ಆರ್ಥಿಕ ಅಂತಾರಾಷ್ಟ್ರೀಯತೆ

ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಂತೆ ಆರ್ಥಿಕ ಕ್ಷೇತ್ರದಲ್ಲೂ ಅಂತಾರಾಷ್ಟ್ರೀಯವಾಗಿ ಸೌಹಾರ್ದಯುತ ವ್ಯವಹಾರಗಳಿರಬೇಕೆಂಬ ಭಾವನೆ. ಎಕನಾಮಿಕ್ ಇಂಟರ್ನ್ಯಾಷನಲಿಸಂ ಅಂದರೆ ಸರಕು ಸೇವೆಗಳ ವ್ಯಾಪಾರ, ಬಂಡವಾಳ ಹಾಗೂ ಶ್ರಮ ಇಂಥ ಉತ್ಪಾದನಾಂಗಗಳ ಚಲನೆ ಇತ್ಯಾದಿ ಆರ್ಥಿಕ ವ್ಯವಹಾರಗಳೆಲ್ಲವೂ ಎಲ್ಲ ಜನಾಂಗಗಳ ಅನ್ಯೋನ್ಯ ಹಿತದೃಷ್ಟಿಯಿಂದ ನಡೆಯುವಂತೆ ನೋಡಿಕೊಳ್ಳಲು ಕೆಲವು ಪ್ರಧಾನ ರೀತಿನೀತಿಗಳನ್ನು ರೂಪಿಸುವುದೇ ಇದರ ಉದ್ದೇಶ. ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳಿಗೆ ವಿಶೇಷವಾದ ಕೆಲವು ಕಟ್ಟುನಿಟ್ಟುಗಳಿರುವುದು ಗಮನಿಸಬೇಕಾದ ವಿಷಯ. ಇವುಗಳಲ್ಲಿ ಕೆಲವು ರಾಜಕೀಯ ಪ್ರತ್ಯೇಕತೆಯಿಂದ ಉದ್ಭವಿಸಿವೆ. ಪ್ರಜೆಗಳಿಗೆ ತಮ್ಮ ತಮ್ಮ ದೇಶದಲ್ಲಿರುವ ಆರ್ಥಿಕ ಹಕ್ಕುಗಳು ವಿದೇಶಗಳಲ್ಲಿರಲು ಸಾಧ್ಯವಿಲ್ಲ. ಅಲ್ಲದೆ ಮತ, ಭಾಷೆ, ಸಮಾಜ ಪದ್ಧತಿ, ರಾಜಕೀಯ ಅಭಿಪ್ರಾಯ-ಇತ್ಯಾದಿ ಅಂಶಗಳಲ್ಲಿ ದೇಶ ದೇಶಗಳಿಗೆ ಇರುವ ವ್ಯತ್ಯಾಸಗಳೂ ಆರ್ಥಿಕ ಸಂಬಂಧಗಳಿಗೆ ಸ್ವಲ್ಪ ಮಟ್ಟಿಗೆ ಅಡಚಣೆಯಾಗಬಹುದು. ಹೀಗೆ ಇರತಕ್ಕ ರಾಜಕೀಯ, ಸಾಮಾಜಿಕ, ಭೌಗೋಳಿಕ ಹಾಗೂ ಇತರ ಆವಶ್ಯಕ ವ್ಯತ್ಯಾಸಗಳಿಂದುಂಟಾಗಬಹುದಾದ ಮಿತಿಗಳಿಗೊಳಪಟ್ಟು ಪ್ರತಿಯೊಂದು ರಾಷ್ಟ್ರವೂ ಸ್ವರಾಷ್ಟ್ರ ಹಿತವನ್ನು ಇತರ ಎಲ್ಲ ರಾಷ್ಟ್ರಗಳ ಹಿತಗಳೊಡನೆ ಸಮ್ಮಿಳನಗೊಳಿಸಿ ಪರಸ್ಪರ ಕ್ಷೇಮಾಭ್ಯುದಯವಾಗುವಂತೆ ಆರ್ಥಿಕ ಸಂಬಂಧಗಳನ್ನು ಪೋಷಿಸಬೇಕೆಂಬ ಉದಾತ್ತ ಭಾವನೆಯೇ ಸಹಜವಾದ ಆರ್ಥಿಕ ಅಂತಾರಾಷ್ಟ್ರೀಯತೆ ಎನ್ನಿಸುವುದು.

