ಆಲಿವರ್ ಕ್ರಾಮ್ವೆಲ್

ಇಂಗ್ಲಿಷ್ ಮಿಲಿಟರಿ ಮತ್ತು ರಾಜಕೀಯ ನಾಯಕ

ಆಲಿವರ್ ಕ್ರಾಮ್ವೆಲ್ ( 1599-1658 ) : ಈತನು ರಾಜನೀತಿಜ್ಞ; ಇಂಗ್ಲೆಂಡ್ , ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕಾಮನ್ವೆಲ್ತಿನ ಪಾಲಕ ಪ್ರಭು ಲಾರ್ಡ್ ಪ್ರೊಟೆಕ್ಟರ್ (1653-1658).

ಆರಂಭಿಕ ಜೀವನ

ಬದಲಾಯಿಸಿ

ಜನನ ಹಂಟಿಂಗ್ಟನ್ನಿನಲ್ಲಿ, 1599ರ ಏಪ್ರಿಲ್ 25ರಂದು-ಹಳೆಯ ಮನೆತನವೊಂದರಲ್ಲಿ. ಈತ ರಾಬರ್ಟ್ ಕ್ರಾಮ್ವೆಲ್ ಮತ್ತು ಎಲಿಜóಬೆತ್ ಇವರ ಎರಡನೆಯ ಮಗ. ಕ್ರಾಮ್ವೆಲ್ ಹಂಟಿಂಗ್ಟನ್ನಿನ ಶಾಲೆಯಲ್ಲೂ ಕೇಂಬ್ರಿಜ್‍ನ ಸಸೆಕ್ಸ್ ಕಾಲೇಜಿನಲ್ಲೂ ಶಿಕ್ಷಣ ಪಡೆದ. ಲಿಂಕನ್ಸ್ ಇನ್‍ನಲ್ಲೂ ಶಿಕ್ಷಣ ಪಡೆದನೆಂದು ನಂಬಲಾಗಿದೆ. 1620ರಲ್ಲಿ ಈತ ಲಂಡನ್ನಿನ ವ್ಯಾಪಾರಿಯೊಬ್ಬನ ಪುತ್ರಿ ಎಲಿಜಬೆತ್ ಬರ್ಷರಳನ್ನು ವಿವಾಹವಾದ.

ಪಾರ್ಲಿಮೆಂಟ್ ಸದಸ್ಯನಾಗಿ

ಬದಲಾಯಿಸಿ

1628ರಲ್ಲಿ ಈತ ಹಂಟಿಂಗ್‍ಟನ್ ಕ್ಷೇತ್ರದಿಂದ ಪಾರ್ಲಿಮೆಂಟಿನ ಸದಸ್ಯನಾದ. ಹತ್ತು ವರ್ಷಗಳ ಅನಂತರ ಧರ್ಮಶುದ್ಧಿವಾದಿ ಮತಕ್ಕೆ (ಪ್ಯೂರಿಟನಿಸಂ) ಪರಿವರ್ತನೆ ಹೊಂದಿದಂತೆ ಕಂಡುಬರುತ್ತದೆ. ಆದರೆ ಈತ ಎಂದೂ ಧರ್ಮಾಂಧನಾಗಿರಲಿಲ್ಲ ನಿರಂಕುಶ ಪ್ರಭುವೂ ಸ್ವೇಚ್ಛಾಚಾರಿಯೂ ಆಗಿದ್ದ 1ನೆಯ ಚಾರಲ್ಸನಿಗೂ ಸಂಸತ್ತಿಗೂ ನಡೆದ ಅಂತರ್ಯುದ್ಧದಲ್ಲಿ ಕ್ರಾಮ್ವೆಲ್ ಸಂಸತ್ತಿನ ರಾಜವಿರೋಧಿ ಪಕ್ಷದ ನೇತೃವಾಗಿದ್ದ. 1640ರಲ್ಲಿ ಕೇಂಬ್ರಿಜ್ ಕ್ಷೇತ್ರದಿಂದ ಸಂಸತ್ತಿಗೆ ಮತ್ತೆ ಇವನ ಆಯ್ಕೆಯಾಯಿತು. ಮತೀಯ ವಿಚಾರಗಳಲ್ಲೂ ಸ್ವಾತಂತ್ರ್ಯವಾದಿಯಾಗಿದ್ದ ಕ್ರಾಮ್ವೆಲ್ ಬಿಷಪ್ ಮುಂತಾದ ಧರ್ಮಾಧಿಕಾರಿಗಳನ್ನು ಪದಚ್ಯುತಗೊಳಿಸಬೇಕೆಂದು ಸಂಸತ್ತಿನಲ್ಲಿ ಹೋರಾಡಿದ.

