ಆಯುರ್ವೇದದ ಮೂಲಸಿದ್ಧಾಂತಗಳು

ಆಯುರ್ವೇದದ ಮೂಲಸಿದ್ಧಾಂತಗಳೆಲ್ಲವೂ ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ ಮೊದಲಾದ ದರ್ಶನಶಾಸ್ತ್ರಗಳ ಸಿದ್ಧಾಂತದ ಮೇಲೆಯೇ ರೂಪಿಸಲ್ಪಟ್ಟಿವೆ. ಕೆಲವು ಮುಖ್ಯ ಸಿದ್ಧಾಂತಗಳು ಹೀಗಿವೆ:

ಲೋಕ-ಪುರುಷ ಸಾಮ್ಯಸಿದ್ಧಾಂತ

ಬದಲಾಯಿಸಿ

ಲೋಕದಲ್ಲಿ ಯಾವ ಯಾವ ಭಾವ ವಿಶೇಷಗಳಿವೆಯೋ ಅವೆಲ್ಲವೂ ಮನುಷ್ಯನಲ್ಲಿವೆ. ಯಾವುವು ಮನುಷ್ಯನಲ್ಲಿವೆಯೋ ಅವು ಲೋಕದಲ್ಲಿವೆ. ಅದ್ದರಿಂದ ಮನುಷ್ಯ ಒಂದು ಸೂಕ್ಷ್ಮ ವಿಶ್ವ.

ಪಂಚಮಹಾಭೂತಸಿದ್ಧಾಂತ

ಬದಲಾಯಿಸಿ

ಲೋಕದ ಮೂರ್ತ ದ್ರವ್ಯಗಳೆಲ್ಲವೂ ಪೃಥ್ವಿ, ಅಪ್, ತೇಜ, ವಾಯು, ಆಕಾಶಗಳೆಂಬ ಪಂಚಮಹಾಭೂತಗಳ ಸಂಯೋಗದಿಂದಲೇ ಉತ್ಪನ್ನವಾಗಿವೆ. ಮನುಷ್ಯಶರೀರ, ಆತ ಉಪಯೋಗಿಸುವ ಆಹಾರ, ಔಷಧಾದಿ ದ್ರವ್ಯಗಳೆಲ್ಲವೂ ಪಾಂಚಭೌತಿಕಗಳು. ಪಂಚಮಹಾಭೂತಗಳ ಜೊತೆಯಲ್ಲಿ ಚೇತನಾಸ್ವರೂಪನಾದ ಆತ್ಮನ ಸಂಯೋಗಾನಂತರ ಮನುಷ್ಯ ಶರೀರ ಪ್ರಾಣಲಕ್ಷಣಗಳನ್ನು ವ್ಯಕ್ತಮಾಡುತ್ತದೆ. ಆತ್ಮನ ವಿಯೋಗಾನಂತರ ದೇಹ ಪಂಚಭೂತಗಳಲ್ಲಿಯೇ ಸೇರುತ್ತದೆ. ಜೀವಿತಕಾಲದಲ್ಲಿ ಮಾನವ ಶರೀರ, ಆತ್ಮ ಮತ್ತು ಸತ್ತ್ವಗಳ (ಮನಸ್ಸು) ಅವಿಭಾಜ್ಯಸಂಯೋಗರೂಪಿ.

