ಆಲಿವೀನ್
ಮೆಗ್ನೀಸಿಯಂ ಮತ್ತು ಫೆರಸ್ ಆರ್ಥೊಸಿಲಿಕೇಟುಗಳಿಂದ ಕೂಡಿದ ಶಿಲಾರೂಪಕ ಖನಿಜ. ಆಲಿವ್ ಬಣ್ಣವಿರುವುದರಿಂದ ಈ ಹೆಸರು ಬಂದಿದೆ; ಇದರ ರಾಸಾಯನಿಕ ಸಂಕೇತ (Mg Fe)2 SiO4. ರೂಢಿಯಲ್ಲಿ ಈ ಬಣ್ಣದ ಎಲ್ಲ ಕಲ್ಲುಗಳನ್ನೂ ಆಲಿವೀನ್ ಎಂದು ತಪ್ಪಾಗಿ ಕರೆಯುವುದುಂಟು. ಆಲಿವೀನ್ ಆರ್ಥೋರಾಂಬಿಕ್ ಹರಳಿನ ವರ್ಗಕ್ಕೆ ಸೇರಿದೆ. ಗಾಜಿನಂಥ ಹೊಳಪು. ಕಾಠಿಣ್ಯ (ಹಾರ್ಡ್ನೆಸ್) ೬.೫-೭ ಸಾಪೇಕ್ಷ ಸಾಂದ್ರತೆ ೩.೨೭-೩.೩೭. ಶಿಲಾರೂಪಕ ಖನಿಜಗಳಲ್ಲೆಲ್ಲ ಇದು ಅತಿ ತೂಕವಾದುದು. ಇದು ಮುಖ್ಯವಾಗಿ ಅಲ್ಪಸಿಲಿಕಾಂಶ (ಬೇಸಿಕ್) ಮತ್ತು ಅತ್ಯಲ್ಪಸಿಲಿಕಾಂಶ ಶಿಲೆಗಳಲ್ಲಿ ಕಂಡುಬರುತ್ತದೆ. ಗ್ಯಾಬ್ರೊ, ಪೆರಿಡೊಟೈಟ್ ಮತ್ತು ಡನೈಟ್ ಶಿಲೆಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿದೆ. ಇದು ಹಸಿರುಬಣ್ಣದ ನೂಲಿನಂತೆ ಎಳೆ ಎಳೆಯಾದ ಸರ್ಪೆಂಟೈನ್ ಎಂಬ ಖನಿಜವಾಗಿ ಮಾರ್ಪಡುತ್ತದೆ. ಈ ಬದಲಾವಣೆಗೆ ನೀರಿನ ಅಂಶ ಬಹು ಅಪೇಕ್ಷಣೀಯ. ಏಕೆಂದರೆ ಆಲಿವೀನ್ಗಿಂತ ಸರ್ಪೆಂಟೈನ್ನಲ್ಲಿ ನೀರಿನ ಅಂಶ ಹೆಚ್ಚು. ಆಲಿವೀನ್ ಶಿಲೆಗಳಲ್ಲಿ ಕ್ರೋಮೈಟ್ ಹೆಚ್ಚಾಗಿರುತ್ತದೆ. ಕರ್ನಾಟಕ ರಾಜ್ಯದ ಬೈರಾಪುರ ಮತ್ತು ಕಡಕೊಳ ಪ್ರಾಂತ್ಯಗಳಲ್ಲಿನ ಆಲಿವೀನ್ ಶಿಲೆಗಳಲ್ಲಿ ಹೆಚ್ಚು ಪ್ರಮಾಣದ ಕ್ರೊಮೈಟ್ ಅದುರು ದೊರೆಯುತ್ತದೆ. ಆಲಿವೀನ್ ಹರಳುಗಳನ್ನು ಪೆರಿಡೋಟ್ ಎಂಬ ರತ್ನವಾಗಿ ಉಪಯೋಗಿಸುವುದುಂಟು. ಬರ್ಮ ಮುಂತಾದೆಡೆ ಸಿಗುವ ಆಲಿವೀನ್ ಪಾರದರ್ಶಕ ಹರಳುಗಳನ್ನು ರತ್ನಗಳಾಗಿ ಉಪಯೋಗಿಸುತ್ತಾರೆ. ಶಿಲೆಗಳಿಂದ ಕೂಡಿದ ಉಲ್ಕೆಗಳಲ್ಲಿ ಆಲಿವೀನ್ ಹೆಚ್ಚಾಗಿ ಕಂಡುಬರುತ್ತದೆ.