ಖರ್ಚು ಆದಷ್ಟು ಕಡಿಮೆಯಾಗಿ, ಕೆಲಸ ಸಮರ್ಪಕವಾಗಿ ನಡೆದು, ಲಾಭ ಹೆಚ್ಚುವಂತೆ ಮಾಡುವ ಕೆಲಸದ ಜಾಣ್ಮೆ (ಎಕನಾಮಿಕ್ ಎಫಿಷಿಯೆನ್ಸಿ). ಹೂಡುವ ಉದ್ಯಮ ಸರಿಯಾದ ಸನ್ನಿವೇಶದಲ್ಲಿರಬೇಕು. ಜನವಸತಿ, ವಾಹನ ಸೌಕರ್ಯ, ವಸತಿ ಸೌಕರ್ಯ ಬಡಾವಣೆಗೆ ಅವಕಾಶ-ಇವೆಲ್ಲ ಇರುವ ಕಡೆ ಉದ್ಯಮ ಚೆನ್ನಾಗಿ ನಡೆಯುತ್ತದೆ. ಅನಂತರ ಕೆಲಸಗಾರರ ಆಯ್ಕೆ ಮತ್ತು ಕೆಲಸದ ಮೇಲ್ವಿಚಾರಣೆ ಚೆನ್ನಾಗಿರಬೇಕು. ಕೆಲಸದ ಅಳತೆ ಇಟ್ಟುಕೊಡುವ ಕೂಲಿಗಿಂತ ಬರುವ ಆದಾಯ ಕುಟುಂಬ ಹೆಚ್ಚಿರುವಂತೆ ನೋಡಿಕೊಳ್ಳ ಬೇಕು. ಉದ್ದೇಶಿತ ಸಿದ್ಧವಸ್ತುಗಳ ಯೋಗ್ಯತೆ ನಿಖರವಾಗಿದ್ದು ಅವುಗಳ ಮಾರಾಟದ ಹಂಚಿಕೆಗೆ ಸರಿಯಾದ ವ್ಯವಸ್ಥೆ ಇರಬೇಕು. ಇಲ್ಲದಿದ್ದಲ್ಲಿ ನಷ್ಟವಾಗುವ ಸಂಭವ ಹೆಚ್ಚುತ್ತದೆ. ಉದ್ದೇಶಿತ ವಸ್ತುಗಳ ಜೊತೆ ಉಪವಸ್ತುಗಳು ಸಿಗುವಂತಿದ್ದಲ್ಲಿ ಅವನ್ನೂ ಬಳಸಿ ಲಾಭ ತೆಗೆಯಬೇಕು. ಆಡಳಿತದ ಖರ್ಚು ಲಾಭದ ಪ್ರಮಾಣಕ್ಕೆ ತಕ್ಕಂತಿರಬೇಕು. ಸದಾ ಪೈಪೋಟಿ ಇರುತ್ತದಾದ ಕಾರಣ ತಯಾರಾಗುವ ವಸ್ತುವಿನ ಗುಣ, ಯೋಗ್ಯತೆಗಳನ್ನು ಸಂಶೋಧನೆಗಳಿಂದ ಉತ್ತಮಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು. ಒಳ್ಳೆಯ ಪದಾರ್ಥವನ್ನು ಸುಲಭ ಖರ್ಚಿನಲ್ಲಿ ತಯಾರಿಸಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಹುಬೇಗ ಮಾರಾಟ ಮಾಡುವುದೇ ಎಲ್ಲ ಆರ್ಥಿಕ ಉದ್ಯಮಗಳ ಮುಖ್ಯಧ್ಯೇಯ.

ಇದಕ್ಕೆ ಬೇಕಾದ ಪ್ರಚಾರ, ಹಂಚಿಕೆ ವ್ಯವಸ್ಥೆ ಸರಿಯಾಗಿರಬೇಕಾದುದು ಅಗತ್ಯ. ಈ ಮಾತು ಖಾಸಗಿ ಉದ್ಯಮಗಳಿಗಿಂತ ಸರ್ಕಾರಿ ಉದ್ಯಮಗಳಿಗೆ ಹೆಚ್ಚು ಅನ್ವಯಿಸುತ್ತದೆ. ರಾಷ್ಟ್ರೀಕರಣಗೊಂಡಿರುವ ಅನೇಕ ಉದ್ಯಮಗಳಲ್ಲಿ ಆರ್ಥಿಕ ದಕ್ಷತೆ ಕಂಡುಬರುತ್ತಿಲ್ಲ. ಅದಕ್ಕೆ ಕಾರಣಗಳು ಅನೇಕ. ಮೊದಲನೆಯದು ಆಡಳಿತ ವ್ಯವಸ್ಥೆ ಸರಿಯಿಲ್ಲದಿರುವುದು. ಎರಡನೆಯದಾಗಿ ಬಂದ ಲಾಭ ಸೋರಿಹೋಗುತ್ತಿರುವುದು, ಮೂರನೆಯದಾಗಿ ಪ್ರಚಾರ, ಹಂಚಿಕೆಗಳು ಸಮರ್ಪಕವಾಗಿಲ್ಲದಿರುವುದು.