ಅಸಮ್ಮತಿ
ಅಸಮ್ಮತಿಯು (ಭಿನ್ನಾಭಿಪ್ರಾಯ) ಒಂದು ಚಾಲ್ತಿಯಲ್ಲಿರುವ ಕಲ್ಪನೆ/ವಿಚಾರ (ಉದಾ. ಸರಕಾರದ ನೀತಿಗಳು) ಅಥವಾ ವಸ್ತುವಿಗೆ (ಉದಾ. ಅಂತಹ ಕಾರ್ಯನೀತಿಗಳನ್ನು ಬೆಂಬಲಿಸುವ ವ್ಯಕ್ತಿ ಅಥವಾ ರಾಜಕೀಯ ಪಕ್ಷ) ಸಮ್ಮತಿಸದಿರುವ ಅಥವಾ ಅದನ್ನು ವಿರೋಧಿಸುವ ಮನೋಭಾವ ಅಥವಾ ತತ್ತ್ವ. ಈ ಪದದ ವಿರುದ್ಧಾರ್ಥಕ ಪದಗಳಲ್ಲಿ ಒಪ್ಪಿಗೆ, ಒಮ್ಮತ (ಯಾವುದರ ಬಗ್ಗೆಯಾದರೂ ಎಲ್ಲ ಅಥವಾ ಬಹುತೇಕ ಎಲ್ಲ ಪಕ್ಷಗಳು ಒಪ್ಪುವುದು) ಮತ್ತು ಸಮ್ಮತಿ (ಒಂದು ಪಕ್ಷವು ಮತ್ತೊಂದು ಪಕ್ಷವು ಮಾಡಿದ ಪ್ರಸ್ತಾಪಕ್ಕೆ ಸಮ್ಮತಿಸುವುದು) ಸೇರಿವೆ.
ಕೆಲವು ರಾಜಕೀಯ ವ್ಯವಸ್ಥೆಗಳಲ್ಲಿ, ಅಸಮ್ಮತಿಯನ್ನು ವಿಧ್ಯುಕ್ತವಾಗಿ ವಿರೋಧಪಕ್ಷದ ರಾಜಕೀಯದ ಮೂಲಕ ವ್ಯಕ್ತಪಡಿಸಬಹುದು. ರಾಜಕೀಯವಾಗಿ ದಮನಕಾರಿ ಸರ್ಕಾರಗಳು ಯಾವುದೇ ರೂಪದ ಅಸಮ್ಮತಿಯನ್ನು ನಿಷೇಧಿಸಬಹುದು. ಇದರಿಂದ ಅಸಮ್ಮತಿಯ ದಮನವುಂಟಾಗಿ ಸಾಮಾಜಿಕ ಅಥವಾ ರಾಜಕೀಯ ಕ್ರಿಯಾವಾದಕ್ಕೆ ಪ್ರೋತ್ಸಾಹವಾಗುವುದು. ಆರೋಗ್ಯವಂತ ಸಮಾಜವು ಅಸಮ್ಮತಿಯನ್ನು (ಭಿನ್ನಾಭಿಪ್ರಾಯ) ರಕ್ಷಿಸುವುದಷ್ಟೇ ಅಲ್ಲದೆ, ಅದನ್ನು ಪ್ರೋತ್ಸಾಹಿಸಲೂ ಬೇಕು ಎಂದು ಹಲವಾರು ಚಿಂತಕರು ವಾದಿಸಿದ್ದಾರೆ.[೧][೨]