ಆರ್. ಆರ್. ಕೇಶವಮೂರ್ತಿ
‘’’ಆರ್. ಆರ್. ಕೇಶವಮೂರ್ತಿ’’’ (ಮೇ ೨೭, ೧೯೧೪ – ಅಕ್ಟೋಬರ್ ೨೩, ೨೦೦೬) ಕರ್ನಾಟಕ ಸಂಗೀತ ಲೋಕದಲ್ಲಿ ಪ್ರಸಿದ್ಧರಾದ ಪಿಟೀಲು ವಿದ್ವಾಂಸರೆನಿಸಿದ್ದಾರೆ.
ಆರ್. ಆರ್. ಕೇಶವಮೂರ್ತಿ | |
---|---|
ಜನನ | ಮೇ ೨೭. ೧೯೧೪ ಹಾಸನ ಜಿಲ್ಲೆಯ ರುದ್ರಪಟ್ಟಣ |
ಮರಣ | ಅಕ್ಟೋಬರ್ ೨೩, ೨೦೦೬ |
ವೃತ್ತಿ(ಗಳು) | ಪಿಟೀಲು ವಾದಕರು. ಸಂಗೀತ ವಿದ್ವಾಂಸರು, ಗ್ರಂಥ ರಚನಕಾರರು, ಸಂಗೀತ ಗುರುಗಳು |
ಜೀವನ
ಬದಲಾಯಿಸಿಪಿಟೀಲು ವಿದ್ವಾಂಸರಲ್ಲಿ ಅಗ್ರಗಣ್ಯರೆನಿಸಿದ್ದ ಆರ್ ಆರ್ ಕೇಶವಮೂರ್ತಿಗಳು ಸಂಗೀತದ ಕಾಶಿ ಎನಿಸಿರುವ ರುದ್ರಪಟ್ಟಣದಲ್ಲಿ ಮೇ ೨೭, ೧೯೧೪ರ ವರ್ಷದಲ್ಲಿ ಜನಿಸಿದರು. ಅವರ ತಂದೆ ರಾಮಸ್ವಾಮಯ್ಯನವರು ಮತ್ತು ತಾಯಿ ಸುಬ್ಬಮ್ಮನವರು. ಇವರ ತಾತ ವೆಂಕಟರಾಮಯ್ಯನವರು ಸುಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಗೀತಕಾರರು. ಅವರದ್ದು ಸಂಗೀತದ ಮನೆತನ. ಹೀಗೆ ತಂದೆಯಿಂದಲೇ ಅವರ ಸಂಗೀತದ ಮೊದಲ ಕಲಿಕೆ ಪ್ರಾರಂಭವಾಯಿತು.
ಬಿಡಾರಂ ಕೃಷ್ಣಪ್ಪನವರ ಶಿಷ್ಯತ್ವ
ಬದಲಾಯಿಸಿ1923ರ ವೇಳೆಗೆ ಮೈಸೂರಿಗೆ ಬಂದ ಕೇಶವಮೂರ್ತಿಗಳು ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲು ಅಭ್ಯಾಸ ಪ್ರಾರಂಭಿಸಿದರು. ಚಿಕ್ಕರಾಮ ರಾಯರಲ್ಲಿ ಗಾಯನ ಕಲಿಕೆ ನಡೆಸಿದರು. ಕಟ್ಟುನಿಟ್ಟಾದ ಪಾಠ, ಹಠದ ಸಾಧನೆ. ದಿನಕ್ಕೆ ಎಂಟು ಗಂಟೆಗಳ ಸತತ ಅಭ್ಯಾಸ ಅಂದಿನ ದಿನದ ಅವರ ಕಲಿಕೆಯ ವಿಧಾನವಾಗಿತ್ತು.
ಪಿಟೀಲು ವಾದಕರಾಗಿ
ಬದಲಾಯಿಸಿಟಿ. ಚೌಡಯ್ಯನವರಂತೆ ಅವರು ಪಿಟೀಲು ಅಭ್ಯಾಸ ಮಾಡಿದ್ದು ಏಳುತಂತಿಗಳಲ್ಲಿ. ವಿದ್ವಾಂಸರ ಕಚೇರಿಗಳಲ್ಲಿ ಹಾಡುಗಾರರ ಮರ್ಜಿಯಂತೆ ನಾಲ್ಕು ತಂತಿ ಇಲ್ಲವೇ ಏಳುತಂತಿ ಪಿಟೀಲಿನ ಜೊತೆಗಾರಿಕೆ ನಿರ್ವಹಿಸಿದರು.
ಸಂಗೀತ ಗುರುಗಳು
ಬದಲಾಯಿಸಿಕೇಶವಮೂರ್ತಿಗಳು 1934ರಲ್ಲಿ ಬೆಂಗಳೂರಿನಲ್ಲಿ ವಾಸ ಕೈಗೊಂಡರು. ತೆಲುಗು, ಕನ್ನಡ, ತಮಿಳು, ಹಿಂದಿ, ಭಾಷೆಗಳಲ್ಲಿ ಅವರು ಪ್ರಭುತ್ವ ಪಡೆದಿದ್ದರು. ಗುರುಗಳ ಹೆಸರಿನಲ್ಲಿ ಗಾನವಿಶಾರದ ಬಿಡಾರಂ ಕೃಷ್ಣಪ್ಪ ಸ್ಮಾರಕ ಸಂಗೀತ ವಿದ್ಯಾಲಯ ಸ್ಥಾಪನೆ ಮಾಡಿ ನೂರಾರು ವಿದ್ಯಾರ್ಥಿಗಳನ್ನು ಕಚೇರಿ ಮಾಡುವ ಮಟ್ಟಕ್ಕೆ ತಂದರು. ಶಿಷ್ಯರಲ್ಲಿ ಅನೇಕರು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದರು. ಅವರ ಶಿಷ್ಯರಲ್ಲಿ ಟಿ. ರುಕ್ಮಿಣಿ, ಆನೂರು ಎಸ್. ರಾಮಕೃಷ್ಣ, ಗಿಟಾರ್ ವಾದನದಲ್ಲೂ ಕರ್ನಾಟಕ ಸಂಗೀತಾಭ್ಯಾಸ ಮಾಡಿ ಕಚೇರಿ ನೀಡಿ ವಿಸ್ಮಯ ಮೂಡಿಸಿದ ಉದಯೋನ್ಮುಖ ಕಲಾವಿದ ನಿಖಿಲ್ ಜೋಶಿ, ಜ್ಯೋತ್ಸ್ನಾ ಶ್ರೀಕಾಂತ್, ಅಂಬಳೆ ಕೃಷ್ಣಮೂರ್ತಿ, ನಳಿನಿಮೋಹನ್ ಮುಂತಾದವರ ಪಟ್ಟಿ ಬೆಳೆಯುತ್ತದೆ.
ಗ್ರಂಥ ರಚನಕಾರರಾಗಿ
ಬದಲಾಯಿಸಿಕೇಶವಮೂರ್ತಿಗಳು ಹಲವಾರು ಸಂಗೀತ ಗ್ರಂಥಗಳ ರಚನೆ ಮಾಡಿದರು. ಬಾಲಶಿಕ್ಷಾ, ವಾಗ್ಗೇಯಕಾರರ ಕೃತಿಗಳು, ಭಾರತೀಯ ವಾಗ್ಗೇಯಕಾರರು, ರಾಗಲಕ್ಷಣ ಮತ್ತು ರಾಗಕೋಶ, ಲಕ್ಷ್ಯ- ಲಕ್ಷಣ ಪದ್ಧತಿ, ಸಂಗೀತ ಲಕ್ಷ್ಯ ವಿಜ್ಞಾನ, ಹಿಂದುಸ್ತಾನಿ ಸಂಗೀತ ರಾಗಕೋಶ, ಮೇಳರಾಗ ಮಾಲಿಕಾ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದರು.
ಪ್ರಶಸ್ತಿ ಗೌರವಗಳು
ಬದಲಾಯಿಸಿಆರ್ ಆರ್ ಕೇಶವಮೂರ್ತಿಗಳಿಗೆ ಗಾನ ಸಾಹಿತ್ಯ ಶಿರೋಮಣಿ, ಸಂಗೀತ ವಿದ್ಯಾಸಾಗರ, ಸಂಗೀತಶಾಸ್ತ್ರ ಪ್ರವೀಣ, ಸಂಗೀತ ಕಲಾರತ್ನ, ಕರ್ನಾಟಕ ಕಲಾತಿಲಕ, ಲಯಕಲಾನಿಪುಣ, ಸಂಗೀತ ಕಲಾಪ್ರಪೂರ್ಣ, ಕನಕಪುರಂದರ ಪ್ರಶಸ್ತಿ, ವೀಣೆಶೇಷಣ್ಣ ಪ್ರಶಸ್ತಿ ಹೀಗೆ ಹಲವಾರು ಗೌರವಗಳು ಅರ್ಪಿತವಾದವು.
ವಿದಾಯ
ಬದಲಾಯಿಸಿಈ ಮಹಾನ್ ಸಾಧಕರು ಅಕ್ಟೋಬರ್ ೨೩, ೨೦೦೬ರಂದು ಈ ಲೋಕವನ್ನಗಲಿದರು.