ಅಸಗ
- ಅಗಸ ಲೇಖನಕ್ಕಾಗಿ ಇಲ್ಲಿ ನೋಡಿ.
ಅಸಗ ಪೂರ್ವಸೂರಿ ಕವಿ. ಇವನನ್ನು ಪೊನ್ನನಿಂದ ಆರಂಭಿಸಿ ಮುಂದಿನ ಹಲವಾರು ಕನ್ನಡಕವಿಗಳು ಮುಕ್ತಕಂಠದಿಂದ ಹೊಗಳಿದ್ದಾರೆ. ಕೇಶಿರಾಜನಂಥ ಲಾಕ್ಷಣಿಕ ಇವನ ಪದ್ಯಗಳನ್ನು ಲಕ್ಷ್ಯಗಳಾಗಿ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಈತ ಕನ್ನಡದಲ್ಲಿ" ಕರ್ಣಾಟ ಕುಮಾರಸಂಭವ "ಎಂಬ ಕೃತಿಯನ್ನು ರಚಿಸಿರುವುದಾಗಿ ಜಯಕೀರ್ತಿ ಹೇಳುತ್ತಾನೆ. ಆದರೂ ಇವನ ಈ ಕೃತಿಯಾಗಲಿ ಅಥವಾ ಕನ್ನಡದಲ್ಲಿ ಬರೆದಿದ್ದರೆ, ಆ ಇತರ ಕೃತಿಗಳಾಗಲಿ ಲಭ್ಯವಾಗಿಲ್ಲ.
ಅಸಗ | |
---|---|
ಜನನ | c. 800 CE |
ವೃತ್ತಿ | ಕವಿ |
ಕಾಲ | ರಾಷ್ಟ್ರಕೂಟ ಸಾಹಿತ್ಯ |
ಪ್ರಕಾರ/ಶೈಲಿ | ಜೈನ ಸಾಹಿತ್ಯ |
ಪ್ರಮುಖ ಕೆಲಸ(ಗಳು) | ವರ್ಧಮಾನ ಚರಿತ (ವರ್ಧಮಾನ ಮಹಾವೀರ ನ ಜೀವನ), c. 853 CE |
ಪ್ರಭಾವಗಳು | |
ಪ್ರಭಾವಿತರು |
ಕಾಲ
ಬದಲಾಯಿಸಿವರ್ಧಮಾನ ಮಹಾವೀರ ತೀರ್ಥಂಕರನ ಜೀವನವನ್ನು ವಸ್ತುವಾಗಿ ಉಳ್ಳ "ವರ್ಧಮಾನ ಚರಿತ ಮತ್ತು ಶಾಂತಿನಾಥ ತೀರ್ಥಂಕರನ ಜೀವನವನ್ನು ನಿರೂಪಿಸುವ "ಶಾಂತಿಪುರಾಣ" ಎಂಬ ಅವನ ಸಂಸ್ಕೃತಕೃತಿಗಳು ದೊರಕಿವೆ. ಈ ಸಂಸ್ಕೃತಕವಿ ಅಸಗನೂ ಕನ್ನಡಕವಿ ಅಸಗನೂ ಅಭಿನ್ನರು ಎಂದು ಹೆಸರಿನ ಹೋಲಿಕೆಯಿಂದ ನಂಬಬಹುದಾಗಿದೆ. ವರ್ಧಮಾನಚರಿತವನ್ನು ಸಂವತ್ಸರ 910ರಲ್ಲಿ ಬರೆದುದಾಗಿ ಕವಿ ಹೇಳಿಕೊಂಡಿದ್ದಾನೆ. ಈ ಕೃತಿಯನ್ನು ಬರೆದಮೇಲೆ ಶಾಂತಿಪುರಾಣವನ್ನು ಬರೆದಿರುವುದರಿಂದಲೂ ಈ ಶಾಂತಿ ಪುರಾಣವನ್ನೂ ಇತರ ಕೃತಿಗಳನ್ನೂ ನೋಡಿರಬಹುದಾದ ಪೊನ್ನ ತನ್ನ ಕನ್ನಡ ಶಾಂತಿಪುರಾಣವನ್ನು ಸು. 950ರಲ್ಲಿ ರಚಿಸಿರುವುದರಿಂದಲೂ ಈ ತೇದಿಗಿಂತ ಹಿಂದೆಯೇ ಅಸಗ ಸಾಕಷ್ಟು ಪ್ರಸಿದ್ಧನಾಗಿರಬೇಕು. ಆದ್ದರಿಂದ ಸಂವತ್ಸರ 910 ಎಂಬುದು ಶಾಲಿವಾಹನವಲ್ಲ, ವಿಕ್ರಮ ಸಂವತ್ಸರ ಎಂದು ಆ.ನೇ.ಉಪಾಧ್ಯೆ ಅವರು ಸಕಾರಣವಾಗಿ ಊಹಿಸಿ, ವರ್ಧಮಾನ ಚರಿತದ ರಚನೆಯ ಕಾಲ ಪ್ರ.ಶ. 853 ಎಂದು ತೀರ್ಮಾನಿಸಿದ್ದಾರೆ.ಆದುದರಿಂದ ಇವನ ಕಾಲವನ್ನು ಒಂಭತ್ತನೆಯ ಶತಮಾನ ಎಂದು ನಿರ್ಣಯಿಸಲಾಗಿದೆ. y[೧]
ಜೀವನ
ಬದಲಾಯಿಸಿವರ್ಧಮಾನಚರಿತ ಮತ್ತು ಶಾಂತಿಪುರಾಣಗಳಲ್ಲಿ ಕವಿ ತನ್ನ ಸ್ವಂತ ವಿಷಯಗಳನ್ನು ಹೇಳಿಕೊಂಡಿದ್ದಾನೆ. ಪಟುಮತಿ ಅವನ ತಂದೆ. ವೈರೆತಿ ಅವನ ತಾಯಿ. ಇಬ್ಬರೂ ನಿಷ್ಠಾವಂತ ಜೈನರು. ಶಬ್ದ ಸಮಯಾರ್ಣವಪಾರಂಗತನಾಗಿದ್ದ ನಾಗನಂದ್ಯಾಚಾರ್ಯ ಅಸಗನ ಗುರು. ಪ್ರ.ಶ. 853ರಲ್ಲಿ ಭಾವಕೀರ್ತಿಮುನಿಯ ಸಾನ್ನಿಧ್ಯದಲ್ಲಿ ವರ್ಧಮಾನಚರಿತವನ್ನು ಕವಿ ಬರೆದು ಮುಗಿಸಿದ. ಈ ಕೃತಿರಚನೆಗೆ ಕಾರಣಕರ್ತಳಾದವಳು ಮೌದ್ಗಲ್ಯ (ಮಾಂದ್ಗಲ್ಯ) ಪರ್ವತದ ತುದಿಯಲ್ಲಿ ವಾಸವಾಗಿದ್ದ ಸಂಪತ್ ಎಂಬ ಶ್ರಾವಕಿ (ಈ ಪರ್ವತ ಯಾವುದು ಎಂಬುದಿನ್ನೂ ನಿರ್ಧಾರವಾಗಬೇಕಾಗಿದೆ). ಬಳಿಕ ಆತ ಚೋಡಳ ದೇಶಕ್ಕೆ ಬಂದು ಅಲ್ಲಿ ಶ್ರೀನಾಥನ ಸಾಮ್ರಾಜ್ಯದಲ್ಲಿ ವಿರಲಾ ಎಂಬ ಪಟ್ಟಣದಲ್ಲಿ ಜೈನಧರ್ಮ ಸಂಬಂಧಿಯಾದ ಎಂಟು ಕೃತಿಗಳನ್ನು ರಚಿಸಿದ. ಅಸಗನಿಗೆ ಜಿನಾಪ ಎಂಬ ಹೆಸರಿನ ಮಿತ್ರನಿದ್ದ. ಈತ ಬ್ರಾಹ್ಮಣನಾದರೂ ಜೈನಧರ್ಮದಲ್ಲಿ ಆಸಕ್ತನಾಗಿದ್ದ (ಬಹುಶಃ ಆತ ಜೈನಬ್ರಾಹ್ಮಣ). ತನಗೆ ದೀರ್ಘ ಕೃತಿಯೊಂದನ್ನು ರಚಿಸಲು ಆತ್ಮವಿಶ್ವಾಸ ಸಾಲದೆ ಹೋಗಿದ್ದರೂ ತನ್ನ ಗೆಳೆಯನಿಗೆ ಪುರಾಣಗಳ ವಿಷಯದಲ್ಲಿ ಇದ್ದ ಶ್ರದ್ಧೆಯ ಫಲವಾಗಿ ಅಸಗ ಶಾಂತಿಪುರಾಣವನ್ನು ರಚಿಸಿದ. ಇವನ ವರ್ಧಮಾನಚರಿತವನ್ನು ಧವಲನೆಂಬ ಅಪಭ್ರಂಶ ಕವಿ ತನ್ನ ಹರಿವಂಶ ಪುರಾಣದಲ್ಲಿ ಪ್ರಶಂಸಿಸಿದ್ದಾನೆ. ವರ್ಧಮಾನಚರಿತಕ್ಕೆ ಸುಮಾರು 17ನೆಯ ಶತಮಾನಕ್ಕೆ ಸೇರಿದ ಒಂದು ಟೀಕೆಯಿದೆ.
ಕೃತಿಗಳು
ಬದಲಾಯಿಸಿಮೇಲೆ ಹೇಳಿದಂತೆ ಅಸಗ ಆ ಎರಡು ಸಂಸ್ಕೃತ ಕಾವ್ಯಗಳನ್ನಲ್ಲದೆ ಇನ್ನೂ ಎಂಟು ಕೃತಿಗಳನ್ನು ರಚಿಸಿದ್ದಾನೆ.[೨]. ಅವು ಯಾವ ಭಾಷೆಯಲ್ಲಿವೆಯೋ ತಿಳಿಯದು. ಪೊನ್ನ ತನ್ನ ಶಾಂತಿಪುರಾಣದಲ್ಲಿ ತಾನು ಕನ್ನಡಗವಿತೆಯಲ್ಲಿ ಅಸಗನಿಗಿಂತ ನೂರ್ಮಡಿ ಎಂದು ಹೇಳಿಕೊಂಡಿದ್ದಾನೆ. ದುರ್ಗಸಿಂಹ ಮತ್ತು ನಯಸೇನರು ಅಸಗನ ದೇಸಿಯನ್ನು ಕೊಂಡಾಡಿದ್ದಾರೆ. ವರ್ಧಮಾನಪುರಾಣದ ಕರ್ತೃ ಆಚಣ್ಣ (ಸು. 1195) ಇವನನ್ನು ಸ್ಮರಿಸಿದ್ದಾನೆ. ಬ್ರಹ್ಮಶಿವ (ಸು. 1180) ಪೊನ್ನ ಪಂಪರ ಸಾಲಲ್ಲಿ ಹೇಳಿರುವ ರಜಕ ಯಾರೂ ಅಲ್ಲ, ಅಸಗನೇ. ಕೇಶಿರಾಜ (ಸು. 1260) ತನ್ನ ಶಬ್ದಮಣಿದರ್ಪಣದಲ್ಲಿ ಅಸಗನಿಂದಲೂ ಭಾಷಾಪ್ರಯೋಗಗಳನ್ನು ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಇಷ್ಟಾದರೂ ಅಸಗ ಕನ್ನಡದಲ್ಲಿ ಬರೆದದ್ದೇನು ಎಂಬುದು ಮಾತ್ರ ತಿಳಿದುಬಂದಿಲ್ಲ. ಜಯಕೀರ್ತಿ ತನ್ನ ಛಂದೋನುಶಾಸನದ ಏಳನೆಯ ಅಧಿಕಾರದಲ್ಲಿ ಸಮಾನಾಕ್ಷರ (ದೊರೆಯಕ್ಕರ) ಎಂಬ ಅಂಶವೃತ್ತ ಅಸಗನ ಕರ್ಣಾಟ ಕುಮಾರಸಂಭವದಲ್ಲಿ ಬಳಕೆಯಾಗಿದೆ ಎಂದು ಹೇಳುತ್ತಾನೆ. (ಅಸಗಾಖ್ಯ ಕವಿನಾ ಪ್ರತಿಪಾದಿತಂ ನನು ಕರ್ಣಾಟ ಕುಮಾರಸಂಭವ ಕಾವ್ಯೇ). ಹಾಗೆಯೇ ಛಂದೋವತಂಸ ಎಂಬ ಇನ್ನೊಂದು ಅಂಶವೃತ್ತ ಕುಮಾರಸಂಭವ ಮುಂತಾದ ಕಾವ್ಯಗಳಲ್ಲಿದೆ ಎನ್ನುತ್ತಾನೆ (ಛಂದೋವತಂಸ ನಾಮೇತಿ ಚತುಷ್ಪದಿಕಾ ಸಂದೃಷ್ಟಾಸೌ ಕುಮಾರಸಂಭವಾದೌ). ಇದರಿಂದ ಕೊನೆಗೂ ಅಸಗನ ಕನ್ನಡ ಕೃತಿಯೊಂದರ ಹೆಸರು ದೊರೆತಂತಾಯಿತು. ಆದರೆ ಆ ಕಾವ್ಯದ ಸ್ವರೂಪವೇನೋ ತಿಳಿಯದು. ಹೆಸರನ್ನು ನೋಡಿದರೆ ನಮಗೆ ಸಹಜವಾಗಿ ಸಂಸ್ಕೃತಕವಿ ಕಾಳಿದಾಸನ ಕುಮಾರಸಂಭವ ಜ್ಞಾಪಕಕ್ಕೆ ಬರುತ್ತದೆ. ಇದು ಅದರ ಅನುವಾದವಿರಬಹುದೇ? ನಮಗೆ ತಿಳಿದಮಟ್ಟಿಗೆ ಯಾವ ಪ್ರಾಚೀನ ಕನ್ನಡ ಕವಿಯೂ ಸಂಸ್ಕೃತ ಕೃತಿಯೊಂದನ್ನು ಅದು ಇರುವಂತೆಯೇ ಅನುವಾದಿಸಿಲ್ಲ. ಹಾಗಾದರೆ ಇದು ಅದರ ರೂಪಾಂತರವೇ ಇರಬಹುದು. ಆದರೆ ಎಂಥ ರೂಪಾಂತರ? ತಿಳಿಯದು. ಅದರ ವಸ್ತು ಶಿವಪಾರ್ವತಿಯರ ವಿವಾಹಕ್ಕೆ ಸಂಬಂಧಿಸಿದ್ದು ಎಂದು ಭಾವಿಸಲು ಅಭ್ಯಂತರವಿಲ್ಲ. ಎರಡನೆಯ ನಾಗವರ್ಮನ (ಸು. 1145) ಕಾವ್ಯಾವಲೋಕನದಲ್ಲಿ ಶಿವ ಪಾರ್ವತಿಯರಿಗೆ ಸಂಬಂಧಿಸಿದ ಸುಮಾರು ಹದಿಮೂರು ಪದ್ಯಗಳಿವೆ. ಮಲ್ಲಿಕಾರ್ಜುನನ (ಸು. 1245) ಸೂಕ್ತಿ ಸುಧಾರ್ಣವದಲ್ಲಿ ಶಿವಶಿವೆಯರನ್ನು ಕುರಿತ ಕೆಲವು ಪದ್ಯಗಳಿವೆ. ಕೇಶಿರಾಜನ ಶಬ್ದಮಣಿ ದರ್ಪಣದಲ್ಲೂ ಅವರನ್ನು ಕುರಿತ ಪದ್ಯಗಳು ಪದ್ಯಖಂಡಗಳು ಇವೆ. ಇವೆಲ್ಲವೂ ಅಲ್ಲದಿದ್ದರೂ ಕೆಲವಾದರೂ ಅಸಗನ ಕರ್ಣಾಟ ಕುಮಾರಸಂಭವ ಕಾವ್ಯಕ್ಕೆ ಸೇರಿದ ಪದ್ಯಗಳಿರಬಹುದು ಎಂದು ವಿದ್ವಾಂಸರು ಊಹೆ ಮಾಡಿದ್ದಾರೆ. ಆದರೆ ಅಲ್ಲಿ ಒಂದು