ರಾಷ್ಟ್ರೀಯ ಉರ್ದು ಪತ್ರಿಕೆ. ನವಭಾರತದ ನಿರ್ಮಾಪಕರಲ್ಲೊಬ್ಬರೂ ಭಾರತದ ಮಾಜಿ ಶಿಕ್ಷಣ ಮಂತ್ರಿಗಳೂ ಆಗಿದ್ದ ಮೌಲಾನಾ ಅಬುಲ್ ಕಲಂ ಆಜಾದರು ಕಲ್ಕತ್ತ ನಗರದಲ್ಲಿ ಸ್ಥಾಪಿಸಿದರು. ಈ ಪತ್ರಿಕೆಯ ಮೊದಲ ಸಂಚಿಕೆಯು ೧೩ ಜುಲೈ ೧೯೧೨ ರಂದು ಹೊರಬಂದಿತು. . ಭಾರತದ ರಾಷ್ಟ್ರೀಯ ಸಂಗ್ರಾಮದಲ್ಲಿ ಮುಸ್ಲಿಂ ಸಹೋದರರು ಭಾಗವಹಿಸುವಂತೆ ಅವರ ಮನವೊಲಿಸುವ ಕೆಲಸವನ್ನು ನಿರ್ವಹಿಸಿ ಬಹುಬೇಗನೆ ಜನಪ್ರಿಯತೆಗಳಿಸಿದ ಈ ಪತ್ರಿಕೆಯ ಮೇಲೆ ಬ್ರಿಟಿಷ್ ಸರ್ಕಾರ ಗದಾಪ್ರಹಾರ ಮಾಡಿತು. ಕೆಲವು ಮುಸ್ಲಿಂ ಉಗ್ರಪಂಥಿಗಳು ಈ ಪತ್ರಿಕೆಯನ್ನು ವಿರೋಧಿಸಿದರು. ಆದರೂ ಪತ್ರಿಕೆಯ ಪ್ರಸಾರ ಇಳಿಮುಖವಾಗಲಿಲ್ಲ.

ಆಜಾದರ ಬರೆವಣಿಗೆಯ ಪ್ರಭಾವ ಭಾರತದ ಮುಸಲ್ಮಾನರ ಮೇಲಲ್ಲದೆ, ನೆರೆ ದೇಶಗಳ ಮುಸ್ಲಿಮರ ಮೇಲೂ ಆಯಿತು. ಪುಟಗಳನ್ನು ರೂಪಿಸುವ ವಿಧಾನದಲ್ಲಿ, ಭಾಷೆ ಶೈಲಿಗಳಲ್ಲಿ, ಸುದ್ದಿ ಮತ್ತು ಲೇಖನಗಳನ್ನು ಕೊಡುವ ರೀತಿಯಲ್ಲಿ, ಇದು ಇತರ ಉರ್ದು ಪತ್ರಿಕೆಗಳಿಗೆ ಮಾದರಿಯಾಗಿತ್ತು. ಭಾರತದ ರಾಜಕೀಯ ಜೀವನದಲ್ಲಿ ಮುಸ್ಲಿಮರು ತಮ್ಮ ಅದ್ಭುತವಾದ ಕಾಣಿಕೆಯನ್ನು ಸಲ್ಲಿಸಲು ಈ ಪತ್ರಿಕೆ ಅನುಕೂಲ ಮಾಡಿಕೊಟ್ಟಿತು. ಉರ್ದು ಪತ್ರಿಕೋದ್ಯಮದಲ್ಲಿ ಕ್ರಾಂತಿಯ ಹಾದಿಯನ್ನು ತೋರಿಸಿದ ಕೀರ್ತಿ ಈ ಪತ್ರಿಕೆಗೆ ಮತ್ತು ಅದರ ಸಂಪಾದಕರಿಗೆ ಸಲ್ಲುತ್ತದೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: