ಆರ್ಥಿಕ ಪದ್ಧತಿಗಳು

ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಜೀವನವನ್ನು ಸುಗಮವನ್ನಾಗಿ ಮಾಡಲು ಮನುಷ್ಯ ಕಾಲಕಾಲಕ್ಕೆ ಮಾಡಿಕೊಂಡಿರುವ ವ್ಯವಸ್ಥೆಗಳ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಇವೇ ಆರ್ಥಿಕ ಪದ್ಧತಿಗಳು (ಎಕನಾಮಿಕ್ ಸಿಸ್ಟಮ್ಸ್). ಮನುಷ್ಯ ನಿತ್ಯಜೀವನದಲ್ಲಿ ಎದುರಿಸಬೇಕಾದ ಸಮಸ್ಯೆಗಳಲ್ಲಿ ಅತಿ ಕಠಿಣವಾದುದು ಆರ್ಥಿಕ ಸಮಸ್ಯೆ. ಆರ್ಥಿಕ ಸಮಸ್ಯೆಯೆಂದರೆ ಜೀವನ ನಿರ್ವಹಣೆಯ ಸಮಸ್ಯೆಯೆನ್ನಬಹುದು. ಈ ಸಮಸ್ಯೆ ಹುಟ್ಟಲು ಕಾರಣ ಮನುಷ್ಯನ ಅಪೇಕ್ಷೆಗಳಿಗೂ ಅವನ ಸಾಧನ ಸಾಮಗ್ರಿಗಳಿಗೂ ಇರುವ ಅಪಾರ ಅಂತರ. ಅಪೇಕ್ಷೆಗಳು ಅಮಿತವಾಗಿದ್ದರೂ ಸಾಧನ ಸಾಮಗ್ರಿಗಳು ಮಾತ್ರ ಅತ್ಯಂತ ಮಿತವಾಗಿದೆ. ಆದುದರಿಂದ ಮಿತ ಸಾಧನ ಸಾಮಗ್ರಿಗಳಿಂದ ತನ್ನ ಅಪೇಕ್ಷೆಗಳನ್ನು ತೃಪ್ತಿಪಡಿಸಲು ಅತ್ಯುತ್ತಮ ಮಾರ್ಗ ಯಾವುದೆಂಬುದನ್ನು ನಿರ್ಧರಿಸುವುದೇ ಮನುಷ್ಯ ಸತತವೂ ಎದುರಿಸಬೇಕಾದ ಮಹಾ ಆರ್ಥಿಕ ಸಮಸ್ಯೆ. ಆರ್ಥಿಕ ಪದ್ಧತಿ ಕಾಲ ದೇಶಗಳಿಗನುಗುಣವಾಗಿ ವ್ಯತ್ಯಾಸ ಹೊಂದುವುದು. ಇದನ್ನು ಮಾಕ್ರ್ಸ್ ವಾದಿಗಳು

  1. ಆದಿ-ಸಾಮುದಾಯಿಕ,
  2. ಪ್ರಾಚೀನ-ಗುಲಾಮಗಿರಿ,
  3. ಮಧ್ಯಕಾಲಿಕ-ಜೀತಗಾರಿಕೆ,
  4. ಆಧುನಿಕ - ಬಂಡವಾಳಗಾರಿಕೆ ಮತ್ತು
  5. ಭವಿಷ್ಯ-ಸಮಾಜಸ್ವಾಮ್ಯ ಎಂದು ಐದು ಬಗೆಯಾಗಿ ವಿಂಗಡಿಸಿರುವರು.