ಆರ್ಥಿಕ ಅಂತಾರಾಷ್ಟ್ರೀಯತೆ, ಆಧುನಿಕ ಯುಗದ ಮುಖ್ಯ ಲಕ್ಷಣ. ಪ್ರತಿ ರಾಷ್ಟ್ರವೂ ತನ್ನ ಆವಶ್ಯಕತೆಗಳಿಗನುಸಾರವಾಗಿ ಪ್ರಕೃತಿದತ್ತ ಸಂಪತ್ತು ಮತ್ತು ಇತರ ಉತ್ಪನ್ನ ಸಾಧನಗಳನ್ನು ಹೊಂದಿರುವುದಿಲ್ಲ. ಆಹಾರ, ಬಟ್ಟೆ, ವಸತಿ, ಭೋಗ ಇವುಗಳಿಗೆ ಬೇಕಾಗುವ ಅನೇಕ ಸರಕುಗಳು ಪ್ರಪಂಚದ ಎಲ್ಲ ಭಾಗದ ಜನರಿಗೂ ಬೇಕಾಗಿದ್ದರೂ, ಇವುಗಳೆಲ್ಲವನ್ನೂ ಆಯಾ ದೇಶದಲ್ಲಿಯೇ ತಯಾರಿಸಿ ಬೇಡಿಕೆಯನ್ನು ಪುರೈಸಲು ಅನುಗುಣವಾದ ಪ್ರಕೃತಿದತ್ತ ಸೌಕರ್ಯಗಳು ಇರುವುದಿಲ್ಲ. ಆದ್ದರಿಂದ ಅಂತಾರಾಷ್ಟ್ರೀಯ ಶ್ರಮವಿಭಜನೆ ಹಾಗೂ ಪರಸ್ಪರ ಅವಲಂಬನೆ ಸ್ವಾಭಾವಿಕವಾಗಿಯೇ ಬೆಳೆದು ಬಂದಿವೆ. ಅಲ್ಲದೆ ಇವು ಆಧುನಿಕ ಆರ್ಥಿಕ ಜೀವನದ ಮುಖ್ಯ ಲಕ್ಷಣಗಳಾಗಿವೆ. ನಾವು ದಿನನಿತ್ಯ ಉಪಯೋಗಿಸುವ ಅನೇಕ ವಿದೇಶಿ ವಸ್ತುಗಳನ್ನೂ ಮತ್ತು ವಿದೇಶೀಯರಿಗಾಗಿ ನಾವು ತಯಾರಿಸುವ ವಸ್ತುಗಳನ್ನೂ ಎಣಿಸಿದರೆ ಎಷ್ಟರ ಮಟ್ಟಿಗೆ ನಮ್ಮ ನಾಗರಿಕ ಜೀವನ ಅಂತಾರಾಷ್ಟ್ರೀಯ ಸಂಬಂಧದ ಮೇಲೆ ನಿಂತಿದೆ ಎಂಬುದು ವ್ಯಕ್ತವಾಗುವುದು. ಇಂಥ ಸಂಬಂಧಗಳನ್ನು ಸ್ಪಷ್ಟ ಮಾರ್ಗಗಳಲ್ಲಿ ರೂಪಿಸಬೇಕಾದರೆ ಎಲ್ಲ ರಾಷ್ಟ್ರಗಳಲ್ಲೂ ಉದಾತ್ತವಾಗಿ ಅಂತಾರಾಷ್ಟ್ರೀಯತೆಯ ಭಾವನೆ ನೆಲೆಸಬೇಕು, ಹಾಗೂ ಈ ಭಾವನೆಗನುಸಾರವಾದ ರೀತಿ ನೀತಿಗಳು ಆಚರಣೆಗೆ ಬರಬೇಕು. ಆಧುನಿಕ ಪ್ರಪಂಚದ ಆರ್ಥಿಕ ಚರಿತ್ರೆಯನ್ನು ವೀಕ್ಷಿಸಿದರೆ ಆರ್ಥಿಕ ಅಂತಾರಾಷ್ಟ್ರೀಯತೆ ಹಾಗೂ ಅದರ ವಿರುದ್ಧ ಶಕ್ತಿಗಳು ಹೇಗೆ ಅತ್ತ ಇತ್ತ ಹೊಯ್ದಾಡಿವೆ ಎಂಬುದು ಗೋಚರವಾಗುವುದು. ಮಧ್ಯಯುಗದಲ್ಲಿ ಕೊಲಂಬಸ್, ವಾಸ್ಕೋಡಗಾಮ, ಮೆಗಲನ್ ಇತ್ಯಾದಿ ಸಾಹಸಿಗಳ ಶ್ರಮದಿಂದ ಫಲಿಸಿದ ಹೊಸ ಅಂತಾರಾಷ್ಟ್ರೀಯ, ಸಂಪರ್ಕಗಳ ಬೆಳೆವಣಿಗೆ ಹಾಗೂ ಪ್ರಪಂಚದ ಐಕ್ಯದ ಅರಿವು-ಇವು ಆಧುನಿಕ ಅಂತಾರಾಷ್ಟ್ರೀಯತೆಯ ಮುಖ್ಯ ಹಿನ್ನಲೆಯಾದವು. ಆದರೆ ಅನೇಕ ಐರೋಪ್ಯ ರಾಷ್ಟ್ರಗಳು ಅಂದಿನ ಕಾಲದಲ್ಲಿ ಅನುಸರಿಸುತ್ತಿದ್ದ ಮರ್ಕೆಂಟೈಲಿಸಮ್ ಎಂಬ ರಾಷ್ಟ್ರೀಯ ಧೋರಣೆಯ ಆರ್ಥಿಕ ಅಂತಾರಾಷ್ಟ್ರೀಯತೆಯ ಬೆಳವಣಿಗೆಗೆ ವಾತಾವರಣ ಅನುಕೂಲವಾಗಿರಲಿಲ್ಲ.

೧೮ನೆಯ ಶತಮಾನದ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ ಮತ್ತು ಆ್ಯಡಮ್ ಸ್ಮಿತ್ ಆ್ಯಡಮ್ಸ್ಮಿತ್ಎಂಬ ಪ್ರಥಮ ಅರ್ಥಶಾಸ್ತ್ರಜ್ಞ ಉಪದೇಶಿಸಿದ ವೈಯಕ್ತಿಕ ಸ್ವಾತಂತ್ರ್ಯ ತತ್ತ್ವ (ಲೇಸಿಫೇರ್ ಡಾಕ್ಟ್ರಿನ್) ಇವು ಹೊಸ ಅಂತಾರಾಷ್ಟ್ರೀಯ ಆರ್ಥಿಕ ಪದ್ಧತಿಯ ಬೆಳವಣಿಗೆಗೆ ತಳಹದಿಯಾದವು. ಮರ್ಕೆಂಟೈಲಿಸಮ್ ಕಾಲದಲ್ಲಿ ಸರ್ಕಾರ ವಿಧಿಸಿದ್ದ ಅನೇಕ ಆರ್ಥಿಕ ನಿರ್ಬಂಧಗಳು ಸಡಿಲವಾದುದರಿಂದ ಆರ್ಥಿಕ ಶಕ್ತಿಗಳು ಸ್ವಂತಸ್ಥಾನವನ್ನು ಪಡೆದವು. ಪ್ರಪಂಚದಲ್ಲಿ ವಿವಿಧ ಭಾಗಗಳೂ ಬೇಡಿಕೆ-ನೀಡಿಕೆಗಳ ಪರಸ್ಪರ ತಾಕಲಾಟದಿಂದ ಹೊಂದಿಕೆಗೊಂಡು ಒಂದೇ ವಿಸ್ತಾರವಾದ ಆರ್ಥಿಕ ಕ್ಷೇತ್ರವಾಯಿತು. ಅಂತಾರಾಷ್ಟ್ರೀಯ ಬಂಡವಾಳ ಚಲನೆ, ಜನರು ವಿದೇಶಗಳಲ್ಲಿ ನೆಲೆಸುವುದು, ಸರಕುಗಳ ವ್ಯಾಪಾರ-ಇವು ಹಿಂದೆ ಎಂದೂ ಇಲ್ಲದ ಪ್ರಮಾಣದಲ್ಲಿ ಬೆಳೆದವು. ವಿವಿಧ ರಾಷ್ಟ್ರಗಳ ಆರ್ಥಿಕ ಸ್ಥಿತಿಗತಿಗಳು ಸ್ವರ್ಣಮಾನ ಮುಖಾಂತರ ಸಂಬಂಧ ಹೊಂದಿದ್ದವು. ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಉತ್ಪಾದನಾಂಗಗಳ ಚಲನವಲನ ಮತ್ತು ಚಿನ್ನದ ಆಮದು ರಫ್ತು ಇವುಗಳ ಮೇಲೆ ಹೆಚ್ಚು ಪ್ರತಿಬಂಧಕಗಳಿಲ್ಲದ್ದುದರಿಂದ ಬೆಲೆಗಳ ತಾರತಮ್ಯಕ್ಕನುಸಾರವಾಗಿ ಸರಕುಗಳ ಹಾಗೂ ಚಿನ್ನದ ರಫ್ತು ಆಮದು ವ್ಯಾಪಾರ ವ್ಯವಹಾರಗಳೂ ನಡೆದು ವಿವಿಧರಾಷ್ಟ್ರಗಳ ಬೆಲೆಮಟ್ಟಗಳು ಸಂಘಟಿತವಾದವು. ಹೀಗೆ ೧೯೧೪ಕ್ಕೆ ಹಿಂದಿನ ಶತಮಾನದಲ್ಲಿ ಆರ್ಥಿಕ ಅಂತಾರಾಷ್ಟ್ರೀಯತೆ ಚೆನ್ನಾಗಿ ಪ್ರಕಾಶಗೊಂಡು ಅದು ಆರ್ಥಿಕ ಅಂತಾರಾಷ್ಟ್ರೀಯತೆಯ ಸ್ವರ್ಣಯುಗವೆನಿಸಿಕೊಂಡಿತ್ತು. ೧೯ನೆಯ ಶತಮಾನದ ಉದಾತ್ತ ಆರ್ಥಿಕ ಅಂತಾರಾಷ್ಟ್ರೀಯ ಸಾಮ್ರಾಜ್ಯ ಶಾಹಿ ರಾಜಕೀಯ ಪರಿಸ್ಥಿತಿಯೊಡನೆ ಸೇರಿಕೊಂಡಿದ್ದುದು ಗಮನಿಸಬೇಕಾದ ಅಂಶ. ಬ್ರಿಟನ್, ಫ್ರಾನ್ಸ್, ಜರ್ಮನಿ, ಪೋರ್ಚುಗಲ್, ಇಟಲಿ ಇತ್ಯಾದಿ ರಾಷ್ಟ್ರಗಳು ವಸಾಹತುಗಳನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತಲೇ ಇದ್ದವು. ಅಲ್ಲದೆ ಆಯಾ ಸಾಮ್ರಾಜ್ಯ ರಾಷ್ಟ್ರಗಳೊಳಗೆ ಹೆಚ್ಚು ನಿಕಟವಾದ ಆರ್ಥಿಕ ಸಂಬಂಧಗಳು ಬೆಳೆದುಬಂದವು. ಶ್ರಮ ವಿಭಜನೆ ತತ್ತ್ವ, ಈ ಆಯಕಟ್ಟಿನೊಳಗೆ ವಿಸ್ತೃತಗೊಂಡು ಅಂದಿನ ಪ್ರಪಂಚದ ಆರ್ಥಿಕತೆಯಲ್ಲಿ ಸಮನ್ವಯ ಹಾಗೂ ಸ್ತಿಮಿತತೆಯನ್ನು ಉಂಟುಮಾಡಿತು. ಅಧೀನ ಜನಾಂಗದವರ ಆರ್ಥಿಕ ಏಳಿಗೆಯ ದೃಷ್ಟಿಯಿಂದ ಈ ವಿಧದ ಸ್ಥಿಮಿತತೆ ಎಷ್ಟರಮಟ್ಟಿಗೆ ಅಪೇಕ್ಷಣೀಯವಾಗಿತ್ತೆಂಬುದರ ಚರ್ಚೆ ಇಲ್ಲಿ ಅಪ್ರಕೃತ. ೧೯೧೪-೧೮ರ ಒಂದನೆಯ ಮಹಾಯುದ್ಧ, ೧೯೨೦-೩೨ರಲ್ಲಿ ಉಂಟಾದ ಘೋರ ಆರ್ಥಿಕ ಮುಗ್ಗಟ್ಟು, ಹಾಗೂ ಕಾಲಕ್ರಮೇಣ ಉಂಟಾದ ಆರ್ಥಿಕ ರಚನೆಯ ಬದಲಾವಣೆಗಳು ಇತ್ಯಾದಿ ಕಾರಣಗಳಿಂದ ಅಂತಾರಾಷ್ಟ್ರೀಯ ಆರ್ಥಿಕ ಐಕ್ಯಕ್ಕೆ ಭಂಗವುಂಟಾಯಿತು. ಎರಡು ಮಹಾಯುದ್ಧಗಳ ಅಂತರದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ-ವ್ಯವಹಾರಗಳು ಹಿಂದಿನಂತೆ ನಿರಾತಂಕವಾಗಿ ನಡೆಯಲಿಲ್ಲ. ಆರ್ಥಿಕ ರಾಷ್ಟ್ರೀಯತೆಯ ಪ್ರಭಾವ ಹೆಚ್ಚಾಯಿತು. ಅನೇಕ ರಾಷ್ಟ್ರಗಳು ರಕ್ಷಣಾ ಸುಂಕ, ವಿನಿಮಯ ಹತೋಟಿ, ದ್ವಿರಾಷ್ಟ್ರೀಯ ವ್ಯಾಪಾರ (ಬೈಲಾಟರಲ್ ಟ್ರೇಡ್) ಹಾಗೂ ವಿನಿಮಯದ ಒಪ್ಪಂದ-ಇಂಥ ಕ್ರಮಗಳನ್ನು ಅನುಸರಿಸಿದವು. ಇವುಗಳ ಪರಿಣಾಮವಾಗಿ ವಿಶ್ವ ಆರ್ಥಿಕತೆಯ ಸಂಘಟನೆ ಸಡಿಲಿಸಿತು.

