ್ನು ಖಂಡಿಸಿ ದೇಹಬಲ ಮನೋಬಲಗಳೆರಡರ ಅಗತ್ಯವನ್ನು ಈತ ಎತ್ತಿ ಹಿಡಿಯುತ್ತಾನೆ. ಈ ಗುಣಗಳು ಸಮಾಜದ ಎಲ್ಲ ವರ್ಗದ ಸ್ತ್ರೀಪುರುಷರಲ್ಲೂ ಇರುವುದೆಂದು ಪ್ರತಿಪಾದಿಸುತ್ತಾನೆ. ಇವನ ಮೆಚ್ಚುಗೆಗೆ ಪಾತ್ರರಾದವರೆಂದರೆ ಮಕ್ಕಳು, ಹುಡುಗ ಹುಡುಗಿಯರು, ಪ್ರಾಣಿಗಳು-ಮೊದಲಾದ ಪ್ರಕೃತಿಗೆ ಸಮೀಪವರ್ತಿಗಳಾದ ಜೀವಿಗಳು. ಇವನ ಲೇಖನದ ಮುಖ್ಯ ಲಕ್ಷಣ ಅತ್ಯುಕ್ತಿಯನ್ನು ವರ್ಜಿಸಿ ಕೆಲವೇ ಮಾತುಗಳಲ್ಲಿ ಹೆಚ್ಚಿನ ಪರಿಣಾಮವನ್ನುಂಟುಮಾಡುವುದು.

ಪೀಟರ್ ಆಲ್ಟೆನ್‍ಬರ್ಗ್
Österreichische Nationalbibliothek, Inventarnummer
Portrait by Charles Scolik
ಜನನರಿಚರ್ಡ್ ಎಂಗ್ಲಾಂಡರ್
(೧೮೫೯-೦೩-೦೯)೯ ಮಾರ್ಚ್ ೧೮೫೯
ವಿಯೆನ್ನಾ, ಆಸ್ಟ್ರಿಯ
ಮರಣ19 January 1919(1919-01-19) (aged 59)
ವಿಯೆನ್ನಾ, ಆಸ್ಟ್ರಿಯ
ವೃತ್ತಿಬರಹಗಾರ ಮತ್ತು ಕವಿ
ರಾಷ್ಟ್ರೀಯತೆಆಸ್ಟ್ರಿಯನ್
ಸಾಹಿತ್ಯ ಚಳುವಳಿನವೋದಯ

ಬಾಹ್ಯ ಸಂಪರ್ಕಗಳು

ಬದಲಾಯಿಸಿ