ಆಲಂಪುರ
ತುಂಗಭದ್ರಾನದಿಯ ಪಶ್ಚಿಮ ದಡದಲ್ಲಿ, ಆಂಧ್ರದ ಕರ್ನೂಲು ಪಟ್ಟಣಕ್ಕೆ ಸುಮಾರು ಎಂಟು ಮೈಲಿ ದೂರದಲ್ಲಿದೆ. ಭಾರತದ ದೇವಾಲಯಗಳ ಉಗಮ ಮತ್ತು ವಿಕಾಸವನ್ನು ಅಧ್ಯಯನ ಮಾಡಲು ಇಲ್ಲಿನ ದೇವಾಲಯಗಳು ಬಹು ಸಹಾಯಕವಾಗಿವೆ. ಈ ದೃಷ್ಟಿಯಿಂದ ಇದು ಪಟ್ಟದಕಲ್ಲಿನಷ್ಟೇ (ನೋಡಿ- ಪಟ್ಟದಕಲ್ಲು) ಗಮನಾರ್ಹವಾದುದು. ಇಲ್ಲಿ ಪಟ್ಟದಕಲ್ಲಿನ ಪಾಪನಾಥ ದೇವಾಲಯವನ್ನು ಹೋಲುವ ಅನೇಕ ದೇವಾಲಯಗಳಿವೆ. ಇವುಗಳಲ್ಲಿ ಬಾಗುಳ್ಳ ಶಿಖರ, ಆಮಲಕ, ಗೂಡು ಮುಂತಾದವನ್ನು ಕಾಣಬಹುದು. ಚೌಕನೆಯ ಆಚ್ಛಾದಿತ ಹಜಾರಗಳು, ಅಪ್ಸರಶಿಲ್ಪಗಳಿಂದ ಕೂಡಿದ ಕಂಬಗಳು ದಕ್ಷಿಣಾಪಥದ ಗುಹಾಂತರ ದೇವಾಲಯಗಳ ಪ್ರಭಾವವನ್ನು ವ್ಯಕ್ತಪಡಿಸುತ್ತವೆ. ಸುಮಾರು ಒಂದು ಮೈಲಿ ದೂರದಲ್ಲಿ ದ್ರಾವಿಡ ಶೈಲಿಯ ಶಿಖರಗಳನ್ನುಳ್ಳ ಅನೇಕ ದೇವಾಲಯಗಳಿವೆ. ಈ ಶಿಖರಗಳು ಹಂತಗಳಿಂದ ಕೂಡಿದ್ದು, ಮೇಲೆ ಹೋದಂತೆ ಕಿರಿದಾಗುತ್ತವೆ. ಇಲ್ಲಿನ ಶಿಲ್ಪಗಳೂ ಮನೋಹರವಾಗಿವೆ. ಜಿಂಕೆಯ ಬೇಟೆ, ಗಾಂಧರ್ವಶಿಲ್ಪ, ಶಿವಪಾರ್ವತಿ, ಗಣೇಶ, ಬ್ರಹ್ಮ ಮುಂತಾದ ಶಿಲ್ಪಗಳು ಗಮನಾರ್ಹವಾದುವು. ಈ ದೇವಾಲಯಗಳು ಮತ್ತು ಶಿಲ್ಪಗಳು ಚಾಲುಕ್ಯ ಶೈಲಿಯಲ್ಲಿವೆ. ಇಲ್ಲಿನ ದೇವಾಲಯಗಳಲ್ಲಿ ಮುಖ್ಯವಾದುದು ಭೀಮಾಶಂಕರ ದೇವಾಲಯ. ಈಗಲೂ ಪೂಜೆ ನಡೆಯುತ್ತಿರುವ ಈ ದೇವಾಲಯದ ಶಿಖರ ಭದ್ರವಾಗಿದ್ದರೂ ಅದರ ಮೇಲಿನ ಕೆತ್ತನೆ ಅನೇಕ ಪದರ ಸುಣ್ಣಬಣ್ಣಗಳಿಂದ ಮರೆಯಾಗಿದೆ. ಇತ್ತೀಚಿನ ಕಟ್ಟಡಗಳು ಈ ಮಂದಿರದ ಸುಂದರವಾದ ವಾಸ್ತುಶೈಲಿಯನ್ನು ಮರೆಗೊಳಿಸಿವೆ. ಮತ್ತೊಂದು ದೇವಾಲಯವಾದ ಕುಮಾರಬ್ರಹ್ಮಮಂದಿರವನ್ನು ವಾನರ, ಆನೆ, ಹಂಸ ಮುಂತಾದ ಪ್ರಾಣಿಗಳ ಕೆತ್ತನೆಪಟ್ಟಿಕೆಗಳಿಂದ ಅಲಂಕೃತವಾದ ಜಗಲಿಯ ಮೇಲೆ ಕಟ್ಟಲಾಗಿದೆ. ಮುಖಮಂಟಪ ಮತ್ತು ನವರಂಗಗಳಾದ ಅನಂತರ ಇರುವ ಗರ್ಭಗೃಹ 76,660 ಚದರವಾಗಿದ್ದು ಪ್ರದಕ್ಷಿಣ ಮಾರ್ಗದಿಂದ ಆವೃತವಾಗಿದೆ. ಈ ಮಂದಿರದ ಸ್ತಂಭಗಳು ಅಜಂತ ಎಲ್ಲೋರಗಳ ಸ್ತಂಭಗಳನ್ನು ಬಹುವಾಗಿ ಹೋಲುತ್ತವೆ. ಮುಖಮಂಟಪದಲ್ಲಿ ಕೆತ್ತಲಾಗಿರುವ ಪ್ರೇಮಿಗಳ ಶಿಲ್ಪಗಳು ಮಾನವ ಜೀವನದ ಚಿತ್ರಣಗಳಾಗಿವೆ. ಮಂದಿರದ ಒಳಭಾಗದಲ್ಲಿ ಸಪ್ತಮಾತೃಕೆಯರನ್ನು ರೂಪಿಸಿದೆ; ಗರ್ಭಗೃಹದಲ್ಲಿ ಲಿಂಗವನ್ನು ಪ್ರತಿಷ್ಠಿಸಲಾಗಿದೆ. ಮತ್ತೊಂದು ದೇವಾಲಯವಾದ ಅರ್ಕಬ್ರಹ್ಮ ಮಂದಿರದ ಸ್ತಂಭಗಳು ಗಮನಾರ್ಹವಾಗಿದ್ದು ದಕ್ಷಿಣಾಪಥದ ಗುಹಾಂತರ ದೇವಾಲಯಗಳ ಸ್ತಂಭಗಳನ್ನು ಹೋಲುತ್ತವೆ. ಈ ಗುಂಪಿನಲ್ಲಿ ಕೊನೆಯದಾದ ವೀರ ಬ್ರಹ್ಮಮಂದಿರದ ಹೊರಭಾಗ ಸುಂದರವಾದ ಕೆತ್ತನೆಗಳಿಂದ ತುಂಬಿದೆ. ಇವುಗಳಲ್ಲಿ ಬೇರೆ ಬೇರೆ ಭಂಗಿಗಳಲ್ಲಿರುವ ನಾಲ್ಕು ಆನೆಗಳೂ ಚಾಮರ ಧಾರಿಣಿ ಸ್ತ್ರೀವಿಗ್ರಹಗಳೂ ಗೂಡುಗಳೂ ತಳಭಾಗದಲ್ಲಿರುವ ಮಾನವ ಮುಖಗಳೂ ಬಹಳ ಆಕರ್ಷಣೀಯವಾಗಿದ್ದು ದ್ರಾವಿಡ ಲಕ್ಷಣಗಳನ್ನು ರೂಪಿಸುತ್ತವೆ. ದ್ರಾವಿಡ ದೇಶದ ಎಲ್ಲೆಯಲ್ಲಿರುವ ಈ ದೇವಾಲಯಗಳಲ್ಲಿ ದ್ರಾವಿಡ ಶೈಲಿಯ ಲಕ್ಷಣಗಳು ಕಂಡುಬಂದರೂ ಅಲ್ಲಿನ ಶಿಖರಗಳು ಔತ್ತರೇಯ ಪ್ರಭಾವವನ್ನೂ ಒಳಭಾಗ ಪಶ್ಚಿಮ ಭಾರತದ ಗುಹಾಂತರ ದೇವಾಲಯಗಳ ಪ್ರಭಾವವನ್ನೂ ತೋರುವುದಲ್ಲದೆ ಅಲ್ಲಿನ ಶಿಲ್ಪಗಳೂ ಅಲಂಕರಣ ಶೈಲಿಯೂ ಗುಪ್ತರಕಾಲದ ಕಲಾಶೈಲಿಯನ್ನು ಪ್ರತಿಬಿಂಬಿಸುತ್ತವೆ. ಕ್ರಮೇಣ ದಾಕ್ಷಿಣಾತ್ಯ ಶೈಲಿಯ ಪ್ರಭಾವ ಹೆಚ್ಚಾಗಿ ಮಧ್ಯಯುಗೀನ (ಚಾಲುಕ್ಯ ಶೈಲಿಯ) ವಾಸ್ತುಶಿಲ್ಪಕಲೆಯಲ್ಲಿ ದ್ರಾವಿಡ ಶೈಲಿಯ ಗೋಪುರ ಹೆಚ್ಚಾಗಿ ಬಳಕೆಗೆ ಬಂದಿದ್ದಿರಬೇಕು
ಉಲ್ಲೇಖಗಳು
ಬದಲಾಯಿಸಿ- http://www.prajavani.net/article/%E0%B2%A6%E0%B3%87%E0%B2%97%E0%B3%81%E0%B2%B2%E0%B2%97%E0%B2%B3-%E0%B2%A4%E0%B3%8A%E0%B2%9F%E0%B3%8D%E0%B2%9F%E0%B2%BF%E0%B2%B2%E0%B3%81-%E2%80%98%E0%B2%86%E0%B2%B2%E0%B2%82%E0%B2%AA%E0%B3%81%E0%B2%B0%E2%80%99
- http://www.kanaja.in/%E0%B2%B2%E0%B2%9C%E0%B3%8D%E0%B2%9C%E0%B2%BE%E0%B2%97%E0%B3%8C%E0%B2%B0%E0%B2%BF-%E0%B2%9B%E0%B2%BE%E0%B2%AF%E0%B2%BE%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%97%E0%B2%B3%E0%B3%81/