ಎಡರನೆಯ ಮಹಾಯುದ್ಧ ಕಾಲದಿಂದ ಆರ್ಥಿಕ ಅಂತಾರಾಷ್ಟ್ರೀಯತೆ ಆಶಾಜನಕ ರೀತಿಯಲ್ಲಿ ಬೆಳೆಯುತ್ತಿದೆ. ಇನ್ನೊಂದು ಮಹಾಯುದ್ಧ ಸಂಭವಿಸದಂತೆ ನೋಡಿಕೊಳ್ಳ ಬೇಕೆಂಬ ಸಾರ್ವತ್ರಿಕ ಆಕಾಂಕ್ಷೆ, ಎರಡು ಯುದ್ಧಗಳ ನಡುವಣ ಕಾಲದ ಸಂಕುಚಿತರಾಷ್ಟ್ರೀಯ ಆರ್ಥಿಕನೀತಿಗಳ ದುಷ್ಪರಿಣಾಮಗಳ ಅರಿವು- ಇವುಗಳ ಆಧಾರದ ಮೇಲೆ ಯುದ್ಧೋತ್ತರ ವಿಶ್ವ ಆರ್ಥಿಕ ಪದ್ಧತಿ ರೂಪುಗೊಳ್ಳುತ್ತಿದೆ. ಇಂದಿನ ಆರ್ಥಿಕ ಅಂತಾರಾಷ್ಟೀಯತೆ ಕೆಲವು ಅಂಶಗಳಲ್ಲಿ ಮುಖ್ಯವಾದುದಾಗಿದೆ. ಮೊದಲನೆಯದಾಗಿ, ಅಧೀನ ಹಾಗೂ ವಸಾಹತು ಭಾಗಗಳಾಗಿದ್ದ ಅನೇಕ ರಾಷ್ಟ್ರಗಳು ರಾಜಕೀಯ ಸ್ವಾತಂತ್ರ್ಯ ಪಡೆದು ತಮ್ಮ ತಮ್ಮ ರಾಷ್ಟ್ರೀಯ ಹಿತಕ್ಕನುಸಾರವಾಗಿ ಆರ್ಥಿಕಾಭಿವೃದ್ಧಿ ಸಾಧಿಸಲು ಹವಣಿಸುತ್ತಿರುವುದು ಇಂದಿನ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳಿಗೆ ವಿಶೇಷ ಲಕ್ಷಣವನ್ನು ಕೊಟ್ಟಿದೆ. ಎರಡನೆಯದಾಗಿ, ಹೀಗೆ ಆರ್ಥಿಕೋನ್ನತಿ ಸಾಧಿಸಬೇಕೆಂಬ ದೃಢಸಂಕಲ್ಪ ಮಾಡಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಹಿಂದುಳಿದಿರುವ ರಾಷ್ಟ್ರಗಳಿಗೆ ಬೆಂಬಲ ಕೊಟ್ಟು ಬಂಡವಾಳ, ಯಾಂತ್ರಿಕ ಸಹಾಯ ಇವುಗಳನ್ನು ಒದಗಿಸುವುದು ತಮ್ಮ ಮುಖ್ಯ ಹೊಣೆ ಎಂದು ಮುಂದುವರಿದಿರುವ ರಾಷ್ಟ್ರಗಳು ಒಪ್ಪಿರುವ ಸದ್ಭಾವನೆ ಅಂತಾರಾಷ್ಟ್ರೀಯ ಆರ್ಥಿಕಸಂಬಂಧಗಳಿಗೆ ಹೊಸ ಸ್ವರೂಪ ಕೊಟ್ಟಿದೆ. ಮೂರನೆಯದಾಗಿ, ಇಂದಿನ ಅಂತಾರಾಷ್ಟ್ರೀಯ ಸಹಕಾರ ಅನೇಕ ಶತಮಾನಗಳ ಅನುಭವ ಆಲೋಚನೆಗಳ ಫಲ. ಹಿಂದೆ ೧೯ನೆಯ ಶತಮಾನದಲ್ಲಿ ನಿರಾತಂಕವಾಗಿ ಚಲಿಸುತ್ತಿದ್ದ ಆರ್ಥಿಕ ಶಕ್ತಿಗಳ ಮೂಲಕ ವಿವಿಧ ರಾಷ್ಟ್ರಗಳ ಆರ್ಥಿಕತೆಗಳಲ್ಲಿ ಪರಸ್ಪರವಾಗಿ ಹೊಂದಾಣಿಕೆಯಾಗುತ್ತಿತ್ತು. ಆಗ ಸ್ವರ್ಣಮಾನ ಮುಖ್ಯ ಪಾತ್ರ ವಹಿಸಿತ್ತು. ಬದಲಿಸಿರುವ ಈ ಶತಮಾನದ ವಾತಾವರಣದಲ್ಲಿ ಆರ್ಥಿಕ ಶಕ್ತಿಗಳ ಸ್ವಾಭಾವಿಕ ಕ್ರಿಯೆ, ಪ್ರತಿಕ್ರಿಯೆಗಳು ಅನೇಕ ಕಟ್ಟುಗಳಿಗೆ ಒಳಗಾಗಿವೆ. ದೇಶ ವಿದೇಶಗಳ ವ್ಯಾಪಾರ, ವಿನಿಮಯ, ಬಂಡವಾಳ, ಸಂಚಾರ ಇತ್ಯಾದಿ ಅನೇಕ ಆರ್ಥಿಕವಿಷಯಗಳಲ್ಲಿ ಸರ್ಕಾರಗಳ ಕೈವಾಡ ಹಾಗೂ ಪ್ರಭಾವ ಹೆಚ್ಚಾಗಿವೆ. ಇದರಿಂದ ಅಂತಾರಾಷ್ಟ್ರೀಯ ಆರ್ಥಿಕ ಚಟುವಟಿಕೆಗಳು ವಿವಿಧ ರಾಷ್ಟ್ರ ಸರ್ಕಾರಗಳು ಕಲೆತು ಗೊತ್ತು ಮಾಡುವ ಮಾರ್ಗಗಳಲ್ಲಿ ನಡೆಯಬೇಕಾಗಿವೆ. ಇದಕ್ಕಾಗಿ ಅನೇಕ ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಎರಡನೇ ಮಹಾ ಯುದ್ಧೋತ್ತರ ಕಾಲದಲ್ಲಿ ಸ್ಥಾಪನೆಯಾಗಿವೆ. ವಿಶ್ವಸಂಸ್ಥೆಯ ಆರ್ಥಿಕ ಧ್ಯೇಯಗಳನ್ನು ನೋಡಿದರೆ ಇಂದಿನ ಅಂತಾರಾಷ್ಟ್ರೀಯ ಆರ್ಥಿಕತೆಯ ವೈಶಿಷ್ಟ್ಯ ವ್ಯಕ್ತವಾಗುವುದು: ಉನ್ನತ ಜೀವನ ಮಟ್ಟವನ್ನು ಹೊಂದುವಂತೆ ಪ್ರಪಂಚದ ಸಾಧನಗಳನ್ನೂ ಜ್ಞಾನವನ್ನೂ ಅತ್ಯುತ್ತಮ ರೀತಿಯಲ್ಲಿ ಉಪಯೋಗಿಸುವುದು. ಕೆಲಸ ಮಾಡಬಲ್ಲ ಹಾಗೂ ಮಾಡಬಯಸುವ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ದೊರಕಿಸುವುದು. ಎಲ್ಲ ವರ್ಗದ ಜನತೆಗೂ ಒಂದು ಕನಿಷ್ಠ ಸಾಮಾಜಿಕ ರಕ್ಷಣಾನುಕೂಲಗಳನ್ನು ಕಲ್ಪಿಸುವುದು, ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಮುಖ್ಯವಾಗಿ ಹಿಂದುಳಿದಿರುವ ರಾಷ್ಟ್ರಗಳಲ್ಲಿ ದೊಡ್ಡ ಯೋಜನೆಗಳನ್ನು ಹಾಕಿ ಕೊಡುವುದು ಇಂಥ ಉದಾತ್ತ ಧ್ಯೇಯಗಳ ಸಾಧನೆಗಾಗಿ ಈ ಸಂಸ್ಥೆಯ ಅಂಗವಾಗಿಯೂ ಆಶ್ರಯದಲ್ಲೂ ಅನೇಕ ಉಪ ಸಂಸ್ಥೆಗಳು ಏರ್ಪಟ್ಟಿವೆ. ಇವೆಲ್ಲವೂ ಸೇರಿ ಇಂದಿನ ಅಂತಾರಾಷ್ಟ್ರೀಯ ಆರ್ಥಿಕ ರಚನೆಯನ್ನು ಪರಿಪುರ್ಣಗೊಳಿಸಿವೆ ಎನ್ನಬಹುದು.

ಅಂತಾರಾಷ್ಟ್ರೀಯ ಆರ್ಥಿಕತೆ ಹೊಸ ಸ್ವರೂಪವನ್ನು ತಳೆದು ಬೆಳೆಯುತ್ತಿರುವ ಸಂದರ್ಭದಲ್ಲಿಯೇ ರಾಷ್ಟ್ರೀಯ ಆರ್ಥಿಕ ಯೋಜನೆಯ ಅನುಸರಣೆಯೂ ಪ್ರಪಂಚದಲ್ಲಿ ಹಬ್ಬುತ್ತ ಇದೆ. ರಷ್ಯ, ಬಲ್ಗೇರಿಯ, ಯೂಗೋಸ್ಲಾವಿಯ, ಪೋಲೆಂಡ್, ರೊಮೇನಿಯ, ಚೆಕೊಸ್ಲೊವೇಕಿಯ ಪೂರ್ವ ಜರ್ಮನಿ, ಹಂಗರಿ, ಚೀನ ಈ ರಾಷ್ಟ್ರಗಳು ಕೇಂದ್ರಾಡಳಿತ ಯೋಜನೆಯ ಆರ್ಥಿಕ ವ್ಯವಸ್ಥೆಯುಳ್ಳ ರಾಷ್ಟ್ರಗಳಾಗಿವೆ. ಖಾಸಗಿ ಉದ್ಯಮಕ್ಕೆ ಹೆಚ್ಚು ಸ್ವಾತಂತ್ರ್ಯವಿರುವ ಇತರ ರಾಷ್ಟ್ರಗಳೂ ಆರ್ಥಿಕ ಯೋಜನಾಕ್ರಮವನ್ನು ಕೈಗೊಂಡಿವೆ. ಹಿಂದುಳಿದಿರುವ ರಾಷ್ಟ್ರಗಳು ಶೀಘ್ರ ಆರ್ಥಿಕ ಅಭಿವೃದ್ಧಿಗೂ ಮುಂದುವರಿದಿರುವ ರಾಷ್ಟ್ರಗಳು ಆರ್ಥಿಕಸ್ಥಿಮಿತತೆ ಹಾಗೂ ಪುರ್ಣೋದ್ಯೋಗ ಉದ್ದೇಶಗಳಿಗಾಗಿಯೂ ಆರ್ಥಿಕ ಯೋಜನೆ ಯನ್ನು ಅನುಸರಿಸುತ್ತವೆ. ಹೀಗೆ ರಚಿಸಲಾಗುವ ವಿವಿಧ ರಾಷ್ಟ್ರೀಯ ಆರ್ಥಿಕ ಯೋಜನೆಗಳು ಪರಸ್ಪರವಾಗಿ ಹೊಂದಿಕೊಳ್ಳುವಂತೆಯೂ ಆರ್ಥಿಕ ಅಂತಾರಾಷ್ಟ್ರೀಯತೆಗೆ ಕುಂದು ಬಾರದಂತೆಯೂ ನೋಡಿಕೊಳ್ಳಬೇಕು. ಇದು ಆರ್ಥಿಕ ರಾಷ್ಟ್ರೀಯತೆಯ ಒಂದು ದೊಡ್ಡ ಸಮಸ್ಯೆ. ಅಂತಾರಾಷ್ಟ್ರೀಯ-ಅರ್ಥಶಾಸ್ತ್ರ, ಅಂತಾರಾಷ್ಟ್ರೀಯಆರ್ಥಿಕ ಮಂಡಲಿ, ಅಂತಾರಾಷ್ಟ್ರೀಯಆರ್ಥಿಕ ಸಂಘಗಳು, ಅಂತಾರಾಷ್ಟ್ರೀಯತೀರುವೆ ಬ್ಯಾಂಕು, ಅಂತಾರಾಷ್ಟ್ರೀಯ ದ್ರವ್ಯನಿಧಿ