ಆರ್ಲ್ಯಾಂಡೊ ಫ್ಯೂರಿಯೋಸ

ಇಟಲಿ ದೇಶದ ಆರಿಯೋಸ್ಟೊ ಕವಿಯ ಉತ್ತಮ ಕಥನ ಕಾವ್ಯ. ಇದು ೧೫೨೬ರಲ್ಲಿ ಮೊದಲು ಪ್ರಕಟವಾಯಿತು. ಯುರೋಪಿನ ಕಲೆ ಮತ್ತು ಸಾಹಿತ್ಯ ಪುನರುತ್ಥಾನ ಕಾಲದ ಪೂರ್ವ ಸಂಪ್ರದಾಯದ ಉತ್ತಮ ಕೃತಿಯೆಂದು ಪರಿಗಣಿಸಲ್ಪಟ್ಟಿದೆ. ಇದನ್ನು ಪೂರೈಸಲು ಸುಮಾರು ಮೂವತ್ತು ವರ್ಷಗಳ ಕಾಲ ಹಿಡಿಯಿತು (೧೫೦೨-೩೩). ಇದು ಯುರೋಪಿನಲ್ಲಿ ಬಹಳ ಬೇಗ ಜನರ ಮೆಚ್ಚುಗೆಯನ್ನು ಗಳಿಸಿದುದಲ್ಲದೆ ಆ ಕಾಲದ ಸಾಹಿತ್ಯದ ಮೇಲೆ ಪ್ರಭಾವ ಬೀರಿತು.

೧೫೫೮ ರ ಆವೃತ್ತಿಯ ಮುಖಪುಟ

ಕಾವ್ಯದ ಕುರಿತು

ಬದಲಾಯಿಸಿ

ಆರ್ಲ್ಯಾಂಡೊ ಫ್ಯೂರಿಯೋಸ ಎಂದರೆ ಉನ್ಮತ್ತ ಆರ್ಲ್ಯಾಂಡೊ ಎಂದು ಅರ್ಥ. ಕವಿಯು ನಾಯಕ ಆರ್ಲ್ಯಾಂಡೊವನ್ನು ಬೇರೆ ಬೇರೆ ಕಾಲ್ಪನಿಕ ಸನ್ನಿವೇಶಗಳಲ್ಲಿ ಚಿತ್ರಿಸಿದ್ದಾನೆ. ಅನೇಕ ಪ್ರಕರಣಗಳು ಇದರಲ್ಲಿ ಸೇರಿಕೊಂಡಿವೆ. ಇವನ್ನು ಕವಿ ಜಾಣ್ಮೆಯಿಂದ ಹೆಣೆದು ಕೃತಿಗೆ ಒಂದು ಏಕರೂಪತೆಯನ್ನು ಕೊಟ್ಟಿದ್ದಾನೆ. ಇದರಲ್ಲಿ ಕಾಣಬರುವುದು ಮೂರು ಮುಖ್ಯ ಎಳೆಗಳು: ಏಂಜಲಿಕಳ ಬಗ್ಗೆ ಆರ್ಲ್ಯಾಂಡೊವಿನ ಪ್ರೇಮ, ಕ್ರೈಸ್ತರಿಗೂ ಪೇಗನ್ನರಿಗೂ ನಡೆಯುವ ಯುದ್ಧ, ರಗೇರೊ ಮತ್ತು ಬ್ರಡಮಂಟೊ ಪ್ರಣಯಿಗಳ ಪ್ರಕರಣ.

ಮೊದಲನೆಯದೇ ಅತಿ ಮುಖ್ಯವಾದ ಭಾಗ. ಎರಡನೆಯದು ಇಡೀ ಕಾವ್ಯಕ್ಕೆ ಶೌರ್ಯದ ಹಿನ್ನೆಲೆಯನ್ನು ಕೊಡುತ್ತದೆ. ಮೂರನೆಯದು ರಗೇರೊ ಮತ್ತು ಬ್ರಡಮೆಂಟೊ ಮದುವೆಯಾಗಿ ಆಲಿಯೊಸ್ಟೊವಿನ ಆಶ್ರಯದಾತರ ಪೂರ್ವಜರಾಗಿ ವರ್ಣಿಸಲ್ಪಟ್ಟಿರುವುದು. ಹದಿನಾರನೆಯ ಶತಮಾನದ ಜನಕ್ಕೆ ಆಸಕ್ತಿ ಇದ್ದ ವಿಚಾರಗಳೆಲ್ಲ ಇಲ್ಲಿವೆ-ಅತಿಭೌತಿಕ, ಸಾಂಕೇತಿಕ ಮತ್ತು ಸಾಹಸಮಯವಾದ ಘಟನೆಗಳು, ಚಂದ್ರಲೋಕದ ಪ್ರವಾಸ, ಮಾಯಾ ಉಂಗುರಗಳು, ಖಡ್ಗಗಳು ಎಲ್ಲವೂ ಬರುತ್ತವೆ. ಇವೆಲ್ಲ ವಿಚಾರಗಳನ್ನು ಬೆಸೆದು ಒಂದಾಗಿ ಸೇರಿಸಿರುವುದು ಕವಿಯ ವಿಶಿಷ್ಟ ವ್ಯಕ್ತಿತ್ವ. ಕವಿ ಉಪಯೋಗಿಸಿರುವ ಛಂದಸ್ಸು ಅಟ್ಟರೀಮಾ ಎಂಬ ಅಷ್ಟಪದಿ.