ಆರ್ಥಿಕ ಪದ್ಧತಿ ಯಾವುದೇ ಆದರೂ ಅದು ಉತ್ಪಾದನೆ, ಅನುಭೋಗ ಮತ್ತು ಹಂಚಿಕೆಗೆ ಸಂಬಂಧಿಸಿದ ಮೂಲಭೂತ ]]ಪ್ರಶ್ನೆ]]ಗಳನ್ನು ತೀರ್ಮಾನಿಸಬೇಕಾಗುವುದು. ಈ ತೀರ್ಮಾನಗಳಿಗೆ ಸಂಪ್ರದಾಯ, ನಿರ್ಬಂಧ, ವೈಯಕ್ತಿಕ ಪ್ರತಿಫಲದ ಆಕರ್ಷಣೆ ಮುಂತಾದವು ಆಧಾರವಾಗಿರುವುವು. ಪ್ರಾಚೀನ ಕಾಲದಲ್ಲಿ ಆರ್ಥಿಕ ಜೀವನದ ವ್ಯವಸ್ಥೆ ಸುಲಭವಾಗಿತ್ತು. ಕುಟುಂಬ ಆರ್ಥಿಕ ಘಟಕವಾಗಿ, ಸ್ವಪರಿಪುರ್ಣತೆಯ ಗುರಿಯನ್ನು ಹೊಂದಿತ್ತು. ಕುಟುಂಬಜನರಲ್ಲಿಯೇ ಅತಿ ಸರಳ ರೀತಿಯ ಕಾರ್ಯವಿಭಜನೆ ರೂಢಿಯಲ್ಲಿತ್ತು. ಇಂಥ ಪರಿಸ್ಥಿತಿಯಲ್ಲಿ ಆರ್ಥಿಕ ಜೀವನವನ್ನು ವ್ಯವಸ್ಥೆಗೊಳಿಸುವುದು ಕಷ್ಟವಿರಲಿಲ್ಲ. ಆದರೆ ಆಧುನಿಕ ಕಾಲದಲ್ಲಿ, ಅದರಲ್ಲೂ ೧೮ನೆಯ ಶತಮಾನದ ಕೈಗಾರಿಕಾ ಕ್ರಾಂತಿಯಿಂದೀಚೆಗೆ, ಆರ್ಥಿಕ ಜೀವನ ವ್ಯವಸ್ಥೆ ಅತಿ ತೊಡಕಾಯಿತು. ಈ ಪರಿಸ್ಥಿತಿಯಲ್ಲಿ ಆರ್ಥಿಕ ಜೀವನವನ್ನು ಸುವ್ಯವಸ್ಥೆಗೊಳಿಸಲು ಮಾಡಿದ ಏರ್ಪಾಡುಗಳೇ ವಿವಿಧ ಆರ್ಥಿಕ ಪದ್ಧತಿಗಳೆನಿಸಿಕೊಂಡಿವೆ. ಅವುಗಳಲ್ಲಿ ಮುಖ್ಯವಾದವು:

  1. ಸ್ವತಂತ್ರ ಉದ್ಯಮ ಅಥವಾ ಬಂಡವಾಳ ಪದ್ಧತಿ
  2. ಸಮಾಜವಾದಿ ಪದ್ಧತಿ
  3. ಮಿಶ್ರ ಆರ್ಥಿಕಪದ್ಧತಿ
  4. ಸಹಕಾರ ಪದ್ಧತಿ.

ಸ್ವತಂತ್ರ ಉದ್ಯಮ ಪದ್ಧತಿ ಆರ್ಥಿಕಕ್ಷೇತ್ರದಲ್ಲಿ ವ್ಯಕ್ತಿಸ್ವಾತಂತ್ರ್ಯವನ್ನು ಪ್ರತಿಪಾದಿಸುವುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆರ್ಥಿಕ ಕೆಲಸ ಕಾರ್ಯಗಳನ್ನು ತನಗೆ ಅತ್ಯಂತ ಹೆಚ್ಚಿನ ಪ್ರತಿಫಲ ಬರುವ ರೀತಿಯಲ್ಲಿ, ತನ್ನ ಇಚ್ಛೆ ಬಂದಂತೆ ನಡೆಸಬಹುದು. ಸರ್ಕಾರದ ನಿರ್ಬಂಧವಾಗಲೀ, ಇತರರ ಅಡಚಣೆಯಾಗಲೀ ಇರುವುದಿಲ್ಲ. ಪ್ರತಿಯೊಬ್ಬನ ಗಮನವೂ ತನ್ನ ಏಳಿಗೆಯ ಕಡೆ ಮಾತ್ರ ಇರುವುದು; ಇತರರ ಮೇಲೆ ಅದರ ಪರಿಣಾಮವೇನೆಂಬುದನ್ನು ಲೆಕ್ಕಿಸುವುದಿಲ್ಲ. ಈ ಬಗೆಯ ವ್ಯಕ್ತಿಸ್ವಾತಂತ್ರ್ಯ ಸ್ಪರ್ಧೆಗೆ ಎಡೆಕೊಡುವುದು. ಸ್ಪರ್ಧೆಯ ಬೆದರಿಕೆ ಮತ್ತು ವೈಯಕ್ತಿಕ ಪ್ರತಿಫಲದ ಆಕರ್ಷಣೆ ದಕ್ಷತೆಯನ್ನು ಹೆಚ್ಚಿಸುವುದು. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ ಬಳಕೆದಾರನಿಗೆ ಪದಾರ್ಥಗಳು ಅತ್ಯಂತ ಕಡಿಮೆ ಬೆಲೆಗೆ ದೊರಕುವುವು. ಅಲ್ಲದೆ ಸ್ಪರ್ಧೆಯ ಫಲವಾಗಿ ಸರಬರಾಜು ಮತ್ತು ಬೇಡಿಕೆಗಳ ಸಮತೋಲನ ತಾನಾಗಿಯೇ ಉಂಟಾಗುವುದು. ಯೋಜನಾ ಮಂಡಲಿ ಮುಂತಾದ ಬಾಹ್ಯಸಂಸ್ಥೆಗಳ ಆವಶ್ಯಕತೆಯಿರುವುದಿಲ್ಲ. ಸ್ವತಂತ್ರ ಉದ್ಯಮ ಪದ್ಧತಿಯಲ್ಲಿ ಎಲ್ಲ ಉದ್ಯಮಗಳ ಒಡೆತನ ಮತ್ತು ಮೇಲ್ವಿಚಾರಣೆಯೂ ಖಾಸಗಿ ವ್ಯಕ್ತಿಗಳಿಗೆ ಸೇರಿರುವುದು. ಹೀಗೆ ಎಲ್ಲ ಆರ್ಥಿಕ ಅಧಿಕಾರವೂ ಖಾಸಗಿ ಬಂಡವಾಳ ಗಾರರ ಕೈಯಲ್ಲಿರುವುದರಿಂದ ಇದನ್ನು ಬಂಡವಾಳ ಪದ್ಧತಿಯೆಂದೂ ಕರೆಯುವರು. ೧೯ನೆಯ ಶತಮಾನದಲ್ಲಿ ಸ್ವತಂತ್ರ ಉದ್ಯಮ ಪದ್ಧತಿ ಬಹಳ ಜನಪ್ರಿಯವಾಗಿತ್ತು. ಆದರೆ ಕಾಲಕ್ರಮದಲ್ಲಿ ಅದರ ನ್ಯೂನತೆಗಳು ಗೋಚರವಾದವು. ವ್ಯಕ್ತಿ ತನ್ನ ಹಿತದಲ್ಲಿ ಅತಿಯಾದ ಆಸಕ್ತಿ ವಹಿಸಿ ಸಮಾಜದ ಹಿತವನ್ನು ಕಡೆಗಣಿಸುವುದು, ಖಾಸಗಿ ಲಾಭಗಳಿಕೆಯನ್ನು ಪ್ರೋತ್ಸಾಹಿಸಿ ಐಶ್ವರ್ಯದ ಅಸಮಾನ ಹಂಚಿಕೆಗೆ ಅವಕಾಶ ಕೊಡುವುದು, ಉದ್ಯಮ ಸ್ವಾತಂತ್ರ್ಯದ ಹೆಸರಿನಲ್ಲಿ ಸರ್ವಸ್ವಾಮ್ಯಗಳಿಗೆ ಅವಕಾಶ ಕೊಡುವುದು, ವ್ಯಾಪಾರದ ಕಾಲಕಾಲಿಕ ಏರುಪೇರುಗಳಿಂದ ಆರ್ಥಿಕ ಜೀವನದ ಸಮಸ್ಥಿತಿಯನ್ನು ಕೆಡಿಸುವುದು, ಸಮಾಜವನ್ನು ಛಿದ್ರಗೊಳಿಸುವ ವರ್ಗ ಕಲಹಕ್ಕೂ ಕಾರ್ಮಿಕರ ಶೋಷಣೆಗೂ ಅವಕಾಶ ಕೊಡುವುದು-ಇವು ಸ್ವತಂತ್ರ ಉದ್ಯಮ ಪದ್ಧತಿಯ ಮುಖ್ಯ ನ್ಯೂನತೆಗಳು. ಈ ನ್ಯೂನತೆಗಳನ್ನು ಹೋಗಲಾಡಿಸಲು ಕೆಲವು ದೇಶಗಳು ಸಮಾಜವಾದ ಪದ್ಧತಿಯನ್ನು ಆಚರಣೆಗೆ ತಂದಿವೆ. ಇದು ಸ್ವತಂತ್ರ ಉದ್ಯಮ ಪದ್ಧತಿಗೆ ವಿರುದ್ಧವಾದುದು. ಇಲ್ಲಿ ವ್ಯಕ್ತಿ ಹಿತಕ್ಕಿಂತಲೂ ಸಮಾಜದ ಹಿತಕ್ಕೇ ಪ್ರಾಧಾನ್ಯ. ಆದುದರಿಂದ ಖಾಸಗಿ ಒಡೆತನಕ್ಕೆ ಪ್ರತಿಯಾಗಿ ಸಾರ್ವಜನಿಕ ಒಡೆತನವಿರುವುದು. ಸಂಪತ್ತಿನ ಉತ್ಪಾದನೆ ಮತ್ತು ಹಂಚಿಕೆ ಇಡೀ ಸಮಾಜವನ್ನು ಪ್ರತಿನಿಧಿಸುವ ಸರ್ಕಾರದ ಹತೋಟಿಯಲ್ಲಿರುವುದು. ಸರ್ಕಾರ ತನ್ನ ಗುರಿಸಾಧನೆಗೆ ಯೋಜಿತ ಕಾರ್ಯಕ್ರಮವನ್ನು ಹಾಕಿಕೊಳ್ಳುವುದು. ಸಮಾಜವಾದ ಪದ್ಧತಿಯಲ್ಲಿ ಸರ್ಕಾರ ಸದಾ ಸಮಾಜದ ಹಿತವನ್ನು ಗಮನದಲ್ಲಿಟ್ಟು ತನ್ನ ಆರ್ಥಿಕ ಕಾರ್ಯಕ್ರಮಗಳನ್ನು ನಿರ್ಧರಿಸುವುದು. ಉತ್ಪನ್ನ ಸಾಧನಗಳನ್ನು ಸಮಾಜಕ್ಕೆ ಅತ್ಯಂತ ಉಪಯುಕ್ತವೆನಿಸುವ ಉದ್ಯಮಗಳಿಗೆ ಒದಗಿಸುವುದು. ಸಂಪತ್ತಿನ ಅಸಮಾನ ಹಂಚಿಕೆಯನ್ನು ಹೋಗಲಾಡಿಸಿ ಸರ್ವರಿಗೂ ಸಮಾನ ನ್ಯಾಯ ಮತ್ತು ಆರ್ಥಿಕ ಸ್ವಾತಂತ್ರ್ಯ ವನ್ನು ದೊರಕಿಸಲು ಪ್ರಯತ್ನಿಸುವುದು. ಆದುದರಿಂದಲೇ ಸಮಾಜವಾದವನ್ನು ಪ್ರಜಾಪ್ರಭುತ್ವದ ಆರ್ಥಿಕ ಪುರಕವೆನ್ನುವರು. ಕಾರ್ಮಿಕ ವರ್ಗಕ್ಕೆ ಗೌರವ ಸ್ಥಾನವನ್ನು ಯೋಗ್ಯ ಪ್ರತಿಫಲವನ್ನು ದೊರಕಿಸಿ ಶೋಷಣೆಯನ್ನು ತಪ್ಪಿಸುವುದು. ಇದರಿಂದ ಪ್ರೋತ್ಸಾಹಿತರಾಗಿ ಕಾರ್ಮಿಕರು ಶ್ರದ್ಧೆಯಿಂದಲೂ ಆಸಕ್ತಿಯಿಂದಲೂ ಕೆಲಸ ಮಾಡಿ ಉತ್ಪಾದನೆಯನ್ನು ಹೆಚ್ಚಿಸುವರು. ಈ ಅಧಿಕ ಉತ್ಪಾನೆಯ ಫಲ ಇಡೀ ಸಮಾಜಕ್ಕೇ ದೊರಕುವುದು. ಆದರೆ ಸಮಾಜದಲ್ಲಿ ಸರ್ಕಾರದ ಹತೋಟಿ ಅತಿಯಾಗಿ ವ್ಯಕ್ತಿ ಸ್ವಾತಂತ್ರ್ಯ ನಾಶವಾಗು ವುದು. ಎಲ್ಲ ಆರ್ಥಿಕ ನಿರ್ಧಾರಗಳನ್ನು ಸರ್ಕಾರವೇ ಕೈಗೊಳ್ಳುವುದರಿಂದ ವೈಯಕ್ತಿಕ ಪ್ರತಿಭೆಗೆ ಅವಕಾಶವಿರುವುದಿಲ್ಲ. ಆದುದರಿಂದ ಸಮಾಜವಾದ ಪದ್ಧತಿಯನ್ನು ದಾಸ್ಯಕ್ಕೆ ಹೆದ್ದಾರಿಯೆಂದು ಕೆಲವರು ಟೀಕಿಸುವರು. ಅಧಿಕಾರಿಗಳ ಪ್ರಾಬಲ್ಯ ಅಧಿಕವಾಗಿ ನೌಕರಶಾಹಿಯ ದುಷ್ಟವೃತ್ತಿಗಳಾದ ಲಂಚಗುಳಿತನ, ಸ್ವಜನ ಪಕ್ಷಪಾತ, ವೈಯಕ್ತಿಕ ನಿರಾಸಕ್ತಿ, ಆಡಳಿತ ವಿಳಂಬ ಮುಂತಾದವು ತಲೆದೋರುವುವು. ಇದರಿಂದ ದಕ್ಷತೆ ಕ್ಷೀಣಿಸಿ ಉತ್ಪಾದನೆ ಕಡಿಮೆಯಾಗುವುದು. ಈ ನಷ್ಟದ ಹೊರೆ ಇಡೀ ಸಮಾಜದ ಮೇಲೆ ಬೀಳುವುದು. ಸ್ವತಂತ್ರ ಉದ್ಯಮ ಮತ್ತು ಸಮಾಜವಾದ ಪದ್ಧತಿಗಳೆರಡರ ಪ್ರಯೋಜನಗಳನ್ನೂ ಸಾಧ್ಯವಾದಮಟ್ಟಿಗೆ ಪಡೆಯಲು ಅನುಸರಿಸುವ ಮಧ್ಯಮಾರ್ಗಕ್ಕೆ ಮಿಶ್ರ ಆರ್ಥಿಕ ಪದ್ಧತಿಯೆಂದು ಹೆಸರು. ಇಲ್ಲಿ ಖಾಸಗಿ ಮತ್ತು ಸಾರ್ವಜನಿಕ ಉದ್ಯಮಗಳೆರಡೂ ಏಕಕಾಲದಲ್ಲಿಯೇ ಕೆಲಸ ಮಾಡುತ್ತಿರುವುವು. ಸಾರ್ವಜನಿಕ ಹಿತರಕ್ಷಣೆಗೆ ಅವಶ್ಯವೆನಿಸುವ ಮತ್ತು ಖಾಸಗಿಯವರಿಂದ ಅಭಿವೃದ್ಧಿಪಡಿಸಲಾಗದ ಉದ್ಯಮಗಳನ್ನು ಸಾರ್ವಜನಿಕವಲಯದಲ್ಲಿಟ್ಟು ಕೊಂಡು ಉಳಿದವರನ್ನು ಖಾಸಗಿ ವಲಯಕ್ಕೆ ಬಿಡಲಾಗುವುದು. ಖಾಸಗಿ ಉದ್ಯಮಗಳ ಮೇಲೆ ಸರ್ಕಾರ ಸಾಮಾನ್ಯ ಹತೋಟಿಯನ್ನು ಮಾತ್ರ ಇಟ್ಟುಕೊಂಡಿರುವುದು. ಇವಕ್ಕೆ ಅವಶ್ಯವೆನಿಸುವ ನೆರವು ಮತ್ತು ಪ್ರೋತ್ಸಾಹವನ್ನು ಸರ್ಕಾರ ನೀಡುವುದು. ಯಾವುದೇ ಖಾಸಗಿ ಉದ್ಯಮವನ್ನಾಗಲೀ ಸಾರ್ವಜನಿಕ ಹಿತದೃಷ್ಟಿಯಿಂದ ರಾಷ್ಟ್ರೀಕರಣ ಮಾಡಿದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು. ಮಿಶ್ರ ಆರ್ಥಿಕ ಪದ್ಧತಿ ಉತ್ತಮವೆನಿಸಿದರೂ ಆಚರಣೆಗೆ ತರುವುದು ಬಹು ಕಷ್ಟ. ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಪರಸ್ಪರ ಸಂಶಯ ಮತ್ತು ಅಹಿತ ಸ್ಪರ್ಧೆಯ ಪ್ರವೃತ್ತಿ ಕಾಣಬರುವುದು. ಆದುದರಿಂದ ಇವು ಉದ್ಯಮಗಳ ದಕ್ಷತೆಗೆ ಗಮನ ಕೊಡುವುದಕ್ಕಿಂತಲೂ ತಮ್ಮ ಕ್ಷೇತ್ರ ವಿಸ್ತರಣೆಯಲ್ಲಿಯೇ ಹೆಚ್ಚು ಆಸಕ್ತಿ ವಹಿಸುವ ಸಂಭವವಿದೆ. ವ್ಯಕ್ತಿಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ನಿಯಮಗಳನ್ನು ಸಂಪುರ್ಣವಾಗಿ ಪ್ರತಿಪಾದಿ ಸುವ ಆರ್ಥಿಕ ಪದ್ಧತಿಯೇ ಸಹಕಾರಿ ಪದ್ಧತಿ. ಸ್ಪರ್ಧೆಯ ದುಷ್ಪರಿಣಾಮಗಳಿಗೂ ಕೇಂದ್ರೀಕೃತ ಸರ್ಕಾರಿ ಆಡಳಿತದ ದಬ್ಬಾಳಿಕೆಗೂ ಅವಕಾಶ ಕೊಡದೆ, ಜನಸಾಮಾನ್ಯರೂ ಸಮಾನ ಹಕ್ಕು ಬಾಧ್ಯತೆಗಳ ಆಧಾರದ ಮೇಲೆ ಸ್ವಪ್ರಯತ್ನದಿಂದಲೇ ತಮ್ಮ ಭೌತಿಕ ಹಾಗೂ ನೈತಿಕ ಜೀವನದ ವಿಕಾಸವನ್ನು ಸಾಧಿಸಲು ಸಹಕಾರ ಸರ್ವಶ್ರೇಷ್ಠಮಾರ್ಗವೆಂದು ನಂಬಲಾಗಿದೆ. ಸ್ವಸಹಾಯ ಮತ್ತು ಪರಸ್ಪರ ಸಹಾಯ, ಸ್ವಯಮಾಡಳಿತ, ಮಿತವ್ಯಯ, ಪ್ರಾಮಾಣಿಕತೆ ಮುಂತಾದ ಉನ್ನತ ಧ್ಯೇಯಗಳನ್ನು ಸಹಕಾರ ಪ್ರತಿಪಾದಿಸುವುದು. ಸಹಕಾರ ಜನಪ್ರಿಯ ಚಳುವಳಿಯಾಗಿದ್ದರೆ ಮಾತ್ರ ಪ್ರಯೋಜನ. ಸರ್ಕಾರದ ಮಾರ್ಗದರ್ಶನವಿದ್ದರೂ ಹತೋಟಿಯಿರಬಾರದು. ಸಹಕಾರದ ಯಶಸ್ಸಿಗೆ ವಿದ್ಯಾಪ್ರಗತಿ ಅತ್ಯಾವಶ್ಯಕ. ಸಹಕಾರ ಪದ್ಧತಿಯನ್ನು ನಾನಾ ಕ್ಷೇತ್ರಗಳಲ್ಲಿ ಆಚರಣೆಗೆ ತರಲಾಗಿದೆ. ಪದಾರ್ಥಗಳ ಮಾರಾಟ, ಲೇವಾದೇವಿ ಮುಂತಾದ ಕ್ಷೇತ್ರಗಳಲ್ಲಿ ಇದು ವಿಶೇಷ ಪ್ರಗತಿಯನ್ನು ಸಾಧಿಸಿದ್ದರೂ ಉತ್ಪಾದನಾ ಕ್ಷೇತ್ರದಲ್ಲಿ ಅದರಲ್ಲಿಯೂ ಅಧಿಕ ಬಂಡವಾಳ ಹೂಡಬೇಕಾದ ಆಧುನಿಕ ಕೈಗಾರಿಕಾ ಕ್ಷೇತ್ರದಲ್ಲಿ ಇದರ ಪ್ರಗತಿ ತೃಪ್ತಿಕರವಾಗಿಲ್ಲ. ಆದರೆ ರೈತರ ಹಿತಸಾಧನೆಗೆ ಸಹಕಾರ ಅತ್ಯುತ್ತಮ ಮಾರ್ಗವೆಂದು ಹೇಳಲಾಗಿದೆ.