ಮಾತನ್ನು ಹೇಳುವುದು ಆವಶ್ಯಕ. ಆ ಪದ್ಯಗಳನ್ನು ಬರೆದ ಕವಿ ಒಬ್ಬನೇ ಆಗಿದ್ದರೆ ಅವನಿಗೆ ಶಿವನಲ್ಲಿ ಅಪಾರವಾದ ಗೌರವ, ಭಕ್ತಿಭಾವನೆಗಳಿವೆ. ಕಾವ್ಯಾವಲೋಕನದಲ್ಲಿ ಶಿವ ಮತ್ತು ಪಾರ್ವತಿಯರಿಗೆ ಇಂದ್ರ ನಮಸ್ಕಾರ ಮಾಡಿದುದರ ವರ್ಣನೆಯನ್ನಾಗಲಿ, ಶಿವ ನಮ್ಮನ್ನು ಕರುಣಿಸಲಿ ಎಂಬ ಪ್ರಾರ್ಥನಾ ಪದ್ಯವನ್ನಾಗಲಿ ನೋಡಬಹುದು. ಅರ್ಧನಾರೀಶ್ವರನ ವರ್ಣನೆಯಲ್ಲಿ ವ್ಯಂಗ್ಯ ಕುಚೋದ್ಯಗಳ ಸುಳಿವೂ ಇಲ್ಲ. ಮತ್ತು ಎಲ್ಲಿಯೂ ಜೈನಧರ್ಮದ ಛಾಯೆಯೂ ಕಂಡುಬರುವುದಿಲ್ಲ. ಅಲ್ಲಿ ಧ್ವನಿತವಾಗಿರುವ ಕಥೆ ಎಲ್ಲರಿಗೂ ಪರಿಚಿತವಾದ ಶಿವಪಾರ್ವತಿಯರ ವಿವಾಹ. ಜೈನನಾದ ಅಸಗ ಹೀಗೆ, ಇಷ್ಟು ಅಪಾರ ಭಕ್ತಿಯಿಂದ ಅನ್ಯದೈವವೊಂದರ ಕತೆಯನ್ನು ರಚಿಸಲು ಸಾಧ್ಯವೇ ಎಂಬ ಸಂದೇಹವೂ ಮೂಡದಿರದು. ಏಕೆ ಸಾಧ್ಯವಿಲ್ಲ ಎಂದು ಉತ್ತರವನ್ನು ಕೊಡಲೂ ಸಾಧ್ಯ. ಆ ಪದ್ಯಗಳು ಅಸಗನವು ಇರಬಹುದೇ ಎಂದು ಊಹಿಸುವಾಗ ಮೇಲಿನ ಸಂಗತಿ ಮನಸ್ಸಿನಲ್ಲಿದ್ದರೆ ಒಳ್ಳೆಯದು. ಒಟ್ಟಿನಲ್ಲಿ ಈತನ ಕನ್ನಡ ಕೃತಿಗಳು ದೊರೆಯುವವರೆಗೂ ಇವನ ವಿಷಯವಾಗಿ ಹೆಚ್ಚೇನನ್ನೂ ಹೇಳಲಾಗುವುದಿಲ್ಲ.
ಉಲ್ಲೇಖಗಳು
ಬದಲಾಯಿಸಿ- ↑ Singh, Nagendra Kr; Baruah, Bibhuti (2004), Encyclopaedic Dictionary of Pali Literature, Global Vision Publishing, p. 96, ISBN 978-81-87746-67-6
- ↑ Dundas, Paul (2002). The Jains-Library of religious beliefs and practices. Routledge. ISBN 0-415-26606-8.