ಸೈನಿಕ ಕಾರ್ಯಾಚರಣೆಗಳು

ಬದಲಾಯಿಸಿ

1642ರಲ್ಲಿ ಎಸೆಕ್ಸ್‍ನ ಅಧೀನದಲ್ಲಿ ಕೇಂಬ್ರಿಜ್ ಕೋಟೆಯನ್ನು ವಶಪಡಿಸಿಕೊಂಡು, ಅಲ್ಲಿಯ ಐಶ್ವರ್ಯ ರಾಜನ ಕೈಸೇರದಂತೆ ಮಾಡಿದ್ದೇ ಈತನ ಮೊದಲ ಸೈನಿಕ ಕಾರ್ಯಾಚರಣೆ. ಅನಂತರ ಈತ ರೂಪಿಸಿದ ಹೊಸ ಮಾದರಿಯ ಸೈನ್ಯ ಗೆಯಿನ್ಸ್‍ಬರೋ (1643), ವಿನ್ಸ್‍ಬಿ (1644) ಮಾರ್‍ಸ್ಟನ್ ಮೂರ್ (1644) ಮತ್ತು ನೇಸ್‍ಬಿ (1645) ಗಳಲ್ಲಿ ರಾಜಪಡೆಯನ್ನು ಸಂಪೂರ್ಣವಾಗಿ ಪರಾಭವಗೊಳಿಸಿತು. 1646ರಲ್ಲಿ ಈ ಹೋರಾಟಗಳು ಮುಗಿಯುವ ವೇಳೆಗೆ ಕ್ರಾಮ್ವೆಲ್‍ನ ಪ್ರಭಾವ ವೃದ್ಧಿಯಾಗತೊಡಗಿತು. ಎರಡನೆಯ ಬಾರಿ ಆರಂಭವಾದ ಅಂತರ್ಯುದ್ಧದಲ್ಲಿ ಕ್ರಾಮ್ವೆಲ್ ರಾಜನ ಪರವಾದ ಸ್ಕಾಟರ ಸೈನ್ಯವನ್ನು ಸೋಲಿಸಿದ. ದೊರೆ ಚಾರಲ್ಸನನ್ನು ವಿಚಾರಣೆಗೆ ಗುರಿಪಡಿಸಿ 1649ರ ಜನವರಿ 30ರಂದು ಶೂಲಕ್ಕೇರಿಸಲಾಯಿತು. ಅದೇ ವರ್ಷ ಐರ್ಲೆಂಡಿನ ದಂಗೆಯನ್ನು ಹತ್ತಿಕ್ಕಿ ಅನೇಕ ಮಂದಿಯನ್ನು ಕೊಲ್ಲಲಾಯಿತು. 1650ರಲ್ಲಿ ರಾಜನ ಪಕ್ಷಕ್ಕೆ ಸೇರಿದ್ದ ಸ್ಕಾಟ್ಲೆಂಡೂ ಮಣಿಯಿತು. ಅನಂತರ ರೂಪುಗೊಂಡ ಉಚ್ಚಿಷ್ಟ ಸಂಸತ್ತನ್ನು (ರಂಪ್ ಪಾರ್ಲಿಮೆಂಟ್) ಕ್ರಾಮ್ವೆಲ್ ವಿಸರ್ಜಿಸಿದೆ. ಅಂತಿಮವಾಗಿ ಇಂಗ್ಲೆಂಡಿಗೆ ಕಾಮನ್‍ವೆಲ್ತ್ ರಾಷ್ಟ್ರವೆಂದು ಘೋಷಿಸಲಾಯಿತು. ರಾಜ್ಯಮಂತ್ರಾಲೋಚನಾ ಸಭೆಯ ನೆರವಿನಿಂದ ಕ್ರಾಮ್‍ವೆಲ್ ಅದರ ಆಡಳಿತವನ್ನು ನೋಡಿಕೊಳ್ಳಬೇಕೆಂದು ತೀರ್ಮಾನವಾಯಿತು. ಕ್ರಾಮ್ವೆಲ್ ಇಂಗ್ಲೆಂಡಿನ ಆಡಳಿತ ವಹಿಸಿಕೊಂಡು ಮುಂದೆ ಐರ್ಲೆಂಡ್ ಮತ್ತು ಸ್ಕಾಟ್‍ಲೆಂಡ್‍ಗಳ ರಾಜಪ್ರಭುತ್ವವಾದಿಗಳ ದಂಗೆಗಳನ್ನು ಹತ್ತಿಕ್ಕಿದ. ವಿಸರ್ಜಿತವಾದ ಸಂಸತ್ತಿನ ಬದಲು ಪ್ರಮುಖ ಧರ್ಮಶುದ್ಧಿವಾದಿಗಳ ಸಭೆಯೊಂದನ್ನು ರಚಿಸಿದ. ಆದರೆ ಅದೂ ಆತನ ನಿರೀಕ್ಷೆಗೆ ತಕ್ಕಂತೆ ನಡೆಯದಿದ್ದಾಗ ಅದನ್ನೂ ವಿಸರ್ಜಿಸಿ, ರಾಜ್ಯಮಂತ್ರಾಲೋಚನಾ ಸಭೆಯನ್ನು ಪುನಃ ಕರೆದ. ಅದು ಸರ್ಕಾರದ ಕಟ್ಟಳೆಯೊಂದನ್ನು ರಚಿಸಿತು. ಇದರ ಫಲವಾಗಿ, ಕ್ರಾಮ್ವೆಲ್ ಇಂಗ್ಲೆಂಡಿಗೆ ಮಾತ್ರವೇ ಅಲ್ಲದೆ ಐರ್ಲೆಂಡ್ ಸ್ಕಾಟ್‍ಲೆಂಡ್‍ಗಳಿಗೂ ಪಾಲಕ ಪ್ರಭುವಾದ. ಅಲ್ಲದೆ, ಸ್ವಲ್ಪ ದಿವಸಗಳ ಅನಂತರ ರಚಿತವಾದ ಅನುಬಂಧ ಶಾಸನದ (ಅಡಿಷನಲ್ ಪೆಟಿಷನ್) ಪ್ರಕಾರ ತನ್ನ ಉತ್ತರಾಧಿಕಾರಿಗಳನ್ನು ನೇಮಿಸುವ ಹಕ್ಕು ಆತನಿಗೆ ದೊರಕಿತು.

ಕ್ರಾಮ್ವೆಲ್ ಒಂದು ರೀತಿಯಲ್ಲಿ ಸರ್ವಾಧಿಕಾರಿಯಾಗಿದ್ದನೆಂದೇ ಹೇಳಬೇಕು. ಆತನೊಂದು ವಿಚಿತ್ರ ಪರಿಸ್ಥಿತಿಯನ್ನೆದುರಿಸಬೇಕಾಗಿತ್ತು. ಪಾರ್ಲಿಮೆಂಟುಗಳನ್ನು ಬಿಟ್ಟಿರುವುದು, ಅವುಗಳೊಂದಿಗೆ ಸಹಕರಿಸಿ ಕೆಲಸ ಮಾಡುವುದು-ಎರಡೂ ಅವನಿಗೆ ಕಷ್ಟವಾಗಿದ್ದವು. ಅವನಿಗೆ ಪಾರ್ಲಿಮೆಂಟಿನಲ್ಲಿ ನಂಬಿಕೆಯಿರಲಿಲ್ಲ. ನಿಶ್ಚಿತೋದ್ದೇಶ ಮತ್ತು ದೃಢವಾದ ಕಾರ್ಯನೀತಿಗಳಲ್ಲಿ ಅವನಿಗೆ ವಿಶ್ವಾಸವಿತ್ತು. ವಿಶಾಲದೃಷ್ಟಿ, ಧರ್ಮ ಸಹಿಷ್ಣುತೆ, ರಾಷ್ಟ್ರಹಿತ ಮುಂತಾದ ಉನ್ನತಗುಣಗಳಿಂದ ಕೂಡಿದ್ದ ಆತ ನಿಸ್ವಾರ್ಥದೃಷ್ಟಿಯಿಂದ ತನ್ನ ತಾಯ್ನಾಡಿಗಾಗಿ ದುಡಿದ. ತನ್ನ ಧ್ಯೇಯಸಾಧನೆಗಾಗಿ ಆತ ಸಂಸತ್ತನ್ನು ಕಡೆಗಣಿಸಿದ. ವ್ಯಕ್ತಿ ಸ್ವಾತಂತ್ರ್ಯವನ್ನೂ ಆಲಕ್ಷಿಸಿದ್ದು ನಿಜ. ಆತ ದಕ್ಷ ಆಡಳಿತಗಾರ ಮತ್ತು ಉತ್ತಮ ಹೋರಾಟಗಾರ.

ತನ್ನ ಅಧಿಕಾರದ ಉಚ್ಛ್ರಾಯಸ್ಥಿತಿಯಲ್ಲಿದ್ದಾಗ 1658ರಲ್ಲಿ ಕ್ರಾಮ್ವೆಲ್ ಮರಣ ಹೊಂದಿದ. ವೆಸ್ಟ್‍ಮಿನ್‍ಸ್ಟರ್ ಅಬೆಯಲ್ಲಿ ಆತನ ಶವಸಂಸ್ಕಾರವಾಯಿತು.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: