ಆರ್ಥೊಡೈರ
ಡಿವೋನಿಯನ್ ಯುಗದ ಉತ್ತರಾರ್ಧದಲ್ಲಿ ಹೇರಳವಾಗಿದ್ದು, ಅಮೆರಿಕದ ಸಂಯುಕ್ತ ಸಂಸ್ಥಾನದ ಕ್ಲೀವ್ಲೆಂಡ್ ಪ್ರದೇಶದಲ್ಲಿ ತಮ್ಮ ಪಳೆಯುಳಿಕೆಗಳನ್ನು ಬಿಟ್ಟಿರುವ ಪ್ರಾಚೀನ ಕಾಲದಲ್ಲಿ ಬದುಕಿದ್ದ ಮೀನುಗಳ ವರ್ಗ. ತಟ್ಟೆಯಂಥ ಮೂಳೆ ಹೊದಿಕೆಯನ್ನು ಹೊಂದಿದ ಪ್ಲ್ಯಾಕೊಡರ್ಮ ಮತ್ಸ್ಯವಂಶಕ್ಕೆ ಸೇರಿದ್ದೆಂದು ಊಹಿಸಲಾಗಿದೆ. ಇವುಗಳಲ್ಲಿ ಡೈನಿಕ್ತಿಸ್ ಎಂಬ ಮೀನು ಸುಮಾರು ೧೦ ಮೀ ಉದ್ದವಿದ್ದು, ಎದೆ ಮತ್ತು ತಲೆಯ ಭಾಗಗಳಲ್ಲಿ ಬಲವಾದ ಮೂಳೆಯ ಹೊದಿಕೆಯನ್ನು ಹೊಂದಿತ್ತು. ತಲೆಯ ಮತ್ತು ಎದೆಯ ಹೊದಿಕೆಗಳು ಚಲಿಸಬಹುದಾದ ರೀತಿಯಲ್ಲಿ ಕತ್ತಿನಂಥ ಒಂದು ಸಂಧಿಯ ಮೂಲಕ ಕೂಡಿಕೊಂಡಿದ್ದವು. ಆದ್ದರಿಂದಲೇ ಈ ಗುಂಪಿನ ಮೀನುಗಳಿಗೆ ಸಂಧಿಕಂಠಿ (ಆರ್ಥೊ=ಸಂಧಿ: ಡೈರ=ಕಂಠ) ಎಂಬ ಹೆಸರು ಬಂದಿರುವುದು. ಡೈನಿಕ್ತಿಸ್ ಮೀನಿಗೆ ದೇಹದ ಹಿಂಭಾಗದಲ್ಲಿ ಮೂಳೆಯ ಹೊದಿಕೆಯಿರಲಿಲ್ಲ. ಮುಂದಿನ ಜೊತೆರೆಕ್ಕೆಗಳು ಚಿಕ್ಕವಾಗಿದ್ದುವು. ಈ ಮೀನಿನ ಡಿವೋನಿಯನ್ ಕಾಲದವೇ ಆದ ಪುರ್ವಜರಲ್ಲಿ ದೇಹ ಚಪ್ಪಟೆಯಾಗಿದ್ದು ವಿಶಾಲವಾದ ಮೂಳೆಯ ಹೊದಿಕೆಯಿತ್ತು. ಅವುಗಳ ದೇಹ ತೀರ ಸಣ್ಣದಾಗಿದ್ದು ಜೊತೆರೆಕ್ಕೆಗಳು ಇನ್ನೂ ಮೂಡಿರಲಿಲ್ಲ. ಅವುಗಳ ಸ್ಥಳದಲ್ಲಿ ಬಾಗಿದ ದೀರ್ಘವಾದ ಮುಳ್ಳುಗಳು ಮಾತ್ರ ಇದ್ದುವು. ಆರ್ಥೊಡೈರ ಗುಂಪಿಗೆ ಸೇರಿದ ಹಲವಾರು ಬಗೆಯ ಮೀನುಗಳ ಪಳೆಯುಳಿಕೆಗಳು ದೊರೆತಿವೆ. ಆಂಟಿಯಾರ್ಕ್ ಪಂಗಡದ ಸೀಹಿನೀರಿನ ಮೀನುಗಳಲ್ಲಿ ಬೋತ್ರಿಯೊಲೆಪಿಸ್ ಎಂಬ ಮೀನುಗಳು ಆ ಕಾಲದಲ್ಲಿ ಹೇರಳವಾಗಿದ್ದುವು. ಅವುಗಳ ಮೈಮೇಲಿನ ಮೂಳೆಯ ಕವಚ ಸಾಮಾನ್ಯ ಆರ್ಥೊಡೈರ ಮೀನುಗಳ ಕವಚದ ಮಾದರಿಯಲ್ಲಿತ್ತು. ಭುಜದ ಭಾಗದಲ್ಲಿ ಆರ್ಥೊಡೈರಗಳಂತೆ ಪಾಶರ್್ವದ ಮೂಳೆಯ ಚಿಪ್ಪುಗಳಿದ್ದುವು: ಆ್ಯಂಟಿಯಾರ್ಕ್ ಮೀನುಗಳಲ್ಲಿದ್ದಂತೆ ಚಲಿಸಲು ಅನುಕೂಲಿಸುವಂತೆ ಕೂಡಿಕೊಂಡಿದ್ದುವು. ಜೆಮುಂಡಿನ ಎಂಬ ರೀತಿಯದು ಸಾಗರದಲ್ಲಿ ವಾಸಿಸುತ್ತಿದ್ದ ಮೀನು. ಅದರಲ್ಲಿ ಎರಡು ಜೊತೆ ರೆಕ್ಕೆಗಳಿದ್ದುವು; ಅವುಗಳಲ್ಲಿ ಮುಂದಿನ ಜೊತೆ ರೆಕ್ಕೆಗಳು ಚೆನ್ನಾಗಿ ಅಭಿವೃದ್ಧಿಯಾಗಿದ್ದುವು; ಮೂಳೆಯ ಕವಚ ಕ್ಷೀಣಿಸುತ್ತ ಬರುತ್ತಿತ್ತು. ಬಹುಶಃ ಈ ಮೀನುಗಳು ಕ್ರಮಕ್ರಮವಾಗಿ ನಾಯಿತಲೆ ಮೀನುಗಳ (ಷಾರ್ಕ್ಮೀನು) ರೂಪಕ್ಕೆ ವಿಕಾಸವಾಗಿದ್ದಿರಬೇಕು.