ಅಶೋಕ ಪೈ ಪ್ರಸಿದ್ಧ ಚಿಕಿತ್ಸಕ, ಮನೋವಿಜ್ಞಾನಿ, ಮನೋವೈದ್ಯ, ಲೇಖಕ, ಸಮಾಜಸೇವಕ ಹಾಗೂ ಚಲನಚಿತ್ರ ಸಾಹಿತಿ, ನಿರ್ಮಾಪಕ. 1946 ಡಿಸೆಂಬರ್ 30ರಂದು ಶಿವಮೊಗ್ಗದಲ್ಲಿ ಜನಿಸಿದರು.

ಜೀವನ, ಶಿಕ್ಷಣ, ವೃತ್ತಿಸಂಪಾದಿಸಿ

ತಂದೆ ಕಟೀಲು ಅಪು ಪೈ, ತಾಯಿ ವಿನೋದಾಬಾಯಿ. ಅಶೋಕ ಪೈ ಅವರ ಆರಂಭಿಕ ಶಿಕ್ಷಣ ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಕಾನ್ವೆಂಟ್, ದೇಶೀಯ ವಿದ್ಯಾಶಾಲೆ ಮತ್ತು ಸಹ್ಯಾದ್ರಿ ಕಾಲೇಜುಗಳಲ್ಲಿ ನಡೆಯಿತು. ವೈದ್ಯಕೀಯ ಶಿಕ್ಷಣವನ್ನು ಬೆಳಗಾಂವಿಯ ಜವಾಹರಲಾಲ ನೆಹರು ವೈದ್ಯಕೀಯ ವಿದ್ಯಾಲಯದಲ್ಲಿ ಮುಗಿಸಿದರು. ಚಿಕಿತ್ಸಕ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ನಿಮ್ಹಾನ್ಸ್‌ನಿಂದ ಪಡೆದರು. ಅನಂತರ ವರ್ತನಾ ವೈದ್ಯಕೀಯ ಸಲಹೆ ಮತ್ತು ಮಾನಸಿಕ ಚಿಕಿತ್ಸೆಯಲ್ಲಿ ಫೆಲೋಶಿಪ್ ಮತ್ತು ಡಿಪ್ಲೊಮೊಗಳನ್ನು ಅಮೆರಿಕದ ಪ್ರತಿಷಿವಿತ ಅಂತಾರಾಷ್ಟ್ರೀಯ ಅಕಾಡೆಮಿ ಆಫ್ ಬಿಹೆವಿಯರಲ್ ಮೆಡಿಸನ್ (ಡಲ್ಲಾಸ್) ಸಂಸ್ಥೆಯಿಂದ ಪಡೆದರು. ಜವಾಹರಲಾಲ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಸೈಕೋ ಫಾರ್ಮಾಕಾಲಜಿ ಅಧ್ಯಾಪಕರಾಗಿ ಕೆಲಕಾಲ ಸೇವೆಸಲ್ಲಿಸಿದರು. ಮಣಿಪಾಲಿನ ಕಸ್ತೂರ ಬಾ ವೈದ್ಯಕೀಯ ವಿದ್ಯಾಲಯದ ಮನೋವೈದ್ಯಕೀಯ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ನೇಮಕಗೊಂಡರು (1974-75). ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ದುಡಿದರು (1975-79). ಅನಂತರ ಸರ್ಕಾರಿ ಕೆಲಸವನ್ನು ತ್ಯಜಿಸಿ ತಮ್ಮದೇ ಆದ ಮಾನಸ ನರ್ಸಿಂಗ್ ಹೋಂ ಶಿವಮೊಗ್ಗದಲ್ಲಿಯೇ ಪ್ರಾರಂಭಿಸಿದರು. ಇಂದು ಈ ನರ್ಸಿಂಗ್ ಹೋಂದಕ್ಷಿಣ ಭಾರತದ ಅತಿ ದೊಡ್ಡ ಮನೋರೋಗ ಚಿಕಿತ್ಸಾ ಕೇಂದ್ರವೆನಿಸಿದ್ದು ಅಂತಾರಾಷ್ಟ್ರೀಯ ಸಲಹಾ ಕೇಂದ್ರವಾಗಿಯೂ ಆಯ್ಕೆಗೊಂಡಿದೆ. ಪೈ ಅವರು ಅಮೆರಿಕದ ಕೊಲರಾಡೋ ವಿಶ್ವವಿದ್ಯಾಲಯದ ಅಂಗಸಂಸ್ಥೆ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಬಿಹೆವಿಯರಲ್ ಮೆಡಿಸಿನ್ ಕೌನ್ಸಿಲಿಂಗ್ ಅಂಡ್ ಸೈಕೋ ಥೆರಪಿ ಸಂಸ್ಥೆಯ ಅಂತಾರಾಷ್ಟ್ರೀಯ ಪ್ರಾಂತೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ರಜನಿ ಪೈ ಇವರ ಪತ್ನಿ. ಇವರಿಗೆ ಪ್ರೀತಿ ಎಂಬ ಓರ್ವ ಪುತ್ರಿ ಇದ್ದು ಅವರೂ ವೈದ್ಯರಾಗಿದ್ದಾರೆ.

ಸಾಹಿತ್ಯ ಮತ್ತು ಸಿನೆಮಾ ಕ್ಷೇತ್ರದಲ್ಲಿಸಂಪಾದಿಸಿ

ಇವರು ಕನ್ನಡದಲ್ಲಿ ಮನೋ ವಿಜ್ಞಾನಕ್ಕೆ ಸಂಬಂದಿಸಿದಂತೆ ಹಲವು ವೈಚಾರಿಕ ಹಾಗೂ ಸೃಜನಶೀಲ ಕೃತಿ ಗಳನ್ನು ರಚಿಸಿದ್ದಾರೆ. ಮಾನಸ, ನಿಮ್ಮದು ಸಮಸ್ಯೆಯ ಮಗುವೇ, ಉಷಾಕಿರಣ, ಹಾಸ್ಯರಶ್ಮಿ, ಚಿತ್ತ ವಿಚಿತ್ರ, ಮನೋವೈಜ್ಞಾನಿಕ ಸತ್ಯ ಕಥೆಗಳು, ಆಶಾಕಿರಣ, ಮನೋ ಲೋಕ, ಮಕ್ಕಳ ಮನಸ್ಸು, ಆಘಾತ, ಚಿತ್ತಚೇತನ-ಇವು ಕೆಲವು ಮುಖ್ಯ ಕೃತಿಗಳು. ಮಾನಸ ಚಿತ್ರ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಇವರು ಕನ್ನಡ ಚಲನಚಿತ್ರಗಳನ್ನೂ ನಿರ್ಮಿಸಿದ್ದಾರೆ. ಮಾನಸಿಕ ಸಮಸ್ಯೆ ಕುರಿತಂತೆ ವೈಜ್ಞಾನಿಕವಾದ ಬೆಳಕು ಚೆಲ್ಲಿ ಸಮಾಜಕ್ಕೆ ಸಕಾರಾತ್ಮ ಸಂದೇಶ ನೀಡುವುದು ಇವರ ಉದ್ದೇಶ. ಇವರು ನಿರ್ಮಿಸಿದ ಕಾಡಿನ ಬೆಂಕಿ ಮನೋ ಲೈಂಗಿಕ ಸಮಸ್ಯೆಯನ್ನು ಕುರಿತದ್ದು. ಈ ಚಿತ್ರಕ್ಕೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಲಭಿಸಿದೆ (1988-89). ಮಕ್ಕಳ ಮಾನಸಿಕ ಸಮಸ್ಯೆ ಕುರಿತಂತೆ ನಿರ್ಮಿಸಲಾದ ಉಷಾಕಿರಣ ರಾಜ್ಯ ಪ್ರಶಸ್ತಿಯನ್ನೂ ಪ್ರತಿಷಿವಿತ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಗಳಿಸಿದೆ. ಈ ಚಿತ್ರ ಲಂಡನ್ ಮತ್ತು ಅಮೆರಿಕದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲೂ ಪ್ರದರ್ಶನಗೊಂಡಿತು (1995). ಆಘಾತ ಇವರ ಇನ್ನೊಂದು ಚಿತ್ರ. ಇದಕ್ಕೆ ವಿಶೇಷ ರಾಜ್ಯ ಪ್ರಶಸ್ತಿ ಲಭಿಸಿದೆ. ಇವರು ದೂರದರ್ಶನಕ್ಕಾಗಿ ಹಿಂದಿಯಲ್ಲಿ ಅಂತರಾಳ ಎಂಬ ಧಾರಾವಾಹಿಯನ್ನು ನಿರ್ಮಿಸಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳುಸಂಪಾದಿಸಿ

ವೈದ್ಯಕೀಯ ರಂಗದಲ್ಲಿನ ಇವರ ಸಾಧನೆಗಾಗಿ ಇವರಿಗೆ ಅನೇಕ ಗೌರವ, ಪ್ರಶಸ್ತಿಗಳು ದೊರಕಿವೆ. ಇವುಗಳಲ್ಲಿ ಮುಖ್ಯವಾದವು: ಬೀಚೀ ಪ್ರಶಸ್ತಿ (1988), ಎಸ್.ಜಯರಾಂ ಪ್ರಶಸ್ತಿ (1989-90), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1991), ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಹಾಗೂ ಸಂದೇಶ ಮಾಧ್ಯಮ ಪ್ರಶಸ್ತಿ (1994), ಆರ್ಯಭಟ ಪ್ರಶಸ್ತಿ (1995-97-98), ಅತಿ ವಿಶಿಷ್ಟ ಚಿಕಿತ್ಸಾ ರಾಷ್ಟ್ರೀಯ ಪದಕ (1995), ಡಾ. ಎಚ್. ನರಸಿಂಹಯ್ಯ ಪ್ರಶಸ್ತಿ (1996), ದುಬೈ ಕರ್ನಾಟಕ ಸಂಘದ ಹೊರನಾಡು ಕನ್ನಡಿಗ ಪ್ರಶಸ್ತಿ (1998), ಭಾರತ ಗೌರವ ಸನ್ಮಾನ (1998-99), ವಿದ್ಯಾರತ್ನ ಪ್ರಶಸ್ತಿ (1999), ಪ್ರಕೃತಿ ಪ್ರಶಸ್ತಿ (1999), ಲಂಡನ್ನಿನ ಅಂತಾರಾಷ್ಟ್ರೀಯ ಗೋಲ್ಡ್‌ ಸ್ಟಾರ್ ಪ್ರಶಸ್ತಿ (1999), ಮುಂಬಯಿ ಕನ್ನಡ ಪತ್ರಕರ್ತರ ಸಂಘದ ಹೃದಯವಂತ ಪ್ರಶಸ್ತಿ (2002), ಭಾರತೀಯ ಮನೋವೈದ್ಯಕೀಯ ಸಂಘದ ಸುವರ್ಣಮಹೋತ್ಸವ ಪದಕ, 1999ರಲ್ಲಿ ಡಾ.ಬಿ.ಸಿ.ರಾಯ್ ಪ್ರಶಸ್ತಿ ಲಭ್ಯವಾಯಿತು (2002). ಅಶೋಕ ಪೈ ಅವರು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳ ಸದಸ್ಯರೂ ಆಗಿದ್ದಾರೆ.

ನಿಧನಸಂಪಾದಿಸಿ

ಅಶೋಕ ಪೈ ಅವರು ೩೦ಸೆಪ್ಟೆಂಬರ್೨೦೧೬ರಂದು ಗುರುವಾರ ಮಧ್ಯರಾತ್ರಿ 12ಕ್ಕೆ (ಭಾರತೀಯ ಕಾಲಮಾನ) ಸ್ಕಾಟ್ಕೆಂಡಿನಲ್ಲಿ ಹೃದಯಾಘಾತದಿಂದ ನಿಧನರಾದರು. ವಿಚಾರ ಸಂಕಿರಣಕ್ಕಾಗಿ ಪತ್ನಿ ರಜನಿ ಪೈ ಅವರ ಜತೆಗೆ ಸ್ಕಾಟ್ಲೆಂಡ್‍ಗೆ ತೆರಳಿದ್ದ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.[೧] ಅವರಿಗೆ 69 ವಯಸ್ಸಾಗಿತ್ತು.

ಉಲ್ಲೇಖಗಳುಸಂಪಾದಿಸಿ

  1. ಖ್ಯಾತ ಮನೋವೈದ್ಯ ಡಾ. ಅಶೋಕ್ ಪೈ ನಿಧನ, ಪ್ರಜಾವಾಣಿ ವಾರ್ತೆ 30 Sep, 2016
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: