ಅಷ್ಟೋತ್ತರ
ನೂರೆಂಟು ನಾಮಗಳಿಂದ ದೇವರನ್ನು ಸ್ತುತಿಸುವುದನ್ನು ಈ ಹೆಸರಿನಿಂದ ಕರೆಯುತ್ತೇವೆ. ಅಷ್ಟೋತ್ತರ ಎಂದರೆ ಎಂಟು ಅಧಿಕ ಎಂದು ಮಾತ್ರ ಅರ್ಥವಾಗುತ್ತದೆ. ಆದರೆ ಇದರ ತಾತ್ಪರ್ಯ ಎಂಟು ಅಧಿಕವಾದ ನೂರು ಎಂದು. ಅಷ್ಟೋತ್ತರ ಎನ್ನುವುದು ಅಷ್ಟೋತ್ತರ ಶತನಾಮಾವಳಿ ಎಂಬುದರ ಹ್ರಸ್ವರೂಪ.
ಈ ನಾಮಗಳ ಸ್ವರೂಪವನ್ನು ತಾತ್ತ್ವಿಕವಾಗಿ ಕಂಡ ಮಹರ್ಷಿಗಳು ಅವನ್ನು ಶ್ಲೋಕರೂಪದಲ್ಲಿ ರಚಿಸಿ ಉಳಿದವರಿಗೂ ಅವುಗಳ ಪ್ರಯೋಜನ ಲಭಿಸಲಿ ಎಂಬ ಅಭಿಪ್ರಾಯದಿಂದ ಅವನ್ನು ಪುರಾಣಾದಿಗಳಲ್ಲಿ ತಿಳಿಸಿರುತ್ತಾರೆ. ಈ ನಾಮಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಓಂಕಾರದೊಡನೆ ಹೇಳಿ ಪುಷ್ಪಾದಿಗಳಿಂದ ಅರ್ಚಿಸುತ್ತಾರೆ. ಶ್ಲೋಕರೂಪದಿಂದಲೂ ಅಷ್ಟೋತ್ತರವನ್ನು ಕೆಲವರು ನಿತ್ಯವೂ ಪಠಿಸುವುದುಂಟು. ಆದರೂ ಇದರ ಬಳಕೆ ಅರ್ಚನೆಯಲ್ಲೇ ಅಧಿಕ. ಪ್ರತಿಯೊಂದು ವ್ರತದಲ್ಲೂ ಆಯಾ ವ್ರತಾಂಗವಾಗಿ ಒಂದೊಂದು ಅಷ್ಟೋತ್ತರಪೂಜೆ ಇದ್ದೇ ಇರುತ್ತದೆ.
ಸಾಮಾನ್ಯವಾಗಿ ಶೈವಪುರಾಣಗಳಲ್ಲಿ ಶೈವದೇವತಾ ಅಷ್ಟೋತ್ತರಗಳನ್ನೂ ವೈಷ್ಣವ ಪುರಾಣಗಳಲ್ಲಿ ವೈಷ್ಣವದೇವತಾ ಅಷ್ಟೋತ್ತರಗಳನ್ನೂ ಕಾಣಬಹುದು. ದೇವತಾರ್ಚನೆಗಾಗಿಯೇ ಮೀಸಲಾಗಿರುವ ಅಷ್ಟೋತ್ತರ ಕಾಲಕ್ರಮದಲ್ಲಿ ಇತರ ಪುಜೆಗಳಲ್ಲೂ ರೂಪು ಗೊಂಡಿದೆ. ಕೃಷ್ಣಾಷ್ಟೋತ್ತರ, ಲಕ್ಷ್ಮೀಅಷ್ಟೋತ್ತರ, ರಾಮಾಷ್ಟೋತ್ತರ, ಶಿವಾಷ್ಟೋತ್ತರ, ಭೈರವಾಷ್ಟೋತ್ತರ, ಗಣಪತಿಅಷ್ಟೋತ್ತರ, ನವಗ್ರಹಅಷ್ಟೋತ್ತರ-ಹೀಗೆಯೇ ಇನ್ನೂ ಅನೇಕ ಅಷ್ಟೋತ್ತರಗಳಿವೆ.
ಪ್ರತಿ ಅಷ್ಟೋತ್ತರದ ಆರಂಭದಲ್ಲೂ ಋಷಿ, ಛಂದಸ್ಸು, ದೇವತೆಗಳ ವಿವರವಿರುತ್ತದೆ. ಬಳಿಕ ನಿರ್ದಿಷ್ಟ ದೇವತೆಯ ಧ್ಯಾನಶ್ಲೋಕ, ಕೊನೆಯಲ್ಲಿ ಫಲಶ್ರುತಿ ಇರುತ್ತದೆ. ಅಷ್ಟೋತ್ತರನಾಮಗಳನ್ನು ಹೇಳಿ ದೇವತಾರ್ಚನೆಮಾಡುವುದರಿಂದ ಅಥವಾ ಆ ನಾಮಗಳನ್ನು ಉಚ್ಚರಿಸಿದ ಮಾತ್ರದಿಂದ ಪಾತಕಗಳು ನಶಿಸಿ ಅಭೀಷ್ಟಗಳು ಫಲಿಸುತ್ತವೆ ಎಂದು ಫಲಶ್ರುತಿ ತಿಳಿಸುತ್ತದೆ.