ಆಂಥ್ರಸೈಟ್ ಕಲ್ಲಿದ್ದಲಿನಲ್ಲಿ ಒಂದು ವಿಧ. ಕಲ್ಲಿದ್ದಲಿನ ಇತರ ವಿಧಗಳು ಸೀಟ್, ಅಗ್ನೈಟ್, ಕ್ಯಾನಲ್ ಕಲ್ಲಿದ್ದಲು ಮತ್ತು ಬಿಟುಮಿನಸ್ ಕಲ್ಲಿದ್ದಲು. ಆಂಥ್ರಸೈಟ್ ಇವುಗಳಲೆಲ್ಲ ಅತ್ಯಂತ ಶ್ರೇಷ್ಠ ದರ್ಜೆಯದು. ಇದರ ದಹನ ಪ್ರಮಾಣ (ಫ್ಯುಯೆಲ್ ರೆಷಿಯೊ) 12 ಕ್ಕೂ ಹೆಚ್ಚು ; ಕ್ಯಾಲೊರಿಫಿಕ್ ಗುಣ 14,500-15,000 ಬಿ.ಟಿ.ಯು ; ಕಾರ್ಬನ್ ಅಂಶ 93% -95% ರಷ್ಟು ; ಮತ್ತು ಅನಿಲರೂಪದ ದಹನ ವಸ್ತುಗಳು 3% - 5% ರಷ್ಟು. ಈ ವಿಶೇಷಗುಣಗಳನ್ನು ಹೊಂದಿರುವ ಕಾರಣ ಇದನ್ನು ಅತ್ಯಂತ ಉತ್ತಮ ದರ್ಜೆಯ ಕಲ್ಲಿದ್ದಲೆಂದು ಪರಿಗಣಿಸಲಾಗಿದೆ.[]

ಆಂಥ್ರಸೈಟ್

ಬಣ್ಣದಲ್ಲಿ ಅಚ್ಚಗಪ್ಪು ಅಥವಾ ನಶ್ಯದ ಬಣ್ಣದ ಛಾಯೆಯುಳ್ಳ ಕಪ್ಪು[]. ಹಲವು ಬಾರಿ, ಬೆಳಕಿಗೆ ಹಿಡಿದಾಗ ಬಣ್ಣ ಬಣ್ಣಗಳಿಂದ ಮಿನುಗುವುದೂ ಉಂಟು. ಒರೆ ಕಪ್ಪು. ಮುಟ್ಟಿದಾಗ ಬೆರಳಿಗೆ ಅಂಟುವುದಿಲ್ಲ. ಫಳಫಳನೆ ಹೊಳೆಯುತ್ತದೆ. ಛಿದ್ರವಾದ ಭಾಗಗಳಲ್ಲಿ ಕಪ್ಪೆಚಿಪ್ಪಿನಂಥ ಗುರುತುಗಳು, ಹಲವು ವೇಳೆ ಅಸ್ಪಷ್ಟ ಗುರುತುಗಳು ಕಾಣುತ್ತವೆ. ಕಾಠಿಣ್ಯ 0.5-2.5. ಅಂದರೆ ಉಗುರಿನಿಂದ ಅಥವಾ ಸೂಜಿಯಿಂದ ಸುಲಭವಾಗಿ ಗೀರಿ ಗುರುತಿಸಬಹುದು. ಸಾಪೇಕ್ಷ ಸಾಂದ್ರತೆ 1.32-1.7. ಇದರ ರಾಸಾಯನಿಕ ಸಂಯೋಜನೆ ಬಹುಮಟ್ಟಿಗೆ ಕಾರ್ಬನ್ 95%. ಇದರೊಡನೆ ಇತರ ಧಾತುಗಳಾದ ಜಲಜನಕ, ಆಮ್ಲಜನಕ ಮತ್ತು ಸಾರಜನಕ ಬಹು ಅಲ್ಪ ಪ್ರಮಾಣದಲ್ಲಿರುತ್ತವೆ. ಇದನ್ನು ಉರಿಸಬೇಕಾದರೆ ಕೊಂಚ ಕಷ್ಟ. ಜ್ವಾಲೆ ಅಷ್ಟು ದೊಡ್ಡದಾಗಿರದೇ ಸಣ್ಣನಾಗಿದ್ದು ಬಹುಕಾಲ ಉರಿಯುತ್ತದೆ. ಹೆಚ್ಚು ಉಷ್ಣವನ್ನೂ ಒದಗಿಸುತ್ತದೆ. ಕಲ್ಲಿದ್ದಲುಗಣಿಗಳಲ್ಲಿ ಇತರ ಕಡಿಮೆ ದರ್ಜೆಯವು ಕ್ರಮೇಣ ಈ ಉತ್ತಮ ಬಗೆಯ ಕಲ್ಲಿದ್ದಲಾಗಿ ಮಾರ್ಪಟ್ಟಿರುವುದನ್ನು ಅನೇಕ ವೇಳೆ ಗುರುತಿಸಬಹುದು. ಕಲ್ಲಿದ್ದಲನ್ನು ಹೊಂದಿರುವ ಶಿಲಾಪದರ ಹೆಚ್ಚಿನ ಉಷ್ಣ ಮತ್ತು ಒತ್ತಡಗಳಿಗೆ ಒಳಗಾದ ಭಾಗಗಳಲ್ಲಿ ಈ ಮಾರ್ಪಾಡನ್ನು ಕಾಣಬಹುದು. ಹಲವು ಬಾರಿ ಹೀಗಾಗದೆ ಭೂಮಿಯ ಆಳದಲ್ಲಿ ಹುದುಗುವ ಮೊದಲೇ ಸಸ್ಯಸಂಬಂಧವಾದ ವಸ್ತುಗಳು ಕಲ್ಲಿದ್ದಲಾಗಿ ಮಾರ್ಪಟ್ಟಿರಬಹುದು.

ಆಂಥ್ರಸೈಟನ್ನು ಹೆಚ್ಚು ಉಷ್ಣೋತ್ಪತ್ತಿಮಾಡಲು ಬಳಸುತ್ತಾರೆ. ಹೊಗೆ ಬೇಡವಾದ ಯಂತ್ರೋಪಕರಣಗಳಲ್ಲಿಯೂ ಇದರ ಉಪಯೋಗವಿದೆ.

ಇದು ಮುಖ್ಯವಾಗಿ ಅಮೇರಿಕದ ಪೆನ್ಸಿಲ್‍ವೇನಿಯ[], ಇಂಗ್ಲೆಂಡಿನ ದಕ್ಷಿಣ ವೇಲ್ಸ್, ಫ್ರಾನ್ಸ್, ಜರ್ಮನಿಯ ಸ್ಯಾಕ್ಸನಿ ಮತ್ತು ರಷ್ಯದ ಕಲ್ಲಿದ್ದಲಿನ ಗಣಿಗಳಲ್ಲಿ ದೊರೆಯುತ್ತದೆ. ಪೆನ್ಸಿಲ್‍ವೇನಿಯದ ಆಂಥ್ರಸೈಟ್‍ನಲ್ಲಿ 85%-95% ರಷ್ಟು. ರಷ್ಯದಲ್ಲಿ ದೊರೆಯುವ ನಮೂನೆಯಲ್ಲಿ 94% ರಷ್ಟು ಕಾರ್ಬನ್‍ಅಂಶವಿದ್ದು ಅದು ಅತ್ಯಂತ ಉತ್ತಮ ದರ್ಜೆಯವೆಂದು ಪರಿಗಣಿತವಾಗಿವೆ. ನಮ್ಮ ದೇಶದ ಕಲ್ಲಿದ್ದಲಿನ ಗಣಿಗಳಲ್ಲಿ ಕೊಂಚಮಟ್ಟಿಗೆ ಆಂಥ್ರಸೈಟ್ ಕಂಡು ಬಂದಿದೆ.

ಉಲ್ಲೇಖನಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