ಅಸಂಬದ್ಧತೆ ಯಾವುದೇ ಸುಸಂಬದ್ಧ ಅರ್ಥವಿಲ್ಲದಿರುವ ಮಾತು, ಬರವಣಿಗೆ, ಅಥವಾ ಯಾವುದೇ ಬೇರೆ ಸಾಂಕೇತಿಕ ವ್ಯವಸ್ಥೆಯ ಮೂಲಕ ಒಂದು ಸಂವಹನ. ಕೆಲವೊಮ್ಮೆ ಸಾಮಾನ್ಯ ಬಳಕೆಯಲ್ಲಿ, ಅಸಂಬದ್ಧತೆಯು ಅಸಂಗತತೆ ಅಥವಾ ಹಾಸ್ಯಾಸ್ಪದಕ್ಕೆ ಸಮಾನಾರ್ಥಕವಾಗಿರುತ್ತದೆ. ಅನೇಕ ಕವಿಗಳು, ಕಾದಂಬರಿಕಾರರು ಮತ್ತು ಗೀತಸಾಹಿತಿಗಳು ತಮ್ಮ ಕೃತಿಗಳಲ್ಲಿ ಅಸಂಬದ್ಧತೆ ಬಳಸಿದ್ದಾರೆ, ಕೆಲವೊಮ್ಮೆ ಶುದ್ಧ ಹಾಸ್ಯ ಮನರಂಜನೆ ಅಥವಾ ವಿಡಂಬನೆಯಿಂದ ಹಿಡಿದು ಭಾಷೆ ಅಥವಾ ತರ್ಕದ ಬಗ್ಗೆ ಒಂದು ವಿವರವನ್ನು ಸ್ಪಷ್ಟಪಡಿಸುವವರೆಗಿನ ಕಾರಣಗಳಿಗಾಗಿ ಅದನ್ನು ಬಳಸಿ ಸಂಪೂರ್ಣ ಕೃತಿಗಳನ್ನು ಸೃಷ್ಟಿಸಿದ್ದಾರೆ. ಭಾಷೆಯ ತತ್ವಶಾಸ್ತ್ರ ಮತ್ತು ವಿಜ್ಞಾನದ ತತ್ವಶಾಸ್ತ್ರದಲ್ಲಿ, ಅಸಂಬದ್ಧತೆಯನ್ನು ಅರ್ಥ ಅಥವಾ ಅರ್ಥಪೂರ್ಣತೆಯಿಂದ ಪ್ರತ್ಯೇಕಿಸಲಾಗುತ್ತದೆ, ಮತ್ತು ಅರ್ಥಪೂರ್ಣತೆಯನ್ನು ಅಸಂಬದ್ಧತೆಯಿಂದ ಪ್ರತ್ಯೇಕಿಸಲು ಸುಸಂಗತ ಹಾಗೂ ಸ್ಥಿರ ವಿಧಾನದೊಂದಿಗೆ ಬರಲು ಪ್ರಯತ್ನಗಳನ್ನು ಮಾಡಲಾಗಿದೆ. ಸಂಕೇತವನ್ನು ಸದ್ದಿನಿಂದ ಪ್ರತ್ಯೇಕಿಸುವುದಕ್ಕೆ ಸಂಬಂಧಿಸಿದಂತೆ ಇದು ಗೂಢಲಿಪಿಶಾಸ್ತ್ರದಲ್ಲಿ ಅಧ್ಯಯನದ ಒಂದು ಪ್ರಮುಖ ಕ್ಷೇತ್ರವಾಗಿದೆ.

ಗೂಢಲಿಪಿ ವಿಶ್ಲೇಷಣೆಕಾರರು ಒಂದು ನಿರ್ದಿಷ್ಟ ಪಠ್ಯವು ವಾಸ್ತವದಲ್ಲಿ ಅಸಂಬಂದ್ಧತೆಯೊ ಅಥವಾ ಅಲ್ಲವೊ ಎಂದು ನಿರ್ಧರಿಸಲು ಕ್ರಮಾವಳಿಗಳನ್ನು ರೂಪಿಸಿದ್ದಾರೆ. ಈ ಕ್ರಮಾವಳಿಗಳು ಪ್ರಾತಿನಿಧಿಕವಾಗಿ ಪಠ್ಯದಲ್ಲಿ ಪುನರಾವರ್ತನೆಗಳು ಹಾಗೂ ಶಬ್ದ ಬಾಹುಳ್ಯದೋಷದ ಉಪಸ್ಥಿತಿಯನ್ನು ವಿಶ್ಲೇಷಿಸುತ್ತವೆ; ಅರ್ಥಪೂರ್ಣ ಪಠ್ಯಗಳಲ್ಲಿ, ಕೆಲವು ಮೇಲಿಂದ ಮೇಲೆ ಬಳಸಲಾಗುವ ಶಬ್ದಗಳು ಪುನರಾವರ್ತಿಸುತ್ತವೆ, ಉದಾಹರಣೆಗೆ ಕನ್ನಡ ಭಾಷೆಯಲ್ಲಿ ಮತ್ತು, ಅಥವಾ, ಇದೆ ಇತ್ಯಾದಿ. ಅಕ್ಷರಗಳು, ವಿರಾಮ ಚಿಹ್ನೆಗಳು ಮತ್ತು ಅಂತರ ಚಿಹ್ನೆಗಳ ಯಾದೃಚ್ಛಿಕ ಹರಡುವಿಕೆಯು ಈ ಕ್ರಮರಾಹಿತ್ಯಗಳನ್ನು ಪ್ರದರ್ಶಿಸುವುದಿಲ್ಲ. ಜ಼ಿಪ್ಫ್ ನಿಯಮವು ಈ ವಿಶ್ಲೇಷಣೆಯನ್ನು ಗಣಿತೀಯವಾಗಿ ಹೇಳಲು ಪ್ರಯತ್ನಿಸುತ್ತದೆ. ತದ್ವಿರುದ್ಧವಾಗಿ, ಗೂಢಲಿಪಿಕಾರರು ಪ್ರಾತಿನಿಧಿಕವಾಗಿ ತಮ್ಮ ಸಂಕೇತ ಪಠ್ಯಗಳನ್ನು ಯಾದೃಚ್ಛಿಕ ವಿತರಣೆಗಳನ್ನು ಹೋಲುವಂತೆ ಮಾಡಲು ಪ್ರಯತ್ನಿಸುತ್ತಾರೆ, ಗೂಢಲಿಪಿ ವಿಶ್ಲೇಷಣೆಗೆ ಬಿರುಕುಗಳನ್ನು ಕೊಡಬಹುದಾದ ಸೂಚಕ ಪುನರಾವರ್ತನೆಗಳು ಮತ್ತು ಮಾದರಿಗಳನ್ನು ತಪ್ಪಿಸಲು.