ಆಕ್ ಹಕ್ಕಿ ಉತ್ತರ ಧ್ರುವದಲ್ಲಿ ಹೇರಳವಾಗಿದೆ. ಚಳಿಗಾಲದಲ್ಲಿ ಹಿಮವನ್ನು ಸಹಿಸಲಾರದೆ ಅಮೆರಿಕದ ಪೂರ್ವ, ಪಶ್ವಿಮ ಸಮುದ್ರ ತೀರಕ್ಕೆ ವಲಸೆ ಹೋಗುತ್ತವೆ. ನೀರಿನ ಮೇಲೆ ಸೊಗಸಾಗಿ ತೇಲುತ್ತದೆ. ಈಜುತ್ತದೆ, ಸಬ್‍ಮೆರಿನ್‍ಗಳಂತೆ ಬಹಳ ಆಳಕ್ಕೆ ಹೋಗುತ್ತದೆ. ನೀರಿನಲ್ಲಿ ಮುಳುಗಿದಾಗಲೂ ರೆಕ್ಕೆ ಹೊಡೆದು ಈಜುತ್ತದೆ. ಸಮುದ್ರ ತೀರದಲ್ಲಿ ವಾಸಮಾಡುವುದರಿಂದ ಅಲ್ಲಿ ಸಿಗುವ ಮೀನನ್ನೂ ತೇಲುವ ಅನೇಕ ಜಾತಿಯ ಕೀಟಗಳನ್ನೂ ತಿಂದು ಜೀವನ ಸಾಗಿಸುತ್ತದೆ. ಹಿಮದಲ್ಲೂ ಮತ್ತು ಜಲದಲ್ಲೂ ವಾಸಮಾಡುವುದರಿಂದ ಮೈತುಂಬ ದಟ್ಟವಾದ ಪುಕ್ಕಗಳು ಇವೆ. ಎಸ್ಕಿಮೊಗಳು ರೆಡ್ ಇಂಡಿಯನ್ನರಂತೆ ಶರೀರಾಲಂಕಾರಕ್ಕೆ ಈ ಪುಕ್ಕಗಳನ್ನು ಬಳಸುತ್ತಾರೆ. ಈ ಜಾತಿಯ ಪಕ್ಷಿಗಳಿಗೆ ಬಹಳ ಬಲವಾದ ರೆಕ್ಕೆಗಳು ಇವೆ. ಕಾಲುಗಳು ಚಿಕ್ಕವಾಗಿ ಶರೀರದ ಹಿಂಭಾಗದಲ್ಲಿ ಇವೆ. ನೆಲದ ಮೇಲೆ ನಿಂತಾಗ ಮನುಷ್ಯ ಕೂತಂತೆ ಕಾಣುತ್ತದೆ. ಪ್ರತಿಯೊಂದು ಕಾಲಿನಲ್ಲೂ ಮೂರು ಬೆರಳುಗಳಿವೆ. ಬೆರಳ ಸಂದಿಯಲ್ಲಿ ಚರ್ಮ ಆವರಿಸಿ ಜಾಲಪಾದವಾಗಿರುವುದರಿಂದ ನೀರನಲ್ಲಿ ಈಜಲು ಅನುಕೂಲ. ಆಕ್ ಹಕ್ಕಿಗಳ ಪುಕ್ಕ ಬಿಳಿ ಮತ್ತು ಕಪ್ಪು. ಕೊಕ್ಕು ಮಾತ್ರ ವಿಚಿತ್ರ. ಇವು ಭೂಮಿಯ ಮೇಲಿದ್ದಾಗ ನೋಡಲು ಬಹು ವಿಕಾರ. ಇವಕ್ಕೆ ಗೂಡು ಕಟ್ಟುವ ಕಲೆ ಬಾರದು. ಆದ್ದರಿಂದ ಮೊಟ್ಟೆ ಇಡುವ ಕಾಲ ಬಂದಾಗ ಸಾವಿರಾರು ಪಕ್ಷಿಗಳು ಸಮುದ್ರತೀರದಲ್ಲಿ ಬಿರುಕುಗಳನ್ನು ಹುಡುಕಿ ಅಲ್ಲಿ ತಮ್ಮ ಮೊಟ್ಟೆ ಇಡುತ್ತವೆ.

ಭೌತಿಕ ಗುಣಲಕ್ಷಣಗಳು

ಬದಲಾಯಿಸಿ

ಗಲ್ಲಿಮೊಟ್ಸ್, ವೆರಿಸ್, ಪಫಿನ್- ಇವೇ ಮುಂತಾದ ಪಕ್ಷಿಗಳು ಈ ಗುಂಪಿಗೆ ಸೇರಿವೆ. ಗಲ್ಲಿಮೋಟ್ಸ್, 13” ಉದ್ದ ಇವೆ. ಶರೀರದ ಎಲ್ಲ ಪುಕ್ಕಗಳೂ ಕಪ್ಪಾಗಿದ್ದು ರೆಕ್ಕೆಯಲ್ಲಿ ಬಿಳಿಯ ಮಚ್ಚೆಗಳು ಇವೆ. ಚಳಿಗಾಲದಲ್ಲಿ ಮಾತ್ರ ರೆಕ್ಕೆ ಮತ್ತು ಬಾಲದ ಪುಕ್ಕಗಳು ಕಪ್ಪಾಗಿ ಬೇರೆಲ್ಲ ಪುಕ್ಕಗಳು ಬಿಳಿಯಬಣ್ಣಕ್ಕೆ ತಿರುಗುತ್ತವೆ. ಇವು ಒಂದು ಸಾರಿಗೆ ಎರಡು ಮೊಟ್ಟೆಗಳನ್ನು ಇಡುತ್ತವೆ. ಪಫಿನ್ ಕೂಡ 13 ಉದ್ದವಾಗಿದ್ದು, ಕೆಂಪು ಮಿಶ್ರಿತ ಹಳದಿ ಬಣ್ಣದ ಪುಕ್ಕಗಳನ್ನು ಹೊಂದಿದೆ. ಇದೇ ಗುಂಪಿಗೆ ಸೇರಿದ ಗ್ರೇಟ್ ಆಕ್ ಪಕ್ಷಿಗಳು 1944 ರಿಂದ ಕಾಣದಾಗಿವೆ. ಇವುಗಳ ಅಳಿಯುವಿಕೆಗೆ ಮನುಷ್ಯನ ಅವಿವೇಕದ ಬೇಟೆಯೇ ಕಾರಣ. ಇವು 30" ಉದ್ದವಿದ್ದ ಬಹಳ ದೊಡ್ಡದಾದ ಪಕ್ಷಿಗಳು. ಇಷ್ಟು ದೊಡ್ಡ ಪಕ್ಷಿಗಳಿಗೆ ಬಹಳ ಸಣ್ಣ ರೆಕ್ಕೆಗಳಿದ್ದ ಕಾರಣ ಅವು ಹಾರಲಾರದ ಪಕ್ಷಿಗಳಾಗಿದ್ದುವು. ಗಿರಿಜನರು, ಅನಾಗರಿಕರು, ನಾಗರಿಕ ನಾವಿಕರು ಇವನ್ನು ಹೇರಳವಾಗಿ ಕೊಂದು ತಿನ್ನುತ್ತಿದ್ದರು. ಕೊಲ್ಲುವುದಕ್ಕೆ ಮದ್ದು ಗುಂಡಿನ ಅಗತ್ಯವಿರಲಿಲ್ಲ. ಹಾರಲಾರದ ಇವನ್ನು ದೊಣ್ಣೆಗಳಿಂದ ಹೊಡೆದು ಕೊಲ್ಲುತ್ತಿದ್ದರು. ಈಗ ನಮಗೆ ಉಳಿದಿರುವ ಗ್ರೇಟ್‍ಆಕ್‍ನ ಅವಶೇಷಗಳೆಂದರೆ 80 ಚರ್ಮ, 15 ಮೊಟ್ಟೆಗಳು, 25 ಹಾಗೂ ಹೀಗೂ ಕಾಣುವ ಪಕ್ಷಿಯ ಉಳಿಕೆಗಳು ಮಾತ್ರ. ಇವನ್ನು ಹೆಸರುವಾಯಾದ ಕೆಲವೇ ವಸ್ತುಸಂಗ್ರಹಾಲಯಗಳಲ್ಲಿ ಇಟ್ಟಿದ್ದಾರೆ.