ಅಲೆಕ್ಸಾಂಡರ್
ಅಲೆಕ್ಸಾಂಡರ್ ದಿ ಗ್ರೇಟ್(ಪ್ರ.ಶ.ಪೂ. 356-323.) ಎಂದು ಪ್ರಸಿದ್ದವಾಗಿರುವ ಮಸೆಡೊನಿಯದ ಮುಮ್ಮುಡಿ ಅಲೆಕ್ಸಾಂಡರ್ ಗ್ರೀಸ್ ದೇಶದ ಒಬ್ಬ ಮಹಾನ್ ದಂಡನಾಯಕ. ಗ್ರೀಸ್ ದೇಶಕ್ಕೆ ಸೇರಿದ ಮಸೆಡೊನಿಯ ರಾಜ್ಯದ ರಾಜನಾದ ಇತ ಅರಿಸ್ಟಾಟಲ್ ಎಂಬ ತತ್ವಜ್ನ್ಯಾನಿಯ ಶಿಷ್ಯ.. ಈತ ಇತಿಹಾಸದ ಒಂದು ಬಹುದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ. ಇವನ ನಿಧನದ ಹೊತ್ತಿಗೆ ಇವನು ಪರ್ಷಿಯನ್ ಸಾಮ್ರಾಜ್ಯವನ್ನು ಪರಾಭವ ಗೊಳಿಸಿ ಅದನ್ನು ಗ್ರೀಕ್ ಸಾಮ್ರಾಜ್ಯದ ಭಾಗವನ್ನಾಗಿ ಮಾಡಿದ್ದನು. ಇವನ ಸಾಮ್ರಾಜ್ಯ ಗ್ರೀಸಿನಿಂದ ಹಿಮಾಲಯಾದ ತಪ್ಪಲಿನ ವರಗೆ ವಿಸ್ತರಿಸಿತ್ತು. ಪರ್ಷಿಯ ಸಾಮ್ರಾಜ್ಯವನ್ನು ಸೋಲಿಸಿ ಭಾರತದವರೆಗೂ ದಂಡೆತ್ತಿ ಬಂದ ಮಹಾನಾಯಕ. ತಂದೆ ಫಿಲಿಪ್, ರಾಜನಾಗಿ ದೇಶವನ್ನು ಸುಭದ್ರ ತಳಹದಿಯ ಮೇಲೆ ಸತತವಾಗಿ ದುಡಿದು ಮಗನ ಪ್ರಗತಿಗೆ ಕಾರಣನಾದ. ತಂದೆಯ ಮರಣಾನಂತರ ಪ್ರ.ಶ.ಪೂ. 336ರಲ್ಲಿ ತನ್ನ 20ನೆಯ ವಯಸ್ಸಿನಲ್ಲಿ ಅಲೆಕ್ಸಾಂಡರ್ ಪಟ್ಟಕ್ಕೆ ಬಂದು ದೇಶದಲ್ಲಿ ತಲೆ ಎತ್ತುತ್ತಿದ್ದ ಅಶಾಂತಿ ಅನಾಯಕತೆಗಳನ್ನು ನಿವಾರಿಸಿದ. ತಂದೆಯಂತೆ ರಾಜ್ಯವಿಸ್ತರಣೆಗೆ ಮನಸ್ಸು ಮಾಡಿದ. ಬಾಲ್ಯದಲ್ಲೇ ತಂದೆಯ ನೇತೃತ್ವದಲ್ಲಿ ಪಡೆದ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಇವನಲ್ಲಿದ್ದ ಪ್ರತಿಭೆಯೂ ಸೇರಿ ಯುವಕ ಅಲೆಕ್ಸಾಂಡರನ ವ್ಯಕ್ತಿತ್ವ ಪ್ರಜ್ವಲಿಸತೊಡಗಿತು. ಈತ ಎತ್ತರವಾದ ಆಳು, ಸ್ಫುರದ್ರೂಪಿ, ದೇಹದಾರ್ಢ್ಯವುಳ್ಳ, ಸಂಕಲ್ಪದಂತೆ ಗುರಿಸಾಧಿಸುವ ದೃಢಬುದ್ಧಿ ಹೊಂದಿದ್ದ ಈತನಲ್ಲಿ ತಾಯಿಯ ಬುದ್ಧಿವಿಚಾರ, ಅಹಂಕಾರ, ಉದ್ರೇಕಗಳು ಸೇರಿಕೊಂಡಿದ್ದವು.
ಅಲೆಕ್ಸಾಂಡರ್ ದಿ ಗ್ರೇಟ್ | |
---|---|
ಮೆಸಿಡೊನ್‍ನ ಬೆಸಿಲಿಯುಸ್, ಈಜಿಪ್ಟ್‍ನ ಫೆರೊಹ್ (ಚಕ್ರವರ್ತಿ), ಪರ್ಷಿಯದ ಶಹಂಷಾ | |
ಅಲೆಕ್ಸಾಂಡರ್ ದಿ ಗ್ರೇಟ್ | |
ರಾಜ್ಯಭಾರ | ೩೩೬–೩೨೩ ಕ್ರಿಪೂ |
ಹುಟ್ಟು | ೨೦ ಜುಲೈ ೩೫೬ ಕ್ರಿಪೂ |
ಹುಟ್ಟುಸ್ಥಳ | ಪೆಲ್ಲ, ಮೆಸಿಡೊನ್ ಗ್ರೀಸ್ |
ಸಾವು | ೧೦ ಜೂನ್ ಅಥವಾ ೧೧ ಜೂನ್ ೩೨೩ ಕ್ರಿಪೂ (ವಯಸ್ಸು ೩೨) |
ಸಾವಿನ ಸ್ಥಳ | ಬೆಬಿಲಾನ್ |
ಪೂರ್ವಾಧಿಕಾರಿ | ಮೆಸಿಡೊನ್‍ನ ಫಿಲಿಪ್ ೨ |
ಉತ್ತರಾಧಿಕಾರಿ | ಮೆಸಿಡೊನ್‍ನ ಅಲೆಕ್ಸಾಂಡರ್ ೪ |
Consort to | ಬ್ಯಾಕ್ಟ್ರಿಯದ ರೊಕ್ಸಾನ, ಪರ್ಷಿಯಾದ ಸ್ಟೆಟೀರ |
ಸಂತತಿ | ಮೆಸಿಡೊನ್‍ನ ಅಲೆಕ್ಸಾಂಡರ್ ೪ |
ತಂದೆ | ಮೆಸಿಡೊನ್‍ನ ಫಿಲಿಪ್ ೨ |
ತಾಯಿ | ಎಪಿರಸ್ನ ಒಲಿಂಪಿಯಾಸ್ |
ಗ್ರೀಕ್ ನಾಗರಿಕತೆ ಸಂಸ್ಕೃತಿಗಳನ್ನು ಈತ ಬಹುವಾಗಿ ಮೆಚ್ಚಿದ. ಹೋಮರನ ಇಲಿಯಡ್ ಮಹಾಕಾವ್ಯ ಇವನ ತುದಿನಾಲಗೆಯಲ್ಲಿತ್ತು. ಪ್ರಸಿದ್ಧ ವಿದ್ವಾಂಸನಾದ ಅರಿಸ್ಟಾಟಲ್ ಇವನ ಗುರು. ತತ್ತ್ವಶಾಸ್ತ್ರ, ವೈದ್ಯ, ವಿಜ್ಞಾನಗಳಲ್ಲಿ ಅಪಾರ ಆಸಕ್ತಿಯುಳ್ಳವ. ಗ್ರೀಕ್ ರಾಜ್ಯಗಳನ್ನು ಸೋಲಿಸಿದನಾದರೂ ತಂದೆಯಂತೆ ಉದಾರ ನೀತಿಯನ್ನನುಸರಿಸಿ ಅವರ ಬೆಂಬಲವನ್ನು ಗಳಿಸಿಕೊಂಡ. ತಂದೆಯ ಕೊಲೆಗೆ ಕಾರಣರೆಂದು ಕಂಡುಬಂದ ಲೈಸೆಸ್ಟಿಸ್‌ನ ರಾಜರನ್ನು ತೀರಿಸಿ ತನ್ನ ವೈರಿಗಳೆನಿಸಿದ ಇತರರನ್ನೂ ನಿರ್ನಾಮ ಮಾಡಿದ. ಅನಂತರ ದಕ್ಷಿಣಕ್ಕೆ ತಿರುಗಿ ಥೆಸಲೆಯನ್ನು ಗಿಟ್ಟಿಸಿ ಗ್ರೀಕ್ ಒಕ್ಕೂಟದಲ್ಲಿ ಮುಂದಿನ ಏಷ್ಯ ದಿಗ್ವಿಜಯ ಕಾರ್ಯದ ಮಹಾದಂಡನಾಯಕನಾಗಿ ಆಯ್ಕೆಯಾದ. ಆದರೂ ಉತ್ತರ ಗ್ರೀಸಿನ ಇಲಿರಿಯ ಮತ್ತು ಥ್ರೇಸ್ ಪ್ರದೇಶಗಳಲ್ಲಿ ಅಲೆಕ್ಸಾಂಡರನಿಗೆ ವಿರುದ್ಧವಾಗಿ ದಂಗೆಗಳಾದುವು. ಆದರೆ ಅಲೆಕ್ಸಾಂಡರ್ ತತ್‌ಕ್ಷಣ ಆ ಪ್ರದೇಶಗಳಿಗೆ ಹೋಗಿ ದಂಗೆಗಳನ್ನು ಅಡಗಿಸಿದ. ಥ್ರೇಸ್ನಲ್ಲಿ ಯಾರೋ ಅಲೆಕ್ಸಾಂಡರನನ್ನು ಕೊಂದುಹಾಕಿದರೆಂಬ ಸುಳ್ಳು ಸಮಾಚಾರ ಥೀಬ್ಸ್ ನಗರದಲ್ಲಿ ಹರಡಿ ಥೀಬ್ಸನ್ನರು ಮ್ಯಾಸಿಡೋನಿಯದ ರಕ್ಷಣ ಸೈನ್ಯಗಳಿಗೆ ಮುತ್ತಿಗೆ ಹಾಕಿದರು. ಅಲೆಕ್ಸಾಂಡರ್ ಥೀಬ್ಸ್ ನಗರದ ಮೇಲೆ ದಾಳಿಮಾಡಿ ಆ ನಗರವನ್ನು ನಾಶ ಮಾಡಿದ. ಹೆಂಗಸರು, ಮಕ್ಕಳು ಎಂದು ಲಕ್ಷಿಸದೆ ಸು. 30,000 ಥೀಬ್ಸನ್ನರನ್ನು ಸೆರೆಹಿಡಿದು ಗುಲಾಮರನ್ನಾಗಿಸಿದ. ಗ್ರೀಕರ ಸೊಲ್ಲು ಅಡಗಿ ಅವರು ಅಲೆಕ್ಸಾಂಡರನನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳ ಬೇಕಾಯಿತು. ಗ್ರೀಸ್ ದೇಶ ಅಲೆಕ್ಸಾಂಡರನ ಹತೋಟಿಗೆ ಒಳಗಾಯಿತು.
ಅಲೆಕ್ಸಾಂಡರನ ದಂಡಯಾತ್ರೆ
ಬದಲಾಯಿಸಿಗ್ರೀಸಿನಲ್ಲಿ ಸುಭದ್ರ ಆಡಳಿತವನ್ನು ಸ್ಥಾಪಿಸಿ, ತನ್ನ ಜೀವನದ ಮಹತ್ತ್ವಾಕಾಂಕ್ಷೆಯನ್ನು ಸಾಧಿಸಲು ಸಂಕಲ್ಪ ಮಾಡಿದ. ಪರ್ಷಿಯ ದೇಶ ಗ್ರೀಸಿನಲ್ಲಿ ತನಗೆ ಮಾಡಿದ ದೌರ್ಜನ್ಯಕ್ಕೋಸ್ಕರ ಸೇಡು ತೀರಿಸಿಕೊಳ್ಳುವುದು; ಪ್ರಪಂಚವನ್ನೇ ಗೆದ್ದು ಎಲ್ಲೆಲ್ಲಿಯೂ ಗ್ರೀಕರ ನಾಗರಿಕತೆಯನ್ನು ಸ್ಥಾಪಿಸುವುದು-ಇವೇ ಇವನ ಮುಖ್ಯ ಉದ್ದೇಶಗಳಾಗಿದ್ದವು. ಗ್ರೀಸಿನ ಆಡಳಿತವನ್ನು ತನ್ನ ಅನುಯಾಯಿಯಾದ ಅಂಟಿಪೇಟರ್ಗೆ ವಹಿಸಿ, ಸರಿಯಾದ ವ್ಯವಸ್ಥೆ ಮಾಡಿ, ತನ್ನ ಪ್ರಬಲವಾದ ಸೈನ್ಯದೊಡನೆ ಹೆಲೆಸ್ಟಾಂಟ್ ಪ್ರದೇಶಕ್ಕೆ ಹೋದ. ಮೊದಲು ಪುರಾತನವಾದ ಟ್ರಾಯ್ ನಗರವನ್ನು ಪ್ರವೇಶಿಸಿ ಅಕಿಲಿಸ್ಸನ ಸಮಾಧಿಗೆ ತನ್ನ ಗೌರವ ಸಲ್ಲಿಸಿದ (ಪ್ರ.ಶ.ಪೂ.334). ಹೆಲೆಸ್ಟಾಂಟನ್ನು ದಾಟಿ ಏಷ್ಯಮೈನರಿಗೆ ಬಂದ. ಪರ್ಷಿಯ ದೇಶದ ರಾಜನಾದ ಡೇರಿಯಸ್ ಯುದ್ಧಕ್ಕೆ ಯಾವ ಸಿದ್ಧತೆಗಳನ್ನೂ ಮಾಡಿರಲಿಲ್ಲವಾಗಿ ಕಷ್ಟವಿಲ್ಲದೆ ಫ್ರಿಜಿಯ ಪ್ರದೇಶ ತಲುಪಿದ. ಗ್ರಾನಿಕಸ್ ನದಿತೀರದಲ್ಲಿ ಪರ್ಷಿಯನ್ನರು ಅಲೆಕ್ಸಾಂಡರನ ಸೈನ್ಯವನ್ನು ಎದುರಿಸಿದರು. ಗ್ರೀಕರ ಸೈನ್ಯ ಸುವ್ಯವಸ್ಥಿತ ರೀತಿಯಲ್ಲಿ ಕಾದಾಡಿತು. ಪರ್ಷಿಯನ್ನರ ರಾವುತರನ್ನು ಚದರಿಸಲಾಯಿತು. ಕೊನೆಗೆ ಪರ್ಷಿಯನ್ನರು ಸಂಪುರ್ಣವಾಗಿ ಸೋತರು (ಪ್ರ.ಶ.ಪೂ. 334). ಏಷ್ಯಮೈನರನ್ನು ಪ್ರವೇಶಿಸಲು ಅಲೆಕ್ಸಾಂಡರನಿಗೆ ಯಾವ ತೊಂದರೆಯೂ ಇರಲಿಲ್ಲ. ಆದರೂ ಮೊದಲು ಫಿನಿಷಿಯನ್ನರ ನೌಕೆಯನ್ನು ಸೋಲಿಸಬೇಕಾಗಿತ್ತು. ಸಾರ್ಡಿಸ್ ಮತ್ತು ಇಫಿಸಸ್ ನಗರಗಳನ್ನು ಕಷ್ಟವಿಲ್ಲದೆ ಹಿಡಿದುದಾಯಿತು. ಮಿಲೆಟಸ್ ನಗರವನ್ನು ದೌರ್ಜನ್ಯದಿಂದ ವಶಮಾಡಿಕೊಳ್ಳಬೇಕಾಯಿತು. ರೋಡಸ್ನ ಮೆಮ್ಮಾನ್ ಎಂಬಾತ ಪರ್ಷಿಯನ್ನರ ಪರವಾಗಿ ಹಾಲಿಕರ್ನಸೆಸ್ನಲ್ಲಿ ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡಿದ್ದ. ಡೇರಿಯಸ್ ಧೈರ್ಯಮಾಡಿ ಪ್ರಬಲವಾದ ಸೈನ್ಯದೊಡನೆ ಸಿಲೀಸಿಯ ಪ್ರದೇಶಕ್ಕೆ ಬಂದ. ಇಸಸ್ ನಗರದಲ್ಲಿ ಯುದ್ಧವಾಯಿತು (ಪ್ರ.ಶ.ಪೂ. 333). ಪರ್ಷಿಯನ್ನರ ಸೈನ್ಯ ಸಣ್ಣ ಮೈದಾನದಲ್ಲಿ ಚಲಿಸುವುದೇ ಕಷ್ಟವಾಯಿತು. ಡೇರಿಯಸ್ ಭಯಪಟ್ಟು ಓಡಿಹೋದ. ಪರ್ಷಿಯನ್ನರು ದಿಕ್ಕುತೋಚದೆ ಚದರಿದರು. ಬಿಟ್ಟುಹೋದ ಐಶ್ವರ್ಯ ಗ್ರೀಕರ ವಶವಾಯಿತು. ಕೊನೆಗೆ ಡೇರಿಯಸ್ಸನ ತಾಯಿ, ಹೆಂಡತಿ, ಸಂಸಾರವೆಲ್ಲವೂ ಅಲೆಕ್ಸಾಂಡರನ ಆಶ್ರಯ ಪಡೆಯಬೇಕಾಯಿತು. ಅಲೆಕ್ಸಾಂಡರ್ ಅವರನ್ನು ಮರ್ಯಾದೆಯಿಂದ ರಕ್ಷಿಸಿದ. ಅಲೆಕ್ಸಾಂಡರ್ ಪರ್ಷಿಯ ದೇಶದ ಮೇಲೆ ನುಗ್ಗುವುದಕ್ಕೆ ಮುಂಚೆ ದಕ್ಷಿಣಕ್ಕೆ ತಿರುಗಿ ಸಿರಿಯ ಮತ್ತು ಈಜಿಪ್ಟಿಗೆ ಹೋದ. ಮಧ್ಯದಲ್ಲಿ ಸಿಕ್ಕಿದ ನಗರಗಳು ಇವನ ವಶವಾದವು. ವೈರ್ ನಗರ ಸುಲಭವಾಗಿ ಸ್ವಾಧೀನವಾಗಲಿಲ್ಲ. ಅದು ಒಂದು ದ್ವೀಪ. ಸುತ್ತಲೂ ಭದ್ರವಾದ ಕೋಟೆಯಿತ್ತು. ಅಲೆಕ್ಸಾಂಡರ್ ದಡದಿಂದ ದ್ವೀಪಕ್ಕೆ ಸೇತುವೆಯನ್ನು ರಚಿಸಿ, ಕೋಟೆಗೆ ಲಗ್ಗೆ ಹಾಕಿ ವಶಪಡಿಸಿಕೊಂಡ. ಇವನ ಕೀರ್ತಿ ಹರಡಿತು. ಆದರೆ ಅಲ್ಲಿ ಈತ ಮಾಡಿದ ಅಮಾನುಷ ಕೊಲೆಗಳೂ ಹಿಂಸೆಗಳೂ ಥೀಬ್ಸ್ ನಲ್ಲಿ ಮಾಡಿದ ಅನ್ಯಾಯಗಳಿಗೆ ಯಾವ ರೀತಿಯಲ್ಲೂ ಕಡಿಮೆಯಾಗಿರಲಿಲ್ಲ. 8,000 ಜನರನ್ನು ಕೊಂದ. 30,000 ಜನರನ್ನು ಗುಲಾಮರನ್ನಾಗಿ ಮಾಡಿದ. ಒಡನೆ ನಗರ ಕಷ್ಟವಿಲ್ಲದೆ ಇವನ ವಶವಾಯಿತು. ಮುಂದಕ್ಕೆ ಪ್ಯಾಲಸ್ತಿನ್ ಮೇಲೆ ದಾಳಿ ಮಾಡಿ, ವಶಪಡಿಸಿಕೊಂಡ. ನಗರದ ರಾಜ್ಯಪಾಲನಾದ ಬೇಟಿಸ್ ಕ್ರೂರವಾದ ಶಿಕ್ಷೆಗೆ ಗುರಿಯಾದ. ಅವನನ್ನು ರಥದ ಹಗ್ಗಕ್ಕೆ ಕಟ್ಟಿ , ಸಾಯುವವರೆಗೂ ಎಳಸಲಾಯಿತು.
ಗಾರ್ಡಿಯನ್ ಗಂಟು
ಬದಲಾಯಿಸಿಇಸಸ್ ಕದನಕ್ಕೆ ಮುಂಚೆ ಅಲೆಕ್ಸಾಂಡರ್ ಫ್ರಿಜಿಯ ದೇಶದ ಹಿಂದಿನ ರಾಜಧಾನಿಯಾದ ಗಾರ್ಡಿಯಂ ನಗರಕ್ಕೆ ಬಂದ. ಈ ಸ್ಥಳದಲ್ಲಿ ಒಂದು ಪುರಾತನವಾದ ರಥವಿತ್ತು. ಇದನ್ನು ಫ್ರಿಜಿಯನ್ನರ ಮೊದಲನೆಯ ದೊರೆಯಾದ ಗಾರ್ಡಿಯಸ್ ಕಟ್ಟಿದನೆಂಬ ಐತಿಹ್ಯವಿತ್ತು. ರಥದ ಕಂಬಕ್ಕೆ ಕಟ್ಟಿದ್ದ ತೊಗಟೆಯ ಗಂಟನ್ನು ಯಾರು ಬಿಚ್ಚುವರೋ ಅವರು ಏಷ್ಯವನ್ನು ಆಳುವರು ಎಂದು ಭವಿಷ್ಯ ಹೇಳುತ್ತಿದ್ದರು. ಅಲೆಕ್ಸಾಂಡರ್ ಕಷ್ಟವಿಲ್ಲದೆ ತನ್ನ ಕತ್ತಿಯಿಂದ ಗಾರ್ಡಿಯನ್ ಗಂಟನ್ನು ಕತ್ತರಿಸಿದ. ಅಕಸ್ಮಾತ್ತಾಗಿ ಉಂಟಾದ ಸಿಡಿಲು ಜ಼್ಯೂಸ್ ದೇವತೆಯ ಒಪ್ಪಿಗೆಯ ಸಂಕೇತ ಎಂದು ಹೇಳಿದರು. ಮುಂದಕ್ಕೆ ಅಲೆಕ್ಸಾಂಡರ್ ಟಾರಸ್ ಗುಡ್ಡದಿಂದ ಸಿಲಿಸಿಯ ಪ್ರದೇಶಕ್ಕೆ ಹೋದ. ಪರ್ಷಿಯನ್ನರು ಯುದ್ಧಮಾಡದೆ ಹಿಮ್ಮೆಟ್ಟಿದರು. ಚಾರ್ಸಸ್ ನಗರ ವಶವಾಯಿತು.
ಈಜಿಪ್ಟಿನ ದಂಡಯಾತ್ರೆ
ಬದಲಾಯಿಸಿಟೈರ್ ಮುತ್ತಿಗೆಯ ಅನಂತರ ಅಲೆಕ್ಸಾಂಡರ್ ಈಜಿಪ್ಟನ್ನು ಸೇರಿದ. ಈಜಿಪ್ಟ್ ಎರಡು ಶತಮಾನಗಳಿಂದ ಪರ್ಷಿಯ ದೇಶಕ್ಕೆ ಅಡಿಯಾಳಾಗಿ ನೊಂದಿತ್ತು. ಅಲೆಕ್ಸಾಂಡರ್‍ನನ್ನು ಜನ ಹರ್ಷದಿಂದ ಗೌರವಿಸಿದರು. ಇವನನ್ನು ತಮ್ಮ ರಾಜನೆಂದು ಭಾವಿಸಿ ಹೂಮಾಲೆ ಹಾಕಿದರು. ನಾಲ್ಕು ತಿಂಗಳುಗಳ ಕಾಲ ಅಲ್ಲಿದ್ದು ಈಜಿಪ್ಟಿನವರು ತೋರಿದ ಆದರ ಸತ್ಕಾರ ಪೂಜೆಗಳಿಂದ ಅಲೆಕ್ಸಾಂಡರ್ ಸಂತುಷ್ಟನಾದ. ದೈವಾಂಶಸಂಭೂತನೆಂದು ಹೆಮ್ಮೆಪಟ್ಟ. ನೈಲ್ ನದಿಯ ಪಶ್ಚಿಮಕ್ಕೆ ಹೋಗಿ ಅಲೆಕ್ಸಾಂಡ್ರಿಯ ನಗರವನ್ನು ಸ್ಥಾಪಿಸಿದ. ಮುಂದೆ ಅದು ಅನೇಕ ಶತಮಾನಗಳವರೆಗೂ ಗ್ರೀಕರ ವಾಣಿಜ್ಯ ಮತ್ತು ನಾಗರಿಕತೆಯ ಕೇಂದ್ರವಾಯಿತು. ಮರುಭೂಮಿಯ ಹಸುರು ನೆಲದಲ್ಲಿದ್ದ ಅಮನ್ ದೇವಾಲಯವನ್ನು ಭೇಟಿಮಾಡಿದ. ಈಜಿಪ್ಟಿನವರು ಇವನ ದೈವಭಕ್ತಿಯಿಂದ ಮುಗ್ಧರಾಗಿ, ವಿಶೇಷ ಗೌರವವನ್ನು ತೋರಿಸಿದರು. ಈಜಿಪ್ಟ್ ದಂಡಯಾತ್ರೆಯಾದ ಮೇಲೆ ಪ್ರ.ಶ.ಪೂ. 331ರಲ್ಲಿ ಟೈರ್ಗೆ ಬಂದ. ಮೆಸಪೊಟೇಮಿಯ ಮರುಭೂಮಿಯ ಉಷ್ಣತೆಯನ್ನು ತಪ್ಪಿಸಿಕೊಳ್ಳಲು ಥಾಪ್ಸಕಸ್ ನಗರದಲ್ಲಿ ಯೂಫ್ರೆಟೀಸ್ ನದಿಯನ್ನೂ ಅಲ್ಲಿಂದ ಮುಂದೆ ಟೈಗ್ರಿಸ್ ನದಿಯನ್ನೂ ದಾಟಿ, ಎಡದಡದಲ್ಲಿದ್ದ ಗಾಗಮೇಲ ಪಟ್ಟಣವನ್ನು ಸೇರಿದ. ಡೇರಿಯಸ್ ಬಹು ಸಂಖ್ಯಾತ ಸೇನೆಯನ್ನು ಸಿದ್ಧಪಡಿಸಿದ್ದ. ಸುಮಾರು 1 ಕೋಟಿ ಕಾಲಾಳುಗಳೂ 40,000 ರಾವುತರೂ ಪರ್ಷಿಯನ್ನರ ಸೈನ್ಯದಲ್ಲಿದ್ದರು. ಆದರೆ ಸೈನ್ಯದಲ್ಲಿ ಏನೇನೂ ಶಿಸ್ತಿರಲಿಲ್ಲ. ಅಲೆಕ್ಸಾಂಡರ್ ತನ್ನ ರಾವುತರನ್ನು ಪರ್ಷಿಯನ್ನರ ಮೇಲೆ ನುಗ್ಗಿಸಿ ಚದುರಿಸಿದ. ಡೇರಿಯಸ್ ಮತ್ತೊಮ್ಮೆ ಓಡಿಹೋದ. ಗಾಗ್ಮೇಲ ಕದನದಿಂದ (ಪ್ರ.ಶ.ಪೂ. 331) ಅಲೆಕ್ಸಾಂಡರನಿಗೆ ಅದ್ಭುತ ಜಯವಾಯಿತು. ಡೇರಿಯಸ್ ಸಂಪೂರ್ಣವಾಗಿ ಸೋತು, ಮೀಡಿಯ ರಾಜಧಾನಿಯಾದ ಎಕ್ಬತಾನ ನಗರದಲ್ಲಿ ಬಚ್ಚಿಟ್ಟುಕೊಂಡ. ಪರ್ಷಿಯನ್ನರ ಸಾಮ್ರಾಜ್ಯ ನುಚ್ಚುನೂರಾಯಿತು. ವಿಜಯಿಯಾದ ಅಲೆಕ್ಸಾಂಡರ್ ಬ್ಯಾಬಿಲೋನಿಯ ಸಾಮ್ರಾಜ್ಯವನ್ನು ಆಕ್ರಮಿಸಿದ. ಪರ್ಷಿಯ ದೇಶದ ರಾಜಧಾನಿಯಾದ ಸೂಸ ನಗರವನ್ನು ವಶಪಡಿಸಿಕೊಂಡ. ಅಲ್ಲಿ ಹೆಚ್ಚು ಕೊಳ್ಳೆ ಸಿಕ್ಕಿತು. ಅದರಲ್ಲಿ 50000 ಟಾಲೆಂಟ್ (12,000,000 ಪೌಂಡು) ನಗದು ಸೇರಿತ್ತು. ಪರ್ಷಿಯ ದೇಶದ ಸೇನಾನಾಯಕನಾದ ಏರಿಯೊಬರ್ಜ಼ನಿಸ್ ಅಲೆಕ್ಸಾಂಡರ್ನನ್ನು ವಿರೋಧಿಸಿದ. ಅಲೆಕ್ಸಾಂಡರ್ ಅವನ ಸೈನ್ಯವನ್ನು ಚದರಿಸಿ ಪರ್ಸಿಪೋಲಿಸ್ ಎಂಬ ಸುಂದರವಾದ ನಗರವನ್ನು ಹಿಡಿದ. ಇಲ್ಲಿಯೂ ಅಪರಿಮಿತವಾದ ಕೊಳ್ಳೆ ಸಿಕ್ಕಿತು. ಇಲ್ಲಿ ಸರಕ್ಸಸ್ಸನ ಅರಮನೆಯನ್ನು ಸುಡಲಾಯಿತು. ಅಲೆಕ್ಸಾಂಡರ್ ಈ ಅನಾಗರಿಕ ಕೃತ್ಯವನ್ನು ಕುಡಿತದ ಅಮಲಿನಲ್ಲಿದ್ದಾಗ ಕೇವಲ ಸೇಡು ತೀರಿಸಿಕೊಳ್ಳುವುದಕ್ಕೋಸ್ಕರ ಮಾಡಿದನೆಂಬ ಪ್ರತೀತಿ ಇದೆ. ಸೈನ್ಯದವರು ಮಾಡಿದ ಸುಲಿಗೆ ಅಮಾನುಷ ಕೃತ್ಯಗಳಿಗೆ ಮಿತಿಯಿರಲಿಲ್ಲ. ಅಲೆಕ್ಸಾಂಡರ್ ಡೇರಿಯಸ್ಸನನ್ನು ಬೆನ್ನಟ್ಟಿ ಹಿಡಿಯಬೇಕೆಂಬ ಸಂಕಲ್ಪ ಮಾಡಿದ. ತ್ವರೆಮಾಡಿ ಎಕ್ಬತಾನ ನಗರಕ್ಕೆ ಹೋದ. ಅಲ್ಲಿಂದ ಹಕ್ಕಿ ಹಾರಿ ಹೋಯಿತು ಎಂಬುದಾಗಿ ತಿಳಿಯಿತು. ಮುಂದಕ್ಕೆ ವೈರಿಯನ್ನು ಬೆನ್ನಟ್ಟಿ ಪೂರ್ವದ ಕಡೆಗೆ ಹೋದ. ಬಾಕ್ಟ್ರಿಯ ಪ್ರದೇಶದ ಬೆಸಸ್ ಡೇರಿಯಸ್ಸನನ್ನು ಸೆರೆಹಿಡಿದಿರುವನೆಂದು ತಿಳಿಯಿತು. ಅಲೆಕ್ಸಾಂಡರ್ ತತ್ಕ್ಷಣವೇ ಬಾಕ್ಟ್ರಿಯದ ಕಡೆ ಧಾವಿಸಿ, ಬೆಸಸ್ನನ್ನೂ ಆತನ ಸ್ನೇಹಿತರನ್ನೂ ಹಿಡಿಯುವುದರಲ್ಲಿದ್ದ. ಆದರೆ ಅವರು ತಮ್ಮ ಕುದುರೆಗಳನ್ನು ಹತ್ತಿ ತಪ್ಪಿಸಿಕೊಂಡರು. ಡೇರಿಯಸ್ ಓಡಿಹೋಗಲು ಒಪ್ಪದಿರಲು ಬೆಸಸ್ ಅವನನ್ನು ತಿವಿದು ಕೊಂದುಹಾಕಿದ. ಅಲೆಕ್ಸಾಂಡರನಿಗೆ ಈ ದುರಂತಸುದ್ದಿ ತಿಳಿಯಿತು. ಕನಿಕರದಿಂದ ಡೇರಿಯಸ್ಸನ ಶವವನ್ನು ಮರ್ಯಾದೆಯಿಂದ ಪರ್ಸಿಪೊಲಿಸ್ ನಗರದಲ್ಲಿ ಅಂತ್ಯಸಂಸ್ಕಾರ ಮಾಡಲು ವ್ಯವಸ್ಥೆಮಾಡಿದ. ಅಲೆಕ್ಸಾಂಡರ್ ಬ್ಯಾಕ್ಟ್ರಿಯ (ಉತ್ತರ ಆಫ್ಘಾನಿಸ್ತಾನ) ದೇಶದ ಮೇಲೆ ದಂಡೆತ್ತಿ ಹೋದ. ಬೆಸಸ್ ತಾನೇ ಪರ್ಷಿಯ ದೇಶದ ರಾಜನೆಂದು ಘೋಷಿಸಿ ಅರ್ಟಗ್ಸರ್ಕ್ಸಸ್ ಎಂಬ ಬಿರುದನ್ನು ಪಡೆದ. ಅಲೆಕ್ಸಾಂಡರ್ ಈ ದಂಡಯಾತ್ರೆಯಲ್ಲಿ ಅದ್ಭುತ ಸಾಹಸ ತೋರಿಸಿದ. ಅನೇಕ ದಟ್ಟವಾದ ಗುಡ್ಡಗಾಡುಗಳನ್ನು ದಾಟಬೇಕಾಯಿತು. ಹಿರತ್ ಮತ್ತು ಕಾಂದಹಾರ್ ಬಳಿ ಹೊಸ ಅಲೆಕ್ಸಾಂಡ್ರಿಯ ಪಟ್ಟಣವನ್ನು ನಿರ್ಮಿಸಿದ. ಚಳಿಗಾಲದಲ್ಲಿ ಹಿಂದೂಕುಷ್ ಪರ್ವತವನ್ನು ದಾಟಿದ. ಆಕ್ಸಸ್ ನದಿಯನ್ನು ದಾಟುವಾಗ ಚರ್ಮದ ಮೇಲೆ ತೇಲಿಕೊಂಡು ಹೋದ. ಕೊನೆಗೆ ಬೆಸಸ್ನನ್ನು ಹಿಡಿದು, ಅಂಗವಿಹೀನನನ್ನಾಗಿ ಮಾಡಿ, ಅವನ ರಾಜಧಾನಿಯಲ್ಲೇ ಶೂಲಕ್ಕೇರಿಸಿದ. ಈ ದಂಡಯಾತ್ರೆಯಲ್ಲಿ ಮತ್ತೊಂದು ಅಮಾನುಷ ಕೃತ್ಯ ನಡೆಯಿತು. ತನ್ನ ರಾವುತರ ನಾಯಕನಾದ ಪರ್ಮಿನಿಯೋವಿನ ಮಗನಾದ ಫಿಲೋಟಸ್ ತನ್ನನ್ನು ಕೊಲೆಮಾಡಲು ಒಳಸಂಚು ಮಾಡಿದನೆಂಬ ಗುಮಾನಿ ಬರಲು, ಸರಿಯಾಗಿ ವಿಚಾರಿಸದೆ ಅಲೆಕ್ಸಾಂಡರ್ ಅವನನ್ನು ಕೊಂದುದಲ್ಲದೆ ಎಕ್ಬಟಾನದಲ್ಲಿದ್ದ ಅವನ ತಂದೆ ಪರ್ಮಿಯೋನನ್ನೂ ಕೊಲ್ಲಿಸಿದ. ಬ್ಯಾಕ್ಟ್ರಿಯದಿಂದ ಅಲೆಕ್ಸಾಂಡರ್ ಸೊಗ್ಡಿಯಾನದ (ತುರ್ಕಿಸ್ತಾನದ) ಮೇಲೆ ನುಗ್ಗಿದ. ಈ ಪ್ರಾಂತ್ಯ ಆಕ್ಸಸ್ ನದಿಯ ಆಚೆ ಪರ್ಷಿಯನ್ನರಿಗೆ ಸೇರಿತ್ತು. ಇಲ್ಲಿನ ಸಿಥಿಯನ್ನರು ಭಯಂಕರವಾಗಿ ಕಾದಾಡಿದರು. ಆದರೆ ಅಲೆಕ್ಸಾಂಡರ್ ಅವರನ್ನು ಜಯಿಸಿ ಜಕ್ಸಾರ್ಟಸ್ ನದಿಯ ತೀರವನ್ನು ತನ್ನ ಸಾಮ್ರಾಜ್ಯದ ಎಲ್ಲೆಯಾಗಿ ಗೊತ್ತು ಮಾಡಿದ. ಈ ಪ್ರದೇಶದಿಂದಲೇ ಮಂಗೋಲರ ತಂಡಗಳು ಪಾಶ್ಚಾತ್ಯ ದೇಶಗಳ ದಂಡಯಾತ್ರೆಯನ್ನು ಕೈಗೊಂಡವು. ದಂಗೆಯನ್ನಡಗಿಸಲು ಅಲೆಕ್ಸಾಂಡರ್ ಸಮರ್ಖಂಡ್‍ನಲ್ಲಿದ್ದಾಗ ಒಂದು ದುರಂತ ನಡೆಯಿತು. ಅಲೆಕ್ಸಾಂಡರನ ನಡತೆ, ಪೌರ್ವಾತ್ಯ ನಡೆನುಡಿ ಬ್ಯಾಕ್ಟ್ರಿಯ ರಾಜಕುಮಾರಿ ರಾಕ್ಸಾನಳನ್ನು ಮದುವೆಯಾದದ್ದು, ಏಷ್ಯದವರನ್ನು ತನ್ನ ಸೈನ್ಯದಲ್ಲಿ ಸೇರಿಸಿದ್ದುದು ಅವನ ಸೈನಿಕರಿಗೆ ಸರಿಬೀಳಲಿಲ್ಲ. ಒಂದು ರಾತ್ರಿ ನಾಯಕ ಕುಡಿತದ ಅಮಲಿನಲ್ಲಿದ್ದಾಗ ಭಟ್ಟಂಗಿಗಳು ಇವನನ್ನು ಹೊಗಳುತ್ತಿದ್ದರು. ಇವನ ಪ್ರಿಯ ಮಿತ್ರನಾದ ಕ್ಲೀಟಸ್‍ಗೆ ಈ ಹೊಗಳಿಕೆ ಹಿಡಿಸಲಿಲ್ಲ. ದಿಗ್ವಿಜಯಕ್ಕೆ ಫಿಲಿಪ್‍ನ ಸೈನ್ಯವೇ ಕಾರಣವೆಂದೂ ಗ್ರಾನಿಕಸ್ ಕದನದಲ್ಲಿ ತಾನು ಅಲೆಕ್ಸಾಂಡರನನ್ನು ಬದುಕಿಸಿದುದಾಗಿಯೂ ಬಹಿರಂಗವಾಗಿ ಘೋಷಿಸಿದ. ಹೀಗೆ ಹಂಗಿಸಿದ್ದರಿಂದ ಅಲೆಕ್ಸಾಂಡರನಿಗೆ ನಾಚಿಕೆಯಾಗಿ, ರೋಷದಿಂದ ಕ್ಲೀಟಸ್ನನ್ನು ತತ್ಕ್ಷಣವೇ ತನ್ನ ಭಲ್ಲೆಯಿಂದ ತಿವಿದು ಕೊಂದುಹಾಕಿದ. ಕುಡಿತದ ಅಮಲು ಕಳೆದ ಮೇಲೆ ಪಶ್ಚಾತ್ತಾಪಪಟ್ಟು, ಮೂರು ದಿನಗಳವರೆಗೂ ಊಟ ನಿದ್ರೆ ಇಲ್ಲದೆ ದುಃಖಿಸಿದ.
ಹಿಂದೂಸ್ಠಾನದ ದಂಡಯಾತ್ರೆ
ಬದಲಾಯಿಸಿಅಲೆಕ್ಸಾಂಡರ್ ಪ್ರ.ಶ.ಪೂ. 327ರಲ್ಲಿ ಹಿಂದೂಸ್ಥಾನದ ಮೇಲೆ ದಂಡಯಾತ್ರೆ ಪ್ರಾರಂಭಿಸಿದ. ಹಿಂದೂಕುಷ್ ಪರ್ವತವನ್ನು ದಾಟಿ, ಕಾಬೂಲಿಗೆ ಬಂದ. ತಕ್ಕ ಸೈನ್ಯ ವ್ಯವಸ್ಥೆಯನ್ನು ಮಾಡಿ, ಕಾಬೂಲಿನಿಂದ ಖೈಬರ್ ಕಣಿವೆಗೆ ಬಂದು, ವಾಯವ್ಯದಲ್ಲಿ ಗುಡ್ಡಗಾಡಿನ ಜನರ ಮೇಲೆ ನುಗ್ಗಿದ. ಸಿಂಧೂನದಿಯನ್ನು ದಾಟಿದಾಗ ಸಮರ್ಥನಾದ ಪುರೂರವಸ್‍ನ ಮೇಲೆ ಯುದ್ಧ ಮಾಡಬೇಕಾಯಿತು. ಜೀಲಂ ನದಿಯ ತೀರದಲ್ಲಿ ಪುರೂರವಸ್ ಪ್ರಬಲವಾದ ಸೈನ್ಯವನ್ನೂ ಆನೆಗಳನ್ನೂ ಸಿದ್ಧಪಡಿಸಿದ್ದ. ಅಲೆಕ್ಸಾಂಡರನ ಕುದುರೆಗಳು ಆನೆಗಳನ್ನು ನೋಡಿ ಬೆದರಿದವು. ಹಿಂದೂಸ್ಥಾನವನ್ನು ಜಯಿಸುವುದು ಕಷ್ಟವೆಂದು ಮನದಟ್ಟಾಯಿತು. ಸೈನಿಕರಿಗೆ ಆನೆಗಳ ಹೊಡೆತವನ್ನು ತಪ್ಪಿಸಿಕೊಳ್ಳುವುದೇ ಬಹಳ ಕಷ್ಟವಾಯಿತು. ಚತುರನಾದ ಅಲೆಕ್ಸಾಂಡರ್ ಪಕ್ಕದಿಂದ ಆನೆಗಳ ಮೇಲೆ ದಾಳಿ ಮಾಡಿ ಅವುಗಳನ್ನು ಗಾಬರಿ ಪಡಿಸಿದ. ಇದರಿಂದ ಅವು ಚೆಲ್ಲಾಪಿಲ್ಲಿಯಾಗಿ ಓಡಿಹೋದವು. ಪುರೂರವಸ್ ಶತ್ರುಗಳ ವಶನಾದ. ತನ್ನನ್ನು ರಾಜನನ್ನಾಗಿ ಕಾಣು ಎಂದು ಪುರೂರವಸ್ ಕೇಳಿಕೊಂಡ. ಆತ ತೋರಿಸಿದ ಧೈರ್ಯ ಸಾಹಸಗಳನ್ನು ಕಂಡು ಮೆಚ್ಚಿ ಅಲೆಕ್ಸಾಂಡರ್ ಅವನ ದೇಶವನ್ನು ಮತ್ತೆ ಅವನಿಗೇ ಕೊಟ್ಟ. ಅನಂತರ ಪೂರ್ವಾಭಿಮುಖವಾಗಿ ನಂದರ ರಾಜ್ಯವನ್ನು ಗೆಲ್ಲಬೇಕೆಂದು ಹೊರಟ. ಆದರೆ ಸಟ್ಲೆಜ್ ನದಿಯ ತೀರದಲ್ಲಿ ಅವನ ಸೈನಿಕರು ಮುಂದಕ್ಕೆ ಹೋಗಲು ಅವಕಾಶ ಕೊಡದೆ ದಂಗೆಯೆದ್ದರು. ಅವರು ಜೈತ್ರಯಾತ್ರೆಗಳಿಂದ ದಣಿದಿದ್ದರು. ಅದರಲ್ಲೂ ನಂದರ ಸೈನ್ಯಶಕ್ತಿ ಅದ್ಭುತವಾದುದೆಂದು ತಿಳಿದಮೇಲೆ, ಏನು ಮಾಡಿದರೂ ಮಗಧ ರಾಜ್ಯದ ಮೇಲೆ ಯುದ್ಧ ಮಾಡುವುದಿಲ್ಲವೆಂದು ಸಂಕಲ್ಪಿಸಿ ಹಿಂದಕ್ಕೆ ಹೋಗಬೇಕೆಂದು ಹಟಮಾಡಿದರು. ಕೊನೆಗೆ ಅಲೆಕ್ಸಾಂಡರ್ ಅವರ ಕೋರಿಕೆಗೆ ಒಪ್ಪಬೇಕಾಯಿತು. ಸಿಂಧೂನದಿಯನ್ನು ದಾಟಿ ಪ್ರ.ಶ.ಪೂ. 325ರಲ್ಲಿ ಸೂಸ ಪಟ್ಟಣವನ್ನು ಸೇರಿದ. ಅಲ್ಲಿಂದ ಬ್ಯಾಬಿಲಾನ್ ನಗರಕ್ಕೆ ಹೋದಾಗ ಅಕಸ್ಮಾತ್ತಾಗಿ ಜ್ವರ ಬಂದು ಕೇವಲ 32ನೆಯ ವಯಸ್ಸಿನಲ್ಲಿ (ಪ್ರ.ಶ.ಪು. 323) ನಿಧನನಾದ.
ಅಲೆಕ್ಸಾಂಡರನ ವಿಶಾಲ ಸಾಮ್ರಾಜ್ಯ ಗ್ರೀಸಿನಿಂದ ಪಂಜಾಬಿನವರೆಗೂ ವಿಸ್ತರಿಸಿತ್ತು. ಈತನ ಕೀರ್ತಿ ಎಲ್ಲೆಲ್ಲಿಯೂ ಹರಡಿತ್ತು. ಕೇವಲ 12 ವರ್ಷಗಳಲ್ಲಿ ಈತ ಇಡೀ ಒಂದು ಜೀವಮಾನದ ಸಾಧನೆಯನ್ನು ಸಾಧಿಸಿದ್ದ. ಈತನ ರಾಜನೀತಿ ಕುಶಲತೆಯ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಈತ ಮಾಡಿದ ಕಾರ್ಯಸಾಧನೆ ಅದ್ಭುತವಾದುದೆಂದು ಹೇಳಬೇಕು. ಮುಖ್ಯವಾಗಿ ಪಾಶ್ಚಾತ್ಯ ಪೌರ್ವಾತ್ಯ ನಾಗರಿಕತೆಗಳನ್ನು ಒಂದುಗೂಡಿಸಬೇಕೆಂಬುದು ಇವನ ಅಭಿಲಾಷೆಯಾಗಿತ್ತು. ಇವನ ವಿಷಯವಾಗಿ ನಡೆದದ್ದನ್ನು ಹೇಳಿದರೂ, ಕಥೆಯಂತೆಯೇ ತೋರುತ್ತದೆ. ಇವನ ಜೀವನ ಅಷ್ಟು ಆಶ್ಚರ್ಯಕರವಾದದ್ದು. ಪರ್ಷಿಯ ಸಾಮ್ರಾಜ್ಯವನ್ನು ಉರುಳಿಸಿ ಈತ ಪ್ರಪಂಚವನ್ನು ಅಚ್ಚರಿಗೊಳಿಸಿದ. ಸೈನಿಕರ ಪ್ರೀತಿ ವಿಶ್ವಾಸಗಳನ್ನು ಸಂಪಾದಿಸಿದ. ಹ್ಯಾನಿಬಾಲ್, ಸೀಸರ್, ನೆಪೋಲಿಯನ್‍ರ ಹಾಗೆ ಯುದ್ಧದಲ್ಲಿ ಕೀರ್ತಿ ಪಡೆದ. ಆದರೆ ಇವನ ಶಾಶ್ವತವಾದ ಕೀರ್ತಿ ಪೂರ್ವ ಪಶ್ಚಿಮ ಭೇದಗಳನ್ನು ತೊಡೆದುಹಾಕಿ, ಎಲ್ಲ ಜನಾಂಗಗಳೂ ಕಲೆತು ಸೌಹಾರ್ದದಿಂದ ಬಾಳುವಂತೆ ಮಾಡುವ ಉತ್ತಮ ಹಿರಿಯಾಸೆಯಲ್ಲಿ ಅಡಗಿತ್ತು. ಅಂತರ್‍ವಿವಾಹ ಪದ್ಧತಿ, ಏಷ್ಯದವರನ್ನು ತನ್ನ ಸೈನ್ಯದಲ್ಲಿ ಸೇರಿಸುವುದು, ಅಲೆಕ್ಸಾಂಡ್ರಿಯ ಹೆಸರಿನ ನವೀನ ನಗರಗಳನ್ನು ಸ್ಥಾಪಿಸುವುದು-ಇವುಗಳ ಮೂಲಕ ಗ್ರೀಕರ ನಾಗರಿಕತೆಯನ್ನು ಭದ್ರವಾಗಿ ಸ್ಥಾಪಿಸಿ ಹರಡುವುದೇ ಇವನ ಸಂಕಲ್ಪವಾಗಿತ್ತು. ಇವನ ಅಕಾಲಮರಣ ಶಾಶ್ವತವಾದ ಕಾರ್ಯಸಾಧನೆಗೆ ಅಡಚಣೆಯನ್ನುಂಟುಮಾಡಿತಾದರೂ ಇವನನ್ನು ಮಹಾಶಯನೆಂದು ಹೇಳಲು ಯಾವ ಸಂಶಯವೂ ಇಲ್ಲ. ಪ್ರಪಂಚದ ಚರಿತ್ರೆಯಲ್ಲಿ, ಪೂರ್ವ ಪಶ್ಚಿಮ ದಿಕ್ಕುಗಳ ಸಂಪರ್ಕದ ಇತಿಹಾಸದಲ್ಲಿ ಈತ ಅಚ್ಚಳಿಯದ ಕೀರ್ತಿ ಗಳಿಸಿದ್ದಾನೆ. ಅಲೆಕ್ಸಾಂಡರನ ಆಶೆ ಬಹುಮಟ್ಟಿಗೆ ನೆರವೇರಿತೆಂದೇ ಹೇಳಬೇಕು. ಕ್ರಮೇಣ ಪೂರ್ವ ಪಶ್ಚಿಮ ರಾಷ್ಟ್ರಗಳ ಮಧ್ಯದ ಸಂಪರ್ಕ ಬೆಳೆದು ನಿಕಟವಾಯಿತು. ವ್ಯಾಪಾರ ಅಭಿವೃದ್ಧಿಯಾದುದಲ್ಲದೆ ಕಾಲಕ್ರಮೇಣ ಗ್ರೀಕ್ ಮತ್ತು ಮಗಧರಾಜ್ಯಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಏರ್ಪಟ್ಟವು. ಎರಡೂ ಸಂಸ್ಕೃತಿಗಳು ಪರಸ್ಪರ ಬೆರೆತು ಬೆಳೆದವು. ಬಹುಕಾಲದವರೆಗೆ ಭಾರತದ ನಾಣ್ಯ ಪದ್ಧತಿಯ ಮೇಲೆ ಗ್ರೀಕ್ ಪ್ರಭಾವ ಕಾಣಬರುತ್ತಿತ್ತೆಂದು ವಿದ್ವಾಂಸರ ಮತ. ಹಿಂದೂದರ್ಶನ, ತತ್ತ್ವಶಾಸ್ತ್ರಗಳೂ ಗ್ರೀಕ್ ಜನರ ಹೃದಯವನ್ನು ಗೆದ್ದುವು. ಅಲೆಕ್ಸಾಂಡರನ ಜೊತೆ ಬಂದಿದ್ದ ಗ್ರೀಕ್ ವಿದ್ವಾಂಸರು ಭಾರತದ ಬಗ್ಗೆ ಬರೆದಿದ್ದಾರೆ. ಒಟ್ಟಿನಲ್ಲಿ ಅಲೆಕ್ಸಾಂಡರನ ದಂಡಯಾತ್ರೆ ಕೇವಲ ರಾಜ್ಯಾಕ್ರಮಣದಲ್ಲೇ ಪರ್ಯವಸಾನವಾಗಲಿಲ್ಲ, ವೈಮನಸ್ಸು ದ್ವೇಷಗಳಲ್ಲಿ ಮುಗಿಯಲಿಲ್ಲ. ಪೂರ್ವಪಶ್ಚಿಮಗಳ ನಂಟು ಅದರಿಂದ ಹೆಚ್ಚಾಯಿತು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Delamarche, Félix (1833), The Empire and Expeditions of Alexander the Great.
- Romm, James; Cartledge, Paul, "Two Great Historians On Alexander the Great", Forbes (conversations)
{{citation}}
:|contribution=
ignored (help); Part 2, Part 3, Part 4, Part 5, Part 6. - ಅಲೆಕ್ಸಾಂಡರ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Alexander the Great: An annotated list of primary sources, Livius, archived from the original on 2011-05-14, retrieved 2014-10-19.
- The Elusive Tomb of Alexander the Great, Archæology, archived from the original on 2004-11-15, retrieved 2014-10-19.
- Alexander the Great and Sherlock Holmes, Sherlockian Sherlock.
- Google Map of the Wars of Alexander the Great[ಶಾಶ್ವತವಾಗಿ ಮಡಿದ ಕೊಂಡಿ]