ಆಫ್ರಿಕದ ಕಲೆ
ಬೆಳಕಿಗೆ ಬಂದದ್ದು ಈ ಶತಮಾನದ ಮೊದಲಿಗಷ್ಟೇ. ಫ್ರಾನ್ಸ್‍ನ ಮೆತಿಸ್ ಎಂಬ ಕಲಾಕಾರ ಆಫ್ರಿಕದ ಶಿಲ್ಪವೊಂದನ್ನು ಕಂಡು ತುಂಬ ಪ್ರಭಾವಿತನಾಗಿ ತನ್ನ ಚಿತ್ರಗಳಲ್ಲಿ ಆಫ್ರಿಕದ ಕಲೆಯ ಲಕ್ಷಣಗಳನ್ನು ಬಳಸಲು ಪ್ರಾರಂಭಿಸಿದ. ಪಿಕಾಸೊ, ಡಿರೈನ್ ಮೊದಲಾದ ಕಲಾಕಾರರೂ ಕ್ರಮೇಣ ಈ ಕಲೆಯಿಂದ ಪ್ರಭಾವಿತರಾದರು. ಆವರೆಗೆ ವಸ್ತುಸಂಗ್ರಹಾಲಯಗಳ ಮಾನವಶಾಸ್ತ್ರ ವಿಭಾಗದಲ್ಲಿ ಶೇಖರಿಸಲ್ಪಟ್ಟಂಥ ಆಫ್ರಿಕದ ಕಲೆಯ ನಿದರ್ಶನಗಳನ್ನೂ ಆಫ್ರಿಕ ದೇಶದಲ್ಲೇ ಸಜೀವವಾಗಿದ್ದಂಥ ಸಂಪ್ರದಾಯವನ್ನೂ ತಿಳಿದುಕೊಳ್ಳುವ, ಅಭ್ಯಾಸ ಮಾಡುವ ಪ್ರಯತ್ನವನ್ನು ಅಲ್ಲಿಂದ ಮುಂದೆ ಕಲಾಕಾರರೂ ಮಾನವಶಾಸ್ತ್ರಜ್ಞರೂ ಪ್ರಾರಂಭಿಸಿದರು. ಆಫ್ರಿಕದ ಕಲೆಯ ಕಡೆಗೆ ಗಮನವನ್ನು ಮೊದಲಿಗೆ ಸೆಳೆದವ ಲಿಯೊ ಪ್ರೊಬಿನಸ್. ಈ ವಿಷಯದಲ್ಲಿ ಮೊದಲ ಪುಸ್ತಕ ಬರೆದವ ಕಾರ್ಲ್ ಐನ್‍ಸ್ಟೈನ್.
ಇತಿಹಾಸ
ಬದಲಾಯಿಸಿದಕ್ಷಿಣದಿಂದ ಉತ್ತರಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಆಫ್ರಿಕದ ತುಂಬ ನೂರಾರು ಜನಪ್ರಬೇಧಗಳು, ಪಂಗಡಗಳು ಹಬ್ಬಿಕೊಂಡಿವೆ. ಅಷಾಂಟಿ, ಬಂಬರ, ಬಲೂಬ, ಕೊಗೊನ್, ಡಾನ್, ಸೆನೂಪೊ, ಯಾರುಬ, ಬಾಲ್, ಐಫಿ, ಬಸುಂಡಿ, ಗುರೊ, ಬೊಬೊ ಮೊದಲಾದ ಈ ಪಂಗಡಗಳ ಆಚಾರ-ವಿಚಾರ, ನಡೆನುಡಿ, ಮತ ಸಂಸ್ಥೆಗಳಲ್ಲಿ ಎಷ್ಟು ವೈವಿಧ್ಯವಿದೆಯೋ ಅಷ್ಟೇ ಸಾಮರಸ್ಯ, ಕೆಲವು ಸಾಮಾಜಿಕ ಆಚರಣೆಗಳು, ನಂಬಿಕೆಗಳು, ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿವೆ. ಕೆಲವು ಪಂಗಡಗಳ ಮೇಲೆ ಇಸ್ಲಾಂ ಮತದ ಪ್ರಭಾವ ಬಿದ್ದಿದ್ದರೂ ಅವು ತಮ್ಮ ಪೂರ್ವಜರ ಪೂಜೆ, ಸಮೃದ್ಧಿಕ್ರಿಯೆ (ಫರ್ಟಿಲಿಟಿ ರೈಟ್ಸ್) ಸಂಪ್ರದಾಯದ ನೃತ್ಯಗಳು, ಇವನ್ನೆಲ್ಲ ಇನ್ನೂ ಉಳಿಸಿಕೊಂಡಿವೆ. ಕೃಷಿ, ಪಶುಸಂಗೋಪನೆಗಳು ತಿಳಿದಿರುವ ಪಂಗಡಗಳಲ್ಲಿ ಪೂರ್ವಜರ ಪೂಜೆ, ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದ್ದರೆ ಅರಣ್ಯ ನಿವಾಸಿಗಳಾದ ಪಂಗಡಗಳಲ್ಲಿ ಪ್ರಾಣಿಗಳ, ಪ್ರಾಕೃತಿಕ ದೈವಗಳ ಪೂಜೆಗಳಲ್ಲಿ ಪ್ರಬಲವಾಗಿ ಬೇರೂರಿದೆ. ಈ ಎಲ್ಲ ಪಂಗಡಗಳ ಕಲೆ ಪೂರ್ವಜರ, ಅರಸರ, ಪ್ರಾಣಿ-ಪಕ್ಷಿಗಳ, ಇತರ ದೈವಗಳ, ಸಮೃದ್ಧಿಕಾರಕ ಮಾತೃದೇವತೆಯರ ಮೂರ್ತಿಗಳಲ್ಲಿ ಮತ್ತು ಪೂಜೆ, ಬೇಟೆ, ನೃತ್ಯ, ಮರಣ ಮೊದಲಾದ ಸಂದರ್ಭಗಳಲ್ಲಿ ಉಪಯೋಗಿಸುವ ಮುಖವಾಡಗಳಲ್ಲಿ ನಿತ್ಯೋಪಯೋಗಿ ವಸ್ತುಗಳಾದ ಸೌಟು, ಚಿಪ್ಪು, ಪಾತ್ರೆ, ಮನೆ ಬಾಗಿಲು ಮುಂತಾದುವುಗಳಲ್ಲಿ, ಪಂಗಡದ ನಾಯಕನ ಅಧಿಕಾರದಂಡ, ಸಿಂಹಾಸನಗಳಲ್ಲಿ ಕಂಡುಬರುತ್ತವೆ. ಆಫ್ರಿಕದ ಕಲೆಯ ಹೆಚ್ಚಿನ ನಿದರ್ಶನಗಳು ಮರದ ಕೆತ್ತನೆಗಳು. ಸುಲಭವಾಗಿ ಕೆಲಸಕ್ಕೆ ಬರುವಂಥ ಮರವನ್ನು ಅವರು ಆರಿಸಿಕೊಳ್ಳುತ್ತಾರೆ. ಮುಖವಾಡಗಳಲ್ಲಿ ಹೆಚ್ಚಿನವು ಹಗುರಾದ ಮರಗಳಿಂದ ಮಾಡಲ್ಪಟ್ಟವಾದರೂ ಮಂತ್ರವಾದಿಗಳಂತೆ ಪರಂಪರಾಗತವಾಗಿ ಒಂದು ಸ್ಥಾನದಲ್ಲಿರುವವರು ಉಪಯೋಗಿಸುವ ಮುಖವಾಡಗಳು, ಘನವಾದ ಮರದಿಂದ ಮಾಡಲ್ಪಟ್ಟಿರುತ್ತವೆ. ಇವುಗಳ ಮೇಲೆ ಗೀರುವುದೂ ಬಣ್ಣಗಳನ್ನು ಬಳಿಯುವುದೂ ಕೂದಲೂ, ಕನ್ನಡಿಯ ತುಂಡುಗಳನ್ನು ಉಪಯೋಗಿಸುವುದೂ ಇದೆ. ಮೂರ್ತಿಗಳಲ್ಲಿ ಕಂಚಿನ ಎರಕದವು, ದಂತದವು, ಮಣ್ಣಿನವು, ಕಲ್ಲಿನವು ಕೆಲವು ದೊರಕಿದ್ದರೂ ಹೆಚ್ಚಿನವು ಮರದವು. ಕೆಲವಕ್ಕೆ ಬಂಗಾರದ ತೆಳ್ಳಗಿನ ತಗಡಿನ ಹೊದಿಕೆ ಇರುವುದೂ ಉಂಟು.[೧]
ಶೈಲಿಯ ವೈವಿಧ್
ಬದಲಾಯಿಸಿಬೇರೆ ಬೇರೆ ಪಂಗಡಗಳಲ್ಲಿ ಶೈಲಿಯ ವೈವಿಧ್ಯವಿದೆ. ಪ್ರಾದೇಶಿಕ ಪರಿಸ್ಥಿತಿ, ಸಂಪ್ರದಾಯಿಕ ನಂಬಿಕೆಗಳು ಲಭ್ಯವಿರುವ ಮಾಧ್ಯಮ ಇವುಗಳ ಮೇಲೆ ಶೈಲಿಗಳು ಹೊಂದಿಕೊಂಡಿವೆ. ಆದರೆ ಸರಳ, ಸಹಜ, ಸುಂದರ, ನೈಜವಾಗಿರುವ ಇವರ ಮೂರ್ತಿ ಶಿಲ್ಪದಲ್ಲಿ ಘನ ಪರಿಮಾಣಗಳ ಸಂಯೋಜನೆ, ಭಾವನಾತ್ಮಕ ರಚನೆ, ಪ್ರಮಾಣಗಳ ಸೂಕ್ಷ್ಮ ತಿಳಿವಳಿಕೆ, ಈ ತಿಳಿವಳಿಕೆಯಿಂದ ಭಾವನೆಗಳ ಪ್ರಚೋದನೆಗೆ ಬೇಕಾದಂತೆ ಅವುಗಳ ಪ್ರಯೋಗ-ಇವುಗಳಿದ್ದು ವೀಕ್ಷಕರ ಮೇಲೆ ತುಂಬ ಪ್ರಭಾವವನ್ನು ಬೀರುತ್ತವೆ. ಆಕೃತಿ ರೂಪಗಳ ಜೀವಂತಿಕತೆ, ಕೊರತೆ ಇಲ್ಲದ ನಿರಾಡಂಬರ ಸರಳತೆ, ಉಪಯೋಗಿಸುತ್ತಿರುವ ಮಾಧ್ಯಮದ ಸಂಪೂರ್ಣ ತಿಳಿವು, ಅದರ ವಿಶೇಷತೆಯ ಸದುಪಯೋಗ ಇವು ಆ ಕಲೆಯ ಮುಖ್ಯ ಲಕ್ಷಣಗಳು. 1897ರಲ್ಲಿ ಬ್ರಿಟಿಷ್ ಸೇನೆಯ ಪಡೆಯೊಂದು ಬ್ರಿಟಿಷ್ ಅಧಿಕಾರಿಯನ್ನು ಕೊಲೆಗೈದ ಬೆನಿನ್ ಪಂಗಡವನ್ನು ದಂಡಿಸಲು ಹೊರಟು ದಂಡರೂಪದಲ್ಲಿ ಬೆನಿನ್‍ನಲ್ಲಿದ್ದ ಎಲ್ಲ ಬೆಲೆಬಾಳುವ ವಸ್ತುಗಳನ್ನೂ ವಶಪಡಿಸಿಕೊಂಡಿತು. ಈ ಸಂಗ್ರಹದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚಾಗಿ ಕಲಾಕೃತಿಗಳು ಇದ್ದು ಅವನ್ನು ಈಗ ಯೂರೋಪಿನ ಪ್ರಮುಖ ಸಂಗ್ರಹಗಳಲ್ಲೆಲ್ಲ ಸೇರಿಸಲಾಗಿದೆ. ಕಂಚಿನ ಎರಕದ ಅತ್ಯಂತ ಸುಂದರವಾದ ಮಾದರಿಗಳು ಈ ಸಂಗ್ರಹದಲ್ಲಿದ್ದವು. ಇಂಥ ಕೆಲಸದಲ್ಲಿ ಆ ಪಂಗಡದವರಿಗೆ ಅಸಾಮಾನ್ಯ ನೈಪುಣ್ಯ ಇದ್ದು ನೂರಾರು ವರ್ಷಗಳ ಅನುಭವದ ಹಿನ್ನೆಲೆ ಇರುವುದು ಕಂಡುಬಂದಿತು. ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲಿರುವ ರಾಜಮಾತೆಯ ಶಿರ ತುಂಬುಗಲ್ಲದ, ತೆರೆದ ಕಣ್ಣುಗಳಿರುವ ಹೆಣ್ಣಿನ ಮುಖವನ್ನು ತೋರಿಸುತ್ತದೆ. ಹಣೆಯ ಮೇಲೆ ಚೂಪಾಗಿರುವ ಕುಲಾಯಿಯಂಥ ಟೊಪ್ಪಿ ಇದೆ. ಕುತ್ತಿಗೆಯಲ್ಲಿ ಬಳೆಗಳಂಥ ಆಭರಣಗಳಿವೆ. ಇದು ಸುಮಾರು 16ನೆಯ ಶತಮಾನದ್ದಾಗಿರಬಹುದೆಂದು ಊಹಿಸಲಾಗಿದೆ.[೨]
ಶೈಲಿಯ ಆಕಾರ
ಬದಲಾಯಿಸಿಇದೇ ಸಂಗ್ರಹದಿಂದ ಬಂದ ಇನ್ನೊಂದು ಮೂರ್ತಿಯಲ್ಲಿ ಸೂಕ್ಷ್ಮವಾಗಿಯೂ ನಾಜೂಕಾಗಿಯೂ ಕೆತ್ತಲ್ಪಟ್ಟ ಶಿರಸ್ತ್ರಾಣ, ಆಭರಣಗಳು ಇದ್ದು, ಅಗಲವಾಗಿ ತೆರೆದ ಕಣ್ಣುಗಳು, ಅಗಲವಾದ ಮೂಗು, ಅರೆತೆರೆದ ತುಟಿಗಳು ಒಟ್ಟಿಗೆ ವೀರಭಾವವನ್ನು ಸೂಚಿಸುತ್ತವೆ. ಇನ್ನೊಂದು ಫಲಕದಲ್ಲಿ ಅರಸನೊಬ್ಬ ತನ್ನ ಪರಿವಾರದವರು ಮತ್ತು ಆಳುಗಳೊಂದಿಗೆ ಚಿತ್ರಿಸಲ್ಪಟ್ಟಿದ್ದಾನೆ. ಬಲಗೈಯಲ್ಲಿ ಅಗಲವಾದ ಅಲಗುಳ್ಳ ಕತ್ತಿ, ಎಡಕೈಯಲ್ಲಿ ಈಟಿ, ತಲೆಯಲ್ಲಿ ಶಿರಸ್ತ್ರಾಣ, ಕತ್ತಿನಲ್ಲಿ ಬಳೆಗಳಂಥ ಆಭರಣ, ಜನಿವಾರದಂತೆ ತೂಗುಬಿದ್ದಿರುವ ಅಗಲವಾದ ಮಾಲೆ, ಸೊಂಟದಿಂದ ಕೆಳಗೆ, ಮೊಣಕಾಲವರೆಗೆ ವಸ್ತ್ರ ಸುತ್ತಿದ ಅರಸನ ಎಡಬಲಗಳಲ್ಲಿ ಈಟಿ, ಢಾಲುಗಳನ್ನು ಹಿಡಿದುಕೊಂಡಿರುವ ಪರಿವಾರದವರು, ಇನ್ನೂ ಚಿಕ್ಕಗಾತ್ರದ ಇಬ್ಬರು ಆಳುಗಳು ಈ ಫಲಕದಲ್ಲಿ ಕಂಡುಬರುತ್ತಾರೆ. ಇದು ಪ್ಯಾರಿಸ್ ನಗರದ ವಸ್ತುಸಂಗ್ರಹಾಲಯದಲ್ಲಿದೆ. ಇನ್ನೊಂದು ಕುದುರೆಸವಾರನ ಮೂರ್ತಿ ಜೂರಿಕ್ ನಗರದ ಸಂಗ್ರಹದಲ್ಲಿದ್ದು, ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಬಹುದಾದ ದೈವಗಳ ಮೂರ್ತಿಗಳನ್ನು ತುಂಬ ಹೋಲುತ್ತದೆ. ಅಷಾಂಟಿ ಪಂಗಡದವರು ತೂಕದ ಕಲ್ಲುಗಳಾಗಿ ಕಂಚಿನ ಮೀನು, ಹಲ್ಲಿ, ಚೇಳು, ಮೊದಲಾದ ಆಕೃತಿಗಳನ್ನು ಉಪಯೋಗಿಸುತ್ತಾರೆ. ಕೆಮರೂನ್, ಗೋಲ್ಡ್, ಕೋಸ್ಟ್, ಐವರಿಕೋಸ್ಟ್, ಪ್ರದೇಶಗಳಲ್ಲೂ ಕಂಚಿನ ಕೆಲಸವನ್ನು ಮಾಡುತ್ತಾರೆ. ಅಷಾಂಟಿ ಹಾಗೂ ಬೌಲ್ ಜನಾಂಗಗಳಲ್ಲಿ ಬಂಗಾರದ ಮುಖವಾಡಗಳಿವೆ.
ಕಲ್ಲಿನ ಮೂರ್ತಿಗಳು
ಬದಲಾಯಿಸಿಕಲ್ಲಿನ ಮೂರ್ತಿಗಳು ಹೆಚ್ಚಾಗಿ ಬಳಪದ ಕಲ್ಲುಗಳಿಂದ ಮಾಡಲ್ಪಟ್ಟಿವೆ. ಸಿಯಾರ ಲಿಯೋನ್ ಪ್ರದೇಶದಲ್ಲಿ ಮೆಂಡ್ ಪಂಗಡದವರು ಇಂಥ ಕೆಲಸದಲ್ಲಿ ನುರಿತವರು. ಮೂರ್ತಿ ಚಿತ್ರಣದ ಸುಂದರ ಮಾದರಿಗಳು, ಮರದವು. ಹೆಚ್ಚಿನ ಜನಾಂಗಗಳಲ್ಲಿನ ಮೂರ್ತಿಗಳು ಪೂರ್ವಜರವು. ಸಮೃದ್ಧಿ ಸೂಚಕ ಮತ್ತು ಮಾತೃ ದೇವತೆಗಳವು. ಬಕುಬ ಗುಂಪಿನವರ ಒಂದು ಮೂರ್ತಿ ಅವರ ಅರಸ ಕಟಮ್ಯುಲ ಎಂಬುವನನ್ನು ಒಂದು ಕೈಯಲ್ಲಿ ಡೋಲು, ಒಂದು ಕೈಯಲ್ಲಿ ಶಾಂತಿ ಪ್ರತೀಕವಾದ ದಂಡಗಳನ್ನು ಹಿಡಿದು ಕುಳಿತಿರುವುದನ್ನು ತೋರಿಸುತ್ತದೆ. ತಲೆಯ ಮೇಲೆ ಚಿಕ್ಕ ಚೌಕಾಕಾರದ ಕಿರೀಟವಿದೆ. ಔರುವ ಪಂಗಡದ ಇನ್ನೊಂದು ಮೂರ್ತಿ ದೊಡ್ಡ ತಲೆ, ಬಡಕಲು ದೇಹ, ದೀನ ಭಾವಗಳ ಭಿಕ್ಷುಕನೊಬ್ಬ ಕೈಯಲ್ಲಿ ಪಾತ್ರೆಯೊಂದನ್ನು ಹಿಡಿದು ಮೊಣಕಾಲೂರಿ ಕೂತಿರುವ ಭಂಗಿಯನ್ನು ತೋರಿಸುತ್ತದೆ. ಇವೆರಡೂ ಮೂರ್ತಿಗಳು ಬೆಲ್ಜಿಯಂ ದೇಶದ ತೆರ್‍ವುರೆನ್ ವಸ್ತುಸಂಗ್ರಹಾಲಯದಲ್ಲಿವೆ. ದೊಗೊನ್ ಪಂಗಡದವರ ಒಂದು ಕಲಾಕೃತಿಯಲ್ಲಿ ಗಂಡು ಹೆಣ್ಣುಗಳು ಒಟ್ಟೊಟ್ಟಿಗೆ ಕುಳಿತಿದ್ದು, ಗಂಡಿನ ಎಡಗೈ ಹೆಣ್ಣಿನ ಕುತ್ತಿಗೆಯನ್ನು ಬಳಸಿದ್ದು ಸುಂದರವಾಗಿದೆ. ಬಡಕಲು ದೇಹ, ನೀಳವಾದ ಕೈಕಾಲುಗಳು, ಉದ್ದವಾದ ಕುತ್ತಿಗೆ, ಎತ್ತರವೂ ಚೂಪಾದ ಸ್ತನಗಳು, ಕೆಲವೊಮ್ಮೆ ಉಬ್ಬಿದ ನಾಭಿ, ನೈಜವಾದ ರೀತಿಯ ತಲೆಗೂದಲು ಇವುಗಳ ಚಿತ್ರಣಗಳನ್ನು ಹೆಚ್ಚಿನ ಮೂರ್ತಿಗಳಲ್ಲಿ ಕಾಣಬಹುದು.
ಮುಖವಾಡ
ಬದಲಾಯಿಸಿಮುಖವಾಡಗಳಲ್ಲಿ ತುಂಬ ವೈವಿಧ್ಯವಿದೆ. ಕೆಲವಲ್ಲಿ ಮನುಷ್ಯರ ಮುಖಗಳಿದ್ದರೆ ಇನ್ನು ಕೆಲವಲ್ಲಿ ಮೃಗಪಕ್ಷಿಗಳ ಆಕೃತಿಗಳಿವೆ. ಕೆಲವಲ್ಲಿ ಬರಿ ಗೀರುಗಳಿದ್ದರೆ ಇನ್ನು ಕೆಲವು ಬಣ್ಣಗಳಿಂದ ಕೂಡಿವೆ. ಕೂದಲು, ಕನ್ನಡಿ ಚೂರುಗಳು, ತಾಮ್ರ, ಕಬ್ಬಿಣದ ಸರಿಗೆಗಳು ಇವುಗಳಲ್ಲಿ ಬಳಕೆಯಾಗಿವೆ. ಬಂಬಾರದವರ ಮುಖವಾದ ನಾಲ್ಕು ಕೊಂಬುಗಳುಳ್ಳ ಎರಳೆಯ ಮುಖದ ಆಕೃತಿಯಲ್ಲಿದೆ. ಮೊಸ್ಸಿ ಜನಾಂಗದ ಮುಖವಾಡದಲ್ಲಿ ಮೃಗಗಳ ಕೋಡುಗಳ ಮೇಲೆ ಬೆತ್ತಲೆ ನಿಂತ ಸ್ತ್ರೀಮೂರ್ತಿಯೂ ಕಂಡುಬರುತ್ತದೆ. ಇದು ಪ್ರಾಯಶಃ ಸಮೃದ್ಧಿ ನೃತ್ಯದ ಮುಖವಾಡವಿರಬಹುದು. ಡಾನ್ ಪಂಗಡದ ಮುಖವಾಡಗಳಲ್ಲಿ ಭಾವನೆಗಳು ಎದ್ದು ಕಾಣುತ್ತವೆ. ಈ ಜನಾಂಗ ಸುಂದರವಾದ ಸೌಟು, ಚಿಪ್ಪುಗಳನ್ನು ನಿರ್ಮಿಸಿದೆ. ಪೆನುಫೊ ಪಂಗಡದ ಮುಖವಾಡವೊಂದರಲ್ಲಿ ಎರಳೆಯ ಕೋಡು, ಮೊಸಳೆಯ ಬಾಯಿ ಚಿತ್ರಿತವಾಗಿವೆ. ಈ ಎಲ್ಲ ಮುಖವಾಡಗಳು ಅವುಗಳು ಉಪಯೋಗಿಸಲ್ಪಡುವ ಕಾರ್ಯಕ್ರಮಗಳಲ್ಲಿ ಅಲೌಕಿಕತೆಯನ್ನು ಹುಟ್ಟಿಸಲು ತುಂಬ ಸಹಾಯಕಾರಿಯಾಗಿವೆ.
ಚಿತ್ರಗಾರಿಕೆ ಹಾಗೂ ಐಫಿ ಜನಾಂಗ
ಬದಲಾಯಿಸಿಸಂಗೀತೋಪಕರಣಗಳಲ್ಲಿ ಕೆಲವು ಮನುಷ್ಯಾಕೃತಿಯಲ್ಲಿವೆ. ಇನ್ನು ಕೆಲವು ಉಪಕರಣಗಳ ಹಿಡಿಯ ಮೇಲೆ ಬೇರೆ ಬೇರೆ ಬಗೆಯ ಚಿತ್ರಗಳಿವೆ. ಕೊಡಲಿ, ಕತ್ತಿಗಳ ಹಿಡಿಗಳಲ್ಲಿ ಕೆತ್ತನೆ ಇದ್ದು ಹಿಡಿಯ ಕೊನೆಯಲ್ಲಿ ಹೆಣ್ಣಿನ ಅಥವಾ ಪ್ರಾಣಿಯ ತಲೆ ಇರುತ್ತದೆ. ದಂತದ ಕೆಲಸದ ಅತ್ಯುತ್ತಮ ಮಾದರಿ ಬೆನಿಸ್ ಪಂಗಡದ ಮುಖವಾಡಗಳು. ಇವು ಕಂಚಿನ ಮೂರ್ತಿಗಳಂತೆಯೇ ಇದ್ದು ಬಹಳ ನಾಜೂಕಾಗಿವೆ. ಕೆಲವು ಚಿರತೆಗಳ ಮೂರ್ತಿಗಳೂ ದೊರೆತಿವೆ. ಐಫಿ ಜನಾಂಗದಲ್ಲಿ ಜೀವಗಾತ್ರದ ಮಣ್ಣಿನ ಮೂರ್ತಿಗಳನ್ನು ಮಾಡುವ ವಾಡಿಕೆ ಇದ್ದಂತೆ ತೋರುತ್ತದೆ. ಇಂಥ ಅನೇಕ ತಲೆಗಳು, ಅರ್ಧ ದೇಹಗಳು ದೊರೆತಿದ್ದು ಇವು ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದಿನವೆಂದು ನಂಬಲಾಗಿದೆ. ಆಫ್ರಿಕದಲ್ಲಿ ಚಿತ್ರಗಾರಿಕೆಯ ನಿದರ್ಶನಗಳು ತೀರ ಕಮ್ಮಿ. ರೊಡೀಷಿಯದ ಕೆಲವು ಗವಿ ಚಿತ್ರಗಳು, ದಾಹೊಮಿ ಪ್ರದೇಶ ಮತ್ತು ಬಯಕ್ ಪಂಗಡಗಳಲ್ಲಷ್ಟೇ ಸ್ವಲ್ಪ ಬಣ್ಣಗಾರಿಕೆಯ ನಿದರ್ಶನಗಳು ಸಿಕ್ಕಿವೆ.