ದೋಷ-ಧಾತು-ಮಲ ಸಿದ್ಧಾಂತ

ಬದಲಾಯಿಸಿ

ಶರೀರದ ರಚನೆ ಮತ್ತು ಕಾರ್ಯಗಳಿಗೆ ವಾತ, ಪಿತ್ತ, ಕಫಗಳೆಂಬ ತ್ರಿದೋಷಗಳು, ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ ಶುಕ್ರಗಳೆಂಬ ಧಾತುಗಳು, ಪುರೀಷ, ಮೂತ್ರ, ಸ್ವೇದಾದಿ ಮಲಗಳು -ಮುಖ್ಯ ಘಟಕಗಳಾಗಿವೆ. ಇವು ತಮ್ಮ ಪ್ರಮಾಣ, ಗುಣಕರ್ಮಗಳಲ್ಲಿ ಪ್ರಾಕೃತವಾಗಿರುವಾಗ ಶರೀರ ಆರೋಗ್ಯವಾಗಿರುತ್ತದೆ. ಅಹಿತಾಹಾರವಿಹಾರಗಳಿಂದ ಇವು ವೃದ್ಧಿ ಕ್ಷಯರೂಪವಾದ ವೈಷಮ್ಯವನ್ನು ಹೊಂದಿ ಶರೀರವನ್ನು ರೋಗಕ್ಕೆ ಗುರಿಮಾಡುತ್ತವೆ. ದೋಷ, ಧಾತು-ಮಲಗಳ ಪೈಕಿ ತ್ರಿದೋಷಗಳು ಹೆಚ್ಚು ಮಹತ್ವವುಳ್ಳವು. ಪ್ರಾಕೃತಾವಸ್ಥೆಯಲ್ಲಿರುವಾಗ ಶರೀರವನ್ನು ಧಾರಣಮಾಡುವುದರಿಂದ ಇವುಗಳಿಗೆ ಧಾತುಗಳೆಂದೂ ಹೆಸರುಂಟು. ಆದರೆ ಜಾಗ್ರತೆಯಾಗಿ ತಾವು ದುಷ್ಟವಾಗಿ ಅನ್ಯವಸ್ತುಗಳನ್ನು ದುಷ್ಟಮಾಡುವ ಸ್ವಭಾವವನ್ನು ಹೊಂದಿರುವುದರಿಂದ ಇವನ್ನು ದೋಷಗಳೆಂದೇ ವ್ಯವಹರಿಸಲಾಗಿದೆ. ಅನಿಲ, ಸೂರ್ಯ ಮತ್ತು ಸೋಮ-ಇವರು ಹೇಗೆ ಜಗತ್ತನ್ನು ಧಾರಣಮಾಡುತ್ತಾರೋ ಹಾಗೆ ವಾತ, ಪಿತ್ತ, ಕಫಗಳು ಶರೀರವನ್ನು ಧಾರಣ ಮಾಡುತ್ತವೆ. ಶರೀರವು ವಾತ ವಾಯು ಮತ್ತು ಆಕಾಶ ಭೂತಗಳ ಸಂಯೋಗದಿಂದುತ್ಪನ್ನವಾಗಿ ಪ್ರಾಣ, ಉದಾನ, ಸಮಾನ, ವ್ಯಾನ ಮತ್ತು ಅಪಾನಗಳೆಂಬ ಐದು ವಿಭಾಗಗಳಾಗಿ ಶರೀರದ ಧಾತುಗಳ ಸಮ್ಯಗ್ಗತಿ, ಇಂದ್ರಿಯಪಟುತ್ವ, ಎಲ್ಲ ವಿಧವಾದ ಶಾರೀರಕ ಚೇಷ್ಟೆಗಳು ಮತ್ತು ಮಾನಸಿಕಪ್ರವೃತ್ತಿ ಮುಂತಾದ ಕಾರ್ಯಗಳನ್ನು ಮಾಡುತ್ತವೆ. ಪಿತ್ತ ತೇಜೋಭೂತದಿಂದುತ್ಪನ್ನವಾಗಿ ಪಾಚಕ, ರಂಜಕ, ಸಾಧಕ, ಅಲೋಚಕ, ಭ್ರಾಜಕಗಳೆಂಬ ಐದು ವಿಭಾಗಗಳಾಗಿ ಆಹಾರ ಪಚನ, ದೇಹೌಷ್ಣ, ವರ್ಣ, ಮೇಧಾಶಕ್ತಿ ಮುಂತಾದ ಕಾರ್ಯಗಳನ್ನು ಮಾಡುತ್ತದೆ. ಕಫವು ಅಪ್ ಮತ್ತು ಪೃಥ್ವೀಭೂತಗಳಿಂದ ಉತ್ಪನ್ನವಾಗಿದ್ದು ಶರೀರದ ಸ್ಥಿರತ್ವ, ಸ್ನಿಗ್ಧತ್ವ, ಕ್ಷಮತ್ವ, ಬಲ ಮುಂತಾದುವುಗಳಿಗೆ ಕಾರಣವಾಗಿವೆ. ತ್ರಿದೋಷಗಳು ಧಾತು ಮಲಗಳಲ್ಲೇ ಆಶ್ರಯ ಪಡೆದಿದ್ದು ತಾವು ದೂಷಿತವಾದಾಗ ಅವನ್ನೂ ದೂಷಿಸಿ ರೋಗಗಳನ್ನುಂಟುಮಾಡುತ್ತವೆ. ರಜಸ್ ಮತ್ತು ತಮಸ್-ಎಂಬ ಎರಡು ಮಾನಸಿಕ ದೋಷಗಳೂ ಇವೆ.

ದ್ರವ್ಯ-ರಸ-ಗುಣ-ವೀರ್ಯ-ವಿಪಾಕ-ಪ್ರಭಾವ-ಸಿದ್ಧಾಂತ

ಬದಲಾಯಿಸಿ

ಔಷಧವಲ್ಲದ ಯಾವ ವಸ್ತುವೂ ಪ್ರಪಂಚದಲ್ಲಿಲ್ಲ. ಪಂಚಮಹಾಭೂತಗಳ ಸಂಯೋಗವೈಶಿಷ್ಟ್ಯದಿಂದ ವಸ್ತುಗಳಲ್ಲಿ ಲಕ್ಷಣ ವೈವಿಧ್ಯ ಉಂಟಾಗುತ್ತದೆ. ವಸ್ತುಗಳಲ್ಲಿರುವ ಭೂತದ ಆಧಿಕ್ಯದ ಮೇರೆಗೆ ದ್ರವ್ಯಗಳನ್ನು ಪಾರ್ಥಿವ, ಅಪ್ಯ, ತೈಜಸ, ವಾಯವೀಯ, ನಾಭಸ ಎಂಬುದಾಗಿ ಐದು ವಿಧವಾಗಿ ವಿಂಗಡಿಸಬಹುದು. ಪ್ರತಿಯೊಂದು ದ್ರವ್ಯದಲ್ಲೂ ರಸ [ನಾಲಗೆಗೆ ಗೋಚರವಾಗುವ ಮಧುರ (ಸಿಹಿ), ಆಮ್ಲ (ಹುಳಿ), ಲವಣ (ಉಪ್ಪು), ಕಟು (ಖಾರ), ತಿಕ್ತ (ಕಹಿ) ಮತ್ತು ಕಷಾಯಗಳೆಂಬ (ಒಗರು) ಆರು] , ಗುಣ (ಗುರು ಲಘು, ರೂಕ್ಷ, ಸ್ನಿಗ್ಧ ಮುಂತಾದ ಇಪ್ಪತ್ತು), ವೀರ್ಯ (ಉಷ್ಣ ಶೀತಗಳೆಂಬ ಶಕ್ತಿಗಳು), ವಿಪಾಕ (ಜಠರಾಗ್ನಿಯಿಂದ ಪಾಕಹೊಂದಿದ ಅನಂತರದ ರಸ), ಪ್ರಭಾವಗಳೆಂಬುವು ಅಚಿಂತ್ಯಶಕ್ತಿ) ಕಾರ್ಯ ಘಟಕಗಳು.

ಸಾಮಾನ್ಯ -ವಿಶೇಷ ಸಿದ್ಧಾಂತ

ಬದಲಾಯಿಸಿ

ಸಮಾನದ್ರವ್ಯ, ಸಮಾನಗುಣ ಮತ್ತು ಕರ್ಮಗಳ ಸೇವನೆಯಿಂದ (ಆಹಾರ, ವಿಹಾರ, ಔಷಧ) ದೋಷ, ಧಾತು, ಮಲಗಳ ವೃದ್ಧಿಯೂ ವಿಶೇಷ (ವಿರುದ್ಧ) ದ್ರವ್ಯ, ಗುಣ, ಕರ್ಮಗಳ ಸೇವನೆಯಿಂದ ಅವುಗಳ ಕ್ಷಯವೂ ಉಂಟಾಗುತ್ತವೆ.

ತ್ರಿವಿಧರೋಗ ಕಾರಣತ್ವ ಸಿದ್ಧಾಂತ

ಬದಲಾಯಿಸಿ

ಕಾಲ (ಶಿಶಿರಾದಿ ಷಡ್ ಋತುಗಳು) , ಅರ್ಥ (ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ಇಂದ್ರಿಯ ವಿಷಯಗಳು), ಕರ್ಮ (ಕಾಯಿಕ, ವಾಚಿಕ, ಮಾನಸಿಕಗಳೆಂಬ ಮೂರು ವಿವಿಧ ಕಾರ್ಯಗಳು) -ಇವುಗಳ ಸಮ್ಯಗ್ಯೋಗದಿಂದ (ಸರಿಯಾಗಿರುವುದು) ಆರೋಗ್ಯವೂ ಹೀನ ಅತಿ ಅಥವಾ ಮಿಥ್ಯಾಯೋಗಗಳಿಂದ ರೋಗವೂ ಉಂಟಾಗುತ್ತವೆ. ಇವೇ ಅಸಾತ್ಮ್ಯೇಂದ್ರಿಯಾರ್ಥ ಸಂಯೋಗ, ಪ್ರಜ್ಞಾಪರಾಧ ಮತ್ತು ಪರಿಣಾಮಗಳೆಂದೂ ಕರೆಯಲ್ಪಡುತ್ತವೆ.

ತ್ರಿವಿಧರೋಗ ಸಿದ್ಧಾಂತ

ಬದಲಾಯಿಸಿ

ದುಃಖಸಂಯೋಗವೇ ವ್ಯಾಧಿ: ದುಃಖಗಳು ಆಧ್ಯಾತ್ಮಿಕ, ಆಧಿಭೌತಿಕ ಮತ್ತು ಆಧಿದೈವಿಕಗಳೆಂದು ಮೂರು ವಿಧ. ಅಂತೆಯೇ ವ್ಯಾಧಿಗಳೂ. ಶರೀರದ ಉತ್ಪತ್ತಿಗೆ ಮೂಲಕಾರಣವಾದ ಶುಕ್ರಶೋಣಿತಗಳ ಕೆಡುವಿಕೆ (ಆದಿಬಲ), ಗರ್ಭಧಾರಣ ಕಾಲದಲ್ಲಿ ತಾಯಿ ಮಾಡುವ ಅಪಚಾರಗಳು (ಜನ್ಮಬಲ), ಜನನಾನಂತರದ ಅಹಿತಾಹಾರ ವಿಹಾರ ಸೇವನೆಗಳ (ದೋಷಬಲ) ಪರಿಣಾಮವಾಗಿ ಉಂಟಾಗುವ ವ್ಯಾಧಿಗಳು-ಇವು ಆಧ್ಯಾತ್ಮಿಕಗಳು; ಶಸ್ತ್ರ ಅಸ್ತ್ರ ಮುಂತಾದ ಆಯುಧಗಳು, ಹಿಂಸ್ರಕ್ಷುದ್ರ ಪ್ರಾಣಿಗಳಿಂದ (ಸಂಘಿತ ಬಲ) ಉಂಟಾಗುವ ವ್ಯಾಧಿಗಳು-ಆಧಿಭೌತಿಕಗಳು. ಪರಿಣಾಮದಿಂದ (ಕಾಲಬಲ), ದೇವತಾಶಕ್ತಿ ವ್ಯಕ್ತಿಗಳ ಶಾಪರೂಪದಿಂದ (ದೈವಬಲ) ಮತ್ತು ಸ್ವಾಭಾವಿಕವಾದ ಹಸಿವು, ಬಾಯಾರಿಕೆ, ನಿದ್ರಾ, ಮುಪ್ಪು (ಸ್ವಭಾವ ಬಲ) -ಮುಂತಾದುವು ಆಧಿದೈವಿಕ ವ್ಯಾಧಿಗಳು.

ತ್ರಿವಿಧಚಿಕಿತ್ಸಾ ಸಿದ್ಧಾಂತ

ಬದಲಾಯಿಸಿ

ಚಿಕಿತ್ಸೆ ಮೂರುವಿಧ:

  1. ದೈವವ್ಯಪಾಶ್ರಯ-ಮಂತ್ರ, ಔಷಧಧಾರಣ, ಮಣಿಧಾರಣ, ಮಂಗಳ, ಬಲಿ, ಉಪಹಾರ, ಹೋಮ, ನಿಯಮ, ಪ್ರಾಯಶ್ಚಿತ್ತ, ಉಪವಾಸ, ಸ್ವಸ್ತ್ಯಯನ, ಯಾತ್ರಾದಿಗಳಿಂದ ರೋಗ ನಿವಾರಣೆ.
  2. ಯುಕ್ತಿವ್ಯಪಾಶ್ರಯ-ರೋಗಕ್ಕೆ ಸೂಕ್ತವಾದ ಔಷಧ, ಆಹಾರ ಮತ್ತು ವಿಹಾರಗಳ ಸೇವನೆಯಿಂದ ವ್ಯಾಧಿ ನಿವಾರಣೆ.
  3. ಸತ್ತ್ವಾವಜಯ-ಅಹಿತವಾದ ಇಂದ್ರಿಯಾರ್ಥಗಳಿಂದ ದೂರವಿರುವಿಕೆ, ಮನಸ್ಸನ್ನು ನಿಗ್ರಹಿಸುವುದರಿಂದ ವ್ಯಾಧಿಗಳ ನಿವಾರಣೆ.

ಔಷಧ ಯೋಜನೆಯೂ ಮೂರು ವಿಧ:

  1. ಅಂತಃಪರಿ ಮಾರ್ಜನ-ಹೊಟ್ಟೆಯೊಳಗೆ ಔಷಧಿಗಳ ಸೇವನೆ
  2. ಬಹಿಃಪರಿಮಾರ್ಜನ-ಶರೀರದ ಮೇಲೆ ಔಷಧಗಳ ಉಪಯೋಗ
  3. ಶಸ್ತ್ರಪ್ರಣಿಧಾನ ಶಸ್ತ್ರಗಳಿಂದ ಛೇದನ, ಭೇದನಾದಿಗಳನ್ನು ಮಾಡುವುದು.
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: